ವರ್ತಮಾನ | ‘ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿ ಬ್ರಿಟೀಷರ ಏಜೆಂಟ್’ ಮತ್ತಿತರ ಸುಳ್ಳುಗಳು

Date:

Advertisements
ಗಾಂಧಿ ಕುರಿತ ತಪ್ಪು ಮಾಹಿತಿ ಹೊರಬಿದ್ದ ಕೂಡಲೇ, ಅದಕ್ಕೆ ಸಂಬಂಧಿಸಿದ ಅಸಲಿಯತ್ತೇನು ಎಂಬುದನ್ನು ಪುರಾವೆಗಳ ಸಮೇತ ಮನದಟ್ಟು ಮಾಡಿಕೊಡುವ ಜರೂರತ್ತಿದೆ. ಇದಕ್ಕಾಗಿ ಪ್ರತ್ಯೇಕ ಜಾಲತಾಣವನ್ನೇ ತೆರೆದು, ಗಾಂಧಿ ಕುರಿತು ಹರಡಲಾಗಿರುವ ಎಲ್ಲ ಮಿಥ್ಯೆ ಮತ್ತು ಅದಕ್ಕೆ ಸಂಬಂಧಿಸಿದ ವಾಸ್ತವಾಂಶಗಳನ್ನು ಅಲ್ಲಿ ಲಭ್ಯವಾಗಿಸಬೇಕಿದೆ…

(ಆಡಿಯೊ ಪೂರ್ಣಪ್ರಮಾಣದಲ್ಲಿ ಸಿಗದಿದ್ದಲ್ಲಿ, ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ‘ಸ್ಪಾಟಿಫೈ’ನಲ್ಲಿ ಕೇಳಿ…)

“ಭಗತ್‍ ಸಿಂಗ್, ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರು ಅಂದ್ರೆ ನಾವು ಒಪ್ತೀವಿ. ಆದ್ರೆ ಗಾಂಧೀಜಿ ಸ್ವಾತಂತ್ರ್ಯ ಹೋರಾಟಗಾರ ಅನ್ನೋದು ಸುಳ್ಳು. ಗಾಂಧಿ ಬ್ರಿಟೀಷರ ಏಜೆಂಟ್…”

-ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ವೇಳೆ ಸಹೋದ್ಯೋಗಿಯೊಬ್ಬರು ವ್ಯಕ್ತಪಡಿಸಿದ್ದ ಅನಿಸಿಕೆ ಇದು. ಅವರ ಮಾತಿಗೆ ಅಲ್ಲಿ ನೆರೆದಿದ್ದ ಇನ್ನೂ ಕೆಲವರು ತಮ್ಮ ಸಹಮತ ಸೂಚಿಸಿದ್ದರು. ಗಾಂಧಿ ಕುರಿತು ದ್ವೇಷ ಕಾರುವ, ಗೋಡ್ಸೆ ಮಾಡಿದ್ದೇ ಸರಿ ಎಂದು ವಾದಿಸುವವರ ಮಾತುಗಳಿಗೆ ಮೊದಲೇ ಕಿವಿಯಾಗಿದ್ದರಿಂದ ಈ ಅನಿಸಿಕೆ ಆಶ್ಚರ್ಯವನ್ನೇನೂ ಉಂಟುಮಾಡಿರಲಿಲ್ಲ.

Advertisements

ಗಾಂಧಿ ಅವರ ವಿಚಾರಗಳು ಮತ್ತು ಬದುಕಿದ ರೀತಿಯ ಕುರಿತು ಎಲ್ಲರಿಗೂ ಸಹಮತ ಇರಬೇಕೆಂದೇನಿಲ್ಲ. ಆದರೆ, ವಿರೋಧಿಸುವ ಸಲುವಾಗಿ ಆಯ್ದುಕೊಂಡ ಸಂಗತಿಗಳು ವಸ್ತುನಿಷ್ಠ ಆಗಿರಬೇಕಲ್ಲವೇ? ಸಾಮಾಜಿಕ ಮಾಧ್ಯಮಗಳ ಮೂಲಕ ಹರಡಲ್ಪಟ್ಟ ತಪ್ಪು ಮಾಹಿತಿಯೇ ನಿಜವೆಂದು ಭಾವಿಸಿ, ಗಾಂಧಿ ಕುರಿತು ಅಭಿಪ್ರಾಯ ರೂಪಿಸಿಕೊಂಡ ಹಲವರು ನಮ್ಮ ನಡುವೆ ಇದ್ದಾರೆ.

“ಗಾಂಧೀಜಿ ಬ್ರಿಟಿಷರ ಏಜೆಂಟ್. ಅವರಿಗೆ ಬ್ರಿಟಿಷರು ಪ್ರತಿ ತಿಂಗಳು ನೂರು ರೂಪಾಯಿ ಪೆನ್ಷನ್ ನೀಡುತ್ತಿದ್ದರು…” “ಗಾಂಧೀಜಿಗೆ ಮಹಾತ್ಮನ ಪಟ್ಟ ಕೊಟ್ಟವರು ಬ್ರಿಟಿಷರು. ಆದರೆ, ನಾವು ಈ ಬಿರುದನ್ನು ಜನರೇ ಕೊಟ್ಟಿದ್ದಾರೆ ಅಂತ ಅಂದುಕೊಂಡಿದ್ದೆವು…” – ಇವು ಗಾಂಧಿ ಕುರಿತು ಈಗಾಗಲೇ ಹರಿಬಿಡಲಾಗಿರುವ, ಇಂದಿಗೂ ಹಂಚಲ್ಪಡುತ್ತಿರುವ ತಪ್ಪು ಮತ್ತು ತಿರುಚಲ್ಪಟ್ಟ ಮಾಹಿತಿಗೆ ಉದಾಹರಣೆಗಳು.

ಗಾಂಧೀಜಿ ಅವರನ್ನೂ ಒಳಗೊಂಡಂತೆ ಯಾರದೇ ವ್ಯಕ್ತಿತ್ವ, ವಿಚಾರಗಳನ್ನು ವಿಮರ್ಶಿಸುವ ಮುನ್ನ ಅವರ ಕುರಿತು ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಸಂಗ್ರಹಿಸುವುದು, ಅರಿತುಕೊಳ್ಳುವುದು ಆದ್ಯತೆ ಆಗಬೇಕಲ್ಲವೇ? ಸಮಾಜ ಚಲನಶೀಲ ಆಗಿರುವುದರಿಂದ ವರ್ತಮಾನದ ಸರಿ-ತಪ್ಪುಗಳೊಂದಿಗೆ ಸ್ವಾತಂತ್ರ್ಯಪೂರ್ವ ಕಾಲಘಟ್ಟದ ಸಾಮಾಜಿಕ ಮೌಲ್ಯಗಳನ್ನು ಸಮೀಕರಿಸುವುದು ಸಮಸ್ಯಾತ್ಮಕ. ಗಾಂಧಿ ಸೇರಿದಂತೆ ಅಳಿದುಹೋದವರ ವ್ಯಕ್ತಿತ್ವದ ವಿಮರ್ಶೆ ಮಾಡುವಾಗ, ಅವರು ಬದುಕಿದ ಕಾಲಘಟ್ಟದ ಮೌಲ್ಯಗಳು, ಸರಿ-ತಪ್ಪುಗಳು ಏನಿದ್ದವು ಎಂಬುದನ್ನು ಪರಿಗಣಿಸಬೇಕಲ್ಲವೇ?

ಗಾಂಧಿ ಕುರಿತು ತಪ್ಪು ಮಾಹಿತಿ ಹರಡಿ, ದ್ವೇಷ ಬಿತ್ತುವ ಕಾರ್ಯಸೂಚಿ ಸಮಾಜದ ಮೇಲೆ ಬೀರಬಹುದಾದ ದುಷ್ಪರಿಣಾಮಕ್ಕೆ ಕೆಲ ತಿಂಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ ನಡೆದ ಗಾಂಧಿ ಪ್ರತಿಮೆ ಧ್ವಂಸ ಪ್ರಕರಣವೂ ಒಂದು ನಿದರ್ಶನ. ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುತ್ತ, ಒಡೆದು ಆಳುವ ರಾಜಕೀಯ ನೀತಿಗೆ ಅಂಟಿಕೊಂಡಿರುವ ಪಕ್ಷ ಮತ್ತು ಅದರ ನೆಲೆ ಭದ್ರಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಸಂಘಟನೆಗಳು ಕೂಡ ಗಾಂಧಿ ವ್ಯಕ್ತಿತ್ವಕ್ಕೆ ಮಸಿ ಬಳಿಯುವಲ್ಲಿ ತಮ್ಮ ಹಿತ ಅಡಗಿದೆ ಎಂಬಂತೆ ನಡೆದುಕೊಳ್ಳುತ್ತಿವೆ. ಚಿತ್ರದುರ್ಗ ನಗರದಲ್ಲಿ ಅಕ್ಟೋಬರ್ 8ರಂದು ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಗಾಂಧಿ ಅವರ ಹಂತಕ ಗೋಡ್ಸೆ ಭಾವಚಿತ್ರವನ್ನು ಹೊತ್ತು ಮೆರೆಸಲಾಯಿತು. ಗೋಡ್ಸೆಯನ್ನು ಯಾವ ಕಾರಣಕ್ಕೆ ಆರಾಧಿಸಲಾಗುತ್ತಿದೆ ಎಂದು ಮನಗಾಣಲು ಹೆಚ್ಚೇನೂ ತಿಣುಕಾಡಬೇಕಿಲ್ಲ. ಗಾಂಧಿಯವರನ್ನು ಕೊಂದ ವ್ಯಕ್ತಿ ಎಂಬ ಕಾರಣಕ್ಕಾಗಿಯೇ ಗೋಡ್ಸೆಯನ್ನು ಆರಾಧಿಸುವ ಪರಿಪಾಠ ವ್ಯಾಪಕವಾಗುತ್ತ ಬಂದು, ಇದೀಗ ಗಣೇಶೋತ್ಸವಗಳ ಒಳಗೂ ತೂರಿಕೊಳ್ಳತೊಡಗಿದೆ. ದೇವರ ಹೆಸರಿನಲ್ಲಿ ನಡೆಯುವ ಉತ್ಸವಗಳು ಕೊಲೆಗಾರರನ್ನು ಹುತಾತ್ಮರನ್ನಾಗಿಸಲು ಬಳಕೆಯಾಗುತ್ತಿವೆ. ಇಂತಹ ಬೆಳವಣಿಗೆಗಳಿಗೆ ಹೆಚ್ಚಿನ ಪ್ರತಿರೋಧವೂ ವ್ಯಕ್ತವಾಗುತ್ತಿಲ್ಲ. ಈ ಬೆಳವಣಿಗೆಯು, ಗಾಂಧೀಜಿ ಕುರಿತು ದ್ವೇಷ ಹರಡುವ ಕಾರ್ಯಸೂಚಿ ಅದೆಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರುತ್ತಿದೆ ಎಂಬುದಕ್ಕೆ ಹಿಡಿದ ಕನ್ನಡಿಯೂ ಹೌದು.

ಶಾಲಾ ಪಠ್ಯಪುಸ್ತಕಗಳಲ್ಲಿ ಕಟ್ಟಿಕೊಡುವ ‘ಮಹಾತ್ಮ’ನ ವ್ಯಕ್ತಿತ್ವವನ್ನು ಬದಿಗೆ ಸರಿಸಿ, ತಮ್ಮ ಕಾರ್ಯಸೂಚಿ ಜಾರಿಯ ಭಾಗವಾಗಿ ಪಟ್ಟಭದ್ರ ಹಿತಾಸಕ್ತಿಗಳು ನೀಡುತ್ತಿರುವ ವ್ಯಕ್ತಿಚಿತ್ರವನ್ನೇ ಅಸಲಿ ಎಂದು ಭಾವಿಸಿ ಗಾಂಧಿ ಕುರಿತು ತೀವ್ರ ದ್ವೇಷ ಭಾವನೆ ಬೆಳೆಸಿಕೊಂಡಿರುವ ಯುವಸಮೂಹವೇ ನಮ್ಮ ನಡುವೆ ಇದೆ. ಹೀಗೆ ಸಲ್ಲದ ಕಾರಣಗಳಿಗಾಗಿ ಗಾಂಧಿ ಅವರನ್ನು ದ್ವೇಷಿಸತೊಡಗಿರುವ ಸಮೂಹದ ಎದುರು ವಾಸ್ತವಾಂಶಗಳನ್ನು ತೆರೆದಿಡುವ ಪ್ರಯತ್ನಗಳ ಅನುಪಸ್ಥಿತಿ ಎದ್ದುಕಾಣುತ್ತಿದೆ. ಗಾಂಧಿ ಕುರಿತಾದ ವಿಮರ್ಶೆ ವಾಸ್ತವಿಕ ನೆಲೆಗಟ್ಟಿನಲ್ಲಿರಬೇಕೇ ಹೊರತು ಕಪೋಲಕಲ್ಪಿತ ಅಥವಾ ತಿರುಚಲ್ಪಟ್ಟ ಅಂಶಗಳ ಆಧಾರದಲ್ಲಿ ಅಲ್ಲ ಎಂಬುದನ್ನು ಮನಗಾಣಿಸುವುದು ಕೂಡ ಗಾಂಧಿ ಚಿಂತನೆ ಪಸರಿಸುವ ಕೆಲಸದ ವ್ಯಾಪ್ತಿಗೆ ಬರಬೇಕಲ್ಲವೇ?

ಗಾಂಧಿ ವಿಚಾರಧಾರೆಯನ್ನು ಜನರೆಡೆಗೆ ಕೊಂಡೊಯ್ಯುವ ಸಲುವಾಗಿ ಸಾಕಷ್ಟು ಶ್ರಮ, ಸಂಪನ್ಮೂಲಗಳನ್ನು ವಿನಿಯೋಗಿಸಲಾಗುತ್ತಿದೆ. ಅಕಾಡೆಮಿಕ್ ವಲಯದಲ್ಲಿ ಕೂಡ ಗಾಂಧಿ ಚಿಂತನೆ ಕುರಿತ ಅಧ್ಯಯನಕ್ಕೆ ಮನ್ನಣೆ ನೀಡುತ್ತ ಬರಲಾಗಿದೆ. ಇದರ ಭಾಗವಾಗಿ ಕೆಲವು ವಿಶ್ವವಿದ್ಯಾಲಯಗಳಲ್ಲಿ ಗಾಂಧಿ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಹಲವು ಸಂಘ-ಸಂಸ್ಥೆಗಳು ಕೂಡ ಗಾಂಧಿ ಚಿಂತನೆ ಪಸರಿಸುವ ಕೆಲಸದಲ್ಲಿ ತೊಡಗಿಕೊಂಡಿವೆ. ಇದರ ಭಾಗವಾಗಿ ಪುಸ್ತಕಗಳ ಪ್ರಕಟಣೆ, ವಿಚಾರ ಸಂಕಿರಣ, ಕಾರ್ಯಾಗಾರ, ಅಧ್ಯಯನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.

ಗಾಂಧಿ ವಿಚಾರಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಇಷ್ಟೆಲ್ಲ ಶ್ರಮ, ಸಂಪನ್ಮೂಲಗಳ ಹೂಡಿಕೆ ಆಗುತ್ತಿದ್ದರೂ, ಗಾಂಧಿ ಕುರಿತು ಹಬ್ಬಿಸಲಾಗುತ್ತಿರುವ ತಪ್ಪು ಮಾಹಿತಿಗೆ ಪ್ರತಿಯಾಗಿ ವಾಸ್ತವವನ್ನು ಮನದಟ್ಟು ಮಾಡಿಕೊಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಗಾಂಧಿ ಕುರಿತು ಹರಿಬಿಡಲಾದ ಕೆಲ ತಪ್ಪು ಮಾಹಿತಿಗೆ ಸಂಬಂಧಿಸಿದಂತೆ ಫ್ಯಾಕ್ಟ್‌ಚೆಕ್ ಮಾಡಿ ವಾಸ್ತವ ತಿಳಿಸುವ ಕೆಲಸವನ್ನು ಬಿಡಿಬಿಡಿಯಾಗಿ ಫ್ಯಾಕ್ಟ್‌ಚೆಕ್ ತಾಣಗಳು ಮಾಡುತ್ತಿವೆಯಾದರೂ, ಅದಷ್ಟೇ ಸಾಲದಾಗಿದೆ.

ಸಾಮಾಜಿಕ ಮಾಧ್ಯಮಗಳು, ರಾಜಕಾರಣಿಗಳ ಭಾಷಣಗಳು, ಬರಹ, ವಿಡಿಯೊ, ತಿರುಚಲ್ಪಟ್ಟ ಫೋಟೊ… ಹೀಗೆ ಯಾವ ಬಗೆಯಲ್ಲಾದರೂ ಗಾಂಧಿ ಕುರಿತ ತಪ್ಪು ಮಾಹಿತಿ ಹೊರಬಿದ್ದ ಕೂಡಲೇ, ಅದಕ್ಕೆ ಸಂಬಂಧಿಸಿದ ಅಸಲಿಯತ್ತೇನು ಎಂಬುದನ್ನು ಪುರಾವೆಗಳ ಸಮೇತ ಮನದಟ್ಟು ಮಾಡಿಕೊಡುವ ಜರೂರತ್ತಿದೆ. ಇದಕ್ಕಾಗಿ ಪ್ರತ್ಯೇಕ ಜಾಲತಾಣವನ್ನೇ ತೆರೆದು, ಗಾಂಧಿ ಕುರಿತು ಹರಡಲಾಗಿರುವ ಎಲ್ಲ ಮಿಥ್ಯೆ ಮತ್ತು ಅದಕ್ಕೆ ಸಂಬಂಧಿಸಿದ ವಾಸ್ತವಾಂಶಗಳನ್ನು ಅಲ್ಲಿ ಲಭ್ಯವಾಗಿಸಬೇಕಿದೆ. ಹೀಗೆ ರೂಪುಗೊಳ್ಳುವ ಜಾಲತಾಣ ಸ್ಥಳೀಯ ಭಾಷೆಗಳಲ್ಲೂ ಮಾಹಿತಿ ಒದಗಿಸತೊಡಗಿದರೆ ಹೆಚ್ಚು ಪರಿಣಾಮಕಾರಿ ಆಗಬಲ್ಲದು.

ಗಾಂಧಿಯ ವ್ಯಕ್ತಿತ್ವ ಮತ್ತು ವಿಚಾರಧಾರೆಗೆ ಸಂಬಂಧಿಸಿದ ಪ್ರತ್ಯೇಕ ಮತ್ತು ಸಮಗ್ರ ಫ್ಯಾಕ್ಟ್‌ಚೆಕ್ ತಾಣ ಇದುವರೆಗೂ ರೂಪುಗೊಳ್ಳದಿರುವ ಕುರಿತು ಗಾಂಧೀಜಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಕೂಡ ವಿಷಾದ ವ್ಯಕ್ತಪಡಿಸಿದ್ದರು; ‘ನ್ಯೂಸ್‍ಲಾಂಡ್ರಿ’ ಮಾಧ್ಯಮ ಸಂಸ್ಥೆಯ ‘ಹಫ್ತಾ’ ಪಾಡ್‍ಕಾಸ್ಟ್‌ನಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ವೇಳೆ ಅವರು ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಎಚ್ ಕೆ ಶರತ್
ಎಚ್ ಕೆ ಶರತ್
ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಮೇಷ್ಟ್ರು. ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳ ಕುರಿತು ತಣಿಯದ ಆಸಕ್ತಿ. ಪುಸ್ತಕ ಪ್ರಕಾಶನ ಮತ್ತು ಮಾರಾಟ ಮತ್ತೊಂದು ಇಷ್ಟದ ಕಸುಬು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X