ಇಲ್ಲಿ ಬೇಸಿಗೆಯಲ್ಲಿ ಹೆಚ್ಚಿನ ಜನ ಮನೆಯ ಅಂಗಳದಲ್ಲಿ ಇಲ್ಲಾ ತಾರಸಿಯ ಮೇಲೆ ಚಾರ್ಪಾಯಿ ಹಾಕಿಕೊಂಡು ಮಲಗುತ್ತಾರೆ. ತಂಪಾಗಿಸಲು ಸಾಯಂಕಾಲ ನೀರು ಹಾಕಿ ತೊಳೆದು ತಣಿಸಿದರೂ ಧಗೆ ಕಡಿಮೆಯಾಗಿರುವುದಿಲ್ಲ. ಸಂಜೆ ಬೇಗ ಅಡುಗೆ ಮಾಡಿ ಮುಗಿಸಿ ಬೇಸರದ ಸಂಜೆಗೆ ಹಾಳು ಹರಟೆಗೆ ತೊಡಗುತ್ತಾರೆ ಇಲ್ಲಿನ ಜನ. ಸೂರ್ಯಾಸ್ತ ಸಂಜೆ ಏಳಕ್ಕೆ, ಇಲ್ಲಾ ಏಳರ ನಂತರ. ಸುರ್ಯೋದಯ ಬೆಳಗಿನ ಐದೂವರೆಗೆ! ಅಬ್ಬಾ! ಎಷ್ಟು ದೀರ್ಘ ಹಗಲು!
ಉತ್ತರಭಾರತವೀಗ ಕಾದ ಕಾವಲಿ ಮೇಲೆ ನೀರು ಹೊಯ್ದಂತೆ ಅಸಹನೀಯವಾಗಿದೆ. ಗ್ರೀಷ್ಮ ಋತುವಿಗೆ ಉಲ್ಬಣಿಸಿದ ಉನ್ಮತ್ತತೆ. ಕಾಳಿದಾಸನ ‘ಋತುಸಂಹಾರ’ ಪ್ರಾರಂಭವಾಗುವುದೇ ಬೇಸಿಗೆ ವರ್ಣನೆಯಿಂದಂತೆ. ಕಳೆದ ತಿಂಗಳು 44- 45 ಡಿಗ್ರಿ ಉಷ್ಣತೆಯಲ್ಲಿ ಜೀವ ಬಳಲಿದರೂ ಬದುಕು ನಿರಾತಂಕವಿಲ್ಲದೇ ಸಾಗಿತ್ತು. ಹೋಗುವುದಾದರು ಎಲ್ಲಿಗೆ? ಅಕ್ಕಿ ತೊಳೆದಿಟ್ಟರೆ ಬೆಂದು ಬಿಡಬಹುದೇನೋ! ಈ ಬಿಸಿಲ ಧಗೆ –ಕಾವಿಗೆ ಮೊಟ್ಟೆ ಯಾಕೆ ಕೋಳಿ ಮರೀನೋ, ಆಮ್ಲೆಟ್ಟೋ ಆಗುವುದಿಲ್ಲ ಎಂದು ಪ್ರಶ್ನಿಸುತ್ತಿದ್ದ ಭುವನ (ನಮ್ಮ ಆಫೀಸಿನ ಹುಡುಗ)ನ ನೆನಪಾಗುತ್ತದೆ. ನಿವೃತ್ತಿ ಹೊಂದಿ ಆರು ತಿಂಗಳಾದವು. ಹತೋಟಿಯಲ್ಲಿದೆ ಎಂದುಕೊಂಡಿದ್ದ ಬದುಕು ಹಳಿತಪ್ಪಿ ಓಡುತ್ತಿದೆಯೇನೋ ಅನಿಸುತ್ತಿದೆ. ಒಮ್ಮಿಂದೊಮ್ಮೆಲೆ ಖಾಲಿಯಾಗಿ ಅಸಹನೀಯವಾದ ನಿರ್ವಾತದ ಕಳವಳ. ಗಂಟಲೊಳಗೆ ಎಲ್ಲೋ ಒಂದಗುಳು ಸಿಕ್ಕಿಕೊಂಡಂತಹ ದುಗುಡ. ನರವೆಲ್ಲೋ ಉಳುಕಿತೇನೋ ಅಳುಕಿತೇನೋ ಎನ್ನುವ ಮಾಸಿದ ಮನಸ್ಸಿನ ಗೋಡೆಯೊಳಗೊಂದು ಸಣ್ಣ ಬೆಳಕಿಂಡಿ.
ಹೀಗೆ ಹಳವಂಡಗಳಲ್ಲಿ ಇತ್ತ ನಡುಹಗಲೂ ಅಲ್ಲದ ಕಡುಬಿಸಿಲಿನ ಧಗೆಯಲ್ಲಿ ಕಿಟಕಿಯಾಚೆ ನೋಡಿದರೆ ಗುಲಮೊಹರ್ ಮರ ಕೆಂಪುಹೂಗಳನ್ನು ಮೈತುಂಬ ಹೊದ್ದು ನಗುತ್ತಿದೆ. ರಸ್ತೆಬದಿಯ ಅಮಲ್ತಾಸ್ ಅಚ್ಚ ಹಳದಿಬಣ್ಣದ ಗೆಜ್ಜೆಹೂ ಗೊಂಚಲನ್ನು ತೊಟ್ಟುಕೊಂಡು ಕಣ್ಣಿಗೆ ಹಬ್ಬವಾಗಿತ್ತು. ಮೊನ್ನೆ ಮೊನ್ನೆಯಷ್ಟೇ ಪಶ್ಚಿಮ ಬಂಗಾಳಿನ ಪ್ರವಾಸ ಮುಗಿಸಿಕೊಂಡು ಬಂದಾಗಿದೆ. ಬಾಂಗ್ಲಾ ದೇಶದ ಗಡಿಗೆ ಹತ್ತಿರದಲ್ಲಿರುವ ಬಾಂಗಾಂವ್ ನಲ್ಲಿಯೂ ಬಿಸಿಲು ಧಗೆಯ ಜೊತೆ ಸುರಿದು ಬರಿದಾಗುವ ಮೋಡಗಳು. ಬೆವರು ಕಿತ್ತು ಬರುವ ಆರ್ದ್ರತೆ. ಆದರೆ ಅಂತಹ ವಾತಾವರಣದಲ್ಲೂ ಕಣ್ಣುಚಾಚಿದಲ್ಲೆಲ್ಲ ಹಸಿರೋ ಹಸಿರು. – ರಾಶಿ ರಾಶಿ ಬಾಳೆ, ಹಲಸು, ಬಿದಿರು, ನುಗ್ಗೆಮರ, ಕೆಸುವಿನ ಗಿಡ ನೆನಪಾದಾಗೆಲ್ಲ ಮೋನಿ ಬೋದಿ (ಬಂಗಾಳಿ ಭಾಷೆಯಲ್ಲಿ ಭಾಭಿ) ಒತ್ತಾಯದಿಂದ ಒಂದೊಂದು ತಿನಿಸುಗಳನ್ನು ಬಣ್ಣಿಸಿ ಬಣ್ಣಿಸಿ ಇದು ಹೊಟ್ಟೆಗೆ ತುಂಬಾ ಒಳ್ಳೆಯದು, ಇದು ಉಷ್ಣಕ್ಕೆ, ಇದು ಜೀರ್ಣಕ್ಕೆ ಅಂತ ಪ್ರೀತಿಯನ್ನೇ ಉಣಬಡಿಸುತ್ತಿದ್ದುದು ನೆನಪಾಗುತ್ತದೆ. ವೈವಿಧ್ಯಮಯ ಸಿಹಿಗಳು, ರಸಗುಲ್ಲಗಳನ್ನು ಬೇಡವೆಂದರೂ ತಟ್ಟೆಗೆ ಹಾಕಿದ್ದೇ ಹಾಕಿದ್ದು. ಕೊನೆಗೂ ಕನ್ನಡದ ಕೆಸುವಿನ ಸೊಪ್ಪು, ಹಿಂದಿಯ ಅರಬಿ- ಕೆ- ಪತ್ತೆ, ಬಂಗಾಲಿಗಳ ಕೋಚು ಸಾಗ್, ರೂಪದಲ್ಲಿ ಭೇಟಿಯಾಗಿತ್ತು.

ಆಸ್ಸಾಮಿನಲ್ಲಿ ವಿಪರೀತ ಮಳೆ ನೆರೆಯ ಆತಂಕದಿಂದ ಬ್ರಹ್ಮಪುತ್ರ ನದಿಯ ದಂಡೆಗೆ ಹೋಗಲಾಗಲಿಲ್ಲ. ಆಸ್ಸಾಮಿನ ತೇಜಪುರಕ್ಕೆ ಬಂದಾಗೆಲ್ಲ ’ಕನ್ನಡದ ಹಿರಿಯ ಬರಹಗಾರ, ಪತ್ರಕರ್ತ ದಿವಂಗತ ’ಕಾಮರೂಪಿ’ ಎಂದೇ ಪ್ರಸಿದ್ಧರಾಗಿದ್ದ(ಎಂ.ಎಸ್.ಪ್ರಭಾಕರ) ಅವರು ತಪ್ಪದೇ ನೆನಪಾಗುತ್ತಾರೆ. ಅವರ ಮಾತುಗಳು ನೆನಪಾಗುತ್ತವೆ. ಅರ್ಧ ಶತಮಾನ ಆಸ್ಸಾಮಿನಲ್ಲೇ ಕಳೆದವರಲ್ಲವೇ ಅವರು. ಗೌಹಾಟಿ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡಿದವರು. ಎಕನಾಮಿಕ್ಅಂಡ್ಪೊಲಿಟಿಕಲ್ವೀಕ್ಲಿ` ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ನಂತರ `ದಿಹಿಂದೂ` ಪತ್ರಿಕೆಯಲ್ಲಿ ಈಶಾನ್ಯ ಭಾರತ ಹಾಗೂ ದಕ್ಷಿಣ ಆಫ್ರಿಕದ ವಿಶೇಷ ಬಾತ್ಮೀದಾರರಾಗಿ ಸೇವೆ ಸಲ್ಲಿಸಿ ೨೦೦೨ರಲ್ಲಿ ನಿವೃತ್ತರಾಗಿ ಕೋಲಾರಕ್ಕೆ ಮರಳಿದ್ದರು. ಅಸ್ಸಾಮಿನ ನಂಟಿನಿಂದಾಗಿಯೇ ಅವರನ್ನೊಮ್ಮೆ ಕೋಲಾರಕ್ಕೆ ಹೋಗಿ ಭೇಟಿಯಾಗಿ ಬಂದಿದ್ದೆವು.
ಈಗ ಇಲ್ಲಿ ಇಡೀ ಊರೇ ಕುಂಬಾರನ ಒಲೆಗೂಡು, ಕಾದ ಕಬ್ಬಿಣ, ಕಾದ ಕುಲುಮೆ ಆದರೆ ಅಲ್ಲಿ ದಳದಳ ಬೆವರು ಇಳಿಯುವ ಬೇಸಿಗೆಯಿತ್ತು. ಜೊತೆಗೆ ಹೀಗೆ ಬಂದು ಸುರಿದು ಖಾಲಿಯಾಗಿ ಹೋಗುವ ಮೋಡಗಳು. ಮನೆಯ ಗೋಡೆಗಳು, ನೆಲವೂ ಸುಡು ಸುಡು ಕಾದಿವೆ. ಯಾವ ವಸ್ತುವನ್ನು ಮುಟ್ಟಿದರೂ ಅವು ಬಿಸಿಯಗಿ ಸಿಟ್ಟಲ್ಲಿ ಕೂತಿರುವಂತೆ ತೋರುತ್ತವೆ. ಟೇಬಲ್ ಕುರ್ಸಿ, ದಿಂಬು ದಿವಾನು ಎಲ್ಲವೂ !! ಎಲ್ಲೆಂದರಲ್ಲಿ ಕಾದು ಜೀವ ಸುಡುವ ಅನುಭವ. ಬೆಂಕಿಯುಗುಳುವ ನೆಲ, ಚುರುಗುಡುವ ರಸ್ತೆ, ಕಾಯುವ ನೆತ್ತಿ, ಬಿಸಿ ಗಾಳಿ, ಮೇಲಿನ ಟ್ಯಾಂಕಿನ ನೀರು ಕಾದು ಬೆಳಗಿನ ಐದಕ್ಕೂ ಬಿಸಿ ನೀರು ರಾತ್ರಿ ಹತ್ತಕ್ಕೂ ಬಿಸಿ ಬಿಸಿ ನೀರು. ಹಾಗೆ ಅಕ್ಕಿ ಬೇಯುವುದಿದ್ದರೇ ಎಂದು ನಾನೂ ಭುವನನಂತೆ ಯೋಚಿಸುತ್ತೇನೆ. ದೆಹಲಿಯ ಬೇಸಿಗೆಯೆಂದರೆ ಡಿಟಿಸಿ ಬಸ್ಸಿದ್ದಂತೆ. ತನ್ನ ಪಾಡಿಗೆ ತಾನು ಬರುತ್ತದೆ ಹೋಗುತ್ತದೆ, ಅದರ ಅವ್ಯವಸ್ಥೆಯನ್ನು ಸಹಿಸಲೇ ಬೇಕು! ಯಾರೂ ಏನೂ ಮಾಡುವ ಹಾಗಿಲ್ಲ! ನೀವು ಬೇಕಾದರೆ ಹತ್ತಿ ಇಲ್ಲಾ ಬಿಡಿ.
ದೆಹಲಿಯ ಬಿಸಿಲು ಸೆಕೆಯಲ್ಲಿ ತಲೆಗೆ ಟವಲ್ಲೋ, ಪಂಜೆಯನ್ನೋ ಸುತ್ತಿಕೊಂಡು ಬೆವರು ಸುರಿಸಿಕೊಳ್ಳುತ್ತ ಪ್ರಯಾಣಿಕರಿಗೆ ಸಿಡಿಮಿಡಿ ಮಾಡುತ್ತ, ವಿನಾಕಾರಣ ದುಮುಗುಡುತ್ತ ಬಸ್ಸು ಓಡಿಸುವ ಚಾಲಕರು, ಕಿರುಚಿಕೊಳ್ಳುವ ಕಂಡಕ್ಟರುಗಳು. ಉರಿ ಧಗೆಯಲ್ಲಿ ಹೊರಗಿನ ತಾಪದ ಝಳ ತಲೆಗೇರಿ, ತಲೆಯಿಂದ ಮಿದುಳಿಗೂ ನುಗ್ಗಿ, ಮೈ ಸೇರಿ ಎಲ್ಲವನ್ನೂ ಮುರುಟಿಸಿ ಖಾಲಿ ಮಾಡಿ ಕೊನೆಗೆ ಏನೂ ಇಲ್ಲದ ಜಗಳಕ್ಕೆ – ವಾದಕ್ಕೆ ನಿಲ್ಲುವ ಈ ತಾಪದ ಪರಿಯನ್ನು ಸಹಿಸಿಕೊಳ್ಳುತ್ತಲೇ ಈ ಊರಿನಲ್ಲಿ ಕೆಲವರು ಕಾಲು ಶತಮಾನವನ್ನು, ಹಲವರು ಅರ್ಧಶತಮಾನವಕ್ಕೂ ಮೀರಿ ಈ ಬರ್ಬರವಾಗಿ ಉರಿಯುವ ಧಗೆಯಲ್ಲಿ ಜೀವನ ಸಾಗುವುದನ್ನು ನೋಡಿದಾಗೆಲ್ಲ ನಾನು ಕೇಳಿಕೊಳ್ಳುವ ಪ್ರಶ್ನೆ ಒಂದೇ- ಬದುಕೆಂದರೆ ಕಾಲಪ್ರವಾಹದೊಂದಿಗೆ ತನ್ನನ್ನು ತಾನು ಕಾಪಾಡುತ್ತ ಸಾಗುವ ಹಾಯಿದೋಣಿ. ಅದು ಕಾಲಪ್ರವಾಹದ ಅದ್ಭುತ ಮಾಯಾಜಾಲ! ಎಲ್ಲವನ್ನೂ ಕೊಚ್ಚಿಕೊಂಡು ಹೋಗಬಲ್ಲುದು, ನಿಧಾನವಾಗಿ ಅಣು ಅಣುವಾಗಿ ಹಿಂಡಿಹಾಕಬಲ್ಲುದು! ಮೆಲ್ಲ ಮೆಲ್ಲಗೆ ತೇಲಿಸಬಲ್ಲದು. ಬೇಡವಾದರೆ ಮುಳುಗಿಸಲೂ ಬಲ್ಲದು. ಸ್ವತಃ ನಾನೇ ನಾಲ್ಕು ದಶಕಗಳನ್ನು ಕಳೆದೆ. ಅಬ್ಬಾ..ನಾವೆಲ್ಲ ಹೇಗೆ ಇಷ್ಟು ಸಂವತ್ಸರಗಳನ್ನು ಇಲ್ಲಿ ಕಳೆದೆವು ಎನಿಸುತ್ತದೆ. ಇಂಥ ಸೆಕೆ ತಾಪದ ಸೊಬಗೂ, ಆ ಪರಿಯ ಛಳಿಯ ಮುದವೂ ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ದಿಲ್ಲಿ ಎಂದರೆ ಬರೀ ಒಂದು ಹೆಸರಿನ ಊರಲ್ಲ. ಇಲ್ಲಿ ಬದುಕಿನ ಎಲ್ಲ ಬರ್ಬರತೆಯೂ ಇದೆ, ನಿರ್ದಯತೆ ಇದೆ. ಮಾರ್ದವತೆ ಇದೆ. ಆಗಾಗ ಮೋಡ ಸರಿದು ಹೂಬಿಸಿಲು ಸೂರೆಗೊಳ್ಳುವಂತಹ ಚೆಲುವೂ ಇದೆ. ಬಿಸಿಲು ನೆಳಲಿನ ಬದುಕು ಎನ್ನುವುದು ಇದಕ್ಕೇನೆ ಇರಬೇಕು.

ಇಲ್ಲಿ ಬೇಸಿಗೆಯಲ್ಲಿ ಹೆಚ್ಚಿನ ಜನ ಮನೆಯ ಅಂಗಳದಲ್ಲಿ ಇಲ್ಲಾ ತಾರಸಿಯ ಮೇಲೆ ಚಾರ್ಪಾಯಿ ಹಾಕಿಕೊಂಡು ಮಲಗುತ್ತಾರೆ. ತಂಪಾಗಿಸಲು ಸಾಯಂಕಾಲ ನೀರು ಹಾಕಿ ತೊಳೆದು ತಣಿಸಿದರೂ ಧಗೆ ಕಡಿಮೆಯಾಗಿರುವುದಿಲ್ಲ. ಸಂಜೆ ಬೇಗ ಅಡುಗೆ ಮಾಡಿ ಮುಗಿಸಿ ಬೇಸರದ ಸಂಜೆಗೆ ಹಾಳು ಹರಟೆಗೆ ತೊಡಗುತ್ತಾರೆ ಇಲ್ಲಿನ ಜನ. ಸೂರ್ಯಾಸ್ತ ಸಂಜೆ ಏಳಕ್ಕೆ ಇಲ್ಲಾ ಏಳರ ನಂತರ. ಸುರ್ಯೋದಯ ಬೆಳಗಿನ ಐದೂವರೆಗೆ! ಅಬ್ಬಾ! ಎಷ್ಟು ದೀರ್ಘ ಹಗಲು! ವಿದ್ಯುತ್ತಿನ ಯಾವ ಭರೋಸೆಯೂ ಇರುವುದಿಲ್ಲ ಮತ್ತು ಬಿಸಿ ಬಿಸಿ ಊಟವೂ ಬೇಕೆನಿಸುವುದಿಲ್ಲ. ದಿನಾ ಲೋಡ್ ಶೆಡ್ಡಿಂಗ್ ಇದ್ದದ್ದೇ. ನಾವು ಮತ್ತು ಮಂಗಳೂರು ಅಜ್ಜಿ ಮೊದಲನೇ ಮಜಲಿನಲ್ಲಿದ್ದು ಸ್ವಲ್ಪ ಹೊತ್ತು ಬಾಲ್ಕನಿಯಲ್ಲೇ ಗಾಳಿಗೆ ಕೂರುತ್ತಿದ್ದೆವು. ನನ್ನಿಂದಾಗಿ ಅವಳು ಮತ್ತೆ ಕನ್ನಡತಿಯಾಗಿದ್ದು. ಇಲ್ಲಾಂದರೆ ಕನ್ನಡ ಮರೆತೇ ಹೋಗಿತ್ತು. ಬೇಡವೆಂದರೂ ಯಾವುದೋ ಗಡವಾಲಿಯನ್ನು ಕಟ್ಟಿಕೊಂಡ ಮಗಳು ಬೇಲಾಳ ಕತೆ. ಆಂಗ್ಲೋ ಇಂಡಿಯನ್ ಟೋನಿಯನ್ನು ಮದುವೆಯಾಗಿ ಮದ್ರಾಸಿನಲ್ಲೇ ನೆಲೆಸಿದ್ದ ಇನ್ನೊಬ್ಬ ಮಗಳ ಬಡತನದ ಕತೆ. ಒಂದೊತ್ತಿನ ಊಟ, ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಿ ಮತ್ತೆ ಆಕೆಯೂ ದಿಲ್ಲಿಗೆ ಬಂದಳು. ಆಗ ಮುನಿರ್ಕಾ ನಾನಿನ್ನು ಬಿಟ್ಟಿರಲಿಲ್ಲ. ತನ್ನ ಮಕ್ಕಳ ಮೊಮ್ಮಕ್ಕಳ ಹಿಂಡಿನಲ್ಲಿ ಆಕೆ ಹಿಂಡಿಹೋಗಿ ನಾನು ಕೆಲಕಾಲ ದೂರಾಗಬೇಕಾಯಿತು. ಸಂಜೆಗೆ ಅಲ್ಲಲ್ಲಿ ತಾರಸಿಗೆ ಹಾರಿದ ನವಿಲುಗಳು ಕಂಡರೆ ಅದೇ ಖುಶಿ ಧಗೆಯ ತಲ್ಲಣವನ್ನು ಮರೆಸುತ್ತಿತ್ತು. ಮಳೆ ಬರುತ್ತದೆ ಇನ್ನೆರಡು ದಿನಗಳಲ್ಲಿ ನೋಡು ಅನ್ನುತ್ತಿದ್ದಳು ಅಜ್ಜಿ. ರಾಜಸ್ಥಾನದಲ್ಲಿ ಇರುಳು ತಂಪಾಗಿರುತ್ತದೆ ಎನ್ನುತ್ತಾರೆ. ಮರಳು ಬೇಗನೇ ಕಾಯುತ್ತದೆ ಮತ್ತು ಬೇಗನೆ ತಣ್ಣಗಾಗುತ್ತದೆ. ಆದರೆ ಒಂದು ಇರುಳು ರಾಜಸ್ಥಾನದಲ್ಲಿ ರಾತ್ರಿ ಕಳೆದರೂ ಆ ತಂಪಿನ ಅನುಭವವಾಗಲಿಲ್ಲ ನನಗೆ. ಈಗ ನಾ ಕಂಡ ದಿಲ್ಲಿ ಬಹಳಷ್ಟು ಬದಲಾಗಿದೆ.
ಬೇಸಿಗೆಯ ಮಟ ಮಟ ಮಧ್ಯಾಹ್ನ ಟನ್ ಟನ್ ಗಂಟೆ ಬಾರಿಸಿಕೊಂಡು ಗಲ್ಲಿಯಲ್ಲಿ ಬರುವ ಕುಲ್ಫಿಯನ್ನು ತಿನ್ನುವ ಮಜವೇ ಬೇರೆಯಿತ್ತು. ಭರ್ಫ ಕಾ ಗೋಲಾ ಚುಸ್ಕಿ ಯಂತೂ ನಾವು ಚಿಕ್ಕವರಿರುವಾಗ ಶಾಲೆ ಹತ್ತಿರ ಬರ್ಫ್ ಹೆರೆದು ಬಣ್ಣದ ಸಿಹಿ ಹಾಕಿ ಕೊಡುತ್ತಿದ್ದ ಐಸ್ ಕ್ಯಾಂಡಿನೇ. ಕಾಲೆ ಕಾಲೇ ಫಾಲ್ಸೆ ಎನ್ನುತ್ತ ಬಿಸಿಲಲ್ಲೂ ಸೈಕಲ್ ತಳ್ಳಿಕೊಂಡು ಮಾರುವವನ ಬುಟ್ಟಿಯಲ್ಲಿ ಚಿಕ್ಕ ಚಿಕ್ಕ ಕಪ್ಪು ಹಣ್ಣುಗಳು! ನಮ್ಮೂರಿನ ಕವಳೆಹಣ್ಣು- ಪರಂಗಿ ಹಣ್ಣನ್ನು ನೆನಪಿಸುತ್ತಿದ್ದವು. ಈಗ ಅವರೆಲ್ಲಿ ಹೋದರೋ ಗೊತ್ತಿಲ್ಲ. ಬೇಸಿಗೆಯ ನಡುಹಗಲಿನಲ್ಲಿ ಓಣಿಯಲ್ಲಿ ಕುಂಟಾಬಿಲ್ಲೆ ಆಡುತ್ತಿದ್ದ ಮಕ್ಕಳೀಗ ಮೊಬೈಲಿನಲ್ಲಿ ಕಳೆದುಹೋಗಿದ್ದಾರೆ. ನಾವೆಲ್ಲ ಏಸೀರೂಮಿನ ಲಾಕಪ್ಪಿನಲ್ಲಿ ಬಂಧಿಯಾಗಿದ್ದೇವೆ.
ಲಾಜಪತ್ ನಗರ, ಎಮ್. ಬ್ಲಾಕ್ ಮಾರ್ಕೆಟ್ ಮುಂತಾದ ಆಯಕಟ್ಟಿನ ಮಾರುಕಟ್ಟೆಗಳಲ್ಲಿ ಇಂಥ ಉರಿಯಲ್ಲೀಗ ಭುಟ್ಟಾ (ಗೋವಿನಜೋಳ) ಬಂದಿವೆ. ಫುಟ್ ಪಾತುಗಳಲ್ಲಿ, ಬಸ್ ಸ್ಟಾಪುಗಳಲ್ಲಿ ಉರಿಬಿಸಿಲಿನ ಪರಿವೆಯಿಲ್ಲದೇ ನಿಗಿ ನಿಗಿ ಕೆಂಡಗಳನ್ನು ಹೊತ್ತಿಸಿಕೊಂಡು ಗೊಂಜಾಳ ಸುಡುವವರನ್ನು ಕಂಡು ದೆಹಲಿಯಲ್ಲೆಲ್ಲ ಗುಪ್ತಗಾಮಿನಿಯಾಗಿ ಹರಿಯುವ ಜೀವನಪ್ರೀತಿ ಆಗಾಧವೆನಿಸುತ್ತದೆ. ಮೊದಲೇ ಬಿಸಿಲಿನ ತಾಪ. ಅದರಲ್ಲಿ ಈ ಜನರು ಸುಡುಗೆಂಡದ ಮುಂದೆ ನಿಂತು ಭುಟ್ಟಾ ಸುಡಿಸಿಕೊಂಡು, ಉಪ್ಪು –ನಿಂಬೆಹಣ್ಣು ಸವರಿಸಿಕೊಂಡು ಮೆಲ್ಲುವ ಭುಟ್ಟಾದ ರುಚಿಯಲ್ಲಿ ನೀರಿಳಿಯುವ ಬೆವರನ್ನೇ ಮರೆತುಹೋಗುವುದನ್ನು ನೋಡಿ ಬೆರಗುಗೊಳ್ಳುತ್ತೇನೆ. ತಂಪುಗೊಳಿಸುವ ಪಾನೀಯಗಳೆಲ್ಲವೂ ಲಭ್ಯ. ಜಲಜೀರಾ, ನಿಂಬೂಪಾನಿ, ಬಂಟಾ ಮಾರುವವ ಕೋಲಿಗೆ ಗೆಜ್ಜೆಕಟ್ಟಿ ಝುಣಝುಣರೆಂದು ಕುಟ್ಟಿ ಗೆಜ್ಜೆಗಳು ಇಂಪಾಗಿ ಉಲಿದು ಗ್ರಾಹಕರನ್ನು ಸೆಳೆಯುವ ಮೋಡಿಗೂ ಸೆಕೆ ಓಡಬೇಕು.
ನಿನ್ನೆಯಿಂದ ಮೋಡ ಕಟ್ಟಿ ಜೋರು ಧೂಳಿನ ಗಾಳಿಯ ಅರ್ಭಟ ಶುರುವಾಗಿದೆ. ನಾಲ್ಕಾರು ಹನಿ ಮಳೆ ಬಿದ್ದು ತುಸು ತಂಪಾಗಿ ವಾರದಿಂದ ಬಣ್ಣಗೆಟ್ಟ ಗುಲಮೊಹರ್ ಮತ್ತೆ ಕೆಂಪಾಗಬಹುದೇನೋ ಎಂಬ ಆಸೆಯನ್ನು ಹೊತ್ತು ಬಾಲ್ಕನಿಯಲ್ಲಿ ಕಣ್ಣಿಟ್ಟು ಕೂತಿದ್ದೇನೆ. ರಾತ್ರಿ ಮಳೆಯಾಗಿ ತೊಯ್ದ ಮುಂಜಾವು ಹಿತದ ಪರಿಮಳ ಸೂಸಿ ಬರುವುದೇನೋ ಎಂದು ಕನಸು ಕಾಣುತ್ತ ನಲವತ್ತು ವರ್ಷದ ಹಿಂದಿನ ದಿಲ್ಲಿಯನ್ನು ಹುಡುಕುತ್ತಿದ್ದೇನೆ.

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ