ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ತನ್ನಿಂದ ತಾನಾದಳು
ಅಂಗೈಯ ಲಿಂಗದಲ್ಲಿ ಕಂಗಳ ನೋಟ ಸ್ವಯವಾದ ಇರವ ನೋಡಾ!
ತನ್ನ ಸ್ವಾನುಭಾವದ ಉದಯದಿಂದ ತನ್ನ ತಾನರಿದ ನಿಜಶಕ್ತಿಯ ನೋಡಾ! ಭಿನ್ನವಿಲ್ಲದರಿವು,
ಮನ್ನಣೆಯ ಮಮಕಾರವ ಮೀರಿದ ಭಾವ!
ತನ್ನಿಂದ ತಾನಾದಳು!
ನಮ್ಮ ಗುಹೇಶ್ವರಲಿಂಗದಲ್ಲಿ ಸ್ವಯಲಿಂಗವಾದ ಮಹಾದೇವಿಯಕ್ಕಗಳ ನಿಲವಿಂಗೆ
ನಮೋ ನಮೋ ಎನುತಿರ್ದೆನು
ಕಾಣಾ ಚೆನ್ನಬಸವಣ್ಣಾ.
ಪದಾರ್ಥ:
ಸ್ವಯವಾದ = ತಾನೇ ತಾನಾದ
ಇರವ = ಅಸ್ತಿತ್ವ
ಸ್ವಯಲಿಂಗವಾದ = ಸ್ವಯಂಭು, ಉದ್ಭವಲಿಂಗ
ವಚನಾರ್ಥ:
ಉಡುತಡಿಯಿಂದ ಕಲ್ಯಾಣಕ್ಕೆ ಆಗಮಿಸಿದ ಅಕ್ಕಮಹಾದೇವಿಯ ಅದ್ಭುತವಾದ ವ್ಯಕ್ತಿತ್ವವನ್ನು ಪ್ರತ್ಯಕ್ಷವಾಗಿ ಕಂಡು ಮನಗಂಡು ಅದನ್ನು ಬಸವಣ್ಣನ ಸಹೋದರಿಯ ಮಗ ಚನ್ನಬಸವಣ್ಣನಿಗೆ ಅಲ್ಲಮನು ವಿವರಿಸಿ ಹೇಳುವ ಮಾತುಗಳು ಈ ವಚನದಲ್ಲಿವೆ. ಅಕ್ಕನದು ಮನ್ನಣೆಯ ಮಮಕಾರವ ಮೀರಿದ ಭಾವ. ಆಕೆಗೆ ಮನ್ನಣೆಯ ಮಮಕಾರವಿಲ್ಲ. ಮನ್ನಣೆಯ ದಾಹ ತಿನ್ನುವುದು ಆತ್ಮವನು ಮಂಕುತಿಮ್ಮ ಎಂಬ ಕಗ್ಗನುಡಿಯಿದೆ. ಅಂಗೈಯ ಇಷ್ಟಲಿಂಗದಲ್ಲಿ ತನ್ನ ನೋಟವನ್ನು ಕೇಂದ್ರೀಕರಿಸಿ ಅದರಲ್ಲೇ ತನ್ನ ಅಸ್ತಿತ್ವವನ್ನು ಕಂಡುಕೊಂಡವಳು ಅಕ್ಕ. ತನ್ನಲ್ಲಿ ಉದಯಿಸಿದ ಸ್ವಯಂ ಅನುಭಾವದಿಂದ ತನ್ನ ಆರಾಧ್ಯದೈವ ಚನ್ನಮಲ್ಲಿಕಾರ್ಜುನನನ್ನು ಅರಿಯುವ ನಿಜಶಕ್ತಿಯನ್ನು ತಾನಾಗಿಯೇ ಪಡೆದುಕೊಂಡವಳು. ಅಕ್ಕಮಹಾದೇವಿಗೆ ಗುರುವಿನ ಮಾರ್ಗದರ್ಶನ ಇರಲಿಲ್ಲ. ದೀಕ್ಷಾ ವಿಧಿವಿಧಾನಗಳಿರಲಿಲ್ಲ. ಅಕ್ಕಮಹಾದೇವಿ ತನ್ನಿಂದ ತಾನಾದವಳು.
ಪದಪ್ರಯೋಗಾರ್ಥ:
ತನ್ನಿಂದ ತಾನಾದಳು ಎಂಬುದು ಒಂದು ಸರಳ ಪದ ಬಳಕೆಯಂತೆ ಮೇಲ್ನೋಟಕ್ಕೆ ಕಂಡುಬರುತ್ತದೆ. ತಾನೇ ತಾನಾಗುವುದು ಅನ್ನುವುದರ ಸಾಂದರ್ಭಿಕ ರೂಪವೇ ತನ್ನಿಂದ ತಾನಾದಳು. ನಾನು ನೀನು ಆನು ತಾನು ಎಂಬ ನಾಕು ತಂತಿಗಳನ್ನು ನಿರಂತರವಾಗಿ ಮೀಟುವುದೇ ಜೀವನ ಎಂದು ಬೇಂದ್ರೆ ಹೇಳಿದ್ದಾರೆ. ಅಲ್ಲಮನೇ ಒಂದು ಮಹತ್ವದ ವಚನದಲ್ಲಿ “ಆನು ನೀನೆಂಬುದು ತಾನಿಲ್ಲ,
(ತನ್ನ)ತಾನರಿದ ಬಳಿಕ ಮತ್ತೇನೂ ಇಲ್ಲ” ಎಂದು ಹೇಳಿರುವುದು ನಾಕುತಂತಿಯ ಅರ್ಥದಲ್ಲೇ.
ತಾನೇ ತಾನಾಗುವುದು ಅಂದರೆ ನಾನು ನೀನು ಆನು ತಾನು ಎಂಬ ನಾಲ್ಕರ ಒಟ್ಟು ಮೊತ್ತ. ನಾನು ಎಂಬುದು ಭ್ರಮೆ, ನೀನು ಎಂಬುದು ಅಜ್ಞಾನ, ಆನು ಎಂಬುದು ಸ್ವಯಂ ತಾನು ಎಂಬುದು ಪರಂ. ಇವುಗಳೆಲ್ಲದರ ಒಟ್ಟು ಮೊತ್ತವಾದ ವ್ಯಕ್ತಿತ್ವ ಮಹಾದೇವಿ ಅಕ್ಕನದು ಎಂದು ನಿರೂಪಿಸುವಲ್ಲಿ ಅಲ್ಲಮ ಬಳಸಿದ ಸರಳ ಆದರೆ ಅತ್ಯಂತ ಆಳವಾದ ಅರ್ಥವುಳ್ಳ ಪದಪ್ರಯೋಗವೇ ತನ್ನಿಂದ ತಾನಾದಳು!
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.
ಅರ್ಥಗರ್ಭಿತವಾದ ವಿವರಣೆ ಶರಣರೇ