ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಕಾಮವಿಕಾರಿಗಳು
ಗಗನದ ಮೇಘಂಗಳೆಲ್ಲ ಸುರಿದವು
ಭೂಮಿಯ ಮೇಲೆ.
ಭೂಮಿ ದಣಿಯುಂಡು
ಸಸಿಗಳೆಲ್ಲಾ ಬೆಳೆದವು.
ಬಹುವಿಕಾರದಿಂದ ಬೆಳೆದ ಸಸಿಯ ವಿಕಾರದಿಂದ ಗ್ರಹಿಸುವ ಕಾಮವಿಕಾರಿಗಳು, ಲಿಂಗವನೆತ್ತ ಬಲ್ಲರು ಗುಹೇಶ್ವರಾ?
ಪದಾರ್ಥ:
ದಣಿಯುಂಡು = ಪೂರ್ತಿಯಾಗಿ ಉಂಡು
ಬಹುವಿಕಾರ = ನಾನಾ ಬಗೆ ಆಸೆಗಳಿಂದ
ಕಾಮವಿಕಾರಿ = ಭೋಗಲಾಲಸೆಯುಳ್ಳವ
ವಚನಾರ್ಥ:
ನಿಸರ್ಗ ಸುಭಿಕ್ಷವಾಗಿದ್ದ ಸಮಯದಲ್ಲಿ ಆಯಾಯ ಕಾಲಕ್ಕೆ ಸರಿಯಾಗಿ ವಾಡಿಕೆಯಂತೆ ಮೋಡಗಳು ಭೂಮಿಯ ಮೇಲೆ ಮಳೆ ಸುರಿಸುತ್ತವೆ. ಭೂಮಿ ಸಮೃದ್ಧವಾಗಿ ಮಳೆಯನುಂಡು ಸಸ್ಯಸಂಕುಲ ಮತ್ತೆ ಮೈದಳೆಯುತ್ತದೆ. ಚಿಗುರು, ಹೂವು, ಹಸಿರು, ಹಣ್ಣು, ಪೈರು, ಫಸಲು ಹೊಮ್ಮುತ್ತವೆ. ನಿಸರ್ಗ ನೀಡುವ ಫಲ ಜನ ಸಮುದಾಯದ ಅಗತ್ಯವನ್ನು ತೀರಿಸುವುದಕ್ಕಾಗಿ. ಆದರೆ ಅತೀ ಆಸೆಯುಳ್ಳ ಮನುಷ್ಯ ನಿಸರ್ಗ ನೀಡಿದ ಫಲವನ್ನು ಅಗತ್ಯಕ್ಕಷ್ಟೇ ಬಳಸದೆ ತನ್ನ ಸ್ವಾರ್ಥಕ್ಕಾಗಿ ಅತಿಯಾಗಿ ಭೋಗಿಸಲಾರಂಭಿಸುತ್ತಾನೆ. ಆತನ ಆಸೆ ಅಂದರೆ ಕಾಮ ಸಕಾರಗೊಳ್ಳದೆ ವಿಕಾರವಾಗತೊಡಗುತ್ತದೆ. ನಿಸರ್ಗ ಬೆಳೆದು ಕೊಟ್ಟ ಫಲವನ್ನು ವಿಕಾರದಿಂದ ಭೋಗಿಸುವವ ಕಾಮವಿಕಾರಿ ಆಗುತ್ತಾನೆ. ದೈವಸ್ವರೂಪಿಯಾದ ನಿಸರ್ಗಕ್ಕೆ ಕೃತಘ್ನನಾಗುತ್ತಾನೆ. ಈ ಭೂಮಿ ಪ್ರತಿಯೊಬ್ಬರ
ಅಗತ್ಯವನ್ನು ಪೂರೈಸಲು ಶಕ್ತವಾಗಿದೆ, ಆದರೆ ಪ್ರತಿಯೊಬ್ಬರ ಅತೀಯಾಸೆಯನ್ನಲ್ಲ ಎಂಬ ಮಹಾತ್ಮಾ ಗಾಂಧಿಯ ಪ್ರಸಿದ್ಧ ಉಲ್ಲೇಖವೇ ಈ ವಚನದ ಆಶಯ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಪದ ಪ್ರಯೋಗಾರ್ಥ:
ಕಾಮ ಅಂದರೆ ಆಸೆ. ಆಸೆ ಮನುಷ್ಯ ಸಹಜವಾದುದು. ಆಸೆ ಇರಬಾರದು ಅಂತೇನಿಲ್ಲ. ಆಸೆಗೆ ಮಿತಿಯಿರಬೇಕೆಂದು ಲೋಕಾನುಭವ ಹೇಳುತ್ತದೆ. ನಿಸರ್ಗ ಕೊಟ್ಟ ಸಂಪನ್ಮೂಲಗಳನ್ನು ಸದ್ಭಳಕೆ ಮಾಡಿ ಜೀವನ ನಡೆಸಬೇಕು. ಬಳಕೆ ದುರ್ಬಳಕೆ ಆಗಬಾರದು.
ಆಸೆ ದುರಾಸೆ ಆಗಬಾರದು. ಕಾಮ ವಿಕಾರ ಆಗಬಾರದು. ಕಾಮವಿಕಾರವಾದವನು ಕಾಮವಿಕಾರಿ. “ಏನೆಂದು ನಾ ಹೇಳಲಿ, ಮಾನವನಾಸೆಗೆ ಕೊನೆಯೆಲ್ಲಿ, ಕಾಣೋದೆಲ್ಲ ಬೇಕು ಎಂಬ ಹಠದಲ್ಲಿ ಒಳ್ಳೇದೆಲ್ಲ ಬೇಕು ಎಂಬ ಛಲದಲ್ಲಿ ಯಾರನ್ನೂ ಪ್ರೀತಿಸನು ಮನದಲ್ಲಿ ಏನೊಂದೂ ಬಾಳಿಸನು ಜಗದಲ್ಲಿ” ಎಂಬ ತತ್ವಪದದಂತ ಗೀತೆಯನ್ನು ಗಿರಿಕನ್ಯೆ ಚಿತ್ರಕ್ಕೆ ಚಿ. ಉದಯಶಂಕರ ಬರೆದಿದ್ದು ಈ ವಚನದಲ್ಲಿನ ಮನುಷ್ಯನ “ಕಾಮವಿಕಾರಿ”ತನಕ್ಕೆ ಅತ್ಯುತ್ತಮ ಉದಾಹರಣೆ ಆಗಿದೆ. ಕಾಮವಿಕಾರಿ ಎಂಬ ಪದ ಪ್ರಯೋಗ ಅತ್ಯಂತ ವಿರಳವಾಗಿದ್ದು ಅನನ್ಯವಾಗಿದೆ.

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.