ಈ ದಿನ ಸಂಪಾದಕೀಯ | ಬೆಂಗಳೂರು ಅಂದರೆ ಉದ್ಯಮಿಗಳು, ಐಟಿ ಬಿಟಿ ಶ್ರೀಮಂತರಷ್ಟೇ ಅಲ್ಲ!

Date:

Advertisements

ಮೇಲ್ಜಾತಿಯ, ಮೇಲ್ವರ್ಗದವರು, ಐಟಿ ಬಿಟಿ ಶ್ರೀಮಂತರು ಉಳಿದೆಲ್ಲರ ಪರವಾಗಿ ನೀತಿ ನಿಯಮ ರೂಪಿಸುವುದು ಅಭಿವೃದ್ಧಿಯ ಕೆಟ್ಟ ಮಾದರಿ. ಸಮಾಜದಲ್ಲಿ ಎಷ್ಟೆಲ್ಲ ಜನವರ್ಗಗಳಿವೆಯೋ, ಎಷ್ಟು ವೈವಿಧ್ಯಮಯ ವೃತ್ತಿ ಸಮುದಾಯಗಳಿವೆಯೋ ಅವೆಲ್ಲವೂ ಅಭಿವೃದ್ಧಿಯ ಮಾದರಿಯನ್ನು ರೂಪಿಸುವಲ್ಲಿ ಸಕ್ರಿಯ ಪಾತ್ರ ವಹಿಸಬೇಕು.

ಬೆಂಗಳೂರು ಅಭಿವೃದ್ಧಿಯ ಮುನ್ನೋಟ ಹೇಗಿರಬೇಕು, ಅದನ್ನು ಯಾರು ನಿರ್ಧರಿಸಬೇಕು ಎನ್ನುವ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನಗರದ ಅಭಿವೃದ್ಧಿಗೆ ಸರ್ಕಾರಿ ಅಧಿಕಾರಿಗಳು, ವಿಷಯ ತಜ್ಞರು, ನಾಗರಿಕ ಪ್ರತಿನಿಧಿಗಳನ್ನೊಗೊಂಡ ಸಮಿತಿ ರಚಿಸುವುದಾಗಿ ಇತ್ತೀಚೆಗೆ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದರು. ಈ ಸಂಬಂಧ ಎನ್ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ ಎನ್ನುವ ಸರ್ಕಾರೇತರ ಸಂಸ್ಥೆ ಡಿ ಕೆ ಶಿವಕುಮಾರ್ ಅವರಿಗೆ ಪತ್ರವೊಂದನ್ನು ಬರೆದಿದೆ. ಸಂಸ್ಥೆಯ ಪ್ರತಿನಿಧಿ ಹಾಗೂ ವಕೀಲ ಲಿಯೋ ಸಾಲ್ಡಾನಾ, ಬೆಂಗಳೂರಿನ ಅಭಿವೃದ್ಧಿಗೆ ಐಟಿ ಬಿಟಿ ವಲಯಗಳ ಶ್ರೀಮಂತ ಉದ್ಯಮಿಗಳಿಂದ ಕೂಡಿದ ಸಮಿತಿ ರಚನೆ ಮಾಡುವುದನ್ನು ವಿರೋಧಿಸಿದ್ದಾರೆ. ‘ಎಸ್ ಎಂ ಕೃಷ್ಣ ಅವರ ಅವಧಿಯಲ್ಲಿ ರಚಿಸಲಾಗಿದ್ದ ಸಮಿತಿಯು ಉದ್ಯಮಿಗಳು, ಪ್ರಭಾವಿಗಳಿಂದ ಕೂಡಿತ್ತು. ಅವರು ಲಭ್ಯವಿದ್ದ ಎಲ್ಲ ಹಣಕಾಸು, ಸವಲತ್ತುಗಳನ್ನು ತಮ್ಮ ಹಿತಾಸಕ್ತಿ ಕಾಪಾಡುವುದಕ್ಕೆ ಬಳಸಿಕೊಂಡಿದ್ದರು. ಎಲ್ಲರ ಅಭಿವೃದ್ಧಿಗಾಗಿ ಬಳಕೆಯಾಗಬೇಕಿದ್ದ ಸಂಪನನ್ಮೂಲಗಳನ್ನು ತಮ್ಮ ಯೋಜನೆಗಳ ಅನುಷ್ಠಾನಕ್ಕಾಗಿ ವರ್ಗಾಯಿಸಿಕೊಂಡಿದ್ದರು. ಬಿ ಎಸ್ ಯಡಿಯೂರಪ್ಪನವರ ಅವಧಿಯಲ್ಲೂ ಇಂಥದ್ದೇ ಸಮಿತಿ ರಚಿಸಲಾಗಿತ್ತು. ಆಗಲೂ ಕೂಡ ಪ್ರಭಾವಿಗಳು, ಪ್ರಮುಖರ ಹಿತಾಸಕ್ತಿ ಕಾಯುವ ಕೆಲಸ ಪುನರಾವರ್ತನೆಯಾಗಿತ್ತು. ಈಗ ಡಿ ಕೆ ಶಿವಕುಮಾರ್ ಕೂಡ ಅದೇ ಹಾದಿಯಲ್ಲಿದ್ದು, ಇದು ಅಪ್ರಜಾತಾಂತ್ರಿಕ, ಅಸಾಂವಿಧಾನಿಕ” ಎಂದು ಲಿಯೋ ಸಾಲ್ಡಾನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಅಭಿವೃದ್ಧಿಗೆ ನಾಗರಿಕರನ್ನೂ ಒಳಗೊಂಡ ಸಮಿತಿ ಬೇಕು ಎನ್ನುವುದಾದರೆ, ಚುನಾಯಿತ ಸಮಿತಿ ಮಾಡಿದರೆ ಒಳ್ಳೆಯದು ಎನ್ನುವ ಸಲಹೆಯನ್ನೂ ಅವರು ನೀಡಿದ್ದಾರೆ.

ಈ ಹಿಂದೆ ಬೆಂಗಳೂರು ಅಭಿವೃದ್ಧಿಗಾಗಿ ರಚಿಸಲಾಗಿದ್ದ ಸಮಿತಿಗಳು, ಅವುಗಳ ಪದಾಧಿಕಾರಿಗಳಾಗಿದ್ದವರ ಹಿನ್ನೆಲೆ ಮತ್ತು ಅವು ಮಾಡಿದ ಕೆಲಸಗಳನ್ನು ಪರಿಶೀಲಿಸಿದ ಯಾರಿಗಾದರೂ ಲಿಯೋ ಸಾಲ್ಡಾನಾ ಮಾತುಗಳಲ್ಲಿ ಸತ್ಯವಿದೆ ಎಂದನ್ನಿಸದೇ ಇರದು. ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ (ಬಿಎಟಿಎಫ್‌) ಎನ್ನುವ ಕಾರ್ಯಪಡೆಯನ್ನು ರಚಿಸಿದ್ದರು. ಇತ್ತೀಚೆಗೆ ಸರ್ಕಾರದ ಗ್ಯಾರಂಟಿಗಳನ್ನು ಟೀಕೆ ಮಾಡಿದ್ದ ನಂದನ್‌ ನಿಲೇಕಣಿ ಅಂದು ಬಿಎಟಿಎಫ್‌  ಮುಖ್ಯಸ್ಥರಾಗಿದ್ದರು. ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದ ಪ್ರಯತ್ನ ಎಂದೇ ಹೇಳಲಾಗಿದ್ದ ಅದು ನಂದನ್‌ ನಿಲೇಕಣಿಯಂಥವರಿಗೆ ಪೂರಕ ವಾತಾವರಣ ನಿರ್ಮಿಸಿಕೊಡುವ ವ್ಯವಸ್ಥೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಆ ಕಾರ್ಯಪಡೆಗೆ ಮಹಾನಗರದ ದುಡಿಯುವ ವರ್ಗ ಹಾಗೂ ಬಡವರು ಒಂದು ಆದ್ಯತೆಯೇ ಆಗಿರಲಿಲ್ಲ.

Advertisements

ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಗರದ ಆಡಳಿತಕ್ಕೆ ಹೊಸ ದೃಷ್ಟಿಕೋನ ಒದಗಿಸುವ ಉದ್ದೇಶದಿಂದ ಡಾ ಕೆ ಕಸ್ತೂರಿರಂಗನ್ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿದ್ದರು. ಮಹಾನಗರ ಯೋಜನಾ ಸಮಿತಿಯನ್ನು (ಎಂಪಿಸಿ) ಆದ್ಯತೆ ಮೇಲೆ ರಚನೆ ಮಾಡುವಂತೆ ಅದು ಶಿಫಾರಸು ಮಾಡಿತು. ಅವರ ಅವಧಿಯಲ್ಲಿಯೇ ಬೆಂಗಳೂರು ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯಪಡೆ (ಅಬೈಡ್‌) ಎನ್ನುವ  ಮತ್ತೊಂದು ಸಮಿತಿ ರಚನೆಯಾಯಿತು. ಬಿಎಟಿಎಫ್‌ ಕಾರ್ಯಗಳಿಗೆ ಇನ್ಫೋಸಿಸ್  ಧನಸಹಾಯ ಮಾಡಿದರೆ, ಅಬೈಡ್‌ಗೆ ನೆರವು ನೀಡಿದ್ದು ಸಂಸದ ರಾಜೀವ್ ಚಂದ್ರಶೇಖರ್ ಅವರ ‘ನಮ್ಮ ಬೆಂಗಳೂರು ಪ್ರತಿಷ್ಠಾನ’. ಈ ಕಾರಣಕ್ಕೆ ಮುಖ್ಯಮಂತ್ರಿ ಅವರೇ ಅಬೈಡ್ ಅಧ್ಯಕ್ಷರಾಗಿದ್ದರೂ ತಂಡದ ಕಾರ್ಯಚಟುವಟಿಕೆಗಳ ಮೇಲೆ ರಾಜೀವ್ ಚಂದ್ರಶೇಖರ್ ಹಿಡಿತ ಹೊಂದಿದ್ದರು.  

ಇನ್ನು 2014ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಬಂದ ಮೇಲೆ ಬೆಂಗಳೂರು ವಿಷನ್‌ ಗ್ರೂಪ್‌ (ಬಿವಿಜಿ) ರಚನೆಯಾಗಿತ್ತು. ಹಲವು ಸಚಿವರ ಜೊತೆಗೆ ‘ಜನಾಗ್ರಹ’ ಸಂಸ್ಥೆಯ ಸ್ಥಾಪಕ ರಮೇಶ್‌ ರಾಮನಾಥನ್‌ ಅವರೂ ಕೂಡ ವಿಷನ್ ಗ್ರೂಪ್‌ನಲ್ಲಿದ್ದರು. ಆದರೆ, ಈ ಸಮಿತಿ ರಚನೆಯೇ ಸಂವಿಧಾನಬಾಹಿರ ಎಂದು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಯಿತು. ಮಹಾನಗರ ಯೋಜನಾ ಸಮಿತಿ (ಎಂಪಿಸಿ) ಅಧಿಕಾರವನ್ನು ವಿಷನ್‌ ಗ್ರೂಪ್‌ ಕಿತ್ತುಕೊಳ್ಳುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು. ವಿಷನ್‌ ಗ್ರೂಪ್‌ಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್‌ ಬಿಎಂಪಿಸಿಯನ್ನು ರಚಿಸುವಂತೆ ನಿರ್ದೇಶನ ನೀಡಿತು. ಕೊನೆಗೆ, ಕೋರ್ಟ್‌ ಸೂಚನೆಯಂತೆ, 2014ರಲ್ಲಿ ಬಿಎಂಪಿಸಿ ರಚನೆಯಾಯಿತು.

ಈ ವಿಷನ್ ಗುಂಪುಗಳು, ಸಮಿತಿಗಳು ಜನರಿಗಾಗಿ ಕೆಲಸ ಮಾಡುತ್ತವೋ ಅಥವಾ ಉದ್ಯಮಪತಿಗಳ, ಶ್ರೀಮಂತರ ಹಿತಾಸಕ್ತಿ ಕಾಪಾಡಲು ರಚನೆಯಾಗಿವೆಯೋ ಎನ್ನುವ ಪ್ರಶ್ನೆಯನ್ನು ಹಲವು ಮಾಧ್ಯಮಗಳು, ಜನಪರ ಸಂಘಟನೆಗಳ ಕಾರ್ಯಕರ್ತರು ಕಾಲದಿಂದ ಕಾಲಕ್ಕೆ ಎತ್ತುತ್ತಲೇ ಬಂದಿದ್ದಾರೆ. ಮೇಲ್ಜಾತಿಯ, ಮೇಲ್ವರ್ಗದ ಕೆಲವೇ ಜನರು ಎಲ್ಲರ ಪರವಾಗಿ ನೀತಿ ನಿಯಮ ರೂಪಿಸುವುದು ಅಭಿವೃದ್ಧಿಯ ಕೆಟ್ಟ ಮಾದರಿ. ನಮ್ಮ ಸಮಾಜದಲ್ಲಿ ಎಷ್ಟೆಲ್ಲ ಜನವರ್ಗಗಳಿವೆಯೋ, ಎಷ್ಟು ವೈವಿಧ್ಯಮಯ ವೃತ್ತಿ ಸಮುದಾಯಗಳಿವೆಯೋ ಅವೆಲ್ಲವೂ ಅಭಿವೃದ್ಧಿಯ ಮಾದರಿಯನ್ನು ರೂಪಿಸುವಲ್ಲಿ ಸಕ್ರಿಯ ಪಾತ್ರ ವಹಿಸಬೇಕು. ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ, ನಗರದ ಆಟೋ ಚಾಲಕರು, ಪೌರ ಕಾರ್ಮಿಕರು, ಗಾರ್ಮೆಂಟ್ಸ್ ನೌಕರರು ಮುಂತಾದ ದುಡಿಯುವ ವರ್ಗಗಳೂ ಕೂಡ ಸರ್ಕಾರದ ಸಮಿತಿಗಳಲ್ಲಿ ಸ್ಥಾನ ಪಡೆಯಬೇಕು. ಆಗ ಮಾತ್ರವೇ ನಿಜವಾದ ಅಭಿವೃದ್ಧಿಯ ನಕ್ಷೆ ಮೂಡಲು ಸಾಧ್ಯ. ರಾಜ್ಯದ ಬಡವರ ಮತಗಳನ್ನು ಹೆಚ್ಚಾಗಿ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇದನ್ನು ಮರೆಯಬಾರದು. ಜೊತೆಗೆ ಈ ಸಮಿತಿಗಳ ರಚನೆಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಹೊರೆಯಾಗುತ್ತದೆ. ಸಮಿತಿ ರಚನೆ ಮಾಡುವುದಕ್ಕೆ ಸರ್ಕಾರಗಳು ತೋರುವ ಉತ್ಸಾಹವನ್ನು, ಅವುಗಳ ವರದಿಯನ್ನು ಅನುಷ್ಠಾನ ಮಾಡಲು ತೋರುವುದಿಲ್ಲ. ಹೀಗಾಗಿ ಇಂಥ ಸಮಿತಿಗಳ ಅಂತಿಮ ಪ್ರಯೋಜನಗಳೇನು ಎನ್ನುವುದರ ಬಗ್ಗೆಯೂ ಸಚಿವರು ಚಿಂತಿಸಬೇಕಾಗಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X