(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ಒಬ್ಬರು ನಾಯಕರು ಚುನಾವಣಾ ತಂತ್ರಗಾರಿಕೆಯ ಚಾಣಕ್ಯ, ಸಮಸ್ಯೆ ನಿವಾರಿಸುವಲ್ಲಿ ಎತ್ತಿದ ಕೈ ಇತ್ಯಾದಿ. ಇನ್ನೊಬ್ಬ ನಾಯಕರಂತೂ, ವಿಶ್ವದ ಯಾವುದೇ ನೆಲದಲ್ಲಿ ಸಂಘರ್ಷ ಏರ್ಪಟ್ಟರೂ ಅದನ್ನು ಕ್ಷಣಮಾತ್ರದಲ್ಲಿ ಸರಿಪಡಿಸಬಲ್ಲ ಶಕ್ತಿಶಾಲಿ... ಹಾಗಾದರೆ, ಮಣಿಪುರ ಮತ್ತು ಹರ್ಯಾಣ ಯಾವ ದೇಶದಲ್ಲಿವೆ? ಗೊತ್ತಿದ್ದವರು ಹೇಳಿ ದಯವಿಟ್ಟು...
ಸಮುದಾಯಗಳ ನಡುವೆ ಪರಸ್ಪರ ಅಪನಂಬಿಕೆ ಮತ್ತು ದ್ವೇಷ ಬಿತ್ತುವ ರಾಜಕೀಯ, ಅಂತಿಮವಾಗಿ ನಮ್ಮನ್ನು ಎಲ್ಲಿಗೆ ಕರೆದೊಯ್ದು ನಿಲ್ಲಿಸಬಹುದು ಎಂಬ ಕುರಿತು ಈಗಲಾದರೂ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಲ್ಲವೇ? ಮಣಿಪುರದಲ್ಲಿನ ಅರಾಜಕ ಪರಿಸ್ಥಿತಿ ಇನ್ನೂ ಹಾಗೆಯೇ ಮುಂದುವರೆದಿದೆ. ದೇಶದ ರಾಜಧಾನಿಗೆ ಅಂಟಿಕೊಂಡಂತಿರುವ ಹರ್ಯಾಣದಲ್ಲಿ ಕೂಡ ಕೋಮುದ್ವೇಷದ ನಂಜು ತಾರಕಕ್ಕೇರಿದೆ. ‘ವಿಶ್ವಗುರು,’ ‘ಚಾಣಕ್ಯ’ ಇತ್ಯಾದಿ ಬಿರುದುಗಳ ಅಸಲಿಯತ್ತು ಜಗಜ್ಜಾಹೀರಾಗುತ್ತಿದೆ. ಒಮ್ಮುಖ ಮಾತುಗಾರಿಕೆಗೆ ಹೆಸರುವಾಸಿಯಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಮಣಿಪುರದಲ್ಲಿನ ವಿದ್ಯಮಾನಗಳ ಕುರಿತು ಮಾತನಾಡಲು, ಪ್ರಶ್ನೆಗಳಿಗೆ ಉತ್ತರಿಸಲು ಪುರುಸೊತ್ತಿರುವ ಹಾಗೆ ತೋರುತ್ತಿಲ್ಲ. ಮತ್ತಷ್ಟು ಬಿರುದುಗಳನ್ನು ಪೋಣಿಸಿಕೊಳ್ಳುವ, ಮುಂಬರುವ ಚುನಾವಣೆಗಳಿಗೆ ಬಿಜೆಪಿ ಸಜ್ಜುಗೊಳಿಸುವ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಅವರಿಗೆ ಈಗಲೂ ಇನ್ನಿಲ್ಲದ ಉತ್ಸಾಹ. ಚುನಾವಣೆ ಗೆಲುವಿಗಾಗಿ ಕಾರ್ಯತಂತ್ರ ರೂಪಿಸುವಲ್ಲಿ ಸಾಕಷ್ಟು ಮುತುವರ್ಜಿ ತೋರುವ ಗೃಹ ಸಚಿವ ಅಮಿತ್ ಶಾ ಅವರ ತಂತ್ರಗಳು, ದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದ ಹಾಗೆ ನೋಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಪರಿಣಾಮ ಬೀರುತ್ತಿರುವ ಸೂಚನೆಗಳು ಸಿಗುತ್ತಿಲ್ಲ.
ಕಾನೂನು ಸುವ್ಯವಸ್ಥೆ ಕಾಪಾಡುವಂತಹ ಮೂಲಭೂತ ಹೊಣೆಗಾರಿಕೆ ನಿಭಾಯಿಸುವಲ್ಲಿಯೇ ವೈಫಲ್ಯ ಕಾಣುತ್ತಿರುವ ಸರ್ಕಾರಗಳು ಮತ್ತು ಅವುಗಳನ್ನು ಮುನ್ನಡೆಸುತ್ತಿರುವ ರಾಜಕಾರಣಿಗಳನ್ನು ಮಹೋನ್ನತ ನಾಯಕರೆಂದು ಪರಿಗಣಿಸುವ ಭ್ರಮೆಯಿಂದ ಇನ್ನಾದರೂ ನಾವು ಹೊರಬರಬೇಕಲ್ಲವೇ? ಬೇರೆ ಯಾವುದೋ ದೇಶದಲ್ಲಿ ಅರಾಜಕ ಪರಿಸ್ಥಿತಿ ನಿರ್ಮಾಣವಾದಾಗ, ಅದನ್ನು ತಮ್ಮ ನಾಯಕನ ಗುಣಗಾನಕ್ಕೆ ಬಳಸಿಕೊಳ್ಳುವ ಸಲುವಾಗಿ, “ಮೋದಿ ಬದಲಿಗೆ ಬೇರೆ ಯಾರೇ ಇದ್ದಿದ್ರೂ ನಮ್ ದೇಶಕ್ಕೂ ಇದೇ ಗತಿ ಬರ್ತಿತ್ತು,” ಅಂತ ಕೆಲವರು ತೀರ್ಪು ನೀಡುತ್ತಿದ್ದರು. ಈಗ ಅವರು, ಮಣಿಪುರ ಇರುವ ದೇಶವನ್ನು ಆಳುತ್ತಿರುವ ನಾಯಕರ ವೈಫಲ್ಯದ ಕುರಿತೂ ಮಾತನಾಡಬೇಕಲ್ಲವೇ?
ಕೋಮುದ್ವೇಷದ ನಂಜು ನಮ್ಮ ಸಮಾಜವನ್ನು ಯಾವ ಪರಿ ಆವರಿಸಿದೆ ಎಂಬುದನ್ನು ಮನಗಾಣಲು ಹೆಚ್ಚೇನೂ ತಿಣುಕಾಡಬೇಕಿಲ್ಲ. ನಮ್ಮ ಮೊಬೈಲಿಗೆ ಬಂದು ಬೀಳುವ, ಕೋಮುದ್ವೇಷ ಹರಡಲೆಂದೇ ಸೃಷ್ಟಿಸಿದ ಪೋಸ್ಟರ್, ವಿಡಿಯೊ ಹಾಗೂ ಬರಹಗಳು, ದೈನಂದಿನ ಮಾತುಕತೆಯ ವೇಳೆ ಸುತ್ತಲಿನವರು ಆಡುವ ಮಾತುಗಳನ್ನು ಗಮನಿಸಿದರೂ ನಾವು ಎತ್ತ ಕಡೆ ಸಾಗುತ್ತಿದ್ದೇವೆ ಎಂಬುದರ ಅರಿವಾಗುವುದು.
ಇತ್ತೀಚೆಗೆ ಪುಟ್ಟ ಕ್ಯಾಂಟೀನ್‌ವೊಂದರಲ್ಲಿ ದೋಸೆ ತಿನ್ನುವ ವೇಳೆ ಅಲ್ಲಿಗೆ ಬಂದ ಕ್ಯಾಂಟೀನ್ ಸಿಬ್ಬಂದಿಯ ಸ್ನೇಹಿತನೊಬ್ಬ, “ಐನೂರು ರೂಪಾಯಿ ಫೋನ್ ಪೇ ಮಾಡು,” ಅಂತ ಅವರಿಗೆ ಕೇಳಿದ. “ನನ್ ಅಕೌಂಟಲ್ಲಿ ದುಡ್ಡಿಲ್ಲ,” ಅಂತ ಅವರಂದರು. “ನಂದು ಝೀರೋ ಬ್ಯಾಲೆನ್ಸ್ ಇದೆ. ಇದಕ್ಕೆಲ್ಲ ಬ್ಯಾಂಕ್‍ನವರು ಫೈನ್ ಮೇಲೆ ಫೈನ್ ಜಡಿದುಬಿಡ್ತಾರೆ,” ಅಂತ ಅಸಮಾಧಾನ ಹೊರಹಾಕಿದ. “ಯಾವ ಕಡೆ ಹೋಗ್ತಿದ್ಯ?” ಅಂತ ಸಿಬ್ಬಂದಿ ಕೇಳಿದ್ದಕ್ಕೆ, “ಪೆನ್ಷನ್ ಮೊಹಲ್ಲಾ ಕಡೆಗೆ…” ಅಂದ ಅವರ ಸ್ನೇಹಿತ.
“ಹೆಲ್ಮೆಟ್ ಹಾಕಳ್ದೆ ಹೋದ್ರೆ ಆ ಕಡೆ ಪೊಲೀಸ್ ಹಿಡಿತಾರ?”
“‘ಅಲ್ಲಿರೋ ಸ್ಟೇಷನ್ ಮುಂದೆ ಯಾವಾಗ್ಲೂ ಪೊಲೀಸ್ ಇರ್ತಾರೆ. ಹಿಡ್ದೆ ಹಿಡಿತಾರೆ…”
“ಮುಂದಿನ ಸಲನೂ ಮೋದಿನೇ ಪ್ರಧಾನಿ ಆಗ್ಬೋದು ಅಂತೀರಾ?”
“ಆಗ್ಬಹುದು ಅನ್ಸುತ್ತೆ. ಮೋದಿ ಬದ್ಲಿಗೆ ಕಾಂಗ್ರೆಸ್‍ನವರೇನಾದ್ರೂ ಅಧಿಕಾರಕ್ಕೆ ಬಂದ್ಬಿಟ್ರೆ ಹಿಂದೂಗಳಿಗೆ ಉಳಿಗಾಲವಿಲ್ಲ. ನಾವು ಪೆನ್ಷನ್ ಮೊಹಲ್ಲಾ ಕಡೆ ತಲೆ ಹಾಕೋಕೆ ಆಗದಂತಹ ಪರಿಸ್ಥಿತಿ ಬರುತ್ತೆ…”
…ಮೋದಿಯಿಂದಲೇ ಈ ದೇಶ ಇನ್ನೂ ಅಸ್ತಿತ್ವದಲ್ಲಿದೆ ಮತ್ತು ಹಿಂದೂಗಳು ನೆಮ್ಮದಿಯಾಗಿ ಬದುಕಲು ಸಾಧ್ಯವಾಗಿದೆ ಎನ್ನುವುದನ್ನು ನಿರೂಪಿಸುವುದು ಅವರ ಮಾತುಕತೆಯ ಉದ್ದೇಶವಿದ್ದ ಹಾಗಿತ್ತು.

ಪೆನ್ಷನ್ ಮೊಹಲ್ಲಾ ಎಂಬುದು, ಮುಸ್ಲಿಮರು ಗಣನೀಯ ಪ್ರಮಾಣದಲ್ಲಿ ನೆಲೆಸಿರುವ ಹಾಸನ ನಗರದ ಬಡಾವಣೆಗಳಲ್ಲೊಂದು. ಪೆನ್ಷನ್ ಮೊಹಲ್ಲಾ ನೆಪವಾಗಿಟ್ಟುಕೊಂಡು ಮೋದಿ ಸರ್ಕಾರದ ಕಾರ್ಯವೈಖರಿ ಮತ್ತು ಬಿಜೆಪಿಯ ಕೋಮುದ್ವೇಷ ಬಿತ್ತುವ ರಾಜಕೀಯದ ಗುಣಗಾನ ಮಾಡುತ್ತಿದ್ದ ಆ ಇಬ್ಬರಲ್ಲಿ ಒಬ್ಬರು 30, ಮತ್ತೊಬ್ಬರು 40ರ ಆಸುಪಾಸಿನ ವಯೋಮಾನದವರು. ಅವರ ಪ್ರಕಾರ, ಬಿಜೆಪಿ ಮತ್ತು ಮೋದಿಯಿಂದಲೇ ಹಿಂದೂಗಳು ಉಸಿರಾಡಲು ಸಾಧ್ಯವಾಗಿದೆ. ಇವರ ಮಾತು ಕೇಳುವ ವೇಳೆ, ಹಾಗಾದ್ರೆ ಇವರು 2014ಕ್ಕೂ ಮುಂಚೆ ಬದುಕಲು ಹೇಗೆ ಸಾಧ್ಯವಾಯಿತು ಅಂತ ತಿಳಿದುಕೊಳ್ಳುವ ಕುತೂಹಲ ಮೂಡಿತಾದರೂ, ಪರಿಚಿತರಲ್ಲದ ಅವರೊಂದಿಗೆ ವಾಗ್ವಾದಕ್ಕಿಳಿಯುವುದು ಸೂಕ್ತವಲ್ಲವೆನಿಸಿ ಸುಮ್ಮನೆ ಅವರ ಮಾತಿಗೆ ಕಿವಿಯಾದೆ.
ಹೊಡೆದಾಟ, ಕೊಲೆ, ವಂಚನೆ ಹೀಗೆ ಯಾವುದೇ ಅಪರಾಧ ಪ್ರಕರಣ ನಡೆದಾಗಲೂ ಅಪರಾಧ ಎಸಗಿದವರು ಮತ್ತು ಬಲಿಪಶು ಆದವರ ಧರ್ಮ ಯಾವುದೆಂದು ಗುರುತಿಸಿ, ಕೋಮುದ್ವೇಷದ ನಂಜು ಬಿತ್ತಲು ಬಳಸಿಕೊಳ್ಳಬಹುದೇ ಎಂದು ಪರಿಶೀಲಿಸಲಾಗುತ್ತಿದೆ. ಅಪರಾಧ ಎಸಗಿದವರು ಮತ್ತು ಅದರಿಂದ ಬಾಧಿತರಾದವರು ಭಿನ್ನ ಧರ್ಮಗಳಿಗೆ ಸೇರಿದ್ದರೆ, ಧಾರ್ಮಿಕ ಕಾರಣಗಳಿಗಾಗಿಯೇ ಹೀಗೆ ಮಾಡಲಾಗಿದೆ ಎಂದು ದಿಢೀರನೆ ತೀರ್ಮಾನಕ್ಕೆ ಬರಲಾಗುತ್ತಿದೆ. ಯಾವುದೇ ದುಷ್ಕೃತ್ಯದಲ್ಲಿ ಮುಸ್ಲಿಂ ವ್ಯಕ್ತಿಯ ಪಾತ್ರವಿದ್ದರೆ, ಅದಕ್ಕೆ ಬಳಿಯಲಾಗುತ್ತಿರುವ ಬಣ್ಣಗಳಿಗೂ, ಇತರರು ಅಂತಹದ್ದೇ ದುಷ್ಕೃತ್ಯದಲ್ಲಿ ಭಾಗಿಯಾದರೆ ಅದನ್ನು ಪರಿಗಣಿಸುವ ರೀತಿಗೂ ಅಜಗಜಾಂತರ ವ್ಯತ್ಯಾಸವಿರುವುದು ಕಣ್ಣಿಗೆ ರಾಚತೊಡಗಿದೆ. “ತಪ್ಪು ಯಾರು ಮಾಡಿದರೂ ತಪ್ಪೇ. ಕಾನೂನಿನ ಪ್ರಕಾರ ಅವರಿಗೆ ಶಿಕ್ಷೆ ಆಗಲಿ,” ಎನ್ನುವ ವಿವೇಕ ಮರೆಯಾಗಿ, ಬುಲ್ಡೋಜರ್ ನ್ಯಾಯಕ್ಕೆ ಸಮ್ಮತಿ ದೊರೆಯತೊಡಗಿದೆ.
ಅತ್ಯಾಚಾರ, ಕೊಲೆ ಪ್ರಕರಣಗಳ ಅಪರಾಧಿಗಳನ್ನು ಜೈಲಿನಿಂದ ಹೊರಗೆ ಕರೆತರಲು ಕೂಡ ಪ್ರಭುತ್ವ ಹಿಂಜರಿಯುತ್ತಿಲ್ಲ. ಬಿಲ್ಕಿಸ್ ಬಾನು ಪ್ರಕರಣದಲ್ಲಿ ಗುಜರಾತ್ ಸರ್ಕಾರ ಮತ್ತು ಒಕ್ಕೂಟ ಸರ್ಕಾರ ತಾಳಿದ ನಿಲುವು, ಒಂದು ಸಮಾಜವಾಗಿ ನಾವೆಷ್ಟು ಅಧಃಪತನ ಹೊಂದುತ್ತಿದ್ದೇವೆ ಎಂಬುದಕ್ಕೆ ಕನ್ನಡಿ ಹಿಡಿದಿತ್ತು. ಇದೀಗ ಮಣಿಪುರ ಮತ್ತು ಹರ್ಯಾಣದಲ್ಲಿನ ಬೆಳವಣಿಗೆಗಳ ಕುರಿತು ಅಲ್ಲಿನ ರಾಜ್ಯ ಸರ್ಕಾರ ಮತ್ತು ಒಕ್ಕೂಟ ಸರ್ಕಾರ ಅನುಸರಿಸುತ್ತಿರುವ ಧೋರಣೆ ಗಮನಿಸಿದರೆ, ಡಬಲ್ ಎಂಜಿನ್‍ನ ಕ್ಷಮತೆಯ ಅರಿವಾಗುವುದು. ಕಾನೂನು ಸವ್ಯವಸ್ಥೆ ಕಾಪಾಡುವ ಮೂಲಭೂತ ಹೊಣೆಗಾರಿಕೆ ನಿಭಾಯಿಸಲೇ ಅಸಮರ್ಥರಾಗಿರುವವರಿಗೆ ಸಾಧ್ಯವಿರುವಷ್ಟು ಅಧಿಕಾರ ತಮ್ಮಲ್ಲೇ ಕೇಂದ್ರೀಕರಿಸಿ ಇಟ್ಟುಕೊಳ್ಳಲು ಮಾತ್ರ ಇನ್ನಿಲ್ಲದ ಆಸಕ್ತಿ. ಹೀಗಾಗಿಯೇ, ಒಕ್ಕೂಟ ಸರ್ಕಾರ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರದಿಂದ ಅಧಿಕಾರ ಕಸಿದುಕೊಳ್ಳಲು ಹೊಸ ದಾರಿಗಳನ್ನು ಹುಡುಕಿಕೊಳ್ಳುತ್ತಲೇ ಇದೆ.
ಧರ್ಮದ ಆಧಾರದಲ್ಲಿ ಜನರನ್ನು ಒಡೆದು ಆಳುವ ನೀತಿಯ ವೇಗ ವರ್ಧಿಸುವಲ್ಲಿ ತಮ್ಮ ಗೆಲುವಿದೆ ಎಂದು ಭಾವಿಸುವ ರಾಜಕೀಯಕ್ಕೆ ಬಲ ತುಂಬುತ್ತ ಹೋದರೆ, ಅಂತಿಮವಾಗಿ ಅದರ ದುಷ್ಪರಿಣಾಮಕ್ಕೆ ಎಲ್ಲರೂ ಗುರಿಯಾಗಲೇಬೇಕೆನ್ನುವ ವಾಸ್ತವ ಮನಗಾಣಲು ನಾವೇಕೆ ತಿಣುಕಾಡುತ್ತಿದ್ದೇವೆ? ಕಾನೂನು ಸುವ್ಯವಸ್ಥೆಗೆ ಬೆಲೆ ಇರದ ಸಮಾಜ ಕಟ್ಟಿಕೊಳ್ಳುವುದು ನಮ್ಮ ಗುರಿಯೇ? ಅರಾಜಕತೆಯಲ್ಲಿ, ಇತರರಿಗೆ ಕೇಡು ಬಗೆಯುವ ಹೊಣೆಗೇಡಿ ವರ್ತನೆಯಲ್ಲಿ ಕಂಡುಕೊಳ್ಳುವ ವಿಕೃತ ಆನಂದ ಧಾರ್ಮಿಕವೇ? ಧರ್ಮದ ಹೆಸರಿನಲ್ಲಿ ಈ ಪರಿ ದ್ವೇಷ ಮತ್ತು ಅಪನಂಬಿಕೆ ಬಿತ್ತಲು ಏಕೆ ಸಾಧ್ಯವಾಗುತ್ತಿದೆ ಎಂದು ಧರ್ಮಕ್ಕೆ ಒಳಿತಿನ ಅರ್ಥ ಕೊಟ್ಟುಕೊಂಡವರಾದರೂ ಅವಲೋಕಿಸಬೇಕಲ್ಲವೇ?
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ