ಕಳೆದ ಎಂಟು ವರ್ಷಗಳಲ್ಲಿ ಸುಮಾರು 6,800 ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನು ರಾಜ್ಯಗಳು ಖರೀದಿಸಿದ್ದವು. ಅದರಲ್ಲಿ ಅತೀ ಹೆಚ್ಚು ಅಂದರೆ, ಶೇಕಡ 30ರಷ್ಟು ಅಕ್ಕಿ ಖರೀದಿಸಿದ ರಾಜ್ಯ ಕರ್ನಾಟಕ. ಆದರೆ, ಆಗ ಬಾರದಿದ್ದ ಅಡೆತಡೆಗಳು ಈಗ ಬಂದಿದ್ದು ಏಕೆ?
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ತನ್ನ ಚುನಾವಣೆಯ ಭರವಸೆಗಳನ್ನು ಈಡೇರಿಸುವ ಪ್ರಯತ್ನದಲ್ಲಿ ಹಲವು ತೊಡಕುಗಳನ್ನು ಎದುರಿಸುತ್ತಿದೆ. ವಿಶೇಷವಾಗಿ, ಅನ್ನಭಾಗ್ಯ ಯೋಜನೆಗೆ ಜಾರಿಗೆ ತರಲು ಬೇಕಾದ ಅಕ್ಕಿಯನ್ನು ಹೊಂದಿಸಲು ಹೆಣಗಾಡುತ್ತಿದೆ. ಸದ್ಯಕ್ಕೆ ಆಹಾರಧಾನ್ಯ ಸಂಗ್ರಹವಾಗುವವರೆಗೆ ಪ್ರತೀ ಫಲಾನುಭವಿಗಳ ಖಾತೆಗೆ 170 ರೂಪಾಯಿಗಳನ್ನು ವರ್ಗಾಯಿಸುವುದಾಗಿ ಘೋಷಿಸಿದೆ. 4.42 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗುವ ಈ ಯೋಜನೆಗೆ ಬಜೆಟ್ಟಿನಲ್ಲಿ ಒಟ್ಟಾರೆಯಾಗಿ 10,000 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ.
ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತೀ ಫಲಾನುಭವಿಗೆ ಕೇಂದ್ರ ಸರ್ಕಾರ ಆಹಾರ ಸುರಕ್ಷಾ ಕಾಯ್ದೆಯ ಅಡಿಯಲ್ಲಿ ಒದಗಿಸುತ್ತಿರುವ ಐದು ಕೆ.ಜಿ ಅಕ್ಕಿಯ ಜೊತೆಗೆ ಐದು ಕೆ.ಜಿ ಹೆಚ್ಚುವರಿ ಅಕ್ಕಿಯನ್ನು ಒದಗಿಸುವುದಾಗಿ ರಾಜ್ಯ ಕಾಂಗ್ರೆಸ್ ಭರವಸೆ ನೀಡಿತ್ತು.
ಸಾಮಾನ್ಯವಾಗಿ ರಾಜ್ಯಗಳು ತಮ್ಮ ಜನಕಲ್ಯಾಣ ಕಾರ್ಯಕ್ರಮಗಳಿಗೆ ಆಹಾರಧಾನ್ಯಗಳನ್ನು ಒದಗಿಸಲು ಭಾರತೀಯ ಆಹಾರ ನಿಗಮದ ಮುಕ್ತ ಮಾರುಕಟ್ಟೆಯ ಮಾರಾಟ ಯೋಜನೆ (ಒಎಂಎಸ್‍ಎಸ್) ಅಡಿಯಲ್ಲಿ ಧಾನ್ಯಗಳನ್ನು ಕೊಳ್ಳುತ್ತವೆ. ಭಾರತೀಯ ಆಹಾರ ನಿಗಮ ತಾನು ರೈತರಿಂದ ಕೊಂಡ ಆಹಾರಧಾನ್ಯಗಳನ್ನು ಒಎಂಎಸ್‍ಎಸ್ ಅಡಿಯಲ್ಲಿ ಪೂರ್ವನಿರ್ಧರಿತ ಬೆಲೆಗೆ ರಾಜ್ಯಗಳಿಗೆ ಮಾರುತ್ತದೆ. ಸರಕನ್ನು ಖರೀದಿಸಿದ ದರಕ್ಕಿಂತ ಮಾರಾಟದ ಬೆಲೆ ಸ್ವಲ್ಪ ಹೆಚ್ಚಿಗೆ ಇರುತ್ತದೆ. ಅದರಲ್ಲಿ ಅದು ತನ್ನ ಸಂಗ್ರಹಣೆಯ ವೆಚ್ಚ, ಶೇಖರಣೆಯ ವೆಚ್ಚ ಇತ್ಯಾದಿ ಖರ್ಚುಗಳನ್ನು ಭರಿಸಿಕೊಳ್ಳುತ್ತದೆ. ಖಾಸಗಿ ವ್ಯಾಪಾರಿಗಳಿಗೆ ಧಾನ್ಯಗಳು ಬೇಕಾದರೆ ಅವರು ಹರಾಜಿನಲ್ಲಿ ಕೊಳ್ಳಬೇಕು.
ಹೆಚ್ಚಾಗಿ ಆಹಾರ ನಿಗಮದಿಂದ ರಾಜ್ಯಗಳು ಆಹಾರಧಾನ್ಯಗಳನ್ನು ಕೊಳ್ಳುತ್ತವೆ. ಕಳೆದ ಎಂಟು ವರ್ಷಗಳಲ್ಲಿ ಸುಮಾರು 6,800 ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನು ರಾಜ್ಯಗಳು ಖರೀದಿಸಿದ್ದವು. ಅದರಲ್ಲಿ ಅತೀ ಹೆಚ್ಚು ಖರೀದಿಸಿದ್ದ ರಾಜ್ಯ ಕರ್ನಾಟಕ. ರಾಜ್ಯಗಳು ಖರೀದಿಸಿದ್ದ ಒಟ್ಟು ಅಕ್ಕಿಯಲ್ಲಿ ಶೇಕಡ 30ರಷ್ಟನ್ನು ಕರ್ನಾಟಕವೇ ಕೊಂಡಿತ್ತು.
ಕಾಂಗ್ರೆಸ್ ಸರ್ಕಾರ ಆಡಳಿತ ವಹಿಸಿಕೊಂಡ ಕೂಡಲೇ, ತನ್ನ ಅನ್ನಭಾಗ್ಯ ಕಾರ್ಯಕ್ರಮಕ್ಕೆ ಬೇಕಾಗಿದ್ದ ಹೆಚ್ಚುವರಿ ಅಕ್ಕಿಗಾಗಿ ಕೇಂದ್ರ ಆಹಾರ ನಿಗಮಕ್ಕೆ ಬೇಡಿಕೆಯನ್ನು ಸಲ್ಲಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಟ್ವೀಟ್ ಪ್ರಕಾರ, ಕರ್ನಾಟಕಕ್ಕೆ ಅಕ್ಕಿ ನೀಡಲು ಕೇಂದ್ರ ಜೂನ್ 12ರಂದು ಸಮ್ಮತಿಸಿತ್ತು. ಕ್ವಿಂಟಾಲಿಗೆ 3,400 ರೂಪಾಯಿಯಂತೆ ಅಕ್ಕಿಯನ್ನು ಪೂರೈಸಬೇಕಿತ್ತು.
ಆದರೆ, ಮಾರನೆಯ ದಿನವೇ, ಅಂದರೆ ಜೂನ್ 13ರಂದು ಕೇಂದ್ರ ಸರ್ಕಾರ ಒಎಂಎಸ್‍ಎಸ್ ಮೂಲಕ ರಾಜ್ಯಗಳಿಗೆ ಅಕ್ಕಿಯನ್ನು ಮಾರುವ ಯೋಜನೆಯನ್ನು ದಿಢೀರನೆ ನಿಲ್ಲಿಸಿಬಿಟ್ಟಿತು. ಆದರೆ, ಈ ನಿಯಮ ಖಾಸಗಿ ವ್ಯಾಪಾರಿಗಳಿಗೆ ಅನ್ವಯವಾಗುತ್ತಿರಲಿಲ್ಲ. ಅವರಿಗೆ ಮಾರಾಟ ಮಾಡುವುದು ಮುಂದುವರಿದೇ ಇದೆ.
ಸಮರ್ಥ ಕಾರಣಗಳಿವೆಯೇ?: ರಾಜ್ಯಗಳಿಗೆ ಅಕ್ಕಿಯ ಮಾರಾಟವನ್ನು ನಿಲ್ಲಿಸುವುದಕ್ಕೆ ಕೆಲವು ಕಾರಣಗಳನ್ನು ಕೊಡಲಾಗಿದೆ. ಅಕ್ಕಿಯ ದಾಸ್ತಾನು ಕಡಿಮೆ ಇದೆ, ಹಾಗಾಗಿ ರಾಜ್ಯಗಳಿಗೆ ಕೊಡಲಾಗುವುದಿಲ್ಲ ಅಂತ ಕೇಂದ್ರ ಆಹಾರ ಮತ್ತು ಗ್ರಾಹಕರ ವ್ಯವಹಾರ ಮಂತ್ರಿ ಪಿಯುಷ್ ಗೋಯಲ್ ತಿಳಿಸಿದ್ದಾರೆ. ಆದರೆ, ಆ ಬಗ್ಗೆ ಹಲವು ತಕರಾರುಗಳು ಸಾಧ್ಯ. ಮೊದಲನೆಯದಾಗಿ, ಕರ್ನಾಟಕ ಸರ್ಕಾರದ ಆಹಾರ ಮಂತ್ರಿಗಳಾದ ಮುನಿಯಪ್ಪನವರು ಹೇಳುವಂತೆ, ನಿಯಮದ ಪ್ರಕಾರ ದಾಸ್ತಾನು ಬೇಕಿರುವುದು 135 ಲಕ್ಷ ಟನ್. ಆದರೆ ಕೇಂದ್ರದ ಬಳಿ 262 ಲಕ್ಷ ಟನ್ ಇದೆ. ಹಾಗಾಗಿ, ದಾಸ್ತಾನು ಕೊರತೆ ಇದೆ ಎನ್ನುವುದನ್ನು ಸಂಪೂರ್ಣ ಒಪ್ಪಲಾಗದು. ಬೇರೆ-ಬೇರೆ ರಾಜ್ಯಗಳು ಕೇಳಲು ಪ್ರಾರಂಭಿಸಿದರೆ ಇದು ಸಾಲುವುದಿಲ್ಲ ಅನ್ನುವುದು ಇನ್ನೊಂದು ವಾದ. ಇದನ್ನು ಒಪ್ಪಿಕೊಂಡರೆ, ಕೇಂದ್ರ ಈಗಿರುವ ದಾಸ್ತಾನನ್ನು ಕಾಪಿಡಬೇಕು. ಆದರೆ, ಅದು ಖಾಸಗಿ ವರ್ತಕರಿಗೆ ಮಾರುವುದನ್ನು ಮುಂದುವರಿಸಿದೆ. ಇದು ಕೇಂದ್ರದ ವಾದವನ್ನು ದುರ್ಬಲಗೊಳಿಸುತ್ತದೆ. ಇನ್ನು, ಜನರಿಗೆ ಬಳಸುವುದಕ್ಕೇ ಅಕ್ಕಿ ಕೊರತೆ ಬೀಳಬಹುದು ಅಂತಾದರೆ, ಎಥೆನಾಲ್ ಉತ್ಪಾದನೆಗೆ ಅಕ್ಕಿಯ ಪೂರೈಕೆ ಮುಂದುವರಿಸಿರುವುದನ್ನು ಸಮರ್ಥಿಸುವುದು ಕಷ್ಟವಾಗುತ್ತದೆ.
ನಿಜ, ಭಾರತ ತನಗೆ ಬೇಕಾದ ಇಂಧನದ ಶೇಕಡ 86ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಆಮದಿನ ಮೇಲಿನ ಅವಲಂಬನೆ ಕಡಿಮೆಯಾಗಬೇಕು ಅನ್ನುವುದೂ ಸರಿ. ಅದಕ್ಕಾಗಿ ಎಥೆನಾಲ್ ಅನ್ನು ಪೆಟ್ರೋಲಿನಲ್ಲಿ ಬೆರೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಎಥೆನಾಲ್ ಉತ್ಪಾದಿಸಲು ಕಬ್ಬು, ಜೋಳ ಹಾಗೂ ಅಕ್ಕಿಯನ್ನು ಬಳಸಲಾಗುತ್ತದೆ. ಭಾರತ ಆಹಾರ ನಿಗಮದ ಮೂಲಕ ಇದಕ್ಕಾಗಿ ಕೇಂದ್ರ ಸರ್ಕಾರ ಅಕ್ಕಿಯನ್ನು ಬಿಡುಗಡೆ ಮಾಡುತ್ತಿದೆ. ಅಷ್ಟೇ ಅಲ್ಲ, ರಾಜ್ಯಗಳಿಗೆ ಕೊಡುವುದಕ್ಕಿಂತ ಕಡಿಮೆ ಬೆಲೆಗೆ ಅಂದರೆ, ಕ್ವಿಂಟಾಲಿಗೆ 2,000 ರೂಪಾಯಿಗೆ ಮಾರುತ್ತದೆ. ನೀತಿ ಆಯೋಗ ಎಥೆನಾಲಿಗೆ ಸಂಬಂಧಿಸಿದ ಮಾರ್ಗಸೂಚಿಯಲ್ಲಿ ಭಾರತದಲ್ಲಿ ಪ್ರತಿವರ್ಷ 3,090 ಲಕ್ಷ ಟನ್ ಅಕ್ಕಿ ಹೆಚ್ಚುವರಿಯಾಗಿ ಉಳಿಯುತ್ತದೆ. ಹಾಗಾಗಿ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗೆ ಬಳಸಬಹುದು ಎಂದು ಸಲಹೆ ನೀಡಿತ್ತು. ಈಗ ಕೇಂದ್ರ ಅಕ್ಕಿಯ ಕೊರತೆ ಇದೆ ಎನ್ನುತ್ತಿರುವುದನ್ನು ಒಪ್ಪಿಕೊಂಡರೆ, ನೀತಿಯ ಆಯೋಗದ ಅಂದಾಜಿನಲ್ಲಿ ತೊಂದರೆ ಇರಬೇಕು ಅನಿಸುತ್ತದೆ. ವಿಪರ್ಯಾಸ ಅಂದರೆ, ಕೇಂದ್ರ ಎಥೆನಾಲ್ ಉತ್ಪಾದನೆಗಾಗಿ ಕೊಡುವ ಅಕ್ಕಿಯ ಪ್ರಮಾಣವನ್ನು ಪ್ರತಿವರ್ಷ ಏರಿಸುತ್ತಲೇ ಇದೆ. 2021ರ ಏಪ್ರಿಲ್‍ನಲ್ಲಿ ಇದಕ್ಕಾಗಿ 5,500 ಮೆಟ್ರಿಕ್ ಟನ್ ಪೂರೈಸಲಾಗಿತ್ತು. 2023 ಮೇ ವೇಳೆಗೆ ಅದರ ಪ್ರಮಾಣ 2,50,000 ಮೆಟ್ರಿಕ್ ಟನ್ ಮುಟ್ಟಿತ್ತು. 2022-23ರಲ್ಲಿ ಈ ಉದ್ದೇಶಕ್ಕಾಗಿ ಪೂರೈಕೆ ಮಾಡಿದ ಅಕ್ಕಿ ಎಲ್ಲ ರಾಜ್ಯಗಳು ಓಎಂಎಸ್‍ಎಸ್ ಅಡಿಯಲ್ಲಿ ಒಟ್ಟಾರೆಯಾಗಿ ಖರೀದಿಸಿದ ಅಕ್ಕಿಯ ಆರು ಪಟ್ಟು ಇತ್ತು. ಕೊರತೆ ಇದೆ ಅನ್ನುವುದಾದರೆ, ಎಥೆನಾಲ್ ಉತ್ಪಾದನೆಗೆ ಅಕ್ಕಿಯನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಬೇಕು. ಅದು ನೈತಿಕವಾಗಿಯೂ ಅನಿವಾರ್ಯ. ಆದರೆ, ಕೇಂದ್ರ ಈ ಬಗ್ಗೆ ಇನ್ನು ನಿರ್ಧರಿಸದೇ ಇರುವುದು ಅದರ ಉದ್ದೇಶದ ಬಗ್ಗೆ ಅನುಮಾನ ಮೂಡಿಸುತ್ತದೆ.
ಹಣದುಬ್ಬರ ಹಾಗೂ ಅಕ್ಕಿಯ ಪೂರೈಕೆ: ರಾಜ್ಯಗಳಿಗೆ ಅಕ್ಕಿಯ ಮಾರಾಟವನ್ನು ನಿಲ್ಲಿಸಿರುವುದಕ್ಕೆ ಕೇಂದ್ರ ಕೊಡುತ್ತಿರುವ ಮತ್ತೊಂದು ಕಾರಣವೆಂದರೆ, ಚಿಲ್ಲರೆ ಹಣದುಬ್ಬರದ ನಿಯಂತ್ರಣ. ರಾಜ್ಯಗಳಿಗೆ ಅಕ್ಕಿ ಮಾರುವುದನ್ನು ನಿಲ್ಲಿಸಿ ವರ್ತಕರ ಮೂಲಕ ಮಾರುಕಟ್ಟೆಗೆ ಅಕ್ಕಿ ಬಿಡುಗಡೆ ಮಾಡುವುದರಿಂದ ಬೆಲೆ ಏರಿಕೆ ನಿಯಂತ್ರಿಸಬಹುದು; ಹೀಗೆ ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದರಿಂದ ಅಕ್ಕಿಯ ಪೂರೈಕೆ ಜಾಸ್ತಿಯಾಗುತ್ತದೆ, ಆಗ ಬೆಲೆ ಕಡಿಮೆಯಾಗುತ್ತದೆ ಅನ್ನುವುದು ಸರ್ಕಾರದ ವಾದ. ಪ್ರಭಾತ್ ಪಟ್ನಾಯಕ್ ಗುರುತಿಸುವಂತೆ, ಈ ವಾದದಲ್ಲೂ ಸಮಸ್ಯೆ ಇದೆ. ಆಹಾರಧಾನ್ಯಗಳ ಬೆಲೆ ಏರಿಕೆಗೆ ಬೇಡಿಕೆಯ ಹೆಚ್ಚಳವೇ ಕಾರಣವೆನ್ನುವುದಾದರೆ, ಸರ್ಕಾರ ತನ್ನ ಬಳಿ ಇರುವ ಅಕ್ಕಿಯನ್ನು ಜನರ ಬಳಕೆಗೆ ವಿತರಿಸಬೇಕು. ಆಗ ಅವರು ಮಾರುಕಟ್ಟೆಯಲ್ಲಿ ಕೊಳ್ಳುವುದನ್ನು ಕಮ್ಮಿ ಮಾಡುತ್ತಾರೆ. ಆ ಮೂಲಕ ಬೇಡಿಕೆ ಕಡಿಮೆಯಾಗುತ್ತದೆ. ಆಗ ಬೆಲೆ ತಗ್ಗುತ್ತದೆ. ಅದು ಪರಿಣಾಮಕಾರಿ ಆಗಬೇಕಾದರೆ, ರಾಜ್ಯ ಸರ್ಕಾರಗಳ ಮೂಲಕ ಜನರಿಗೆ ವಿತರಿಸುವುದು ಒಳ್ಳೆಯದು. ವ್ಯಾಪಾರಿಗಳಿಗೆ ಮಾರಿ ಅವರ ಮೂಲಕ ಜನರಿಗೆ ಮಾರುವುದು ಒಳ್ಳೆಯ ಮಾರ್ಗವಲ್ಲ. ಯಾಕೆಂದರೆ, ವ್ಯಾಪಾರಿಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇರುವುದಿಲ್ಲ. ಕೊಂಡ ಅಕ್ಕಿಯನ್ನು ವ್ಯಾಪಾರಿಗಳು ಭವಿಷ್ಯದ ಬಳಕೆಗೆ ಶೇಖರಿಸಿಡಬಹುದು. ಆಗ ಸರ್ಕಾರ ಮಾರಿದ ಅಕ್ಕಿ ಮಾರುಕಟ್ಟೆ ತಲುಪುವುದಿಲ್ಲ. ಬೇಡಿಕೆ ತಗ್ಗುವುದಿಲ್ಲ. ಬೆಲೆ ಕಡಿಮೆಯಾಗುವುದಿಲ್ಲ.
ಹಿಂದೆಯೂ 1972ರಲ್ಲಿ ಇಂತಹುದೇ ತಪ್ಪನ್ನು ಆಗಿನ ಇಂದಿರಾ ಗಾಂಧಿ ಸರ್ಕಾರ ಮಾಡಿತ್ತು. 1972ರಲ್ಲಿ ಫಸಲು ಕಡಿಮೆಯಾಗಬಹುದು, ಬೆಲೆಗಳು ಏರಬಹುದು ಅನ್ನುವ ಆತಂಕದಿಂದ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳನ್ನು ಮಾರಿತ್ತು. ವ್ಯಾಪಾರಿಗಳು ಸರ್ಕಾರದಿಂದ ಕೊಂಡ ಆಹಾರಧಾನ್ಯಗಳನ್ನು ಮುಂದೆ ಒಳ್ಳೆಯ ಬೆಲೆಗೆ ಮಾರುವ ಲೆಕ್ಕಾಚಾರದಲ್ಲಿ ಶೇಖರಿಸಿಟ್ಟರು. ಸಹಜವಾಗಿಯೇ ಬೆಲೆ ಕಡಿಮೆಯಾಗಲಿಲ್ಲ. ಈಗಲೂ ಅದೇ ಪರಿಸ್ಥಿತಿ ಪುನರಾವರ್ತನೆ ಆಗಬಹುದು. ಹಾಗಾಗಿ, ನಿಜವಾಗಿ ಹಣದುಬ್ಬರವನ್ನು ನಿಯಂತ್ರಿಸುವುದೇ ಉದ್ದೇಶವಾದರೆ, ರಾಜ್ಯ ಸರ್ಕಾರಗಳ ಮೂಲಕ ಜನರಿಗೆ ತಲುಪಿಸುವುದು ಒಳ್ಳೆಯ ದಾರಿಯಾಗಬಹುದು.
ಅಂತಿಮವಾಗಿ, ಹಣದುಬ್ಬರದ ನಿಯಂತ್ರಣಕ್ಕೆ ಮುಖ್ಯ ಕಾರಣ ಅಂದರೆ, ಬೆಲೆ ಏರಿಕೆಯಿಂದ ಜನರಿಗೆ ಆಹಾರ ಪದಾರ್ಥಗಳನ್ನು ಕೊಳ್ಳುವುದು ಕಷ್ಟವಾಗುತ್ತದೆ, ಬಡವರಿಗೆ ಸಮಸ್ಯೆಯಾಗುತ್ತದೆ ಅನ್ನುವುದು. ರಾಜ್ಯ ಸರ್ಕಾರಗಳ ಮೂಲಕ ಜನರಿಗೆ ಆಹಾರಧಾನ್ಯಗಳನ್ನು ವಿತರಿಸುವುದರಿಂದ ಜನರಿಗೆ ಬಳಕೆಗೆ ಆಹಾರ ಧಾನ್ಯ ಸಿಗುತ್ತದೆ. ಆ ಮಟ್ಟಿಗೆ ಹಣದುಬ್ಬರದಿಂದ ಸಾಮಾನ್ಯ ಜನರಿಗಾಗುವ ಸಮಸ್ಯೆಯನ್ನು ಪರಿಹರಿಸಿದಂತೆ ಆಗುತ್ತದೆ. ಈ ಕ್ರಮದಿಂದ ಹಣದುಬ್ಬರ ಕಡಿಮೆಯಾಗದಿದ್ದರೂ ಜನರ ಹಸಿವು ಇಂಗುತ್ತದೆ. ಹಸಿವಿನ ಸೂಚಿಯಲ್ಲಿ ಖಂಡಿತ ಭಾರತದ ಸ್ಥಿತಿ ಸುಧಾರಿಸುತ್ತದೆ.
ಭಾರತ ಸಂವಿಧಾನ ಒಪ್ಪಿಕೊಂಡಿರುವ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಗಳಿಗೆ ತಮ್ಮದೇ ಆದ ಜನಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕೆ ಅವಕಾಶ ಇರಬೇಕು. ಇದಕ್ಕೆ ವ್ಯತಿರಿಕ್ತವಾಗಿ ಕೇಂದ್ರದ ಆಡಳಿತ ಹೆಚ್ಚೆಚ್ಚು ಕೇಂದ್ರೀಕರಣಗೊಳ್ಳುತ್ತ ಹೋಗುವುದು ಒಟ್ಟಾರೆ ಜನರ ಒಳಿತಿನ ದೃಷ್ಟಿಯಿಂದ ಕ್ಷೇಮಕರವಲ್ಲ.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ