ಹಳ್ಳಿ ದಾರಿ | ಅಂದಿನ ಸರ್ಕಾರ ಇಡೀ ದೇಶಕ್ಕೆ ಸುಖಾಸುಮ್ಮನೆ ಅಯೋಡಿನ್ ಉಪ್ಪು ತಿನಿಸಿತು, ಈಗ ಸಾರವರ್ಧಿತ ಅಕ್ಕಿಯ ಸರದಿ!

Date:

Advertisements
ಕಬ್ಬಿಣಾಂಶ ಕೊರತೆಯಂತಹ ಆರೋಗ್ಯ ಸಮಸ್ಯೆ ನಿವಾರಣೆಗೆ ತಜ್ಞರು ಹೇಳುತ್ತಿರುವ ಪರಿಹಾರವನ್ನು ಕಡೆಗಣಿಸಿದ ಒಕ್ಕೂಟ ಸರ್ಕಾರವು, ಸಾರವರ್ಧಿತ ಅಕ್ಕಿ ಕೊಡಲು ಹೊರಟಿರುವುದು ಸೋಜಿಗ. ಆದರೆ, ಈ ಪರಿಹಾರ ಇನ್ನಷ್ಟು ಸಮಸ್ಯೆ ಸೃಷ್ಟಿಸಲಿದೆ ಎಂಬುದು ನಿಶ್ಚಿತ. ಏಕೆಂದರೆ...

ಎಲ್ಲೆಡೆಯೂ ಅದೇ ಚರ್ಚೆ. ಮತ್ತೆ-ಮತ್ತೆ ಅದೇ ಚರ್ಚೆ. ಕಾಂಗ್ರೆಸ್ ಗ್ಯಾರಂಟಿಗಳಲ್ಲೊಂದಾದ, ಬಡವರಿಗೆ ಒಟ್ಟು ಹತ್ತು ಕೆ.ಜಿ ಅಕ್ಕಿ ಕೊಡುತ್ತೇನೆಂಬ ವಾಗ್ದಾನಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಅಕ್ಕಿಯನ್ನು ಕೊಡಲು ತಯಾರಿಲ್ಲ. ಎಲ್ಲ ಕಡೆ ಕೇಳಿ-ಕೇಳಿ ಸೋತ ಸರ್ಕಾರ, ಕೊನೆಯಲ್ಲಿ ಆಹಾರದ ಬದಲಿಗೆ ಹಣವನ್ನು ಕೊಡುವ ನೇರ ನಗದು ಕಾರ್ಯಕ್ರಮ ಆರಂಭಿಸಿತು ಎಂದು.

ಕಾಳಿನ ಬದಲಿಗೆ ಕಾಸನ್ನು ಕೊಡುವ ಸರ್ಕಾರದ ಪ್ರಯತ್ನ ಹೊಸದಲ್ಲ, ಆಗಾಗ್ಗೆ ಅದು ನುಸುಳಿಬರುತ್ತಲೇ ಇದೆ. ಆಹಾರ ಭದ್ರತಾ ಕಾನೂನಿನಲ್ಲಿಯೇ ಅದಕ್ಕೆ ಅವಕಾಶ ಮಾಡಿಕೊಡಲಾಗಿರುವುದರಿಂದ, ನಾವು ಅದರ ವಿರುದ್ಧ ಬೇಡಿಕೆ ಇಡಬಹುದೇ ಹೊರತು ಗದ್ದಲ ಮಾಡುವಂತೆಯೂ ಇಲ್ಲ. ಜನರ ಆಹಾರ ಭದ್ರತೆಯ ಬಗ್ಗೆ ಕಳಕಳಿ ಇರುವವರೆಲ್ಲರ ದೊಡ್ಡ ಚಿಂತೆಯೆಂದರೆ, ನೇರ ನಗದು ವರ್ಗಾವಣೆಯ ಈ ಕಾರ್ಯಕ್ರಮ ಗಟ್ಟಿಯಾಗಿ ಕುಳಿತುಬಿಡಬಾರದೆನ್ನುವುದು.

ಅದು ಒಂದು ಚಿಂತೆಯ ವಿಷಯವಾದರೆ, ಇನ್ನೊಂದು – ಕೃತಕ ಸಾರವರ್ಧಿತ ಅಕ್ಕಿಯನ್ನು ನಮ್ಮ ಪಡಿತರದಲ್ಲಿ ಕೊಡುವ ಕೇಂದ್ರ ಸರ್ಕಾರದ ಯೋಜನೆ. ನಮ್ಮ ಪ್ರಧಾನ ಮಂತ್ರಿಗಳು 2021ರ ಆಗಸ್ಟ್ 15ರಂದು ಕೆಂಪು ಕೋಟೆಯ ಮೇಲೆ ಧ್ವಜ ಹಾರಿಸುತ್ತ ಮಾಡಿದ ಭಾಷಣವನ್ನೇ ಆದೇಶವೆಂಬಂತೆ, ಕೇಂದ್ರ ಸರ್ಕಾರವು ಸಾರವರ್ಧಿತ ಅಕ್ಕಿಯನ್ನು ಪಡಿತರದಲ್ಲಿ ನೀಡಲು ಹೊರಟಿರುವುದು ಚಿಂತೆಗೆ ಕಾರಣವಾಗಿದೆ. ನಮ್ಮ ಸರ್ಕಾರಗಳಿಗೆ ಸಮಸ್ಯೆಗಳಿಗೆ ಉತ್ತರಗಳು ಸಮುದಾಯಗಳ ಒಳಗಿರುವುದು ಕಾಣುವುದಿಲ್ಲವೇಕೆ? ಹೊರಗಡೆಯಿಂದಲೇ ಅದು ಬರಲಿ ಎಂದು ಕಾಯುತ್ತಾರೇಕೆ?

Advertisements

ಈಗ ಪಡಿತರದಲ್ಲಿ ಸಾರವರ್ಧಿತ ಅಕ್ಕಿಯನ್ನು ಕೊಡುವ ವಿಚಾರವನ್ನೇ ನೋಡಿ, ಸುಲಭವಾಗಿ ಮಾಡುವಂಥದ್ದಲ್ಲ ಅದು. ಮೊದಲು ಅಕ್ಕಿಯನ್ನು ಪುಡಿ ಮಾಡಿ ಹಿಟ್ಟು ಮಾಡಿಕೊಳ್ಳಬೇಕು. ಅದರಲ್ಲಿ ಕಬ್ಬಿಣಾಂಶದ ಪುಡಿಯನ್ನು ಸೇರಿಸಬೇಕು. ಅದನ್ನು ಮತ್ತೆ ಅಕ್ಕಿಯ ರೂಪದ ಕಾಳನ್ನಾಗಿ ಪರಿವರ್ತಿಸಬೇಕು; ಅಂದರೆ ಚಿಕ್ಕ ಚಿಕ್ಕ ಉಂಡೆ ಕಟ್ಟಬೇಕು. ಆ ಕಾಳನ್ನು ಸಾದಾ ಅಕ್ಕಿಯೊಂದಿಗೆ ಮಿಶ್ರ ಮಾಡಿ ಪೇಟೆಯಲ್ಲಿ ಬಿಡಬೇಕು, ಅಂದರೆ ಪಡಿತರದಲ್ಲಿ ಕೊಡಬೇಕು. ದೊಡ್ಡ-ದೊಡ್ಡ ಕಂಪನಿಗಳ ದೊಡ್ಡ-ದೊಡ್ಡ ಮಶೀನುಗಳು ಮಾತ್ರ ನಿರ್ವಹಿಸಬಹುದಾದ ಕೆಲಸವಿದು; 2,700 ಕೋಟಿ ರೂಪಾಯಿಗಳ ಪ್ರಾಜೆಕ್ಟ್.

ನನಗೆ, ಈ ಹಿಂದೆ ಉಪ್ಪಿನಲ್ಲಿ ಅಯೋಡಿನ್ ಮಿಶ್ರ ಮಾಡಿದ ಸರ್ಕಾರದ ನೀತಿಯು ನೆನಪಾಗುತ್ತದೆ. ತೊಂಬತ್ತರ ದಶಕವದು. ಹಿಮಾಲಯದ ತಪ್ಪಲಿನಲ್ಲಿ ವಾಸಿಸುವ ಗುಡ್ಡಗಾಡು ಜನರಲ್ಲಿ ಗಳಗಂಡ ಎಂಬ ಗಂಟಲು ಬೇನೆಯೊಂದು ಇತ್ತು. ಗಳಗಂಡ ಇದ್ದವರ ಮಕ್ಕಳು ಬುದ್ಧಿಮಾಂದ್ಯರಾಗಿ ಜನಿಸುತ್ತಿದ್ದರು. ಇದನ್ನು ತಡೆಯಲು ಅಯೋಡಿನ್ ಕೊಡಬೇಕೆಂದು ಯೋಜಿಸಲಾಯಿತು. ಸರ್ಕಾರಕ್ಕೆ ಆಗ ತೋಚಿದ್ದು ಅಯೋಡಿನ್ ಅನ್ನು ಉಪ್ಪಿನಲ್ಲಿ ಸೇರಿಸಿ ಕೊಡಬೇಕೆನ್ನುವುದು. ಒಳ್ಳೆಯ ಉಪಾಯ. ಆದರೆ, ಗುಡ್ಡಗಾಡಿನ ಜನಕ್ಕೆ ಬೇಕಾಗಿದ್ದ ಅಯೋಡಿನ್ ಕೊಡಲು ಇಡೀ ದೇಶದ ಎಲ್ಲ ಜನ ತಿನ್ನುವ ಉಪ್ಪಿನಲ್ಲೂ ಅಯೋಡಿನ್ ಮಿಶ್ರ ಮಾಡಲಾಯಿತು. ಇಡೀ ದೇಶದ ಜನಕ್ಕೆ ಅಯೋಡಿನ್ ಕೊಡುವ ಅವಶ್ಯಕತೆ ಇಲ್ಲ, ಬೇಡ, ಅದು ವ್ಯರ್ಥ ಎಂದು ಎಷ್ಟೇ ವಿಜ್ಞಾನಿಗಳು, ಸಾಮಾಜಿಕ ಕಾರ್ಯಕರ್ತರು ಹೇಳಿದರೂ ಕೇಳದೆ, ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದ ಅಂದಿನ ಸರ್ಕಾರ, ಅಯೋಡೈಸ್ಡ್ ಉಪ್ಪನ್ನು ಸಾರ್ವತ್ರೀಕರಣಗೊಳಿಸಿತಲ್ಲದೆ, ಸಾದಾ ಉಪ್ಪನ್ನು ನಿಷೇಧ ಮಾಡಿತು.

ಈಗ ಮತ್ತದೇ ಪುನರಾವರ್ತನೆಗೊಳ್ಳುತ್ತಿದೆ. ಆ ಸರ್ಕಾರವಾದರೇನು, ಈ ಸರ್ಕಾರವಾದರೇನು? ವಿದೇಶಿ ಕಂಪನಿಗಳ ಒತ್ತಡದ ಮುಂದೆ ಸ್ವದೇಶಿ ಬುದ್ಧಿಮಾತುಗಳು ಹೊಳೆ ನೀರಲ್ಲಿ ಹುಣಿಸೆ ತೊಳೆದಂತೆ ಕಾಣದಾಗುತ್ತದೆ, ಕೇಳದಾಗುತ್ತಿದೆ. “ನಮ್ಮ ಜನರಲ್ಲಿ ಅಪೌಷ್ಟಿಕತೆ ಕಡಿಮೆಯಾಗುತ್ತಿಲ್ಲ, ಪೌಷ್ಟಿಕಾಂಶವನ್ನು ಅಕ್ಕಿಯಲ್ಲಿ ಬೆರೆಸಿ ಕೊಡುತ್ತೇವೆ,” ಎಂದು ಮಾನ್ಯ ಪ್ರಧಾನ ಮಂತ್ರಿಗಳು ದೇಶದ ಜನಕ್ಕೆ ವಾಗ್ದಾನ ಮಾಡುತ್ತಾರೆ, ಅದರಂತೆ ವಿದೇಶಿ (ಜರ್ಮನಿಯ) ಬಿಎಎಸ್‌ಎಫ್, ಸ್ವಿಟ್ಸರ್‌ಲ್ಯಾಂಡಿನ ಲೊಂಸಾ, ನೆದರ್‌ಲ್ಯಾಂಡಿನ ಎಡಿಎಂ ಮುಂತಾದ ಕಂಪನಿಗಳು ಪಡಿತರದಲ್ಲಿ ಕಬ್ಬಿಣಾಂಶವನ್ನು ಬೆರೆಸಿ 80 ಕೋಟಿ ಜನರಿಗೆ ಉಣ್ಣಿಸಲಿವೆ.

ಇಲ್ಲಿ ಹೇಳುವ ‘ಅಪೌಷ್ಟಿಕತೆ’ ಎಂದರೆ ರಕ್ತಹೀನತೆ. ಮಹಿಳೆಯರಲ್ಲಿ, ಮಕ್ಕಳಲ್ಲಿ, ಬಹುತೇಕ ಗಂಡಸರಲ್ಲಿಯೂ ಕಡಿಮೆ ಆಗದಿರುವ ರಕ್ತಹೀನತೆ. ನಿಜ, ಇದೊಂದು ಸಾರ್ವಜನಿಕ ಆರೋಗ್ಯದ ಸಮಸ್ಯೆ. ಈ ಸಮಸ್ಯೆಯ ಬಗ್ಗೆ ಸಾಮಾಜಿಕ ಕಳಕಳಿ ಉಳ್ಳವರು ಮತ್ತೆ-ಮತ್ತೆ ಹೇಳುತ್ತಲೇ ಇದ್ದಾರೆ, ಜೊತೆಗೆ ಪರಿಹಾರವನ್ನೂ ಸೂಚಿಸುತ್ತಿದ್ದಾರೆ.

ರಕ್ತಹೀನತೆ ಆಗಬಾರದೆಂದರೆ, ಆಹಾರದಲ್ಲಿ ಕಬ್ಬಿಣಾಂಶ ಮತ್ತು ಫೋಲಿಕ್ ಆಸಿಡ್ ಇರಬೇಕು. ಅದು ಬಹಳಷ್ಟು ಜಾಸ್ತಿ ಇರುವುದು ಮೀನು, ಮೊಟ್ಟೆ, ಮಾಂಸ ಮುಂತಾದ ಆಹಾರ ವಸ್ತುಗಳಲ್ಲಿ. ನಮ್ಮ ದೇಶದ ಅತಿ ಹೆಚ್ಚು ಜನರು ಮಾಂಸಾಹಾರಿಗಳಾಗಿದ್ದರೂ ಅವು ದುಬಾರಿ ಆಗಿರುವ ಕಾರಣಕ್ಕೆ ಸಾಕಷ್ಟು ಪ್ರಮಾಣದಲ್ಲಿ ತಿನ್ನದಿರುವುದು ಅಪೌಷ್ಟಿಕತೆಗೆ ಕಾರಣವಾಗಿದೆ. ಸಾಮಾಜಿಕ ಹೋರಾಟಗಾರರ ಸತತ ಹೋರಾಟದಿಂದ ಇದೀಗ ಮೊಟ್ಟೆಯು ಅಂಗನವಾಡಿ ಮತ್ತು ಶಾಲೆಗಳ ಮಧ್ಯಾಹ್ನದ ಬಿಸಿಯೂಟದಲ್ಲಿ ಕಾಣಿಸಿಕೊಂಡಿದೆಯಾದರೂ, ಅದಕ್ಕೂ ಮಠಮಾನ್ಯರಿಂದ ಕಾಲಕಾಲಕ್ಕೆ ತಡೆ ಬರುತ್ತಲೇ ಇರುವುದು ಸುಳ್ಳಲ್ಲ. ಸಸ್ಯಾಹಾರದಲ್ಲಿ ದೇಹಕ್ಕೆ ಬೇಕಾಗುವ ಪ್ರಮಾಣದಲ್ಲಿ ಕಬ್ಬಿಣಾಂಶ ಲಭ್ಯವಿಲ್ಲ ಎಂಬುದನ್ನು ನಾವಿಲ್ಲಿ ಒಪ್ಪಿಕೊಳ್ಳಲೇಬೇಕು. ನಮ್ಮ ಸಾಂಪ್ರದಾಯಿಕ ಬೆಳೆಗಳಾದ ಜೋಳ, ಸಜ್ಜೆ, ರಾಗಿಗಳಲ್ಲಿ ಕಬ್ಬಿಣಾಂಶದ ಪ್ರಮಾಣ ಗೋಧಿ ಮತ್ತು ಅಕ್ಕಿಗಿಂತಲೂ ಹೆಚ್ಚು ಇದೆ. ರಾಗಿ-ಜೋಳವನ್ನು, ಸಿರಿಧಾನ್ಯಗಳನ್ನು ಪಡಿತರದಲ್ಲಿ ಕೊಡಿ ಎಂಬುದು ಸಾಮಾಜಿಕ ಸಂಘಟನೆಗಳ ಅನುಗಾಲದ ಬೇಡಿಕೆ. ಆದರೆ, ಕಬ್ಬಿಣಾಂಶ ಅತಿ ಕಡಿಮೆ ಇರುವ ಅಕ್ಕಿ ಮತ್ತು ಗೋಧಿಯನ್ನೇ ಪಡಿತರದಲ್ಲಿ ಎಲ್ಲ ಸರ್ಕಾರಗಳೂ ಮುಂದುವರಿಸಿದ್ದು, ಸರ್ಕಾರದ ನೀತಿಯ ಮೇಲೆ ಹೊರಗಿನವರ ಕೈವಾಡ ಇರುವುದನ್ನು ಸ್ಪಷ್ಟಪಡಿಸುತ್ತದೆ. ಕೇವಲ ಅಕ್ಕಿ ಮತ್ತು ಗೋಧಿಯನ್ನು ಕೊಟ್ಟರೆ, ಅದನ್ನೇ ಅವಲಂಬಿಸಿರುವ ಬಡ ಮತ್ತು ಬುಡಕಟ್ಟು ಜನರ ಅಪೌಷ್ಟಿಕತೆಯು ಮುಂದುವರಿಯುತ್ತಲೇ ಹೋಗುತ್ತದೆ. ವೈವಿಧ್ಯಮಯ ಆಹಾರವೇ ಇದಕ್ಕೆ ಉತ್ತರ ಎಂದು ಮತ್ತೆ-ಮತ್ತೆ ಸಮಾಜ ವಿಜ್ಞಾನಿಗಳು ಹೇಳುತ್ತಿದ್ದರೂ, ಅದೇ ಅಕ್ಕಿಗೆ ಸಾರವರ್ಧನೆಯನ್ನು ಮಾಡುವ ವಿಚಾರವನ್ನು ಸರ್ಕಾರ ಮಾಡುತ್ತದೆಯೇ ವಿನಾ, ಅವಶ್ಯ ಇರುವ ವೈವಿಧ್ಯಮಯ ಆಹಾರ ಸಿಗುವಂತೆ ಏನು ಮಾಡಬೇಕೆಂದು ಯೋಚನೆ ಮಾಡುತ್ತಿಲ್ಲ. ಇದು ಚಿಂತೆಯ ವಿಷಯ.

ಅನ್ನಕ್ಕೆ ಬರಿಯ ಉಪ್ಪು-ಖಾರ ಬೆರೆಸಿ ತಿನ್ನುತ್ತಿರುವವರ ತಾಟಿನಲ್ಲಿ ಸೊಪ್ಪು, ಮಾಂಸ, ಮೊಟ್ಟೆಗಳು ಬರುವಂತೆ ಮಾಡುವುದು ಸರ್ಕಾರದ ಆದ್ಯತೆ ಆಗಬೇಕಿತ್ತು. ಊಟದ ತಾಟಿನಲ್ಲಿ ವೈವಿಧ್ಯಮಯ ಆಹಾರ ಬರಬೇಕೆಂದರೆ ಅದಕ್ಕೊಂದೇ ಉಪಾಯ; ಜನರ ಕೈಗೆ ಅದರಲ್ಲೂ ಮಹಿಳೆಯರ ಕೈಗೆ ಹೆಚ್ಚೆಚ್ಚು ಉದ್ಯೋಗ ಸಿಗುವಂತೆ ಮಾಡಬೇಕು. ದುಡಿದ ದುಡ್ಡು ಆಹಾರಕ್ಕೆ ಖರ್ಚಾಗುವಂತೆ ಆಗಬೇಕು. ಸ್ಥಳೀಯ, ವೈವಿಧ್ಯಮಯ, ತಾಜಾ ಆಹಾರ ವಸ್ತುಗಳು ಊಟದ ತಾಟಿಗೆ ಬಂದು ಬೀಳುವಂತಾಗಬೇಕು. ನಮ್ಮ ಜನರು ಇನ್ನೂ ಸಂಪೂರ್ಣವಾಗಿ ಸಂಸ್ಕರಿಸಿದ ಆಹಾರವನ್ನು ಅವಲಂಬಿಸಿಲ್ಲ. ಅವನ್ನು ಖರೀದಿಸುವ ಸಾಮರ್ಥ್ಯವೂ ಅವರಿಗೆ ಬಂದಿಲ್ಲ. ದುಡಿದ ದುಡ್ಡು ಸ್ಥಳೀಯ ಸಂತೆಗೆ ಖರ್ಚಾಗಬೇಕೇ ಹೊರತು ಬೇಕರಿಗೆ ಹೋಗಬಾರದು.

ಅವಶ್ಯಕತೆ ಇಲ್ಲದವರಿಗೆ ಅಯೋಡಿನ್ ಕೊಟ್ಟಾಗ ಅದು ಮಲ-ಮೂತ್ರದಲ್ಲಿ ಹೊರಹೋಯಿತು, ಹೋಗುತ್ತಿದೆ. ಆದರೆ, ಕಬ್ಬಿಣಾಂಶ ದೇಹದಿಂದ ಸುಲಭವಾಗಿ ಹೊರಹೋಗದು. ಹೌದು… ಕಬ್ಬಿಣಾಂಶ, ಫೋಲಿಕ್ ಆಸಿಡ್‌ಗಳನ್ನು ಅನ್ನದೊಂದಿಗೆ ತಿಂದಾಗ ಅದು ರಕ್ತದೊಂದಿಗೆ ಬೆರೆಯಲು ಪ್ರೋಟೀನ್ ಬೇಕು. ಪ್ರೋಟೀನ್ ಇರುವುದು ಕಾಳು ಮತ್ತು ಬೇಳೆಗಳಲ್ಲಿ, ಮಾಂಸ-ಮೊಟ್ಟೆಗಳಲ್ಲಿ. ಕಾಳು-ಬೇಳೆಗಳನ್ನು ಪಡಿತರದಲ್ಲಿ ಕೊಡಿ ಎಂದು ಸಾಮಾಜಿಕ ಸಂಘಟನೆಗಳು ಹೋರಾಟ ಶುರುಮಾಡಿ ಬಹಳ ಕಾಲವಾಯಿತು. “ಒಂದು ಪೋಷಕಾಂಶ ರಕ್ತದಲ್ಲಿ ಸೇರಬೇಕೆಂದರೆ ಅದಕ್ಕೆ ಇನ್ನೊಂದು ಪೋಷಕಾಂಶದ ಸಹಾಯ ಬೇಕು. ಅದು ಸಿಗದಿದ್ದಾಗ ಕಬ್ಬಿಣಾಂಶ ಜೀರ್ಣವಾಗುವುದಿಲ್ಲ, ರಕ್ತದಲ್ಲಿ ಬೆರೆಯುವುದಿಲ್ಲ. ಅಷ್ಟೇ ಅಲ್ಲ, ದೇಹದಲ್ಲಿ ಸಂಗ್ರಹವಾಗುತ್ತ ಹೋಗುತ್ತದೆ. ಇದು ಸಿಕ್ಕೆಲ್ ಸೆಲ್ ಅನೀಮಿಯಾ, ಥೆಲಿಸೀಮಿಯಾದಂಥ ರೋಗಿಗಳಿಗೆ ಅಪಾಯಕಾರಿ. ಸಕ್ಕರೆ ರೋಗಿಗಳ ಸಂಖ್ಯೆ ಹೆಚ್ಚಲಿದೆ ಎನ್ನುತ್ತಾರೆ,” ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಸಂಸ್ಥೆಯ ವೈದ್ಯ ಅನುರಾ ಕರ್ಪದ್.

‘ರಿಪೋರ್ಟರ್ಸ್ ಕಲೆಕ್ಟಿವ್’ ಮಾಡಿರುವ ಒಂದು ಶೋಧನೆಯ ಪ್ರಕಾರ, ದೇಶದ ಜನರ ಅಪೌಷ್ಟಿಕತೆಯನ್ನು ಒಂದು ಲಾಭದಾಯಕ ಉದ್ದಿಮೆಯನ್ನಾಗಿ ಮಾಡುವ ಆತುರ, ವಿದೇಶಿ ಕಂಪನಿಗಳಿಗೆ ಆ ಉದ್ದಿಮೆಯನ್ನು ಕೊಡುವ ಕಾತರ ಎದ್ದುಕಾಣುತ್ತಿದೆಯೇ ಹೊರತು ಅಪೌಷ್ಟಿಕತೆಯನ್ನು ದೂರ ಮಾಡುವುದಲ್ಲ ಎಂದು ಗೊತ್ತಾಗಿದೆ. ಸರ್ಕಾರದ ನೀತಿ ಆಯೋಗದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಇದಕ್ಕೆ ಇನ್ನೂ ಸಮಯ ಬೇಕು ಎಂದು ನಿರ್ಣಯವಾಗಿದೆ. “ಇದು ತರಾತುರಿಯಿಂದ ಮಾಡುವ ಕೆಲಸವಲ್ಲ,” ಎಂದು ಹಣಕಾಸು ಮಂತ್ರಾಲಯವು ಹೇಳಿದೆ. ಸಾರವರ್ಧಿತ ಅಕ್ಕಿಯಿಂದ ಮಕ್ಕಳ ಅಪೌಷ್ಟಿಕತೆ ದೂರವಾಗುವುದಿಲ್ಲ ಎಂದು ಇಂಡಿಯನ್ ಮೆಡಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಹೇಳಿದೆ.

2021-22ರಲ್ಲಿ ದೇಶದ 112 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸಾರವರ್ಧಿತ ಅಕ್ಕಿಯನ್ನು ಕೊಟ್ಟು ಪರಿಣಾಮವನ್ನು ನೋಡಬೇಕಾಗಿತ್ತು. ಆದರೆ, ಎಲ್ಲ ಕಡೆಗೆ ಆ ಅಕ್ಕಿಯ ಸರಬರಾಜು ಆಗದೆ ಪ್ರಯೋಗ ಯಶಸ್ವಿ ಆಗಿಲ್ಲ. ಪ್ರಯೋಗದ ಫಲಿತಾಂಶಗಳು ಬಂದಿಲ್ಲ. ಆದರೂ ನಮ್ಮ ಸರ್ಕಾರಕ್ಕೆ ಆತುರ.

ಚತ್ತೀಸ್‌ಗಢ, ಜಾರ್ಖಂಡ್‌ನಂತಹ ಗುಡ್ಡಗಾಡು ರಾಜ್ಯಗಳಲ್ಲಿ ಪಡಿತರ ಅಕ್ಕಿಯಲ್ಲಿ ಕಬ್ಬಿಣಾಂಶವನ್ನು ಬೆರೆಸಿ ಸರ್ಕಾರ ಕೊಡಲಾರಂಭಿಸಿದಾಗ, ‘ಆಹಾರದ ಹಕ್ಕಿಗಾಗಿ ಆಂದೋಲನ’ವು ಒಂದು ಸರ್ವೆ ಆರಂಭಿಸಿತು. ಪಡಿತರಕ್ಕೆ ಕೊಡುವ ಅಕ್ಕಿ ಚೀಲಗಳ ಮೇಲೆ ಸಣ್ಣ ಅಕ್ಷರದಲ್ಲಿ, ‘ಥೆಲಿಸೀಮಿಯಾ, ಸಿಕ್ಕೆಲ್ ಸೆಲ್ ಅನೀಮಿಯಾ ರೋಗಿಗಳು ವೈದ್ಯರ ಸಲಹೆಯ ಮೇರೆಗೆ ಮಾತ್ರ ಈ ಅಕ್ಕಿಯನ್ನು ತಿನ್ನಬಹುದು’ ಎಂದು ಬರೆದಿತ್ತಂತೆ. ಆ ಚೀಲಗಳಿಂದ ತೆಗೆದು ಅಕ್ಕಿಯನ್ನು ಹಂಚುವ ರೇಶನ್ ಅಂಗಡಿಯವನು ಆ ಸಂದೇಶವನ್ನು ರೋಗಿಗಳಿಗೆ ದಾಟಿಸುತ್ತಾನೆಯೇ? ಅಂಥ ರೋಗಿಗಳಿರುವ ಕುಟುಂಬಕ್ಕೆ ಬೇರೆ ಅಕ್ಕಿಯನ್ನು ಕೊಡಲಾಗುತ್ತಿದೆಯೇ? ಎಲ್ಲರಿಗೂ ಒಮ್ಮೆಗೇ ಅಡಿಗೆ ಮಾಡಿ ಕೆಲಸಕ್ಕೆ ಹೋಗುವ ಮಹಿಳೆಗೆ ಈ ಬಗ್ಗೆ ತಿಳಿವಳಿಕೆ ಕೊಡಲಾಗುತ್ತಿದೆಯೇ? ಒಂದೂ ಇಲ್ಲವೆಂದು ಈ ಸರ್ವೆಯಲ್ಲಿ ಗೊತ್ತಾಯಿತು.

ಸಾರ್ವತ್ರಿಕ ಆರೋಗ್ಯ ಸಮಸ್ಯೆ ನಿವಾರಣೆಗೆ ವಿಜ್ಞಾನಿಗಳು, ಸಮಾಜಶಾಸ್ತ್ರಜ್ಞರು ಹೇಳುತ್ತಿರುವ ಪರಿಹಾರವನ್ನು ಕಡೆಗಣಿಸಿ ಕೈಗಾರಿಕೋದ್ಯಮಿಗಳ ಒತ್ತಡಕ್ಕೆ ಮಣಿದು ಸರ್ಕಾರವು ದೇಶದ ಮಹಿಳೆ ಮತ್ತು ಮಕ್ಕಳ ಅಪೌಷ್ಟಿಕತೆಗೆ ತಾನೇ ಪರಿಹಾರ ಕೊಡಲು ಹೊರಟಿದೆ. ಅದೂ ಅಕ್ಕಿಯಲ್ಲಿ ಸಾರವರ್ಧಿತ ಕಬ್ಬಿಣಾಂಶವನ್ನು ಬೆರೆಸಿ ಕೊಡುವುದರ ಮೂಲಕ! ತಾನು ಯಜಮಾನ, ತಾನು ಹೇಳಿದ್ದನ್ನು, ತಾನು ಹೇಳಿದಂತೆ ತಿನ್ನಬೇಕು ಎಂಬ ಯಜಮಾನಿಕೆಯ ಗುಣ ಇಲ್ಲಿ ಎದ್ದುಕಾಣುತ್ತಿದೆಯೇ ಹೊರತು, ದೇಶದ ಜನರ ಪೌಷ್ಟಿಕಾಂಶ ವರ್ಧನೆಯ ಆಶಯವಂತೂ ಕಾಣುತ್ತಿಲ್ಲ.

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶಾರದಾ ಗೋಪಾಲ
ಶಾರದಾ ಗೋಪಾಲ
ಸಿದ್ದಾಪುರ ತಾಲೂಕಿನ ಬಕ್ಕೆಮನೆಯವರು. ಸದ್ಯ ಧಾರವಾಡ ನಿವಾಸಿ. ಗ್ರಾಮೀಣರ ಬದುಕುಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು, ಗ್ರಾಮೀಣ ಅಭಿವೃದ್ಧಿಯ ವಾಸ್ತವ ಸಂಗತಿಗಳ ಕುರಿತು ನಿಖರವಾಗಿ ಬರೆಯಬಲ್ಲವರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X