ನಿರ್ದಿಷ್ಟ ಯೋಜನೆಯೊಂದರ ಪರ ವಹಿಸುವುದಕ್ಕೆ ಅಥವಾ ವಿರೋಧಿಸುವುದಕ್ಕೆ ನಮ್ಮೆಲ್ಲರ ಬಳಿ ಒಂದಿಷ್ಟು ಸಕಾರಣಗಳಿರಬಹುದು. ಆದರೆ, ಸರ್ಕಾರದ ಯೋಜನೆಯೊಂದು ದೀರ್ಘಾವಧಿಯಲ್ಲಿ ಉಂಟುಮಾಡಬಹುದಾದ ಒಳಿತು-ಕೆಡುಕುಗಳನ್ನು ಅವಲೋಕಿಸಲು ಅವಷ್ಟೇ ಸಾಲದು
“ಶೌಚಾಲಯ ಶುಚಿಗೊಳಿಸುವುದು ನಿಮ್ಮ ಪ್ರಕಾರ ಗೌರವಾನ್ವಿತ ಕೆಲಸವೋ ಅಲ್ಲವೋ?”
– ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂಥದೊಂದು ಪ್ರಶ್ನೆ ಒಡ್ಡಲಾಯಿತು. “ಹೌದು, ಗೌರವಾನ್ವಿತ ಕೆಲಸವೇ,” ಎಂದು ಕೆಲವರು ದೃಢವಾಗಿ ಹೇಳಿದರು. “ಹಾಗಾದ್ರೆ, ಈ ಗೌರವಾನ್ವಿತ ಕೆಲಸಕ್ಕೆ ಅರ್ಜಿ ಆಹ್ವಾನಿಸಿದ್ರೆ ನಿಮ್ಮಲ್ಲಿ ಯಾರು ಅರ್ಜಿ ಹಾಕ್ತೀರಿ?” ಎನ್ನುವ ಸರಳ ಪ್ರಶ್ನೆಗೆ ಬಂದ ಉತ್ತರ ನಿರೀಕ್ಷಿತವಾಗಿಯೇ ಇತ್ತು. ಯಾರೊಬ್ಬರೂ “ನಾನು ಅರ್ಜಿ ಹಾಕ್ತೀನಿ,” ಅನ್ನಲಿಲ್ಲ. “ಇಷ್ಟೆಲ್ಲ ಓದಿರೋದ್ರಿಂದ ನಿಮಗೆ ಆ ಕೆಲಸ ಸೂಕ್ತವಲ್ಲ ಅನ್ನಿಸಿರಬಹುದು. ಹೋಗಲಿ, ಇಂಥದೊಂದು ಕೆಲಸಕ್ಕೆ ನಿಮ್ಮ ಕುಟುಂಬದಲ್ಲಿ ತೀರಾ ಕಡಿಮೆ ಓದಿರುವ ಯಾರಾದರೂ ಸೇರಿಕೊಳ್ಳಲು ಬಯಸಿದ್ರೆ ಅದಕ್ಕೆ ನಿಮ್ಮ ಒಪ್ಪಿಗೆ ಇದೆಯೇ? ಶೌಚಾಲಯ ಶುಚಿಗೊಳಿಸುವ ಕೆಲಸವೂ ಇತರ ಕೆಲಸಗಳ ಹಾಗೆಯೇ ಅಲ್ವಾ ಅಂದ್ಕೊಂಡು ಸುಮ್ಮನಿರ್ತೀರೋ ಅಥವಾ ಇಂಥ ಕೆಲಸಕ್ಕೆ ಹೋಗೋದು ಬೇಡ ಅಂತ ಅಸಮಾಧಾನ ಹೊರಹಾಕ್ತಿರೋ?” ಎನ್ನುವ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭ ಎದುರಾಯಿತು. “ಈ ಕೆಲಸಕ್ಕೆ ಸೇರೋದು ಬೇಡ ಅಂತೀವಿ,” ಎಂದು ವಿದ್ಯಾರ್ಥಿಗಳು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.
“ನಿಮಗೆ ಗೊತ್ತಿರದ ಯಾರೋ ದೂರದವರು ಶೌಚಾಲಯ ಶುಚಿಗೊಳಿಸುವ ಕೆಲಸ ಮಾಡುವುದಾದರೆ, ಆಗ ಅದು ಗೌರವಾನ್ವಿತ ಕೆಲಸ. ಅದೇ ನಿಮ್ಮವರೇ ಯಾರೋ ಮಾಡುವ ಸಂದರ್ಭ ಎದುರಾದರೆ, ಮಾಡಲು ಒಪ್ಪಿಕೊಳ್ಳಲಾಗದ ಕೆಲಸ ಅಲ್ಲವೇ?” ಎನ್ನುವ ಅಧ್ಯಾಪಕರ ಮಾತಿಗೆ ವಿದ್ಯಾರ್ಥಿಗಳ ಮೌನವೇ ಉತ್ತರ ಹೇಳತೊಡಗಿತು.

ವಿಶ್ವಸಂಸ್ಥೆ ನಿಗದಿಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದ ಅಧ್ಯಾಪಕರು, ಈ ಗುರಿಗಳ ಪೈಕಿ ಒಂದಾದ ಗೌರವಾನ್ವಿತ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಡಲು ಮೇಲಿನ ಉದಾಹರಣೆ ಬಳಸಿಕೊಂಡಿದ್ದರು. ‘ಎಲ್ಲ ಕೆಲಸಗಳೂ ಸಮಾನವೇ’ ಎಂದು ಬಾಯಿಮಾತಿಗೆ ಹೇಳುವುದಕ್ಕೂ ಸಾಮಾಜಿಕ ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದನ್ನು ನಿರೂಪಿಸಲು ಈ ಉದಾಹರಣೆ ಪರಿಣಾಮಕಾರಿಯಾಗಿ ಬಳಕೆಯಾಯಿತು. ಮನುಷ್ಯರ ಘನತೆಗೆ ಧಕ್ಕೆ ತರುವ ಉದ್ಯೋಗಗಳನ್ನು ಗೌರವಾನ್ವಿತ ಉದ್ಯೋಗಗಳಾಗಿ ಮಾರ್ಪಡಿಸುವುದು ಮತ್ತು ಗುಣಮಟ್ಟದ ಉದ್ಯೋಗಗಳ ಸೃಷ್ಟಿಗೆ ಒತ್ತು ನೀಡುವುದು ನಿಜವಾದ ಅಭಿವೃದ್ಧಿ ಎಂಬ ಕುರಿತು ಸಹಮತ ಮೂಡಿತು.
ವಿದ್ಯಾರ್ಥಿಗಳಿಗೆ ಮತ್ತೊಂದು ಪ್ರಶ್ನೆ ಎದುರಾಯಿತು. “ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿರುವುದನ್ನು, ಬಡವರಿಗೆ ಉಚಿತವಾಗಿ ತಿಂಗಳಿಗೆ 10 ಕೆ.ಜಿ ಅಕ್ಕಿ ವಿತರಿಸುವುದನ್ನು, ವಿದ್ಯಾವಂತ ಯುವ ಸಮೂಹಕ್ಕೆ ನಿರುದ್ಯೋಗ ಭತ್ಯೆ ನೀಡುವುದನ್ನು ರಾಜ್ಯದ ಅಭಿವೃದ್ಧಿಗೆ ಪೂರಕವಾದ ಕ್ರಮಗಳು ಎಂದು ಭಾವಿಸಬಹುದೇ?”
“ಬಿಟ್ಟಿಯಾಗಿ ಕೊಡೋದು ಅಭಿವೃದ್ಧಿ ಹೇಗಾಗುತ್ತೆ?” ಅನ್ನುವುದು ಅವರ ಅಭಿಪ್ರಾಯವಾಗಿತ್ತು. ವಿದ್ಯಾರ್ಥಿಗಳ ಗೊಂದಲ ಪರಿಹರಿಸುವ ಸಲುವಾಗಿ, ವಿಶ್ವಸಂಸ್ಥೆ 2015ರಲ್ಲೇ ರೂಪಿಸಿದ್ದ ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್‍ಡಿಜಿ) ಪಟ್ಟಿಯನ್ನು ಪ್ರೊಜೆಕ್ಟರ್ ಪರದೆ ಮೇಲೆ ಬಿತ್ತರಿಸಿ, ಆ ಪಟ್ಟಿಯಲ್ಲಿರುವ ಎರಡು ಮತ್ತು ಐದನೇ ಗುರಿಯತ್ತ ಒಮ್ಮೆ ನೋಡುವಂತೆ ತಿಳಿಸಲಾಯಿತು. ‘ಹಸಿವು ನೀಗಿಸುವುದು’ ಮತ್ತು ‘ಲಿಂಗ ಸಮಾನತೆ’ ಸಾಧಿಸುವುದು ಕೂಡ ಅಭಿವೃದ್ಧಿಯ ಭಾಗವೇ ಎಂದು ವಿಶ್ವಸಂಸ್ಥೆ ಸಾರಿರುವುದು ವಿದ್ಯಾರ್ಥಿಗಳಿಗೆ ಮನದಟ್ಟಾಯಿತು.
ಈ ಆಡಿಯೊ ಕೇಳಿದ್ದೀರಾ?: ಶಾಸನ ಸಂಶೋಧಕಿ ಸ್ಮಿತಾ ರೆಡ್ಡಿ ಸಂದರ್ಶನ | ‘ಅವತ್ತು ರಾತ್ರಿ ನಮ್ಮೆದುರು ನಿಂತಿದ್ದು ಮಚ್ಚು-ಲಾಂಗು ಹಿಡಿದ ಗ್ರಾಮಸ್ಥರು!’
“ನಾವು ಅಧಿಕಾರಕ್ಕೆ ಬಂದ್ರೆ ದೇಶದ ಅಭಿವೃದ್ಧಿ ಮಾಡ್ತೀವಿ,” “ನಮ್ಮನ್ನು ಗೆಲ್ಲಿಸಿದ್ರೆ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತೇವೆ,” “ಗೆದ್ದರೆ ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡ್ತೀನಿ,” ಎಂದು ರಾಜಕಾರಣಿಗಳು ಅಭಿವೃದ್ಧಿಯ ಜಪ ಮಾಡುವುದುಂಟು. ಅಭಿವೃದ್ಧಿ ಆಗಿಲ್ಲ ಅಥವಾ ಅಭಿವೃದ್ಧಿ ಮಾಡಿಲ್ಲವೆಂದು ಜನರೂ ಆಗಾಗ ಗೊಣಗುವುದುಂಟು. ಅಷ್ಟಕ್ಕೂ ಅಭಿವೃದ್ಧಿ ಎಂದರೆ ಏನು?
ಈ ಪ್ರಶ್ನೆಗೆ ಸೂಕ್ತ ಉತ್ತರ ಕಂಡುಕೊಳ್ಳಲು ಬಯಸುವವರು ಒಮ್ಮೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಗಮನಿಸುವ ಅಗತ್ಯತೆ ಇದೆ. ಮೂಲಸೌಕರ್ಯಗಳ ವೃದ್ಧಿ ಎಂಬುದು ಅಭಿವೃದ್ಧಿಯ ಒಂದು ಅಂಶವೇ ಹೊರತು ಅಭಿವೃದ್ಧಿ ಎಂದರೆ ಅದು ಮಾತ್ರವೇ ಅಲ್ಲ. ಎಲ್ಲರ ಹಿತ ಕಾಯುವ ಕಾಳಜಿಯ ಅನುಪಸ್ಥಿತಿಯನ್ನು ಅಭಿವೃದ್ಧಿ ಎಂದು ಕರೆಯಲಾಗದು. ಹೀಗಾಗಿಯೇ, ಬಡತನ ನಿರ್ಮೂಲನೆ, ಹಸಿವು ನೀಗಿಸುವುದು, ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಲಭ್ಯವಾಗಿಸುವುದು, ಲಿಂಗ ಸಮಾನತೆ ಸಾಧಿಸುವುದು, ನಾನಾ ಬಗೆಯ ಅಸಮಾನತೆಗಳನ್ನು ತೊಡೆದುಹಾಕಲು ಶ್ರಮಿಸುವುದೆಲ್ಲ ವಿಶ್ವಸಂಸ್ಥೆ ನಿರೂಪಿಸಿರುವ ಅಭಿವೃದ್ಧಿಯ ಅರ್ಥವ್ಯಾಪ್ತಿಗೆ ಒಳಪಟ್ಟಿವೆ.
ದೇಶದ ಯಾವೆಲ್ಲ ರಾಜ್ಯಗಳು ಅಭಿವೃದ್ಧಿ ಪಥದಲ್ಲಿ ದಾಪುಗಾಲಿಡುತ್ತಿವೆ ಮತ್ತು ಯಾವ ರಾಜ್ಯಗಳು ಮುಗ್ಗರಿಸುತ್ತಿವೆ ಎಂಬುದನ್ನು ಮನಗಾಣಲು ನೀತಿ ಆಯೋಗ ಕೂಡ ಸುಸ್ಥಿರ ಅಭಿವೃದ್ಧಿ ಗುರಿಗಳಿಗೇ ಅಂಟಿಕೊಂಡಿದೆ. ನೀತಿ ಆಯೋಗ ಬಿಡುಗಡೆ ಮಾಡಿದ್ದ 2020-21ರ ಪಟ್ಟಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ ಹಾಗೂ ಕರ್ನಾಟಕ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ಮುಂಚೂಣಿಯ ಸ್ಥಾನ ಪಡೆದಿದ್ದವು. ಅಭಿವೃದ್ಧಿಯ ವಿಚಾರ ಚರ್ಚೆಗೆ ಬಂದಾಗಲೆಲ್ಲ ಮುನ್ನೆಲೆಗೆ ಬರುವ ಗುಜರಾತ್‍ನ ಸಾಧನೆಯು ಮೇಲೆ ಉದಾಹರಿಸಿದ ದಕ್ಷಿಣ ಭಾರತೀಯ ರಾಜ್ಯಗಳಿಗೆ ಹೋಲಿಸಿದರೆ ಕಳಪೆಯಾಗಿತ್ತು.

ರಾಜ್ಯ ಸರ್ಕಾರ ಈಗಾಗಲೇ ಜಾರಿಗೆ ತಂದಿರುವ, ಮುಂದೆ ಜಾರಿಗೆ ತರುವುದಾಗಿ ಘೋಷಿಸಿರುವ ಗ್ಯಾರಂಟಿ ಯೋಜನೆಗಳ ಪರ-ವಿರೋಧದ ಚರ್ಚೆ ತಾರಕಕ್ಕೇರಿರುವ ಸಂದರ್ಭದಲ್ಲಿ, ಎಂಜಿನಿಯರಿಂಗ್ ಕಾಲೇಜೊಂದರ ತರಗತಿಯಲ್ಲಿ ನಡೆದ ಹಾಗೆ, ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತ ಚರ್ಚೆ ನಮ್ಮ ಸಮಾಜದಲ್ಲೂ ನಡೆಯಬೇಕಿದೆ. ಗ್ಯಾರಂಟಿ ಯೋಜನೆಗಳು ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಪೂರಕವೋ ಮಾರಕವೋ ಎಂಬ ನೆಲೆಯಲ್ಲೂ ಚರ್ಚೆ ವಿಸ್ತರಿಸಿಕೊಳ್ಳುವ ಅಗತ್ಯತೆ ಇದೆ. ಉಚಿತ ಕೊಡುಗೆಗಳನ್ನು ನೀಡಿದರೆ ಕುಂಠಿತಗೊಳ್ಳುವುದೆಂದು ಭಾವಿಸಲಾಗುವ ವಿದ್ಯಮಾನಕ್ಕೆ ‘ಅಭಿವೃದ್ಧಿ’ ಎಂಬ ಹೆಸರಿಡುವ ಮುನ್ನ, ಈ ಕಾಲಘಟ್ಟಕ್ಕೆ ಸೂಕ್ತವಾದ ಅಭಿವೃದ್ಧಿಯ ಮಾನದಂಡಗಳಾದ ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ಕಣ್ಣು ಹಾಯಿಸುವ ಅಗತ್ಯತೆ ಇದೆ.
ಸರ್ಕಾರ ರೂಪಿಸುವ ನೀತಿಗಳು ಮತ್ತು ಜಾರಿಗೆ ತರುವ ಯೋಜನೆಗಳ ಉದ್ದೇಶ ಒಳ್ಳೆಯದಿದ್ದರೆ ಸಾಲದು. ಅಸಲಿಗೆ ಅವು ಜನಸಾಮಾನ್ಯರ ಬದುಕಿನ ಮೇಲೆ ಒಳ್ಳೆಯ ಪರಿಣಾಮ ಬೀರುವಲ್ಲಿ ಸಫಲವಾದವೇ ಎಂದೂ ಅವಲೋಕಿಸಬೇಕಿದೆ. ನಿರ್ದಿಷ್ಟ ಯೋಜನೆಯೊಂದರ ಪರ ವಹಿಸುವುದಕ್ಕೆ ಅಥವಾ ವಿರೋಧಿಸುವುದಕ್ಕೆ ನಮ್ಮೆಲ್ಲರ ಬಳಿ ಒಂದಿಷ್ಟು ಸಕಾರಣಗಳಿರಬಹುದು. ಆದರೆ, ಸರ್ಕಾರದ ಯೋಜನೆಯೊಂದು ದೀರ್ಘಾವಧಿಯಲ್ಲಿ ಉಂಟುಮಾಡಬಹುದಾದ ಒಳಿತು-ಕೆಡುಕುಗಳನ್ನು ಅವಲೋಕಿಸಲು ಅವಷ್ಟೇ ಸಾಲದು. ಗ್ಯಾರಂಟಿ ಯೋಜನೆಗಳೂ ಸೇರಿದಂತೆ ತಾನು ಜಾರಿಗೆ ತರುತ್ತಿರುವ ಯೋಜನೆಗಳು ರಾಜ್ಯವನ್ನು ಸುಸ್ಥಿರ ಅಭಿವೃದ್ಧಿ ಪಥದಲ್ಲಿ ನಡೆಸಲು ಹೇಗೆ ನೆರವಾಗಬಲ್ಲವು ಎಂಬುದನ್ನು ಅಂಕಿ-ಅಂಶಗಳ ಆಧಾರದಲ್ಲಿ ನಿರೂಪಿಸುವ ಹೊಣೆ ರಾಜ್ಯ ಸರ್ಕಾರದ ಮೇಲಿದೆ.
ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ