ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ತಾನಿದ್ದಲ್ಲಿ
ಇಹಲೋಕ ಪರಲೋಕ ತಾನಿದ್ದಲ್ಲಿ,
ಗಗನ ಮೇರುಮಂದರ ತಾನಿದ್ದಲ್ಲಿ,
ಸಕಲ ಭುವನ ತಾನಿದ್ದಲ್ಲಿ,
ಸತ್ಯ ನಿತ್ಯ ನಿರಂಜನ ಶಿವತತ್ತ್ವ ತಾನಿದ್ದಲ್ಲಿ,
ಉತ್ತರೋತ್ತರ ಚತುರ್ವಳಯ ತಾನಿದ್ದಲ್ಲಿ,
ಚಂದ್ರಸೂರ್ಯತಾರಾಮಂಡಲ ತಾನಿದ್ದಲ್ಲಿ,
ಅಂತರ ಮಹದಂತರ ತಾನಿದ್ದಲ್ಲಿ,
ಸ್ವತಂತ್ರ ಗುಹೇಶ್ವರಲಿಂಗ ತಾನಿದ್ದಲ್ಲಿ
ಪದಾರ್ಥ:
ಮೇರು = ಮೇರುಗಿರಿ
ಮಂದರ = ಮಂದರಪರ್ವತ
ಅಂತರ = ಬಯಲು
ಮಹದಂತರ = ಮಹಾಬಯಲು
ವಚನಾರ್ಥ:
ತನ್ನ ತಾನರಿದ ಶರಣನಿಗೆ ತಾನಿರುವ ತಾವಿನಲ್ಲೇ ದೈವ ಸಂಗಾತ ಸಿದ್ದಿಸುತ್ತದೆ ಎಂದು ತಿಳಿಸುವ ಉದ್ದೇಶ ಅಲ್ಲಮನ ಈ ವಚನದಲ್ಲಿದೆ. ತನ್ನ ತಾನರಿದವಂಗೆ ತಾನಿರುವ ಠಾವಿನಲ್ಲೇ ಎಲ್ಲವೂ ನೆಲೆಸಿವೆ. ಸ್ವಯಂ ಗುಹೇಶ್ವರಲಿಂಗವೇ ಅವನಿದ್ದಲ್ಲಿರುವಾಗ ಆ ಶರಣನೇ ದೈವಸ್ವರೂಪಿ. ಅಲ್ಲಿಯೇ ಇಹಲೋಕ ಪರಲೋಕಗಳಿವೆ. ಆಕಾಶ ಮೇರುಗಿರಿ ಪರ್ವತಗಳ ಸಾಲೇ ಇದೆ. ಹದಿನಾಲ್ಕು ಭುವನಂಗಳು ಅಲ್ಲಿವೆ. ನಿತ್ಯ ಸತ್ಯವಾದ ಶುದ್ಧ ಶಿವತತ್ವ ಅಲ್ಲಿ ನೆಲೆನಿಂತಿದೆ.
ಉತ್ತರೋತ್ತರವಾದ ಚತುರ್ವಲಯ,
ಚಂದ್ರಮಂಡಲ ಸೂರ್ಯ ಮಂಡಲ
ತಾರಾ ಮಂಡಲಗಳೆಲ್ಲವೂ ಅಲ್ಲಿವೆ. ಅತ್ಯಂತ ಮುಖ್ಯವಾಗಿ ಬಯಲೆಂಬ ಮಹಾಬಯಲು ಅವನಿದ್ದಲ್ಲಿ ಬಯಲಾಗಿ ನಿಂತಿದೆ. ಇದು ಶರಣನಾದವನು ಬಯಲಿನಲ್ಲಿ ಐಕ್ಯನಾಗುವ ಪಾರಾಮೋಚ್ಚ ಸ್ಥಿತಿ. ಅದು ತಾನಿದ್ದಲ್ಲಿ.
ಪದ ಪ್ರಯೋಗಾರ್ಥ:
ತಾನಿದ್ದಲ್ಲಿ ಎಂಬುದು ಇಡೀ ವಚನವನ್ನು ನಿಯಂತ್ರಣದಲ್ಲಿಟ್ಟಿರುವ ಪದ. ತಾನು ಇದ್ದಲ್ಲಿ ಅಂದರೆ ತನ್ನತನ ಸ್ಥಿರವಾಗಿ ನಿಂತ ಆಂತರ್ಯದ ನೆಲೆಯಲ್ಲಿ ಎಂದರ್ಥ. ಸ್ಥಿರತೆಯೆಂಬುದು ದೃಢ ವ್ಯಕ್ತಿತ್ವದ ಗುಣಲಕ್ಷಣ.
ಸ್ಥಿರತೆಯಿದ್ದಲ್ಲಿ ಸಮಚಿತ್ತವಿರುತ್ತದೆ. ತಾನಿದ್ದಲ್ಲಿ ಎಂಬ ಒಂದು ಪದದಲ್ಲಿ ಮನುಷ್ಯನ ದೃಢ ವ್ಯಕ್ತಿತ್ವದಲ್ಲಿರಬೇಕಾದ ಅಗತ್ಯ ಅಂಶವನ್ನು ಅಲ್ಲಮ ನಿರ್ದೇಶಿಸಿ ಹೇಳಿರುವ ಬಗೆಯಿದು.
ತಾನಿದ್ದಲ್ಲಿ ಎಂಬ ಅಲ್ಲಮನ ಪದಪ್ರಯೋಗವನ್ನು ಪುಷ್ಟಿಕರಿಸಲು ಬಸವಣ್ಣನ ವಚನವೊಂದನ್ನು ಗಮನಿಸಬಹುದು. ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ, ಮರದ ದೇವರು ದೇವರಲ್ಲ, ಪಂಚಲೋಹದಿಂದ ಮಾಡಿದ ದೇವರು ದೇವರಲ್ಲ, ತನ್ನ ತಾನರಿದು ತಾನಾರೆಂದು ತಿಳಿದೆಡೆ ತನಗೆ ತಾನೇ ದೇವ ನೋಡಾ ಕೂಡಲಸಂಗಮದೇವಾ. ತನ್ನೊಳಗೆ ತಾನು ನೆಲೆಸಿಕೊಂಡಿದ್ದು ತನ್ನಲ್ಲೇ ದೈವತ್ವವನ್ನು ದರ್ಶಿಸಿಕೊಳ್ಳುವ ಅತ್ಯುನ್ನತ ಅಧ್ಯಾತ್ಮ ಅವಸ್ಥೆಯೇ “ತಾನಿದ್ದಲ್ಲಿ”. ಇದು ಅತ್ಯಂತ ಸರಳ ಕನ್ನಡ ಪದವಾದರೂ ಅಲ್ಲಮನ ವಚನಶೈಲಿಯ ಧಾಟಿಯಲ್ಲಿ ಅನನ್ಯವಾಗಿ ಮೂಡಿಬಂದಿದೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.