ಭೂಮ್ತಾಯಿ | ಸಮುದ್ರ ಮಟ್ಟ ಏರಿಕೆ: ಕರಾವಳಿ ತೀರ ಪ್ರದೇಶಗಳಿಗೆ ತೀರದ ಆತಂಕ

Date:

Advertisements

2024ರಲ್ಲಿ ಸಮುದ್ರ ಮಟ್ಟದಲ್ಲಿ ಉಂಟಾಗಿರುವ ಏರಿಕೆ ಕಳೆದ ಮೂರು ದಶಕಗಳಲ್ಲಿ ದಾಖಲಾದ ಏರಿಕೆಯಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣದ್ದು ಎಂಬುದನ್ನು ನಾಸಾ ವರದಿ ಹೇಳುತ್ತಿದೆ. ಹವಾಮಾನ ಬದಲಾವಣೆಯಿಂದ ಸಾಗರದಲ್ಲಿ ಏರುತ್ತಿರುವ ತಾಪಮಾನ ಸಾಗರದ ಜೀವವೈವಿಧ್ಯತೆಗೆ, ಹವಳದ ದಂಡೆಗಳಿಗೆ ಮಾರಕವಾಗಿ ಪರಿಣಮಿಸುತ್ತಿದ್ದರೆ, ಹೆಚ್ಚುತ್ತಿರುವ ಸಮುದ್ರ ಮಟ್ಟ ಕರಾವಳಿ ತೀರ ಪ್ರದೇಶದ ಸವೆತಕ್ಕೆ ಕಾರಣವಾಗುತ್ತ ಇಲ್ಲಿನ ಪರಿಸರ ವ್ಯವಸ್ಥೆಗೆ ಹಾಗು ಜನಜೀವನಕ್ಕೆ ಆತಂಕವನ್ನೊಡ್ಡುತ್ತಿದೆ. ʻಅಬ್ಧಿಯುಮೊರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇʼ ಎಂಬಂತೆ ಶರಧಿ ತನ್ನ ಪರಿಧಿ ದಾಟಿದಾಗ ಉಂಟಾಗುವ ಅನಾಹುತಗಳ ಬಗೆಗೊಂದು ವಿವರಣೆ ಇದು.

`ಅಧಿಕ ತಾಪಮಾನದ ವರ್ಷ’ ಎಂದು ದಾಖಲಾಗಿ ಹವಾಮಾನ ವೈಪರೀತ್ಯಗಳ ಕುರಿತಾಗಿ ನಿರ್ಲಕ್ಷ್ಯ ತಾಳಿದ್ದ ಜಗತ್ತನ್ನು ಮತ್ತೊಮ್ಮೆ ಎಚ್ಚರಿಸಿದ ಹೋದ ವರ್ಷ 2024. ಈ ವರ್ಷದಲ್ಲಿ ಕೇವಲ ಭೂಗೋಳ, ವಾಯುಗೋಳ ಮಾತ್ರವಲ್ಲ ಜಲಗೋಳದಲ್ಲಿಯೂ ಗಂಭೀರ ರೂಪದ ಸ್ಥಿತ್ಯಂತರಗಳಾಗಿವೆ  ಎಂಬುದನ್ನು ಅಮೆರಿಕದ ನಾಸಾದ ವರದಿ ಬಹಿರಂಗಗೊಳಿಸಿದೆ. 2024ರಲ್ಲಿ ಜಗತ್ತು ಊಹಿಸಿದ್ದಕ್ಕಿಂತಲೂ ಹೆಚ್ಚು ವೇಗವಾಗಿ ಸಮುದ್ರ ಮಟ್ಟದಲ್ಲಿ ಏರಿಕೆಯಾಗಿದೆ ಮತ್ತು ಈ ಏರಿಕೆ ಕಳೆದ ಮೂರು ದಶಕಗಳಲ್ಲಿ ದಾಖಲಾದ ಸಮುದ್ರ ಮಟ್ಟದ ಏರಿಕೆಯಲ್ಲಿಯೇ  ಅತ್ಯಂತ ಹೆಚ್ಚಿನ ಪ್ರಮಾಣದ್ದು ಎಂಬುದನ್ನು ನಾಸಾ ವರದಿ ಹೇಳುತ್ತಿದೆ. ಸಾಮಾನ್ಯವಾಗಿ ಎಲ್ಲಾ ವರ್ಷಗಳಂತೆ 2024ರಲ್ಲಿಯೂ ಸಮುದ್ರಮಟ್ಟದಲ್ಲಿ 0.43 ಸೆಂ.ಮೀ ಏರಿಕೆಯಾಗಬಹುದು ಎಂದು ಊಹಿಸಲಾಗಿದ್ದರೆ, ಎಲ್ಲಾ ಅಂದಾಜುಗಳನ್ನೂ ಮೀರಿ  ಸಮುದ್ರಮಟ್ಟದಲ್ಲಿ 0.59 ಸೆಂಮೀ ಏರಿಕೆಯಾಗಿದೆ.

ನಾಸಾ 1993ರಿಂದಲೂ ಉಪಗ್ರಹಗಳ ಮೂಲಕ ಸಮುದ್ರದ ಮಟ್ಟದಲ್ಲಿ ಆಗುತ್ತಿರುವ ಏರಿಕೆಯ ಪ್ರಮಾಣವನ್ನು ಅಧ್ಯಯನ ಮಾಡುತ್ತಿದೆ. 2023 ರವೇಳೆಗೆ ಅದು ಬಹಿರಂಗ ಪಡಿಸಿದ 30 ವರ್ಷಗಳ ಉಪಗ್ರಹದ ದತ್ತಾಂಶಗಳ ದಾಖಲೆಯು ಅಧ್ಯಯನದ ಆರಂಭದ ದಿನಗಳಿಗೆ ಹೋಲಿಸಿದರೆ ಬಹುತೇಕ ಈಗ  ಸಮುದ್ರದ ಮಟ್ಟ ದುಪ್ಪಟ್ಟು ಎಂದರೆ ಸುಮಾರು 10 ಸೆಂಮೀನಷ್ಟು ಹೆಚ್ಚಾಗಿದೆ ಎಂದು ಹೇಳುತ್ತಿವೆ.

ಈ ಸಮುದ್ರ ಮಟ್ಟದ ಏರಿಕೆಗೆ ಕಾರಣ ಹುಡುಕಬೇಕಾದ ಅವಶ್ಯಕತೆಗಳೇನಿಲ್ಲ. ಕಾರಣ ಅತ್ಯಂತ ಸ್ಪಷ್ಟ ಭೂಗ್ರಹದಲ್ಲಿ ಹೆಚ್ಚಿದ ತಾಪಮಾನ ಮತ್ತು ಹಸಿರುಮನೆ ಅನಿಲಗಳ ಹೊರಸೂಸುವಿಕೆ. ನಿರಂತರ ಪರಿಸರದ ಮೇಲೆ ಪ್ರಹಾರ ನಡೆಸುತ್ತ ಹವಾಮಾನ ವೈಪರೀತ್ಯಕ್ಕೆ ಕಾರಣವಾಗುತ್ತಿರುವ ನಮ್ಮ ಪ್ರವೃತ್ತಿಗಳು ಹಾಗು, ಹಿಮನದಿಗಳು ಮತ್ತು ಹಿಮಪದರಗಳ ಕರಗುವಿಕೆಯಿಂದ  ಬರುತ್ತಿರುವ ನೀರು ಸಮುದ್ರ ಮಟ್ಟದ ಏರಿಕೆಗೆ ಕಾರಣವಾಗುತ್ತಿದೆ. ಆದರೆ, ನಾಸಾದ ದತ್ತಾಂಶಗಳ ಪ್ರಕಾರ 2024 ರಲ್ಲಿ, ಸಮುದ್ರ ಮಟ್ಟದ ಏರಿಕೆಯ ಹೆಚ್ಚಳಕ್ಕೆ  ನೀರಿನ ಉಷ್ಣ ವಿಸ್ತರಣೆಯೇ ಪ್ರಮುಖ ಕಾರಣವಾಗಿದೆ.

Sea State

ಏನಿದು ಉಷ್ಣ ವಿಸ್ತರಣೆ

ವಸ್ತುವಿನ ತಾಪಮಾನ ಹೆಚ್ಚಾದಾಗ ಅದರ ಗಾತ್ರ ಹೆಚ್ಚಾಗುತ್ತದೆ. ಎಂದರೆ ತಾಪಮಾನ ಹೆಚ್ಚಾದಾಗ ವಸ್ತುವಿನಲ್ಲಿರುವ ಅಣುಗಳು ಹೆಚ್ಚು ಚಲಿಸುತ್ತವೆ. ಇದರಿಂದಾಗಿ ಒತ್ತಟ್ಟಾಗಿರುವ ಅಣುಗಳ ನಡುವಿನ ಅಂತರ ಹೆಚ್ಚಾಗಿ ವಸ್ತುವು ವಿಸ್ತರಿಸುತ್ತದೆ. ಇಲ್ಲಿನ ಸಂದರ್ಭದಲ್ಲಿ, ಉಷ್ಣ ವಿಸ್ತರಣೆಯು ತಾಪಮಾನ ಏರಿಕೆಯಿಂದ ನೀರಿನ ಅಣುಗಳು ಚಲನ ಶಕ್ತಿಯನ್ನು ಪಡೆಯುವಾಗ ಸಂಭವಿಸುತ್ತದೆ. ಈ ಪ್ರಕ್ರಿಯೆಯಲ್ಲಿ ನೀರಿನ ಅಣುಗಳು  ಹೆಚ್ಚು ಕಂಪಿಸುತ್ತವೆ ಮತ್ತು ದೊಡ್ಡ ಪರಿಮಾಣವನ್ನು ಆಕ್ರಮಿಸುತ್ತವೆ. ಸಮುದ್ರಗಳಲ್ಲಿ, ಇದು ಹೊಸ ನೀರಿನ ಸೇರಿಕೆಯ ಹೊರತಾಗಿಯೂ ಸಮುದ್ರ ಮಟ್ಟದ ಏರಿಕೆಗೆ ಕಾರಣವಾಗುತ್ತದೆ.

ಹಸಿರುಮನೆ ಅನಿಲಗಳ ಹೊರಸೂಸುವಿಕೆಯಿಂದ ಜಾಗತಿಕ ತಾಪಮಾನ ಏರಿಕೆಯಾದಂತೆ, ಸಮುದ್ರವು ಶೇಕಡಾ 90 ಕ್ಕಿಂತ ಹೆಚ್ಚಿನ ಪ್ರಮಾಣದ ಹೆಚ್ಚುವರಿ ಶಾಖವನ್ನು ಹೀರಿಕೊಳ್ಳುತ್ತದೆ. ಮೇಲಿನ ಪದರಗಳನ್ನು ಸುಮಾರು 700 ಮೀಟರ್‌ಗಳ ಆಳದವರೆಗೂ  ಬೆಚ್ಚಗಾಗಿಸುತ್ತದೆ. ಈ ಬೆಚ್ಚಗಾಗುವಿಕೆಯು ಸಮುದ್ರದ ನೀರನ್ನು ವಿಸ್ತರಿಸುವಂತೆ ಮಾಡುತ್ತದೆ ಮತ್ತು ಇದು ಸಮುದ್ರ ಮಟ್ಟದ ಏರಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಕಾರಣವಾಗಿದೆ. 2005 ಮತ್ತು 2013ರ ಅವಧಿಯಲ್ಲಿ ಉಷ್ಣ ವಿಸ್ತರಣೆಯಿಂದ ಏರಿಕೆಯಾದ ಸಮುದ್ರಮಟ್ಟದ ಪ್ರಮಾಣ ಮೂರನೇ ಒಂದು ಭಾಗದಷ್ಟಿತ್ತು. ಅದೇ 2024ರಲ್ಲಿ ಉಷ್ಣ ವಿಸ್ತರಣೆಯು ಒಟ್ಟು ಸಮುದ್ರ ಮಟ್ಟ ಏರಿಕೆಯ ಮೂರನೇ-ಎರಡು ಭಾಗವನ್ನು ಒಳಗೊಂಡಿತ್ತು. ಈ ದತ್ತಾಂಶಗಳು ಸಮುದ್ರದ ಮಟ್ಟ ಏರಿಕೆಯ ಕಳವಳಕಾರಿ ಅಂಶಗಳನ್ನು ನಮ್ಮೆದುರಿಗೆ ಇಡುತ್ತವೆ.

sea level

ಏರುತ್ತಿರುವ ಸಾಗರದ ನೀರಿನ ತಾಪಮಾನ ಮತ್ತು ಜಲಚರಗಳು

ಸಮುದ್ರದ ನೀರಿನಲ್ಲಿ ಉಂಟಾಗುತ್ತಿರುವ ತಾಪಮಾನ ಏರಿಕೆಯಿಂದಾಗಿ ಹಲವಾರು ಮತ್ಸ್ಯ  ಪ್ರಬೇಧಗಳು ಕ್ಷೀಣಿಸುತ್ತಿವೆ ಮತ್ತು ಇನ್ನು ಹಲವು ಪ್ರಬೇಧಗಳು ತಮ್ಮ ಆವಾಸವನ್ನು ಬದಲಾಯಿಸುತ್ತಿವೆ. ಇದು ಕಡಲಿನ ಪರಿಸರ ಹಾಗು ಮತ್ಸ್ಯ ಸಂತತಿಯ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತಿದೆ. ಉದಾಹರಣೆಗೆ ಸಮುದ್ರ ಜೀವಜಾಲ ಸರಪಳಿಯ ಭಾಗವಾಗಿರುವ ಪ್ಲಾಂಕ್‌ತಾನ್‌ ಎನ್ನುವ ಸಣ್ಣ ಜೀವಿಗಳು ನೀರಿನ ಉಷ್ಣತೆ ಹೆಚ್ಚಿದರೆ ಮತ್ತು ನೀರಿನಲ್ಲಿ ಕರಗಿರುವ ಆಮ್ಲಜನಕದ ಮಟ್ಟದಲ್ಲಿ ಏರಿಳಿತಗಳಾದರೆ ಸೂಕ್ಷ್ಮವಾಗಿ ಸ್ಪಂದಿಸುತ್ತವೆ. ನೀರಿನ ಬಿಸಿ ಹೆಚ್ಚಾದರೆ ಈ ಜೀವಿಗಳು ಸಾಯಬಹುದು. ಈ ರೀತಿಯಾದಾಗ ಆಹಾರಕ್ಕಾಗಿ ಈ  ಜೀವಿಗಳನ್ನು ಅವಲಂಬಿಸಿರುವ ವೇಲ್ಸ್‌ನಂತಹ ಜೀವಿಗಳು ಆಹಾರದ ಅಭಾವವನ್ನು ಎದುರಿಸುತ್ತವೆ.

ಏರುತ್ತಿರುವ ನೀರಿನ ತಾಪಮಾನ, ಮತ್ತು ಇಳಿಕೆಯಾಗುತ್ತಿರುವ ಆಕ್ಸಿಜನ್ ಮಟ್ಟ ಸಾಗರಜೀವಚಕ್ರದಲ್ಲಿ ಹಲವಾರು ತಲ್ಲಣಗಳನ್ನು ಸೃಷ್ಟಿಸುತ್ತಿದೆ. ಸಮುದ್ರಲ್ಲಿ ಬಿಸಿ ಅಲೆಗಳು, ಜೀವರಹಿತ ವಲಯಗಳು, ಮತ್ತು ಹವಳದ ಬಿಳಿಚಿಕೊಳ್ಳುವಿಕೆ  ಈ ರೀತಿಯ ಘಟನೆಗಳಿಗೆ ಕಾರಣವಾಗುತ್ತಿವೆ. ಇವು ಭವಿಷ್ಯದಲ್ಲಿ ಇನ್ನಷ್ಟು ತೀವ್ರವಾಗಿ ಸಂಭವಿಸುವ ಸಾಧ್ಯತೆಯಿದೆ ಮತ್ತು ಇವು  ಸಮುದ್ರ ಪರಿಸರ ವ್ಯವಸ್ಥೆಗಳಿಗೆ ಮತ್ತು ಅದನ್ನು ಅವಲಂಬಿಸಿರುವ ಜೀವಿಗಳಿಗೆ ಹಾನಿಯನ್ನುಂಟುಮಾಡಬಹುದು.

ಉದಾಹರಣೆಗೆ 2014 ರಲ್ಲಿ ಉತ್ತರ ಪೆಸಿಫಿಕ್ ಸಾಗರದಲ್ಲಿ ಉದ್ಭವಿಸಿದ ದೊಡ್ಡ ಪ್ರಮಾಣದಲ್ಲಿ ಬಂದ ಸಮುದ್ರದ ಬಿಸಿ ಅಲೆ “ದಿ ಬ್ಲಾಬ್”ನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಇದು ಸಮುದ್ರದ ಮೇಲ್ಮೈ ತಾಪಮಾನದಲ್ಲಿ 4 ರಿಂದ 10 ಡಿಗ್ರಿ ಫ್ಯಾರನ್‌ಹೀಟ್‌ವರೆಗೆ ಹೆಚ್ಚಳವನ್ನು ತಂದಿತ್ತು. ಇದು ಮೀನುಗಾರಿಕೆ ಮತ್ತು ಸಮುದ್ರ ಜೀವಜಾಲದ ಆಹಾರ ಸರಪಳಿಯ ಮೇಲೆ ದೊಡ್ಡ ಹೊಡೆತವನ್ನು ನೀಡಿತು. ಇದರಿಂದಾಗಿ ಫೈಟೊಪ್ಲಾಂಕ್ಟನ್‌ನಂತಹ ಸೂಕ್ಷ್ಮ ಜೀವಿಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿತು. ಆಹಾರದ ಕೊರತೆಯಿಂದಾಗಿ ಮರ್‌ಗಳಂತಹ ಸಮುದ್ರ ಪಕ್ಷಿಗಳು ಸಾಮೂಹಿಕವಾಗಿ ಸಾಯುವಂತಾಯಿತು.

ಬಿಳಿಚಿಕೊಳ್ಳುತ್ತಿರುವ ಹವಳದಂಡೆಗಳು

ಪರಿಸರ ವ್ಯವಸ್ಥೆಯಲ್ಲಿ ಈ ಹವಳದ ದಿಬ್ಬಗಳ ಪಾತ್ರ ಮುಖ್ಯವಾದುದು. ಇವು ಸಮುದ್ರಜೀವ ಸಂಕುಲಕ್ಕೆ ಆಧಾರವಾಗಿರುವುದರೊಂದಿಗೆ ಚಂಡಮಾರುತದ ಸಮಯದಲ್ಲಿ ಕರಾವಳಿಗಳನ್ನು ರಕ್ಷಿಸುತ್ತವೆ. ಆದರೆ, ನಾಸಾದ ದತ್ತಾಂಶಗಳು ಈ ಹವಳದ ದಂಡೆಗಳು ವೇಗವಾಗಿ ಕ್ಷೀಣಿಸುತ್ತಿರುವುದನ್ನು ತೋರಿಸುತ್ತದೆ. ಹೆಚ್ಚುತ್ತಿರುವ ಸಾಗರದ ನೀರಿನ ತಾಪಮಾನ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

OIP 1
OIP 1 1

ಏರುತ್ತಿರುವ ಜಾಗತಿಕ ತಾಪಮಾನದೊಂದಿಗೆ ಸಮುದ್ರದ ನೀರಿನ ತಾಪಮಾನವೂ ಏರುತ್ತಿದೆ. ಈ ಹವಳದ ದಿಬ್ಬಗಳು ತಾಪಮಾನದ ಸಣ್ಣ ಬದಲಾವಣೆಗೂ ಸಂವೇದನಾಶೀಲವಾಗಿರುತ್ತವೆ, ಮತ್ತು ಅತಿಯಾದ ತಾಪಮಾನವು ಈ ಹವಳಗಳು ತಮ್ಮ ಬಣ್ಣವನ್ನು ಕಳೆದುಕೊಂಡು ಬಿಳಿಯಾಗುವುದಕ್ಕೆ ಕಾರಣವಾಗುತ್ತವೆ. ಇದು ಆಗಾಗ್ಗೆ ಈ ಹವಳದ ದಂಡೆಗಳ ಸಾವಿಗೂ ಕಾರಣವಾಗುತ್ತದೆ. ಇದರೊಂದಿಗೆ ಸಮುದ್ರ ಮಾಲಿನ್ಯಗಳು, ಅತಿಯಾದ ಮೀನುಗಾರಿಕೆ, ಹಡಗುಗಳ ಓಡಾಟ, ಮತ್ತು ಕರಾವಳಿ ಅಭಿವೃದ್ಧಿ ಚಟುವಟಿಕೆಗಳೂ ಹವಳದ ದಿಬ್ಬಗಳಿಗೆ ಆತಂಕವನ್ನು ಒಡ್ಡುತ್ತಿವೆ.

ಹೆಚ್ಚುತ್ತಿರುವ ಸಮುದ್ರ ಮಟ್ಟ ಮತ್ತು ಬಿರುಗಾಳಿ

ಅಪಾಯವು ಕೇವಲ ಹಿಮ ಕರಗುವಿಕೆಯಿಂದ ಮತ್ತು ಸಾಗರದ ನೀರು ಬಿಸಿಯಾದಂತೆ ವಿಸ್ತರಿಸುವುದರಿಂದ ಉಂಟಾಗುವ ಸಮುದ್ರ ಮಟ್ಟದ ಏರಿಕೆಯಿಂದ ಮಾತ್ರವಲ್ಲ, ಬದಲಿಗೆ ಹೆಚ್ಚುತ್ತಿರುವ ಬಿರುಗಾಳಿಯಿಂದಲೂ ಉಂಟಾಗುತ್ತದೆ. ನ್ಯೂ ಒರ್ಲಿಯನ್ಸ್ ಮತ್ತು ಗಲ್ಫ್ ಕರಾವಳಿಯಲ್ಲಿ ಸಮುದ್ರ ಮಟ್ಟದ ಏರಿಕೆಯಿಂದಾಗಿ ಬಿರುಗಾಳಿಯು ಉಲ್ಬಣಗೊಂಡಿತ್ತು. ಈ ಸಂದರ್ಭದಲ್ಲಿ ನೀರಿನ ಮಟ್ಟ ಒಳನಾಡಿನವರೆಗೆ ವಿಸ್ತರಿಸುವ ಅಪಾಯಗಳು ಹೆಚ್ಚಿರುತ್ತವೆ.

2100ರ ಹೊತ್ತಿಗೆ, 3 ರಿಂದ 6.5 ಅಡಿಗಳವರೆಗೆ ಎಂದರೆ 1 ರಿಂದ 2 ಮೀಟರ್‌ಗಳವರೆಗೆ ಸಮುದ್ರ ಮಟ್ಟದಲ್ಲಿ ಏರಿಕೆ ಉಂಟಾಗಬಹುದು ಎಂದು ವಿಜ್ಞಾನಿಗಳು ಅಂದಾಜಿಸುತ್ತಿದ್ದಾರೆ. ಇದು ಕರಾವಳಿ ಪ್ರದೇಶಗಳಿಗೆ ವ್ಯಾಪಕವಾದ ಹಾನಿಯನ್ನು ಉಂಟುಮಾಡಬಹುದು. ಜೊತೆಗೆ ಬಿರುಗಾಳಿಯ ಬೀಸುವಿಕೆಯ ತೀವ್ರತೆ ಈಗ ಇರುವುದಕ್ಕಿಂತ ಎರಡು ಪಟ್ಟು ಅಥವಾ ಅದಕ್ಕಿಂತ ಹೆಚ್ಚು ಎತ್ತರವಾಗಿರಬಹುದು ಎನ್ನುತ್ತಾರೆ

ಸಮುದ್ರ ಮಟ್ಟದ ಏರಿಕೆ ಮತ್ತು ಕರಾವಳಿ ಸವೆತ

ಕರಾವಳಿ ಸವೆತ ಅಥವಾ ಕರಾವಳಿ ಪ್ರದೇಶದ ಹಿಮ್ಮೆಟ್ಟುವಿಕೆ ಸಾಮಾನ್ಯವಾಗಿ ಕರಾವಳಿ ತೀರ ಪ್ರದೇಶವನ್ನು ಹೊಂದಿರುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ. ಕೇಂದ್ರ ಪರಿಸರ ಸಚಿವಾಲಯದ ದಾಖಲೆಗಳ ಪ್ರಕಾರ  ಭಾರತದಲ್ಲಿನ ಶೇಕಡಾ 33.6ರಷ್ಟು ಕರಾವಳಿ ಪ್ರದೇಶವು ಸವಕಳಿಯಾಗುತ್ತಿದೆ. ಶೇಕಡಾ 26.9 ತೀರ ಪ್ರದೇಶ ಬೆಳೆಯುತ್ತಿದೆ ಮತ್ತು ಶೇಕಡಾ 39.6 ಸ್ಥಿರವಾಗಿದೆ. ರಾಷ್ಟ್ರೀಯ ಮಟ್ಟದ ಅಂಕಿಅಂಶಗಳಿಗೆ ಹೋಲಿಸಿದಾಗ ಕರ್ನಾಟಕದ ಕರಾವಳಿ ಪ್ರದೇಶ ಉತ್ತಮವಾಗಿದೆ ಎನ್ನುತ್ತವೆ ದಾಖಲೆಗಳು. ಆದರೆ ಕರ್ನಾಟಕದ ಶೇಕಡಾ 50  ಕರಾವಳಿ ಪ್ರದೇಶ ಸ್ಥಿರವಾಗಿದ್ದರೂ, ದಕ್ಷಿಣ ಕನ್ನಡದ ಪರಿಸ್ಥಿತಿ ಗಂಭೀರವಾಗಿದೆ ಮತ್ತು ಇಲ್ಲಿನ 17.74 ಕಿ.ಮೀ. ಕರಾವಳಿಯು ಸವೆತಕ್ಕೆ ಒಳಗಾಗಿದೆ. ಇದು ಮಾನವನ ವಾಸಸ್ಥಾನಗಳು ಮತ್ತು ಪರಿಸರ ವ್ಯವಸ್ಥೆಗಳಿಗೆ ಗಂಭೀರ ಅಪಾಯವನ್ನುಂಟುಮಾಡುತ್ತಿದೆ.

ರಾಷ್ಟ್ರೀಯ ಕರಾವಳಿ ಸಂಶೋಧನಾ ಕೇಂದ್ರ (NCCR) ಅಧ್ಯಯನವು 1990 ರಿಂದ 2018 ರವರೆಗೆ ದಕ್ಷಿಣ ಕನ್ನಡದ 36.66 ಕಿ.ಮೀ. ಉದ್ದದ ಕರಾವಳಿ ಪ್ರದೇಶದಲ್ಲಿ 17.74 ಕಿ.ಮೀ. (48.4%) ಸವಕಳಿಯಾಗಿದೆ ಎನ್ನುತ್ತದೆ. ಅದೇ ರೀತಿ ಉಡುಪಿ ಜಿಲ್ಲೆಯ ಕರಾವಳಿ ತೀರದ ಒಟ್ಟು ಭೂಭಾಗ 100.71 ಕಿ.ಮೀ. ನಲ್ಲಿ 34.96 ಕಿ.ಮೀ. (34.7) ಶೇಕಡಾ ಸವೆತವನ್ನು ಎದುರಿಸಿದ್ದರೆ, ಉತ್ತರ ಕನ್ನಡವು ತಾನು ಹೊಂದಿರುವ ಒಟ್ಟು 175.65 ಕಿ.ಮೀ. ಕರಾವಳಿ ಪ್ರದೇಶದಲ್ಲಿ 21.64 ಕಿ.ಮೀ. (12.3%) ಕನಿಷ್ಠ ಸವೆತವನ್ನು  ದಾಖಲಿಸಿದೆ.

ಕರಾವಳಿ ತೀರ ಪ್ರದೇಶದಲ್ಲಿ ಮಾನವನ ಹಸ್ತಕ್ಷೇಪದಿಂದಾಗಿ ಸವಕಳಿ ಕಂಡುಬರುತ್ತಿರುವುದು ಒಂದು ಕಾರಣವಾದರೆ,  ಹವಾಮಾನ ಬದಲಾವಣೆಯಿಂದ ಏರುತ್ತಿರುವ ಸಮುದ್ರ ಮಟ್ಟ ಪ್ರಮುಖ ನೈಸರ್ಗಿಕ ಕಾರಣವಾಗಿದೆ.

ಹೆಚ್ಚಿದ ಸವೆತ ದರಗಳು ಕರಾವಳಿ ಸಮುದಾಯಗಳ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಪರಿಣಾಮ ಬೀರುತ್ತವೆ, ಉದಾಹರಣೆಗೆ ಕರಾವಳಿಯ ಆಸ್ತಿಯ ನಷ್ಟ, ಹೆಚ್ಚಿದ ಪ್ರವಾಹದ ಅಪಾಯ, ಮೀನುಗಾರಿಕೆಗೆ ಆತಂಕ, ಬಂದರುಗಳಂತಹ ಮೂಲಸೌಕರ್ಯಕ್ಕೆ ಧಕ್ಕೆ, ಉಪ್ಪುನೀರಿನ ಒಳನುಗ್ಗುವಿಕೆ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳ ಕುಸಿತ, ಇವು ಕೆಲವು ಉದಾಹರಣೆಗಳು. ಕರಾವಳಿ ಸಮುದ್ರ ತೀರ ಪ್ರದೇಶಗಳಲ್ಲಿ ಜಮೀನುಗಳಿಗೆ ನುಗ್ಗುವ ಉಪ್ಪು ನೀರು ಬೆಳೆ ನಾಶ ಮಾಡುತ್ತಿರುವಂತಹ ಘಟನೆಗಳು ಹೊಸತೇನಲ್ಲ. ಇವು ದಶಕದಿಂದಲೇ ಚಾಲ್ತಿಯಲ್ಲಿದೆ.

OIP 2

ಜಾಗತೀಕರಣ, ಉದಾರೀಕರಣ ನೀತಿಗಳ ಅನುಷ್ಠಾನದ ಆರಂಭದಿಂದಲೇ(ಎಂದರೆ ಸರಿಸುಮಾರು 90ರ ದಶಕದ ಆರಂಭದಿಂದಲೇ) ಹೂಡಿಕೆದಾರರ ಕಣ್ಣಣಿಯಾಗಿದ್ದದ್ದು ಪರಿಸರ ಸೂಕ್ಷ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ. ಇದು ತಮ್ಮ ಪರಿಸರ ಕಾಳಜಿಗಳಿಗೆ ಪರಿಸರ ಚಳವಳಿಯ ರೂಪ ನೀಡಿ ಅವಿಭಜಿತ ಜಿಲ್ಲೆಯಾದ್ಯಂತ ಈ ಚಳವಳಿಯ ಕಾವು ವ್ಯಾಪಿಸುವಂತೆ ಮಾಡಿ ಕೊಜೆಂಟ್ರಿಕ್ಸ್‌ನಂತಹ ಯೋಜನೆಗಳನ್ನು ಹಿಮ್ಮೆಟ್ಟಿಸಿದ್ದ ಜಿಲ್ಲೆ. ಆದರೆ 90 ರ ದಶಕದಿಂದ ಆರಂಭಗೊಂಡು ಈವರೆಗೂ ಸತತವಾಗಿ ಪರಿಸರಕ್ಕೆ ಹಾನಿ ಉಂಟುಮಾಡಬಲ್ಲ ಚಟುವಟಿಕೆಗಳು ನಡೆಯುತ್ತಿದ್ದರೂ, ಬುದ್ಧಿವಂತರ ಜಿಲ್ಲೆಯ ಜನರು ಪರಿಸರ ಕಾಳಜಿಗಳನ್ನು ಬದಿಗೊತ್ತಿ ಇತರೆ ವಿಷಯಗಳ ಕುರಿತಾಗಿಯೇ ಹೆಚ್ಚು ತಲೆಕೆಡಿಸಿಕೊಂಡಿರುವುದು ವಿಪರ್ಯಾಸ. ಸಮುದ್ರದ ನೀರು ನಮ್ಮ ಕಾಲುಬುಡದವರೆಗೆ ಹರಿದು ಬರುವವರೆಗೂ ನಾವು ಯಾರು ಎಚ್ಚೆತ್ತುಕೊಳ್ಳವುದಿಲ್ಲವೇನೋ?

ಇದನ್ನೂ ಓದಿ ಭೂಮ್ತಾಯಿ | ಮದುವೆ ಊಟದ ತಟ್ಟೆಯಲ್ಲಿ ಹವಾಮಾನ ವೈಪರೀತ್ಯದ ಸುಳಿಗಾಳಿ!

ಕರ್ನಾಟಕದಲ್ಲಿ ಕರಾವಳಿ ಪ್ರದೇಶದ ಸವಕಳಿಯನ್ನು ತಗ್ಗಿಸುವ ಪ್ರಯತ್ನಗಳ ಫಲವಾಗಿ ಕರ್ನಾಟಕ ಸರ್ಕಾರವು ಕರಾವಳಿ ವಲಯದ ಅಧಿಸೂಚನೆ (CRZ), 2019ರ ಪ್ರಕಾರ ಕರಾವಳಿ ನಿರ್ವಹಣಾ ಯೋಜನೆಯನ್ನು ತಯಾರಿಸಿದೆ ಮತ್ತು  ಕರ್ನಾಟಕ ಕರಾವಳಿ ಸ್ಥಿತಿಸ್ಥಾಪಕತ್ವ ಮತ್ತು ಆರ್ಥಿಕತೆಯನ್ನು ಬಲಪಡಿಸುವ (K-SHORE) ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು ಕರಾವಳಿ ತೀರ ಪ್ರದೇಶಗಳನ್ನು ರಕ್ಷಿಸುವ, ನೈಸರ್ಗಿಕ ವಿಪತ್ತುಗಳ ವಿರುದ್ಧ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವ ಮತ್ತು ಕಡಲನ್ನು ಅವಲಂಬಿಸಿರುವ  ಸಮುದಾಯಗಳ ಜೀವನೋಪಾಯವನ್ನು ಸುಸ್ಥಿರ ರೀತಿಯಲ್ಲಿ ರಕ್ಷಿಸುವ ಗುರಿಯನ್ನು ಹೊಂದಿದೆ. ಆದರೆ ಕರಾವಳಿ ತೀರ ಪ್ರದೇಶದ ರಕ್ಷಣೆಗೆ ಬಂದ ನಿಯಮಗಳೆಲ್ಲವನ್ನು ವಾಣಿಜ್ಯ ಹಿತಾಸಕ್ತಿಗಳು ಆಪೋಶನ ತೆಗೆದುಕೊಂಡಿರುವ ನಿದರ್ಶನಗಳೇ ಹೆಚ್ಚಿವೆ. ಇನ್ನು ಬಿಡುಗಡೆಯಾಗಿರುವ ಹಣ ಎಷ್ಟರ ಮಟ್ಟಿಗೆ ಸದುಪಯೋಗ ಆಗುತ್ತಿದೆ ಎಂಬುದಕ್ಕೆ  ಕರಾವಳಿ ಪ್ರದೇಶದಲ್ಲಿ ಕೋಟಿ ಕೋಟಿ ಹಣ ಕಡಲ್ಕೊರೆತ  ಸಮಸ್ಯೆ ಪರಿಹಾರಕ್ಕೆ ಬಿಡುಗಡೆಯಾಗಿದ್ದರೂ ಪ್ರತಿ ವರ್ಷವೂ ಅದೇ ಅದೇ ಸಮಸ್ಯೆಗಳು ಮರುಕಳಿಸುತ್ತ ಸಮಸ್ಯೆ ಯಾವುದೇ ಪರಿಹಾರ ಕಾಣದೆ ʻಕಡಲ್ಕೊರೆತ ಎಲ್ಲರಿಗೂ ಇಷ್ಟʼ ಎಂಬಂತಾಗಿರುವುದೇ ಉತ್ತರ ನೀಡುತ್ತದೆ. ಇನ್ನು ಈ ನೂತನ ಯೋಜನೆಗಳು ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಡಾ ಶ್ರೀನಿಧಿ ಅಡಿಗ
ಡಾ ಶ್ರೀನಿಧಿ ಅಡಿಗ
+ posts

ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್‌ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಶ್ರೀನಿಧಿ ಅಡಿಗ
ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್‌ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ಪ್ಯಾರಿಸ್‌ ಒಪ್ಪಂದದ ಗುರಿ ಸಾಧನೆ: ಒತ್ತಾಸೆಯಾಗಬೇಕಿದೆ ಪ್ರಜಾಪ್ರಭುತ್ವದ ಸ್ತಂಭಗಳು

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವಲ್ಲಿ ರಾಜ್ಯ ಸರ್ಕಾರಗಳ ಪಾತ್ರವನ್ನು ಬಲಪಡಿಸುವುದು ಎಂದರೆ...

ಅಲ್ಲಮನ ಅನನ್ಯ ಪದಪ್ರಯೋಗಗಳು | ನಿರ್ಣಯವನರಿಯದ ಮನ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಸುತ್ತಾಟ | ಆಸ್ಟ್ರೇಲಿಯಾದ ಕೋಸಿಯಸ್ಕೋ ಪರ್ವತ ಚಾರಣ

ಆಸ್ಟ್ರೇಲಿಯಾದಲ್ಲಿ ಎತ್ತರದ ಪರ್ವತಗಳಿಲ್ಲ ಎಂಬ ಭಾವನೆ ಅನೇಕ ಮಂದಿಯ ಮನಸ್ಸಿನಲ್ಲಿ ನೆಲೆಗೊಂಡಿರಬಹುದು,...

Download Eedina App Android / iOS

X