ಅರ್ಥ ಪಥ | ಸಾಧ್ಯವಾದರೆ ಅವರು ಭಾರತವನ್ನೇ ಕೊಳ್ಳುತ್ತಾರೆ!

Date:

Advertisements
ದೇಶದ ಕೆಲವೇ ಕೆಲವು ಉದ್ದಿಮೆಗಳನ್ನು 'ರಾಷ್ಟ್ರೀಯ ಚಾಂಪಿಯನ್'ಗಳನ್ನಾಗಿ ರೂಪಿಸುವುದು ಒಕ್ಕೂಟ ಸರ್ಕಾರದ ಸದ್ಯದ ಕೈಗಾರಿಕಾ ನೀತಿ. ಇಂತಹ ಕಂಪನಿಗಳು ವ್ಯವಹಾರದಲ್ಲಿ ವಿಫಲವಾಗುವುದಿಲ್ಲ ಎಂದು ಸರ್ಕಾರ ಭಾವಿಸಿರಬಹುದು. ಆದರೆ ಅದು ನಿಜವಾಗಬೇಕಾಗಿಲ್ಲ

“ಕೆಲವೇ ಉದ್ದಿಮೆದಾರರನ್ನು ‘ರಾಷ್ಟ್ರೀಯ ಚಾಂಪಿಯನ್’ಗಳನ್ನಾಗಿ ರೂಪಿಸಿ, ಇಡೀ ಭಾರತ ದೇಶದ ಆರ್ಥಿಕತೆಯ ಜವಾಬ್ದಾರಿಯನ್ನು ಅವರ ಕೈಗೆ ಒಪ್ಪಿಸಿಬಿಡುವ ಬೆಳವಣಿಗೆಯ ಮಾದರಿಯತ್ತ ಭಾರತ ಸಾಗಿದೆ. ಹೀಗೆ ಪ್ರಮುಖ ವಹಿವಾಟುಗಳನ್ನು, ಅವುಗಳ ಒಡೆತನವನ್ನು ಕೆಲವು ದೊಡ್ಡ ಖಾಸಗಿ ಬಂಡವಾಳಿಗರಿಗೆ ಒಪ್ಪಿಸುವುದು ದೀರ್ಘಕಾಲೀನ ದೃಷ್ಟಿಯಿಂದ ಭಾರತಕ್ಕೆ ಒಳ್ಳೆಯದಲ್ಲ,” ಎನ್ನುವುದು ಅರ್ಥಶಾಸ್ತ್ರಜ್ಞ ನೂರಿಯಲ್ ರೂಬಿನಿಯ ಅಭಿಪ್ರಾಯ.

ಇಂತಹುದೇ ಪ್ರಯತ್ನ ಇಂಡೋನೇಷ್ಯಾದಲ್ಲಿ ಸುಹಾರ್ತೋ ಆಳ್ವಿಕೆಯಲ್ಲಿ, ಚೀನಾದಲ್ಲಿ ಹು ಜಿಂತಾವೊ ಕಾಲದಲ್ಲಿ ನಡೆದಿತ್ತು. ದಕ್ಷಿಣ ಕೊರಿಯಾದಲ್ಲಿಯೂ ಇಂತಹ ಪ್ರಯೋಗವಾಗಿತ್ತು. ಇದರಿಂದ ಒಂದಿಷ್ಟು ಅನುಕೂಲವಾಗಬಹುದು; ಬಂಡವಾಳವೇ ಹೋಗದ ಕೆಲವು ಕ್ಷೇತ್ರಗಳಿಗೆ ಬಂಡವಾಳ ಹರಿದು, ಅಲ್ಲಿ ಬೆಳವಣಿಗೆ ಸಾಧ್ಯವಾಗಬಹುದು. ಆದರೆ, ಈ ಸಮೂಹಗಳು ಬೆಳೆಯುತ್ತ ಹೋದಂತೆ ಸರ್ಕಾರದ ನೀತಿಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲಾರಂಭಿಸುತ್ತವೆ. ರೂಬಿನಿ ಹೇಳುವಂತೆ, ಈ ಮಾದರಿಯ ಬೆಳವಣಿಗೆಯಲ್ಲಿ ಹಲವು ಸಮಸ್ಯೆಗಳಿವೆ. ಇದು ಅನ್ವೇಷಣೆಯನ್ನು ಉತ್ತೇಜಿಸುವುದಿಲ್ಲ. ಹೊಸ ಉದ್ದಿಮೆಗಳಿಗೆ ಅವಕಾಶಗಳು ಮುಚ್ಚಿಕೊಳ್ಳುತ್ತವೆ. ಉತ್ಪಾದನೆ ಕುಂಠಿತಗೊಳ್ಳುತ್ತದೆ. ಅಸಮಾನತೆ ಹೆಚ್ಚುತ್ತದೆ. ಅಷ್ಟೇ ಅಲ್ಲ ಭಾರತದ ‘ಮೇಕ್ ಇನ್ ಇಂಡಿಯಾ’ ಮಾದರಿಯ ಯೋಜನೆಗಳು ಅರ್ಥ ಕಳೆದುಕೊಳ್ಳುತ್ತವೆ. ಅಂತಿಮವಾಗಿ ದೇಶದ ಬೆಳವಣಿಗೆ ಸೊರಗುತ್ತದೆ. “ಭಾರತ ದೇಶದಲ್ಲಿ ಮೊದಲು ಜಿಡಿಪಿ ಶೇಕಡ ನಾಲ್ಕರ ಸುತ್ತಮುತ್ತಲೇ ಇತ್ತು. 1980ರ ನಂತರ ಜಿಡಿಪಿ ಹೆಚ್ಚಲಾರಂಭಿಸಿತು. ಆದರೆ, ಇತ್ತೀಚಿನ ದಿನಗಳಲ್ಲಿ ಮತ್ತೆ ಇದು ಕುಸಿಯುತ್ತ, ಹಿಂದಿನ ಮಟ್ಟಕ್ಕೆ ಹೋಗಿಬಿಡಬಹುದು,” ಎಂಬ ಆತಂಕವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿವೃತ್ತ ಗವರ್ನರ್ ರಘುರಾಂ ರಾಜನ್ ವ್ಯಕ್ತಪಡಿಸಿದ್ದಾರೆ.

ಭಾರತ
ರಘುರಾಂ ರಾಜನ್

ಭಾರತದಲ್ಲಿ ಅದಾನಿಯವರಿಗೆ ವಿಶೇಷ ಸವಲತ್ತು ನೀಡುವ ಮೂಲಕ, ವಿವಿಧ ಕ್ಷೇತ್ರಗಳಲ್ಲಿ ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಇದನ್ನು ‘ಕ್ರೋನಿ ಬಂಡವಾಳಶಾಹಿ’ – ಅಂದರೆ, ಆಪ್ತ ಬಂಡವಾಳಿಗರಿಗೆ ನೆರವಾಗುವ, ವಿಶೇಷ ಸವಲತ್ತು ಒದಗಿಸುವ ವ್ಯವಸ್ಥೆ ಎಂದು ಟೀಕಿಸಲಾಗುತ್ತಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಇಲ್ಲೊಂದು ವ್ಯತ್ಯಾಸವಿದೆ. ದೇಶವನ್ನು ಬೆಳೆಸುವ ದೃಷ್ಟಿಯಿಂದ ದೊಡ್ಡ ಉದ್ದಿಮೆಗಳಿಗೆ ನೆರವನ್ನು ನೀಡಲಾಗುತ್ತಿದೆ ಎಂದು ಸಮರ್ಥಿಸಿಕೊಳ್ಳಲಾಗುತ್ತಿದೆ. ಹಾಗಾಗಿಯೇ, ಅದಾನಿಯವರ ಲಾಭವನ್ನು ವೈಯಕ್ತಿಕ ಲಾಭವಾಗಿ ನೋಡುತ್ತಿಲ್ಲ. ಅವರ ಬೆಳವಣಿಗೆಯನ್ನು ದೇಶದ ಬೆಳವಣಿಯಾಗಿ ನೋಡಲಾಗುತ್ತಿದೆ ಮತ್ತು ಅವರ ಮೇಲಿನ ಟೀಕೆಯನ್ನು ದೇಶದ ಮೇಲಿನ ದಾಳಿಯಾಗಿ ಬಿಂಬಿಸಲಾಗುತ್ತಿದೆ. ಒಂದರ್ಥದಲ್ಲಿ ಸರ್ಕಾರ ಮತ್ತು ಕಾರ್ಪೋರೇಟ್ ಅಧಿಕಾರ ಒಂದಕ್ಕೊಂಡು ತೆಕ್ಕೆ ಹಾಕಿಕೊಂಡಿದೆ. ಆದರೆ, ಈ ಸವಲತ್ತು ಉಳಿದ ಬಂಡವಾಳಿಗರಿಗೆ ಸಿಕ್ಕಿಲ್ಲ.

Advertisements

ದೇಶದೊಳಗೆ ಸರ್ಕಾರದ ಬೆಂಬಲ ಇದ್ದಾಗ ಯಾರಿಗೇ ಆಗಲಿ ವ್ಯವಹಾರ ನಡೆಸುವುದು ಕಷ್ಟವಾಗದೆ ಇರಬಹುದು. ಆದರೆ, ದೇಶದ ಸರಹದ್ದನ್ನು ದಾಟಿದ ಕೂಡಲೇ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಅನಿವಾರ್ಯವಾಗುತ್ತದೆ. ಅವರ ನಡೆಯನ್ನು ಜಗತ್ತಿನ ಬಂಡವಾಳಿಗರು ಗಮನಿಸುತ್ತಿರುತ್ತಾರೆ. ಅವರ ಎಡವಟ್ಟುಗಳಿಗೆ ಅಲ್ಲಿ ರಕ್ಷಣೆ ಇರುವುದಿಲ್ಲ. ಬಹುಶಃ ಅದಾನಿಯವರ ವಿಷಯದಲ್ಲಿ ಆಗಿದ್ದು ಅದೇ ಅನ್ನಿಸುತ್ತದೆ. ಪೈಪೋಟಿಯ ಸಂದರ್ಭದಲ್ಲಿ ಅದು ಸಹಜ ಕೂಡ.

ಈ ಆಡಿಯೊ ಕೇಳಿದ್ದೀರಾ?: ಮಾತೇ ಕತೆ – ನಾಗೇಶ ಹೆಗಡೆ ಸಂದರ್ಶನ | ‘ದಿಲ್ಲಿಯ ಗರ್ಲ್‌ಫ್ರೆಂಡ್ ಕರ್ಕೊಂಡು ನಮ್ ಹಳ್ಳಿಗೆ ಹೋದಾಗ…’

ಸದ್ಯಕ್ಕೆ ಅದಾನಿ ಸಮೂಹಕ್ಕೆ ಸಂಬಂಧಿಸಿದಂತೆ ಕಾಣಿಸಿಕೊಂಡಿರುವ ಬಿಕ್ಕಟ್ಟು ಆ ಸಮೂಹಕ್ಕಷ್ಟೇ ಸೀಮಿತವಾಗಿದೆ, ಇಡೀ ಹಣಕಾಸು ವ್ಯವಸ್ಥೆಯನ್ನು ಆವರಿಸಿಕೊಂಡಿಲ್ಲ. ಆದರೆ, ಇದು ಭಾರತದಲ್ಲಿ ಬಂಡವಾಳ ಹೂಡುವವರ ಗ್ರಹಿಕೆಯನ್ನು ಖಂಡಿತ ಪ್ರಭಾವಿಸಿದೆ. ಹಾಗೆಯೇ, ಭಾರತದ ವ್ಯವಸ್ಥೆಯ ಸ್ಥಿರತೆಗೂ ಧಕ್ಕೆ ತಂದಿದೆ ಅನ್ನುವುದರಲ್ಲಿ ಅನುಮಾನವಿಲ್ಲ.

ಒಟ್ಟಿನಲ್ಲಿ, “ಒಂದು ದೇಶದ ದೀರ್ಘಕಾಲೀನ ಬೆಳವಣಿಗೆಯ ದೃಷ್ಟಿಯಿಂದ ಇದು ಒಳ್ಳೆಯ ಮಾದರಿಯಲ್ಲ. ಮೋದಿಯವರು ದೇಶದ ದೀರ್ಘಕಾಲಿನ ಗುರಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ‘ರಾಷ್ಟ್ರೀಯ ಚಾಂಪಿಯನ್’ಗಳನ್ನು ನೆಚ್ಚಿಕೊಳ್ಳುವ ಮಾದರಿಯನ್ನು ಕೈಬಿಡಬೇಕು,” ಎನ್ನುವುದು ರೂಬಿನಿಯವರ ಸಲಹೆ.

ಆರ್‌ಬಿಐ ಡೆಪ್ಯುಟಿ ಗೌರ್ನರ್ ಆಗಿದ್ದ ವಿರಲ್ ಆಚಾರ್ಯ ಕೂಡ, ಇತ್ತೀಚೆಗೆ ಭಾರತದ ಆರ್ಥಿಕತೆಯ ಮೇಲೆ, ಅದರಲ್ಲೂ ವಿಶೇಷವಾಗಿ ಹಣದುಬ್ಬರದ ಮೇಲೆ ದೊಡ್ಡ ಬಂಡವಾಳಿಗರ ಪ್ರಭಾವವನ್ನು ಕುರಿತು ಬರೆದಿದ್ದಾರೆ. ಅವರು ಇತ್ತೀಚಿಗೆ ‘ಬ್ರೂಕಿಂಗ್ಸ್’ ಸಂಸ್ಥೆಗೆ ಬರೆದಿರುವ ಲೇಖನದಲ್ಲಿ ಭಾರತ ದೇಶದ ಬೃಹತ್ ಐದು ಉದ್ದಿಮೆಗಳಾದ ರಿಲಯನ್ಸ್, ಟಾಟಾ, ಆದಿತ್ಯ ಬಿರ್ಲಾ, ಅದಾನಿ ಹಾಗೂ ಬಾರ್ತಿ ಟೆಲಿಕಾಂ ಸಮೂಹಗಳ ಕೈಗಾರಿಕಾ ಕೇಂದ್ರೀಕರಣ ಕುರಿತು ಚರ್ಚಿಸಿದ್ದಾರೆ.

ಭಾರತ
ವಿರಲ್ ಆಚಾರ್ಯ

2010ರವರೆಗೆ ಈ ಬೃಹತ್ ಐದು ಉದ್ದಿಮೆಗಳು ಹೆಚ್ಚೆಚ್ಚು ಕೈಗಾರಿಕಾ ಕ್ಷೇತ್ರಗಳಿಗೆ ತಮ್ಮ ಚಟುವಟಿಕೆಗಳನ್ನು ಚಾಚಿಕೊಳ್ಳುವ ಮೂಲಕ ತಮ್ಮ ಹರವನ್ನು ವಿಸ್ತರಿಸಿಕೊಂಡವು. 2015ರ ನಂತರ, ಈ ಕ್ಷೇತ್ರಗಳಲ್ಲಿ ಈಗಾಗಲೇ ತೊಡಗಿಕೊಂಡಿರುವ ಬೇರೆ ಸಂಸ್ಥೆಗಳನ್ನು ತಮ್ಮ ಅಧೀನಕ್ಕೆ ತೆಗೆದುಕೊಳ್ಳುತ್ತ, ತಮ್ಮಲ್ಲಿ ಅವುಗಳನ್ನು ವಿಲೀನಗೊಳಿಸಿಕೊಳ್ಳುತ್ತ ಆಳಕ್ಕೆ ಬೆಳೆದವು. ಇದರ ಫಲವಾಗಿ, ಹಣಕಾಸೇತರ ಕ್ಷೇತ್ರಗಳಲ್ಲಿ 1991ರಲ್ಲಿ ಶೇಕಡ 10ರಷ್ಟಿದ್ದ ಇವರ ಸ್ವತ್ತು 2021ರ ವೇಳೆಗೆ ಶೇಕಡ 18ರಷ್ಟಾಯಿತು. ಹಾಗೆಯೇ, ಶೇಕಡ 12ರಷ್ಟು ಮಾರಾಟ ಕೂಡ ಇವರ ನಿಯಂತ್ರಣದಲ್ಲಿದೆ. ಇವರ ನಂತರದ ಐದು ಉದ್ದಿಮೆಗಳ ಸ್ವತ್ತು ಶೇಕಡ 18ರಿಂದ ಶೇಕಡ 9ಕ್ಕೆ ಕುಸಿಯಿತು.

ಸ್ಪಷ್ಟವಾಗಿ ಹೇಳಿಕೊಳ್ಳದಿದ್ದರೂ, ಬೃಹತ್ ಕೈಗಾರಿಕಾ ಸಮೂಹಗಳಿಂದ ಕೆಲವು ಉದ್ದಿಮೆಗಳನ್ನು ‘ರಾಷ್ಟ್ರೀಯ ಚಾಂಪಿಯನ್’ಗಳನ್ನಾಗಿ ರೂಪಿಸುವುದು ಸರ್ಕಾರದ ಸದ್ಯದ ಕೈಗಾರಿಕಾ ನೀತಿಯಾಗಿದೆ. ಇಂತಹ ಕಂಪನಿಗಳು ಮುಂದೆ ಜಗತ್ತಿನ ‘ಸ್ಯಾಮಸಂಗ್’ ಆಗಬಹುದೆನ್ನುವ ನಿರೀಕ್ಷೆ ಸರ್ಕಾರಕ್ಕೆ ಇರಬಹುದು. ಅವು ತುಂಬಾ ಬೃಹತ್ ಉದ್ದಿಮೆಗಳು, ಹಾಗಾಗಿ ಅವು ಬ್ಯಾಂಕು ಮತ್ತು ಬಾಂಡುಗಳ ವ್ಯವಹಾರದಲ್ಲಿ ವಿಫಲವಾಗುವುದಿಲ್ಲ ಎಂದು ಭಾವಿಸಿರಬಹುದು. ಆದರೆ ಅದು ನಿಜವಾಗಬೇಕಾಗಿಲ್ಲ. ಜೊತೆಗೆ, ಬೃಹತ್ ಗಾತ್ರದಿಂದಾಗಿ ಅವುಗಳ ವ್ಯವಹಾರಗಳನ್ನು ಅರ್ಥಮಾಡಿಕೊಳ್ಳುವುದೇ ಕಷ್ಟವಾಗುತ್ತದೆ. ಅವು ಪಾರದರ್ಶಕತೆಯನ್ನು ಕಳೆದುಕೊಳ್ಳುತ್ತವೆ. ಅಷ್ಟೇ ಅಲ್ಲ, ಈ ಉದ್ದಿಮೆಗಳು ಹೆಚ್ಚಾಗಿ ಒಬ್ಬ ವ್ಯಕ್ತಿಯನ್ನೋ ಅಥವಾ ಒಂದು ಕುಟುಂಬವನ್ನೋ ಅವಲಂಬಿಸಿರುತ್ತವೆ. ಸರ್ಕಾರದ ಕೈಗಾರಿಕಾ ನೀತಿ ಈ ಉದ್ದಿಮೆಗಳ ಕೇಂದ್ರೀಕರಣಕ್ಕೆ ಪೂರಕವಾಗಿದೆ. ಈ ರೀತಿಯ ಕೇಂದ್ರೀಕರಣ ಸ್ವಾಭಾವಿಕವಾಗಿಯೇ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಈ ಆಡಿಯೊ ಕೇಳಿದ್ದೀರಾ?: ಮಾತೇ ಕತೆ – ಲಲಿತಾ ಸಿದ್ದಬಸವಯ್ಯ ಸಂದರ್ಶನ | ‘ಲೋಕದ ಲೆಕ್ಕದಲ್ಲಿ ಕೊಲೆಯಾದರೂ ಕತೆಯಾಗಿ ಉಳಿದುಕೊಂಡ ಜಿಲ್ಲಾಧಿಕಾರಿ!’

“ಈ ಐದು ಬೃಹತ್ ಉದ್ದಿಮೆಗಳು ಹೆಚ್ಚೆಚ್ಚು ಕೇಂದ್ರೀಕರಣಗೊಂಡಷ್ಟೂ ಮಾರುಕಟ್ಟೆಯ ಮೇಲೆ ಅವುಗಳ ಪ್ರಾಬಲ್ಯ ಹೆಚ್ಚುತ್ತದೆ. ಹಾಗಾಗಿ, ಬೆಲೆಯನ್ನು ನಿಗದಿಪಡಿಸುವ ಶಕ್ತಿ, ಉಳಿದ ಕೈಗಾರಿಕೋದ್ಯಮಿಗಳಿಗೆ ಹೋಲಿಸಿದರೆ ಸ್ವಾಭಾವಿಕವಾಗಿಯೇ ಇವರಿಗೆ ಹೆಚ್ಚಿಗೆ ಇರುತ್ತದೆ. ಸಹಜವಾಗಿಯೇ ಇವರು ಹೆಚ್ಚಿನ ಬೆಲೆ ನಿಗದಿಪಡಿಸುತ್ತಾರೆ. ಇದರಿಂದ ಇವರ ಲಾಭದ ಪಾಲು ಹೆಚ್ಚುತ್ತಲೇ ಇದೆ. ಹಣದುಬ್ಬರ ನಿಯಂತ್ರಣಕ್ಕೆ ಬಾರದಿರುವುದಕ್ಕೆ ಇದು ಪ್ರಮುಖ ಕಾರಣ,” ಎನ್ನುತ್ತಾರೆ ವಿರಲ್ ಆಚಾರ್ಯ.

ವಿರಲ್ ಆಚಾರ್ಯ ಅವರು ತಮ್ಮ ಲೇಖನದಲ್ಲಿ ಐದು ಬೃಹತ್ ಉದ್ದಿಮೆಗಳನ್ನು ಸಮಾನವಾಗಿ ನೋಡುತ್ತಾರೆ. ಈ ಬಗ್ಗೆ ಹಲವರು ಟೀಕಿಸಿದ್ದಾರೆ. ಹಾಗೆಯೇ, ಇಂತಹ ವಿಶ್ಲೇಷಣೆಗಳಲ್ಲಿ ಇರುವ ಇನ್ನೊಂದು ಸಮಸ್ಯೆಯೆಂದರೆ, ಅವುಗಳಲ್ಲಿ ಸಾಮಾನ್ಯವಾಗಿ ‘ಕೋರ್ ಹಣದುಬ್ಬರ’ವನ್ನು ಅಂದರೆ, ಆಹಾರ ಮತ್ತು ಇಂಧನವನ್ನು ಹೊರಗಿಟ್ಟು ಲೆಕ್ಕ ಹಾಕಿದ ಹಣದುಬ್ಬರವನ್ನು ಗಮನಿಸಲಾಗುತ್ತದೆ. ಹಾಗಾಗಿ, ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಆಹಾರ ಪದಾರ್ಥಗಳನ್ನು ಒದಗಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಸರ್ಕಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ. ಅದು ಈ ಬೆಳವಣಿಗೆ ಮಾದರಿಯ ಸಮಸ್ಯೆಯೂ ಹೌದು. ಏಕೆಂದರೆ, ಆಹಾರ ಪದಾರ್ಥಗಳು ಮತ್ತು ಇಂಧನದ ಬೆಲೆ ನಿಯಂತ್ರಣ ಈ ಮಾದರಿಯ ಬೆಳವಣಿಗೆಯ ಕಾಳಜಿಯೇ ಅಲ್ಲ.

ಭಾರತ
ಡರೆನ್ ಅಸಿಮೊಗ್ಲು

ಈಗಾಗಲೇ ಸ್ಪಷ್ಟವಾಗಿರುವಂತೆ ಈ ‘ರಾಷ್ಟ್ರೀಯ ಚಾಂಪಿಯನ್‍’ಗಳನ್ನು ಬೆಳೆಸುವ ಉತ್ಸಾಹದಲ್ಲಿ ಹಲವು ನೀತಿ-ನಿಯಮಗಳನ್ನು ನಿರ್ಲಕ್ಷಿಸಲಾಗುತ್ತಿರುತ್ತದೆ. ಈ ಪ್ರಕ್ರಿಯೆಯಲ್ಲಿ ದೇಶದ ಹಲವು ಪ್ರಮುಖ ಸಂಸ್ಥೆಗಳು ದುರ್ಬಲಗೊಳ್ಳುತ್ತವೆ. ಅಂತಿಮವಾಗಿ ದೇಶದ ಪ್ರಜಾಸತ್ತಾತ್ಮಕ ತಳಹದಿಯೇ ದುರ್ಬಲವಾಗಿಬಿಡಬಹುದು. ಪ್ರಜಾಸತ್ತೆ ಕೇವಲ ಪ್ರಬಲವಾದ ಆರ್ಥಿಕ ಬೆಳವಣಿಗೆಯನ್ನು ಮಾತ್ರವಲ್ಲ, ಉತ್ತಮ ಆರೋಗ್ಯ ಮತ್ತು ಶಿಕ್ಷಣವನ್ನು ಜನತೆಗೆ, ಅದರಲ್ಲೂ ವಿಶೇಷವಾಗಿ ಹಿಂದುಳಿದವರಿಗೆ ನೀಡುತ್ತದೆ ಎನ್ನುವುದನ್ನು ಡರೆನ್ ಅಸಿಮೊಗ್ಲು ಮೊದಲಾದ ಹಲವು ಅರ್ಥಶಾಸ್ತ್ರಜ್ಞರ ಅಧ್ಯಯನ ಮನದಟ್ಟು ಮಾಡಿಕೊಟ್ಟಿವೆ.

ಒಂದು ದೇಶದ ಯಶಸ್ಸು ಅದು ಅನುಸರಿಸುವ ಆರ್ಥಿಕ ಬೆಳವಣಿಗೆಯ ಮಾದರಿಯನ್ನು ಅವಲಂಬಿಸಿರುತ್ತದೆ. ಅದು ಸ್ಪರ್ಧಾತ್ಮಕವಾದ, ಸೃಜನಶೀಲವಾದ, ತಾಳಿಕೆಯ, ಎಲ್ಲರನ್ನೂ ಒಳಗೊಳ್ಳುವ ನ್ಯಾಯಪರ ಬೆಳವಣಿಗೆಯ ಮಾದರಿ ಆಗಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಈ ಸತ್ಯ ನಮಗೆ ತಿಳಿದಿರಬೇಕು.

ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಟಿ ಎಸ್ ವೇಣುಗೋಪಾಲ್
ಟಿ ಎಸ್ ವೇಣುಗೋಪಾಲ್
ಮೈಸೂರಿನವರು. ಓದಿದ್ದು ಮೈಸೂರು ವಿಶ್ವವಿದ್ಯಾಲಯ. ಸಂಖ್ಯಾಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ. ಅರ್ಥಶಾಸ್ತ್ರ, ಚರಿತ್ರೆ, ಸಂಗೀತ, ಅನುವಾದದಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X