ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಹೊದಕುಳಿ
ಅಗ್ನಿಯ ಸುಡುವಲ್ಲಿ, ಉದಕವ ತೊಳೆವಲ್ಲಿ, ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ ಯೋಗದ ಹೊಲಬ ನೀವೆತ್ತ ಬಲ್ಲಿರೋ?
ಕದಳಿಯ ಬನವ ನಿಮ್ಮಲ್ಲಿ ನೀವೇ ತಿಳಿದು ನೋಡಿರೋ, ಮದ ಮತ್ಸರ ಬೇಡ. ಹೊದಕುಳಿಗೊಳಬೇಡ.
ಗುಹೇಶ್ವರಲಿಂಗ ಕಲ್ಪಿತವಲ್ಲ ನಿಲ್ಲಿರೋ!
ಪದಾರ್ಥ:
ಉದಕ = ನೀರು
ಹೊಲಬು = ರೀತಿ, ನೀತಿ, ಕ್ರಮ, ಮಾರ್ಗ
ಕದಳಿಯ ಬನ = ಮಾನವ ದೇಹ
ಹೊದಕುಳಿ = ಅತೀ ದುಃಖಿಯಾಗು
ವಚನಾರ್ಥ:
ಬೆಂಕಿಯನ್ನು ಸುಡುವುದು, ನೀರನ್ನು ತೊಳೆಯುವುದು, ಗಾಳಿಯನ್ನು ಕಾಲಿನಲ್ಲಿ ಮೆಟ್ಟುವುದು, ಆಕಾಶವನ್ನು ಕೈಯಲ್ಲಿ ಹಿಡಿದುಕೊಳ್ಳುವುದು ಇವೆಲ್ಲ ಮೇಲ್ನೋಟಕ್ಕೆ ಅಸಹಜ ಅನ್ನಿಸಬಹುದು. ಮನುಷ್ಯನು ಕಾಮ ಕ್ರೋಧದಿಂದ ಅಂತರಂಗವನ್ನು ದಹಿಸುವ ಅಗ್ನಿಯನ್ನು ಸುಡಬೇಕು. ನೀರಿನಂತೆ ಚಂಚಲವಾಗಿ ಹರಿಯುವ ಮನಸ್ಸಿನಲ್ಲಿರುವ ಕೊಳೆಯನ್ನು ತೊಳೆದು ಸ್ವಚ್ಛಗೊಳಿಸಿಕೊಳ್ಳಬೇಕು. ಆಸೆ ಆಕಾಂಕ್ಷೆಗಳನ್ನು ಹುಟ್ಟುಹಾಕಿ ವಿವಿಧ ದಿಕ್ಕುಗಳಲ್ಲಿ ವಿವಿಧ ಬಗೆಯಲ್ಲಿ ಬೀಸುತ್ತಾ ಜೀವನದ ಗತಿಯನ್ನು ದಿಕ್ಕೆಡಿಸುವ ವಾಯುವಿನಂಥ ಮಾಯಾಜಾಲವನ್ನು ಮೆಟ್ಟಬೇಕು. ಆಕಾಶದುದ್ದಗಲ ವಿಸ್ತರಿಸಿಕೊಂಡಿರುವ ಪರಮಾತ್ಮನನ್ನು ಅಂತರಂಗ ಶುದ್ದಿಯ ಮೂಲಕ ಹಿಡಿದು ತನ್ನೊಳಗೆ ತಾನು ನೆಲೆಸಿಕೊಳ್ಳಬೇಕು. ಇದು
ಜೀವನಯೋಗ ಮಾರ್ಗ. ಈ ಯೋಗಮಾರ್ಗದ ಹೊಲಬ ನೀವೆಲ್ಲಾ ತಿಳಿಯಿರೋ ಎಂಬುದು ಅಲ್ಲಮನ ಕರುಳಿನ ಕರೆ. ಈ ಯೋಗ ಮಾರ್ಗವನ್ನು ಅನುಸರಿಸುವುದರಿಂದ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳಿಂದ ಮುಕ್ತವಾದ ದುಃಖರಹಿತ ಮನಸ್ಸು ಮನನವಾಗುತ್ತದೆ. ಗುಹೇಶ್ವರ ಬೇರೆಲ್ಲೋ ಇದ್ದಾನೆ ಎಂಬ ಕಲ್ಪನೆ ಇಲ್ಲದಂತಾಗಿ ನಮ್ಮೊಳಗೇ ನೆಲೆ ನಿಂತ ಭಾವ ನಮ್ಮದಾಗುತ್ತದೆ.
ಪದಪ್ರಯೋಗಾರ್ಥ:
ಹೊದಕುಳಿ ಅಂದರೆ ಅತೀವ ದುಃಖಿಯಾಗು, ಬೇಗುದಿಗೊಳ್ಳು, ತಳಮಳಗೊಳ್ಳು ಎಂಬ ಅರ್ಥ ಬರುತ್ತದೆ. ಈ ವಚನದ ಸಂದರ್ಭದಲ್ಲಿ ಅಲ್ಲಮನು ಅತೀ ದುಃಖಿಯಾಗಬೇಡ ಬೇಗುದಿಗೊಳ್ಳಬೇಡ, ತಳಮಳಗೊಳ್ಳಬೇಡ ಎಂಬ ಯಾವುದೇ ಪರಿಚಿತ ಶಬ್ದವನ್ನು ಬಳಸದೆ ಹೊದಕುಳಿಗೊಳಬೇಡ ಎಂಬ ವಿರಳವಾದ ಪದ ಬಳಸಿರುವುದು ಅಲ್ಲಮನಿಗಿದ್ದ ಭಾಷಾ ಪ್ರೌಢಿಮೆಗೆ ನಿದರ್ಶನವಾಗಿದೆ. ಹೊದಕುಳಿ ಇತ್ತೀಚಿನ ಕನ್ನಡ ಬರವಣಿಗೆಯಲ್ಲಿ ಅಷ್ಟಾಗಿ ಬಳಕೆಯಾಗದಿರುವ ಪದ. ಈ ವಚನವು ಗಾಯಕರ ಅಚ್ಚುಮೆಚ್ಚಿನ ಆಯ್ಕೆಯಾಗಿದ್ದು ವಿವಿಧ ವಚನ ಗಾಯಕರು ಇದನ್ನು ಹಾಡಿದ್ದಾರೆ. ಕನ್ನಡದ ಪ್ರಸಿದ್ಧ ಹಿಂದೂಸ್ತಾನಿ ಗಾಯಕರಾದ ಧಾರವಾಡದ ಪಂಡಿತ್ ವೆಂಕಟೇಶ್ ಕುಮಾರ್ ಈ ವಚನವನ್ನು ಅತ್ಯಂತ ಸ್ಪಷ್ಟವಾಗಿ ವಿಸ್ತಾರವಾಗಿ ಹಾಡಿದ್ದಾರೆ. ಯೂಟ್ಯೂಬಿನಲ್ಲಿ ಲಭ್ಯವಿದೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.
ವಚನಗಳಲ್ಲಿ ಅಲ್ಲಮನ ವಚನಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ಮೇಲ್ನೋಟಕ್ಕೆ ಸುಲಭ ಅನ್ನಿಸಿದರೂ ಅವುಗಳು ಸುಲಭವಾಗಿ ಅರ್ಥವಾಗುವುದೇ ಇಲ್ಲ. ಸಾಮಾನ್ಯವಾಗಿ ಬೆಡಗಿನ ವಚನಗಳು ಎಂದು ಗುರುತಿಸಿಕೊಳ್ಳುವ ಅಲ್ಲಮನ ವಚನಗಳು ಕೆಲವೊಮ್ಮೆ ಕಬ್ಬಿಣದ ಕಡಲೆಗಳಾಗುವುದೂ ಉಂಟು. ಹರಿಹರದ ಶಿವಕುಮಾರ್ ಅವರು ಅವುಗಳನ್ನು ಇಷ್ಟೊಂದು ಸುಲಭವಾಗಿ ಅರ್ಥವಾಗುವಂತೆ ವಿವರಿಸುವುದು, ಮತ್ತು ಅಲ್ಲಮನ ಪದಪ್ರಯೋಗದಲ್ಲಿರುವ ವಿಶೇಷತೆಯನ್ನು ಗುರುತಿಸಿ, ಅರ್ಥೈಸಿ, ಸರಳವಾಗಿ ಅವುಗಳ ಹೂರಣವನ್ನು ನಮಗೆ ಬಡಿಸಿದ್ದಾರೆ. ಅವರಿಗೆ ಧನ್ಯವಾದಗಳು ಮತ್ತು ಶರಣು ಶರಣಾರ್ಥಿಗಳು 🌹🙏