‘ಈ ದಿನ’ ಸಂಪಾದಕೀಯ | ಕೋರ್ಟು, ತಾಯಿ-ತಂದೆಯ ನಡುವೆ ಮಕ್ಕಳು ಕಾಲ್ಚೆಂಡಾಗದಿರಲಿ

Date:

Advertisements
ವಿಚ್ಛೇದಿತ ದಂಪತಿಗಳ ಮಕ್ಕಳ ಉಸ್ತುವಾರಿ ಹಕ್ಕು ಪ್ರಕರಣಗಳಲ್ಲಿ ಮಕ್ಕಳ ಮೇಲಾಗುವ ದುಷ್ಪರಿಣಾಮ ತಡೆಯುವುದು ಕೌಟುಂಬಿಕ ನ್ಯಾಯಾಲಯಗಳ ಕೆಲಸ ಮಾತ್ರವೇ ಅಲ್ಲ. ಕೇವಲ ಪೋಷಕರ ಹೊಣೆಯೂ ಅಲ್ಲ. ಕೋರ್ಟು ಮತ್ತು ಪೋಷಕರ ಜೊತೆಗೆ ರಾಜ್ಯ ಸರ್ಕಾರಗಳ ಪಾತ್ರವೂ ನಿರ್ಣಾಯಕ

ವಿಚ್ಛೇದನ ಪಡೆದ ದಂಪತಿಗಳ ಮಕ್ಕಳ ಪಾಲನೆ ವಿಷಯದಲ್ಲಿ ತೀರ್ಪು ನೀಡುವಾಗ ಇಂಡಿಯಾದ ಕೌಟುಂಬಿಕ ನ್ಯಾಯಾಲಯಗಳು ತಾಂತ್ರಿಕ ಅಂಶಗಳಿಗಷ್ಟೇ ಹೆಚ್ಚು ಮನ್ನಣೆ ಕೊಡುವ ಎಡವಟ್ಟು ಮಾಡುತ್ತಿವೆ ಎಂಬುದು ಅತ್ಯಂತ ಕಳವಳಕಾರಿ ಸಂಗತಿ. ಸುಪ್ರೀಂ ಕೋರ್ಟು ಮತ್ತು ಹೈಕೋರ್ಟುಗಳು ಆಗಾಗ ನೀಡುವ ಎಚ್ಚರಿಕೆಗಳ ಹೊರತಾಗಿಯೂ ಈ ಪ್ರವೃತ್ತಿ ಮುಂದುವರಿದಿದೆ. ಈ ಬಾರಿ ಕೌಟುಂಬಿಕ ನ್ಯಾಯಾಲಯವೊಂದಕ್ಕೆ ಬುದ್ಧಿ ಹೇಳಿರುವುದು ಬಾಂಬೆ ಹೈಕೋರ್ಟು.

2017ರಲ್ಲಿ ಇತ್ಯರ್ಥಗೊಂಡ ವಿಚ್ಛೇದನ ಪ್ರಕರಣವೊಂದರಲ್ಲಿ ಇಬ್ಬರು ಮಕ್ಕಳ ಉಸ್ತುವಾರಿಯನ್ನು ತಾಯಿಗೆ ವಹಿಸಲಾಗಿತ್ತು. ಇತ್ತೀಚೆಗೆ ಆಕೆ ಮರುವಿವಾಹವಾದ ಕಾರಣ, ಮಕ್ಕಳ ಪಾಲನೆಯ ಉಸ್ತುವಾರಿಯನ್ನು ತನಗೆ ವಹಿಸಬೇಕೆಂದು ಕೋರಿ ತಂದೆ ಕೌಟುಂಬಿಕ ನ್ಯಾಯಾಲಯದ ಮೊರೆಹೋಗಿದ್ದರು. ಆದರೆ, ಮಕ್ಕಳ ಕ್ಷೇಮವನ್ನು ಆದ್ಯತೆಯಾಗಿ ಪರಿಗಣಿಸದ ಕೋರ್ಟು, ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ಅರ್ಜಿ ತಿರಸ್ಕರಿಸಿತ್ತು. ನಂತರದಲ್ಲಿ ಪ್ರಕರಣ ಬಾಂಬೆ ಹೈಕೋರ್ಟ್ ತಲುಪಿತ್ತು.

ಈ ಸಂಪಾದಕೀಯ ಓದಿದ್ದೀರಾ?: ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸು: ಮತದಾರರು ಮಾಡಬೇಕಾಗಿರುವುದೇನು?

“ವಿಚ್ಛೇದನ ನಂತರ ಮಕ್ಕಳು ಯಾರ ಜೊತೆ ಇರಬೇಕು ಮತ್ತು ಎಷ್ಟು ಕಾಲ ಇರಬೇಕು ಎಂದು ಹೇಳುವ ತೀರ್ಪುಗಳು ಅತ್ಯಂತ ಕಠಿಣ ನಿಲುವುಗಳಿಂದ ಕೂಡಿರುವ ಅವಶ್ಯಕತೆ ಇಲ್ಲ. ಮಗುವಿನ ಜೀವನದ ನಾನಾ ಘಟ್ಟಗಳಿಗೆ ಅನುಗುಣವಾಗಿ ತೀರ್ಪಿನ ಅಂಶಗಳನ್ನು ಬದಲಾಯಿಸಲು ಸಾಧ್ಯವಾಗಬೇಕು,” ಎಂಬುದು ಬಾಂಬೆ ಹೈಕೋರ್ಟ್ ಕಿವಿಮಾತು. ಸದರಿ ಪ್ರಕರಣದಲ್ಲಿ ಮತ್ತೊಮ್ಮೆ ವಿಚಾರಣೆ ನಡೆಸುವಂತೆ ನ್ಯಾಯಮೂರ್ತಿ ನೀಲಾ ಗೋಖಲೆ ಅವರ ಏಕಸದಸ್ಯ ಪೀಠ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

ವಿಚ್ಛೇದನ ಪ್ರಕರಣಗಳು ಕೇವಲ ವಿಚ್ಛೇದನ ಪ್ರಕರಣಗಳಾಗಿ ಉಳಿಯದೆ, ಮಕ್ಕಳ ಪಾಲನೆಯ ಉಸ್ತುವಾರಿಗಾಗಿ ಪೋಷಕರಿಬ್ಬರೂ ಪೈಪೋಟಿ ನಡೆಸುವ ಪ್ರಕರಣಗಳಾಗಿ ಬದಲಾಗಿರುವುದು ಹೊಸ ವಿದ್ಯಮಾನವೇನಲ್ಲ. ಆದರೆ, ತಾಯಿ-ತಂದೆಯರಿಬ್ಬರೂ ಪ್ರತಿಷ್ಠೆಗೆ ಕಟ್ಟುಬಿದ್ದು, ತಮ್ಮ ನಡುವಿನ ವೈಯಕ್ತಿಕ ಸೇಡು ಮತ್ತು ಸಿಟ್ಟನ್ನು ಇಂಥ ಪ್ರಕರಣಗಳಲ್ಲಿ ಹೂಡಿಕೆ ಮಾಡಿ ವಿಜಯ ಸಾಧಿಸಲು ಹವಣಿಸುತ್ತಿರುವುದು ಮಾತ್ರ ದುರಂತ. ಇದರಿಂದ ತಮ್ಮದೇ ಮಗುವಿನ ಮನಸ್ಸಿನ ಮೇಲೆ ಕೆಟ್ಟ ಪರಿಣಾಮಗಳಾಗುತ್ತವೆ ಎಂಬುದು ಕಾದಾಟದಲ್ಲಿ ಕಳೆದುಹೋದವರಿಗೆ ನೆನಪಾಗುವುದು ಅಸಾಧ್ಯ. ಇಂತಹ ಬಹುತೇಕ ಪ್ರಕರಣಗಳಲ್ಲಿ, ತಂದೆಯಂದಿರು ತಮ್ಮ ಸಂಗಾತಿಯ ಮೇಲಿರುವ ದ್ವೇಷದ ಜೊತೆಗೆ, ತಾನು ‘ಗಂಡು’ ಎಂಬ ಅಹಮಿಕೆಯನ್ನೂ ಕೂಡಿಸಿಕೊಂಡು ಕಾಳಗಕ್ಕೆ ನಿಲ್ಲುವುದು ಅಕ್ಷಮ್ಯ.

Advertisements
Bose Military School
ಈ ಸಂಪಾದಕೀಯ ಓದಿದ್ದೀರಾ?: ದ್ವೇಷ ಭಾಷಣ; ತುರ್ತು ಕಡಿವಾಣ ಅತ್ಯವಶ್ಯ

2022ರ ಜನವರಿಯಿಂದ ಡಿಸೆಂಬರ್‌ವರೆಗೂ, ವಿಚ್ಛೇದಿತ ದಂಪತಿಗಳ ಮಕ್ಕಳ ಪಾಲನೆಗೆ ಸಂಬಂಧಿಸಿದಂತೆ ಇಂಡಿಯಾದ ಕೌಟುಂಬಿಕ ನ್ಯಾಯಾಲಯಗಳಲ್ಲಿ ಒಟ್ಟು 4,776 ಪ್ರಕರಣಗಳು ಇತ್ಯರ್ಥಗೊಂಡಿವೆ. ಬಾಕಿ ಪ್ರಕರಣಗಳ ಸಂಖ್ಯೆ ಹಲವು ಪಟ್ಟು ಹೆಚ್ಚಿದೆ. ವಿಚ್ಛೇದನ ಪ್ರಕರಣಗಳು ಹೆಚ್ಚಿದಂತೆಲ್ಲ ಮಕ್ಕಳ ಪಾಲನೆಯ ಉಸ್ತುವಾರಿಗೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆಯೂ ಗಣನೀಯವಾಗಿ ಏರುತ್ತಲೇ ಇದೆ. ಇಂತಹ ವಿಷಮ ಸನ್ನಿವೇಶದಲ್ಲಿ ಕೋರ್ಟುಗಳು ಕೇವಲ ತಾಂತ್ರಿಕ ಸಂಗತಿಗಳಿಗಷ್ಟೇ ಒತ್ತು ಕೊಟ್ಟರೆ, ಮೊದಲೇ ಕುಸಿದುಬಿದ್ದ ಮಕ್ಕಳ ಮನಸ್ಸು ಇನ್ನಷ್ಟು ಹದಗೆಡುವುದು ನಿಶ್ಚಿತ.

ಇಂತಹ ಪ್ರಕರಣಗಳಲ್ಲಿ ಮಕ್ಕಳ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯುವುದು ಕೌಟುಂಬಿಕ ನ್ಯಾಯಾಲಯಗಳು ಮತ್ತು ಪೋಷಕರ ಜೊತೆಗೆ ರಾಜ್ಯ ಸರ್ಕಾರಗಳ ಜವಾಬ್ದಾರಿಯೂ ಹೌದು. ಕಟ್ಟಡಗಳ ಸಮಸ್ಯೆಯ ಜೊತೆಗೆ, ನ್ಯಾಯಾಧೀಶರ ಕೊರತೆಯಂಥ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿರುವ ಕೌಟುಂಬಿಕ ನ್ಯಾಯಾಲಯಗಳನ್ನು ಸುಸ್ಥಿತಿಗೆ ತರಲು ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಅದೇ ಹೊತ್ತಿಗೆ, ಮಗುವಿನ ಪಾಲನೆಯ ಉಸ್ತುವಾರಿ ವಹಿಸುವ ಸಂದರ್ಭದಲ್ಲಿ ಬೇರಾವುದೇ ಸಂಗತಿಗಳಿಗಿಂತ ಮಗುವಿನ ಕ್ಷೇಮಾಭಿವೃದ್ಧಿ ಮಾತ್ರವೇ ಕೌಟುಂಬಿಕ ನ್ಯಾಯಾಲಯಗಳ ಆದ್ಯತೆ ಆಗಬೇಕಿದೆ. ಇನ್ನು, ವಿಚ್ಛೇದನ ಪಡೆದ ನಂತರವೂ ತಾವು ಮನುಷ್ಯರು, ತಮ್ಮಲ್ಲಿ ಮಾನವೀಯತೆ ಇದೆ ಎಂಬುದನ್ನು ತಾಯ್ತಂದೆಯರು ಸಾಬೀತು ಮಾಡಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements
Advertisements
Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | 1180 ದಿನಗಳ ಚನ್ನರಾಯಪಟ್ಟಣ ಚಳವಳಿಗೆ ಸರ್ಕಾರ ಸ್ಪಂದಿಸಲಿ

ಇದೇ ಜೂನ್ 25ರಂದು ನಡೆಯುತ್ತಿರುವ 'ದೇವನಹಳ್ಳಿ ಚಲೋ' ಹೋರಾಟಕ್ಕೆ ಸರ್ಕಾರ ಸ್ಪಂದಿಸಲಿ....

ಈ ದಿನ ಸಂಪಾದಕೀಯ | ಬಿ.ಆರ್ ಪಾಟೀಲ್‌ ಆರೋಪಗಳೂ, ಸರ್ಕಾರದ ನೈತಿಕತೆಯೂ

ಬಿ.ಆರ್ ಪಾಟೀಲ್ ಅವರ ಆರೋಪಗಳಿಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ತನಿಖೆಗೆ ಆದೇಶಿಸಬೇಕು....

ಈ ದಿನ ಸಂಪಾದಕೀಯ | ಬಿಜೆಪಿಗರೇ ಹೇಳಿ- ಅಘೋಷಿತ ತುರ್ತುಪರಿಸ್ಥಿತಿ ಮುಗಿಯುವುದು ಯಾವಾಗ?

ಇಂದಿರಾ ಗಾಂಧಿಯವರು ಐವತ್ತು ವರ್ಷಗಳ ಹಿಂದೆ ಹೇರಿದ್ದ ತುರ್ತುಪರಿಸ್ಥಿತಿಯ ಬಗ್ಗೆ ಈಗ...

ಈ ದಿನ ಸಂಪಾದಕೀಯ | ಮೌಢ್ಯ ಬಿತ್ತುವ ಕಾವೇರಿ ಆರತಿ ಯಾವ ಪುರುಷಾರ್ಥಕ್ಕೆ?

ಸಿದ್ದರಾಮಯ್ಯನವರ ಸರ್ಕಾರ ಕಾವೇರಿ ಆರತಿಯಂತಹ ಮೌಢ್ಯ ಬಿತ್ತುವ ಕಾರ್ಯಕ್ರಮಗಳಿಗೆ ತಡೆಯೊಡ್ಡಿ, ನಾಡಿನ...

Download Eedina App Android / iOS

X