ಮಹುವಾ ಉಚ್ಚಾಟನೆ; ಉಳಿಗಾಲವಿಲ್ಲವೇ ಅದಾಣಿ ಎದುರು ಹಾಕಿಕೊಂಡರೆ?

Date:

Advertisements
ಅದಾಣಿ-ಮೋದಿ ಸಂಬಂಧವನ್ನು ಝಾಡಿಸಿ ಪ್ರಶ್ನಿಸುತ್ತ ಬಂದಿದ್ದ ಮತ್ತೊಬ್ಬ ದಿಟ್ಟ ಸಂಸದೆ ಮಹುವಾ ಮೊಯಿತ್ರಾ ಅವರನ್ನೂ ಇಂತಹುದೇ ಖೆಡ್ಡಾಕ್ಕೆ ಕೆಡವಿ ಉಚ್ಚಾಟಿಸಲಾಗಿದೆ…
ಮೋದಿಯವರನ್ನು ಎದುರು ಹಾಕಿಕೊಂಡವರಿಗೆ ಉಳಿಗಾಲವಿಲ್ಲವೇ ಎಂಬ ಪ್ರಶ್ನೆಯನ್ನು ಈ ಹಿಂದೆ ಕೇಳಲಾಗುತ್ತಿತ್ತು. ಈ ಸವಾಲನ್ನು ಕೊಂಚ ಬದಲಿಸಿಕೊಳ್ಳಬೇಕಿದೆ. ಅದಾನಿಯೊಂದಿಗೆ ಮೋದಿಯವರ ಸಂಬಂಧ ಪ್ರಶ್ನಿಸಿದವರಿಗೆ ಉಳಿಗಾಲವಿಲ್ಲವೇ ಎಂದು ತಿದ್ದಿಕೊಳ್ಳಬೇಕಿದೆ.

ಅದಾಣಿಮೋದಿ ಸಂಬಂಧವನ್ನು ಲೋಕಸಭೆಯ ಒಳಗೆ ಮತ್ತು ಹೊರಗೆ ಚೂಪಾಗಿ ಪ್ರಶ್ನಿಸಿದ್ದರು ರಾಹುಲ್ ಗಾಂಧೀ. ಅದಾಣಿ ಶೇರು ಹಗರಣದ ತನಿಖೆಗೆ ಜಂಟಿ ಸದನ ಸಮಿತಿ ರಚಿಸುವಂತೆ ಆಗ್ರಹಿಸಿದ್ದರು. ತಾಸುಗಟ್ಟಲೆ ನೀಡಿದ್ದ ಉತ್ತರದಲ್ಲಿ ಅದಾನಿ ಕುರಿತ ಯಾವ ಆಪಾದನೆಗಳಿಗೂ ಮೋದಿ ಉತ್ತರ ನೀಡಿರಲಿಲ್ಲ. ಆಗಾಗ ನೀರು ಕುಡಿಯುತ್ತಲೇ ಇದ್ದರು.

ಅದಾಣಿಮೋದಿ ಸಂಬಂಧವನ್ನು ನಿರಂತರ ಪ್ರಶ್ನಿಸಿ ಪ್ರಧಾನಿಯವರಿಗೆ ಮುಜುಗರ ಮೂಡಿಸುತ್ತಿದ್ದ ರಾಹುಲ್ ಅವರನ್ನು ಹೇಗಾದರೂ ಮಾಡಿ ಜೈಲಿಗೆ ಕಳಿಸಿಯೇ ತೀರಬೇಕೆಂದು ಮೋದಿ ಸರ್ಕಾರ ತೀರ್ಮಾನಿಸಿದಂತಿತ್ತು. ಇಲ್ಲವಾದರೆ ರಾಹುಲ್ ವಿರುದ್ಧದ ಮಾನಹಾನಿ ಮೊಕದ್ದಮೆ ಇಷ್ಟು ಅಸಹಜ ವೇಗದಲ್ಲಿ ಇತ್ಯರ್ಥ ಆಗುವುದು ಅನುಮಾನವಿತ್ತು.

ಸೂರತ್ ನ್ಯಾಯಾಲಯದ ಮುಂದೆ ನಾಲ್ಕು ವರ್ಷಗಳಿಂದ ಬಾಕಿ ಇದ್ದ ಪ್ರಕರಣಕ್ಕೆ ಏಕಾಏಕಿ ಜೀವ ತುಂಬಿ ಮಿಂಚಿನ ಕಾರ್ಯಾಚರಣೆ ನಡೆಸಿ ರಾಹುಲ್ ಸದಸ್ಯತ್ವವನ್ನು ರದ್ದುಪಡಿಸಲಾಗಿತ್ತು. ಕೇವಲ 24 ತಾಸುಗಳಲ್ಲಿ ಅವರ ಲೋಕಸಭಾ ಸದಸ್ಯತ್ವವನ್ನು ರದ್ದು ಮಾಡಿ, ಸರ್ಕಾರಿ ನಿವಾಸವನ್ನೂ ಖಾಲಿ ಮಾಡಿಸಲಾಗಿತ್ತು. ಸಂಸದೀಯ ರಾಜಕಾರಣದಿಂದ ಅವರನ್ನು ದಶಕದಷ್ಟು ದೀರ್ಘ ಕಾಲ ದೂರ ಇರಿಸುವ ಹುನ್ನಾರವೇ ನಡೆಯಿತು.

Advertisements

ರಾಹುಲ್ ಅವರಿಗೆ ನೀಡಲಾದ ಶಿಕ್ಷೆ ಅತಿಯಾಯಿತು ಎಂಬುದು ಸುಪ್ರೀಮ್ ಕೋರ್ಟಿನ ಸ್ಪಷ್ಟ ಇಂಗಿತವಾಗಿತ್ತು. ಮೋದಿ ಉಪನಾಮ ಕುರಿತ ರಾಹುಲ್ ಚುನಾವಣಾ ಭಾಷಣ ಟೀಕೆಯು ಎರಡು ವರ್ಷಗಳ ಗರಿಷ್ಠ ಜೈಲು ಶಿಕ್ಷೆ ವಿಧಿಸುವಷ್ಟು ಮತ್ತು ಆನಂತರ ಆರು ವರ್ಷ ಚುನಾವಣೆಗೆ ಸ್ಪರ್ಧಿಸದಿರುವಷ್ಟು ತೀವ್ರವೇ ಎಂಬ ಪ್ರಶ್ನೆ ಎದ್ದಿತ್ತು.

ಅದಾಣಿಮೋದಿ ಸಂಬಂಧವನ್ನು ಝಾಡಿಸಿ ಪ್ರಶ್ನಿಸುತ್ತ ಬಂದಿದ್ದ ಮತ್ತೊಬ್ಬ ದಿಟ್ಟ ಸಂಸದೆ ಮಹುವಾ ಮೊಯಿತ್ರಾ ಅವರನ್ನೂ ಇಂತಹುದೇ ಖೆಡ್ಡಾಕ್ಕೆ ಕೆಡವಿ ಉಚ್ಚಾಟಿಸಲಾಗಿದೆ. ಪ್ರಶ್ನೆ ಕೇಳಲು ನಗದು ಮತ್ತು ಉಡುಗೊರೆ ಪಡೆದ ಮತ್ತು ಲೋಕಸಭಾ ಜಾಲತಾಣದ ಪಾಸ್ವರ್ಡ್ ಹಂಚಿಕೊಂಡ ‘ಅನೈತಿಕತೆ’ಯ ಆರೋಪಗಳನ್ನು ಆಕೆಯ ಮೇಲೆ ಹೊರಿಸಲಾಗಿದೆ.

ಈ ಪೈಕಿ ಮಹುವಾ ನಗದು ಪಡೆದಿರುವ ಆರೋಪ ರುಜುವಾತಾಗಿಲ್ಲ. ಈ ಕುರಿತು ಇನ್ನೂ ತನಿಖೆಯೇ ಆಗಿಲ್ಲ. ಪಾಸ್ವರ್ಡ್ ಹಂಚಿಕೆ ಕುರಿತು ಯಾವುದೇ ನಿಯಮಗಳು ಕೂಡ ಜಾರಿಯಲ್ಲಿಲ್ಲ. ಹೀಗಾಗಿ ಅಸ್ತಿತ್ವದಲ್ಲೇ ಇಲ್ಲದ ನಿಯಮಗಳ ಉಲ್ಲಂಘನೆಗೆ, ಆಗಿಯೇ ಇರದ ನಗದು ವಿನಿಮಯಕ್ಕಾಗಿ ಸಂಸದೆಯೊಬ್ಬಳ ಸದಸ್ಯತ್ವವನ್ನೇ ಕಿತ್ತುಕೊಂಡು ಸದನದಿಂದ ಹೊರದಬ್ಬುವುದು ಪರಮಾವಧಿ ಅನ್ಯಾಯ.

50 ಕೋಟಿ ಗರ್ಲ್ ಫ್ರೆಂಡ್, ಕಾಂಗ್ರೆಸ್ ವಿಧವೆ, ದೀದೀಓ ದೀದೀ….ಎಂದು ಹೆಣ್ಣುಮಕ್ಕಳನ್ನು ಕರೆಯುವ ಪುರುಷಾಹಂಕಾರವನ್ನು ಕೆಣಕಿದ್ದರು ಮಹುವಾ. ಅಪರೂಪದ ಸತ್ಯಗಳನ್ನು ನಿರ್ಭೀತವಾಗಿ ಪ್ರಭುತ್ವಕ್ಕೆ ಮುಖಕ್ಕೆ ರಾಚಿದ್ದರು.

ಮಣಿಪುರದಲ್ಲಿ ಅತ್ಯಾಚಾರಕ್ಕೆ ತುತ್ತಾಗಿ ಹತ್ಯೆಯಾಗಿ ಹೋದ ಮಹಿಳೆಯರಿಗೆ, ಬಿಜೆಪಿ ಸಂಸದನಿಂದ ಸತತವಾಗಿ ಲೈಂಗಿಕ ಹಲ್ಲೆಗೆ ಗುರಿಯಾದ ಒಲಿಂಪಿಕ್ ಪದಕವಿಜೇತ ಮಹಿಳಾ ಪೈಲ್ವಾನರಿಗೆ ಈವರೆಗೆ ನ್ಯಾಯ ಸಿಕ್ಕಿಲ್ಲ. ಬ್ರಿಜಭೂಷಣ ಸಿಂಗ್ ಎದೆ ಸೆಟೆಸಿ ಅಡ್ಡಾಡುತ್ತಿದ್ದಾನೆ. ಐವತ್ತಾರು ಅಂಗುಲದ ಎದೆಗಾರಿಕೆ ಮಹಾಮೌನ ತಳೆದಿದೆ. ಸದನದಲ್ಲಿ ದಾನಿಶ್ ಅಲಿ ಎಂಬ ಬಿ.ಎಸ್.ಪಿ. ಸದಸ್ಯನನ್ನು ಮುಲ್ಲಾ, ಕಟ್ವೇ ಎಂಬ ಮುಂತಾಗಿ ಕೀಳು ಪದಗಳಿಂದ ಅವಮಾನಿಸಿದ ಬಿಜೆಪಿ ಸಂಸದನಿಗೆ ಯಾವ ಶಿಕ್ಷೆಯೂ ಆಗಿಲ್ಲ.

ವಿಶ್ವದ ಬಹುದೊಡ್ಡ ಜನತಂತ್ರದ ದೇಗುಲ, ಐವತ್ತಾರು ಅಂಗುಲದ ಎದೆಗಾರಿಕೆಯ ಪ್ರಚಂಡ ನಾಯಕತ್ವ ಮಹುವಾ ಮೊಯಿತ್ರಾ ಎಂಬ ಮಹಿಳೆಯ ದಾಳಿಗೆ ಈ ಪರಿ ನಡುಗಿ ಹೋಯಿತೇಕೆ? ಇಷ್ಟಾಗಿ, ಅದಾಣಿಮೋದಿ ಕುರಿತ ಪ್ರಶ್ನೆಗಳನ್ನು ಮಹುವಾ ಮಾತ್ರವೇ ಕೇಳುತ್ತಿರಲಿಲ್ಲ. ದೇಶವೇ ಕೇಳುತ್ತಿತ್ತು. ಹಿಂಡನ್ ಬರ್ಗ್ ವರದಿ ಕೇಳಿತ್ತು.

ಸಂಸತ್ತಿನ ಜಾಲತಾಣದ ತಮ್ಮ ಪಾಸ್ವರ್ಡ್ ಗಳನ್ನು ಸಂಸದರು ತಮ್ಮ ಆಪ್ತ ಸಹಾಯಕರೊಂದಿಗೆ ಹಂಚಿಕೊಳ್ಳುತ್ತ ಬಂದಿರುವುದು ಸಾಧಾರಣ ವಿಷಯ. ಈ ಕುರಿತು ಸಂಸತ್ತು ಯಾವುದೇ ನಿಯಮ ರೂಪಿಸಿಲ್ಲ. ಪ್ರಶ್ನೆಗಳನ್ನು ಜಾಲತಾಣಕ್ಕೆ ಅಪ್ಲೋಡ್ ಮಾಡುವುದು ಅವರ ಆಪ್ತ ಸಹಾಯಕರೇ ವಿನಾ ಸಂಸದರಲ್ಲ.

ಪಾಸ್ವರ್ಡ್ ಹಂಚಿಕೊಂಡ ವಿಚಾರಕ್ಕೆ ಸದಸ್ಯತ್ವದಿಂದ ಉಚ್ಚಾಟಿಸುವುದು ಅಪ್ಪಟ ಸೇಡಿನ ನಡೆ. ಹೆಚ್ಚೆಂದರೆ ವಿವೇಚನಾರಹಿತ ತಪ್ಪು ಎನ್ನಬಹುದು.

ಪಶ್ಚಿಮಬಂಗಾಳದ ಕೃಷ್ಣಾನಗರ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾದ ಚೊಚ್ಚಲ ಸಂಸದೆ ಮಹುವಾ. ಮೋದಿ ಸರ್ಕಾರದ ನೀತಿ ನಿರ್ಧಾರಗಳ ಕುರಿತ ಅವರ ಚುಟುಕು ಭಾಷಣಗಳು ಕೆಂಡದ ಉಂಡೆಗಳು. .ಕೆ.-47 ರೈಫಲ್ ನಿಂದ ನಿಮಿಷಕ್ಕೆ ಆರುನೂರರಂತೆ ಸಿಡಿದು ಆಹತಗೊಳಿಸುವ ಉರಿ ಉರಿಯುವ ಕಾಡತೂಸುಗಳು. ಕಠಿಣ ತಯಾರಿ ಮತ್ತು ಎಚ್ಚರಿಕೆಯ ಗುರಿ ಇರಿಸಿ ಎದುರಾಳಿಯ ಗುಂಡಿಗೆ ನಡುಗಿಸುವ ಗುಂಡುಗಳ ದಾಳಿಯದು. ಮೊಯಿತ್ರಾ ಅವರ ಮಾತುಗಳಿಗೆ ದೈಹಿಕವಾಗಿ ಸುಡುವ ಶಕ್ತಿ ಇದ್ದಿದ್ದರೆ ಅದಾನಿಮೋದಿ ಜೋಡಿ ಈ ಹೊತ್ತಿಗೆ ಗಂಭೀರ ಗಾಯಾಳುಗಳಾಗಬೇಕಿತ್ತು.

ತೃಣಮೂಲ ಸಂಸದೀಯ ದಳದ ಕಿರಿಯ ಸದಸ್ಯೆಯಾಗಿ ಆಕೆಗೆ ಹಂಚಿಕೆಯಾಗುತ್ತಿದ್ದುದು ಅತಿ ಕಡಿಮೆ ಸಮಯ. ಆ ಮಾತಿನ ದಾಳಿಯಲ್ಲಿ ಆಕೆಯ ಚಹರೆ ಕೂಡ ಉರಿದು ಬೆಳಗುವ ಸೋಜಿಗವಾಗುತ್ತಿತ್ತು. ಈಕೆಯ ಚೊಚ್ಚಲ ಭಾಷಣವೇ ‘ನಮೋ’ ಟೀವಿ ಚಾನೆಲ್ಲನ್ನು ಮುಚ್ಚಬೇಕೆಂಬುದು. ಮೋದಿ ಆಡಳಿತದಲ್ಲಿ ಉಗ್ರಬಲಪಂಥೀಯ ಸರ್ವಾಧಿಕಾರಿ ಸೂತ್ರ ಸಂವಿಧಾನಗಳ ‘ಫ್ಯಾಷಿಸಮ್’ ತಲೆಯೆತ್ತತೊಡಗಿದೆ ಎಂಬ ಅವರ ಭಾಷಣವನ್ನು ದೇಶವಿದೇಶಗಳು ಎದ್ದು ಕುಳಿತು ಗಮನಿಸಿದ್ದವು. ಆಕೆಯ ನಿಗಿನಿಗಿ ನಿರ್ಭೀತ ಭಾಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ‘ವೈರಲ್’ ಆದವು.

ಸದನದಲ್ಲಿ ಎದ್ದು ನಿಂತಾಗಲೆಲ್ಲ ತನ್ನನ್ನು ಜರ್ಝರಿತಗೊಳಿಸುತ್ತಿದ್ದ ಈ ‘ಫಿರಂಗಿ’ಯನ್ನು ಕೆಡವಲು ಖೆಡ್ಡಾ ತೋಡುವ ಸನ್ನಾಹದಲ್ಲಿತ್ತು ಆಳುವ ಪಕ್ಷ. ಆಳುವ ಪಕ್ಷದ ಆಕ್ರಮಣಕಾರಿ ಸಂಸದ ನಿಶಿಕಾಂತ ದುಬೆ ಗಳಿಸಿರುವ ಶೈಕ್ಷಣಿಕ ಪದವಿಗಳು ಮತ್ತು ಡಾಕ್ಟರೇಟ್ ನಕಲಿ ಎಂದು ಮಹುವಾ ಈ ಹಿಂದೆಯೇ ಆಪಾದಿಸಿ ಆತನ ಹಗೆತನ ಕಟ್ಟಿಕೊಂಡಿದ್ದರು. ಸದನದಲ್ಲಿ ಇವರಿಬ್ಬರ ಜಟಾಪಟಿ ಜರುಗುತ್ತಲೇ ಇತ್ತು.

ಮಹುವಾ ಮತ್ತು ಆಕೆಯ ಮಾಜಿ ಪ್ರೇಮಿ ಜೈ ಅನಂತ್ ದೇಹಾದ್ರೈ ನಡುವಣ ಜಗಳ ಮನಸ್ತಾಪ ಹಾಗೂ ಕ್ಷುಲ್ಲಕ ನಡವಳಿಕೆಗಳು. ಮಧುರ ಸಂಬಂಧ ಮುರಿದು ಬಿದ್ದಾಗ ಈ ಜೋಡಿಯ ಮುದ್ದಿನ ನಾಯಿ ‘ಹೆನ್ರಿ’ ಯಾರಿಗೆ ಸೇರಬೇಕೆಂಬ ವ್ಯಾಜ್ಯ ಸಿಡಿದಿತ್ತು. ಕಡುಹಗೆಯ ಹಂತ ತಲುಪಿತ್ತು. ಹೆನ್ರಿಯನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದ ಮಹುವಾ ಮಾಜಿಪ್ರೇಮಿಯನ್ನು ಕೆರಳಿಸುವ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಜೈ ಅನಂತ್ ರೋಷ ಮುಗಿಲು ಮುಟ್ಟಿತ್ತು. ಹೆನ್ರಿಯನ್ನು ವಶಕ್ಕೆ ಪಡೆಯುವ ಜಿದ್ದು ಹಿಡಿದರು, ಪ್ರಶ್ನೆ ಕೇಳಲು ಲಂಚರುಷುವತ್ತು ಪಡೆದಿರುವ ದೂರನ್ನು ಸಿಬಿಐಗೆ ನೀಡಿದರು. ಕುದಿಯುತ್ತಿದ್ದ ದುಬೆ ಕಾಲಿಗೆ ಅನಾಯಾಸವಾಗಿ ತೊಡರಿತ್ತು ಪ್ರತೀಕಾರದ ಬಳ್ಳಿ.

ದರ್ಶನ್ ಹೀರಾನಂದಾನಿ ಎಂಬ ಉದ್ಯಮಿಗೆ ಮೋದಿ ಮೆಚ್ಚುಗೆಯ ಮತ್ತೊಬ್ಬ ಉದ್ಯಮಿ ಅದಾಣಿ ಜೊತೆಗೆ ಔದ್ಯಮಿಕ ಪೈಪೋಟಿಯಿತ್ತು. ಮಹುವಾ ಮೋದಿಅದಾಣಿ ಸಂಬಂಧ ಕುರಿತು ಕೇಳಿದ್ದ ಪ್ರಶ್ನೆಗಳು ಅಸಲಿಗೆ ಹೀರಾನಂದಾನಿಯ ಪ್ರಶ್ನೆಗಳು. ಸಂಸತ್ತಿನ ಜಾಲತಾಣದ ಮಹುವಾ ಖಾತೆಯ ಪಾಸ್ವರ್ಡ್ ಹೀರಾನಂದಾನಿ ಬಳಿ ಇತ್ತು. ಪ್ರಶ್ನೆಗಳನ್ನು ಆತನೇ ಮಹುವಾ ಖಾತೆಯಿಂದ ‘ಅಪ್ಲೋಡ್’ ಮಾಡುತ್ತಿದ್ದ. ಪ್ರತಿಯಾಗಿ ಆಕೆ ದುಬಾರಿ ಉಡುಗೊರೆಗಳನ್ನು ಆತನಿಂದ ಪಡೆಯುತ್ತಿದ್ದರು ಎಂದು ಅನಂತ್ ದೇಹಾದ್ರೈ ದೂರು. ಈ ದೂರನ್ನು ತಮ್ಮದಾಗಿಸಿಕೊಂಡು ಲೋಕಸಭೆ ಸ್ಪೀಕರ್‌ಗೆ ಕಳಿಸಿದ್ದರು ದುಬೆ. ಲಂಚ ರುಷುವತ್ತು ಉಡುಗೊರೆ ಪಡೆದ ಆಪಾದನೆಗಳನ್ನು ನಿರಾಧಾರ ಎಂದು ಮಹುವಾ ತಳ್ಳಿಹಾಕಿದ್ದಾರೆ. ಎರಡು ಹೇಳಿಕೆಗಳ ವಿನಾ ನನ್ನ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ. ಈ ಪೈಕಿ ಹೀರಾನಂದಾನಿ ಹೇಳಿಕೆ ತಯಾರಾದದ್ದು ಪ್ರಧಾನಿ ಕಚೇರಿಯಲ್ಲಿ. ಬೆದರಿಸಿ ಬ್ಲ್ಯಾಕ್ಮೇಲ್ ಮಾಡಿ ಆತನಿಂದ ಸಹಿ ಹಾಕಿಸಲಾಗಿದೆ. ಹೀರಾನಂದಾನಿ ಮತ್ತು ಜೈ ಅನಂತ್ ದೂರುಗಳು ಪರಸ್ಪರ ವಿರೋಧಿಸುತ್ತವೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

ಜೈ ಅನಂತ್ ಮತ್ತು ಹೀರಾನಂದಾನಿ ಇಬ್ಬರನ್ನೂ ಪಾಟೀಸವಾಲಿಗೆ ಗುರಿಪಡಿಸಲು ಅನುಮತಿ ನೀಡುವಂತೆ ಮೊಯಿತ್ರಾ ಕೋರಿಕೆಯನ್ನು ನೀತಿ ನಡವಳಿಕೆಗಳ ಕುರಿತ ಸದನದ ಸ್ಥಾಯೀ ಸಮಿತಿ ತಳ್ಳಿ ಹಾಕುತ್ತದೆ. ಆಕೆಯ ಸಮಜಾಯಿಷಿಗೂ ಅವಕಾಶ ನೀಡುವುದಿಲ್ಲ. ಆಕೆಯ ಖಾಸಗಿ ಬದುಕಿಗೆ ಸಂಬಂಧಿಸಿದ ಮತ್ತು ಅಸಭ್ಯತೆಯ ಅಂಚನ್ನು ಮುಟ್ಟಿದ ಪ್ರಶ್ನೆಗಳನ್ನು ಕೇಳುತ್ತದೆ.

ಅದಾಣಿ ಮೇಲಿನ 13 ಸಾವಿರ ಕೋಟಿ ರುಪಾಯಿಗಳ ಕಲ್ಲಿದ್ದಿಲು ಹಗರಣದಿಂದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಮೋದಿ ಸರ್ಕಾರ ಹೂಡಿದ ಷಡ್ಯಂತ್ರವಿದು. ಅದಾನಿ ಹಗರಣಗಳ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿಲ್ಲವೇಕೆ? ಮುಂಬರುವ ತಿಂಗಳುಗಳಲ್ಲಿ ನನ್ನ ವಿರುದ್ಧ ಸಿಬಿಐ, .ಡಿ.ಗಳನ್ನು ಛೂಬಿಟ್ಟು ಕಿರುಕುಳ ನೀಡುವುದು ನಿಶ್ಚಿತ. ಈ ದಮನಕ್ಕೆ ಮಣಿಯುವವಳು ನಾನಲ್ಲ. ನನಗಿನ್ನೂ 49 ವರ್ಷ ವಯಸ್ಸು. ಮುಂದಿನ 30 ವರ್ಷಗಳ ಕಾಲ ಸಂಸತ್ತಿನ ಒಳಗೆ ಹೊರಗೆ, ಹಾದಿ ಬೀದಿಗಳಲ್ಲಿ ನಿಮ್ಮ ವಿರುದ್ಧ ಹೋರಾಡುತ್ತೇನೆ. ಖಚಿತವಾಗಿಯೂ ನಿಮ್ಮನ್ನು ಕೊನೆಗಾಣಿಸುತ್ತೇನೆ’.- ಉಚ್ಚಾಟನೆಯ ನಂತರ ಸಂಸದ್ ಭವನದ ಹೊರಭಾಗದಲ್ಲಿ ಮಹುವಾ ತೊಟ್ಟ ಪ್ರತಿಜ್ಞೆಯಿದು.

ಈ ಹೊತ್ತಿನಲ್ಲಿ ಪ್ರತಿಪಕ್ಷದ ಹೇಮಾಹೇಮಿಗಳು ಆಕೆಯ ಬೆನ್ನಿಗಿದ್ದರು. ಪಂಚರಾಜ್ಯ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಿನ ನಂತರ ದೂರವಾಗುತ್ತಿದ್ದ ಪ್ರತಿಪಕ್ಷಗಳ ಒಕ್ಕೂಟ ‘ಇಂಡಿಯಾ’ವನ್ನು ಪುನಃ ಹತ್ತಿರ ತರುತ್ತಿದೆ ಈ ಉಚ್ಚಾಟನೆ. ‘ಇಂಡಿಯಾ’ ಕುರಿತ ಮಮತಾ ಬ್ಯಾನರ್ಜಿ ಹೇಳಿಕೆಯೇ ಈ ಮಾತಿಗೆ ನಿದರ್ಶನ.

ವಿನಾಶ ಕವಿದು ಮೈಮೇಲೇರಿದಾಗ ಮೊದಲು ಕಣ್ಮರೆಯಾಗುವುದು ವಿವೇಕ’ ಎಂಬುದು ಮಹುವಾ ಅವರ ವಿದಾಯದ ಸಿಡಿನುಡಿ.

ವಿದೇಶದಲ್ಲಿ ಕಲಿತ ಅತ್ಯಾಧುನಿಕ ಮಹಿಳೆ ಮೊಯಿತ್ರಾ. ಅವರ ಉಡುಗೆ ತೊಡುಗೆ ನಡವಳಿಕೆಯಲ್ಲಿ ಅಸಭ್ಯತೆ ಇಣುಕಿದ್ದೇ ಇಲ್ಲ. ಸ್ವಂತ ಕಾಲಮೇಲೆ ನಿಂತ ಒಂಟಿ ಮಹಿಳೆಯ ಅಖಂಡ ಆತ್ಮವಿಶ್ವಾಸವನ್ನು, ಆಕೆಯ ಬಂಡಾಯದ ಭಾಷೆಯನ್ನು ಗಂಡಾಳಿಕೆ ನಿತ್ತರಿಸಲಿಲ್ಲ. ಅಸ್ತಿತ್ವದಲ್ಲೇ ಇಲ್ಲದ ನೀತಿಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಕೇವಲ 30 ನಿಮಿಷಗಳಲ್ಲಿ ಆಕೆಯನ್ನು ಸದನದಿಂದ ಹೊರ ಹಾಕಲಾಯಿತು.

ಈ ಪ್ರಕರಣದ ನಂತರ ಮಹುವಾ ವ್ಯಕ್ತಿತ್ವದ ಎತ್ತರ ಮತ್ತಷ್ಟು ಹಿಗ್ಗಿದೆ. ಐವತ್ತಾರು ಅಂಗುಲ ಕುಗ್ಗಿದೆ.

ಉಮಾಪತಿ ಡಿ
ಡಿ ಉಮಾಪತಿ
+ posts

ಹಿರಿಯ ಪತ್ರಕರ್ತರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

1 COMMENT

  1. ಮೊಹುವಾ ಮೊಯಿತ್ರಾರನ್ನು ಸದನದಿಂದ ಹೊರಹಾಕಲಾಗಿದೆ ಎಂದರೆ 56 ಇಂಚಿನ ಎದೆ ಹೆದರಿದೆ ಅಂತಲೇ ಅರ್ಥ…..

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X