ರಾಜಕಾರಣಿಗಳಿಗೆ ಸಹಜವಾಗಿಯೇ ವಿಜ್ಞಾನಕ್ಕಿಂತ ಧಾರ್ಮಿಕ ವಿಚಾರಗಳ ಕಡೆಗೆ ಅಪರಿಮಿತ ಒಲವಿರುವುದು ಗುಟ್ಟಿನ ವಿಚಾರವೇನಲ್ಲ. ಅದಕ್ಕೆ ಕಾರಣವೇನು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿಯೇ, 'ಚಂದ್ರಯಾನ'ದ ಸಂದರ್ಭದಲ್ಲಿ ವೈಜ್ಞಾನಿಕ ಚರ್ಚೆ ಆಗಬೇಕಿದ್ದ ಗಂಭೀರ ವಿಷಯವೊಂದನ್ನು ಧಾರ್ಮಿಕ ವಿವಾದವನ್ನಾಗಿ ರೂಪಿಸಲಾಯಿತು
‘ಚಂದ್ರಯಾನ ಈ ಸಲ ತಿರಪತಿ ನಾಮವೇ ಗತಿ ಅನ್ಸತ್ತೆ…’ ಎಂದು ಹುಲಿಕುಂಟೆ ಮೂರ್ತಿ ಅವರು ಸಾಮಾಜಿಕ ತಾಣದಲ್ಲಿ ಬರೆದ ಪೋಸ್ಟ್ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಈ ಹೇಳಿಕೆಯನ್ನು ವಿವಾದವಾಗಿಸಲು ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಅವರನ್ನೂ ಒಳಗೊಂಡಂತೆ ಕೆಲವರು ಪ್ರಯತ್ನಿಸಿದರು. ಹುಲಿಕುಂಟೆ ಮೂರ್ತಿ ಅವರಿಂದ ಈ ಹೇಳಿಕೆ ಕುರಿತು ಸ್ಪಷ್ಟೀಕರಣ ಪಡೆದು, ಮತ್ತೊಮ್ಮೆ ಹೀಗೆಲ್ಲ ನಡೆದುಕೊಳ್ಳದಂತೆ ಸೂಚಿಸಲು ಕೋರಿ ಸುರೇಶ್ ಕುಮಾರ್ ಅವರು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಕೂಡ ಬರೆದರು. ಆನಂತರ ಪದವಿಪೂರ್ವ ಶಿಕ್ಷಣ ಇಲಾಖೆ ಈ ಕುರಿತು ವಿವರಣೆ ನೀಡುವಂತೆ ಮೂರ್ತಿಯವರಿಗೆ ನೋಟಿಸ್ ನೀಡಿತು.
ಆದರೆ, ಅಸಲಿಗೂ ವಿವಾದಕ್ಕೆ ಆಸ್ಪದ ನೀಡಬೇಕಿದ್ದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ದೇವಸ್ಥಾನಕ್ಕೆ ತೆರಳಿ ಚಂದ್ರಯಾನ-3 ಯೋಜನೆಯ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದ ಬೆಳವಣಿಗೆಯಲ್ಲವೇ? ‘ಚಂದ್ರಯಾನ-3’ ಎಂಬ ವೈಜ್ಞಾನಿಕ ಯೋಜನೆ ಯಶಸ್ವಿಯಾಗಲು ವಿಜ್ಞಾನಿಗಳು ಮತ್ತು ತಂತ್ರಜ್ಞರು ಹಾಕಿದ ಶ್ರಮವಷ್ಟೇ ಸಾಲದೇ? ಇಂತಹ ಯೋಜನೆಗಳ ಯಶಸ್ಸಿನಲ್ಲಿ ದೇವರುಗಳ ಪಾತ್ರವೂ ಇರಲಿದೆಯೇ? ಈ ಕುರಿತು ಇಸ್ರೋ ಅಧ್ಯಕ್ಷರಿಂದ ಸ್ಪಷ್ಟನೆ ನಿರೀಕ್ಷಿಸುವುದು ಕಿಡಿಗೇಡಿತನವೇ?
ಪ್ರಶ್ನೆಗಳು, ತರ್ಕಬದ್ಧ ಚಿಂತನೆ ಹಾಗೂ ಸಂಶೋಧನಾ ಪುರಾವೆಗಳ ಅಡಿಪಾಯದ ಮೇಲೆ ನಿಂತಿರುವ ವಿಜ್ಞಾನದ ಬೇರುಗಳನ್ನು ಸಡಿಲಗೊಳಿಸಲು ಚಂದ್ರಯಾನದಂತಹ ವೈಜ್ಞಾನಿಕ ಯೋಜನೆಗಳ ಬಳಕೆಯಾಗುವುದು ಸಮ್ಮತವೇ? ಇದು ಹೊಣೆಗೇಡಿ ವರ್ತನೆ ಎಂಬ ಆಕ್ಷೇಪ ಹೊರಹೊಮ್ಮಿದಾಗ, ತಾವು ಮಾಡುತ್ತಿರುವುದು ಏಕೆ ಸರಿ ಎಂಬುದನ್ನು ನಿರೂಪಿಸುವ ಜವಾಬ್ದಾರಿಯನ್ನು ದೇವಸ್ಥಾನಕ್ಕೆ ಭೇಟಿ ನೀಡುವ ಇಸ್ರೋ ಪ್ರತಿನಿಧಿಗಳು ಹೊರಬೇಕಲ್ಲವೇ?

ಸಾಮಾಜಿಕ ನಡೆ-ನುಡಿಗಳಲ್ಲಿ ವೈಜ್ಞಾನಿಕ ಚಿಂತನೆಯನ್ನು ಎತ್ತಿಹಿಡಿಯುವಲ್ಲಿ ನಿರಾಸಕ್ತಿ ತೋರುತ್ತಿರುವ ಇಸ್ರೋ ಅಧ್ಯಕ್ಷರು ವಿವಾದದ ಕೇಂದ್ರಬಿಂದುವಾಗುವ ಬದಲು, ಇಂತಹದ್ದನ್ನು ಟೀಕಿಸುವ ಸಲುವಾಗಿ ಒಂದು ಸಾಲಿನ ಪ್ರತಿಕ್ರಿಯೆ ಬರೆದ ವ್ಯಕ್ತಿಯ ನಡೆಯನ್ನೇ ವಿವಾದವಾಗಿಸಿದ್ದು ವಿಪರ್ಯಾಸ. ಹುಲಿಕುಂಟೆ ಮೂರ್ತಿ ಅವರು ಬರೆದ ಒಂದು ಸಾಲು ಚಂದ್ರಯಾನ ಯೋಜನೆಯ ಮೇಲೆ ಇನಿತಾದರೂ ಪರಿಣಾಮ ಬೀರಲು ಸಾಧ್ಯವೇ? ನಮ್ಮ ಶುಭ ಹಾರೈಕೆಗಳಾಗಲೀ, ಟೀಕೆಗಳಾಗಲೀ ಚಂದ್ರಯಾನದಂತಹ ವೈಜ್ಞಾನಿಕ ಯೋಜನೆಯ ಮೇಲೆ ಯಾವ ಪರಿಣಾಮವನ್ನೂ ಬೀರಲಾರವು. ಈ ಯೋಜನೆಯನ್ನು ಕಾರ್ಯಗತಗೊಳಿಸುವ ವಿವಿಧ ಹಂತಗಳಲ್ಲಿ ನಡೆಸಿದ ಲೆಕ್ಕಾಚಾರಗಳು ಮತ್ತು ಸಿದ್ಧತೆಗಳಲ್ಲಿ ಯಾವುದೇ ಲೋಪವಾಗದೆ, ಎಲ್ಲವೂ ಸರಿ ಇದ್ದರಷ್ಟೇ ಯಶಸ್ಸು ಕಾಣಲು ಸಾಧ್ಯ. ವಾಸ್ತವ ಹೀಗಿರುವಾಗ, ಇಸ್ರೋ ಅಧ್ಯಕ್ಷರ ನಡೆ ಟೀಕಿಸುವ ಸಾಲೊಂದರ ಮೇಲೆ, ಅದು ಬೀರಲಾಗದ ಪರಿಣಾಮದ ಭಾರವನ್ನೆಲ್ಲ ಆರೋಪಿಸಿ, ಅದನ್ನು ಬರೆದವರ ಮೇಲೆ ಕ್ರಮ ಜರುಗಿಸಿ ಅಂತೆಲ್ಲ ಆಗ್ರಹಿಸುವ ಅಗತ್ಯವಾದರೂ ಇದೆಯೇ?
ಗುಣಮಟ್ಟದ ಉತ್ಪನ್ನ ತಯಾರಿಸಲು ತೊಡಕಾಗುವ ಕಾರಣಗಳನ್ನು Assignable cause (ಪತ್ತೆಹಚ್ಚಿ ಸರಿಪಡಿಸಬಹುದಾದ ಕಾರಣ) ಮತ್ತು Chance cause (ತಯಾರಕರ ನಿಯಂತ್ರಣದಲ್ಲಿರದ ಕಾರಣ) ಎಂದು ವಿಂಗಡಿಸುವುದು ಗುಣಮಟ್ಟ ನಿರ್ವಹಣಾ ಪ್ರಕ್ರಿಯೆಯ ಪ್ರಮುಖ ಹಂತಗಳಲ್ಲೊಂದು. ಚಂದ್ರಯಾನದಂತಹ ವೈಜ್ಞಾನಿಕ ಯೋಜನೆಯೊಂದು ವೈಫಲ್ಯ ಕಂಡರೆ, ಅದಕ್ಕೆ ಕಾರಣವಾಗುವ ಅಂಶಗಳನ್ನು ಕೂಡ ಹೀಗೆ ವಿಂಗಡಿಸಿ ಪರಿಶೀಲಿಸಬಹುದು. ಇಂತಹ ಯೋಜನೆಗಳಲ್ಲಿ ತೊಡಗಿಕೊಂಡ ವ್ಯಕ್ತಿಗಳು, ಬಳಸಿದ ತಂತ್ರಜ್ಞಾನ ಮತ್ತು ಸಾಧನಗಳು, ಸಿದ್ಧಪಡಿಸಿದ ಕಾರ್ಯಯೋಜನೆಗಳು, ಮಾಡಿದ ಲೆಕ್ಕಾಚಾರಗಳು ಇವುಗಳಲ್ಲಿ ಆದ ಎಡವಟ್ಟಿನಿಂದ ಯೋಜನೆ ವೈಫಲ್ಯ ಕಾಣಬಹುದು. ಇವು Assignable cause ಅಡಿ ಬರುತ್ತವೆ. ಇವೆಲ್ಲವೂ ಸರಿ ಇದ್ದೂ, ಪತ್ತೆಹಚ್ಚಲು ಸಾಧ್ಯವಾಗದ ಅಥವಾ ತಮ್ಮ ನಿಯಂತ್ರಣಕ್ಕೆ ದಕ್ಕದ ಪ್ರಾಕೃತಿಕ ವಿದ್ಯಮಾನವೂ ಕೆಲವೊಮ್ಮೆ ವೈಫಲ್ಯಕ್ಕೆ ಕಾರಣವಾಗಬಹುದು. ಇಂತಹವು Chance cause ಪಟ್ಟಿಯಲ್ಲಿ ಸ್ಥಾನ ಪಡೆಯುತ್ತವೆ.
ಯೋಜನೆಯೊಂದರ ಅನುಷ್ಠಾನದಲ್ಲಿ ಕಾಣುವ ವೈಫಲ್ಯಕ್ಕೆ ಒಂದು ವೇಳೆ Chance cause ಕಾರಣವಾಗಿದ್ದರೆ, ವೈಫಲ್ಯದ ಹೊಣೆಯನ್ನು ದೇವರ ಮೇಲೆ ಹಾಕಿ ಎಂದು ಯಾವ ವಿಜ್ಞಾನ ಪಠ್ಯವೂ ಹೇಳಿಕೊಡುವುದಿಲ್ಲ. ಯೋಜನೆ ರೂಪಿಸುವವರ ನಿಯಂತ್ರಣದಲ್ಲಿಲ್ಲದ ಕಾರಣಗಳಿಂದ ಯೋಜನೆಯೊಂದು ವೈಫಲ್ಯ ಕಾಣದಿರುವ ಹಾಗೆ ನೋಡಿಕೊಳ್ಳಲು ದೇವರ ಮೊರೆ ಹೋಗಿ ಎಂದು ಕೂಡ ವಿಜ್ಞಾನ ಹೇಳುವುದಿಲ್ಲ. ಯಾಕೆಂದರೆ, ಜನಮಾನಸದಲ್ಲಿ ಬೇರೂರಿರುವ ದೇವರ ಪರಿಕಲ್ಪನೆ ವಾಸ್ತವದಲ್ಲೂ ಅಸ್ತಿತ್ವದಲ್ಲಿದೆಯೇ ಎಂಬುದನ್ನು ಸಾಬೀತುಪಡಿಸುವ ಪುರಾವೆಗಳು ಯಾರ ಬಳಿಯೂ ಇಲ್ಲ. ಹೀಗಾಗಿಯೇ, ದೇವರ ಪರಿಕಲ್ಪನೆ ನಂಬಿಕೆಗೆ ಸಂಬಂಧಿಸಿದ್ದೇ ಹೊರತು ವಿಜ್ಞಾನದ ವ್ಯಾಪ್ತಿಗೆ ಬರುವಂತಹದ್ದಲ್ಲ.
ಈ ಆಡಿಯೊ ಕೇಳಿದ್ದೀರಾ?: ಹೊಸಿಲ ಒಳಗೆ-ಹೊರಗೆ | ಒಳಗೊಳಗೇ ನಂಜು ಕಾರುವ ಗಾದೆಗಳ ಬಗ್ಗೆ ಒಂಚೂರು ಎಚ್ಚರವಿರಲಿ
ಚಂದ್ರಯಾನದಂತಹ ವೈಜ್ಞಾನಿಕ ತಳಹದಿಯ ಮೇಲೆ ಎದ್ದು ನಿಲ್ಲುವ ಯೋಜನೆಯ ಭಾಗವಾದವರು, ನಂಬಿಕೆಗೆ ಸಂಬಂಧಿಸಿದ ವಿಚಾರಗಳನ್ನು ಯೋಜನೆಯೊಂದಿಗೆ ತಳುಕು ಹಾಕುವುದು ವಿವೇಕಯುತ ನಡೆಯಲ್ಲ. ಇಂತಹ ಯೋಜನೆಗಳು ಜನರಲ್ಲಿ ವಿಜ್ಞಾನದ ಕಡೆಗೆ ಒಲವು ಮೂಡಿಸಲು, ವೈಜ್ಞಾನಿಕ ಮನೋಭಾವ ಬಿತ್ತಲು ನೆಪವಾಗಬೇಕೇ ಹೊರತು, ವೈಜ್ಞಾನಿಕ ಚಿಂತನೆಗೆ ವ್ಯತಿರಿಕ್ತವಾದ ಸಂಗತಿಗಳನ್ನು ವಿಜೃಂಭಿಸಲು ಬಳಕೆಯಾಗಬಾರದು.
ದೇವರು ಮತ್ತು ಧಾರ್ಮಿಕ ಸಂಗತಿಗಳ ಪ್ರಚಾರಕ್ಕೆ ಸಾಕಷ್ಟು ಸಂಸ್ಥೆಗಳು, ವೇದಿಕೆಗಳಿವೆ. ದೇಶ ಆಳುತ್ತಿರುವ ಪ್ರಭುತ್ವಕ್ಕೂ ವಿಜ್ಞಾನಕ್ಕಿಂತ ಧಾರ್ಮಿಕ ವಿಚಾರಗಳ ಕಡೆಗೆ ಅಪರಿಮಿತ ಒಲವಿರುವುದು ಗುಟ್ಟಿನ ವಿಚಾರವೇನಲ್ಲ. ಶಾಲಾ ಪಠ್ಯದ ಭಾಗವಾಗಿ ಬಹುತೇಕ ಮಂದಿ ವಿಜ್ಞಾನ ಓದಿದ್ದರೂ, ಬದುಕಿನಲ್ಲಿ ರೂಢಿಸಿಕೊಳ್ಳುವ ಸಂದರ್ಭ ಬಂದಾಗ ವೈಜ್ಞಾನಿಕ ಮನೋಭಾವಕ್ಕಿಂತ ನಂಬಿಕೆಗೆ ಜೋತು ಬೀಳುವವರೇ ಹೆಚ್ಚು.
ವಿಜ್ಞಾನದ ಇತರೆ ಶಾಖೆಗಳಿಗೆ ಹೋಲಿಸಿದರೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಜರುಗುವ ಸಂಶೋಧನೆಗಳು ಮತ್ತು ಕೈಗೊಳ್ಳುವ ಯೋಜನೆಗಳಿಗೆ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಚಾರ ದೊರಕುತ್ತದೆ. ಚಂದ್ರಯಾನ-ಮಂಗಳಯಾನದಂತಹ ಯೋಜನೆಗಳ ಕುರಿತು ಮಾಧ್ಯಮಗಳ ಮೂಲಕ ತಿಳಿದುಕೊಳ್ಳುವ ಎಷ್ಟೋ ಶಾಲಾ ವಿದ್ಯಾರ್ಥಿಗಳು, ಮುಂದೆ ಬಾಹ್ಯಾಕಾಶ ವಿಜ್ಞಾನಿಯಾಗುವುದು ತಮ್ಮ ಗುರಿ ಎಂದು ಹೇಳಿಕೊಳ್ಳುವುದೂ ಇದೆ. ಹೀಗಾಗಿ, ಇಸ್ರೋ ಅಧ್ಯಕ್ಷರು ಮತ್ತು ವಿಜ್ಞಾನಿಗಳ ನಡೆ ವೈಜ್ಞಾನಿಕ ಮನೋಭಾವ ಎತ್ತಿಹಿಡಿಯುವ ಕಡೆಗೆ ಇರಬೇಕೇ ಹೊರತು ದೈವಶ್ರದ್ಧೆಯ ಪ್ರದರ್ಶನದೆಡೆಗಲ್ಲ. ಚರ್ಚೆ ನಡೆಯಬೇಕಿರುವುದು, ವಿವಾದಕ್ಕೆ ಕಾರಣವಾಗಬೇಕಿರುವುದು ಇಸ್ರೋ ಅಧ್ಯಕ್ಷರು ಮತ್ತು ಅವರ ಸಹೋದ್ಯೋಗಿಗಳ ವರ್ತನೆಯೇ ಹೊರತು, ಇದನ್ನು ವಿರೋಧಿಸುವ ಸಲುವಾಗಿ ಸಾಲೊಂದನ್ನು ಬರೆದ ವ್ಯಕ್ತಿಯ ವರ್ತನೆಯಲ್ಲ.
ದೇವರು ತನ್ನನ್ನು ಆರಾಧಿಸುವ ಭಕ್ತರನ್ನೂ ಒಳಗೊಂಡಂತೆ ಎಲ್ಲ ಮನುಷ್ಯಜೀವಿಗಳಿಗಿಂತ ಅಪರಿಮಿತ ಶಕ್ತಿಶಾಲಿ ಎನ್ನುವುದು ದೇವರ ಪರಿಕಲ್ಪನೆಯ ಭಾಗವೇ ಆಗಿದೆ. ದೈವ ನಂಬಿಕೆಯ ಕುರಿತು ಯಾರಾದರೂ ಟೀಕೆ-ಟಿಪ್ಪಣಿ ಮಾಡಿದರೆ, ಅದಕ್ಕೆ ಭಕ್ತರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ; ತಮಗಿಂತ ಶಕ್ತಿಶಾಲಿಯಾದ ದೇವರಿಗೆ ಆ ಉಸಾಬರಿ ನೀಡುವುದು ಸೂಕ್ತ. ಹುಲಿಕುಂಟೆ ಮೂರ್ತಿಯವರ ಹೇಳಿಕೆ ಚಂದ್ರಯಾನ-3 ಯೋಜನೆಯ ವೈಫಲ್ಯಕ್ಕಂತೂ ಖಂಡಿತ ಕಾರಣವಾಗಲಾರದು. ಇನ್ನು, ಈ ಹೇಳಿಕೆಯಿಂದ ದೇವರಿಗೆ ನೋವಾಗಿದ್ದರೆ, ಆ ನೋವು ಪರಿಹರಿಸಿಕೊಳ್ಳುವ ಕ್ರಮ ಕೈಗೊಳ್ಳಲು ದೇವರಿಗೆ ಅನುವು ಮಾಡಿಕೊಡುವುದು ಸಮಂಜಸವಲ್ಲವೇ? ಇದರಲ್ಲಿ ಭಕ್ತರೇಕೆ ಮೂಗು ತೂರಿಸಬೇಕು?
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ
ಉತ್ತಮ ಬರೆಹ