ಈ ದಿನ ಸಂಪಾದಕೀಯ | ಇಸ್ರೇಲಿ ರಾಜದೂತೆಯ ಭೇಟಿಯಾಗಿ ಸಮ್ಮಾನಿಸಿದ ಡಿಕೆಶಿ ವರ್ತನೆ ಅನುಚಿತ ಅಕ್ಷಮ್ಯ

Date:

Advertisements

ಸಾಧಾರಣ ಸಂದರ್ಭ ಸನ್ನಿವೇಶಗಳಲ್ಲಿ ಶಿವಕುಮಾರ್ ಅವರ ಈ ಭೇಟಿ ಮತ್ತು ರಾಜದೂತೆಯ ಸಮ್ಮಾನ ಸ್ವಾಭಾವಿಕ ಎನಿಸುತ್ತಿತ್ತು. ಮನುಷ್ಯರು ಮನುಷ್ಯರ ಮೇಲೆ ಎಂತೆಂತಹ ದೌರ್ಜನ್ಯಗಳನ್ನು ಕ್ರೌರ್ಯಗಳನ್ನು ಎಸಗಬಹುದೋ ಅವೆಲ್ಲವನ್ನೂ ಪ್ಯಾಲೆಸ್ತೀನೀಯರ ಮೇಲೆ ಅದರಲ್ಲೂ ವಿಶೇಷವಾಗಿ ಗಾಝಾ ಪಟ್ಟಿಯ ನಿವಾಸಿಗಳ ಮೇಲೆ ನಡೆಸಿದೆ. ಇಂತಹ ಸನ್ನಿವೇಶದ ಹಿನ್ನೆಲೆಯಲ್ಲಿ ಇಸ್ರೇಲಿ ಆಡಳಿತವನ್ನು ಪ್ರತಿನಿಧಿಸುವವರನ್ನು ಬರಮಾಡಿಕೊಂಡು ಸಮ್ಮಾನಿಸಿ ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಎಷ್ಟು ಸೂಕ್ತ?

ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಇಸ್ರೇಲಿ ರಾಜದೂತೆ ಇನ್ಬಲ್ ಸ್ಟೋನ್ ಭೇಟಿ ಮಾಡಿದ್ದಾರೆ. ವಿಧಾನಸೌಧದ ಶಿವಕುಮಾರ್ ಕಚೇರಿಯಲ್ಲಿ ನಡೆದ ಈ ಭೇಟಿಯಿದು. ‘ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್’ ನ ಬೆಂಗಳೂರು ಆವೃತ್ತಿಯ ವಿನಾ ರಾಜ್ಯದ ಬಹುತೇಕ ದೊಡ್ಡ ದಿನಪತ್ರಿಕೆಗಳು ಈ ಭೇಟಿಯ ಸುದ್ದಿಯನ್ನು ಅವಗಣಿಸಿವೆ  ಮುಂದಿನ ತಿಂಗಳ ಐದರಂದು ನಡೆಯಲಿರುವ ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಗೆ ಶಿವಕುಮಾರ್ ಅವರನ್ನು ಆಹ್ವಾನಿಸಿದ್ದಾರೆ ಸ್ಟೋನ್. ಇಸ್ರೇಲಿನ ದಕ್ಷಿಣ ಭಾರತೀಯ ದೂತಾವಾಸ ಬೆಂಗಳೂರಿನಲ್ಲಿದೆ. ಸ್ಟೋನ್ ಈ ದೂತಾವಾಸದ ಉಪ ರಾಜದೂತರು. ತಮ್ಮನ್ನು ಭೇಟಿ ಮಾಡಲು ಬಂದ ಸ್ಟೋನ್ ಅವರಿಗೆ ಮೈಸೂರು ಪೇಟ, ಶಾಲು ಹಾಗೂ ಶ್ರೀಗಂಧದ ಹಾರವನ್ನು ತೊಡಿಸಿ ಸಮ್ಮಾನಿಸಿದ್ದಾರೆ ಕುಮಾರ್. ದೇಶ-ದೇಶದ ನಡುವೆ ಸರ್ಕಾರಿ ಮಟ್ಟದಲ್ಲಿ ನಡೆಯುವ ಭೇಟಿಗಳಲ್ಲಿ ಅನುಸರಿಸಬೇಕಿರುವ ಸೌಜನ್ಯ ಶಿಷ್ಟಾಚಾರಗಳಿರುತ್ತವೆ. ಶಿವಕುಮಾರ್ ಈ ಶಿಷ್ಟಾಚಾರ ಸೌಜನ್ಯವನ್ನು ಪಾಲಿಸಿದ್ದಾರೆ ಎಂದು ಹೇಳಬಹುದು. ಉಪಮುಖ್ಯಮಂತ್ರಿಯವರು ಅಷ್ಟಕ್ಕೇ ನಿಂತಿಲ್ಲ. ಕರ್ನಾಟಕ ಮತ್ತು ಇಸ್ರೇಲ್ ನಡುವಿನ ಸಂಬಂಧಗಳು ಗಟ್ಟಿಯಾಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ತಂತ್ರಜ್ಞಾನ ಮತ್ತು ಸುಸ್ಥಿರ ಅಭಿವೃದ್ಧಿ ಕ್ಷೇತ್ರದಲ್ಲಿ ಇಸ್ರೇಲಿನೊಂದಿಗಿನ ಕರ್ನಾಟಕದ ಸಂಬಂಧ ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಗಟ್ಟಿಯಾಗಲೆಂದು ಆಶಿಸಿದ್ದಾರೆ. ಈ ಭೇಟಿಯ ಕುರಿತ ಇದಿಷ್ಟು ವಿವರಗಳನ್ನು ಫೋಟೋ ಸಹಿತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾಧಾರಣ ಸಂದರ್ಭ ಸನ್ನಿವೇಶಗಳಲ್ಲಿ ಶಿವಕುಮಾರ್ ಅವರ ಈ ಭೇಟಿ ಮತ್ತು ರಾಜದೂತೆಯ ಸಮ್ಮಾನ ಸ್ವಾಭಾವಿಕ ಎನಿಸುತ್ತಿತ್ತು. ಮನುಷ್ಯರು ಮನುಷ್ಯರ ಮೇಲೆ ಎಂತೆಂತಹ ದೌರ್ಜನ್ಯಗಳನ್ನು ಕ್ರೌರ್ಯಗಳನ್ನು ಎಸಗಬಹುದೋ ಅವೆಲ್ಲವನ್ನೂ ಪ್ಯಾಲೆಸ್ತೀನೀಯರ ಮೇಲೆ ಅದರಲ್ಲೂ ವಿಶೇಷವಾಗಿ ಗಾಝಾ ಪಟ್ಟಿಯ ನಿವಾಸಿಗಳ ಮೇಲೆ ನಡೆಸಿದೆ. ನಗರಗಳು ಪಾಳು ಕೊಂಪೆಗಳಾಗಿವೆ. ಈ ಕೊಂಪೆಗಳ ಅವಶೇಷಗಳನ್ನೂ ಉಳಿಸಕೂಡದೆಂದು ಹಟ ತೊಟ್ಟಿರುವ ಇಸ್ರೇಲ್ ಪಾಳು ಕಟ್ಟಡಗಳ ಮೇಲೂ ಬಾಂಬುಗಳನ್ನು ಸುರಿದು ಧೂಳೆಬ್ಬಿಸಿದೆ.

Advertisements

ಇಂತಹ ಸನ್ನಿವೇಶದ ಹಿನ್ನೆಲೆಯಲ್ಲಿ ಇಸ್ರೇಲಿ ಆಡಳಿತವನ್ನು ಪ್ರತಿನಿಧಿಸುವವರನ್ನು ಬರಮಾಡಿಕೊಂಡು ಸಮ್ಮಾನಿಸಿ ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಎಷ್ಟು ಸೂಕ್ತ? ಮುಂದುವರೆದು ಇಸ್ರೇಲ್ ಮತ್ತು ಕರ್ನಾಟಕದ ಸಂಬಂಧಗಳು ಸುಧಾರಿಸಬೇಕೆಂದು ಆಶಿಸುವುದನ್ನು ಏನೆಂದು ಬಣ್ಣಿಸಬೇಕು?

ಭಾರತ ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನಿ ರಾಯಭಾರಿಯನ್ನು ಬರಮಾಡಿಕೊಂಡು ಆದರಿಸಿ ಸತ್ಕರಿಸಿ ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸುವುದು ಅದೆಷ್ಟು ಅನುಚಿತವೋ, ಸೂಕ್ಷ್ಮಗೇಡಿ ವರ್ತನೆಯೋ ಅಷ್ಟೇ ಅನುಚಿತ ಮತ್ತು ಸೂಕ್ಷ್ಮಗೇಡಿತನವಿದು. ತಮ್ಮಿಂದ ಆಗಿರುವ ಈ ಅಚಾತುರ್ಯವನ್ನು ಶಿವಕುಮಾರ್ ಅವರು ಒಪ್ಪಿಕೊಂಡು ಪಶ್ಚಾತ್ತಾಪ ವ್ಯಕ್ತಪಡಿಸುವುದು ಘನತೆಯ ವರ್ತನೆ.

ಇತ್ತೀಚಿನ ತಿಂಗಳುಗಳಲ್ಲಿ ಅಲ್ಪಕಾಲ ‘ಯುದ್ಧ ವಿರಾಮ’ದ ಬಳಿಕ ಗಾಝಾದ ಮೇಲೆ ಇಸ್ರೇಲಿನ ಅಮಾನುಷ ಮತ್ತು ನಿರ್ದಯಿ ಪ್ರಹಾರ ಮುಂದುವರೆದಿದೆ. ನಿರಾಶ್ರಿತರ ನಾಗರಿಕರಿಗೆ ಆಹಾರ ವಿತರಿಸುವ ಕೇಂದ್ರಗಳು ಮತ್ತು ಸಾಮುದಾಯಿಕ ಅಡುಗೆ ಮನೆಗಳ ಮೇಲೆ ಬಾಂಬ್ ಹಾಕಿ ನಾಶಪಡಿಸಿದೆ. ಈ ಅನಾಗರಿಕತೆಯನ್ನು ಯುದ್ಧವೆಂದು ಕರೆಯುವುದು ಅನ್ಯಾಯ. ನಿರಂತರ ಬರ್ಬರ ದಾಳಿ ಎನ್ನುವುದು ಸತ್ಯಕ್ಕೆ ಹತ್ತಿರ ಎನಿಸೀತು.

ಪ್ಯಾಲೆಸ್ತೀನೀ ಸ್ವಾತಂತ್ರ್ಯಕ್ಕೆ ಹೋರಾಟ ನಡೆಸಿರುವ ಹಮಸ್ ಸಂಘಟನೆಯ ಎಲ್ಲ ಕೃತ್ಯಗಳಿಗೂ ಪ್ಯಾಲೆಸ್ತೀನೀ ಪ್ರಜೆಗಳನ್ನು ಹೊಣೆಯಾಗಿಸುವ, ಈ ಜನಾಂಗದ ವಿನಾಶದಲ್ಲಿ ತೊಡಗಿರುವ ಇಸ್ರೇಲಿನ ತರ್ಕ ತರವಲ್ಲ. ಒಂದು ರೂಕ್ಷ ಉದಾಹರಣೆಯನ್ನು ನೀಡುವುದಾದರೆ, ನಾನು ಕುಡಿಯುತ್ತಿರುವ ನೀರನ್ನು ಎಂಜಲು ಮಾಡುತ್ತಿದ್ದೀ ಎಂದು ತೋಳವು ಕುರಿಮರಿಯನ್ನು ಸೀಳಿ ತಿಂದ ಧೂರ್ತತನವಿದು. ತೊರೆಯ ಕೆಳಭಾಗದಲ್ಲಿ ನೀರು ಕುಡಿಯುತ್ತಿರುವ ಕುರಿಮರಿಯು, ತೊರೆಯ ಮೇಲ್ಭಾಗದ ನೀರನ್ನು ಎಂಜಲು ಮಾಡುವುದಾದರೂ ಹೇಗೆ?

ಚಿನ್ನಕ್ಕಿಂತ ಅನ್ನ ಅತೀವ ದುಬಾರಿ ಎಂಬ ಶಾಶ್ವತಸತ್ಯವು ಪ್ಯಾಲೆಸ್ತೀನ್ ಗಾಝಾದಲ್ಲಿ ರಣರುದ್ರವಾಗಿ ಕುಣಿದಿದೆ. ಮಕ್ಕಳು ಕೂಳಿಲ್ಲದೆ ಸಾಯುವುದು ಅತಿ ದೊಡ್ಡ ಮಾನವ ದುರಂತ.ಈ ದೇಶದಲ್ಲಿ ಸಾವು ಸಲೀಸು. ಬದುಕು ಬಲು ಕಠಿಣ.

ಈ ಮಹಾ ಮಾನವದುರಂತ ಮತ್ತು ಎಣೆಯಿಲ್ಲದ ಕ್ರೌರ್ಯಗಳು ಇತಿಹಾಸದಲ್ಲಿ ದಾಖಲಾಗುವುದನ್ನು ಯಾರೂ ತಪ್ಪಿಸಲಾರರು. ಹಿಟ್ಲರನ ಜರ್ಮನಿಯಲ್ಲಿ ಇದೇ ಯಹೂದಿಗಳು ಮಾರಣಹೋಮಗಳು, ಚಿತ್ರಹಿಂಸೆಗಳಿಗೆ ಅಂದಿನ ಜರ್ಮನರು ಕುರುಡಾಗಿದ್ದರು ಮಾತ್ರವಲ್ಲ, ಒಂದು ವರ್ಗ ಹಿಟ್ಲರನ ಕೃತ್ಯಗಳಿಗೆ ಬೆಂಬಲವಾಗಿ ನಿಂತಿತ್ತು. ಈ ವರ್ಗವನ್ನು ಮಟ್ಟ ಹಾಕುವುದು ಜಾತ್ಯತೀತ ಜನತಾಂತ್ರಿಕ ಜರ್ಮನಿಗೆ ಇಂದಿಗೂ ಸವಾಲಾಗಿ ಪರಿಣಮಿಸಿದೆ. ಹಿಟ್ಲರನ ಕ್ರೌರ್ಯಕ್ಕೆ ತುತ್ತಾದ ಯಹೂದಿಗಳೇ ಇಸ್ರೇಲಿನಲ್ಲಿ ಮತ್ತೊಂದು ಜನಾಂಗವನ್ನು ಅಮಾನುಷವಾಗಿ ಬೇಟೆಯಾಡುತ್ತಿರುವುದು ಮಾನವ ನಾಗರಿಕತೆಯ ಬಹುದೊಡ್ಡ ವಿಡಂಬನೆ. ಅಂತೆಯೇ ಪ್ಯಾಲೆಸ್ತೀನೀಯರ ಮೇಲೆ ಇಸ್ರೇಲ್ ನಡೆಸಿರುವ ಎಣೆಯಿಲ್ಲದ ದಮನದ  ಈ ಚರಿತ್ರೆಯನ್ನು ಮುಂದಿನ ಪೀಳಿಗೆಗಳು ಓದಲಿವೆ. ಆಗ ಈ ಕ್ರೌರ್ಯದ ಕುರಿತು ಕಲ್ಲಾಗಿರುವ ಜನಕೋಟಿಯ ಮನಸುಗಳನ್ನು, ನೀರಾಡದ ಕಣ್ಣುಗಳನ್ನು ಕ್ಷಮಿಸುವುದಿಲ್ಲ. ಈ ಮಾರಣ ಹೋಮದಲ್ಲಿ ಇಸ್ರೇಲಿಗೆ ಎಲ್ಲ ಬಗೆಯಲ್ಲೂ ಬೆಂಬಲವಾಗಿ ನಿಂತಿರುವ ಅಮೆರಿಕನ್ ದುಷ್ಟತನವನ್ನು, ಢೋಂಗಿ ನಿಲುವನ್ನು ಕೂಡ ಇತಿಹಾಸ ಮನ್ನಿಸುವುದಿಲ್ಲ.

ಪ್ಯಾಲೆಸ್ತೀನಿನಲ್ಲಿ ಭಾರೀ ಹಿಂಸೆಯನ್ನು ನಿರಂತರವಾಗಿ ನಡೆಸಿರುವ ಆರೋಪವನ್ನು ಅಂತಾರಾಷ್ಟ್ರೀಯ ನಿರೀಕ್ಷಕರು ಮತ್ತು  ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಇಸ್ರೇಲಿನ ಮೇಲೆ ಹೊರಿಸಿವೆ.

54 ಸಾವಿರ ಪ್ಯಾಲೆಸ್ತೀನೀಯರನ್ನು ಇಸ್ರೇಲ್ ಕೊಂದಿದೆ. ಲಕ್ಷಾಂತರ ಮಂದಿ ಗಾಯಗೊಂಡಿದ್ದಾರೆ. ಕೈಕಾಲುಗಳನ್ನು ಕಳೆದುಕೊಂಡು ಹೆಳವರಾಗಿದ್ದಾರೆ. ಪ್ಯಾಲೆಸ್ತೀನಿಗೆ ಆಹಾರ-ಔಷಧಿಗಳ ಪೂರೈಕೆಯನ್ನು ಕೂಡ ಇಸ್ರೇಲ್ ಕಡಿದು ಹಾಕಿದೆ. ಹತ್ತು ಮಂದಿಗಷ್ಟೇ ಸಾಲುವಷ್ಟು ಅನ್ನವನ್ನು ಸಾವಿರಾರು ಮಂದಿಗೆ ಸಾಕೆಂದು ಉಪವಾಸ ಕೆಡವಿದೆ. ನಿರಂತರ ಹಸಿವಿನಿಂದ ಕಂಗಾಲಾಗಿರುವ ಪ್ಯಾಲೆಸ್ತೀನೀ ಪ್ರಜೆಗಳು ನಡೆದಾಡುವ ಶವಗಳಂತಾಗಿದ್ದಾರೆ. ಸಾವಿರಾರು ಹಸುಳೆಗಳು ಮತ್ತು ಮಕ್ಕಳು ತಿನ್ನಲು ಅನ್ನವಿಲ್ಲದೆ ಸತ್ತಿವೆ. ಇಸ್ರೇಲ್ ತಕ್ಷಣವೇ ದಾಳಿಯನ್ನು ನಿಲ್ಲಿಸದಿದ್ದರೆ ಪರಿಸ್ಥಿತಿ ಇನ್ನಷ್ಟು ವಿಷಮಗೊಳ್ಳುವುದೆಂದು ವಿಶ್ವಸಂಸ್ಥೆ ಎಚ್ಚರಿಸಿದೆ.

ಭಾರತವು ಪಕ್ಷಭೇದವಿಲ್ಲದೆ ಸ್ವತಂತ್ರ ಪ್ಯಾಲೆಸ್ತೀನ್ ನ್ನು, ಅದಕ್ಕಾಗಿ ಈ ಜನರು ನಡೆಸಿರುವ ಹೋರಾಟವನ್ನು ಬೇಷರತ್ತಾಗಿ ಬೆಂಬಲಿಸುತ್ತ ಬಂದಿದೆ. ಬಿಜೆಪಿಯಿಂದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಕೂಡ ಈ ಮಾತಿಗೆ ಹೊರತಲ್ಲ. 2014ರಿಂದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಇಸ್ರೇಲಿನ ಆಳ ಗೆಳೆತನ ಬೆಳೆಸಿದ್ದಾರೆ. ಅದರ ಹಿಂದಿರುವುದು ತೀವ್ರ ಮುಸ್ಲಿಮ್ ದ್ವೇಷ ಎಂಬುದು ಹಗಲಿನಷ್ಟೇ ನಿಚ್ಚಳ.

ಆದರೆ ಕಾಂಗ್ರೆಸ್ ಪಕ್ಷ ತನ್ನ ಲಾಗಾಯಿತಿನ ನಿಲುವನ್ನು ಬದಲಿಸಿಲ್ಲ. ಭಯೋತ್ಪಾದನೆಗೆ ಸಮನಾದ ಇಸ್ರೇಲಿನ ದಾಳಿಯನ್ನು ಖಂಡಿಸುತ್ತಲೇ ಬಂದಿದೆ.

ಅಮಾಯಕರ ಈ ನರಮೇಧವನ್ನು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಡಿ.ಕೆ.ಶಿವಕುಮಾರ್ ಅವರು ಖಂಡಿಸಬೇಕಿತ್ತು. ತಮ್ಮನ್ನು ಭೇಟಿಯಾದ ಇಸ್ರೇಲಿ ರಾಜದೂತೆಗೆ ಈ ಮಾತನ್ನು ತಿಳಿಸಬಹುದಿತ್ತು. ಅವರು ಹಾಗೆ ಮಾಡದಿರುವುದು ಮಾನವೀಯತೆಗೆ ಬಗೆದ ದ್ರೋಹ.

ಶಿವಕುಮಾರ್ ಅವರಿಗೆ ತಮ್ಮ ಈ ವರ್ತನೆಯು ಯಾವ ಸಂದೇಶವನ್ನು ರವಾನಿಸಬಹುದು ಎಂಬ ಅರಿವು ಇದೆಯೋ ಇಲ್ಲವೋ ತಿಳಿಯದು. ಆದರೆ ಇಸ್ರೇಲಿನ ನರಮೇಧಕ್ಕೆ ತಮ್ಮ ಪರೋಕ್ಷ ಬೆಂಬಲವಿದೆ ಎಂಬ ಸಂದೇಶ ಈ ಭೇಟಿ ಹೊರಹೊಮ್ಮಿಸುತ್ತದೆ.

ವಿದೇಶಾಂಗ ನೀತಿಗೆ ಸಂಬಂಧಿಸಿದ ಸಂಗತಿಗಳ ಕುರಿತು ರಾಜ್ಯ ಮಟ್ಟದ ನಾಯಕರು ಎಚ್ಚರಿಕೆಯಿಂದ ವರ್ತಿಸಬೇಕು.  ಕಾಂಗ್ರೆಸ್ ಪಕ್ಷದ ವರಿಷ್ಠರು ಈ ಕುರಿತು ತಿಳಿವಳಿಕೆ ಹೇಳಬೇಕು. ಇಂತಹ ಬೇಜವಾಬ್ದಾರಿ ವರ್ತನೆ ಸಲ್ಲದೆಂದು ಕಿವಿ ಹಿಂಡಬೇಕು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X