ಹೊಸಿಲ ಒಳಗೆ-ಹೊರಗೆ | ಜಗತ್ತಿನ ಬಹುಪಾಲು ಜಗಳ ಗಂಡಸರದೇ ಆಗಿದ್ದರೂ ‘ಗಂಡಿಗೆ ಗಂಡೇ ಶತ್ರು’ ಎಂಬ ಗಾದೆ ಇಲ್ಲವೇಕೆ?

Date:

Advertisements
'ಎರಡು ಜಡೆ ಸೇರಲ್ಲ' ಎಂಬ ಕಟ್ಟುಕತೆಯನ್ನು ಬಹಳ ಸಲೀಸಾಗಿ ಹೇಳುತ್ತ, ನಂಬಿಸುತ್ತ ಬರಲಾಗಿದೆ. ಯಾಕೆಂದರೆ, ಈ ಎರಡು ಜಡೆಗಳೇನಾದರೂ ಸೇರಿದರೆ ತಮಗೆ ಉಳಿಗಾಲವಿಲ್ಲ ಅಂತ ಗೊತ್ತು. ಅದಕ್ಕಾಗಿ ಸೇರದ ಹಾಗೆ ಇಟ್ಟುಕೊಳ್ಳುವುದೇ ಈ ವ್ಯವಸ್ಥೆಯ ಆಶಯ. ಇಂತಹ ಪೊಳ್ಳು ನಂಬಿಕೆಗಳನ್ನು ಒಡೆದು ಮುನ್ನಡೆಯಬೇಕಿರುವುದು ಈ ಹೊತ್ತಿನ ತುರ್ತು

‘ಹೆಣ್ಣೇ ಹೆಣ್ಣಿಗೆ ಶತ್ರು’ – ತರಬೇತಿಗಳಲ್ಲಿ ಈ ಗಾದೆಮಾತು ಮುಂದಿಡುವಾಗ, ನನ್ನ ಹೊಟ್ಟೆಯಲ್ಲಿ ಒಂಥರಾ ಜಿರಿಜಿರಿ ಅನ್ನುತ್ತಿರುತ್ತದೆ. ಅಂದಿನಿಂದ ಇಂದಿನವರೆಗೂ ಸಹಭಾಗಿಗಳಲ್ಲಿ ಕನಿಷ್ಠ 3-4 ಮಂದಿಯಾದರೂ ಬಹಳ ಬಲವಾಗಿ ಈ ಮಾತನ್ನು ಬೆಂಬಲಿಸುತ್ತಾರೆ. ಗಂಡುಮಕ್ಕಳು, ಹೆಣ್ಣುಮಕ್ಕಳು ಎಲ್ಲರೂ ತಮ್ಮ-ತಮ್ಮ ನೆಲೆಗಳಿಂದ ನಿಸ್ಸಂದೇಹವಾಗಿ ಬೆಂಬಲ ಸೂಚಿಸುತ್ತಾರೆ. ಸಮರ್ಥನೆಗಾಗಿ ಅತ್ತೆ-ಸೊಸೆ ಕಿರಿಕಿರಿ; ಒಬ್ಬರ ಏಳಿಗೆಯನ್ನು ಸಹಿಸಲಾಗದ ಇನ್ನೊಬ್ಬ ಮಹಿಳೆಯ ಕಥನಗಳು; ಹೆಣ್ಣು ಭ್ರೂಣ ಹತ್ಯೆಯಲ್ಲಿ ಮಹಿಳೆಯರ ಪಾತ್ರ; ಮನೆಯಲ್ಲಿ ಏನೋ ಮಾಡಲು ಹೊರಟಾಗ ‘ಅಪ್ಪ ಆದರೂ ಬಿಡುತ್ತಾರೆ, ಅಮ್ಮನೇ ಬಿಡುವುದಿಲ್ಲ’ ಅನ್ನುವ ಆಪಾದನೆಗಳು… ಇತ್ಯಾದಿ ಅಂಶಗಳನ್ನು ರಂಗುರಂಗಾಗಿ ಬಣ್ಣಿಸುತ್ತಾರೆ. ಅಷ್ಟರವರೆಗೆ ಮಾತಾಡದೆ ಇದ್ದವರು ಕೂಡ, “ಇದು ಸರಿಯಾದ ಮಾತು,” ಅನ್ನುತ್ತಾರೆ. ಇದು ಹಾಗಲ್ಲ, ಇದರೊಳಗೆ ಒಂದು ಪುರುಷಪ್ರಧಾನತೆಯ ರಾಜಕೀಯ ಇದೆ ಎಂಬುದನ್ನು ವಿವರಿಸಿ-ವಿವರಿಸಿ ಹೈರಾಣಾಗಿ ಹೋಗಿದ್ದೇನೆ. ಅರ್ಥ ಮಾಡಿಸಲು ಏನೇನೋ ತಂತ್ರಗಳನ್ನು ಬಳಸಿದ್ದೇನೆ. ಈ ಮಾತು ಜನಮನದಲ್ಲಿ ಎಷ್ಟು ಹಾಸುಹೊಕ್ಕಾಗಿಬಿಟ್ಟಿದೆಯಲ್ಲಾ ಅಂತ ದಂಗಾಗುತ್ತದೆ. ಈಗಲೂ, ಈ ವಿಶ್ಲೇಷಣೆಯನ್ನು ಅರ್ಥ ಮಾಡಿಸುವ ಒಂದು ಪ್ರಯತ್ನ ಎಂಬಂತೆ ಮಾಡುತ್ತೇನೆಯೇ ಹೊರತು, ಅರ್ಥ ಮಾಡಿಸಿಯೇಬಿಡುತ್ತೇನೆ ಎಂಬ ವಿಶ್ವಾಸದಿಂದ ಅಲ್ಲ. ಓದಿದ್ದು, ಕೇಳಿದ್ದು, ಚರ್ಚಿಸಿದ್ದು ಎಲ್ಲದರ ಆಧಾರದ ಮೇಲೆ ಒಂದಷ್ಟು ಮಾತುಕತೆ ಮಾಡುತ್ತೇವೆ.

ನೇರ ನೋಟಕ್ಕೆ ಹೆಣ್ಣಿಗೆ ಹೆಣ್ಣೇ ಶತ್ರು ತರಹ ಕಾಣಿಸುವುದು ವಾಸ್ತವ. ಆದರೆ, ಯಾಕೆ ಹೀಗೆ ಅಂತ ವಿವೇಚಿಸಿದರೆ ಬೇರೆ ಕೆಲವು ಅಂಶಗಳು ಗಮನಕ್ಕೆ ಬರುತ್ತವೆ. ‘ಹೆಣ್ಣೇ ಹೆಣ್ಣಿಗೆ ಶತ್ರು’ ಸರಿ, ಹಾಗಾದರೆ ಗಂಡಸರಿಗೆ ಗಂಡಸರು ಶತ್ರುಗಳಿಲ್ಲವೇ? ಇದ್ದಾರಲ್ಲಾ? ರಾಜಕೀಯ ವಲಯದಲ್ಲಿ ಅಧಿಕಾರಕ್ಕಾಗಿ ನಡೆಯುವ ಹಿಗ್ಗಾಮುಗ್ಗಾ ಜಗಳ, ಒಬ್ಬರನ್ನೊಬ್ಬರು ಅಸಹ್ಯವಾಗಿ ಆಡಿಕೊಳ್ಳುವ ರೀತಿ, ಉದ್ಯೋಗ ಕ್ಷೇತ್ರದಲ್ಲಿ ಬಡ್ತಿಗಾಗಿ ನಡೆವ ವಿಷಮಯ ಸ್ಪರ್ಧೆಗಳು, ಕುಟುಂಬದೊಳಗೆ ಆಸ್ತಿಗಾಗಿ ಅಣ್ಣ-ತಮ್ಮಂದಿರ ನಡುವೆ ನಡೆವ ಕಿತ್ತಾಟಗಳೇನು ಕಡಿಮೆಯೇ? ಪರಸ್ಪರ ದ್ವೇಷ ಕಾರುತ್ತ, ಸೇಡು ತೀರಿಸಲು ಯಾವ ಹಂತಕ್ಕೂ ಹೋಗುವ ಪುರುಷ ಸಾಮ್ರಾಜ್ಯವನ್ನು ನಾವು ಕಂಡಿಲ್ಲವೇ? ಇದು ಹೌದಾದರೆ, ಯಾಕೆ ಬರೇ ‘ಹೆಣ್ಣಿಗೆ ಹೆಣ್ಣೇ ಶತ್ರು’ ಎಂಬ ಗಾದೆಮಾತು ಹುಟ್ಟಿಕೊಂಡಿದೆ? ಯಾಕೆ ‘ಗಂಡಿಗೆ ಗಂಡೇ ಶತ್ರು’ ಅನ್ನುವ ಮಾತು ಹುಟ್ಟಿಕೊಂಡಿಲ್ಲ? ಅಂದರೆ, ಈ ಮಾತಿನ ಹಿಂದೆ ಪುರುಷಪ್ರಧಾನತೆಯ ರಾಜಕೀಯ ಕೆಲಸ ಮಾಡುತ್ತಿದೆ ಅಂತ ಅರ್ಥ ತಾನೇ? ಹೀಗೆಯೇ ಮುಂದುವರಿದು ಕೇಳಿಕೊಂಡರೆ, ಹೆಣ್ಣಿಗೆ ಹೆಣ್ಣು ಸ್ನೇಹಿತರೂ ಇದ್ದಾರೆ; ಗಂಡಿಗೆ ಗಂಡೂ ಸ್ನೇಹಿತರಿದ್ದಾರೆ. ಮಹಿಳೆಯರ ಬದುಕಿನಲ್ಲಿ ಬದಲಾವಣೆಗಳು ಸಾಧ್ಯವಾಗಿದ್ದೇ ಮಹಿಳಾ ಚಳವಳಿಗಳಿಂದಾಗಿ. ಪರಸ್ಪರ ಸ್ನೇಹ, ನಂಬಿಕೆಯೊಂದಿಗೆ ಚಳವಳಿಗಳನ್ನು ಕಟ್ಟಿದ್ದಾರೆ. ಅಧಿಕಾರ ರಾಜಕಾರಣವನ್ನು ಪ್ರಶ್ನಿಸಿದ್ದಾರೆ. ಪ್ರೀತಿಯ ರಾಜಕಾರಣ ಕಟ್ಟುವ ಪ್ರಯತ್ನ ಮಾಡಿದ್ದಾರೆ. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ, ಹೆಣ್ಣೇ ಹೆಣ್ಣಿಗೆ ಶತ್ರು ಎಂಬುದು ಎಂತಹ ಕಣ್ಕಟ್ಟು ಎಂಬುದು ಅರಿವಾಗುತ್ತದೆ. ಇದಕ್ಕೆ ಹೊರತಾಗಿ ಹೆಣ್ಣಿಗೆ ಗಂಡು, ಗಂಡಿಗೆ ಹೆಣ್ಣು ಶತ್ರುಗಳಾಗಿಯೂ ಇದ್ದಾರೆ, ಮಿತ್ರರಾಗಿಯೂ ಇದ್ದಾರೆ. ಸ್ನೇಹ, ದ್ವೇಷ ಅನ್ನುವುದು ಯಾರ ನಡುವೆಯೂ ನಡೆಯಬಹುದು. ಅವೆಲ್ಲದಕ್ಕೂ ಏನೋ ಕಾರ್ಯಕಾರಣಗಳು ಇರುತ್ತವೆ. ಅವನ್ನು ರಾಜಕಾರಣದ ದಾಳಗಳನ್ನಾಗಿ ಮಾಡಿಕೊಂಡಾಗ ಅಪಾಯ ತಪ್ಪಿದ್ದಲ್ಲ.

ಈ ಆಡಿಯೊ ಕೇಳಿದ್ದೀರಾ?: ಮನಸ್ಸಿನ ಕತೆಗಳು – 7 | ‘ಈಕೆ ಮದ್ವೆಗೆ ಒಪ್ತಾನೇ ಇಲ್ಲ’ ಅಂತ ಅಮ್ಮನ ದೂರು; ಮಗಳು ಹೇಳಿದ್ದೇನು?

ಅತ್ತೆ-ಸೊಸೆ ಅನ್ನುವುದು ಒಂದು ಸಂಬಂಧ ಮಾತ್ರವಲ್ಲ, ಒಂದು ವಿದ್ಯಮಾನ ಅನ್ನುವ ಹಾಗೆ ಆಗಿದೆ. “ಅತ್ತೆ-ಸೊಸೆ ತರಹ ಯಾಕೆ ಆಡುತ್ತೀರಾ?” ಅಂತ ಹೇಳುವ ವಾಡಿಕೆಯೇ ಇದೆ. ಈ ಸಂಬಂಧದ ನಡುವೆ ಆಗುವ ಪ್ರಕ್ರಿಯೆಗಳನ್ನು ಗಮನಿಸಿದರೆ, ಮಾನವ ಸಹಜ ಅಂಶ ಕಾಣುತ್ತದೆ. ಒಬ್ಬಾಕೆ ಇರುತ್ತಾರೆ, ಅವಳಿಗೆ ಮಗ ಇರುತ್ತಾನೆ. ಆಕೆ ಮನೆವಾರ್ತೆಗಳನ್ನೆಲ್ಲ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಾಳೆ. ಅವಳ ಬದುಕೆಲ್ಲ ಗಂಡನಿಗೆ ಮತ್ತು ಮಗನಿಗೆ ಮಾಡಿಹಾಕುವುದು, ಅವರ ಸುಖ-ದುಃಖ ನೋಡಿಕೊಳ್ಳುವುದು ಆಗಿರುತ್ತದೆ. ಮನೆಗೆ ಅಲ್ಲದಿದ್ದರೂ ಅಡುಗೆಮನೆಗೆ ಅವಳೇ ಯಜಮಾನಿ ಆಗಿರುತ್ತಾಳೆ. ಮಗನ ಮತ್ತು ಗಂಡನ ಎಲ್ಲ ಗಮನ ಅವಳಿಗೇ ಸಿಗುತ್ತಿರುತ್ತದೆ. ಒಮ್ಮೆ ಮಗನಿಗೆ ಮದುವೆ ಆದಾಗ, ಇನ್ನೊಬ್ಬಾಕೆ ಅದೇ ಮನೆಗೆ ಪ್ರವೇಶಿಸುತ್ತಾಳೆ. ಅವಳು ಬಂದಾಗ, ಮನೆಯಲ್ಲಿ ಗಂಡನ ಅಥವಾ ಮಗನ ಕ್ಷೇತ್ರಕ್ಕೆ ಕಾಲಿಡುವುದಿಲ್ಲ. ಅವಳೂ ಅಡುಗೆಮನೆಗೇ ಬರುತ್ತಾಳೆ. ಆಗ ಸಹಜವಾಗಿ ಅತ್ತೆ ಸ್ಥಾನದಲ್ಲಿ ಇರುವವಳಿಗೆ ಅಸುರಕ್ಷಿತ ಭಾವನೆ ಬಂದೇ ಬರುತ್ತದೆ. ತಾನು ಮಾಡಿದ ಸಾರು ಇಷ್ಟಪಡುತ್ತಿದ್ದ ಮಗ, ತನ್ನ ಸುತ್ತ ತಿರುಗುತ್ತಿದ್ದ ಮಗ ಈಗ ಹೆಂಡತಿ ಹಿಂದೆ ಸುತ್ತುತ್ತಿದ್ದಾನೆ; ತನಗೆ ಈಗ ಪ್ರಾಮುಖ್ಯತೆ ಇಲ್ಲ ಅನ್ನುವ ಚಡಪಡಿಕೆ ಇರುತ್ತದೆ. ಅಷ್ಟೇ ಅಲ್ಲ, ಸೊಸೆಯ ಪಾತ್ರದಲ್ಲಿ ಇದ್ದಷ್ಟು ಕಾಲ ಮಹಿಳೆಯರಿಗೆ ಅಧಿಕಾರ ಚಲಾಯಿಸುವ ಅವಕಾಶ ಸಿಕ್ಕಿರುವುದಿಲ್ಲ. ಅತ್ತೆ ಪಾತ್ರ ಸಿಕ್ಕಾಗ, ತಾವು ಅನುಭವಿಸಿದ ಗೋಳು ಮರೆತುಹೋಗಿ, ತಾನೂ ಸ್ವಲ್ಪ ಅಧಿಕಾರದ ರುಚಿ ನೋಡಬೇಕು ಅನಿಸುತ್ತದೆ. ಅಧಿಕಾರ ಚಲಾಯಿಸುವ ಮಾದರಿ ಮಾತ್ರ ಪುರುಷ ಮಾದರಿಯಲ್ಲಿಯೇ ಇರುತ್ತದೆ.

Advertisements

ಇದರಿಂದಾಗಿ ಚಿಕ್ಕಪುಟ್ಟ ಕಿರಿಕಿರಿಗಳು, ಅಸಹನೆಗಳು ಹೊರಹೊಮ್ಮುತ್ತಲೇ ಇರುತ್ತವೆ. ಅತಿರೇಕಕ್ಕೆ ಹೋಗುವುದೂ ಇದೆ. ಮಾಧ್ಯಮಗಳಲ್ಲಿ ಕೂಡ ಅತ್ತೆ-ಸೊಸೆಯರನ್ನು ಚಿತ್ರಿಸುವ ರೀತಿ ಹಾಗೆಯೇ. ಒಂದೋ ಅತ್ತೆ ಕೆಟ್ಟವಳು, ಇಲ್ಲವೇ ಸೊಸೆ ಕೆಟ್ಟವಳು; ಅವರು ಎಂದಿಗೂ ಜೊತೆಗೆ ಇರಲು ಸಾಧ್ಯವೇ ಇಲ್ಲದವರು ಎಂಬ ತರಹ. ಆದರೂ, ಇಂತಹ ಭಾವನೆಗಳ ಏರುಪೇರುಗಳ ಅರಿವು ಇರುವ ಅದಷ್ಟೋ ಮಂದಿ ಅತ್ತೆ-ಸೊಸೆ ಸಂಬಂಧವನ್ನು ಬಹಳ ಪ್ರಬುದ್ಧತೆಯಿಂದ ಮತ್ತು ಘನತೆಯಿಂದ ನಿಭಾಯಿಸುತ್ತಾರೆ. ಆದರೆ ಅದು ಸಿದ್ಧ ಮಾದರಿಗೆ ಹೊಂದುವುದಿಲ್ಲ. ಅದಕ್ಕಾಗಿ ಎಲ್ಲೂ ಸುದ್ದಿಯಾಗುವುದಿಲ್ಲ.

ಈ ಅತ್ತೆ-ಸೊಸೆಯಂದಿರಿಗೆ ಮನೆಯೊಳಗಿನ ಅಸ್ಮಿತೆಯಲ್ಲದೆ, ಹೊರಗಡೆ ಬೇರೆ ಅಸ್ಮಿತೆಗಳನ್ನು ಬೆಳೆಸಿಕೊಳ್ಳುವ ಅವಕಾಶಗಳು ಇದ್ದರೆ, ಅವರು ಮನೆಯೊಳಗಿನ ಅವಕಾಶಗಳನ್ನೇ ಹಂಚಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲದೆ ಇದ್ದರೆ, ಅವರ ಒಳಗೆ ಇಷ್ಟು ಕಿತ್ತಾಟಗಳು ನಡೆಯುವುದಕ್ಕೆ ಸಾಧ್ಯವಿರುತ್ತಿತ್ತೇ?

ಈ ಆಡಿಯೊ ಕೇಳಿದ್ದೀರಾ?: ಹೊಸಿಲ ಒಳಗೆ-ಹೊರಗೆ | ಒಳಗೊಳಗೇ ನಂಜು ಕಾರುವ ಗಾದೆಗಳ ಬಗ್ಗೆ ಒಂಚೂರು ಎಚ್ಚರವಿರಲಿ

ಸಾಮಾಜಿಕರಣದ ಅಗಾಧ ಪ್ರಭಾವವನ್ನೂ ನಾವು ಇಲ್ಲಿ ಕಾಣಬಹುದು. ಪುರುಷಪ್ರಧಾನ ಚಿಂತನೆಯನ್ನು ಮೈಗೂಡಿಸಿಕೊಂಡೇ ಹೆಣ್ಣುಮಕ್ಕಳೂ ಬೆಳೆಯುತ್ತಾರೆ. ಹಾಗೆ ಬೆಳೆದ ಹೆಣ್ಣುಮಕ್ಕಳು, ತಮ್ಮ ಮನೆಯ ಹೆಣ್ಣುಮಕ್ಕಳಿಗೆ ‘ಹೆಣ್ಣೆಂದರೆ ಹೀಗೆ ಹೀಗೆಯೇ ಇರಬೇಕು’ ಎಂಬ ಪಾಠ ಕಲಿಸುತ್ತಾರೆ. ಹಾಗೆ ಕಲಿಸದೆಹೋದರೆ, ಅವಳು ಒಳ್ಳೆಯ ತಾಯಿ ಅನ್ನಿಸಿಕೊಳ್ಳುವುದಿಲ್ಲ. ಜಾತಿ ವ್ಯವಸ್ಥೆಯನ್ನು ನೋಡಿದರೂ ನಮಗೆ ಈ ಅಂಶ ಕಾಣುತ್ತದೆ. ತಳ ಸಮುದಾಯದ ಮಂದಿ ತಮ್ಮ ಮಕ್ಕಳಿಗೆ ಮೇಲ್ಜಾತಿ ಅನಿಸಿಕೊಂಡವರ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಅಂತ ತಿಳಿಸಿಕೊಡುತ್ತ ಬೆಳೆಸುತ್ತಾರೆ. ಕೆಲವೊಮ್ಮೆ ಉದಾರ ಮನಸ್ಸಿನ ಮೇಲ್ಜಾತಿಯವರು ಹೇಳುವುದಿದೆ; ‘ನಾವು ಮನೆಯೊಳಗೆ ಕರೆದರೂ ಅವರೇ ಬರುವುದಿಲ್ಲ’ ಅಂತ. ಈ ವ್ಯವಸ್ಥೆ ಹಾಗಿದೆ. ಮಹಿಳೆಯರಾಗಲೀ, ತಳ ಸಮುದಾಯದವರಾಗಲೀ ತಮಗೆ ಒಪ್ಪಿಸಿದ ಸ್ಥಾನವನ್ನು ತಮ್ಮದೆಂದುಕೊಂಡು ಬೆಳೆದಿದ್ದಾರೆ. ಮೇಲ್ಜಾತಿಯವರ ಮನೆ ಒಳಗೆ ಹೋಗುವುದು ತಪ್ಪು ಅಂತ ತಾವೇ ತಮ್ಮ ಮಕ್ಕಳಿಗೆ ಕಲಿಸುತ್ತಾರೆ. ತಾಯಂದಿರೇ ಹೆಣ್ಣುಮಕ್ಕಳನ್ನು ಹದ್ದುಬಸ್ತಿನಲ್ಲಿ ಇಡುವ ಕೆಲಸ ಮಾಡುತ್ತಾರೆ.

‘ಎರಡು ಜಡೆ ಸೇರಲ್ಲ’ ಅಂತ ಬಹಳ ಸಲೀಸಾಗಿ ಹೇಳುತ್ತ, ನಂಬಿಸುತ್ತ ಬರಲಾಗಿದೆ. ಯಾಕೆಂದರೆ, ಈ ಎರಡು ಜಡೆಗಳೇನಾದರೂ ಸೇರಿದರೆ ತಮಗೆ ಉಳಿಗಾಲವಿಲ್ಲ ಅಂತ ಗೊತ್ತು. ಅದಕ್ಕಾಗಿ ಸೇರದ ಹಾಗೆ ಇಟ್ಟುಕೊಳ್ಳುವುದೇ ಈ ವ್ಯವಸ್ಥೆಯ ಆಶಯ. ಎಲ್ಲವನ್ನೂ ಅರ್ಥ ಮಾಡಿಕೊಂಡು ಇಂತಹ ಪೊಳ್ಳು ನಂಬಿಕೆಗಳನ್ನು ಒಡೆದು ಮುನ್ನಡೆಯುವುದೇ ನಮ್ಮ ಆಶಯ.

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಮುಖ್ಯ ಚಿತ್ರ ಕೃಪೆ: ವಾಲೇಕ್ ಸಿ ಎಮ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಪೆರಿಯೋಡಿ
ವಾಣಿ ಪೆರಿಯೋಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಾಮಾಜಿಕ ಕಾರ್ಯಕರ್ತೆ. 'ತರಿಕಿಟ ಕಲಾ ಕಮ್ಮಟ' ಎಂಬ ಸಾಂಸ್ಕೃತಿಕ ವೇದಿಕೆಯ ಉಸ್ತುವಾರಿ. ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರುದ್ಧ ಒಕ್ಕೂಟದ ಸಕ್ರಿಯ ಸದಸ್ಯೆ. ಲಿಂಗ ಸಂವೇದನೆ, ಸಂವಹನ ಕೌಶಲ್ಯ ಇತ್ಯಾದಿ ವಿಚಾರಗಳ ಮೇಲೆ ತರಬೇತಿ ನಡೆಸುವುದು ಇಷ್ಟದ ಕೆಲಸ.

2 COMMENTS

  1. ಮತ್ತೊಂದು ಅರ್ಥಪೂರ್ಣ ಲೇಖನ ಮೇಡಂ.
    ತುಂಬಾ ಅದ್ಭುತವಾಗಿದೆ.
    ಪ್ರತಿಯೊಂದು ಸಾಲಿನಲ್ಲೂ ಅರ್ಥವಿದೆ.

    • ಪ್ರತಿಕ್ರಿಯೆಗಾಗಿ ಧನ್ಯವಾದ ಮೇಡಂ. ‘ಈದಿನ.ಕಾಮ್’ಗೆ ಭೇಟಿ ಕೊಟ್ಟಿದ್ದಕ್ಕೆ ನನ್ನಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X