(ಈ ಆಡಿಯೊ ಟ್ಯಾಬ್ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)
ಇಂಗ್ಲೀಷಿನಲ್ಲಿಯಂತೂ ಚುಂಬನವನ್ನು ಕುರಿತಾಗಿ, ಕಾವ್ಯಗಳಲ್ಲಿ ಚುಂಬನದ ಪರಂಪರೆಯನ್ನು ಕುರಿತೇ ಹಲವು ಉದ್ಗ್ರಂಥಗಳೂ ಬಂದಿವೆ. ಅದೇನೂ ಕಲಿಗಾಲದ ಪುಸ್ತಕವಲ್ಲ. ಶೃಂಗಾರ ರಸಕಾವ್ಯ ಎನ್ನಿಸಿದ ಕಾಮಸೂತ್ರದಲ್ಲಿ ಮೂರು ಬಗೆಯ ವಿಶಿಷ್ಟ ಚುಂಬನಗಳ ಬಗ್ಗೆ ಉಲ್ಲೇಖವಿದೆ
ಏನಂದಿರಿ? ನಾನೂ ಟ್ರಾಲ್ ಯೋಧನಾಗಿಬಿಟ್ಟೆ ಅಂದಿರಾ? ಕ್ಷಮಿಸಿ. ಇದು ಪಾರ್ಲಿಮೆಂಟಿನಲ್ಲಿ ಗಾಳಿಯಲ್ಲಿ ಹಾರಿದ ಚುಂಬನದ ಬಗ್ಗೆ ಅಲ್ಲ. ಆ ‘ಫ್ಲೈಯಿಂಗ್ ಕಿಸ್’ ಅವತ್ತೇ ಹಾರಿಹೋಯಿತು. ಅಥವಾ ಇದೀಗ ‘ಚಂದ್ರ ಚುಂಬನ’ ಅಂತ ಟೀವಿ ಚಾನೆಲ್ಲುಗಳು ಹೇಳುತ್ತಿವೆಯಲ್ಲ, ಆ ಚಂದ್ರಯಾನದ ಬಗ್ಗೆಯೂ ಅಲ್ಲ. ಕಳೆದ ಬಾರಿ ಅದು ‘ಪ್ರಥಮ ಚುಂಬನಂ ದಂತಭಗ್ನಂ’ ಅನ್ನುವ ರೀತಿಯಲ್ಲಿ ಆಗಿದ್ದು ನೆನಪಿದೆ. ಈಗ ನಾನು ಮಾತನಾಡುವುದು ನಿಜವಾದ ಚುಂಬನದ ಬಗ್ಗೆ. ‘ಕಣ್ಣೂ ಕಣ್ಣೂ ಕಲೆತಾಗ’ ನೂರಾರು ಆಸೆಗಳು ಹುಟ್ಟುತ್ತವೆ ಎಂದು ಅಣ್ಣಾವ್ರು ಹಾಡಿದ್ದು ಕೇಳಿದ್ದೇವಲ್ಲ, ಹಾಗೆಯೇ ತುಟಿಗೆ ತುಟಿ ಬೆಸೆದಾಗ ಏನಾಗುತ್ತದೆ ಎನ್ನುವುದರ ವಿಜ್ಞಾನ – ಒಂದು ವಿಶ್ಲೇಷಣೆ.
ಓಹ್… ಮುತ್ತಿನ ಬಗ್ಗೆ ಇಂತಹ ವಿಶ್ಲೇಷಣೆಯೂ ಉಂಟೇ ಅಂತ ನೀವು ಅಚ್ಚರಿಪಡುವ ಮೊದಲು ಎರಡು ಮಾತು. ‘ಮುತ್ತು’ ಎನ್ನುವುದು ಆಡುಭಾಷೆ. ‘ಚುಂಬನ’ ಎನ್ನುವುದು ವಿದ್ವಾಂಸರ ನುಡಿ. ಪದ ಬದಲಾದ ಕೂಡಲೇ ಅದರ ಪ್ರಭಾವ ಬದಲಾಗಬೇಕು ಎಂದೇನಿಲ್ಲವಲ್ಲ? ಉದಾಹರಣೆಗೆ, ಇಂಗ್ಲೀಷಿನಲ್ಲಿ ಚುಂಬನಕ್ಕೆ ‘ಕಿಸ್’ ಎಂದು ನಾವು ಸರಳವಾಗಿ ಹೇಳಿಬಿಡುತ್ತೇವೆ. ಆದರೆ ಇದನ್ನೇ ಸ್ವಲ್ಪ ಗಂಭೀರವಾಗಿ ಅಧ್ಯಯನ ಮಾಡುವ ವಿಜ್ಞಾನಿಗಳು ಅದಕ್ಕೆ ‘ಆಸ್ಟ್ರುಕ್ಯುಲೇಷನ್’ ಎನ್ನುತ್ತಾರೆ. ಹಾಗೆಂದರೆ ಇನ್ನೇನಲ್ಲ… ತುಟಿಗೆ ತುಟಿ ಮುಟ್ಟಿಸುವುದು ಅಂತ.
ಛೇ… ಎಂತಹ ಅರಸಿಕರು ಈ ವಿಜ್ಞಾನಿಗಳು ಅಂದಿರಾ? ಹಾಗೇನಿಲ್ಲ. ವಿಜ್ಞಾನಿಗಳಿಗೆ ಯಾವುದೂ ಮಡಿ ಅಲ್ಲ. ಎಲ್ಲವೂ ಒಂದೇ. ಯಾಕೆ… ಮಲ, ಮೂತ್ರ, ಉಗುಳು ಅಂತ ಎಲ್ಲ ಬಗೆಯ ಉಚ್ಛಿಷ್ಟಗಳನ್ನೂ ಅಧ್ಯಯನ ಮಾಡುವುದಿಲ್ಲವೇ? ಹಾಗೆಯೇ ಮನುಷ್ಯನಿಗೆ ಸಂಬಂಧಿಸಿದ ಎಲ್ಲ ವಿಷಯಗಳ ಮೇಲೂ ಆಸಕ್ತಿ ಇದ್ದೇ ಇದೆ. ಚುಂಬನ ಕೂಡ ಮನುಷ್ಯನಿಗೆ ಸಂಬಂಧಿಸಿದ್ದೇ ಅಲ್ಲವೇ? ಹೀಗಾಗಿ, ಅದರ ಬಗ್ಗೆ ನಿರ್ಭಾವುಕರಾಗಿ ಅಧ್ಯಯನ ಮಾಡಲು ಹೀಗೊಂದು ಹೆಸರು ಕೊಟ್ಟಿದ್ದಾರೆ.
ಕವಿಗಳಿಗೂ ಚುಂಬನಕ್ಕೂ ಅವಿನಾಭಾವ ಸಂಬಂಧವಿದೆ. ನಮ್ಮ ರಾಷ್ಟ್ರಕವಿ ಕುವೆಂಪುರವರನ್ನೂ ಚುಂಬನ ಸೆಳೆದಿತ್ತು. ‘ಬಾ ಚಕೋರಿ, ಚಂದ್ರಮಂಚಕೆ ಬಾ,’ ಎಂದು ಪ್ರಿಯತಮೆಯನ್ನು ಆಹ್ವಾನಿಸುವಾಗ ಕುವೆಂಪುರವರು, ‘ಬಾಯಾರಿದೆ ಚಕೋರ ಚುಂಬನ/ ಬಾ ಚಕೋರಿ ಬಾ ಚಕೋರಿ ಚಂದ್ರ ಮಂಚಕೆ’ ಅಂತ ಆಹ್ವಾನಿಸಿ, ಯಾಕಂತ ಕಾರಣವನ್ನೂ ಹೇಳಿ ಬಿಡುತ್ತಾರೆ; ‘ನಿಕುಂಜ ರತಿವನ ಮದನ ಯಾಗಕೆ/ ಅನಂಗರಕ್ತಿಯ ಬಿಂಬ ಭೋಗಕೆ/ ಕಾಂಕ್ಷಿಯಾಗಿದೆ ನಗ್ನ ಯೋಗಕೆ/ ಇಕ್ಷು ಮಂಚದ ಸಾಗ್ನಿ ಪಕ್ಷಿಯ ಅಚಂಚು ಚುಂಬನ…’ ಅಂತ ಹೇಳುತ್ತಾರೆ. ಚುಂಬನ ಅವರ ಮಟ್ಟಿಗೆ ನಗ್ನಯೋಗದ ಭೋಗಕ್ಕೆ ಸಾಕ್ಷಿ. ಜನಪ್ರಿಯ ಕವಿಗಳೂ ಇದನ್ನು ಮರೆತಿಲ್ಲ. ‘ನೀರಿನಲ್ಲಿ ಅಲೆಯ ಉಂಗುರ, ಕೆನ್ನೆ ಮೇಲೆ ಪ್ರೇಮದುಂಗುರ’ ಎಂದು ಕಾವ್ಯಮಯವಾಗಿ ಸಿನಿಮಾದಲ್ಲಿಯೂ ಹಾಡಿಬಿಟ್ಟಿದ್ದಾರೆ. ಅಂದಹಾಗೆ, ಈಗಲೂ ಸಿನಿಮಾದಲ್ಲಿ ಚುಂಬನವನ್ನು ಪ್ರದರ್ಶಿಸುವುದು ಅಶ್ಲೀಲವೆಂದೇ ಆಗಿದೆ. ಹಾಗಾಗಿ, ರತಿವನ ಮದನರು ಯಾಗಕ್ಕೆ ಹೊರಟಾಗ, ಗುಲಾಬಿಯೋ, ಇನ್ಯಾವುದೋ ಹೂವು ಅದು ನಮಗೆ ಕಾಣದಂತೆ ಅಡ್ಡಿಯಾಗಿಬಿಡುತ್ತದೆ.
ಇಂಗ್ಲೀಷಿನಲ್ಲಿಯಂತೂ ಚುಂಬನವನ್ನು ಕುರಿತಾಗಿ, ಕಾವ್ಯಗಳಲ್ಲಿ ಚುಂಬನದ ಪರಂಪರೆಯನ್ನು ಕುರಿತೇ ಹಲವು ಉದ್ಗ್ರಂಥಗಳೂ ಬಂದಿವೆ. ಅದೇನೂ ಕಲಿಗಾಲದ ಪುಸ್ತಕವಲ್ಲ. ಶೃಂಗಾರ ರಸಕಾವ್ಯ ಎನ್ನಿಸಿದ ಕಾಮಸೂತ್ರದಲ್ಲಿ ಮೂರು ಬಗೆಯ ವಿಶಿಷ್ಟ ಚುಂಬನಗಳ ಬಗ್ಗೆ ಉಲ್ಲೇಖವಿದೆ. ಇದು ಕುವೆಂಪುರವರು ಹೇಳುವ ಪರಿಯ ಚುಂಬನ. 1876ರಲ್ಲಿ ಇಂಗ್ಲೆಂಡಿನ ಚಾರ್ಲ್ಸ್ ಎಂಬಾತ ‘ದಿ ಲಿಟರೇಚರ್ ಆಫ್ ಕಿಸಸ್’ ಎನ್ನುವ ಪುಸ್ತಕ ಬರೆದಿದ್ದ. ಇನ್ನು, ಎಲ್ಲ ವಿದ್ವಾಂಸರೂ ಉಲ್ಲೇಖಿಸುವ ಶೇಕ್ಸ್ಪಿಯರ್ ಕೂಡ ಹಿಂದೆ ಬಿದ್ದಿಲ್ಲ. ‘ತಟ್ಟಿದರೆ ನಿನ್ನ ಅಧರ ನನ್ನ ತುಟಿಗಳನು/ ಆಗುವುದು ಚುಂಬನ ನನ್ನದೂ, ನಿನ್ನದೂ’ ಅಂತ ಶೇಕ್ಸ್ಪಿಯರ್ ಹೇಳಿಬಿಟ್ಟಿದ್ದ.
ಇರಲಿ… ಮುತ್ತೋ, ಚುಂಬನವೋ. ‘ಚುಂಬನಾ ತರಾ, ತರಾ’ ಅಂತ ಯಾವುದಾದರೂ ಚಲನಚಿತ್ರದಲ್ಲಿ ಹಾಡು ಬಂದರೆ ಅಚ್ಚರಿಪಡಬೇಕಿಲ್ಲ. ಅಪರಿಚಿತರನ್ನೂ, ಪರಿಚಿತರನ್ನೂ ಭೇಟಿಯಾದಾಗ ವಂದಿಸುವ ಕ್ರಮಗಳಲ್ಲಿ ಚುಂಬನಕ್ಕೆ ಮೊದಲ ಸ್ಥಾನ ಇದೆಯಂತೆ; ಹಾಗಂತ, ಕೇವಲ ಚುಂಬನಗಳನ್ನು ಕುರಿತೇ ಬರೆದಿರುವ ನೂರು ಪುಟದ ಪುಸ್ತಕವೊಂದರಲ್ಲಿ ಲಾನಾ ಸಿಟ್ರಾನ್ ಎಂಬಾಕೆ ದಾಖಲಿಸಿದ್ದಾಳೆ. ಚುಂಬನ ಕೇವಲ ಶೃಂಗಾರಕ್ಕಲ್ಲವಂತೆ. ಅದು ವಂದನೆಯ ಸೂಚಕವೂ ಹೌದು.
ಇದಕ್ಕೆ ಪುರಾವೆಯನ್ನು ಸುಪ್ರಸಿದ್ಧ ಜೀವಿವಿಜ್ಞಾನಿ ಚಾರ್ಲಸ್ ಡಾರ್ವಿನ್ನನ ಲೇಖನಗಳಲ್ಲಿ ಕಾಣಬಹುದು. ಪ್ರಪಂಚದ ವಿವಿಧೆಡೆಗಳಿಗೆ ಭೇಟಿ ನೀಡಿದ ಡಾರ್ವಿನ್, ಅಲ್ಲಿನ ಪ್ರಾಣಿ-ಪಕ್ಷಿಗಳ ಬಗ್ಗೆ ಅಲ್ಲದೆ, ಮನುಷ್ಯರ ನಡವಳಿಕೆಗಳಲ್ಲಿ ಇರುವ ವ್ಯತ್ಯಾಸಗಳನ್ನೂ ಗಮನಿಸಿ, ದಾಖಲಿಸಿದ್ದ. ಇಂತಹವುಗಳಲ್ಲಿ ಹೊಸ ಜನರ ಪರಿಚಯವಾದಾಗ ವಂದಿಸುವ ರೀತಿಗಳನ್ನೂ ಬರೆದಿಟ್ಟಿದ್ದಾನೆ. ಯುರೋಪಿನ ಕೆಲವು ದೇಶಗಳಲ್ಲಿ ಕೆನ್ನೆಗೆ ಚುಂಬಿಸಿ ವಂದಿಸುವ ಪರಿಪಾಠವಿದೆ. ಕೆಲವು ಬುಡಕಟ್ಟು ಜನಾಂಗಗಳಲ್ಲಿ ಕೆನ್ನೆಗೆ ಕೆನ್ನೆಯನ್ನು ಸೋಂಕಿಸಿ ವಂದಿಸುವುದುಂಟು. ಮಲಯಾದ ಬುಡಕಟ್ಟು ಜನಾಂಗದಲ್ಲಿ ಒಬ್ಬರು ಇನ್ನೊಬ್ಬರ ಮೂಗಿಗೆ ಮೂಗನ್ನು ಸೋಕಿಸಿ ವಂದಿಸುತ್ತಾರೆ. ಹಣೆಗೆ ಹಣೆ ತಾಗಿಸುವುದೂ ಉಂಟು. ಇವೆಲ್ಲವೂ ಮುಂದೆ ಚುಂಬನವಾಗಿ ಬದಲಾಗಿರಬೇಕು ಎಂದು ಮಾನವಶಾಸ್ತ್ರಜ್ಞರು ತರ್ಕಿಸುತ್ತಾರೆ.
ಚುಂಬನ ಕೇವಲ ಕಾಮದ ದ್ಯೋತಕವಲ್ಲ. ಅದು ಪ್ರೀತಿಯ ಸಂಕೇತವೂ ಹೌದು. ಉದಾಹರಣೆಗೆ, ತಂದೆ-ತಾಯಂದಿರು ತಮ್ಮ ಮಕ್ಕಳನ್ನು ಪ್ರೀತಿಯಿಂದ ನೇವರಿಸಿ, ಹಣೆಗೋ, ತಲೆಗೋ, ಕೆನ್ನೆಗೋ ಮುತ್ತಿಡುತ್ತಾರಲ್ಲ, ಅದು ಖಂಡಿತ ಕಾಮದ ದ್ಯೋತಕವಲ್ಲ, ಪ್ರೀತಿಯ ಸಂಕೇತ. ಬೆಕ್ಕು, ನಾಯಿಗಳಂತಹ ಪ್ರಾಣಿಗಳು ಒಂದನ್ನಿನ್ನೊಂದು ನೆಕ್ಕುತ್ತವೆ. ಇದೇ ನಡವಳಿಕೆ ವಿಕಾಸವಾಗಿ ಚುಂಬನವಾಗಿದೆಯೋ ಎನ್ನುವುದು ಇನ್ನೊಂದು ಊಹೆ. ನಾಯಿಗಳಂತೂ ಹೊಸ ನಾಯಿಗಳನ್ನು ಪರಿಚಯ ಮಾಡಿಕೊಳ್ಳುವುದೇ ಒಂದೋ ಬಾಯಿಯನ್ನು ಮೂಸಿ, ಇಲ್ಲವೇ ಅಂಡನ್ನು ಮೂಸಿ. ಬಾಯಿಯನ್ನು ಮೂಸುವ ಪ್ರಾಣಿಗಳ ಈ ಪರಿಪಾಠವೇ ಮುಂದೆ ಸ್ವಲ್ಪ ಸುಧಾರಿಸಿದ ಪ್ರಾಣಿಯಾದ ಮನುಷ್ಯನಲ್ಲಿ ಚುಂಬನವಾಗಿ ಉಳಿದುಕೊಂಡಿರಬಹುದೋ?
‘ಚುಂಬನ’ ಎನ್ನುವ ಪದ ಭಾರತೀಯರ ನಿಘಂಟಿನಲ್ಲಿ ಇರಲೇ ಇಲ್ಲವಂತೆ. ಹಾಗಂತ, ಆ ಕಾಲದಲ್ಲಿ ಎಲ್ಲರೂ ಮಡಿವಂತರೋ, ವಿರಾಗಿಗಳೋ ಆಗಿದ್ದರು ಅಂತಲ್ಲ. ವೇದಕಾಲದಲ್ಲಿ ಚುಂಬನ ಎನ್ನುವ ಪದ ಇರಲಿಲ್ಲ. ಆಗ ತಾಯಿ, ತಂದೆ, ಪ್ರಿಯತಮನ ಚುಂಬನವೆಲ್ಲವೂ ಕೇವಲ ಮೂಸುವುದೇ ಆಗಿತ್ತು. ‘ಘ್ರಾಣ’ ಎನ್ನುವ ಪದವಷ್ಟೇ ಆಗ ಬಳಕೆಯಲ್ಲಿತ್ತು ಎಂದು ಅಮೆರಿಕದ ಯೇಲ್ ವಿಶ್ವವಿದ್ಯಾನಿಲಯದ ವಾಷ್ಬರ್ನ್ ಹಾಪ್ಕಿನ್ಸ್ ಎಂಬಾತ 120 ವರ್ಷಗಳ ಹಿಂದೆಯೇ ಹೇಳಿದ್ದ. ವೇದಕಾಲದ ಸಾಹಿತ್ಯಗಳು, ಪುರಾಣಗಳನ್ನು ಚುಂಬನಕ್ಕಾಗಿಯೇ ಓದಿದ ಮಹಾಶಯ ಈತ. ಬಹುಶಃ ಆಗ ಚುಂಬನದ ರೀತಿ ಬೇರೆಯೇ ಇದ್ದಿರಬೇಕು. ಇಂದಿನಂತೆ ತುಟಿಗೆ ತುಟಿ ಒತ್ತುವುದಾಗಿರಲಿಕ್ಕಿಲ್ಲ ಅನ್ನುವುದು ಅವನ ಅಭಿಪ್ರಾಯ. ನೂರು ವರ್ಷದ ಹಿಂದೆ ಆತ ಅಧ್ಯಯನ ಕೈಗೊಂಡಿದ್ದಾಗ ಈಶಾನ್ಯ ಭಾರತದ ಕೆಲವು ಬುಡಕಟ್ಟು ಜನಾಂಗಗಳಲ್ಲಿ ಗಾಳಿ ಊದುವುದಲ್ಲ, ಬದಲಿಗೆ ಮೂಸುವುದು – ಅಂದರೆ, ಗಾಳಿಯನ್ನು ಹೀರುವುದು ವಾಡಿಕೆಯಾಗಿತ್ತಂತೆ.
ಹಣೆಗೋ, ಕೆನ್ನೆಗೋ ಮುತ್ತು ಕೊಟ್ಟಾಗ ಅಗುವ ಅನುಭವವೂ, ತುಟಿಗೆ ತುಟಿ ಬೆಸೆದಾಗ ಆಗುವುದೂ ಬೇರೆ ಎನ್ನುವುದು ರಸಿಕರ ಅನುಭವ. ಅದಕ್ಕೆ ಕಾರಣವೂ ಇದೆಯಂತೆ. ತುಟಿಗಳ ಚರ್ಮ ಬಹಳ ತೆಳು. ಚರ್ಮದ ಕೆಳಗೆ ಬಹಳಷ್ಟು ನರತಂತುಗಳು ಇರುತ್ತವೆ. ತುಟಿ ಇಲ್ಲವೇ ಬಾಯಿಯಲ್ಲಿ ಹುಣ್ಣಾದಾಗ ಆಗುವ ನೋವು ಬಹುಶಃ ತಲೆ ಕತ್ತರಿಸಿದರೂ ಆಗಲಿಕ್ಕಿಲ್ಲ. ಕಾರಣ, ತುಟಿಗಳಲ್ಲಿರುವ ಸಂವೇದನಾ ನರಗಳು. ನವಿರಾದ ಸ್ಪರ್ಶವನ್ನೂ ಇವು ಗ್ರಹಿಸಬಲ್ಲವು. ತುಸುವೇ ಬೆಚ್ಚಗಿನ ಉಸಿರಿಗೂ ಸ್ಪಂದಿಸಬಲ್ಲವು. ವಾಸ್ತವದಲ್ಲಿ ತುಟಿಗಳನ್ನು ಮಿದುಳಿಗೆ ಸಂಪರ್ಕಿಸುವ ನರಗಳ ಸಂಖ್ಯೆ, ಮಿದುಳನ್ನು ದೇಹದ ಬೇರೆ ಯಾವುದೇ ಭಾಗಕ್ಕೆ ಸಂಪರ್ಕಿಸುವ ನರಗಳ ಸಂಖ್ಯೆಗಿಂತ ಹೆಚ್ಚಂತೆ. ಹಾಗೆನ್ನುತ್ತಾರೆ – 10 ವರ್ಷಗಳ ಹಿಂದೆ ‘ದಿ ಸೈನ್ಸ್ ಆಫ್ ಕಿಸ್ಸಿಂಗ್’ ಅರ್ಥಾತ್ ಚುಂಬನ ವಿಜ್ಞಾನ (ಚುಂಬಕ ಅಲ್ಲ) ಕುರಿತು ಪುಸ್ತಕ ಬರೆದ ಕಿರ್ಷೆನ್ ಬಾಮ್.
ತುಟಿಗೆ ತುಟಿ ಬೆಸೆಯುವ ಮುನ್ನ ಅಣ್ಣಾವ್ರ ಹಾಡಿನಲ್ಲಿ ಇರುವಂತೆ ‘ಕಣ್ಣೂ ಕಣ್ಣೂ ಕಲೆಯುತ್ತವೆ’ಯಂತೆ; ಇದುವೇ ಚುಂಬನ ಕ್ರಿಯೆ ಆರಂಭ. ಅನಂತರ ಮುಖದ ಮೇಲಿನ ಎಲ್ಲ ಸ್ನಾಯುಗಳೂ ಕೆಲಸ ಮಾಡುತ್ತವೆ. ತುಟಿಗಳನ್ನು ಕೆಲವು ಮುಂದೆ ದೂಡಿದರೆ, ಇನ್ನು ಕೆಲವು ಕೆನ್ನೆಗಳನ್ನು ಸೆಟೆಸಿ ನೆರವಾಗುತ್ತವೆ. ಬಾಯಿ ತೆರೆಯುತ್ತದೆ. ತದನಂತರದ ಕ್ಷಣಗಳಲ್ಲಿ ದೃಷ್ಟಿ, ವಾಸನೆ, ಸ್ಪರ್ಶ ಹಾಗೂ ರುಚಿಗೆ ಸಂಬಂಧಿಸಿದ ಎಲ್ಲ ನರಗಳೂ ಅತ್ಯುತ್ಸಾಹದಿಂದ ದುಡಿಯುತ್ತವೆ. ಮಿದುಳಿಗೆ ರಕ್ತದ ಸರಬರಾಜು ಹೆಚ್ಚಾಗುತ್ತದೆ – ವಿಐಪಿ ಬಂದಾಗ ನಲ್ಲಿಯಲ್ಲಿ ನೀರು ಸರಬರಾಜು ಹೆಚ್ಚುವ ಹಾಗೆ. ಕೆನ್ನೆ ಬಿಸಿಯೇರುತ್ತದೆ. ಕಣ್ಣು ಅಚ್ಚರಿಯಾದಂತೆ ಬಿರಿಯುತ್ತದೆ. “ಒಟ್ಟಾರೆ, ಪಂಚೇಂದ್ರಿಯಗಳು ಕೆಲಸ ಮಾಡುತ್ತವೆ. ಒಂದು ರೀತಿಯಲ್ಲಿ ಒಂದು ಪುಟ್ಟ ವ್ಯಾಯಾಮವೇ ನಡೆಯುತ್ತದೆ,” ಎನ್ನುತ್ತಾರೆ ಕಿರ್ಷೆನ್ ಬಾಮ್. ಹ್ಞಾಂ… ಜೊತೆಗೆ, ಮಿದುಳಿಗೆ ಮತ್ತೇರಿಸುವ, ಮಾದಕ ವಸ್ತುಗಳಾದ ಎಂಡಾರ್ಫಿನ್ನುಗಳ ಪ್ರಮಾಣವೂ ರಕ್ತದಲ್ಲಿ ಹೆಚ್ಚುತ್ತದೆ.
ಚುಂಬನದ ಮೊದಲ ಸುದ್ದಿಯನ್ನು ದಾಖಲಿಸಿಟ್ಟಿದ್ದು ಭಾರತೀಯರು ಎನ್ನುವ ಮಾತಿತ್ತು. ಕ್ರಿಸ್ತಪೂರ್ವ 1500ರ ಆಸುಪಾಸಿನಲ್ಲಿ ಬರೆದಿದ್ದ ತಾಮ್ರಪತ್ರವೊಂದರಲ್ಲಿ ಚುಂಬನದ ಉಲ್ಲೇಖವೇ ಅತಿ ಹಳೆಯ ದಾಖಲೆ ಎಂದಿತ್ತು. ‘ಕಾಮಸೂತ್ರ’ ಬರೆದು ಈ ವಿಷಯದಲ್ಲಿ ವಿಶ್ವಗುರುಗಳೆನ್ನಿಸಿದ ನಮಗೆ ಇದೇನೂ ವಿಶೇಷ ಅನ್ನಿಸದೆ ಇರಬಹುದು. ಆದರೆ, ಮೊನ್ನೆ ಮೇ ತಿಂಗಳಿನಲ್ಲಿ ಪ್ರಕಟವಾದ ಶೋಧವೊಂದು ನಮ್ಮ ಈ ಹಮ್ಮಿಗೆ ಪೆಟ್ಟು ಕೊಟ್ಟಿದೆ. ಡೆನ್ಮಾರ್ಕಿನ ಮಾನವಶಾಸ್ತ್ರಜ್ಞೆ ಟ್ರಾಲ್ಸ್ ಆರ್ಬಾಲ್ ಮತ್ತು ಸಹೋದ್ಯೋಗಿಗಳ ತಂಡ ಚುಂಬನದ ಕತೆ ಸುಮಾರು ನಾಲ್ಕರಿಂದ ನಾಲ್ಕೂವರೆ ಸಾವಿರ ಹಳೆಯದಿರಬಹುದು ಎಂದು ಹೇಳಿದೆ. ಇದಕ್ಕೆ ಪುರಾವೆ – ಈಜಿಪ್ಟಿನ ಮೆಸೊಪೊಟೇಮಿಯಾದಲ್ಲಿ ಸಿಕ್ಕ ಸೂಕ್ಷ್ಮಜೀವಿಗಳದ್ದು ಎನ್ನುತ್ತಾರೆ.
ಸೂಕ್ಷ್ಮಜೀವಿಗಳಿಗೂ ಚುಂಬನಕ್ಕೂ ಏನು ಸಂಬಂಧ ಎಂದಿರಾ? ಸೂಕ್ಷ್ಮಜೀವಿ ವಿಜ್ಞಾನಿಗಳು ಪುರಾತನ ಮೂಳೆ, ಚರ್ಮ, ಹಲ್ಲುಗಳಿಂದ ತೆಗೆದ ವೈರಸ್ಸುಗಳನ್ನು ಇಂದಿನವುಗಳದ್ದರ ಜೊತೆಗೆ ಹೋಲಿಸುತ್ತಿದ್ದಾರೆ. ಮೆಸೊಪೊಟೇಮಿಯಾದಲ್ಲಿ ದೊರೆತ ಪಳೆಯುಳಿಕೆಗಳಲ್ಲಿದ್ದ ರೋಗಾಣುಗಳನ್ನು ಅಧ್ಯಯನ ಮಾಡಿದರೆ ಅಂದಿನವರ ಆರೋಗ್ಯ ಸ್ಥಿತಿ, ಅಂದಿದ್ದ ಸೋಂಕುರೋಗಗಳನ್ನು ಅರ್ಥ ಮಾಡಿಕೊಳ್ಳಬಹುದು ಎನ್ನುವುದು ಉದ್ದೇಶ. ಹೀಗೆ, ‘ಹರ್ಪಿಸ್ ಸಿಂಪ್ಲೆಕ್ಸ್ ವೈರಸ್’ ಎನ್ನುವ ಸರ್ಪಸುತ್ತಿನಂತಹ ಕಾಯಿಲೆಯನ್ನು ಉಂಟುಮಾಡುವ ವೈರಸ್ಸಿನ ಪಳೆಯುಳಿಕೆಗಳನ್ನು ಗಮನಿಸಿದರು. ಇವು ಕ್ರಿಸ್ತಪೂರ್ವ 1500ಕ್ಕೂ ಹಿಂದೆ ಇದ್ದವುಗಳಿಗಿಂತಲೂ ಭಿನ್ನವಾಗಿದ್ದುದು ಕಂಡುಬಂದಿತು. ಈ ವೈರಸ್ಸುಗಳು ಪ್ರಮುಖವಾಗಿ ಬಾಯಿ, ಜೊಲ್ಲು ಸೋಂಕಿನಿಂದ ಹರಡುವುದರಿಂದ, ಚುಂಬನವೇ ಇದಕ್ಕೆ ಕಾರಣ ಇರಬಹುದು ಎಂದು ಊಹಿಸಲಾಗಿದೆ. ಇದಕ್ಕೂ ಹಿಂದೆ ಕ್ರಿಸ್ತಪೂರ್ವ 1500ಕ್ಕೂ ಹಿಂದೆ ಈ ಬಗೆಯ ಕಾಯಿಲೆಗಳ ದಾಖಲೆ ಅಲ್ಲಿನ ವೈದ್ಯಕೀಯ ಪುಸ್ತಕಗಳಲ್ಲಿ ಇರಲಿಲ್ಲವಾದ್ದರಿಂದ, ಚುಂಬನ ಎನ್ನುವುದು ಬಂದ ನಂತರ ಈ ರೋಗಗಳು ಹರಡಿರಬೇಕು ಎಂದು ತರ್ಕಿಸಲಾಗಿತ್ತು. ಆದರೆ, ತಳಿವಿಜ್ಞಾನ ಅದನ್ನು ಅಲ್ಲಗಳೆದಿದೆ. ವೈರಸ್ಸಿನ ತಳಿ ಬದಲಾಗಿದ್ದರಿಂದ ರೋಗ ಹೆಚ್ಚು ಹರಡಿರಬೇಕು ಎಂದು ಹೇಳಲಾಗಿದೆ.
ಇದರ ಅರ್ಥ ಇಷ್ಟೆ… ಕ್ರಿಸ್ತಪೂರ್ವ 1500ರಲ್ಲಿ ಭಾರತೀಯರು ಚುಂಬನದ ಬಗ್ಗೆ ಬರೆಯುವಾಗ, ಇತರೆ ದೇಶಗಳವರು ಮಾತಿಗಿಂತಲೂ ಹೆಚ್ಚು ಕ್ರಿಯೆಯಲ್ಲಿ ಮಗ್ನರಾಗಿದ್ದಿರಬೇಕು. ಅದು ಅವರ ಹಲ್ಲುಗಳಲ್ಲಿ ಬೆಳೆದ ವೈರಸ್ಸುಗಳ ರೂಪದಲ್ಲಿ ಈಗ ಕಾಣಿಸಿಕೊಳ್ಳುತ್ತಿದೆ. ಒಟ್ಟಾರೆ, “ಚುಂಬನ ಎನ್ನುವುದು ಬೇರಾವುದೋ ಸಂಸ್ಕೃತಿಯಿಂದ ಎರವಾಗಿ ಬಂದುದಲ್ಲ. ಸಹಜವಾಗಿ ಪ್ರಾಣಿಗಳಲ್ಲಿ ಇರುವಂತೆ ವಿಕಾಸವಾದ ನಡವಳಿಕೆ. ಎಲ್ಲ ಸಮಾಜಗಳಲ್ಲಿಯೂ, ಪುರಾತನವಾದದ್ದು ಎನ್ನುತ್ತಾರೆ,” ಅರ್ಬಾಲ್. ಇದು ಮುತ್ತಿನಂಥ ಮಾತು… ಅಲ್ಲವೇ?
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ