ಈ ದಿನ ಸಂಪಾದಕೀಯ | ಬಾಕಿ ಖಟ್ಲೆಗಳ ಭಾರದಡಿ ಕುಸಿದಿರುವ ನ್ಯಾಯಾಂಗ ಮತ್ತು ಸಿನಿಕ ಸಾರ್ವಜನಿಕರು

Date:

Advertisements
ಭಾರತೀಯ ನ್ಯಾಯಾಂಗದ ಮುಂದಿರುವ ಪ್ರಬಲ ಸವಾಲಿದು ಎನ್ನುವುದು ತಪ್ಪುದಾರಿಗೆಳೆಯುವ ಬಣ್ಣನೆ. ದೇಶದ ಸರ್ಕಾರ ಮತ್ತು ಸಮಾಜದ ಮುಂದಿರುವ ಸವಾಲಿದು. ಕೇವಲ ನ್ಯಾಯಾಂಗವನ್ನು ಗುರಿ ಮಾಡುವುದು ತರವಲ್ಲ.

ಭಾರತದ ನ್ಯಾಯಾಂಗ ವ್ಯವಸ್ಥೆ ಬಾಕಿ ಖಟ್ಲೆಗಳ ಬೆಟ್ಟದ ಭಾರದಡಿ ಕುಸಿದಿದೆ. ನ್ಯಾಯದ ಗಾಲಿಗಳು ತೀರಾ ಮಂದಗತಿಯಲ್ಲಿ ಉರುಳುತ್ತಿವೆ. ಬ್ರಿಟೀಷರ ಕಾಲದ ಪುರಾತನ ಪೆಡಸು ಕಾನೂನು ಪ್ರಕ್ರಿಯೆಗಳು, ಸುತ್ತು ಬಳಸಿನ ವಿಚಾರಣೆ ವೈಖರಿಗಳು ಇತ್ಯರ್ಥದ ಗತಿಯನ್ನು ಮಂದಗೊಳಿಸಿವೆ.

ಪರಿಣಾಮವಾಗಿ ಜನತೆಯಲ್ಲಿ ನ್ಯಾಯಾಂಗ ಪ್ರಕ್ರಿಯೆಯ ಕುರಿತು ಸಿನಿಕತನ ತಲೆದೋರಿದೆ. ತಪ್ಪೋ ಸರಿಯೋ ದಿಢೀರ್ ನ್ಯಾಯವನ್ನು ಬಯಸುವವರ ಪ್ರಮಾಣವೇ ಅಧಿಕ. ಗಂಭೀರ ಅಪರಾಧಗಳ ಆರೋಪಿಗಳನ್ನು ಹುಸಿ ಎನ್‌ಕೌಂಟರ್‌ಗಳಲ್ಲಿ ಪೊಲೀಸರೇ ಹೊಡೆದು ಸಾಯಿಸುವ ‘ದಿಢೀರ್ ನ್ಯಾಯದಾನ’ ಜನಪ್ರಿಯತೆ ಗಳಿಸಿದೆ.

ಲಾಕಪ್ ಸಾವುಗಳ ಕುರಿತು ಯಾರೂ ತಲೆಕೆಡಿಸಿಕೊಳ್ಳದ ಅಪಾಯಕಾರಿ ನಿರ್ಲಕ್ಷ್ಯ ಏರ್ಪಟ್ಟಿದೆ. ದೇಶದ ನಾಗರಿಕರನ್ನು ನ್ಯಾಯದ ಹಕ್ಕಿನಿಂದ ವಂಚಿತರನ್ನಾಗಿಸುವ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುವ ಸ್ಥಿತಿಯನ್ನು ಸೃಷ್ಟಿಸುತ್ತದೆ. ಕಳವಳಕಾರಿ ವಿದ್ಯಮಾನವಿದು. ಈ ಬೆಳವಣಿಗೆಯಲ್ಲಿ ಪ್ರಭುತ್ವದ ಪ್ರತ್ಯಕ್ಷ ಮತ್ತು ಪರೋಕ್ಷ ಪಾಲಿದೆ. ಸ್ವತಂತ್ರ ಮನೋಭಾವದ ನ್ಯಾಯಾಂಗವನ್ನು ತಾನು ಸಹಿಸುವುದಿಲ್ಲವೆಂದು ಮೋದಿ ಸರ್ಕಾರ ಅಡಿಗಡಿಗೆ ಇಂಗಿತ ನೀಡಿದೆ.

Advertisements

ದೇಶದ ನಾನಾ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಖಟ್ಲೆಗಳ ಸಂಖ್ಯೆ ಐದು ಕೋಟಿಯನ್ನು ಮೀರಿದೆ. 25 ಹೈಕೋರ್ಟುಗಳಲ್ಲಿನ ಬಾಕಿ ಉಳಿದಿರುವ ವ್ಯಾಜ್ಯಗಳು 61 ಲಕ್ಷ. ನಾಲ್ಕೂವರೆ ಕೋಟಿ ಖಟ್ಲೆಗಳು ಜಿಲ್ಲಾ ಮತ್ತು ಇತರೆ ಕೆಳಹಂತದ ನ್ಯಾಯಾಲಯಗಳಲ್ಲಿನ ಬಾಕಿ ಉಳಿದಿವೆ. ಆಸ್ತಿ ಮತ್ತು ಜಮೀನು ವ್ಯಾಜ್ಯದ ಕೇಸುಗಳೇ ಅತ್ಯಧಿಕ. ಕೇಂದ್ರ ಸರ್ಕಾರವೇ ಕಳೆದ ತಿಂಗಳು ಲೋಕಸಭೆಯಲ್ಲಿ ನೀಡಿದ ಅಂಕಿ ಅಂಶವಿದು. ಆದರೆ ಈ ಬಾಕಿ ಬೆಟ್ಟದ ಶೇ.50ರಷ್ಟು ಕೇಸುಗಳಿಗೆ ಕಾರಣ ಸರ್ಕಾರವೇ. ತನ್ನ ಪ್ರಜೆಗಳ ಮೇಲೆ ಇಷ್ಟೊಂದು ಕೇಸುಗಳನ್ನು ಹೂಡಿರುವ ಅತಿ ದೊಡ್ಡ ವಾಜ್ಯಕೋರ ಕಕ್ಷಿದಾರ.

ದೇಶದ ನ್ಯಾಯಾಂಗದಲ್ಲಿ ಮಂಜೂರಾತಿ ಪಡೆದ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ 26,568. ಈ ಪೈಕಿ ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿಗಳು 34. ಈ ಹುದ್ದೆಗಳಲ್ಲಿನ ಒಂದು ಪ್ರಮಾಣ ಸದಾ ಖಾಲಿಯಾಗಿಯೇ ಉಳಿದಿರುವುದು ಉಂಟು. ಈ ಸಮಸ್ಯೆಯ ಮುಂದೆ ಸುಪ್ರೀಮ್ ಕೋರ್ಟ್ ಕೂಡ ಅಸಹಾಯಕ. ಖಾಲಿ ಹುದ್ದೆಗಳನ್ನು ತುಂಬುವಂತೆ ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯೊಬ್ಬರು ಬಹಿರಂಗ ಸಭೆಯೊಂದರಲ್ಲಿ ಪ್ರಧಾನಿ ಮೋದಿಯವರನ್ನು ಅಂಗಲಾಚಿ ಕಣ್ಣೀರಿಟ್ಟಿದ್ದುಂಟು. ನ್ಯಾಯಮೂರ್ತಿಗಳ ನೇಮಕದ ಅಧಿಕಾರವನ್ನು ಮೋದಿ ಸರ್ಕಾರ ಹತಾರಿನಂತೆ ಬಳಸಿದೆ.

Supreme Court of India

ಜನಸಂಖ್ಯೆ ಮತ್ತು ನ್ಯಾಯಾಧೀಶರ ಅನುಪಾತವನ್ನು ಪರಿಗಣಿಸಿದರೆ ಅತ್ಯಂತ ತಳದಲ್ಲಿರುವ ದೇಶಗಳ ಪೈಕಿ ಭಾರತವೂ ಒಂದು. ಹತ್ತು ಲಕ್ಷ ಮಂದಿ ಜನಸಂಖ್ಯೆಗೆ ಅಮೆರಿಕಾದಲ್ಲಿ 150 ಮಂದಿ ನ್ಯಾಯಾಧೀಶರಿದ್ದರೆ, ಭಾರತದಲ್ಲಿ 21 ಮಂದಿ ನ್ಯಾಯಾಧೀಶರಿದ್ದಾರೆ. ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ 50 ಮಂದಿ ನ್ಯಾಯಾಧೀಶರಿಗೆ ಏರಿಸುವಂತೆ ನ್ಯಾಯಮೂರ್ತಿ ವಿ.ಎಸ್.ಮಳೀಮಠ್ ಅವರ ಅಧ್ಯಕ್ಷತೆಯ ಕಾನೂನು ಆಯೋಗ ಶಿಫಾರಸು ನೀಡಿ ದಶಕಗಳೇ ಉರುಳಿವೆ. ಸರ್ಕಾರಗಳು ಕಿವಿ ಮೇಲೆ ಹಾಕಿಕೊಂಡಿಲ್ಲ. ಸುಪ್ರೀಮ್ ಕೋರ್ಟಿನ ಹಣಕಾಸು ಬಾಧ್ಯತೆ ಕೇಂದ್ರ ಸರ್ಕಾರದ್ದು. ಉಳಿದಂತೆ ಹೈಕೋರ್ಟು ಮತ್ತು ಜಿಲ್ಲಾ ನ್ಯಾಯಾಲಯಗಳು ಹಾಗೂ ಅಧೀನ ನ್ಯಾಯಾಲಯಗಳ ಎಲ್ಲ ವೆಚ್ಚವನ್ನು ರಾಜ್ಯ ಸರ್ಕಾರಗಳು ಭರಿಸುತ್ತವೆ. ತಮ್ಮ ಬಜೆಟ್ಟಿನ ಶೇ.ಒಂದರಷ್ಟು ಮೊತ್ತವನ್ನು ರಾಜ್ಯಗಳು ಈ ಉದ್ದೇಶಕ್ಕೆ ಹಂಚಿಕೆ ಮಾಡಿದರೆ ಅದೇ ಹೆಚ್ಚು.

ಈ ಸಂಖ್ಯೆಯ ಹೆಚ್ಚಳಕ್ಕೆ, ವಿಚಾರಣೆಯ ಸೌಲಭ್ಯಗಳ ಸುಧಾರಣೆಗೆ, ಕಂಪ್ಯೂಟರೀಕರಣಕ್ಕೆ ಹೆಚ್ಚುವರಿ ಹಣ ಹಂಚಿಕೆಯಾಗುತ್ತಿಲ್ಲ ದೇಶಾದ್ಯಂತ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಕಾದಿರುವ ಕೇಸುಗಳ ಸಂಖ್ಯೆ ಐವತ್ತು ಲಕ್ಷ. ನ್ಯಾಯಾಲಯಗಳು ಮತ್ತು ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸದಿದ್ದರೆ, ವಿಚಾರಣೆಯ ವೈಖರಿಯಲ್ಲಿ ಸುಧಾರಣೆಗಳನ್ನು ತುರ್ತಾಗಿ ತರಬೇಕಿದೆ. ಇಲ್ಲದೆ ವಿಚಾರಣೆ ಈಗಿನ ಗತಿಯಲ್ಲೇ ಜರುಗಿದರೆ ಈ ಬಾಕಿಯ ಬೆಟ್ಟವನ್ನು ಕರಗಿಸಲು 350 ವರ್ಷಗಳೇ ಬೇಕೆಂಬುದು ಒಂದು ಅಂದಾಜು.

ಭಾರತೀಯ ನ್ಯಾಯಾಂಗದ ಮುಂದಿರುವ ಪ್ರಬಲ ಸವಾಲಿದು ಎನ್ನುವುದು ತಪ್ಪುದಾರಿಗೆಳೆಯುವ ಬಣ್ಣನೆ. ದೇಶದ ಸರ್ಕಾರ ಮತ್ತು ಸಮಾಜದ ಮುಂದಿರುವ ಸವಾಲಿದು. ಕೇವಲ ನ್ಯಾಯಾಂಗವನ್ನು ಗುರಿ ಮಾಡುವುದು ತರವಲ್ಲ.

ನ್ಯಾಯದಾನ ವಿಳಂಬದ ಬಹುದೊಡ್ಡ ಲಾಭಾರ್ಥಿಗಳು ಯಾರ್ಯಾರೆಂದು ಪ್ರಜ್ಞಾವಂತ ಪ್ರಜೆಗಳು ಗುರುತಿಸಬೇಕಿದೆ. ನ್ಯಾಯಾಲಯಗಳು ಮತ್ತು ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸಲು ಬಜೆಟ್ ಹಂಚಿಕೆಯನ್ನು ಹೆಚ್ಚಿಸಬೇಕೆಂಬ ಮತ್ತು ವಿಚಾರಣಾ ವ್ಯವಸ್ಥೆಯಲ್ಲಿ, ಸಂಬಂಧಪಟ್ಟ ಕಾನೂನು ಪ್ರಕ್ರಿಯೆಗಳಲ್ಲಿ ಸುಧಾರಣೆ ತರಬೇಕೆಂದು ಸರ್ಕಾರಗಳ ಮೇಲೆ ಒತ್ತಡ ತರಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X