ಹೊಸಿಲ ಒಳಗೆ-ಹೊರಗೆ | ಕನಸುಗಳನ್ನು ಬಿತ್ತಿ ಮರೆಯಾದ ಸರ್ಕಾರಿ ಕಾರ್ಯಕ್ರಮ ‘ಮಹಿಳಾ ಸಮಾಖ್ಯಾ’

Date:

Advertisements
ಗ್ರಾಮೀಣ ಮಹಿಳೆಯರು ಸಶಕ್ತರಾಗುವಂತೆ ಸಹಕರಿಸಲು 1988ರಲ್ಲಿ ಹುಟ್ಟಿಕೊಂಡ ಕೇಂದ್ರ ಸರ್ಕಾರದ ಯೋಜನೆ ಇದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಳಗೆ ಇರದೆ ಶಿಕ್ಷಣ ಇಲಾಖೆಯ ಭಾಗವಾಗಿದ್ದು ಈ ಯೋಜನೆಯ ವಿಶೇಷ. ಇಂಥದ್ದೊಂದು ಸರ್ಕಾರಿ ಕಾರ್ಯಕ್ರಮ ಇತ್ತೆಂಬುದೇ ಸೋಜಿಗ ಮತ್ತು ವಿಶೇಷ

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)

ಪುರುಷಪ್ರಧಾನ ವ್ಯವಸ್ಥೆಯ ಎಲ್ಲ ಕಥನಗಳನ್ನು ಅರ್ಥ ಮಾಡಿಕೊಳ್ಳುತ್ತ ಹೋಗುವಾಗ, ಜೊತೆಜೊತೆಗೇ ಕಾಡುವುದು, ‘ಹಾಗಾದರೆ ಏನು ಮಾಡಬೇಕು?’ ಅನ್ನುವ ಪ್ರಶ್ನೆ. ಮನಸ್ಸಿನ ಮೂಲೆಯಲ್ಲಿ ಪ್ರಶ್ನೆ ಮೂಡಿದರೆ ಸಾಕು… ಅದಕ್ಕೆ ಪ್ರತಿಯಾಗಿ ಏನೋ ಒಂದು ಅಲೆ ಹುಟ್ಟಿಕೊಳ್ಳುತ್ತದೆ. ವ್ಯಕ್ತಿಗತ ನೆಲೆಯಿಂದ, ಸಾಮೂಹಿಕ ನೆಲೆಯಿಂದ ಎಷ್ಟೆಷ್ಟೋ ಪ್ರತಿರೋಧದ ಅಲೆಗಳು ಹುಟ್ಟಿಕೊಂಡಿವೆ, ಹುಟ್ಟಿಕೊಳ್ಳುತ್ತ ಇವೆ. ಸಾಂಸ್ಥಿಕ ನೆಲೆಯಿಂದ, ಸರ್ಕಾರದ ನೆಲೆಯಿಂದ ಕೂಡ ಏನೇನೋ ರಚನಾತ್ಮಕ ಪ್ರಯತ್ನಗಳು ನಡೆಯುತ್ತಿವೆ. ಕೆಲವೊಮ್ಮೆ ಕೆಲವು ಕೆಲಸಗಳು ಅತ್ಯಂತ ಪರಿಣಾಮಕಾರಿ ಆಗಿವೆ, ಕೆಲವು ಯೋಜನೆಗಳು ಹಿಂದಕ್ಕೆ ಎಳೆದಿದ್ದೂ ಇದೆ.

ಪುರುಷಪ್ರಧಾನ ವ್ಯವಸ್ಥೆಯ ಬೇರುಗಳನ್ನು ಅಲ್ಲಾಡಿಸುವುದು ಸುಲಭದ ಕೆಲಸವೇನಲ್ಲ. ಒಂದಷ್ಟು ಸ್ಪಷ್ಟ ಚಿಂತನೆಗಳು ಬೇಕಾಗುತ್ತವೆ. ಈ ನಿಟ್ಟಿನಲ್ಲಿ ನನಗೆ ಹೊಸ ಚಿಂತನೆಗಳನ್ನು ಕೊಟ್ಟದ್ದು ‘ಮಹಿಳಾ ಸಮಾಖ್ಯಾ.’ ಸುಮಾರು 33 ವರುಷಗಳ ಹಿಂದೆ ‘ಮಹಿಳಾ ಸಮಾಖ್ಯಾ’ ಎಂಬ ಸರ್ಕಾರಿ ಪ್ರಾಯೋಜಿತ ಸಂಸ್ಥೆಯೊಂದರಲ್ಲಿ ಒಂದಷ್ಟು ವರುಷ ಕೆಲಸ ಮಾಡಿದ್ದೆ. ಗ್ರಾಮೀಣ ಮಹಿಳೆಯರು ಸಶಕ್ತರಾಗುವಂತೆ ಸಹಕರಿಸಲು ಹುಟ್ಟಿಕೊಂಡ ಕೇಂದ್ರ ಸರ್ಕಾರದ ಯೋಜನೆ ಇದು. ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಳಗೆ ಇರದೆ ಶಿಕ್ಷಣ ಇಲಾಖೆಯ ಭಾಗವಾಗಿದ್ದು ವಿಶೇಷ. ಮಹಿಳೆಯರ ಸಶಕ್ತತೆಗೆ ಶಿಕ್ಷಣ ಒಂದು ಮಾರ್ಗ. ಆದರೆ, ಮಹಿಳೆಯರಿಗೆ ಯಾವ, ಎಂತಹ ಶಿಕ್ಷಣ ಬೇಕು ಅನ್ನುವುದನ್ನು ಕೂಡ ಅವರೇ ನಿರ್ಧಾರ ಮಾಡುವಂತಾಗಬೇಕು; ಅಂತಹ ಶಿಕ್ಷಣವನ್ನು ಅವರಿಗೆ ಒದಗಿಸಬೇಕು. ಮಹಿಳೆಯರು ಎಲ್ಲ ವಿಷಯಗಳಿಗೂ ನಿಷ್ಕ್ರಿಯ ಕೇಳುಗರಾಗಿ ಇರುವಂತಾಗದೆ, ಸಕ್ರಿಯ ಭಾಗೀದಾರರಾಗಿ ಬೆಳೆಯುವಂತಾಗಬೇಕು. ಇಂತಹ ಮಹದಾಶಯದೊಂದಿಗೆ 1986ರ ರಾಷ್ಟ್ರೀಯ ಶಿಕ್ಷಣ ನೀತಿಯ ನೆರಳಿನಲ್ಲಿ ಹುಟ್ಟಿಕೊಂಡ ಯೋಜನೆ ಇದು.

Advertisements

‘ಸಮಾಖ್ಯಾ’ ಅಂದರೆ ಸಮಾನವಾಗಿ ಕೇಳಿಸಿಕೊಳ್ಳಲ್ಪಡುವುದು (to be heard equally). ಈ ಪದವೇ ನನಗೆ ಹೊಸತೊಂದು ನೋಟ ಕೊಟ್ಟಿತ್ತು. ಮಹಿಳೆಯರ ಅಂತರಂಗದ ಮಾತುಗಳನ್ನು ಈ ವ್ಯವಸ್ಥೆ ಕೇಳಿಸಿಕೊಳ್ಳಬೇಕು; ಅವರ ನಿಜದನಿಗೆ ಕಿವಿಯಾಗಬೇಕು; ಅದಕ್ಕೆ ಗೌರವ ಸಿಗಬೇಕು. ಆಗ ಮಾತ್ರ ಅವರು ತಮಗೆ ನಿಜವಾಗಿ ಅನಿಸಿದ್ದನ್ನು ಹೇಳುವುದು ಸಾಧ್ಯ ಎಂಬುದು ಈ ಪರಿಕಲ್ಪನೆಯ ಆಶಯ. ಸಮಾನತೆಯ ಬೇರೆ-ಬೇರೆ ಪರಿಭಾಷೆಗಳನ್ನು ಕೇಳಿಸಿಕೊಂಡಿದ್ದೆ. ಆದರೆ, ಆ ಕಾಲಕ್ಕೆ ಇದು ನನಗೆ ಹೊಸತು. ಈ ವ್ಯವಸ್ಥೆಯ ಎಲ್ಲ ವಲಯದೊಳಗೆ – ಮನೆ, ಶಾಲೆ, ಉದ್ಯೋಗ ವಲಯ, ರಾಜಕೀಯ ವಲಯ, ಕಾನೂನು ವಲಯ, ಸಾರ್ವಜನಿಕ ವಲಯ – ನಮ್ಮದೇ ಆದ ಅಭಿವ್ಯಕ್ತಿಗೆ ಅವಕಾಶ ಇರುವುದು, ಎಲ್ಲ ಕಡೆ ನಿರ್ಭೀತವಾದ ಹೆಣ್ಣು ದನಿಯೊಂದು ಕೇಳಿಬರುವುದು ಎಷ್ಟು ಮುಖ್ಯ ಅಂತ ಅನಿಸಿತ್ತು.

ಈ ಯೋಜನೆಯ ಇನ್ನೊಂದು ಆಸಕ್ತಿದಾಯಕ ಪರಿಕಲ್ಪನೆ ‘ಸಮಯ ಮತ್ತು ಅವಕಾಶ’ – ಮಹಿಳಾ ಸಮಖ್ಯಾ ಯೋಜನೆಯ ಜೀವನಾಡಿ ಇದು. 1990ರಲ್ಲಿ, ಈ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವ ಹೊತ್ತಿನಲ್ಲಿ ಬರೆದುಕೊಂಡ ವಿಚಾರಗಳು ಹೀಗಿವೆ:

‘ಸಮಯ ಮತ್ತು ಅವಕಾಶ (ಟೈಮ್ ಅಂಡ್ ಸ್ಪೇಸ್)’ – ಮಹಿಳಾ ಸಮಖ್ಯಾ ಆಳವಾಗಿ ನಂಬಿಕೊಂಡಿರುವ ಒಂದು ಮೌಲ್ಯ, ಒಂದು ತತ್ವ. ಮೊಗ್ಗೊಂದು ಅರಳಬೇಕಾದರೆ, ಹಕ್ಕಿಯೊಂದು ರೆಕ್ಕೆ ಬಿಚ್ಚಿ ಹಾರಬೇಕಾದರೆ, ಹಣ್ಣೊಂದು ಮಾಗಬೇಕಾದರೆ ಅದರದ್ದೇ ಆದ ಗತಿ, ತಾನ, ಲಯ ಬೇಕಾಗುತ್ತದೆ. ಒತ್ತಡ ಹೇರಿದರೆ ಅಲ್ಲಿ ಸಹಜವಾದ ಪ್ರಕ್ರಿಯೆ ಹುಟ್ಟಲಾರದು. ಅಂತೆಯೇ ಮಹಿಳೆಯರಿಗೆ ತಮ್ಮ ದೈನಂದಿನ ಚೌಕಟ್ಟಿನಿಂದ ಹೊರಬಂದು, ತಮ್ಮ ಬಗ್ಗೆ, ತಮ್ಮ ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ತಮ್ಮದೇ ಆದ ಯೋಚನೆ, ನಿಲುವು ತೆಗೆದುಕೊಳ್ಳಬೇಕಾದರೆ ಅದಕ್ಕೆ ತಕ್ಕ ‘ಸಮಯ ಮತ್ತು ಅವಕಾಶ’ ಬೇಕು. ಹಾಗಾದರೆ, ಮಹಿಳೆಯರಿಗೆ ಸಮಯವೇ ಇಲ್ಲವೆಂದು ಇದರ ಅರ್ಥವೇ? ಕೆಲವೊಮ್ಮೆ ತಿಂಗಳುಗಟ್ಟಲೆ ಕೆಲಸವಿಲ್ಲದೆ ಸುಮ್ಮನೆ ಇರುತ್ತಾರೆ ಅಥವಾ ದಿನದಲ್ಲೂ ಕೆಲವೊಮ್ಮೆ ಹೀಗೇ ಸಮಯ ಉಳಿದಿರುತ್ತದೆ. ಆದರೆ, ಈ ಸಮಯ ಯಾವತ್ತೂ ಅವರದಾಗಿ ಇರುವುದಿಲ್ಲ, ಅವರ ಹಿಡಿತದಲ್ಲಿ ಇರುವುದಿಲ್ಲ. ಇತರರ ಅಥವಾ ಪರಿಸ್ಥಿತಿಯ ನಿರ್ಧಾರದಂತೆ ಅವರು ಅದನ್ನು ಕಳೆಯುತ್ತಾರೆಯೇ ಹೊರತು ತಮಗಾಗಿ ಉಪಯೋಗಿಸುವುದಕ್ಕೆ ಅವಕಾಶ ಇರುವುದಿಲ್ಲ. ಸರಳವಾದ ಶಬ್ದಗಳಿಗೆ ನಿಲುಕದ ಈ ಪರಿಕಲ್ಪನೆಯ ಅನುಭವ ಮಾತ್ರ ಬಹಳ ಸರಳ. ಇದರ ಬಗ್ಗೆ ಆಳವಾದ ನಂಬಿಕೆ ಗೌರವ ಇದ್ದರೆ ಸಾಕು. ಅದು ನಮ್ಮ ಕೆಲಸ ಕಾರ್ಯಗಳಲ್ಲಿ ತಾನೇತಾನಾಗಿ ಪ್ರಕಟಗೊಳ್ಳುತ್ತದೆ… (ವಾಣಿ ಪೆರಿಯೋಡಿ, ಸಮಖ್ಯಾ ಸಂವಾದ, ಸಂಪುಟ 1, ಸಂಚಿಕೆ 2).

ಒಟ್ಟಿನಲ್ಲಿ ಯಾವುದೇ ಜಂಜಾಟಗಳಿಂದ, ಒತ್ತಡಗಳಿಂದ ಸ್ವಲ್ಪ ಆಚೆ ನಿಂತು, ತಮ್ಮ ಪಾಡಿಗೆ ತಾವು ಇದ್ದು ಚಿಂತಿಸಲು ಅವಕಾಶ ಸಿಕ್ಕರೆ, ತಮ್ಮದೇ ಆದ ಚಿಂತನೆ ಹುಟ್ಟಿಕೊಳ್ಳುವುದು ಸಾಧ್ಯ ಅನ್ನುವ ನಂಬಿಕೆ ಇಟ್ಟುಕೊಂಡು ನಾವು ಕೆಲಸ ಶುರುಮಾಡಿದ್ದೆವು. ಮುಖ್ಯವಾಗಿ ಮಹಿಳೆಯರ ಬಳಿಗೆ ಹೋಗಿ ನಾವು ತತ್ವೋಪದೇಶ ಕೊಡುವುದಲ್ಲ, ಅವರ ಮಾತುಗಳನ್ನು-ಅನುಭವಗಳನ್ನು ಕೇಳಿಸಿಕೊಳ್ಳುವುದೇ – ‘ಕಿವಿಗೊಟ್ಟು’ ಕೇಳಿಸಿಕೊಳ್ಳುವುದೇ ನಮ್ಮ ಮೊದಲ ಹೆಜ್ಜೆಯಾಗಿತ್ತು. ಮಾಹಿತಿಗಳನ್ನು ಮಹಿಳೆಯರ ಮೇಲೆ ಹೇರುವುದಲ್ಲ; ಅವರೇ ಆಗಿ ಅವರಿಗೆ ಬೇಕಾದ ಮಾಹಿತಿಗಳನ್ನು, ಜ್ಞಾನವನ್ನು ಹುಡುಕಿಕೊಂಡು ಹೋಗುವ ಮನಸ್ಸು ಹುಟ್ಟುವ ರೀತಿಯಲ್ಲಿ ಒಡನಾಡುವುದು ನಮ್ಮ ಪ್ರಯತ್ನವಾಗಿತ್ತು. ಅದಕ್ಕಾಗಿ ತರಬೇತಿಗಳಲ್ಲಿ ಭಾಷಣಗಳನ್ನು ಹೊಡೆಸದೆ, ಚಿಂತನೆ ಹುಟ್ಟುವ ರೀತಿಯಲ್ಲಿ ವಿಚಾರಗಳನ್ನು ಎತ್ತಿಕೊಂಡು ಮಾತುಕತೆ ನಡೆಸುತ್ತಿದ್ದೆವು. ಇದೇನು ಸುಲಭದ ಕೆಲಸವಾಗಿರಲಿಲ್ಲ. ಮಹಿಳೆಯರೊಂದಿಗೆ ಕೆಲಸ ಮಾಡುವ ನಮ್ಮ ಹೆಣ್ಣುಮಕ್ಕಳ ತಂಡಕ್ಕೂ ಈ ಮೌಲ್ಯ ಎದೆಯೊಳಗೆ ಇಳಿಯಬೇಕಾಗಿತ್ತು. ಅದಕ್ಕಾಗಿ ನಮ್ಮ ನಡುವೆಯೂ ಇಂತಹ ಚಿಂತನೆಗಳಿಗೆ ಹಚ್ಚುವಂತಹ ಮಾತುಕತೆಗಳು ನಡೆಯುತ್ತಿದ್ದವು.

ಈ ಪ್ರಕ್ರಿಯೆಯ ನಡುವೆ ಆದ ಎಡವಟ್ಟುಗಳೇನೂ ಕಡಿಮೆಯಲ್ಲ. ಆದಿವಾಸಿ ಹೆಣ್ಣುಮಕ್ಕಳ ಜೊತೆಗೆ ಕೆಲಸ ಮಾಡುತ್ತಿದ್ದೆವು. ನಮ್ಮ ಕಾರ್ಯಕರ್ತರಿಗೆ ಅವರು ರವಿಕೆ ಹಾಕಿಕೊಳ್ಳದೆ ಇರುವುದೇ ಒಂದು ದೊಡ್ಡ ಸಮಸ್ಯೆ. ಅದೂ ಜಿಲ್ಲಾಧಿಕಾರಿ ಆಫೀಸಿಗೆ ಹೋಗುವಾಗ ರವಿಕೆ ಹಾಕದೆ ಹೋಗುವುದೆಂದರೆ ಎಂತಹ ಆಭಾಸ! ಅದಕ್ಕಾಗಿ ಅವರಿಗೆ ರವಿಕೆ ಹಾಕಿಸುವುದೇ ಮೊದಲ ಕೆಲಸ. ಇದಕ್ಕೆ ಪೂರಕವಾದಂತಹ ಒಂದು ಕತೆಯೂ ಆ ಹೊತ್ತಿಗೆ ಸಿಕ್ಕಿತ್ತು. ಮಂಗವೊಂದು ನದಿ ಬದಿಯಲ್ಲಿ ಕುಳಿತು ಒಂದೊಂದೇ ಮೀನು ಹೆಕ್ಕಿ ಮರದ ಮೇಲೆ ಇಡುತ್ತಿರುತ್ತದೆ. ಯಾಕೆ ಹೀಗೆ ಅಂತ ವಿಚಾರಿಸಿದರೆ, “ಪಾಪ… ನದಿಯಲ್ಲಿ ಮುಳುಗಿ ಒದ್ದಾಡುತ್ತಿವೆ…” ಅಂತ ಮಂಗ ಉತ್ತರಿಸುತ್ತದೆ. ರವಿಕೆಯ ಕತೆಯೂ ಹೀಗೇ. ಅವರಿಗೆ ಅದು ಸಮಸ್ಯೆಯೇ ಅಲ್ಲ. ನಮ್ಮ ಸಮಸ್ಯೆಯನ್ನು ಅವರ ಮೇಲೆ ಹೇರಿ, ಆಮೇಲೆ ಆ ಸಮಸ್ಯೆಗೆ ನಮಗೆ ತಿಳಿದಂತೆ ಪರಿಹಾರ ಹುಡುಕುವುದು ಅಂದರೆ ಎಂತಹ ವಿಪರ್ಯಾಸ!

ಎಲ್ಲ ಏಳುಬೀಳುಗಳ ಜೊತೆಗೆ ಮಹಿಳೆಯರ ಬದುಕಿನಲ್ಲಿ ಹೊಸತನ ತರುವಲ್ಲಿ ‘ಸಮಾಖ್ಯಾ’ ಚಿಂತನೆಗಳು ನೆರವಾಗಿದ್ದು ನಿಜ. ಮೂರು ಜಿಲ್ಲೆಗಳಲ್ಲಿ ಈ ಯೋಜನೆ ಮೊದಲಿಗೆ ಜಾರಿಗೆ ಬಂದಿತ್ತು. ಆದರೆ, ಎಲ್ಲೂ ಇದು ಏಕರೂಪದಲ್ಲಿ ಪ್ರತಿಫಲಿಸಲಿಲ್ಲ. ಆಯಾಯ ಪ್ರದೇಶದ ಮಹಿಳೆಯರಿಗೆ ಆ ಹೊತ್ತಿಗೆ ಯಾವ ವಿಚಾರ ಮುಖ್ಯ ಅನಿಸಿತೋ ಅದನ್ನೇ ಮೊದಲಿಗೆ ಎತ್ತಿಕೊಳ್ಳುವ ಹಾಗಾಯಿತು. ಒಂದು ಜಿಲ್ಲೆಯಲ್ಲಿ ಓದು-ಬರಹ ಕಲಿಯುವುದೇ ಮೊದಲ ಆದ್ಯತೆಯಾದರೆ, ಮತ್ತೊಂದು ಕಡೆ ಭೂಮಿಯ ಹಕ್ಕು ಪಡೆಯುವುದು ಆದ್ಯತೆಯಾಗಿ ಬಂತು. ಸಂಘ ಮನೆ ಕಟ್ಟುವ ದಿನಗಳಲ್ಲಿ ಒಬ್ಬ ಬೆನ್ನು ಬಾಗಿದ ಮುದುಕಿ ಸಂಘ ಮನೆ ಹೀಗೆ ಇರಬೇಕು ಅಂತ ಪ್ಲಾನ್‌ವೊಂದನ್ನು ಗೀಚಿಕೊಟ್ಟಿದ್ದು ತನ್ನ ಅಭಿಪ್ರಾಯಕ್ಕೂ ಒಂದು ಜಾಗ ಇದೆ ಎಂಬ ಧೈರ್ಯದಿಂದ. ಅನೇಕಾನೇಕ ಮಹಿಳೆಯರ ಎದೆಯೊಳಗೆ ಪುರುಷಪ್ರಧಾನತೆಯನ್ನು ತಮ್ಮ-ತಮ್ಮದೇ ರೀತಿಯಲ್ಲಿ ಪ್ರತಿರೋಧಿಸುವ ಶಕ್ತಿ ಹುಟ್ಟಿತ್ತು.

ಸರ್ಕಾರಿ ಪ್ರಾಯೋಜಿತ ಆಗಿದ್ದುದಕ್ಕೆ, ಇನ್ನೂ ಏನೇನೋ ವಿಪರ್ಯಾಸಗಳು ಹುಟ್ಟಿಕೊಂಡಿದ್ದಕ್ಕೆ ಈ ಪ್ರಕ್ರಿಯೆ ಬಹಳ ಕಾಲ ಮುಂದುವರಿಯಲಿಲ್ಲ. ಆದರೆ, ಈ ಪರಿಕಲ್ಪನೆಗೆ ಒಂದು ಶಕ್ತಿ ಇದೆ ಎಂಬುದನ್ನು ಈ ಪ್ರಕ್ರಿಯೆ ಸಾಬೀತು ಮಾಡಿತ್ತು.

ಮುಖ್ಯ ಚಿತ್ರ: ‘ಮಹಿಳಾ ಸಮಾಖ್ಯಾ’ ಕಾರ್ಯಕ್ರಮದಡಿ ಬೆಂಗಳೂರಿನ ಆರ್ ಟಿ ನಗರದಲ್ಲಿ ನಡೆದಿದ್ದ ತರಬೇತಿಯೊಂದರ ದೃಶ್ಯ

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಪೆರಿಯೋಡಿ
ವಾಣಿ ಪೆರಿಯೋಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಾಮಾಜಿಕ ಕಾರ್ಯಕರ್ತೆ. 'ತರಿಕಿಟ ಕಲಾ ಕಮ್ಮಟ' ಎಂಬ ಸಾಂಸ್ಕೃತಿಕ ವೇದಿಕೆಯ ಉಸ್ತುವಾರಿ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರುದ್ಧ ಒಕ್ಕೂಟದ ಸಕ್ರಿಯ ಸದಸ್ಯೆ. ಲಿಂಗ ಸಂವೇದನೆ, ಸಂವಹನ ಕೌಶಲ್ಯ ಇತ್ಯಾದಿ ವಿಚಾರಗಳ ಮೇಲೆ ತರಬೇತಿ ನಡೆಸುವುದು ಇಷ್ಟದ ಕೆಲಸ.

1 COMMENT

  1. ಇಂತಹ ಸಂಘಟನೆಗಳಿಗೆ ಸರ್ಕಾರ ಆಸ್ಪದ ಕಲ್ಪಿಸಿದರೂ,ಕೆಲವು ಸಲ ಸಾಮಾನ್ಯ ಜನರೇ ಸಹಕರಿಸುವುದಿಲ್ಲ.
    ಇಂತಹ ಪ್ರಕ್ರಿಯೆಗಳು ಮುಂದುವರೆಯಲಿಲ್ಲ ಅನ್ನೊದು ತುಂಬಾ ನೋವಿನ ಸಂಗತಿ.
    ಇಂತಹ ಒಳ್ಳೊಳ್ಳೆ ಸಂಗತಿಗಳನ್ನೆ ನೀವು ಆರಿಸಿಕೊಳ್ಳೆದು ನನಗೆ ತುಂಬಾ ಖುಷಿ ಕೊಡುತ್ತೆ ಮೇಡಂ.😊😊

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X