ಪ್ರತಿದಿನವೂ ಕಾಲೇಜಿನ ಕೊನೆ ತರಗತಿಯನ್ನು ಬಂಕ್ ಮಾಡಿ ಊರಿಗೆ ಬಂದು ಸಾರಾಯಿ ಮಾರಲು ಹೋದರೆ ಹದಿನೈದು ರೂಪಾಯಿ ಸಿಗುತ್ತಿದ್ದುದರಿಂದ ಕಾಲೇಜು ಬದುಕು ಸರಾಗವಾಗಿ ಸಾಗಿತು. ಈ ಸಾರಾಯಿ ಮಾರುವ ಕೆಲಸ ನನಗೆ ಸ್ವಾಭಿಮಾನವನ್ನೂ, ದುಡಿಮೆಯ ನೆಮ್ಮದಿಯನ್ನೂ, ದುಡಿಯುವವರ ಬದುಕುಗಳ ಬಣ್ಣಗಳನ್ನೂ ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು…
(ಆಡಿಯೊ ಪೂರ್ಣಪ್ರಮಾಣದಲ್ಲಿ ಸಿಗದಿದ್ದಲ್ಲಿ, ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಕೇಳಿ…)
ಹುಲಿಕುಂಟೆಯಲ್ಲೇ ಹೈಸ್ಕೂಲು ಓದಿದ ನಾನು, ಎಸ್ಸೆಸ್ಸೆಲ್ಸಿಯಲ್ಲಿ ಸ್ಕೂಲಿಗೇ ಹೆಚ್ಚು ಅಂಕ ಗಳಿಸಿದ್ದು ವಿಶೇಷ ಘಟನೆ. ವಿಶೇಷ ಯಾಕೆಂದರೆ, ಆಗ ನಮ್ಮ ಶಾಲೆಯಲ್ಲಿ ಹಿಂದಿ ಮತ್ತು ಗಣಿತ ಪಾಠ ಮಾಡುವ ಶಿಕ್ಷಕರು ಇರಲಿಲ್ಲ; ನಾನೋ ಅವೆರಡರಲ್ಲೂ ಅಜ್ಞಾನಿ. ಪಬ್ಲಿಕ್ ಪರೀಕ್ಷೆಯಾದ್ದರಿಂದ ಶಿಕ್ಷಕರಿಲ್ಲ ಎನ್ನುವುದು ಕೇವಲ ಕಾರಣವಷ್ಟೇ ಆಗಿತ್ತು. ಅದ್ಯಾವ ಕಾರಣಕ್ಕೋ ನನ್ನನ್ನು ತುಂಬಾ ಇಷ್ಟಪಡುತ್ತಿದ್ದ ಮೇಷ್ಟು ರಮೇಶ್ ಸಾತೂ ನಾಯಕ್ ಅವರ ಕೃಪೆಯಿಂದ ಎಸ್ಸೆಸೆಲ್ಸಿ ಪಾಸಾದೆ. ಬರೀ ಪಾಸಾದುದಷ್ಟೇ ಅಲ್ಲ, ಇಡೀ ಸ್ಕೂಲಿಗೆ ನನ್ನದೇ ಹೈಯೆಸ್ಟ್ ಮಾರ್ಕ್ಸ್. ಫಲಿತಾಂಶದ ದಿನ ಫೇಲಾಗುವ ಭಯದಿಂದ ಗೆಳೆಯ ರಂಗನ ಹೊಲದಲ್ಲಿ ಹಲಸಿನ ಹಣ್ಣು ಇಳಿಸಲು ಹೋಗಿದ್ದವನು, ಪಾಸಾಗಿರುವ ಸುದ್ದಿ ಕೇಳಿ ಅಪ್ಪನ ಎದುರು ನಿಂತು ನಲವತ್ತು ರೂಪಾಯಿ ಗಿಟ್ಟಿಸಿದ್ದೆ. ಸೆಕೆಂಡ್ ಕ್ಲಾಸ್ ಅಂಕಗಳಾದರೂ, ಶಾಲೆಗೆ ಹೈಯೆಸ್ಟ್ ಆದ್ದರಿಂದ ಊರಿನ ಉದ್ಯಮಿಯೊಬ್ಬರು ಪ್ರತಿವರ್ಷ ಕೊಡುತ್ತಿದ್ದ ಟೈಮೆಕ್ಸ್ ವಾಚ್ ನನ್ನ ಪಾಲಿಗೆ ಸಿಕ್ಕಿತು. ಅದರಿಂದಾಗಿ ಬಹಳಷ್ಟು ‘ಉತ್ತಮರಿಗೆ’ ನನ್ನ ಮೇಲೆ ಹೊಟ್ಟೆಕಿಚ್ಚು ಹುಟ್ಟಿತು. ಅದಕ್ಕೂ ಮೀಸಲಾತಿಯನ್ನು ತಗುಲಿಹಾಕಿ ಮಾತಾಡಿದರು. ಅದೇನೇ ಆದರೂ, ಅದೇ ಹುಮ್ಮಸ್ಸಿನ ಆಧಾರದ ಮೇಲೆ ಹತ್ತಿರದ ದೊಡ್ಡಬೆಳವಂಗಲ ಸರ್ಕಾರಿ ಪಿಯು ಕಾಲೇಜಿಗೆ ಸೇರಿದ್ದೆ. ಅಲ್ಲಿ ನನಗೆ ಭೈರೇಗೌಡರು, ಮಹದೇವ ಪ್ರಸಾದ್ ಮತ್ತು ಪ್ರಭಾ ಮೇಡಂ ಸಿಕ್ಕಿದರು. ಅವರಿಂದ ಭಾರತವನ್ನು ಅರ್ಥ ಮಾಡಿಕೊಳ್ಳುವ ದಾರಿ ದಕ್ಕಿತು. ಪ್ರತಿದಿನವೂ ಕಾಲೇಜಿನ ಕೊನೆ ತರಗತಿಯನ್ನು ಬಂಕ್ ಮಾಡಿ ಊರಿಗೆ ಬಂದು ಸಾರಾಯಿ ಮಾರಲು ಹೋದರೆ ಹದಿನೈದು ರೂಪಾಯಿ ಸಿಗುತ್ತಿದ್ದುದರಿಂದ ಕಾಲೇಜು ಬದುಕು ಸರಾಗವಾಗಿ ಸಾಗಿತು.
ಈ ಸಾರಾಯಿ ಮಾರುವ ಕೆಲಸ ನನಗೆ ಸ್ವಾಭಿಮಾನವನ್ನೂ, ದುಡಿಮೆಯ ನೆಮ್ಮದಿಯನ್ನೂ, ದುಡಿಯುವವರ ಬದುಕುಗಳ ಬಣ್ಣಗಳನ್ನೂ ಅರ್ಥ ಮಾಡಿಕೊಳ್ಳಲು ಸಹಾಯ ಮಾಡಿತು. ನಮ್ಮೂರಿನ ಶಾರದಕ್ಕ ಎಣಿಸಿಹಾಕಿದ ಸಾರಾಯಿ ಪಾಕೆಟ್ಟುಗಳನ್ನು ದೊಡ್ಡ ಟ್ರೇ ಒಳಗೆ ತುಂಬಿಕೊಂಡು, ಅವರದ್ದೇ ಸೈಕಲ್ಲಿನ ಹಿಂಬದಿ ಕ್ಯಾರಿಯರ್‍ಗೆ ಕಟ್ಟಿಕೊಂಡು ಮೂರು ಕಿಲೋಮೀಟರ್ ಸಾಗಿದರೆ ಸಾರಾಯಿ ಅಂಗಡಿ ಸಿಗುತ್ತಿತ್ತು. ಅದೊಂದು ಗುಡಿಸಲು. ಮೂರ್ನಾಲ್ಕು ಊರುಗಳ ಕಾಲುದಾರಿಗಳು ಸೇರುವ ಜಾಗದಲ್ಲಿ ಕಟ್ಟಿದ್ದರು. ಗುಡಿಸಲಿನ ಒಳಗೆ ನನ್ನಷ್ಟು ಉದ್ದದ ಮತ್ತು ಅರ್ಧ ಗುಡಿಸಲನ್ನು ಆವರಿಸಿಕೊಂಡಿದ್ದ ದೊಡ್ಡ ಜಗಲಿಯ ಮೇಲೆ ಕೂತು ಸಾರಾಯಿ ವ್ಯಾಪಾರ ಮಾಡಬೇಕು. ಅದು 1998- 99. ದುಡಿವವರ ಬದುಕುಗಳಲ್ಲಿ ಕೂಲಿಯದ್ದೇ ಸಿಂಹಪಾಲಾಗಿದ್ದ ಸಮಯ. ಹೆಂಗಸರು ಗಂಡಸರೆನ್ನದೆ ಸಾರಾಯಿ ಕುಡಿದು ಮೈನೋವು ಮರೆಯುತ್ತಿದ್ದರು. ನೆಂಚಿಕೆಗೆ ಕಡಲೇಬೀಜಕ್ಕೆ ಕಾಸು ಸಾಲದ ಕೆಲವರು, ನನ್ನ ತಾತ, ಅಜ್ಜಿ, ಅಪ್ಪನನ್ನು ಹೊಗಳಿ ನನ್ನಿಂದ ಒಂದಿಷ್ಟು ಕಡಲೇಬೀಜ ಗಿಟ್ಟಿಸಿಕೊಳ್ಳುತ್ತಿದ್ದರು. ನನ್ನ ಅಪ್ಪ ನಾಟಕದ ಮೇಷ್ಟ್ರಾದ್ದರಿಂದ ಸುತ್ತಲಿನ ಹಳ್ಳಿಗಳಿಗೆ ಪರಿಚಯವಿದ್ದರು. ಅದು ಕೆಲವೊಮ್ಮೆ ವ್ಯಾಪಾರಕ್ಕೆ ಅಡ್ಡಿಯಾಗುತ್ತಿತ್ತು; ಕೆಲವೊಮ್ಮೆ ಕುಡಿದ ಮತ್ತಿನಲ್ಲಿ ಅಪರಿಚಿತರು ಗಲಾಟೆ ಮಾಡಿದಾಗ ಸ್ಥಳೀಯರ ಬೆಂಬಲಕ್ಕೆ ಸಹಕಾರಿಯಾಗಿತ್ತು.
ಪಿಯುಸಿ ಸೆಕೆಂಡ್ ಕ್ಲಾಸ್ ಪಾಸಾದ ಕಾರಣಕ್ಕೆ ಬಿ.ಎ ಓದುವ ಉಮೇದು ಹುಟ್ಟಿತು. ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿಗೆ ಸೇರಿದ ನಂತರ ಸಾರಾಯಿ ವ್ಯಾಪಾರ ನಿಲ್ಲಿಸಬೇಕಾಯಿತು. ‘ಸಂವಾದ’ ಮತ್ತು ದೊಡ್ಡಬಳ್ಳಾಪುರದ ದೊಡ್ಡ ಸಮಾಜದ ಒಡನಾಟದ ನಂತರ ಸಾರಾಯಿ ವ್ಯಾಪಾರ ಮುಜುಗರ ಮೂಡಿಸಿದ್ದರಿಂದ ಊರು ಬಿಡುವುದು ಅನಿವಾರ್ಯವಾಯಿತು. ಅದರಿಂದ ಬರುತ್ತಿದ್ದ ಹದಿನೈದು ರೂಪಾಯಿ ನಿಂತುಹೋದದ್ದರಿಂದ ಓಡಾಟಕ್ಕೆ, ಪುಸ್ತಕ, ಪೆನ್ನು, ಬಟ್ಟೆಯ ಖರ್ಚಿಗೆ ಮನೆಯನ್ನು ಅವಲಂಬಿಸಲು ಮನಸ್ಸಾಗಲಿಲ್ಲ. ಈ ಕಾರಣದಿಂದ ‘ಸಂವಾದ’ ಆಫೀಸಿನಲ್ಲೇ ಉಳಿದುಕೊಳ್ಳಲು ಜನಾರ್ದನ ಕೆಸರಗದ್ದೆಯವರಲ್ಲಿ ಅವಕಾಶ ಕೇಳಿದೆ. ಅಲ್ಲಿಂದ ನಾಲ್ಕು ವರ್ಷ ನನ್ನಿಡೀ ಬದುಕು ಹೋರಾಟಗಳಿಗೆ ಮುಡಿಪಾಯಿತು.
ಇದೇ ಸಮಯದಲ್ಲಿ ದೊಡ್ಡಬಳ್ಳಾಪುರದಲ್ಲಿ ‘ಸಂವಾದ’ದ ಜೊತೆ ಹಾಡುತ್ತಿದ್ದ ಕೆ ಪಿ ಕುಮಾರ್ ರೈತಸಂಘಕ್ಕೆ ಸೇರಿದ್ದರಿಂದ ಹಾಡುವ ಅನಿವಾರ್ಯ ಅವಕಾಶ ನಮಗೆ ಸಿಕ್ಕಿತು. 2000 ಇಸವಿಯ ಸ್ವಾತಂತ್ರ್ಯ ದಿನಾಚರಣೆಯ ದಿನ ಬೆಂಗಳೂರಿನ ಎಸ್‍ಸಿಎಂ ಹೌಸಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾವೊಂದು ಹಾಡು ಹಾಡಬೇಕಾಗಿ ಬಂತು. ಜನಾರ್ದನ ಕೆಸರಗದ್ದೆಯವರು ಬರೆದ, ‘ಡಬ್ಲ್ಯೂ ಡಬ್ಲ್ಯೂ ಡಬ್ಲ್ಯೂ ಡಾಟ್ ಕಾಂ’ ಹಾಡಿಗೆ ಬಸ್ಸಿನಲ್ಲೇ ಟ್ಯೂನ್ ಹಾಕಿ ಪ್ರಾಕ್ಟೀಸ್ ಮಾಡಿದೆವು. ಒಳ್ಳೆಯ ಹಾಡುಗಾರರ್ಯಾರೂ ನಮ್ಮ ತಂಡದಲ್ಲಿಲ್ಲದಿದ್ದರೂ ಒಂದು ಕಂಜಿರ ಹಿಡಿದು ಹಾಡಿದೆವು. ಎಸ್ ಎಂ ಕೃಷ್ಣ ಸರ್ಕಾರ ಇದ್ದಿದ್ದರಿಂದ ‘ಸಿಂಗಾಪುರ’ದ ಚರ್ಚೆ ತಾರಕದಲ್ಲಿತ್ತು. ನಮ್ಮ ‘ಡಾಟ್ ಕಾಂ…’ ಹಾಡು ಅದೆಷ್ಟು ಸದ್ದು ಮಾಡಿತೆಂದರೆ, ಆವತ್ತಿನ ಸಂಜೆ ಪತ್ರಿಕೆಗಳ ಹೆಡ್ಡಿಂಗುಗಳಲ್ಲಿ ಹಾಕಿದರು; ‘ಡಾಟ್ ಕಾಂ ದೊರೆಗಳೇ ನೀಡಿ ಉತ್ತರ,’ ‘ದಲಿತ ಹೋರಾಟಗಾರರಿಂದ ಸಿಎಂಗೆ ಪ್ರಶ್ನೆ,’ ದೊಡ್ಡಬಳ್ಳಾಪುರದ 10-15 ಹುಡುಗಿ-ಹುಡುಗರು ರಾತ್ರೋರಾತ್ರಿ ಫೇಮಸ್ ಆಗಿಬಿಟ್ಟೆವು. ಆಮೇಲೆ ಈ ಹಾಡು ರಾಜ್ಯದ ಯಾವ ಮೂಲೆಯಲ್ಲಿ ಯಾವುದೇ ಹೋರಾಟ ನಡೆದರೂ ಅನುರಣಿಸುತ್ತಿತ್ತು. ಎಂ ಡಿ ನಂಜುಂಡಸ್ವಾಮಿಯವರಂತೂ, “ಆ ದೊಡ್ಡಬಳ್ಳಾಪುರದ ಹುಡುಗರಿಂದ ‘ಡಾಟ್ ಕಾಂ’ ಹಾಡು ಹಾಡಿಸಿ,” ಎಂದು ಯಾವುದೇ ಊರಿನ ಹೋರಾಟದ ಆಯೋಜಕರಿಗೆ ತಾಕೀತು ಮಾಡುತ್ತಿದ್ದರು. ದುರಂತವೆಂದರೆ, ಅವರ ಮೃತದೇಹದ ಮುಂದೆ ಕೂತೂ ನಾವು ಇದೇ ಹಾಡು ಹಾಡಿದೆವು.
ನನ್ನ ಪ್ರಜ್ಞೆ ಮತ್ತು ಬದ್ಧತೆಯನ್ನು ವಿಸ್ತರಿಸಿದ ‘ನರ್ಮದಾ ಬಚಾವೋ ಆಂದೋಲನ’ದ ಜೊತೆಗೆ, ನನ್ನಲ್ಲಿ ದಲಿತ ಲೋಕದ ಹೋರಾಟದ ಕೆಚ್ಚನ್ನು ಜಾಗೃತಗೊಳಿಸಿದ್ದು 2002ರಲ್ಲಿ ಬೆಂಗಳೂರಿನಲ್ಲಿ ನಡೆದ ‘ಮಾದಿಗ ಮೀಸಲಾತಿ ಹೋರಾಟ ಸಮಿತಿ’ಯ ಬೃಹತ್ ರ‍್ಯಾಲಿ. ನಾನು ಮತ್ತು ಗೆಳೆಯ ಚಿಕ್ಕರಾಮು ಈ ಹೋರಾಟದಲ್ಲಿ ಭಾಗವಹಿಸಲು ಬೆಂಗಳೂರಿಗೆ ಹೋದೆವು. ಅಲ್ಲಿಯವರೆಗೆ ನಾನು ದಲಿತ ಸಂಘಟನೆಗಳ ಯಾವುದೇ ಹೋರಾಟದಲ್ಲಿ ಭಾಗವಹಿಸಿರಲಿಲ್ಲ. ಈ ರ‍್ಯಾಲಿ ನಮ್ಮಿಬ್ಬರಲ್ಲಿ ವಿಚಿತ್ರವಾದ ಆತ್ಮಸ್ಥೈರ್ಯ ಮೂಡಿಸಿತು. ತಮಟೆಯ ಸದ್ದಿನೊಂದಿಗೆ ಬೆರೆತಿದ್ದ ‘ಜೈ ಮಾದಿಗ ಜೈಜೈ ಮಾದಿಗ’ ಘೋಷಣೆ – ಊರಿನಲ್ಲಿ ಜಾತಿಯ ಕಾರಣಕ್ಕೆ ಹಿಂಸೆಯನ್ನು ಅನುಭವಿಸಿದ್ದ ನಮ್ಮ ಗಂಟಲಿಗೂ ಬಸಿದು ನಾಭಿಯಿಂದ ಕೂಗಿ-ಕೂಗಿ ಖುಷಿಪಟ್ಟೆವು. ನಮ್ಮೂರಿನಲ್ಲಿ ಬೈಗುಳವಾಗಿದ್ದ ಜಾತಿಯ ಹೆಸರೊಂದು ಆತ್ಮಾಭಿಮಾನವಾಗಿ ಪ್ರತಿಧ್ವನಿಸುತ್ತಿತ್ತು. ಮಾದಿಗ ಸಮುದಾಯದ ಚಿಕ್ಕರಾಮನ ಕಣ್ಣಲ್ಲಿ ಹುಟ್ಟಿದ ಚೈತನ್ಯ ಮಾದಿಗನಲ್ಲದಿದ್ದರೂ, ಮಾದಿಗರ ಬದುಕಿನ ಜೊತೆ ಬೆರೆತೇಹೋಗಿದ್ದ ನನ್ನ ಅಸ್ಮಿತೆಗೆ ಸಿಕ್ಕಿದ ಆಸರೆಯ ಹಾಗೆ ಸಾರ್ಥಕತೆ ಮೂಡಿಸಿತು. ಇಡೀ ರಸ್ತೆಯನ್ನು ಆವರಿಸಿದ್ದ ಹೋರಾಟಗಾರರ ದಂಡಿನಲ್ಲಿ ಮಿಂದೆದ್ದೆವು. ರ‍್ಯಾಲಿಯ ನಂತರ ಜಕ್ಕರಾಯನಕೆರೆಯಲ್ಲಿ ನಡೆದ ಸಮಾವೇಶ ಕಣ್ತುಂಬಿಕೊಂಡು ಪತ್ರಕರ್ತರ ಹಾಗೆ ಸಮಾವೇಶದ ನಿರ್ಣಯಗಳ ಪ್ರತಿ ಪಡೆದುಕೊಂಡು ಹಿಂದಿರುಗಿದೆವು. ಅಲ್ಲಿ ವೇದಿಕೆ ಮೇಲೆ ಪಾದರಸದಂತೆ ಓಡಾಡುತ್ತಿದ್ದ ಪಾರ್ಥಸಾರಥಿ ಅಣ್ಣ ಆನಂತರ ನನಗೆ ಹೆಚ್ಚು ಹತ್ತಿರವಾದರು. ಆವತ್ತಿನಿಂದ ಈವತ್ತಿನವರೆಗೆ ಒಳ ಮೀಸಲಾತಿ ಹೋರಾಟದೊಂದಿಗೆ ಸಾಗುತ್ತಲೇ ಇದ್ದೇನೆ.
ಮಧ್ಯಾಹ್ನ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಕೊಡುತ್ತಿದ್ದ ಬಿಸಿ ಊಟ ನನ್ನನ್ನು ಎರಡು ವರ್ಷ ಪೊರೆಯಿತು. 2002ರಲ್ಲಿ ಬಿ.ಎ ಮುಗಿಸುವಷ್ಟರಲ್ಲಿ ‘ಜನಧ್ವನಿ ಯುವ ವೇದಿಕೆ’ ದೊಡ್ಡದಾಗಿತ್ತು. ಎಷ್ಟೊಂದು ಹೋರಾಟಗಳು… ಮುಂದಿನ ದಾರಿಗೆ ಮತ್ತದೇ ಊಟ-ವಸತಿಯ ಚಿಂತೆ. ಹಾಸ್ಟೆಲ್ ಆಸೆಯಿಂದ ಜ್ಞಾನಭಾರತಿಯಲ್ಲಿ ಸೋಶಿಯಾಲಜಿ ಎಂ.ಎಗೆ ಅರ್ಜಿ ಹಾಕಿ ಸಿಗಲಿಲ್ಲ. 2003ನ್ನು ಸರಿಯಾಗಿ ಬಳಸಿಕೊಂಡೆ. ಇಡೀ ದೇಶ ಸುತ್ತಿದೆ. 2004ರಲ್ಲಿ ಬಹು ಪ್ರಯಾಸದಿಂದ ಕನ್ನಡ ಎಂ.ಎ ಸೀಟು ಗಿಟ್ಟಿಸಿಕೊಂಡೆ. ಹಾಸ್ಟೆಲ್ ಸಿಕ್ಕಿತು, ಹೊಟ್ಟೆ ತುಂಬಾ ಊಟವೂ.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ