ದಾವಣಗೆರೆ ನಗರದಲ್ಲಿರುವ ಪ್ರತಿಷ್ಠಿತ ಸಂಸ್ಥೆ ವಿಶಾಲ್ ಮಾರ್ಟ್ ತನ್ನಲ್ಲಿನ ಸಿಬ್ಬಂದಿಯನ್ನು ಏಕಾಏಕಿ ತೆಗೆದಿದೆ. ಪರಿಣಾಮ ಮೂವರು ಮಹಿಳೆಯರು ಎಐಯುಟಿಯುಸಿ ನೇತೃತ್ವದಲ್ಲಿ ವಿಶಾಲ್ ಮಾರ್ಟ್ ಎದುರು ಪ್ರತಿಭಟನೆ ನಡೆಸಿದ್ದಾರೆ.
ಜೀವನ ನಿರ್ವಹಣೆಗಾಗಿ ಕೆಲಸಕ್ಕೆ ಸೇರಿದ್ದೇವೆ. ಆದರೆ, ಕಾರಣ ಹೇಳದೆ, ಕಳ್ಳತನದ ಆರೋಪ ಮಾಡಿ ಏಕಾಏಕಿ ನಮ್ಮನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಇದರಿಂದ ನಾವು ಬದುಕು ಸಾಗಿಸುವುದು ಕಷ್ಟಕರವಾಗಿದೆ ಎಂದು ಪ್ರತಿಭಟನಾ ನಿರತ ಮಹಿಳೆಯರು ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿರುವ ವಿಶಾಲ್ ಮೆಗಾ ಮಾರ್ಟ್ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಗೋಳು ಹೇಳತೀರಾದಾಗಿದೆ. ಇಲ್ಲಿ ಯಾವುದೇ ಕಾರ್ಮಿಕ ನೀತಿ ಅನುಸರಿಸುತ್ತಿಲ್ಲ. ಸ್ಯಾಲರಿ ಸ್ಲೀಪ್, ಇಎಸ್ಐ, ಪಿಎಫ್ ಯಾವುದೇ ಸೌಲಭ್ಯವಿಲ್ಲ. ಆದ್ದರಿಂದ ಇಲ್ಲಿರುವ ಕಾರ್ಮಿಕರಿಗೆ ನ್ಯಾಯಕೊಡಿಸಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸುತ್ತಿದ್ದಾರೆ.
ಕಳೆದ ಐದು ವರ್ಷದಿಂದ ಕೆಲಸ ಮಾಡುತ್ತಿದ್ದ ಮೂರು ಮಹಿಳೆಯರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ನಮ್ಮ ಸಹಾಯಕ್ಕೆ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ್ ಕೈದಾಳೆ ಬಂದಿದ್ದಾರೆ. ಆದ್ದರಿಂದ ಅವರ ನೇತೃತ್ವದಲ್ಲಿ ವಿಶಾಲ್ ಮೆಗಾ ಮಾರ್ಟ್ ಕಾರ್ಮಿಕರ ಸಂಘದಿಂದ ಅಹೋರಾತ್ರಿ ಧರಣಿ ನಡೆಸಿದ್ದೇವೆ. ನಮ್ಮ ಹೋರಾಟ ನ್ಯಾಯಕ್ಕಾಗಿ ಎಂದು ಮಹಿಳೆಯರು ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ವೇಳೆ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ್ ಕೈದಾಳೆ ಮಾತನಾಡಿ, ವಿಶಾಲ್ ಮೆಗಾ ಮಾರ್ಟ್‌ನಲ್ಲಿ ಕಳೆದ ಐದು ವರ್ಷದಿಂದ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ಬರುತ್ತಿದ್ದ ಭಾಗ್ಯ, ಗೌರಮ್ಮ, ನಸ್ರೀನ್ ಬಾನು ಎಂಬ ಮೂವರು ಮಹಿಳೆಯರನ್ನು ಏಕಾಏಕಿ ಕೆಲಸದಿಂದ ವಜಾಮಾಡಲಾಗಿದೆ. ಇದು ಖಂಡನೀಯ. ಈ ಬಡ ಕಾರ್ಮಿಕರಿಗೆ ಮಾಲ್‌ನ ಮಾಲೀಕರು ಇಎಸ್‌ಐ, ಪಿಎಫ್ ಸೌಲಭ್ಯ ನೀಡಿಲ್ಲ ಕನಿಷ್ಠ ವೇತನವನ್ನೂ ನೀಡಿಲ್ಲ. ಕಾರ್ಮಿಕ ಸೌಲಭ್ಯ ನೀಡದೆ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ.
ಈ ಕೂಡಲೇ ಮಾಲ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನದೊಂದಿಗೆ ಪಿಎಫ್, ಇಎಸ್‌ಐ ಸೌಲಭ್ಯ ನೀಡಬೇಕು ಹಾಗೂ ಕೆಲಸಕ್ಕೆ ಮರುನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕಾರ್ಮಿಕರಾದ ಭಾಗ್ಯ, ಗೌರಮ್ಮ, ನಸ್ರೀನ್ ಬಾನು, ಶಿವಾಜಿರಾವ್, ತಿಪ್ಪೇಸ್ವಾಮಿ, ಬಸವರಾಜ್ ಮತ್ತಿತರರಿದ್ದರು. ಇನ್ನು ಮಹಿಳೆಯರ ಆರೋಪದ ಬಗ್ಗೆ ವಿಶಾಲ್ ಮಾರ್ಟ್ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.