ಈ ದಿನ ಸಂಪಾದಕೀಯ | ʼಲಾಪತಾ ಲೇಡೀಸ್‌ʼ ಮತ್ತು ಕಾಣೆಯಾಗಿರುವ ಲಿಂಗಸೂಕ್ಷ್ಮತೆ

Date:

Advertisements

ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯ ತೀರ್ಮಾನ ಮಾಡುವವರಿಗೆ ಲಿಂಗ ಸೂಕ್ಷ್ಮತೆಯ ಅರಿವಿರುವುದು ಬಹಳ ಮುಖ್ಯ. ಇತ್ತೀಚೆಗಿನ ಕೆಲವು ನ್ಯಾಯಾಲಯಗಳ ತೀರ್ಪುಗಳು, ಅದರಲ್ಲಿನ ಉಲ್ಲೇಖಗಳು, ನ್ಯಾಯಾಧೀಶರ ಹೇಳಿಕೆಗಳು ಲಿಂಗಸೂಕ್ಷ್ಮತೆಯ ಪ್ರಶ್ನೆಯನ್ನು ಮುನ್ನೆಲೆಗೆ ತಂದಿವೆ.

ಅಪರೂಪದಲ್ಲಿ ಅಪರೂಪ ಎಂಬಂತೆ ಸುಪ್ರೀಂ ಕೋರ್ಟ್‌ನ ಸಭಾಂಗಣದಲ್ಲಿ ಶುಕ್ರವಾರ (ಆ.9) ʼಲಾಪತಾ ಲೇಡೀಸ್‌ʼ ಸಿನಿಮಾ ಪ್ರದರ್ಶನ ಮತ್ತು ನಂತರ ಹದಿನೈದು ನಿಮಿಷ ಚಿತ್ರದ ನಿರ್ಮಾಪಕ ಆಮಿರ್ ಖಾನ್‌ ಮತ್ತು ನಿರ್ದೇಶಕಿ ಕಿರಣ್‌ ರಾವ್‌ ಜೊತೆಗೆ ಸಂವಾದ ಏರ್ಪಡಿಸಲಾಗಿತ್ತು. ಖುದ್ದು ಸುಪ್ರೀಂ ಕೋರ್ಟ್ ಈ ಚಿತ್ರ ಪ್ರದರ್ಶನವನ್ನು ತನಗಾಗಿ ಏರ್ಪಾಟು ಮಾಡಿಕೊಂಡಿತ್ತು. ಸುಪ್ರೀಂ ಕೋರ್ಟ್‌ ಸ್ಥಾಪನೆಯಾದ 75ನೇ ವರ್ಷಾಚರಣೆಯ ಚಟುವಟಿಕೆಯ ಭಾಗವಾಗಿ ಈ ಮಹತ್ವದ ಸಿನಿಮಾವನ್ನು ಸುಪ್ರೀಂ ಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳು, ಮತ್ತಿತರೆ ಸಿಬ್ಬಂದಿಗೆ ತೋರಿಸಿತು. ಲಿಂಗಸೂಕ್ಷ್ಮತೆಯ ಕಾಳಜಿ ತೋರುವ ನಿಟ್ಟಿನಲ್ಲಿ ಶ್ಲಾಘನೀಯ ನಡೆಯಿದು.

ಮುಖ್ಯವಾಗಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ವಿಚಾರಗಳು ಕೋರ್ಟ್‌ ಮೆಟ್ಟಿಲೇರಿದಾಗ ನ್ಯಾಯದಾನದ ಸ್ಥಾನದಲ್ಲಿರುವವರು ಲಿಂಗಸೂಕ್ಷ್ಮತೆ ಹೊಂದಿರುವುದು ಬಹಳ ಮುಖ್ಯ. ಲಾಪತಾ ಲೇಡೀಸ್‌ (ಕಾಣೆಯಾದ ಮಹಿಳೆಯರು) ಹಿಂದಿ ಸಿನಿಮಾ ಕಳೆದ ಮಾರ್ಚ್‌ನಲ್ಲಿ ತೆರೆಕಂಡಿತ್ತು. ಆಗಷ್ಟೇ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಇಬ್ಬರು ಹುಡುಗಿಯರು ಕಾಣೆ ಆಗುತ್ತಾರೆ. ಹೆಂಡತಿಯರನ್ನು ಕಳೆದುಕೊಂಡ ಗಂಡಂದಿರಿಗೆ ಅವರನ್ನು ಹುಡುಕುವುದೇ ದೊಡ್ಡ ಕೆಲಸವಾಗುತ್ತದೆ. ಆದರೆ, ಇಡೀ ಚಲನಚಿತ್ರ ಇಷ್ಟನ್ನೇ ಹೇಳುತ್ತಿಲ್ಲ. ಮಹಿಳೆಯ ಅಸ್ತಿತ್ವ, ಘನತೆ, ವ್ಯಕ್ತಿತ್ವ, ಹಕ್ಕು ಎಲ್ಲೆಲ್ಲ ಕಾಣೆಯಾಗುತ್ತಿದೆ ಎಂದು ಸಾರುತ್ತದೆ.

Advertisements

ಪುರುಷ ಪ್ರಧಾನ ಸಮಾಜದಲ್ಲಿ ಬಹುಪಾಲು ಗಂಡಸರು ಮಹಿಳೆಯರಿಗೆ ಸ್ವತಂತ್ರ ವ್ಯಕ್ತಿತ್ವವಿದೆ, ಅವರದೇ ಇಷ್ಟಾನಿಷ್ಟಗಳಿರುತ್ತವೆ ಎಂಬ ಪ್ರಾಥಮಿಕ ತಿಳಿವಳಿಕೆ- ಮಾನವೀಯ ಸಂವೇದನೆಯನ್ನೂ ಹೊಂದಿರುವುದಿಲ್ಲ. ಸಮಾಜದಲ್ಲಿ ಇದ್ದರೂ ಇಲ್ಲದಂತಹ ಬದುಕನ್ನು ಗಂಡಾಳಿಕೆಯು ಸಾವಿರಾರು ವರ್ಷಗಳಿಂದ ಮಹಿಳೆಯರ ಮೇಲೆ ಹೇರುತ್ತಲೇ ಬಂದಿದೆ. ಅವರ ಇಷ್ಟ-ಕಷ್ಟಗಳು ಗಂಡಾಳ್ವಿಕೆಯ ಕಣ್ಣಿಗೆ ಕಾಣುವುದೇ ಇಲ್ಲ. ಅಮಾನುಷ ಕಟ್ಟುಪಾಡುಗಳಿಗೆ ಸಿಲುಕಿ ಯುವತಿಯರು ತಮ್ಮ ಭವಿಷ್ಯವನ್ನೇ ಬಲಿಕೊಟ್ಟು ಬದುಕಿದ್ದಾರೆ. ಹಣದ ದುರಾಸೆ- ಪುರುಷಾಧಿಪತ್ಯಗಳು ಆಕೆಗೆ ಆಯ್ಕೆಯ ಸ್ವಾತಂತ್ರ್ಯವನ್ನು ನಿರಾಕರಿಸಿದೆ. ಹೀಗೆ ಆಕೆಯ ಪಾಲಿಗೆ ಕಾಣೆ ಆದ ಎಲ್ಲ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ‘ಲಾಪತಾ ಲೇಡೀಸ್’ ಸಿನಿಮಾ ಮಾಡಿದೆ.

ಈ ಸಿನಿಮಾವನ್ನು ನ್ಯಾಯದಾನ ಮಾಡುವ ನ್ಯಾಯಾಧೀಶರು, ನ್ಯಾಯಮೂರ್ತಿಗಳು ನೋಡಲೇಬೇಕು. ಯಾಕೆಂದರೆ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯ ತೀರ್ಮಾನ ಮಾಡುವವರಿಗೆ ಲಿಂಗ ತಾರತಮ್ಯದ ಅರಿವಿರುವುದು ಬಹಳ ಮುಖ್ಯ. ಇತ್ತೀಚೆಗಿನ ಕೆಲವು ನ್ಯಾಯಾಲಯಗಳ ತೀರ್ಪುಗಳು, ಅದರಲ್ಲಿನ ಉಲ್ಲೇಖಗಳು, ನ್ಯಾಯಾಧೀಶರ ಹೇಳಿಕೆಗಳು ಲಿಂಗಸೂಕ್ಷ್ಮತೆಯ ಪ್ರಶ್ನೆಯನ್ನು ಮುನ್ನೆಲೆಗೆ ತಂದಿವೆ. ಮಹಿಳೆಯ ಮೂಲಭೂತ ಸ್ವಾತಂತ್ರ್ಯಕ್ಕೂ ಸಂಪ್ರದಾಯ, ಅಂಧಾಚರಣೆ, ಪುರುಷ ಪಾರಮ್ಯದ ಸಂಕೋಲೆಗಳಲ್ಲಿ ಬಂಧಿಸುವ, ಕುಂಕುಮ-ತಾಳಿಯ ಮಹತ್ವ ಕುರಿತು ಉಪದೇಶ ಮಾಡುವ ನ್ಯಾಯಾಧೀಶರನ್ನು ನೋಡಿದ್ದೇವೆ.

ಲಿಂಗ ಸಮಾನತೆಯ ಬಗ್ಗೆ ಜಾಗೃತಿಯನ್ನು ಎಲ್ಲೆಲ್ಲ ಮೂಡಿಸಬೇಕಿದೆ ಎಂದು ಪಟ್ಟಿ ಮಾಡಲು ಹೊರಟರೆ ಅಚ್ಚರಿ ಆಘಾತ ಒಟ್ಟೊಟ್ಟಿಗೆ ಆದೀತು. ಮನೆ, ಶಾಲೆ, ಕಚೇರಿ ಮಾತ್ರವಲ್ಲ ಸಾರ್ವಜನಿಕ ವೇದಿಕೆ, ಸಿನಿಮಾ, ರಾಜಕೀಯ ಕ್ಷೇತ್ರ ಹೀಗೆ ಎಲ್ಲೆಲ್ಲೂ ಮಹಿಳೆಯರನ್ನು ಗೌರವಿಸುವ, ಸಮಾನ ಅವಕಾಶ ಕಲ್ಪಿಸುವ ರೀತಿಯಲ್ಲಿ ಸಂಘಟಿತವಾದ ಪ್ರಯತ್ನಗಳು ಕಾಣೆಯಾಗಿವೆ. ಇಲ್ಲವೇ ತುಟಿಯಂಚಿನ ಮಾತುಗಳಿಗೆ ಸೀಮಿತಗೊಂಡಿವೆ. ಶಿಕ್ಷಣ, ವಿಜ್ಞಾನ, ತಂತ್ರಜ್ಞಾನದಲ್ಲಿ ಆಧುನಿಕ ಜಗತ್ತಿನಲ್ಲಿ ಪುರುಷರಷ್ಟೇ ಮಹಿಳೆಯರೂ ಆರ್ಥಿಕ, ಸಾಮಾಜಿಕ, ರಾಜಕೀಯ ಸಾಮರ್ಥ್ಯ ಹೊಂದಿರುವಾಗ ಲಿಂಗಸಮಾನತೆಯ ಪಾಠ ಮಾಡಬೇಕಿರುವ ಅಗತ್ಯ ಬರಬಾರದಿತ್ತು. ಅವರಿಗೆ ಸಮಾನತೆ ಸಹಜವಾಗಿಯೇ ಸಲ್ಲಬೇಕಿತ್ತು. ಆದರೆ, ಶತಮಾನಗಳಿಂದ ಬೆಳೆದು ಬಂದಿರುವ ಪುರುಷಾಹಂಕಾರದ ಬೇರುಗಳು ಸಡಿಲಗೊಳ್ಳುತ್ತಿಲ್ಲ. ಹೀಗಾಗಿಯೇ ಸಮಾನತೆಯ ಈ ಪಾಠಗಳು ಅನಿವಾರ್ಯ ಆಗಿರುವುದು ಅತ್ಯಂತ ಅನ್ಯಾಯದ ಮತ್ತು ಲಜ್ಜೆಯ ಸಂಗತಿ.

ಸಹಜೀವಿಗಳನ್ನು ಗೌರವಿಸೋದು, ಘನತೆಯ ಬದುಕಿಗೆ ಸಹಕರಿಸುವುದು, ಈ ಭೂಮಿ ಮೇಲೆ ಬದುಕುತ್ತಿರುವ ಎಲ್ಲರೂ, ಅವಕಾಶ- ಸೌಲಭ್ಯಗಳಿಗೆ ಸಮಾನ ಹಕ್ಕುದಾರರು ಎಂದು ಭಾವಿಸುವುದು ಕನಿಷ್ಠ ಮನುಷ್ಯರೆನಿಸಿಕೊಳ್ಳಲು ಇರುವ ಅತ್ಯಂತ ಪ್ರಾಥಮಿಕ ಅರ್ಹತೆ. ಅದನ್ನು ಒತ್ತಾಯ ಪೂರ್ವಕವಾಗಿ ಅಥವಾ ಕಷ್ಟಪಟ್ಟು ರೂಢಿಸಿಕೊಳ್ಳುವ ಸಂದರ್ಭ ಬರಬಾರದು. ಅದೊಂದು ಸಹಜ ಜೀವನ ಕ್ರಮವಾಗಿರಬೇಕು. ಆದರೆ ಪುರುಷಾಧಿಪತ್ಯದ ಸಂಕೋಲೆಗಳನ್ನು ಕಳಚಲು ಒಲ್ಲದ ಸಮಾಜದಲ್ಲಿ ನಾವಿದ್ದೇವೆ. ನಮ್ಮ ಕಲೆ, ಸಾಂಸ್ಕೃತಿಕ ಜಗತ್ತು ಸಮಾಜದ ಎಲ್ಲರ ನಡುವೆ ಸೌಹಾರ್ದ ಸೇತುವೆ ಬೆಸೆಯುವ ನಿಟ್ಟಿನಲ್ಲಿ ಸಂಪೂರ್ಣ ವಿಫಲವಾಗಿದೆ. ಇವೆಲ್ಲದರ ಬಲಿಪಶು ಮಹಿಳೆ ಇಂದೂ ತನ್ನ ಮೂಲಭೂತ ಹಕ್ಕುಗಳನ್ನು ಹೋರಾಡಿಯೇ ಪಡೆಯಬೇಕಿದೆ.

ಮಹಿಳೆಯರನ್ನು ಎರಡನೇ ದರ್ಜೆಯ ಮನುಷ್ಯರಂತೆ ನೋಡುವ ಶತಮಾನದಿಂದ ನಡೆದು ಬಂದಿರುವ ಪ್ರವೃತ್ತಿ ಕಡಿಮೆಯಾಗಿಲ್ಲ. ದೌರ್ಜನ್ಯದ ರೂಪ ಇನ್ನಷ್ಟು ವಿಕಾರಗೊಂಡಿದೆ. ಹೆಣ್ಣಿನ ಮೇಲಿನ ಕೌಟುಂಬಿಕ ದಬ್ಬಾಳಿಕೆ, ಸಾಮೂಹಿಕ ಅತ್ಯಾಚಾರ, ಕೆಲಸದ ಜಾಗದಲ್ಲಿ ಲೈಂಗಿಕ ಕಿರುಕುಳ, ಆಸಿಡ್‌ ದಾಳಿ, ಕೊಲೆ ಮುಂತಾದ ವಿಕೃತಿಗಳು ಇನ್ನಷ್ಟು ಭೀಕರ ಸ್ವರೂಪದಲ್ಲಿ ಅವತರಿಸಿವೆ. ನಮ್ಮ ಕಲಾ ಜಗತ್ತು ಹೆಣ್ಣಿನ ಸೌಂದರ್ಯ, ಸಹನಾಗುಣ, ಧರ್ಮದ ಪರಿಚಾರಕಿ ರೀತಿ ನೋಡುವುದನ್ನು ಬಿಟ್ಟಿಲ್ಲ.

ಈ ಮಧ್ಯೆ ಹೆಣ್ಣುಮಕ್ಕಳ ಸಮಸ್ಯೆಗಳನ್ನು ಇಟ್ಟುಕೊಂಡು ಹಲವಾರು ಸಿನಿಮಾಗಳು ಬಂದಿವೆ. ʼಕೇರಳ ಫೈಲ್ಸ್‌ʼ ತರಹದ ಪ್ರೊಪಗಾಂಡ ಸಿನಿಮಾವನ್ನು ವಿವಾಹದ ಹೆಸರಿನಲ್ಲಿ ಹೆಣ್ಣುಮಕ್ಕಳ ಮಾರಾಟದಂತಹ ಸಾಮಾಜಿಕ ಸಮಸ್ಯೆಯನ್ನು ಕೋಮುವಾದಿಗಳು ಕೋಮುದ್ವೇಷ ಬಿತ್ತುವ ಉದ್ದೇಶಕ್ಕೆ ಬಳಸಿಕೊಂಡಿದ್ದು ನೋಡಿದ್ದೇವೆ. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಆ ಸಿನಿಮಾ ಬಿಡುಗಡೆಯಾಗಿದ್ದು, ಅದನ್ನು ಬಿಜೆಪಿ ಪ್ರೊಮೋಟ್‌ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಕೇರಳ ಫೈಲ್ಸ್‌ ಸಿನಿಮಾವನ್ನು ಪ್ರಸ್ತಾಪಿಸಿದ್ದು ವಿಪರ್ಯಾಸವೇ ಸರಿ.

ಪ್ರಭುತ್ವದ ನಿರ್ಲಕ್ಷ್ಯದಿಂದಾಗಿ ಹೆಣ್ಣುಮಕ್ಕಳಿಗೆ ಸಮಾನ ಅವಕಾಶ, ಘನತೆಯ ಬದುಕು ಮರೀಚಿಕೆಯಾಗುತ್ತಿರುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನಂತಹ ಸರ್ವೋಚ್ಚ ನ್ಯಾಯ ವ್ಯವಸ್ಥೆಯಲ್ಲಿ ಕೂಡ ಹೆಣ್ಣಿಗೆ ಪ್ರಾತಿನಿಧ್ಯದ ಕೊರತೆಯಿದೆ. ಸುಪ್ರೀಮ್ ಕೋರ್ಟ್ ಮಾತ್ರವಲ್ಲ, ದೇಶದ ಇಡೀ ನ್ಯಾಯವ್ಯವಸ್ಥೆ ಹೆಣ್ಣುನೋಟದ ಕಣ್ಣುಗಳ ಪಡೆವುದು ಅತ್ಯಗತ್ಯ. ಹೀಗಾಗಿ ಹೆಣ್ಣನ್ನು ಕಾಣೆಯಾಗಿಸಿರುವ ಅಮಾನುಷ ಸಮಾಜದ ಮೇಲೆ ಬೆಳಕು ಚೆಲ್ಲುವ ಸಂವೇದನಾಶೀಲ ಚಲನಚಿತ್ರಗಳನ್ನು ನ್ಯಾಯದಾನ ವ್ಯವಸ್ಥೆ ಕಾಣಲೇಬೇಕು. ಅವುಗಳ ಭಾವಚೈತನ್ಯವನ್ನು ಮೈಗೂಡಿಸಿಕೊಳ್ಳಲೇಬೇಕು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X