ಈ ದಿನ ಸಂಪಾದಕೀಯ | ಬುಲ್ಡೋಝರ್ ಅನ್ಯಾಯ- ಸುಪ್ರೀಮ್ ತೀರ್ಪನ್ನು ಹರಿದು ಗಾಳಿಗೆ ತೂರುತ್ತಿರುವ ಬಿಜೆಪಿ ಸರ್ಕಾರಗಳು

Date:

Advertisements

ನ್ಯಾಯಾಲಯಗಳು ಆಯಾ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳನ್ನು ಮತ್ತು ಮುಖ್ಯಮಂತ್ರಿಯನ್ನು ನ್ಯಾಯಾಂಗ ನಿಂದನೆಯ ಅಪರಾಧಕ್ಕಾಗಿ ಕರೆದು ಕಟಕಟೆಯಲ್ಲಿ ನಿಲ್ಲಿಸಬೇಕಿದೆ.

ಉತ್ತರಪ್ರದೇಶದಲ್ಲಿ ಮನೆಗಳ ಮೇಲೆ ಬುಲ್ಡೋಝರ್ ಹರಿಸಿ ನಡೆಸುತ್ತಿರುವ ಅಕ್ರಮ ನೆಲಸಮಗಳ ವೈಖರಿಯ ಕುರಿತು ಸುಪ್ರೀಮ್ ಕೋರ್ಟು ತೀವ್ರ ಕಳವಳ ವ್ಯಕ್ತಪಡಿಸಿದೆ. ದೇಶದ ಅತ್ಯುನ್ನತ ನ್ಯಾಯಾಲಯ ಹೀಗೆ ಕಳವಳ ವ್ಯಕ್ತಪಡಿಸುತ್ತಿರುವುದು ಇದೇ ಮೊದಲೇನೂ ಅಲ್ಲ.

ಕಾನೂನಿನ ಪ್ರಕಾರ ಕ್ರಮ ಜರುಗಿಸದೆ ವ್ಯಕ್ತಿಯ ಆಸ್ತಿಪಾಸ್ತಿಯನ್ನು ನೆಲಸಮಗೊಳಿಸುವುದು ಸಂವಿಧಾನಬಾಹಿರ. ವ್ಯಕ್ತಿಯು ಅಪರಾಧದಲ್ಲಿ ಭಾಗಿ ಎಂದಾಕ್ಷಣ ಆತನ ಅಥವಾ ಆಕೆಯ ಮನೆಯನ್ನು ನೆಲಸಮಗೊಳಿಸಲು ಬರುವುದಿಲ್ಲ ಎಂದು ಕಳೆದ ನವೆಂಬರ್ 13ರಂದು ಸಾರಿತ್ತು ಇದೇ ನ್ಯಾಯಾಲಯ.

Advertisements

ಬುಲ್ಡೋಝರ್ ಹರಿಸಿ ನೆಲಸಮಗೊಳಿಸುವ ಕೃತ್ಯಗಳು ಕಾನೂನನ್ನು ಗಾಳಿಗೆ ತೂರಿರುವ ನಿರ್ದಯೀ ನಡವಳಿಕೆಗಳು. ಬುಲ್ಡೋಝರ್ ಹರಿಸುತ್ತಿರುವುದು ನೈಸರ್ಗಿಕ ನ್ಯಾಯದ ಉಲ್ಲಂಘನೆ ಅಗತ್ಯ ಕಾನೂನು ಕ್ರಮಗಳನ್ನು ಜರುಗಿಸದೆ ನೆಲಸಮ ಮಾಡುವಂತಿಲ್ಲ ಎಂದು ತಾಕೀತು ಮಾಡಿತ್ತು. ನೆಲಸಮಕ್ಕೆ ಮುನ್ನ ಕೈಗೊಳ್ಳಬೇಕಾದ ಸುದೀರ್ಘ ಪ್ರಕ್ರಿಯೆಯನ್ನು ಸೂಚಿಸಿತ್ತು. ದೇಶಾದ್ಯಂತ ಅನ್ವಯ ಆಗುವ ಮಾರ್ಗಸೂಚಿಗಳನ್ನು ರಚಿಸಿತ್ತು. ಮಾರ್ಗಸೂಚಿಗಳ ಉಲ್ಲಂಘನೆಯು ನ್ಯಾಯಾಂಗ ನಿಂದನೆಯಾಗುತ್ತದೆ. ವೆಚ್ಚಗಳನ್ನು ಅಕ್ರಮ ನೆಲಸಮದಲ್ಲಿ ತೊಡಗಿದ ಅಧಿಕಾರಿಗಳ ಸಂಬಳದಲ್ಲಿ ಮುರಿದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿತ್ತು.

ಕಾನೂನು ಪ್ರಕ್ರಿಯೆಯನ್ನು ಎತ್ತಿ ಹಿಡಿಯದೆ ಹೋದರೆ, ಜನ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ. ರಾಜ್ಯಾಧಿಕಾರದ ಸ್ವೇಚ್ಛಾಚಾರಕ್ಕೆ ಕಾನೂನಿನ ಆಡಳಿತವೇ ಪರಿಣಾಮಕಾರಿ ಅಂಕುಶ. ಆಪಾದಿತರು ಮಾತ್ರವಲ್ಲ, ಸಜಾ ಅನುಭವಿಸುತ್ತಿರುವವರನ್ನು ಕೂಡ ಪ್ರಕ್ರಿಯೆಗೆ ಪೂರ್ವದಲ್ಲೇ ಈ ನೆಲಸಮ ಶಿಕ್ಷೆಗೆ ಗುರಿ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಹೀನಾತಿಹೀನ ಅಪರಾಧಗಳಿಗೆ ಮರಣದಂಡನೆ ನೀಡಲು ನಿರ್ದಿಷ್ಟ ಕಾನೂನು-ಕಾಯಿದೆಗಳನ್ನು ಅನ್ವಯಗೊಳಿಸಬೇಕಾಗುತ್ತದೆ ಮತ್ತು ಪಾಲಿಸಬೇಕಾಗುತ್ತದೆ. ಅಮಾಯಕ ಜನರ ತಲೆಯ ಮೇಲಿನ ಸೂರನ್ನು ಕಿತ್ತುಕೊಳ್ಳುವುದು ಸಂವಿಧಾನಬಾಹಿರ. ಸ್ಥಳೀಯ ಪೌರ ಕಾನೂನುಗಳ ಉಲ್ಲಂಘನೆ ಆಗಿದ್ದ ಸನ್ನಿವೇಶಗಳಲ್ಲಿ ಕೂಡ ನೆಲಸಮಕ್ಕೆ ಮುನ್ನ ಪೂರ್ವ ಪ್ರಕ್ರಿಯೆಯನ್ನು ಪಾಲಿಸುವುದು ಕಡ್ಡಾಯ. ಮನೆಯೆಂಬುದು ಕುಟುಂಬದ ಸದಸ್ಯರು ಸ್ಥಿರತೆ, ಸುರಕ್ಷತೆ ಹಾಗೂ ಭವಿಷ್ಯದ ಕುರಿತು ಹೊಂದಿರುವ ಸಾಮೂಹಿಕ ಆಶೋತ್ತರವೇ ವಿನಾ ಕೇವಲ ಆಸ್ತಿಪಾಸ್ತಿ ಅಲ್ಲ. ಕುಟುಂಬದ ಮಕ್ಕಳು, ಹೆಣ್ಣುಮಕ್ಕಳು, ವೃದ್ಧರನ್ನು ಏಕಾಏಕಿ ಬೀದಿಯಲ್ಲಿ ನಿಲ್ಲಿಸುವುದು ಸಂತಸದ ನೋಟವೇನೂ ಅಲ್ಲ ಎಂದು ಸುದೀರ್ಘ ಮಾರ್ಗಸೂಚಿಗಳನ್ನು ನಿಗದಿ ಮಾಡಿತ್ತು.

ಪ್ರಯಾಗರಾಜದಲ್ಲಿ ನಾಲ್ಕು ವರ್ಷಗಳ ಹಿಂದೆ ಆರು ಮಂದಿಯ ಮನೆಗಳನ್ನು ಕನಿಷ್ಠ 24 ತಾಸುಗಳ ನೋಟಿಸನ್ನು ಕೂಡ ನೀಡದೆ ನೆಲಸಮಗೊಳಿಸಿರುವ ಕೃತ್ಯ ಕುರಿತು ಮಂಗಳವಾರ ನ್ಯಾಯಮೂರ್ತಿಗಳು ಆಘಾತ ಪ್ರಕಟಿಸಿದ್ದಾರೆ.

ಅಮಾನವೀಯ ಮತ್ತು ಅಕ್ರಮ ಎಂದು ಟೀಕಿಸಿದ್ದಾರೆ. ಇದೇ ವಿಚಾರಣೆಯ ವೇಳೆ ಅಂಬೇಡ್ಕರ್ ನಗರದ ಗುಡಿಸಿಲುಗಳ ಮೇಲೆ ಬುಲ್ಡೋಝರ್ ಹರಿಸಿದಾಗ ಎಂಟು ವರ್ಷ ವಯಸ್ಸಿನ ಬಾಲಕಿಯೊಬ್ಬಳು ಗುಡಿಸಿಲೊಳಕ್ಕೆ ಓಡಿ ತನ್ನ ಪುಸ್ತಕಗಳನ್ನು ಕಾಪಾಡಿ ಎದೆಗವಚಿ ಹಿಡಿದು ತಂದ ವೈರಲ್ ವಿಡಿಯೋದ ಉಲ್ಲೇಖವನ್ನೂ ಮಾಡಿದ್ದಾರೆ.

ಗುಡಿಸಿಲುಗಳ ಮೇಲೆಯೂ ಬುಲ್ಡೋಝರ್ ಹರಿಸಲಾಗಿದೆ. ಪುಟ್ಟಬಾಲಕಿಯೊಬ್ಬಳು ತನ್ನ ಪುಸ್ತಕಗಳನ್ನು ಹಿಡಿದು ಓಡುತ್ತಿರುವ ದೃಶ್ಯವು ಆಘಾತ ಉಂಟು ಮಾಡಿದ್ದಾಗಿ ಹೇಳಿದೆ.

ಪ್ರಯಾಗರಾಜ್ ಪ್ರಾಧಿಕಾರ ಕೈಗೊಂಡ ನೆಲಸಮ ಕ್ರಮ ಕೇವಲ ಕಾನೂನುಬಾಹಿರ ಮಾತ್ರವೇ ಅಲ್ಲ, ವಸತಿಯ ಮೂಲಭೂತ ಹಕ್ಕಿನ ಉಲ್ಲಂಘನೆ ಕೂಡ. ನೆಲಸಮಕ್ಕೆ ಮುನ್ನ ಯಾವುದೇ ನೋಟಿಸನ್ನು ನೀಡಲಾಗಿಲ್ಲ. 24 ತಾಸುಗಳ ನೋಟಿಸನ್ನು ಕೂಡ ನೀಡಿಲ್ಲ. ದೇಶದ ಅತ್ಯುಚ್ಚ ನ್ಯಾಯಾಲಯ ಆಡಿರುವ ಈ ಮಾತುಗಳಿಗೆ ಅವುಗಳನ್ನು ಬರೆದ ಕಾಗದದ ಬೆಲೆಯೂ ಇಲ್ಲದಂತೆ ಮಾಡಿವೆ ಬಿಜೆಪಿ ಸರ್ಕಾರಗಳು. ಮೊನ್ನೆ ಮೊನ್ನೆಯಷ್ಟೇ ಮಹಾರಾಷ್ಟ್ರ ಬಿಜೆಪಿ ಸರ್ಕಾರ ಸ್ವೇಚ್ಛಾಚಾರದ ಬುಲ್ಡೋಝರ್ ಹರಿಸಿ ನೆಲಸಮ ಮಾಡಿತು.

ನೆಲಸಮದ ಅತಿರೇಕದ ವರ್ತನೆಗಳು ನಮ್ಮ ಮನಸ್ಸಾಕ್ಷಿಯನ್ನು ಕಲಕಿವೆ. ಅಕ್ರಮ ನೆಲಸಮದಂತಹ ದುರದೃಷ್ಟಕರ ವಿದ್ಯಮಾನ ಜರುಗಿದೆ. ತಮ್ಮ ಮನೆಗಳನ್ನು ಪುನಃ ಕಟ್ಟಿಕೊಳ್ಳುವ ಸಾಮರ್ಥ್ಯವೂ ಸಂತ್ರಸ್ತರಿಗೆ ಇಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸಹಾನುಭೂತಿ ಪ್ರಕಟಿಸಿದೆ.

ಪರಿಹಾರ ಕೊಡಿಸುವಂತೆ ಕೋರಿದ್ದ ಮೇಲ್ಮನವಿದಾರರ ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟು ತಿರಸ್ಕರಿಸಿತ್ತು. ಕಡೆಯ ದಾರಿಯಾಗಿ ಅವರು ಸುಪ್ರೀಮ್ ಕೋರ್ಟ್ ಗೆ ಬಂದಿದ್ದರು.

ಅರ್ಜಿದಾರರಿಗೆ ವಿವರಣೆ ನೀಡಲು ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು ಎಂದು ಅಟಾರ್ನಿ ಜನರಲ್ ಉತ್ತರಪ್ರದೇಶ ಸರ್ಕಾರದ ಪರವಾಗಿ ಮಂಡಿಸಿದ ವಾದವನ್ನು ನ್ಯಾಯಾಲಯ ತಳ್ಳಿ ಹಾಕಿತು. ಕಾನೂನು ಪರಿಪಾಲನೆ ಎಂಬುದು ಸಂವಿಧಾನದ ಮೂಲಭೂತ ಸಂರಚನೆಯ ಅಂಗ. ಜನವಸತಿಗಳೊಂದಿಗೆ ವ್ಯವಹರಿಸುವ ರೀತಿ ಇದಲ್ಲ.

ತಾತ್ಕಾಲಿಕ ಸೂರುಗಳನ್ನು ನಿರ್ಮಿಸಿಕೊಳ್ಳಲು ನ್ಯಾಯಾಲಯ ಅನುಮತಿ ನೀಡಿದೆ. ಮೇಲ್ಮನವಿದಾರರಿಗೆ ಆರು ವಾರಗಳ ಒಳಗಾಗಿ ತಲಾ ಹತ್ತು ಲಕ್ಷ ರುಪಾಯಿಯ ಮೊತ್ತವನ್ನು ಪಾವತಿ ಮಾಡಬೇಕೆಂದು ವಿಧಿಸಿದೆ.

ಈ ನೆಲಸಮ ಕ್ರಮ ಜರುಗಿರುವ ರೀತಿನೀತಿ ನಮ್ಮ ಆತ್ಮಸಾಕ್ಷಿಗೆ ಆಘಾತ ಉಂಟು ಮಾಡಿವೆ. ನಮ್ಮ ಸಂವಿಧಾನ ವಸತಿಯ ಹಕ್ಕನ್ನು ಕೂಡ ನೀಡುತ್ತದೆ ಎಂಬುದನ್ನು ಮರೆಯಬೇಡಿ. ಕಾನೂನು ಆಡಳಿತ ಎಂಬುವಂತಹುದು ಏನಾದರೂ ಇದೆಯೇ ಎಂದು ನ್ಯಾಯಾಲಯ ಪ್ರಯಾಗರಾಜ್ ಪೌರಾಡಳಿತ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ.

ಕಾಯಿದೆ ಕಾನೂನುಗಳನ್ನು ಎತ್ತಿ ಹಿಡಿದು ಆಡಳಿತ ಮಾಡಬೇಕಿರುವ ಸರ್ಕಾರವೇ ಕಾನೂನು ಪ್ರಕ್ರಿಯೆಯನ್ನು ಗಾಳಿಗೆ ತೂರಿ ನ್ಯಾಯಾಂಗದ ಪಾತ್ರವನ್ನೂ ತಾನೇ ವಹಿಸಿರುವುದು ಸಂವಿಧಾನಬಾಹಿರ ನಡೆ. ಕಾನೂನಿನ ಆಡಳಿತಕ್ಕೆ ಮಾರಕ.

ಜರ್ಮನಿಯ ನಾಜಿಗಳು ಯಹೂದಿಗಳ ನರಸಂಹಾರದಲ್ಲಿ ಮತ್ತು ಇಸ್ರೇಲಿನ ಯಹೂದಿಗಳು ಪ್ಯಾಲೆಸ್ತೀನೀಯರ ವಿರುದ್ಧ ಬುಲ್ಡೋಝರುಗಳನ್ನು ಹೂಡಿದ್ದರು. ಇಂದಿನ ಭಾರತದ ಉತ್ತರಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆಡಳಿತ ಆಪಾದಿತರು- ಅಪರಾಧಿಗಳ (ಬಹುತೇಕ ಮುಸಲ್ಮಾನರು) ಆಸ್ತಿಪಾಸ್ತಿಗಳ ಮೇಲೆ ಬುಲ್ಡೋಝರ್ ಹರಿಸಿತ್ತು. ಬುಲ್ಡೋಝರ್ ಬಾಬಾ ಎಂಬ ಬಿರುದನ್ನು ಯೋಗಿ ಹೆಮ್ಮೆಯಿಂದ ಧರಿಸಿದ್ದಾರೆ.

ಈ ಘನಂದಾರಿ ಕೆಲಸವನ್ನು ಮಧ್ಯಪ್ರದೇಶದಲ್ಲಿ ಮುಂದುವರೆಸಿದ ಶಿವರಾಜಸಿಂಗ್ ಚೌಹಾಣ್ ಬುಲ್ಡೋಝರ್ ಮಾಮಾ ಎಂದು ತಮ್ಮನ್ನು ತಾವೇ ಕರೆದುಕೊಂಡು ಬೆನ್ನು ಚಪ್ಪರಿಸಿಕೊಂಡರು. ಕರ್ನಾಟಕದ ಬಿಜೆಪಿಯಲ್ಲೂ ಬುಲ್ಡೋಝರ್ ಪ್ರಸ್ತಾಪ ಬಂದಿತು. ಅಮೆರಿಕಾದಲ್ಲಿನ ಬಿಜೆಪಿ ಬೆಂಬಲಿಗರು ಕೂಡ ಜೆ.ಸಿ.ಬಿ.ಗಳ ಮೆರವಣಿಗೆ ಮಾಡಿದ್ದುಂಟು.

ಅಸಹಾಯಕ ಅಲ್ಪಸಂಖ್ಯಾತರ ಮನೆಮಠಗಳು, ಬದುಕು-ಬಾಳುವೆಗಳ ನೆಲಸಮವೇ ಅವುಗಳ ಗೊತ್ತುಗುರಿ. ಎಲ್ಲ ಘನತೆ, ಅಭಿಮಾನ, ಪೌರಹಕ್ಕುಗಳನ್ನು ಕಿತ್ತುಕೊಂಡು ಅವರನ್ನು ಬಹುಸಂಖ್ಯಾತರ ಗುಲಾಮಗಿರಿಗೆ ತಳ್ಳುವುದೊಂದೇ ಈ ದಾಳಿಗಳ ಕೀಳು ಹುನ್ನಾರವಿದು.

ಮೂರನೆಯ ದರ್ಜೆಯ ಪ್ರಜೆಗಳಂತೆ ಬಹುಸಂಖ್ಯಾತರಿಗೆ ಅಡಿಯಾಳುಗಳಾಗಿ ಬಾಳದೆ ಸಮಾನರೆಂದು ತಲೆಯೆತ್ತಿದರೆ ನಿಮ್ಮ ನೆರಳು, ಬದುಕು- ಬಾಳುವೆ, ಅನ್ನದ ದಾರಿಗಳನ್ನು ಹಾಳುಗೆಡವುತ್ತೇವೆ ಎಂಬ ನಿಚ್ಚಳ ಸಂದೇಶವನ್ನು ಅಲ್ಪಸಂಖ್ಯಾತರಿಗೆ ದಿನನಿತ್ಯ ಹತ್ತು ಹಲವು ಬಗೆಗಳಲ್ಲಿ ರವಾನಿಸಲಾಗುತ್ತಿದೆ.

ಅಲ್ಪಸಂಖ್ಯಾತರ ನಡೆ ನುಡಿ ಉಡುಪು, ಉಣಿಸು ತಿನಿಸು, ಆರಾಧನೆ ಎಲ್ಲವನ್ನೂ ಖಳ-ಖೂಳಗೊಳಿಸಿ ಮುಸಲ್ಮಾನರ ಜನಾಂಗೀಯ ಹತ್ಯೆಯತ್ತ ಹಿಂದಕ್ಕೆ ಹೆಜ್ಜೆಯಿಟ್ಟಿದೆ ಭಾರತದ ರಾಜ್ಯಾಡಳಿತ ಕ್ರಮ.

ವಾಸ್ತವವಾಗಿ ಬುಲ್ಡೋಜರುಗಳು ಹರಿದು ಕದಲಿರುವುದು ಭಾರತದ ಬಹುತ್ವದ ಅಡಿಪಾಯವೇ ವಿನಾ ಅಲ್ಪಸಂಖ್ಯಾತರ ಮನೆ ಮನಗಳು ಮಾತ್ರವೇ ಅಲ್ಲ.

ದೇಶದ ಅತ್ಯುಚ್ಚ ನ್ಯಾಯಾಲಯ ಆಡಿರುವ ಈ ಮಾತುಗಳಿಗೆ ಅವುಗಳನ್ನು ಬರೆದ ಕಾಗದದ ಬೆಲೆಯೂ ಇಲ್ಲದಂತೆ ಮಾಡಿವೆ ಬಿಜೆಪಿ ಸರ್ಕಾರಗಳು. ಮೊನ್ನೆ ಮೊನ್ನೆಯಷ್ಟೇ ಮಹಾರಾಷ್ಟ್ರ ಬಿಜೆಪಿ ಸರ್ಕಾರ ಸ್ವೇಚ್ಛಾಚಾರದ ಬುಲ್ಡೋಝರ್ ಹರಿಸಿ ನೆಲಸಮ ಮಾಡಿತು.

ನ್ಯಾಯಾಲಯಗಳು ಆಯಾ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳನ್ನು ಮತ್ತು ಮುಖ್ಯಮಂತ್ರಿಯನ್ನು ನ್ಯಾಯಾಂಗ ನಿಂದನೆಯ ಅಪರಾಧಕ್ಕಾಗಿ ಕರೆದು ಕಟಕಟೆಯಲ್ಲಿ ನಿಲ್ಲಿಸಬೇಕು. ಅಲ್ಲಿಯ ತನಕ ಬಿಜೆಪಿ ರಾಜ್ಯ ಸರ್ಕಾರಗಳು ಸುಪ್ರೀಮ್ ಕೋರ್ಟ್ ಆದೇಶಗಳನ್ನು ಹೀಗೆ ಹರಿದು ಗಾಳಿಗೆ ತೂರುತ್ತಲೇ ಇರುತ್ತವೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X