ಬಡವರ ಏಳಿಗೆಗಾಗಿ ರೂಪಿಸಿದ ಯೋಜನೆಗಳನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಸರ್ಕಾರಗಳು ಮತ್ತು ಸರ್ಕಾರಗಳ ನಡೆಯನ್ನು ಟೀಕಿಸುವ ಅವಸರದಲ್ಲಿ ದೊಡ್ಡ ಮನುಷ್ಯರು - ಬಡವರ ಬದುಕಿನ ಘನತೆಗೆ ಕುಂದು ಉಂಟಾಗದ ರೀತಿಯಲ್ಲಿ ವಿವೇಕ ಪ್ರದರ್ಶಿಸುವ ಅಗತ್ಯವಿದೆ
“ನಾನು ತೆರಿಗೆ ಪಾವತಿಸುವವ. ನಾನು ಕಟ್ಟುವ ತೆರಿಗೆ ದೇಶದ ಅಭಿವೃದ್ಧಿಗೇ ವಿನಾ ಉಚಿತ ವಿತರಣೆಗಲ್ಲ…” ಇಂತಹದ್ದೊಂದು ಹೇಳಿಕೆ ಇರುವ ಪೋಸ್ಟರ್ – ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮಾರನೆಯ ದಿನ ಪರಿಚಿತರಿಬ್ಬರ ವಾಟ್ಸಾಪ್ ಸ್ಟೇಟಸ್ನಲ್ಲಿ ಸ್ಥಾನ ಪಡೆದಿತ್ತು. ಈ ಇಬ್ಬರ ಪೈಕಿ ಒಬ್ಬರು ನನ್ನ ಸಹೋದ್ಯೋಗಿ, ಮತ್ತೊಬ್ಬ ಮಾಜಿ ವಿದ್ಯಾರ್ಥಿ. ಚುನಾವಣೆಗೂ ಮುನ್ನ ಘೋಷಿಸಿದ್ದ ಐದು ಗ್ಯಾರಂಟಿಗಳ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆ ಟೀಕಿಸುವ ಉತ್ಸಾಹದಲ್ಲಿ, “ನಮ್ಮ ತೆರಿಗೆ ದುಡ್ಡನ್ನು ಬಿಟ್ಟಿಯಾಗಿ ಹಂಚಲು ಬಳಸಿಕೊಳ್ಳಬೇಡಿ,” ಎನ್ನುವ ಅಭಿಯಾನದಲ್ಲಿ ಸ್ವಯಂಪ್ರೇರಣೆಯಿಂದ ಇವರ ಹಾಗೆ ಕೆಲವರು ಪಾಲ್ಗೊಳ್ಳುತ್ತಿದ್ದಾರೆ.
ಈ ದೇಶದಲ್ಲಿ ತೆರಿಗೆ ಕಟ್ಟದವರು ಯಾರಿದ್ದಾರೆ? ದೈನಂದಿನ ಬದುಕಿನಲ್ಲಿ ಬಳಸುವ ಬಹುತೇಕ ಉತ್ಪನ್ನಗಳ ಮೇಲೆ ತೆರಿಗೆಯ ಭಾರ ಬಿದ್ದಿರುವಾಗ, ಆದಾಯ ತೆರಿಗೆ ಪಾವತಿಸುವವರು ಮಾತ್ರ ತೆರಿಗೆದಾರರೇ? ಬಡವರನ್ನೂ ಒಳಗೊಂಡಂತೆ ದೇಶದ ಪ್ರತಿಯೊಬ್ಬರೂ ಪಾವತಿಸುವ ಪರೋಕ್ಷ ತೆರಿಗೆ ಲೆಕ್ಕಕ್ಕಿಲ್ಲವೇ? ಸರ್ಕಾರದ ಕಾರ್ಯವೈಖರಿ ಕುರಿತು ಟೀಕೆ-ಟಿಪ್ಪಣಿ ಮಾಡುವ ಭರದಲ್ಲಿ ‘ನಾವು ತೆರಿಗೆ ಕಟ್ಟುವವರು’ ಎನ್ನುವ ಮೇಲರಿಮೆಯನ್ನು ಮುಂದು ಮಾಡುವ ಅಗತ್ಯತೆ ಇದೆಯೇ? ಇಂತಹ ಮೇಲರಿಮೆಯಿಂದ ಹೊರಹೊಮ್ಮುವ ಅವಿವೇಕಕ್ಕೆ ವಿವೇಕದ ಸೋಗು ಹೊದಿಸಬಹುದೇ ವಿನಾ ಅಸಲಿಗೂ ಅದು ಅರಿವಿನ ಹಾದಿಯಲ್ಲಿನ ನಡಿಗೆಯಾಗಲಾರದು.
ಈ ಆಡಿಯೊ ಕೇಳಿದ್ದೀರಾ?: ಕಾಲದಾರಿ | ‘ಹೆಣ್ಣುಮಕ್ಕಳ ಜಾಲಿ ಟ್ರಿಪ್’ ಎಂದು ಸಸಾರ ಮಾತಾಡುವವರು ಗಮನಿಸಬೇಕು…
ಮೊದಲಿಗೆ ದೇಶದ ಅಭಿವೃದ್ಧಿ ಎಂದರೆ ಏನು ಎಂಬ ಕುರಿತು ಸ್ಪಷ್ಟತೆ ಹೊಂದುವ ಅಗತ್ಯವಿದೆ. ದೇಶದ ಅಭಿವೃದ್ಧಿ ಎಂದರೆ, ಅದು ಅಲ್ಲಿನ ಜನರ ಜೀವನಮಟ್ಟ ಸುಧಾರಣೆಯ ಅಳತೆಗೋಲಲ್ಲವೇ? ಸಾಮಾಜಿಕ-ಕೌಟುಂಬಿಕ ಹಿನ್ನೆಲೆ, ಸರ್ಕಾರದ ನೀತಿಗಳು, ನಾವು ಅಪ್ಪಿಕೊಂಡ ಆರ್ಥಿಕ ವ್ಯವಸ್ಥೆ… ಹೀಗೆ ನಾನಾ ಕಾರಣಗಳಿಂದಾಗಿ ಇಂದಿಗೂ ಮೂಲಭೂತ ಅಗತ್ಯತೆಗಳನ್ನು ಈಡೇರಿಸಿಕೊಳ್ಳಲು ಅಗತ್ಯವಿರುವಷ್ಟು ಆದಾಯ ಗಳಿಸಲೂ ಸಾಧ್ಯವಾಗದ ಬಡವರು ನಮ್ಮಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆಯಾ ದಿನದ ಹೊಟ್ಟೆಪಾಡಿಗಾಗಿ ಅವರು ಪಡುವ ಶ್ರಮದ ಪರಿಚಯವೂ ನಮಗಿರುತ್ತದೆ. ದೇಶದ ಅಭಿವೃದ್ಧಿಯ ಫಲ ಏನೂ ಇಲ್ಲದವರಿಗೂ ದಕ್ಕಬೇಕಲ್ಲವೇ? ಬಡತನ ಎದುರು ನಿಲ್ಲಿಸುವ ಹತಾಶೆಯ ಕಂದಕದಿಂದ ಜನರನ್ನು ಆಚೆ ತಂದು ನಿಲ್ಲಿಸುವ ಕಸರತ್ತಿಗೆ ಆಳುವವರು ಕೈ ಹಾಕಿದರೆ ಅದನ್ನು ಸ್ವಾಗತಿಸಬೇಕೋ ಅಥವಾ ಹೀಗಳೆಯಬೇಕೋ?
ನಿರುದ್ಯೋಗ ಭತ್ಯೆ, ವೃದ್ಧಾಪ್ಯ ವೇತನ, ರೈತರಿಗೆ ಪ್ರೋತ್ಸಾಹ ಧನ, ಉಚಿತ ಅಕ್ಕಿ, ವಿದ್ಯುತ್… ಇಂತಹ ಕೊಡುಗೆಗಳನ್ನು ನೀಡಬೇಕಾದ ಅನಿವಾರ್ಯತೆ ಆಳುವ ಸರ್ಕಾರಗಳಿಗೆ ಏಕೆ ಸೃಷ್ಟಿಯಾಗುತ್ತಿದೆ ಎಂಬ ಕುರಿತೂ ಆಲೋಚಿಸಬೇಕಲ್ಲವೇ? 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎನ್ನುವ ಭರವಸೆ ನೀಡಿದ ಒಕ್ಕೂಟ ಸರ್ಕಾರದವರು, ಕೊನೆಗೆ ರೈತರ ಖಾತೆಗೆ ವಾರ್ಷಿಕವಾಗಿ 6,000 ರೂಪಾಯಿ ಹಾಕುವ ಯೋಜನೆಯ ಮೊರೆಹೋದದ್ದು ಏಕೆ? ಮೊದಲೆಲ್ಲ ನಿರುದ್ಯೋಗ ಸಮಸ್ಯೆ ಪರಿಹರಿಸುವ ಮಾತನಾಡುತ್ತಿದ್ದ ಒಕ್ಕೂಟ ಸರ್ಕಾರ, ಈಗೀಗ ನಿರುದ್ಯೋಗ ಭತ್ಯೆ ನೀಡುವ ಆಶ್ವಾಸನೆ ನೀಡುತ್ತಿರುವುದಾದರೂ ಯಾವ ಕಾರಣಕ್ಕೆ?

ತೀವ್ರಗತಿಯಲ್ಲಿ ಆವಿಷ್ಕಾರಗೊಳ್ಳುತ್ತಿರುವ ಹೊಸ ತಂತ್ರಜ್ಞಾನಗಳು ಉದ್ಯೋಗ ಮಾರುಕಟ್ಟೆಯಲ್ಲಿ ಸಾಕಷ್ಟು ತಲ್ಲಣ ಸೃಷ್ಟಿಸುತ್ತಿವೆ. ಉದ್ಯೋಗರಹಿತ ಅಭಿವೃದ್ಧಿ ಎಂಬುದು ವಾಸ್ತವವಾಗಿ ಎದುರು ನಿಲ್ಲತೊಡಗಿದೆ. ಕೃತಕ ಬುದ್ಧಿಮತ್ತೆ, ಸ್ವಯಂಚಾಲಿತ ತಂತ್ರಜ್ಞಾನಗಳು – ಈಗಿರುವ ಕೆಲಸಗಳೂ ಇನ್ನಿಲ್ಲವಾಗುವಂತೆ ಮಾಡುವ ಕುರಿತು ಅನುಮಾನಗಳೇನಿಲ್ಲ. ಹೊಸ ತಂತ್ರಜ್ಞಾನಗಳ ಅಳವಡಿಕೆಯಿಂದಾಗಿ ಅತ್ಯಲ್ಪ ಮಾನವ ಸಂಪನ್ಮೂಲ ಬಳಸಿಕೊಂಡು ಅತ್ಯಧಿಕ ಪ್ರಮಾಣದಲ್ಲಿ ಸರಕುಗಳನ್ನು ಸಲೀಸಾಗಿ ಉತ್ಪಾದಿಸುವ, ಉತ್ಕೃಷ್ಟ ಗುಣಮಟ್ಟದ ಸೇವೆಗಳನ್ನು ಗ್ರಾಹಕರಿಗೆ ಒದಗಿಸುವ ದಾರಿಗಳು ತೆರೆದುಕೊಳ್ಳುತ್ತಿವೆ. ಹೂಡಿಕೆದಾರರನ್ನು ಆಕರ್ಷಿಸಲು ಸರ್ಕಾರಕ್ಕೆ ಸಾಧ್ಯವಾದರೂ, ಅದರಿಂದ ಅಗತ್ಯವಿರುವ ಎಲ್ಲರಿಗೂ ಉದ್ಯೋಗ ದೊರಕಿಸಿಕೊಡುವುದು ಕಷ್ಟಸಾಧ್ಯ. ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರದ ನೀತಿಗಳಲ್ಲೂ ಬದಲಾವಣೆ ಆಗಬೇಕಿರುವುದು ಸಹಜ ತಾನೇ?
ಪಾಲಿಸಬೇಕಾದ ಆರ್ಥಿಕ ಶಿಸ್ತಿಗೆ ಅನುಗುಣವಾಗಿಯೇ ಜನಕಲ್ಯಾಣ ಯೋಜನೆಗಳನ್ನು ಆಳುವವರು ಜಾರಿಗೆ ತರಲು ಹೊರಟಾಗ, ಅದನ್ನು ತೆರಿಗೆ ದುಡ್ಡಿನ ಅಪವ್ಯಯವೆಂದು ಭಾವಿಸುವುದು ಸೂಕ್ತವೇ? ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸುವುದು ದೊಡ್ಡ ಸವಾಲೇ ಸರಿ. ಹಾಗಂತ, ದುರ್ಬಳಕೆಯನ್ನೇ ಮುಂದು ಮಾಡಿ, ಕಡುಬಡತನದಲ್ಲಿ ಬೆಂದು ಬಸವಳಿದವರ ಬದುಕಿಗೆ ತುಸುವಾದರೂ ನಿಟ್ಟುಸಿರು ದಯಪಾಲಿಸುವ ಯೋಜನೆಗಳ ಜಾರಿಗೆ ತಡೆ ಒಡ್ಡುವುದು ಹೊಣೆಗೇಡಿತನವಲ್ಲವೇ?
ಈ ಲೇಖನ ಓದಿದ್ದೀರಾ?: ಮೈಕ್ರೋಸ್ಕೋಪು | 37 ದೇಶಗಳ ‘ಭಾಗ್ಯ’ ಯೋಜನೆ ಫಲಿತಾಂಶಗಳು ಏನನ್ನು ಹೇಳುತ್ತವೆ?
ಬಡತನವೆಂದರೆ ಕೇವಲ ಹಣವಿರದ ಪರಿಸ್ಥಿತಿಯಲ್ಲ; ಅಲ್ಲಿ ಘನತೆಯ ಅನುಪಸ್ಥಿತಿ ಇರುವುದನ್ನು ಅಲ್ಲಗಳೆಯಲಾಗದು. ಬಡವರ ಏಳಿಗೆಗಾಗಿ ಯೋಜನೆ ರೂಪಿಸುವ ಇಚ್ಛಾಶಕ್ತಿ ಹೊಂದಿರುವ ಸರ್ಕಾರಗಳು, ಬಡವರ ಬದುಕಿನ ಘನತೆಗೆ ಕುಂದು ಉಂಟಾಗದ ರೀತಿಯಲ್ಲಿ ನಡೆದುಕೊಳ್ಳುವ ವಿವೇಕ ಪ್ರದರ್ಶಿಸುವ ಅಗತ್ಯತೆ ಇದೆ. ತೆರಿಗೆ ಹಣವನ್ನು ಉಚಿತ ಕೊಡುಗೆಗಳಿಗೆ ವಿನಿಯೋಗಿಸಬೇಡಿ ಎಂದು ಆಗ್ರಹಿಸುವವರು ಕೂಡ ಬಹುತೇಕ ಸಂದರ್ಭಗಳಲ್ಲಿ ಸರ್ಕಾರದ ನಡೆ ಟೀಕಿಸುವ ಭರದಲ್ಲಿ ಬಡವರ ಬದುಕಿನ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸುವುದುಂಟು.
“ನಾವು ಸರ್ಕಾರ ನೀಡುವ ಗ್ಯಾರಂಟಿಗಳನ್ನು ಬಳಸಿಕೊಳ್ಳುವುದಿಲ್ಲ. ಇವು ತೀರಾ ಅಗತ್ಯವಿರುವ ಬಡವರಿಗೆ ತಲುಪಲಿ, ಬಡವರು ಅರ್ಹರು” ಎನ್ನುವ ಅಭಿಪ್ರಾಯ ಕೆಲವರದ್ದು. ಸರ್ಕಾರ ನೀಡುವ ವಿಶೇಷ ಸೌಲಭ್ಯಗಳ ಅಗತ್ಯವಿಲ್ಲದವರು ಅವುಗಳಿಗಾಗಿ ಅರ್ಜಿ ಸಲ್ಲಿಸದಿದ್ದರೆ ಆಯಿತು. ಅದನ್ನು ಸಾಮಾಜಿಕ ತಾಣಗಳೂ ಸೇರಿದಂತೆ ಸಾಧ್ಯವಿರುವ ಕಡೆಗಳಲ್ಲಿ ಘೋಷಿಸುವ ಅಗತ್ಯವೇನೂ ಇಲ್ಲ. ಹೀಗೆ ಬಹಿರಂಗವಾಗಿ ಹೇಳಿಕೊಳ್ಳುವುದರಲ್ಲೇ, ಬಡವರಿಗಾಗಿ ತಾವೇನೋ ಮಾಡುತ್ತಿದ್ದೇವೆ ಎನ್ನುವ ಮೇಲರಿಮೆಯ ಪ್ರದರ್ಶನವಾಗುವುದಿಲ್ಲವೇ? ಇಂತಹ ವರ್ತನೆ ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಅರ್ಹತೆ ಹೊಂದಿರುವ ಮತ್ತು ಪಡೆಯಲಿಚ್ಛಿಸುವವರಲ್ಲಿ ಕೀಳರಿಮೆ ಬಿತ್ತುವುದಿಲ್ಲವೇ?

“ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ವಿವರಗಳನ್ನು ಅವರ ಹೆಸರು ಮತ್ತು ವಿಳಾಸದ ಸಮೇತ ಬಿಡುಗಡೆ ಮಾಡುವ ಮೂಲಕ ಯಾರೆಲ್ಲ ಈ ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸವನ್ನು ಸರ್ಕಾರ ಮಾಡಲಿ,” ಎಂದು ಕೂಡ ಕೆಲವರು ಸಾಮಾಜಿಕ ಮಾಧ್ಯಮಗಳ ಮೂಲಕ ಆಗ್ರಹಿಸುತ್ತಿದ್ದಾರೆ. ಈ ಯೋಜನೆಗಳ ದುರುಪಯೋಗ ಆಗಬಾರದು ಎಂದೋ, ಸರ್ಕಾರದ ಗ್ಯಾರಂಟಿಗಳನ್ನು ಟೀಕಿಸುವವರು ಒಂದು ವೇಳೆ ಯೋಜನೆಗಳ ಅನುಕೂಲ ಪಡೆಯಲು ಮುಂದಾದರೆ ಅದು ಎಲ್ಲರಿಗೂ ತಿಳಿಯಲಿ ಎಂದೋ ಇಂತಹ ಸಲಹೆಗಳನ್ನು ನೀಡುತ್ತಿರಬಹುದು.
ಚುನಾವಣೆಯಲ್ಲಿ ಬಹುಮತ ಪಡೆದು ಆಯ್ಕೆಯಾಗಿ ಸರ್ಕಾರ ರಚಿಸಿರುವವರ ಬಳಿ ತಮ್ಮನ್ನು ಸಮರ್ಥಿಸಿಕೊಳ್ಳಲು ಬೇಕಾದ ಶಕ್ತಿ ಮತ್ತು ಸಂಪನ್ಮೂಲಗಳಿವೆ. ಸರ್ಕಾರದ ನಡೆ ಸಮರ್ಥಿಸಿಕೊಳ್ಳುವ ಉಮೇದಿನಲ್ಲಿ ಬಡವರ ಬದುಕಿನ ಘನತೆಗೆ ಕುಂದು ತರುವ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸುವ ಅಗತ್ಯತೆ ಏನಿಲ್ಲ. ಫಲಾನುಭವಿಗಳಾಗುವ ಅರ್ಹತೆ ಹೊಂದಿರುವ ಬಡವರು ಯಾವುದೇ ಹಿಂಜರಿಕೆ ಇಲ್ಲದೆ ಯೋಜನೆಗಳ ಲಾಭ ಪಡೆಯುವ ವಾತಾವರಣ ಕಲ್ಪಿಸುವುದು ಸರ್ಕಾರ ಮತ್ತು ಆಳುವ ಪಕ್ಷದ ಕುರಿತು ಸಹಾನುಭೂತಿ ಹೊಂದಿರುವವರ ಆದ್ಯತೆ ಆಗಬೇಕು. ಸರ್ಕಾರ ರೂಪಿಸುವ ಜನಕಲ್ಯಾಣ ಯೋಜನೆಗಳನ್ನು ದಾನ ಮಾಡುವ – ಸ್ವೀಕರಿಸುವ ರೀತಿಯಲ್ಲಿ ಬಿಂಬಿಸುವ ಅಗತ್ಯವಿಲ್ಲ. ಹೀಗೆ ಮಾಡುವುದೆಂದರೆ, ಬಡತನದೊಂದಿಗೆ ಬೆಸೆದುಕೊಳ್ಳಲು ಬಯಸುವ ಘನತೆಯ ಗೈರುಹಾಜರಿ ಕೊಂಡಿಗೆ ಬಲ ತುಂಬಿದಂತೆ.
ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ