ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಸ್ತುತಿ ನಿಂದೆಗೆ ಕಿವುಡನಾಗಿರಬೇಕು.
ಪರಧನ ಪರಸತಿಯರಿಗೆ ಅಂಧಕನಾಗಿರಬೇಕು.
ವಾಕಿನಿಂ ಪರಬ್ರಹ್ಮವ ನುಡಿವ
ಕುತರ್ಕಿಗಳ ಎಡೆಯಲ್ಲಿ
ಮಾಗಿಯ ಕೋಗಿಲೆಯಂತೆ ಮೂಗನಾಗಿರಬೇಕು.
‘ಒಂದು’ ಎಂದು ಅರಿದಲ್ಲಿ ಸಂದೇಹವಿಲ್ಲದಿರಬೇಕು.
ಗುಹೇಶ್ವರ ಲಿಂಗದಲ್ಲಿ
ತನ್ನ ತಾ ಮರೆತಿರಬೇಕು.
ಪದಾರ್ಥ:
ಅಂಧಕ = ಕುರುಡ
ವಾಕಿನಿಂ = ಬರೀ ಮಾತು
ಕುತರ್ಕಿ = ತರ್ಕವಿಲ್ಲದ
ವಚನಾರ್ಥ:
ಸಮಾಜದಲ್ಲಿ ಎಲ್ಲರಲ್ಲೂ ಬೆರೆತು ಜೀವಿಸಿ ಸಭ್ಯ ವ್ಯಕ್ತಿ ಅಂತ ಸೈ ಅನ್ನಿಸಿಕೊಳ್ಳಬೇಕಾದರೆ ಏನು ಮಾಡಬೇಕು ಎಂಬುದರ ವಿವರಣೆ ಈ ವಚನದಲ್ಲಿ ಕಂಡುಬರುತ್ತದೆ. ಆಧ್ಯಾತ್ಮಿಕ ಮತ್ತು ಧಾರ್ಮಿಕ ಅರ್ಥಗಳಿಂದ ಹೊರತಾಗಿ ವ್ಯಕ್ತಿತ್ವ ವಿಕಸನೆಯ ಮಾರ್ಗದೆಡೆಗೆ ಅಲ್ಲಮ ನೀಡಿರುವ ಸಲಹೆಗಳು ವಚನದಲ್ಲಿ ವ್ಯಕ್ತವಾಗಿವೆ. ವ್ಯಕ್ತಿತ್ವ ವಿಕಾಸವಾಗಬೇಕಾದರೆ ವ್ಯಕ್ತಿಯು ತನ್ನನ್ನು ಹೊಗಳುವವರಿಂದ ದೂರವಿರಬೇಕು. ತನ್ನ ಸದ್ವಿಚಾರಗಳನ್ನು ಅನಗತ್ಯವಾಗಿ ಟೀಕಿಸುವವರನ್ನು ಗಮನಿಸಬಾರದು. ಹೊಗಳಿಕೆ ತೆಗಳಿಕೆಗೆ ಕಿವುಡನಾಗಿರಬೇಕು. ಧನದಾಸೆ ಮತ್ತು ಕಾಮತೃಷೆಯಿಂದ ಮುಕ್ತನಾಗಿರಬೇಕು. “ಮಾ ಗೃಧಃ ಕಸ್ಯ ಸ್ವಿದ್ ಧನಮ್” ಅಂದರೆ ಪರಧನಕ್ಕೆ ಬೇರೆಯವರ ಹಣಕ್ಕೆ ಹೊಂಚುಹಾಕಬೇಡ ಎಂದು ಈಶೋಪನಿಷತ್ ಮೊದಲ ಶ್ಲೋಕ ಎಚ್ಚರಿಸುತ್ತದೆ. ಅರಿಯಲಸಾದ್ಯವಾದ ಪರಬ್ರಹ್ಮವಸ್ತುವನ್ನು ಅರಿತಿದ್ದೇನೆ ಎಂದು ಎಲ್ಲರೆದುರು ತರ್ಕ ಹೂಡುವ ಕುತರ್ಕಿಗಳು ಮಾತನಾಡುತ್ತಿರುವ ಸ್ಥಳದಲ್ಲಿ ಸುಮ್ಮನಿರಬೇಕು. ಪ್ರತಿಕ್ರಿಯಿಸಬಾರದು. ಹೇಗೆ ಸುಮ್ಮನಿರಬೇಕೆಂದರೆ ಮಾಗಿಯ ಕೋಗಿಲೆಯ ಹಾಗೆ ಮೂಗನಾಗಿರಬೇಕು. ಸ್ವಂತ ವಿವೇಚನೆಯಿಂದ ತೆಗೆದುಕೊಂಡ ಒಂದು ಸ್ಥಿರವಾದ ನಿಲುವಿನಲ್ಲಿ ಬದ್ಧತೆ ಇರಬೇಕು. ತಾನು ಈ ಜೀವ ಜಗತ್ತಿನಲ್ಲಿ ಒಂದು ಬಿಂದು ಅಂದುಕೊಂಡು ಸಂದೇಹಕ್ಕೆ ಆಸ್ಪದವಿಲ್ಲದಂತಿರಬೇಕು. ತನ್ನ ಅಂತಃಶಕ್ತಿಯಲ್ಲಿ ದೃಢ ನಂಬಿಕೆಯಿಂದ ನೆಲೆ ನಿಂತಿರಬೇಕು.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಪದಪ್ರಯೋಗಾರ್ಥ:
“ಮಾಗಿಯ ಕೋಗಿಲೆ”ಯಂತೆ ಮೂಕನಾಗಿರಬೇಕು ಎಂಬಲ್ಲಿ ಮಾಗಿಯ ಕೋಗಿಲೆ ಎಂಬ ಪದ ಉದಾಹರಣೆಗಾಗಿ ಬಳಸಿದಂತದ್ದು. ಕೋಗಿಲೆಯು ಚಳಿಗಾಲದಲ್ಲಿ ಹೊರಬರುವುದಿಲ್ಲ. ಬೆಚ್ಚನೆಯ ಜಾಗದಲ್ಲಿ ಕುಳಿತು ಸುಮ್ಮನಿರುತ್ತದೆ. ಚಳಿಗಾಲ ಅಂದರೆ ಮಾಗಿಯು ಮುಗಿದ ನಂತರ ಬರುವ ವಸಂತ ಋತುವಿನಲ್ಲಿ ಹೊರಬಂದು ಎಂದಿನಂತೆ ಹಾಡಲಾರಂಭಿಸುತ್ತದೆ. ತನಗೆ ತಕ್ಕುದಲ್ಲದ ಪರಿಸರದಲ್ಲಿ ತೆಪ್ಪಗಿದ್ದು ತನ್ನತನತೆಯನ್ನು ಉಳಿಸಿಕೊಂಡು ಉತ್ತಮ ವಾತಾವರಣ ಸೃಷ್ಟಿಯಾದಾಗ ಉಲಿಯುವ ಕೋಗಿಲೆಯ ಉಪಮೆಯನ್ನು ಅಲ್ಲಮ ಉಪಯೋಗಿಸಿರುವ ರೀತಿಯೇ ಈ ವಚನದ ವಿಸ್ಮಯ. ಎತ್ತಣ ಮಾಮರ ಎತ್ತಣ ಕೋಗಿಲೆ ಎಂದು ಅಲ್ಲಮನಿಗೇ ಬೆರಗು ಹುಟ್ಟಿಸಿದ ಕೋಗಿಲೆ ಅಲ್ಲಮನ ಪ್ರಿಯಪಕ್ಷಿಯೇ ಆಗಿದ್ದೀತು!

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.