‘ನಿನ್ನ ಕಾಂತಿಯನ್ನು, ಜಪಮಾಲೆಯನ್ನು ಇದೋ ತೆಗೆದುಕೋ, ನೀನೇ ಇಟ್ಟುಕೋ. ಹಸಿದ ಹೊಟ್ಟೇಲಿ ಭಜನೆ ಮಾಡಲಾರೆ, ಗೋಪಾಲ’ –ಇದು ಅಯೋಧ್ಯೆಯಲ್ಲಿ ತಮ್ಮ ಕುಟುಂಬ ನಾಲ್ಕು ತಲೆಮಾರಿನಿಂದ ಕೃಷಿ ಮಾಡುತ್ತಿದ್ದ 10 ಎಕರೆ ಜಮೀನನ್ನು ಬುಲ್ಡೋಜರ್‌ಗಳು ನೆಲಸಮ ಮಾಡುತ್ತಿದ್ದುದನ್ನು ಕಂಡು 60 ವರ್ಷದ ರೈತ ಮಹಿಳೆ ತಾರಾವತಿ ಹೇಳಿದ ಮಾತು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದಿದ್ದರೂ, ಉದ್ಘಾಟನೆಗಾಗಿ ತಯಾರಿ ಎಗ್ಗಿಲ್ಲದೆ ನಡೆಯುತ್ತಿದೆ. ಅದಕ್ಕಾಗಿ, ನಗರವನ್ನು ಸುಂದರಗೊಳಿಸುವ ಉದ್ದೇಶದಿಂದ ಈ ಮಹಿಳೆಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ, ಅವರಿಗೆ ಸರಿಯಾದ ಪರಿಹಾರ ನೀಡಿಲ್ಲ. ಇದು ಬರೀ ತಾರಾವತಿ ಒಬ್ಬರ ವ್ಯಥೆಯಲ್ಲ, ಭೂಮಿ ಕಳೆದುಕೊಂಡ ಹಲವಾರು ರೈತರ ಅಳಲು.
“ನಮಗೆ ಪರಿಹಾರ ಸಿಗದಿದ್ದರೆ ನಾವು ಏನು ತಿನ್ನಬೇಕು? ಹೇಗೆ ಬದುಕಬೇಕು? ನಮ್ಮ ಮಕ್ಕಳು ಏನು ತಿನ್ನುತ್ತಾರೆ? ನಮ್ಮ ಮಕ್ಕಳಿಗೆ ಓದು-ಬರಹ ಗೊತ್ತಿಲ್ಲ. ಅವರು ಕೂಲಿ ಕೆಲಸ ಮಾಡುತ್ತಾರೆ. ಈ ಭೂಮಿ ನಮಗೆ ತಿನ್ನಲು ಅನ್ನ ನೀಡುತ್ತಿತ್ತು. ಈಗ, ಅದನ್ನು ಕಸಿದುಕೊಂಡಿದ್ದಾರೆ. ನಾವು ಎಲ್ಲಿಗೆ ಹೋಗಬೇಕು?” ಎಂದು ಭೂಮಿ ಕಳೆದುಕೊಂಡಿರುವ ಸಂತ್ರಸ್ತ ಮಹಿಳೆ ತಾರಾವತಿ ಕಣ್ಣೀರು ಹಾಕುತ್ತಾರೆ.
ಮಂದಿರದ ಸುತ್ತ ನಗರ ನಿರ್ಮಾಣ
‘ಎಕನಾಮಿಕ್ ಟೈಮ್ಸ್’ ವರದಿಯ ಪ್ರಕಾರ, ಮಾಸ್ಟರ್ ಪ್ಲಾನ್ 2031ರ ಅಡಿಯಲ್ಲಿ 10 ವರ್ಷಗಳಲ್ಲಿ 85,000 ಕೋಟಿ ರೂ. ವೆಚ್ಚದಲ್ಲಿ ಅಯೋಧ್ಯೆಯನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದೆ.
2017ರ ಮೇನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಅಯೋಧ್ಯೆಯಲ್ಲಿ 30,000 ಕೋಟಿ ರೂ. ವೆಚ್ಚದ ಮೂಲಸೌಕರ್ಯ ಯೋಜನೆಗಳನ್ನು ಆರಂಭಿಸಿತು. ಇತ್ತೀಚೆಗೆ, ಜನವರಿ 5ರಂದು ರ್‍ಯಾಲಿ ನಡೆಸಿದ ಪ್ರಧಾನಿ ಮೋದಿ ಅವರು 15,000 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು.
”ಇಂದು ಇಲ್ಲಿ 15 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನಡೆದಿದೆ. ಈ ಕಾಮಗಾರಿಗಳು ಮತ್ತೊಮ್ಮೆ ಆಧುನಿಕ ಅಯೋಧ್ಯೆಯನ್ನು ದೇಶದ ಭೂಪಟದಲ್ಲಿ ಗುರುತಿಸಲಿವೆ. ಇಂದಿನ ಭಾರತ ತನ್ನ ತೀರ್ಥಕ್ಷೇತ್ರಗಳನ್ನು ಸುಂದರಗೊಳಿಸುತ್ತಿದೆ. ಜೊತೆಗೆ, ಡಿಜಿಟಲ್ ತಂತ್ರಜ್ಞಾನದ ಜಗತ್ತಿನಲ್ಲಿ ಮುಳುಗಿದೆ,” ಎಂದು ಮೋದಿ ಹೇಳಿದ್ದರು.
ಅಯೋಧ್ಯೆ ಅಭಿವೃದ್ಧಿ ಯಾರಿಗಾಗಿ?
ಕೇಂದ್ರ, ರಾಜ್ಯ ಸರ್ಕಾರಗಳು ಮಾಡುತ್ತಿರುವ ಅಭಿವೃದ್ಧಿ ಯಾರಿಗಾಗಿ ಎಂದು ಅಯೋಧ್ಯೆಯ ಜನರು ಪ್ರಶ್ನಿಸುತ್ತಿದ್ದಾರೆ. ಅಂದಹಾಗೆ, ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಅಯೋಧ್ಯೆಯ ರಾಮ್‌ಕೋಟ್‌ನಲ್ಲಿ 41 ವರ್ಷದ ಮಣಿರಾಮ್ ಯಾದವ್ ಎಂಬವರು ಮನೆ ಕೆಳದುಕೊಳ್ಳಬೇಕಾಯಿತು. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿಕೊಂಡಿದ್ದ ಮಣಿರಾಮ್ ಅವರ ಮನೆಯನ್ನು 2021ರ ಸೆಪ್ಟೆಂಬರ್ 7ರಂದು ಕೆಡವಲಾಯಿತು. ಆಗ ಮಣಿರಾಮ್ ಜೊತೆಗೆ 8 ಕುಟುಂಬಗಳ ಮನೆಯನ್ನು ಅಧಿಕಾರಿಗಳಿಗೆ ಕೆಡವಿದ್ದಾರೆ. ಆ ಜಾಗವನ್ನು ವಶಪಡಿಸಿಕೊಂಡಿದ್ದಾರೆ.
“ಅಯೋಧ್ಯೆಯ ರಾಮ್‌ಕೋಟ್ ಪ್ರದೇಶದಲ್ಲಿ ನಮ್ಮ ಮನೆ ಇತ್ತು. ನಮ್ಮ ಕುಟುಂಬ ನಾಲ್ಕು ತಲೆಮಾರಿನಿಂದ ಅಲ್ಲಿ ವಾಸವಾಗಿತ್ತು. ಆದರೆ, 2021ರಲ್ಲಿ ನಮ್ಮ ಮನೆಯನ್ನು ಕೆಡವಲಾಯಿತು. ಆ ಜಾಗದಲ್ಲಿ ಪೊಲೀಸ್ ಠಾಣೆ ನಿರ್ಮಿಸುತ್ತೇವೆಂದು ಅಧಿಕಾರಿಗಳು ನಮ್ಮ ಜಾಗವನ್ನು ಕಸಿದುಕೊಂಡರು” ಎಂದು ಮಣಿರಾಮ್ ಹೇಳುತ್ತಾರೆ.
“ನಮಗೆ ಬೇರೆಡೆ ಪುನರ್ವಸತಿ ಒದಗಿಸಿದ ಬಳಿಕವೇ ನಮ್ಮ ಮನೆಗಳನ್ನು ಕೆಡವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಪುನರ್ವಸತಿ ನೀಡದೆ, ಮನೆ ಕೆಡವಿದರು. ಕಳೆದ 1.5 ವರ್ಷದಿಂದ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ನಮ್ಮನ್ನು ಅಲೆದಾಡಿಸುತ್ತಿದ್ದಾರೆ. ಈವರೆಗೆ ನಮಗೆ ಪುನರ್ವಸತಿ ದೊರೆತಿಲ್ಲ” ಎಂದು ಮಣಿರಾಮ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇನ್ನು, ಪಂಚಕೋಸಿ ಮಾರ್ಗದ ಬಳಿ ಐದು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದ, ತಮ್ಮ ಬದುಕಿಗೆ ಕೃಷಿಯೇ ಏಕೈಕ ಜೀವನಾಧಾರವೆಂದು ನಂಬಿದ್ದ ಅಶೋಕ್ ಕುಮಾರ್ ಕೂಡ ಭೂಮಿ ಕಳೆದುಕೊಂಡಿದ್ದಾರೆ. ರಸ್ತೆ ನಿರ್ಮಾಣಕ್ಕಾಗಿ ಅಧಿಕಾರಿಗಳು ಅವರ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಈಗ ಅವರು, “ಭಿಕ್ಷಾಟನೆಯ ಬಟ್ಟಲಿನೊಂದಿಗೆ ರಾಮನ ದೇವಾಲಯದ ಬಳಿ ಕುಳಿತುಕೊಳ್ಳುತ್ತೇನೆ” ಎಂದು ಹೇಳುತ್ತಿದ್ದಾರೆ.
“ಭೂಮಿ ನಮಗೆ ಬಹಳ ಮುಖ್ಯ. ಇದು ನಮ್ಮ ಏಕೈಕ ಜೀವನಾಧಾರ. ನಾನು ಈಗ ಕೂಲಿ ಕೆಲಸ ಮಾಡಲು ಸಾಧ್ಯವಿಲ್ಲ. ನನ್ನ ಮಕ್ಕಳು ಇನ್ನೂ ದುಡಿಯುವ ವಯಸ್ಸಿನವರಲ್ಲ. ಅವರು ತುಂಬಾ ಚಿಕ್ಕವರು. ನಮ್ಮ ಹೊಲದಲ್ಲಿ ನಾವು ಸಾಧ್ಯವಾದಷ್ಟು ಬೆಳೆದು, ಬದುಕುತ್ತಿದ್ದೆವು. ನಾನು ಕೃಷಿ ಮಾಡಲು ಸಾಲ ತೆಗೆದುಕೊಂಡಿದ್ದೇನೆ. ಬೇರೆ ಯಾವುದೇ ಆದಾಯದ ಮೂಲವಿಲ್ಲ. ಆದರೆ, ಈಗ ಭೂಮಿಯನ್ನು ಕಸಿದುಕೊಂಡಿದ್ದಾರೆ. ನಾವೇನು ಮಾಡಬೇಕು” ಎಂದು ಅಶೋಕ್ ಹೇಳುತ್ತಾರೆ.
“ನಾವು ಈಗ ಏನು ಮಾಡಬೇಕು? ರಾಮಮಂದಿರದ ಬಳಿ ಬಟ್ಟಲಿನೊಂದಿಗೆ ಕುಳಿತು ಹಣಕ್ಕಾಗಿ ಭಿಕ್ಷೆ ಬೇಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ನಮಗೆ ಪರಿಹಾರವನ್ನೂ ನೀಡಿಲ್ಲ,” ಎಂದು ಅವರು ಕಣ್ಣೀರಾದರು.
ಕಾಗದ ಪತ್ರಗಳಲ್ಲಿ ಸಿಕ್ಕಿಬಿದ್ದಿದ್ದಾರೆ
ಮಣಿರಾಮ್, ಅಶೋಕ್, ತಾರಾವತಿ ಸೇರಿದಂತೆ ಹಲವರು ಅಯೋಧ್ಯೆಯ ಅಭಿವೃದ್ಧಿ ಯೋಜನೆಗಳಿಗಾಗಿ ತಮ್ಮ ಭೂಮಿ ಕಳೆದುಕೊಂಡಿದ್ದಾರೆ. ಅವರೆಲ್ಲರೂ, ತಮ್ಮ ಭೂಮಿಗೆ ಸಂಬಂಧಿಸಿದಂತೆ ಜಿಲ್ಲಾ ಅಧಿಕಾರಿಗಳನ್ನು ನಿರಂತರವಾಗಿ ಸಂಪರ್ಕಿಸುತ್ತಿದ್ದಾರೆ. ಆದರೆ, ಅವರು ‘ನೀವು ಅಕ್ರಮವಾಗಿ ಭೂಮಿಯನ್ನು ಅತಿಕ್ರಿಮಿಸಿಕೊಂಡಿದ್ದೀರಿ’ ಎಂದು ಹೇಳುತ್ತಿದ್ದಾರೆ.
”ನಮ್ಮ ಮನೆಗಳು ಅಕ್ರಮವಾಗಿದ್ದರೆ, ನಾವು ಮನೆ ತೆರಿಗೆಯನ್ನು ಹೇಗೆ ಪಾವತಿಸುತ್ತಿದ್ದೇವೆ? ನಾವು ಮತದಾರರ ಗುರುತಿನ ಚೀಟಿಗಳನ್ನು ಹೇಗೆ ಹೊಂದಿದ್ದೇವೆ? ನಮ್ಮ ಆಧಾರ್ ಕಾರ್ಡ್‌ಗಳು ಹೇಗೆ ಮಾಡಲ್ಪಟ್ಟವು? ನಾವು ನಮ್ಮ ವಿದ್ಯುತ್ ಬಿಲ್‌ಗಳನ್ನು ಹೇಗೆ ಪಾವತಿಸುತ್ತಿದ್ದೇವೆ? ನಾವು ನಮ್ಮ ಮನೆಗಳನ್ನು ನಿರ್ಮಿಸುವಾಗ ಅಕ್ರಮವಾಗಿರಲಿಲ್ಲವೇ? ಅವರು ನಮ್ಮ ಭೂಮಿಯನ್ನು ಕಾನೂನುಬಾಹಿರ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದ ಕ್ಷಣವೇ ಎಲ್ಲವೂ ಅಕ್ರಮ, ಅತಿಕ್ರಮವಾಗಿವೆ” ಎಂದು ಮಣಿರಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವರದಿ ಓದಿದ್ದೀರಾ?: ಆರ್‌ಎಸ್‌ಎಸ್‌ಗೆ ಹಣ ನೀಡುವ ಎನ್‌ಆರ್‌ಐ ಬ್ರಾಹ್ಮಣರು ಮಾಂಸ ತಿನ್ನುತ್ತಿಲ್ಲವೇ?
“ಅಯೋಧ್ಯಾ ನಗರದ ಹೆಚ್ಚಿನ ಭಾಗವನ್ನು ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದೆ. ಇದನ್ನು ನಾಝುಲ್ ಭೂಮಿ ಅಥವಾ ಪಟ್ಟಾ ಎಂದೂ ಕರೆಯುತ್ತಾರೆ. ನಾಝುಲ್ ಸರ್ಕಾರದ ಒಡೆತನದ ಭೂಮಿಯಾಗಿದೆ. ಆದರೆ, ಜನರಿಗೆ ಅಲ್ಪಾವಧಿಯ ಅಥವಾ ದೀರ್ಘಾವಧಿಯ ಗುತ್ತಿಗೆಗೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ” ಎಂದು ನಿವಾಸಿಯೊಬ್ಬರು ವಿವರಿಸಿದರು.
“ನಾವು ಸಾಗುವಳಿ ಮಾಡುತ್ತಿರುವ ಜಮೀನು ‘ನಜುಲ್ ಕಿ ಜಮೀನ್’ ಎಂದು ಅಧಿಕಾರಿಗಳು ನಮಗೆ ಹೇಳಿದರು. ಆದರೆ, ನಮ್ಮಲ್ಲಿ ಕೆಲವರು ಆ ಭೂಮಿಯನ್ನು ಸರ್ಕಾರದಿಂದ ಖರೀದಿಸಿದ್ದಾರೆ. ಅಧಿಕಾರಿಗಳು ಅದನ್ನೂ ಏಕೆ ಕಸಿದುಕೊಳ್ಳುತ್ತಿದ್ದಾರೆ” ಎಂದು ಮಣಿರಾಮ್ ಪ್ರಶ್ನಿಸಿದರು.
ಕುತೂಹಲಕಾರಿ ಸಂಗತಿ ಎಂದರೆ, ‘ನ್ಯೂಸ್‌ಲಾಂಡ್ರಿ’ 2021ರಲ್ಲಿ ಪ್ರಕಟಿಸಿದ್ದ ವರದಿ ಪ್ರಕಾರ, ‘ಅಯೋಧ್ಯೆಯ ಅಂದಿನ ಬಿಜೆಪಿ ಮೇಯರ್ ಅವರ ಸೋದರಳಿಯ ರಾಮ ಮಂದಿರ ಟ್ರಸ್ಟ್‌ಗೆ ಸರ್ಕಾರಿ ಸ್ವಾಮ್ಯದ ಭೂಮಿಯನ್ನು ಮಾರಾಟ ಮಾಡಿದ್ದಾರೆ’ ಎಂದು ಕಂಡುಹಿಡಿದಿದೆ.
ನಾವು ದೇವಸ್ಥಾನದ ವಿರುದ್ಧವಲ್ಲ ಆದರೆ…
ಮಣಿರಾಮ್, ತಾರಾವತಿ ಮತ್ತು ಅಶೋಕ್ – ನಾವು ರಾಮ ಮಂದಿರ ನಿರ್ಮಾಣದ ವಿರುದ್ಧವಿಲ್ಲ -ಎಂದು ಹೇಳುತ್ತಾರೆ.
“ರಾಮ ಲಲ್ಲಾಗೆ ಸಂಬಂಧಿಸಿದ ಯೋಜನೆಗಳಿಗಾಗಿ ನಮ್ಮ ಭೂಮಿಯನ್ನು ಸ್ವಾಧೀನಕ್ಕೆ ಪಡೆಯುತ್ತಿರುವುದು ನಮ್ಮ ಅದೃಷ್ಟ, ಆದರೆ, ನಾವು ನಿರಾಶ್ರಿತರಾಗದಂತೆ ನೋಡಿಕೊಳ್ಳುವುದು ಯೋಗಿ ಆದಿತ್ಯನಾಥ್ ಅವರ ಜವಾಬ್ದಾರಿ” ಎಂದು ಈಗ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಮಣಿರಾಮ್ ಹೇಳಿದ್ದಾರೆ.
“ಅವರು ನಮ್ಮ ಭೂಮಿಯನ್ನು ತೆಗೆದುಕೊಂಡರೂ ಪರವಾಗಿಲ್ಲ. ರಾಮಮಂದಿರ ನಿರ್ಮಾಣವಾಗುತ್ತಿರುವುದು ಸರಿ. ಆದರೆ, ಜನರು ಅವರ ನ್ಯಾಯವನ್ನು ಪಡೆಯಬೇಕು” ಎಂದಿದ್ದಾರೆ ತಾರಾವತಿ.
ಮೂಲ: ದಿ ಕ್ವಿಂಟ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ