ಈ ದಿನ ಸಂಪಾದಕೀಯ | ಬಿಹಾರದ ಜಾತಿ ಜನಗಣತಿ- ಕಮಂಡಲ ರಾಜಕಾರಣ ಕಕ್ಕಾಬಿಕ್ಕಿ

Date:

Advertisements
ಲಾಲೂ ಮತ್ತು ನಿತೀಶ್ ಇಬ್ಬರೂ ಈಗ ಒಂದೇ ದೋಣಿಯ ಪಯಣಿಗರು. ಬಿಜೆಪಿ- ಮೋದಿಯವರ ವಿರೋಧಿಗಳು. ಹಿಂದುಳಿದ ವರ್ಗಗಳ ಈ ಇಬ್ಬರು ಹೇಮಾಹೇಮಿಗಳು ಅಹಂಕಾರಗಳನ್ನು ಬದಿಗೆ ಸರಿಸಿ ಕೈ ಜೋಡಿಸಿದರೆ ಹಿಂದುಳಿದ, ಅತಿ ಹಿಂದುಳಿದ ಹಾಗೂ ದಲಿತ ಮತಗಳು ಒಂದೆಡೆ ಘನವಾಗಿ ಜಮೆ ಆಗುತ್ತವೆ. ಇನ್ನು ಮೋದಿಯವರನ್ನು ಅನುಮಾನದಿಂದ ನೋಡುವ ಮುಸ್ಲಿಮರು ಬಿಜೆಪಿಗೆ ಒಲಿಯುವ ಸಂಭವವೇ ಇಲ್ಲ

ಬಿಹಾರದಲ್ಲಿ ಜಾತಿ ಜನಗಣತಿ ಮಾಡಿಸಿ ಅದರ ಫಲಿತಾಂಶಗಳನ್ನು ಹೊರಹಾಕಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಒಂದು ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಿದ್ದಾರೆ. ರಾಷ್ಟ್ರರಾಜಕಾರಣದಲ್ಲಿ ಸೊರಗಿರುವ ಅವರ ವರ್ಚಸ್ಸು ಹೊಸ ಹೊಳಪು ಪಡೆಯಲಿದೆ. ಚೆದುರಿ ಹೋಗಿದ್ದ ತಮ್ಮ ಜಾತಿ ವರ್ಗ ಆಧಾರಿತ ಸಾಮಾಜಿಕ ಬೆಂಬಲ ನೆಲೆಯನ್ನು ಮತ್ತೊಮ್ಮೆ ಒಟ್ಟುಗೂಡಿಸಲಿದೆ. ಅತಿ ಹಿಂದುಳಿದ ಜಾತಿಗಳು, ಯಾದವೇತರ ಹಿಂದುಳಿದ ಜಾತಿಗಳು ಹಾಗೂ ಮಹಾದಲಿತರ ನಾಯಕನಾಗಿ ರಾಜಕೀಯ ಮರುಹುಟ್ಟು ಪಡೆದಿದ್ದಾರೆ.

ಜಾತಿ ಜನಗಣತಿಯ ಅಂಕಿ ಅಂಶಗಳ ಪ್ರಕಾರ ಅತಿ ಹಿಂದುಳಿದ ವರ್ಗಗಳು ಬಿಹಾರದ ಅತ್ಯಂತ ದೊಡ್ಡ ಸಂಖ್ಯೆಯ ಮತದಾರ ಸಮೂಹವಾಗಿ ಹೊರಹೊಮ್ಮಿವೆ. ಅವುಗಳ ಪ್ರಮಾಣ ಶೇ.36.01. ನಂತರದ ಸ್ಥಾನ ಇತರೆ ಹಿಂದುಳಿದ ವರ್ಗಗಳದು. ಅವರ ಪ್ರಮಾಣ ಶೇ.27.12. ಆನಂತರದ ಸ್ಥಾನ ಯಾದವರದು. ಅವರ ಪ್ರಮಾಣ ಶೇ.14.26. ದಲಿತರ ಪ್ರಮಾಣ ಶೇ.19.65. 2011ರ ಜನಗಣತಿಯ ಪ್ರಕಾರ ಈ ಪ್ರಮಾಣ ಶೇ.15 ಎಂದು ನಮೂದಾಗಿತ್ತು. ಅತಿ ಹಿಂದುಳಿದ ಮತ್ತು ಇತರೆ ಹಿಂದುಳಿದ ಜಾತಿ ಸಮೂಹಗಳಲ್ಲಿ ಪಾಸ್ಮಂದಾ ಮುಸಲ್ಮಾನರೂ ಸೇರಿದ್ದಾರೆ.

ದಲಿತರನ್ನು ಒಲಿಸಿಕೊಳ್ಳಲು ಆಕ್ರಮಣಕಾರಿ ತಂತ್ರವೊಂದನ್ನು ಹೆಣೆದ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಹಾದಲಿತ ಆಯೋಗವನ್ನು ರಚಿಸಿದ್ದರು. ಹೆಚ್ಚುವರಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಯೋಗ ಗುರುತಿಸಿದ 22 ಪರಿಶಿಷ್ಟ ಜಾತಿಗಳನ್ನು ಮಹಾದಲಿತರ ಪಟ್ಟಿಗೆ ಸೇರಿಸಿದ್ದರು. ಜೊತೆಗೆ ಅತಿ ಹಿಂದುಳಿದ ಜಾತಿಗಳನ್ನು ವರ್ಗೀಕರಿಸಿದ್ದೂ ಅವರದೇ ರಾಜಕೀಯ ತಂತ್ರವಾಗಿತ್ತು. ಈಗ ಹೊರಬಿದ್ದಿರುವ ಜಾತಿಜನಗಣತಿಯ ಅಂಕಿ ಅಂಶಗಳು ನಿತೀಶ್ ಅವರಿಗೆ ಬಹುದೊಡ್ಡ ರಾಜಕೀಯ ಶಕ್ತಿಯನ್ನು ತುಂಬಿವೆ.

Advertisements

ಲಾಲೂ ಮತ್ತು ನಿತೀಶ್ ಇಬ್ಬರೂ ಈಗ ಒಂದೇ ದೋಣಿಯ ಪಯಣಿಗರು. ಬಿಜೆಪಿ- ಮೋದಿಯವರ ವಿರೋಧಿಗಳು.
ಹಿಂದುಳಿದ ವರ್ಗಗಳ ಈ ಇಬ್ಬರು ಹೇಮಾಹೇಮಿಗಳು ಅಹಂಕಾರಗಳನ್ನು ಬದಿಗೆ ಸರಿಸಿ ಕೈ ಜೋಡಿಸಿದರೆ ಹಿಂದುಳಿದ, ಅತಿ ಹಿಂದುಳಿದ ಹಾಗೂ ದಲಿತ ಮತಗಳು ಒಂದೆಡೆ ಘನವಾಗಿ ಜಮೆ ಆಗುತ್ತವೆ. ಇನ್ನು ಮೋದಿಯವರನ್ನು ಅನುಮಾನದಿಂದ ನೋಡುವ ಮುಸ್ಲಿಮರು ಬಿಜೆಪಿಗೆ ಒಲಿಯುವ ಸಂಭವವೇ ಇಲ್ಲ.

ದಿಲ್ಲಿಯಲ್ಲಿ ಕೇಂದ್ರ ಸರ್ಕಾರದ ಗದ್ದುಗೆ ಹಿಡಿಯುವ ದಾರಿ ಕೇವಲ ಉತ್ತರಪ್ರದೇಶ ಮಾತ್ರವಲ್ಲ, ಬಿಹಾರದಿಂದಲೂ ಹಾದು ಹೋಗುತ್ತದೆ. ಪರಸ್ಪರರನ್ನು ಪ್ರಭಾವಿಸುವ ಈ ನೆರೆ ಹೊರೆಯ ರಾಜ್ಯಗಳು ಲೋಕಸಭೆಗೆ ಆರಿಸಿ ಕಳಿಸುವ ಒಟ್ಟು ಸದಸ್ಯರ ಸಂಖ್ಯೆ 120. ಈ ಪೈಕಿ ಬಿಹಾರದವರು ನಲವತ್ತು ಮಂದಿ.

ಉತ್ತರಪ್ರದೇಶದಂತೆಯೇ ಬಿಹಾರದಲ್ಲಿ ಕೂಡ ಜಾತಿ ರಾಜಕಾರಣ ಇಂದಿಗೂ ಪ್ರಭಾವಶಾಲಿ ಮತ್ತು ನಿರ್ಣಾಯಕ. ಸಂಯುಕ್ತ ಜನತಾದಳ, ರಾಷ್ಟ್ರೀಯ ಜನತಾದಳ, ಬಿಜೆಪಿ, ಕಾಂಗ್ರೆಸ್ಸು ಹಾಗೂ ಲೋಕಜನಶಕ್ತಿ ತಮ್ಮದೇ ಗಟ್ಟಿ ಜಾತಿ ನೆಲೆಗಳನ್ನು ಹೊಂದಿರುವ ಪಕ್ಷಗಳು. ಬಿಜೆಪಿಗೆ ವಿದಾಯ ಹೇಳಿದ್ದ ಬಹುದೊಡ್ಡ ನಿರ್ಧಾರ ತೆಗೆದುಕೊಂಡಿದ್ದ ನಿತೀಶ್ ತಮ್ಮ ರಾಜಕೀಯ ಜೀವನದ ಬಹುದೊಡ್ಡ ಅಗ್ನಿಪರೀಕ್ಷೆಯನ್ನು ಎದುರಿಸಿದ್ದರು.

ಎನ್.ಡಿ.ಎ. ಮೈತ್ರಿಕೂಟದ ಹಿರಿಯಣ್ಣ ನಿತೀಶ್ ರೆಕ್ಕೆಪುಕ್ಕಗಳನ್ನು ಕತ್ತರಿಸುವ ಹುನ್ನಾರವನ್ನು ಬಿಜೆಪಿ 2020ರ ವಿಧಾನಸಭಾ ಚುನಾವಣೆಯಲ್ಲೇ ಕಾರ್ಯಗತಗೊಳಿಸಿತ್ತು. ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿಯನ್ನು ಬಳಸಿಕೊಂಡು ಸಂಯುಕ್ತ ಜನತಾದಳಕ್ಕೆ ಒಳಹೊಡೆತ ನೀಡಿತು. ಲೋಕಜನಶಕ್ತಿ ಪಾರ್ಟಿಯ ಸ್ಪರ್ಧೆಯು ಎರಡಲಗಿನ ಕತ್ತಿಯಾಗಿ ಸಂಯುಕ್ತ ಜನತಾದಳ ಮತ್ತು ರಾಷ್ಟ್ರೀಯ ಜನತಾದಳ ಎರಡನ್ನೂ ಕೊಯ್ದಿತ್ತು. ರಾಷ್ಟ್ರೀಯ ಜನತಾದಳಕ್ಕಿಂತ ಹೆಚ್ಚಾಗಿ ಸಂಯುಕ್ತ ಜನತಾದಳಕ್ಕೆ ಹೆಚ್ಚಿನ ಹಾನಿಯನ್ನು ಉಂಟು ಮಾಡಿತ್ತು. 30-35 ಸೀಟುಗಳಲ್ಲಿ ನಿತೀಶ್ ಸೋಲನ್ನು ಬರೆದಿತ್ತು.  

ಬಿಜೆಪಿಗಿಂತ ಕಡಿಮೆ ಸಂಖ್ಯೆಯ ಸೀಟುಗಳನ್ನು ಗೆದ್ದು ಮುಖಭಂಗಿತರಾದ ನಂತರ ನಿತೀಶ್ ತೀವ್ರ ಒತ್ತಡಕ್ಕೆ ಸಿಲುಕಿದ್ದರು. 2015ರಲ್ಲಿ 71 ಸೀಟು ಗೆದ್ದಿದ್ದ ಜೆ.ಡಿ.ಯು. ಸಾಧನೆ 2020ರಲ್ಲಿ 43ಕ್ಕೆ ಕುಸಿದಿತ್ತು. ನಿತೀಶ್ ಅವರಿಂದ ಹಿರಿಯಣ್ಣನ ಸ್ಥಾನವನ್ನು ಕಿತ್ತುಕೊಂಡಿದ್ದ ಬಿಜೆಪಿ ಹಂತ ಹಂತವಾಗಿ ಅವರ ಕೈಕಾಲುಗಳನ್ನು ಕಟ್ಟಿ ಹಾಕತೊಡಗಿತ್ತು. ಮುಖ್ಯಮಂತ್ರಿ ಸ್ಥಾನ ಹೆಚ್ಚು ಸೀಟುಗಳನ್ನು ಗೆದ್ದಿರುವ ತನಗೇ ದಕ್ಕಬೇಕೆಂಬ ಒತ್ತಡವನ್ನು ನಿತೀಶ್ ಮೇಲೆ ಹಲವು ಬಗೆಗಳಲ್ಲಿ ಹೇರತೊಡಗಿತ್ತು.

ಮಹಾರಾಷ್ಟ್ರದಲ್ಲಿ ಶಿವಸೇನೆ ಕೂಡ ಒಂದು ಕಾಲದಲ್ಲಿ ಬಿಜೆಪಿ ಮೈತ್ರಿಕೂಟದ ದೊಡ್ಡಣ್ಣನಾಗಿತ್ತು. ಆದರೆ ನಿತೀಶ್ ಅವರನ್ನು ಕತ್ತರಿಸಿದಂತೆ ಸೇನೆಯನ್ನೂ ಕತ್ತರಿಸಿ ತಾನು ದೊಡ್ಡಣ್ಣನ ಸ್ಥಾನದಲ್ಲಿ ಕುಳಿತಿದೆ ಬಿಜೆಪಿ. ಈ ಹಂಚಿಕೆಯ ವಿರುದ್ಧ ಬಂಡೆದ್ದ ಸೇನೆ ಕಾಂಗ್ರೆಸ್-ಎನ್.ಸಿ.ಪಿ. ಜೊತೆ ಕೈಜೋಡಿಸಿ ಸರ್ಕಾರ ರಚಿಸಿತು. ಹಲ್ಲು ಮಸೆದು ಸಮಯ ಕಾಯುತ್ತಿದ್ದ ಬಿಜೆಪಿ, ಶಿವಸೇನೆಯನ್ನು ಒಡೆದು ಉದ್ಧವ ಠಾಕ್ರೆ ಅವರಿಗೆ ಪಾಠ ಕಲಿಸಿತು. ಇಂತಹುದೇ ಪಾಠದ ಆಟ ಇಂದಲ್ಲ ನಾಳೆ ಬಿಹಾರದಲ್ಲೂ ಅನಾವರಣ ಆಗುವುದೆಂಬ ಖಚಿತ ಗೋಡೆ ಬರೆಹವನ್ನು ಓದಿಕೊಳ್ಳುವುದು ನಿತೀಶ್ ಅವರಂತಹ ಪಳಗಿದ ಹಿರಿಯ ರಾಜಕಾರಣಿಗೆ ಕಷ್ಟವಿರಲಿಲ್ಲ.

ಮೋದಿಯವರನ್ನು ಮತ್ತು ಬಿಜೆಪಿಯನ್ನು ವಿರೋಧಿಸಿ ಪುನಃ ಬೆಂಬಲಿಸಿ ತಬ್ಬಿಕೊಂಡು ಪುನಃ ಅವರಿಂದ ದೂರ ಸಿಡಿದು ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ಸನ್ನು ಆಲಿಂಗಿಸಿಕೊಂಡಿರುವ ನಿತೀಶ್ ರಾಜಕಾರಣದ ವಿಶ್ವಸನೀಯತೆಗೆ ದೊಡ್ಡ ಪೆಟ್ಟು ಬಿದ್ದಿತ್ತು. ಆದರೆ ಬೀಸುವ ದೊಣ್ಣೆ ತಪ್ಪಿಸಿಕೊಳ್ಳುವುದು ರಾಜಕಾರಣದ ಬಹುದೊಡ್ಡ ಆಟ. ಈ ಆಟದಲ್ಲಿ ಸದ್ಯಕ್ಕೆ ಗೆದ್ದಿದ್ದಾರೆ ನಿತೀಶ್.

ಮೋದಿ ವಿರುದ್ಧ ತಲೆಯೆತ್ತಿರುವ ‘ಇಂಡಿಯಾ’ ಒಕ್ಕೂಟ ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ತಾನು ಗೆದ್ದರೆ ಜಾತಿ ಜನಗಣತಿಯನ್ನು ಎಲ್ಲ ರಾಜ್ಯಗಳಲ್ಲೂ ನಡೆಸುವುದಾಗಿ ಚುನಾವಣೆ ಪ್ರಣಾಳಿಕೆ ನೀಡಬೇಕೆಂಬ ಸಲಹೆಯನ್ನೂ ನಿತೀಶ್ ನೀಡಿರುವುದುಂಟು. ಈ ಸಲಹೆಗೆ ‘ಇಂಡಿಯಾ’ ಒಕ್ಕೂಟ ಬಹುತೇಕ ಸಮ್ಮತಿಯ ಮೊಹರು ಹಾಕಿರುವುದು ಮೋದಿ ನೇತೃತ್ವದ ಫ್ಯಾಸಿಸ್ಟ್ ಶಕ್ತಿಯನ್ನು ಸೋಲಿಸುವಲ್ಲಿ ಇಡಲಾಗುವ ಮಹತ್ವದ ಹೆಜ್ಜೆ ಎಂದೇ ತಿಳಿಯಬೇಕಿದೆ.

ಬಿಹಾರ ಸರ್ಕಾರ ನಡೆ ಅಭಿನಂದನೀಯ. ರಾಜ್ಯದಲ್ಲೂ ವರದಿ ಬಿಡುಗಡೆ ಮಾಡಿದರೆ ಒಳ್ಳೆಯದು ಎಂಬ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಹೇಳಿಕೆ ಸ್ವಾಗತಾರ್ಹ. ಬಿಜೆಪಿ ಸರ್ಕಾರವಿದ್ದಾಗ ನೇಮಕಗೊಂಡಿದ್ದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ಜಾತಿ ಗಣತಿ ವರದಿ ನೀಡಬೇಕಿದೆ. ಅವರು ನೀಡದೆ ಹೋದರೆ ಅದನ್ನು ಪಡೆಯುವ ದಾರಿಯನ್ನು ಸಿದ್ದರಾಮಯ್ಯ ಸರ್ಕಾರ ಕಂಡುಕೊಳ್ಳಲೇಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X