ನುಡಿಯಂಗಳ | ನುಡಿಗಳ ಸುಂದರ ಮಳೆಬಿಲ್ಲು

Date:

Advertisements

ಕನ್ನಡವನ್ನು ಜೀವಂತ ಭಾಷೆ ಎಂದು ಕರೆಯುತ್ತೇವೆ. ಏಕೆಂದರೆ, ಅದು ಒಂದು ಜೀವಂತ ಜನಸಮುದಾಯವು ನಿತ್ಯ ಬಳಸುವ ಭಾಷೆಯಾಗಿರುತ್ತದೆ. ಇತರ ಜೀವಂತ ಭಾಷೆಗಳ ಹಾಗೆ ಅದು ವ್ಯಾಕರಣ ನಿಯಮಗಳು, ಶಬ್ದಕೋಶದ ಮಿತಿಗಳಿಂದ ನಿಯಂತ್ರಿಸಲ್ಪಟ್ಟಿದ್ದರೂ ಅದು ಜಡವಲ್ಲ, ಜೀವಂತ. ಅದು ನಿಂತ ನೀರಲ್ಲ, ನಿತ್ಯ ಬದಲಾಗುತ್ತಲೇ ಇರುವ ಹರಿಯುವ ನದಿ.


1975-78ರಲ್ಲಿ ನಾನು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ಆ ದಿನಗಳಲ್ಲಿ ‘ಸಮತೆಂತೋ’ ಎಂಬ ಒಂದು ರಂಗಸಮೂಹದ ಮಕ್ಕಳ ವಿಭಾಗವನ್ನು ನೋಡಿಕೊಳ್ಳುತ್ತಿದ್ದೆ. ಸಮತೆಂತೋ ಎನ್ನುವ ಹೆಸರೇ ಬಹಳ ಸ್ವಾರಸ್ಯಕರ. ‘ಸರಸ್ವತಿಪುರದ ಮಧ್ಯದ ತೆಂಗಿನ ತೋಟ’ ಎಂಬುದು ಅವರ ವಿಸ್ತೃತ ರೂಪ. ಡಾ.ನ.ರತ್ನ, ಸಿಂಧುವಳ್ಳಿ ಅನಂತಮೂರ್ತಿ, ರಾಮೇಶ್ವರಿ ವರ್ಮಾ, ವಿ.ಬಸವರಾಜ್, ವಿಶ್ವನಾಥ್ ಮುಂತಾದ ಶ್ರೇಷ್ಠ ನಿರ್ದೇಶಕರು, ನಾಟಕಕಾರರು ಇದರಲ್ಲಿದ್ದರು.

ಸುಮಾರು 1976ರ ಹೊತ್ತಿಗೆ ನಾನೊಂದು ಮಕ್ಕಳ ನಾಟಕ ಮಾಡಿಸಬೇಕಾಗಿತ್ತು. ಡಾ.ಯು.ಆರ್. ಅನಂತಮೂರ್ತಿಯವರ ಮಗಳು ಅನು, ಡಾ.ರತ್ನ ಅವರ ಮಗಳು ಕವಿತಾ ಆಗ ನನ್ನ ಬಾಲ ಕಲಾವಿದೆಯರು. ಆ ವರ್ಷ ಸರಸ್ವತಿಪುರದ ಬಳಿ ಇರುವ ತೊಣಚಿಕೊಪ್ಪಲು ಎಂಬ ಗ್ರಾಮೀಣ ಬಡಾವಣೆಯಿಂದಲೂ ಕೆಲವು ಮಕ್ಕಳು ನಮ್ಮ ಗುಂಪಲ್ಲಿ ಇದ್ದರು.

ನಾಟಕ ಇನ್ನೂ ಆಯ್ಕೆಯಾಗಿರಲಿಲ್ಲ, ಮಕ್ಕಳನ್ನು ಸಜ್ಜುಗೊಳಿಸಲು, ಪರಸ್ಪರ ಪರಿಚಯವಾಗಲು ಏನಾದರೂ ಒಂದು ಮೂಕಾಭಿನಯ, ಅಭಿನಯದ ಚಟುವಟಿಕೆಗಳನ್ನು ನಡೆಸುವುದು ವಾಡಿಕೆ. ಅದರಂತೆ ಸತ್ಯವಾನ ಮೃತಪಟ್ಟಿರುವುದು, ಸಾವಿತ್ರಿಯ ಮಡಿಲಲ್ಲಿ ತಲೆ ಇಟ್ಟು ಮಲಗಿರುವುದು, ಸತ್ಯವಾನನ ಪ್ರಾಣವನ್ನು ಸೆಳೆದೊಯ್ಯಲು ಯಮ ಬಂದಿರುವುದು. ಸಾವಿತ್ರಿ ತನ್ನ ಗಂಡನ ಪ್ರಾಣವನ್ನು ಸೆಳೆದೊಯ್ಯಲು ಯಮನಿಗೆ ಬಿಡದೇ ಇರುವುದು- ಈ ದೃಶ್ಯವನ್ನು ಅವರವರೇ ಸಂಭಾಷಣೆಯನ್ನು ಹಾಕಿಕೊಂಡು ಮಾಡುವುದಿತ್ತು.

ಯಮ

ಸತ್ಯವಾನನ ಪಾತ್ರದಲ್ಲಿ ಅನು, ಸಾವಿತ್ರಿಯಾಗಿ ಪಾತ್ರ ವಹಿಸಿರುವ ಕವಿತಾಳ ಮಡಲಲ್ಲಿ ತಲೆಯಿಟ್ಟು ಮಲಗಿದಳು. ಕವಿತಾ ತನ್ನ ಡೈಲಾಗನ್ನು ಹೇಳಿದಳು. ಯಮನ ಪಾತ್ರ ಮಾಡಿದ್ದ ತೊಣಚಿಕೊಪ್ಪಲಿನ ಹುಡುಗ ಶಿವ, ‘ಸಾವಿತ್ರಿ ನಾನು ನಿಮ್ಮ ಗಂಡನ ಪ್ರಾಣವನ್ನು ತೆಗೆದುಕೊಂಡು ಹೋಗುತ್ತೇನೆ’ ಎಂದು ಹೇಳುವುದಿತ್ತು. ಶಿವ, ‘ಸಾವಿತ್ರಿ… ನಾನು.. ನಿನ್ನ .. ಗಂಡನ.. ಪ್ರಾಣವನ್ನು……’ ಎನ್ನುವವರೆಗೆ ಹೇಗೋ ಒಂದು ಹೇಳಿದ. ಕೊನೆಯಲ್ಲಿನ ‘ತೆಗೆದುಕೊಂಡು ಹೋಗುತ್ತೇನೆ’ ಅವನ ಬಾಯಲ್ಲಿ ಹೊರಳಲಿಲ್ಲ. ಶಿವ ಸ್ವಲ್ಪ ತಡವರಿಸಿ, ‘…… ತಕವೈತೀನಿ’ ಎಂದ, ತನ್ನ ಪಕ್ಕಾ ಮೈಸೂರು ಗ್ರಾಮ್ಯಭಾಷೆಯಲ್ಲಿ. ಎಲ್ಲರಿಗೂ ನಗು. ಇದರ ನಂತರ ನಾವು ಇಡೀ ನಾಟಕವನ್ನು ಮೈಸೂರು ಗ್ರಾಮ್ಯ ಭಾಷೆಯಲ್ಲಿಯೇ ಆಡಿಸಿದೆವು.

ಹಾಗೆಯೇ, ನಾನು 1980-87ರವರೆಗೆ ಮಂಗಳೂರು ಆಕಾಶವಾಣಿಯಲ್ಲಿದ್ದಾಗ ಪ್ರತಿ ವರ್ಷ ಒಂದು ಮಕ್ಕಳ ನಾಟಕವನ್ನು ರಂಗಕ್ಕಾಗಿಯೂ ಮಾಡಿಸುತ್ತಿದ್ದೆ. ಆ ವರ್ಷ ಕುವೆಂಪು ಅವರ ‘ನನ್ನ ಗೋಪಾಲ’ ನಾಟಕದ ರಿಹರ್ಸಲ್ ನಡೆದಿತ್ತು. ಬಾಲಕನ ಪಾತ್ರ ಮಾಡಿದ ಹುಡುಗ ಕಾಡಿನಲ್ಲಿ ಕೃಷ್ಣನಿಗಾಗಿ, ‘ಗೋಪಾಲಾ…’ ಎಂದು ಕೂಗಿ ಕರೆಯಬೇಕಾಗಿತ್ತು. ಆ ಹುಡುಗ ಕೂಗಿದ, ಆದರೆ ಮೆತ್ತಗೆ. ನಾನು ಆತನಿಗೆ, ‘ಜೋರಾಗಿ ಕೂಗು’ ಎಂದರೆ, ಆ ಹುಡುಗ, ನನ್ನನ್ನು ಒಮ್ಮೆ ವಿಚಿತ್ರವಾಗಿ ದಿಟ್ಟಿಸಿದ, ನಾನು ಮತ್ತೆ ಹೇಳಿದ್ದಕ್ಕೆ, ಅಳುಧ್ವನಿಯಲ್ಲಿ, ‘ಗೋಪಾಲಾ…’ ಎಂದ. ಜೋರಾಗಿ ಕೂಗೋ ಎಂದರೆ ಆ ಹುಡುಗ ಇನ್ನೂ ಜೋರಾಗಿ ಅಳತೊಡಗಿದ. ‘ಅಳೋದ್ಯಾಕೋ’ ಎಂದು ನಾನು ಜೋರು ಮಾಡಿದ್ದಕ್ಕೆ ಅಲ್ಲಿನ ಒಬ್ಬ ಶಿಕ್ಷಕಿ ಹೇಳಿದರು, “ಸಾರ್, ಮಂಗಳೂರು ಭಾಷೆಯಲ್ಲಿ, ‘ಕೂಗು’ ಎಂದರೆ, ‘ಅಳು’ ಎಂದೇ ಅರ್ಥ” ಎಂದು. ಬೇರೊಂದು ಉಪಭಾಷಾ ಕ್ಷೇತ್ರದಲ್ಲಿ ಮಾತಾಡುವಾಗ ನಿಮಗೂ ಈ ರೀತಿಯ ಅನುಭವಗಳಾಗಿರಬಹುದು. ಇದು ಬಹಳ ಸಹಜ.

ಕನ್ನಡ ಎಂಬುದು ಒಂದು ಅಮೂರ್ತ ಕಲ್ಪನೆ

ಭಾಷೆಯು ವ್ಯಾಕರಣ ನಿಯಮಗಳಿಂದ ನಿಯಂತ್ರಿಸಲ್ಪಡುವ ಸಂಕೇತಗಳು ಮತ್ತು ಅರ್ಥಗಳ ಅಮೂರ್ತ ವ್ಯವಸ್ಥೆಯಾಗಿದೆ. ಉದಾಹರಣೆಗೆ, ನಾವು ಯಾವುದನ್ನು ಕನ್ನಡ ಎಂದು ಕರೆಯುತ್ತೇವೆಯೋ ಅದು ಒಂದು ಅಮೂರ್ತ ಪರಿಕಲ್ಪನೆ. ಅದು ನಿರ್ದಿಷ್ಟವಾಗಿ ಯಾರ ಮನೆ ಮಾತೂ ಆಗಿರುವುದಿಲ್ಲ. ಕನ್ನಡವು ತನ್ನ ಹಲವಾರು ಆಡುರೂಪದ ಉಪಭಾಷೆಗಳಲ್ಲಿ, ಲಿಖಿತ ರೂಪದ ಹಲವಾರು ಶೈಲಿಗಳಲ್ಲಿ ಅಸ್ತಿತ್ವದಲ್ಲಿ ಕಾಣಿಸಿಕೊಳ್ಳುತ್ತದೆ.

ಕನ್ನಡವನ್ನು ಜೀವಂತ ಭಾಷೆ ಎಂದು ಕರೆಯುತ್ತೇವೆ. ಏಕೆಂದರೆ, ಅದು ಒಂದು ಜೀವಂತ ಜನಸಮುದಾಯವು ನಿತ್ಯ ಬಳಸುವ ಭಾಷೆಯಾಗಿರುತ್ತದೆ. ಇತರ ಜೀವಂತ ಭಾಷೆಗಳ ಹಾಗೆ ಅದು ವ್ಯಾಕರಣ ನಿಯಮಗಳು, ಶಬ್ದಕೋಶದ ಮಿತಿಗಳಿಂದ ನಿಯಂತ್ರಿಸಲ್ಪಟ್ಟಿದ್ದರೂ ಅದು ಜಡವಲ್ಲ, ಜೀವಂತ. ಅದು ನಿಂತ ನೀರಲ್ಲ, ನಿತ್ಯ ಬದಲಾಗುತ್ತಲೇ ಇರುವ ಹರಿಯುವ ನದಿ. ಅದನ್ನಾಡುವ ಸಮುದಾಯ ದಿನನಿತ್ಯ ಎದುರಿಸುವ ಬದುಕಿನ ಸವಾಲುಗಳಿಗೆ ಸ್ಪಂದಿಸುತ್ತಾ ಅವರಾಡುವ ಭಾಷೆ ದಿನ ನಿತ್ಯ, ಅಥವಾ ಪ್ರತಿಕ್ಷಣವೂ ವಿಕಾಸ ಹೊಂದುತ್ತಲೇ ಹೋಗುತ್ತದೆ. ಈ ವಿಕಸನ, ಬದಲಾವಣೆ ಮತು ಬೆಳವಣಿಗೆಗೆ ಆ ಭಾಷೆಯನ್ನು ಆಡುವ ಪ್ರತಿಯೊಬ್ಬರೂ ಕೊಡುಗೆಯನ್ನು ನೀಡುತ್ತಿರುತ್ತಾರೆ. ಅದಕ್ಕೇ ಹೇಳುವುದು ಕನ್ನಡವನ್ನು ಪ್ರತಿಯೊಬ್ಬರೂ ವಿವಿಧ ಸನ್ನಿವೇಶಗಳಲ್ಲಿ ಪರಿಣಾಮಕಾರಿಯಾಗಿ ಸಂವಹನಿಸುವ ದರ್ದಿನಿಂತ ಮಾತಿನಲ್ಲಿ ಮತ್ತು ಬರಹದಲ್ಲಿ ಬಳಸುತ್ತಾ ಹೋದರೆ ಮಾತ್ರ ಅದು ಬೆಳೆಯುತ್ತದೆ. ಈ ಮಾತು ಎಲ್ಲಾ ಜೀವಂತ ಭಾಷೆಗಳಿಗೆ ಅನ್ವಯಿಸುತ್ತದೆ.

ಹಾಗೆ ನೋಡಿದರೆ, ಎರಡು ವಿಭಿನ್ನ ಭಾಷೆಗಳು ಪರಸ್ಪರ ಅರ್ಥವೇ ಆಗುವುದಿಲ್ಲ ಎಂಬುದಿಲ್ಲ. ಅವು ಪರಸ್ಪರ ಎಷ್ಟು ಹತ್ತಿರ ಅಥವಾ ದೂರ ಇವೆ ಎನ್ನುವುದನ್ನು ಆಧರಿಸಿ ಹೆಚ್ಚು ಅಥವಾ ಕಡಿಮೆ, ತೀರಾ ಕಡಿಮೆ ಅರ್ಥವಾಗುತ್ತವೆ. ಉದಾಹರಣೆಗೆ, ಕನ್ನಡ ಭಾಷೀಯರಿಗೆ ಆಂಧ್ರದಲ್ಲಿ ಮಾತಾಡುವ ತೆಲುಗು ಭಾಷೆ ಸಾಕಷ್ಟು ಅರ್ಥವಾಗುತ್ತದೆ. (ಇದಕ್ಕೆ ಈ ಎರಡೂ ದ್ರಾವಿಡ ಮೂಲದ ಭಾಷೆಗಳು ಎನ್ನುವುದೂ ಒಂದು ಕಾರಣ). ಇನ್ನು, ಕರ್ನಾಟಕದ ಜನ ಮಾತಾಡುವ ತೆಲುಗು ಅಂತೂ ಇನ್ನೂ ಹೆಚ್ಚು ಅರ್ಥವಾಗುತ್ತದೆ. ಅದೇ ಒಡಿಶಾದಲ್ಲಿ ಮಾತಾಡುವ ಒಡಿಯಾ ಭಾಷೆ ಕನ್ನಡ ಭಾಷೀಯರಿಗೆ ಹೆಚ್ಚುಕಡಿಮೆ ಅರ್ಥವೇ ಆಗದಿರಬಹುದು. ಅವರೇನಾದರೂ ಔಪಚಾರಿಕ ಸಂಭಾಷಣೆಯಲ್ಲಿ ಒಂದಷ್ಟು ಇಂಗ್ಲಿಷ್, ಹಿಂದಿಯಂಥ ಸಮಾನ ಭಾಷೆಗಳ ಪದಗಳನ್ನು ಬಳಸಿದ್ದರೆ, ಅವುಗಳ ಆಧಾರದ ಮೇಲೆ ಅಷ್ಟಿಷ್ಟು ಅರ್ಥವಾಗಬಹುದು. ಆದರೆ, ಒಬ್ಬ ವ್ಯಕ್ತಿ ಜರ್ಮನ್ ಭಾಷೆ ಮಾತಾಡಿದರೆ ಕನ್ನಡ ಭಾಷೀಯರಿಗೆ ಸ್ವಲ್ಪವೂ ಅರ್ಥವಾಗದೇ ಇರುವುದಕ್ಕೆ ಆ ಎರಡು ಭಾಷೆಗಳ ನಡುವೆ ಯಾವುದೇ ರೀತಿಯ ಸಂಪರ್ಕ ಇಲ್ಲದೇ ಇರುವುದು ಕಾರಣವಾಗಿದೆ.

ಉಪಭಾಷೆಗಳೇ ಭಾಷೆಗಳು

ಇಂಥದೇ ಪರಿಸ್ಥಿತಿ ಒಂದೇ ಭಾಷೆಯ ವ್ಯಾಪ್ತಿಯ ಒಳಗೂ ಉಂಟಾಗುತ್ತದೆ. ಒಂದು ಬಗೆಯ ಭಾಷಾ ವ್ಯವಸ್ಥೆಯನ್ನು ಒಟ್ಟಾರೆಯಾಗಿ ನಾವು ಕನ್ನಡ ಎಂದು ಗುರುತಿಸುತ್ತೇವಾದರೂ ಅದರಲ್ಲಿಯೂ ಆಡುಮಾತಿನಲ್ಲಿ ಅನೇಕ ಎದ್ದುಕಾಣುವ ಪ್ರಭೇದಗಳಿವೆ. ಅವುಗಳನ್ನು ನಾವು ಉಪಭಾಷೆಗಳು ಎನ್ನುತ್ತೇವೆ. ವಾಸ್ತವವಾಗಿ ಅವೇ ಭಾಷೆಗಳು, ಅವುಗಳ ಕಾಲ್ಪನಿಕವಾದ ಒಂದು ಸಂಯೋಜನೆಯನ್ನು ಭಾಷೆ ಎಂದು ಕರೆಯಲಾಗುತ್ತದೆ.

ಒಂದು ಉಪಭಾಷೆ ಎಂದರೆ, ನಿರ್ದಿಷ್ಟ ಪ್ರದೇಶದಲ್ಲಿ (ಪ್ರಾದೇಶಿಕ ಉಪಭಾಷೆ) ಅಥವಾ ಒಂದು ನಿರ್ದಿಷ್ಟ ಸಾಮಾಜಿಕ ಗುಂಪು (ಸಾಂಸ್ಕೃತಿಕ ಉಪಭಾಷೆ) ಮಾತಾಡುವ ಭಾಷೆಯ ರೂಪಾಂತರವಾಗಿರುತ್ತದೆ; ಅದು ಪ್ರಾಥಮಿಕವಾಗಿ ಉಚ್ಚಾರಣೆ, ಶಬ್ದಕೋಶ ಮತ್ತು ಕೆಲವೊಮ್ಮೆ ವ್ಯಾಕರಣದಲ್ಲಿ ತನ್ನ ವೈಶಿಷ್ಟ್ಯವನ್ನು ತೋರ್ಪಡಿಸಿಕೊಳ್ಳುತ್ತದೆ.

Advertisements
02 ಉಪಭಾಷೆಗಳು

ಹಾಗೆ ನೋಡಿದರೆ, ಕನ್ನಡದಲ್ಲಿ ಈ ಎರಡೂ ಆಯಾಮಗಳನ್ನು ಅನುಸರಿಸಿ ಹಲವಾರು ಉಪಭಾಷೆಗಳು ಇವೆ. ಸಾಂಪ್ರದಾಯಿಕ ಭಾಷಾವಿಜ್ಞಾನಿಗಳು ಅಧ್ಯಯನದ ಒಂದು ಅನುಕೂಲಕ್ಕಾಗಿ ಕನ್ನಡವನ್ನು ಪ್ರಧಾನವಾಗಿ ನಾಲ್ಕು ಉಪಭಾಷೆಗಳನ್ನಾಗಿ ಗುರುತಿಸುತ್ತಾರೆ. ಈ ಪ್ರತಿಯೊಂದು ಪ್ರಾದೇಶಿಕ ಉಪಭಾಷೆಗಳಲ್ಲಿಯೂ ಒಂದೊಂದು ತಾಲೂಕು, ಹೋಬಳಿ, ಊರಿನ ಜನ ಆಡುವ ಭಾಷೆಯು ಒಂದಷ್ಟು ವಿಶಿಷ್ಟವಾದ, ಉಳಿದವಕ್ಕಿಂತ ಹಲವು ಪ್ರಮಾಣಗಳಲ್ಲಿ ಭಿನ್ನವಾದ ಅಂಶಗಳನ್ನು ಹೊಂದಿರುತ್ತವೆ.

ಕರ್ನಾಟಕದಲ್ಲಿಯೇ ಇದ್ದು ಕನ್ನಡವನ್ನು ದ್ವಿತೀಯ ಭಾಷೆಯಾಗಿ ಕಲಿತು ಮಾತಾಡುವ ಉರ್ದು, ತುಳು, ಮರಾಠಿ, ತೆಲುಗು, ತಮಿಳು, ಕೊಂಕಣಿ, ಬ್ಯಾರಿ, ಕೊಡವ ಇತ್ಯಾದಿ ಮಾತೃಭಾಷೀಯರು ಕನ್ನಡವನ್ನು ಮಾತಾಡುವ ಶೈಲಿಗಳೂ ವಿಶಿಷ್ಟವಾಗಿರುತ್ತವೆ. ಗಡಿಪ್ರದೇಶಗಳಲ್ಲಿ ಯಾವ ರಾಜ್ಯ/ಜಿಲ್ಲೆಯೊಂದಿಗೆ ಗಡಿಯನ್ನು ಹಂಚಿಕೊಳ್ಳಲಾಗಿದೆ ಎನ್ನುವುದನ್ನು ಆಧರಿಸಿ, ಆಯಾ ಪ್ರದೇಶದ ಪ್ರಧಾನ ಭಾಷೆಯ ಪ್ರಭಾವಕ್ಕೆ ಒಳಗಾಗಿ ಮಾತಾಡುವ ಕನ್ನಡವೂ ಭಿನ್ನವಾಗಿರುತ್ತದೆ. ಇನ್ನೂ ಸೂಕ್ಷ್ಮವಾಗಿ ನೋಡುವುದಾದರೆ ಅವರ ಸನ್ನಿವೇಶಕ್ಕೆ ತಕ್ಕ ಹಾಗೆ ಒಂದೊಂದು ಕಸಬಿನವರು ಬೆಳೆಸಿಕೊಂಡಿರುವ ಶೈಲಿ, ಪುರುಷರಿಗಿಂತ ಭಿನ್ನವಾಗಿ ಮಹಿಳೆಯರು, ದೊಡ್ಡವರಿಗಿಂತ ಭಿನ್ನವಾಗಿ ಯುವಜನರು ಮಾಡುವ ಶೈಲಿಗಳೂ ವಿಶಿಷ್ಟವಾಗಿರುತ್ತವೆ.

ನನ್ನ ಭಾಷೆ ನನ್ನದು: ಭಾಷಾವಿಜ್ಞಾನಿಗಳು ಇನ್ನೂ ಸೂಕ್ಷ್ಮ ಮಟ್ಟಕ್ಕೆ ಹೋಗಿ ಒಂದೇ ಭಾಷೆ, ಉಪಭಾಷೆಯ ವ್ಯಾಪ್ತಿಯಲ್ಲಿರುವ ಒಬ್ಬೊಬ್ಬ ವ್ಯಕ್ತಿಯೂ ಆ ಭಾಷೆಯನ್ನು ಮಾತಾಡುವ ಶೈಲಿ ವಿಶಿಷ್ಟವಾಗಿರುತ್ತದೆ. ಅದನ್ನು ‘ಇಡಿಅಯಲೆಕ್ಟ್’ ಅಥವಾ ವ್ಯಕ್ತಿಭಾಷೆ ಎನ್ನಲಾಗುತ್ತದೆ. ಇದು ಆ ವ್ಯಕ್ತಿಯ ಪದಕೋಶ, ಪದಗಳನ್ನು ಅವರು ಆಯ್ದುಕೊಳ್ಳುವ, ಬಳಸುವ ವಿಧಾನ, ಉಚ್ಚಾರಣೆ, ವ್ಯಾಕರಣದ ಪ್ರಯೋಗ, ಪದಗಳಲ್ಲದ ಭಾವ ಸೂಚಕ ಉದ್ಗಾರಗಳು ಮತ್ತು ಅವರ ಬಾಯಿಯಿಂದ ಹೊರಡುವ ಮಾತನ್ನು ಪ್ರಭಾವಿಸುವ ಇನ್ಯಾವುದೇ ಸಂಗತಿಗಳು ಈ ವ್ಯಕ್ತಿಭಾಷೆ ಎಂಬ ಪ್ರಭೇದದಲ್ಲಿ ಒಳಗೊಂಡಿರುತ್ತವೆ. ಕೆಳಗಡೆ ಕನ್ನಡದ್ದೇ ಆದ ವಿವಿಧ ಉಪಭಾಷೆಗಳ ಕೆಲವು ವಾಕ್ಯ/ವಾಕ್ಯಖಂಡಗಳನ್ನು ಆದಷ್ಟು ಸರಿಯಾದ ಉಚ್ಚಾರಣೆಯಲ್ಲಿ ಬರೆಯಲಾಗಿದೆ. ಸುಮ್ಮನೇ, ಖುಷಿಗಾಗಿಯಾದರೂ, ಇವುಗಳಲ್ಲಿ ಒಂದೊಂದರ ಅರ್ಥವೇನು, ಇವು ಕನ್ನಡದ್ದೆ ಯಾವ ಉಪಭಾಷೆಗೆ ಸೇರಿದ್ದು ಎಂಬುದನ್ನು ಗುರುತಿಸಲು ಪ್ರಯತ್ನಿಸಿ; ನಾನು ಕೆಲವು ವರ್ಷಗಳ ಹಿಂದೆ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಗಾಗಿ “ಗುಲ್ಬರ್ಗಾ ಉಪಭಾಷೆ” ಎಂಬ ಒಂದು ಅಧ್ಯಯನಶೀಲ ವಿಡಿಯೋ ಚಿತ್ರವನ್ನು ಬರೆದು, ನಿರ್ದೇಶಿಸಿ, ನಿರ್ಮಿಸಿದ್ದೆ. ಕನ್ನಡ ಒಂದು ಉಪಭಾಷೆಯ ಪಕ್ಕಾ ಸ್ವಾರಸ್ಯವನ್ನು ಸವಿಯಬೇಕು ಎಂಬ ಮನಸ್ಸಿದ್ದರೆ ಯುಟ್ಯೂಬಿನಲ್ಲಿ ಈ ವಿಡಿಯೋ ನೋಡಿ.

ಔಪಚಾರಿಕ/ವ್ಯಾವಹಾರಿಕ ಭಾಷೆ

ಈ ವರೆಗೆ ನಾವು ಕನ್ನಡ ಭಾಷೆಯ ಆಡು ಮಾತಿನ ಜಗತ್ತಿನ ವೈವಿಧ್ಯ ಮತ್ತು ವಿಹಂಗಮತೆಯ, ಕುರಿತು ಮಾತಾಡಿದೆವು. ಇನ್ನು ಕನ್ನಡ ಭಾಷೆಯ ಬರಹ ಬರಹ ಜಗತ್ತಿನ ವೈಭವವೇ ಬೇರೆ. ಬರಹದ ಭಾಷೆ ಯಾರ ಮನೆಮಾತೂ ಆಗಿರುವುದಿಲ್ಲ. ಆದರೆ, ಅದು ಎಲ್ಲರ ಸಾಕ್ಷರತೆಯ, ಓದು-ಬರಹದ ಅಗತ್ಯಗಳನ್ನು ಪೂರೈಸುತ್ತದೆ. ಅದರ ಕುರಿತು ಇನ್ನೊಂದು ನುಡಿಯಂಗಳದಲ್ಲಿ ಮಾತಾಡೋಣ.

ಇದನ್ನು ಮುಗಿಸುವ ಮುಂಚೆ ಇನ್ನೊಂದು ಎಚ್ಚರಿಕೆಯ ಮಾತು: ಭಾಷೆ ಎನ್ನುವುದು ಒಂದು ಸಂವಹನದ ಸಾಧನೆ ಎಂದು ಹೇಳುವುದಾದರೂ ಅದು ಅದೊಂದೇ ಅಲ್ಲ. ಸಮಾಜ-ಭಾಷಾವಿಜ್ಞಾನಿ ಸೋಫಿ ಫ್ರ್ಯಾಂಕ್‍ಪಿಟ್‍ ಅವರು ಹೇಳುವ ಹಾಗೆ: ಮೊದಲಿಗೆ ಭಾಷೆ ಒಂದು ರಾಜಕೀಯ ಸಂಗತಿ. ಎರಡನೆಯದಾಗಿ ಭಾಷೆಯು ಒಂದು ಪ್ರದೇಶದ ಅಧಿಕಾರದ/ಶಕ್ತಿಯ ಗತಿಶೀಲತೆಯನ್ನು ಪ್ರತಿಬಿಂಬಿಸುತ್ತದೆ. ಮೂರನೆಯದಾಗಿ, ನಿಜಕ್ಕೂ ಭಯಾನಕವಾದ ವಿಷಯವೆಂದರೆ ಜನರು ಕೆಲವು ಭಾಷೆಗಳು, ಮತ್ತು ಭಾಷಾ ಪ್ರಬೇಧಗಳ ಬಗ್ಗೆ ಆಂತರಿಕಗೊಳಿಸಿಕೊಳ್ಳಲಾದ ತಮ್ಮ ಪೂರ್ವಗ್ರಹಗಳು ವಾಸ್ತವವಾಗಿ ಅವುಗಳನ್ನಾಡುವ ಸಮುದಾಯದ ಬಗೆಗಿನ ಪೂರ್ವಾಗ್ರಹಗಳು ಎಂಬುದನ್ನು ಅರಿತುಕೊಂಡಿರುವುದಿಲ್ಲ.

ಅಂತಿಮವಾಗಿ ಇವೆಲ್ಲವೂ ನಮ್ಮ ಮೇಲೆ ಎದ್ದುಕಾಣುವ ಪ್ರಭಾವವನ್ನು ಬೀರುತ್ತವೆ. ನಾವು ಭಾಷೆಯ ವಿವಿಧ ಪ್ರಭೇದಗಳ ಕುರಿತು ಹೇಗೆ ಯೋಚಿಸುತ್ತೇವೆ ಎನ್ನುವುದು ಆ ಪ್ರಭೇದವನ್ನು ಮಾತಾಡುವವರನ್ನು ನಾವು ಹೇಗೆ ಕಾಣುತ್ತೇವೆ ಎನ್ನುವುದನ್ನು ಪ್ರಭಾವಿಸುತ್ತದೆ. ಇದು, ಅಲ್ಪಸಂಖ್ಯಾತ ಭಾಷಿಗರ ವಿರುದ್ಧ ತಾರತಮ್ಯದ ಸಮಸ್ಯೆಯಾಗಿಯೂ ಪರಿಣಮಿಸಬಹುದು. ನುಡಿಗಳು, ನುಡಿಗಳಷ್ಟೇ ಅಲ್ಲ, ಅವುಗಳನ್ನು ಆಡುವ ಜೀವಂತ ಜನ.

ನುಡಿಯಂಗಳ | ಎಲ್ಲೆಲ್ಲೂ ಪಸರಿಸಲಿ ಕನ್ನಡ ಕಂಪು
ನುಡಿಯಂಗಳ | ಉಚ್ಚಾರಣೆ ಎಂದರೆ ಸಾಲದೇ! ಉಚ್ಛಾರಣೆ ಎನ್ನಬೇಕೇ?

ಪ್ರೊ ಅಬ್ದುಲ್ ರೆಹಮಾನ್ ಪಾಷಾ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
+ posts

ಹಿರಿಯ ಭಾಷಾ ವಿಜ್ಞಾನಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಪ್ರೊ ಎಂ ಅಬ್ದುಲ್‌ ರೆಹಮಾನ್‌ ಪಾಷ
ಹಿರಿಯ ಭಾಷಾ ವಿಜ್ಞಾನಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X