ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
“ಮಾಯಾಮಲಿನ ಮನ”
ಮಾಯಾಮಲಿನ ಮನದಿಂದಗಲದೆ,
ಕಾಯದ ದಂದುಗ ಕಳೆಯಿಂದಗಲದೆ,
ಅರಿವು ಬರಿದೆ ಬಪ್ಪುದೆ?
ನಿಜವು ಬರಿದೆ ಸಾಧ್ಯವಪ್ಪುದೆ?
ಮರುಳೆ, ಗುಹೇಶ್ವರಲಿಂಗವನರಿಯಬಲ್ಲಡೆ, ನಿನ್ನ ನೀ ತಿಳಿದು ನೋಡಾ.
ಪದಾರ್ಥ:
ಕಾಯದ = ದೇಹದ
ದಂದುಗ = ಚಿಂತೆ-ಭ್ರಾಂತಿ, ವ್ಯಥೆ-ವ್ಯಸನ
ಕಳೆಯಿಂದ = ಜೀವದಿಂದ
ನಿಜವು = ತನ್ನ ತಾನರಿದ ಅರಿವು
ವಚನಾರ್ಥ:
ಅರಿವು ಅಂದರೆ ಜಡ ದೇಹವು ತಾನಲ್ಲ, ಸದಾ ಚೈತನ್ಯದಾಯಕವಾದ ಜೀವಾತ್ಮನೇ ತಾನು ಎಂಬ ತಿಳಿವಳಿಕೆಯು ಸುಮ್ಮನೆ ತಾನೇ ತಾನಾಗಿ ಬರುವುದಿಲ್ಲ. ಅರಿವಿನ ನೆಲೆಯಲ್ಲಿ ನಿಲ್ಲಬೇಕಾದರೆ ಮೈ ಮನಸ್ಸುಗಳು ಸಜ್ಜಾಗಿರಬೇಕು. ಎಂತಹ ಮನಸ್ಸು? ಈ ಜೀವಜಗತ್ತು ಕ್ಷಣ ಕ್ಷಣಕ್ಕೂ ತಂದು ನಮ್ಮೆದುರು ಹರಡುವ ಮಾಯೆಯ ಜಾಲದಿಂದ ಮಲಿನಗೊಳ್ಳದ ಮನಸ್ಸಾಗಿರಬೇಕು. ಎಂತಹ ಮೈ? ದೇಹಕ್ಕೆ ಅಂಟಿದ ಬಾಧೆ, ಚಿಂತೆ, ವ್ಯಸನಗಳಿಂದ ಮುಕ್ತವಾಗಿರಬೇಕು. ಅಂತಹ ಮೈಮನಸ್ಸುಗಳು ಮೇಳಯಿಸಿದಲ್ಲಿ ನಿಜದ ಅರಿವು ಸಾಧ್ಯವಾಗುತ್ತದೆ. ತನ್ನ ತಾ ತಿಳಿದುನೋಡಲು ಮನಸ್ಸು ತೆರವಾಗುತ್ತದೆ. ಒಮ್ಮೆ ಒಬ್ಬ ಭಕ್ತನು ರಮಣಮಹರ್ಷಿಗಳಲ್ಲಿಗೆ ಬಂದ. ಸ್ವಾಮಿ, ನನಗೆ ದೇವರ ಬಗ್ಗೆ ತಿಳಿಸಿಕೊಡಿ ಅಂದ. ನಿನ್ನ ಬಗ್ಗೆ ನೀನು ತಿಳಿದುಕೊಂಡಿದ್ದೀಯ ಎಂದು ರಮಣರು ಕೇಳಿದರು. ಇಲ್ಲ ಅಂದ. ನಿನ್ನ ನೀ ತಿಳಿದುಕೊಂಡು ಬಾ, ಆಮೇಲೆ ದೇವರ ಬಗ್ಗೆ ತಿಳಿಸುತ್ತೇನೆ ಅಂದರು. ಇದೇ ಅಲ್ಲಮನ ವಚನದ ಇಂಗಿತ.
ಪದಪ್ರಯೋಗಾರ್ಥ:
ಮನಸ್ಸು ಮಾಯೆಗೊಳಗಾದರೆ ಮಲಿನವಾಗುತ್ತದೆ ಎಂಬುದರ ಕಾವ್ಯಮಯ ನಿರೂಪಣೆಯೇ ಮಾಯಾಮಲಿನಮನ. ಅಲ್ಲಮನೇ ತನ್ನ ವೈಯಕ್ತಿಕ ಬದುಕಿನಲ್ಲಿ ಮಾಯಾಂಗನೆ ಎಂಬ ಸುಂದರಿಯ ಪ್ರಣಯ ಪಾಶದಲ್ಲಿ ಸಿಲುಕಿ ಮಾಯೆಯಿಂದ ಮಲಿನಗೊಂಡ ಮನಸ್ಸಿನಿಂದ ಮುಕ್ತಿ ಹೊಂದಿ ತದನಂತರ ಅಧ್ಯಾತ್ಮ ಪಥವನ್ನು ತುಳಿದವ. ಅಲ್ಲಮನು ಮಾಯಾಮಲಿನ ಮನವನ್ನು ತನ್ನಲ್ಲಿ ಪೋಷಿಸಿಕೊಳ್ಳದೆ, ಮಾಯೆ ಮುಟ್ಟದ ಮೈಯನ್ನು ಮೈಗೂಡಿಸಿಕೊಂಡಿದ್ದರಿಂದಲೇ ಮಾಯಾಂಗನೆಯಿಂದ ಮುಕ್ತನಾದ ಅಲ್ಲಮಪ್ರಭುವಾಗಿ ಇಂದು ನಮಗೆ ಸಿಕ್ಕಿರುವುದು. ನಿನ್ನ ನೀ ತಿಳಿದು ನೋಡಲು, ತನ್ನ ತಾ ಅರಿದು ನೋಡಲು ಮಾಯಾಮಲಿನ ಮನದಿಂದ ವಿಮುಖನಾಗಬೇಕು ಎಂದು ಸಲಹೆ ಕೊಡುವಲ್ಲಿ ಅಲ್ಲಮ ಬಳಸಿದ ಕಾವ್ಯಗುಣವುಳ್ಳ ಪದಪುಂಜ “ಮಾಯಾಮಲಿನ ಮನ” ಅತ್ಯಪೂರ್ವವಾಗಿದೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.
ಮಾಯಾಮಲಿನಮನ’ ತುಂಬಾ ಚೆನ್ನಾಗಿ ವಿವರಿಸಿದ್ದೀರಿ.
ಮೇಸ್ತ್ರಿಗೆ ಧನ್ಯವಾದಗಳು
Thank you sir by your writing we will get self realization .