ಭವ್ಯ ರಾಮಮಂದಿರದ ಸುತ್ತಮುತ್ತಣ ಈ ಆಪಾದನೆಗಳ ಮೈಲಿಗೆಯನ್ನು ಶೀಘ್ರವೇ ತೊಳೆದುಕೊಳ್ಳಬೇಕಿದೆ. ಅಪ್ಪಟ ವ್ಯಾಪಾರಕ್ಕೆ ರಾಜಕಾರಣಕ್ಕೆ ಧರ್ಮದ ದುರ್ಬಳಕೆಯನ್ನು ತಪ್ಪಿಸಬೇಕಿದೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಿದ ನಂತರ ಮೇಲೆದ್ದಿರುವ ಭವ್ಯ ರಾಮಮಂದಿರವು ಸುತ್ತಮುತ್ತಣ ರಿಯಲ್ ಎಸ್ಟೇಟ್ ದಂಧೆಗೆ ಭಾರೀ ತೇಜಿ ನೀಡಿದೆ.
ಬಾಬರಿ ಮಸೀದಿ-ರಾಮಜನ್ಮಭೂಮಿಯ 2.77 ಎಕರೆಗಳಷ್ಟು ವಿವಾದಿತ ಜಮೀನನ್ನು ರಾಮಮಂದಿರ ಕಟ್ಟಿಕೊಳ್ಳಲು ಸುಪ್ರೀಮ್ ಕೋರ್ಟು 2019ರ ನವೆಂಬರಿನಲ್ಲಿ ಹಿಂದೂಗಳಿಗೆ ಒಪ್ಪಿಸಿತ್ತು. ತೀರ್ಪಿನ ಅನ್ವಯ ರಚಿಸಲಾದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ 2.77 ಎಕರೆಗಳ ಸುತ್ತಮುತ್ತ ಆಗಲೇ 70 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿತ್ತು.
ರಾಮಮಂದಿರ ಸಮುಚ್ಚಯದ ಸುತ್ತಮುತ್ತಲ ಜಮೀನಿನ ಖರೀದಿ ದರ ಆಕಾಶಕ್ಕೇರುವ ಲೆಕ್ಕಾಚಾರವಿದ್ದ ಖಾಸಗಿ ಖರೀದಿದಾರರು ಆದಾಗಲೇ ಜಮೀನಿಗೆ ಮುಗಿ ಬಿದ್ದಿದ್ದರು. ಚದರಡಿಗೆ 15 ಸಾವಿರ ರುಪಾಯಿಯಿಂದ 25 ಸಾವಿರ ರುಪಾಯಿಯ ವ್ಯಾಪಾರ ನಡೆಯುತ್ತಿರುವುದಾಗಿ ಇತ್ತೀಚಿನ ವರದಿಗಳು ಹೇಳಿವೆ.
ಇದೇ ನವೆಂಬರ್ ತಿಂಗಳಲ್ಲಿ ಕಂದಾಯಮೂಲ ಆದಾಯ ಪಟ್ಟಿಯಲ್ಲಿ ಉತ್ತರಪ್ರದೇಶದ 75 ಜಿಲ್ಲೆಗಳ ಪೈಕಿ ತುತ್ತತುದಿಯಲ್ಲಿದೆ ಆಯೋಧ್ಯೆ.
ಜನವರಿ 27ಕ್ಕೆ ಈ ಮಂದಿರವನ್ನು ಸಾರ್ವಜನಿಕರಿಗೆ ತೆರೆಯಲಾಗುತ್ತಿದೆ. ಲೋಕಸಭಾ ಚುನಾವಣೆಗಳು ಕದ ಬಡಿದಿರುವಾಗ ಶ್ರೀರಾಮದರ್ಶನಕ್ಕೆ ತಡವೇಕೆ? ಶ್ರೀರಾಮಚಂದ್ರಮೂರ್ತಿಗೆ ಭವ್ಯ ಮಂದಿರ ಕಟ್ಟಿಸಿದ ಹೆಸರಿನಲ್ಲಿ ಮುಗಿಲು ಮುಟ್ಟಲಿದೆ ಮತಯಾಚನೆ. ಧರ್ಮ-ವ್ಯಾಪಾರ-ರಾಜಕಾರಣದ ತ್ರಿವೇಣಿ ಸಂಗಮಕ್ಕೆ ಸಾಕ್ಷಿಯಾಗಲಿದೆ ಅಯೋಧ್ಯೆ. ಬಡತನ, ಹಸಿವು, ನಿರುದ್ಯೋಗ, ಬೆಲೆಏರಿಕೆ, ಮಹಿಳೆಯರ ಮೇಲೆ ಹೆಚ್ಚುತ್ತಲೇ ಇರುವ ಅಪರಾಧಗಳು, ರೈತರ ಆತ್ಮಹತ್ಯೆಗಳು, ದಲಿತರು ಆದಿವಾಸಿಗಳ ಮೇಲಿನ ದೌರ್ಜನ್ಯಗಳ ಪ್ರವಾಹವೇ ಏರಿ ಬಂದಿದ್ದರೇನಂತೆ. ಪ್ರಭು ಶ್ರೀರಾಮಚಂದ್ರನನ್ನು ಸುಪ್ರೀತಗೊಳಿಸಿದರೆ ಅದುವೇ ಸಾಕಲ್ಲವೇ ಇಹಕೂ ಪರಕೂ.
ಒಂದು ಅಂದಾಜಿನ ಪ್ರಕಾರ ನಿತ್ಯ 50 ಸಾವಿರದಿಂದ ಹತ್ತು ಲಕ್ಷ ಮಂದಿ ಯಾತ್ರಾರ್ಥಿಗಳನ್ನು ಬರಮಾಡಿಕೊಳ್ಳಲು ಆಯೋಧ್ಯೆ ಸಜ್ಜಾಗುತ್ತಿದೆ. 50 ಸಾವಿರ ಕೋಟಿ ರುಪಾಯಿಗಳ ಬಂಡವಾಳ ಹೂಡಿಕೆಯಾಗುತ್ತಿದೆ. ಅಗತ್ಯ ಮೂಲಸೌಲಭ್ಯಗಳು ನಿರ್ಮಾಣ ಭರದಿಂದ ನಡೆದಿದೆ. ವಿಮಾನನಿಲ್ದಾಣ, ರೇಲ್ವೆ ನಿಲ್ದಾಣ, ರಸ್ತೆಗಳು, ತ್ರಿತಾರಾ – ಪಂಚತಾರಾ ಹೋಟೆಲುಗಳು, ಹೊಸ ಟೌನ್ ಶಿಪ್ ಗಳು, ರಾಮಮಂದಿರದ ಐದು ಕಿ.ಮೀ. ಸುತ್ತಳತೆ ಈಗಲೇ ಗಿಜಿಗುಡತೊಡಗಿದೆ.
ಭವ್ಯ ರಾಮಮಂದಿರ ತಲೆ ಎತ್ತುತ್ತಿರುವ ಅಯೋಧ್ಯೆಯಲ್ಲಿ ಬಿಜೆಪಿಗೆ ಮುಖಭಂಗ ಉಂಟು ಮಾಡುವ ರಿಯಲ್ ಎಸ್ಟೇಟ್ ಹಗರಣ ಒಂದೂವರೆ ವರ್ಷದ ಹಿಂದೆ ಸಿಡಿದಿತ್ತು. ಅನಧಿಕೃತ ಕಾಲನಿಗಳ ನಿರ್ಮಾಣ ಮತ್ತು ಅಕ್ರಮ ನಿವೇಶನಗಳ ಮಾರಾಟ ಹಗರಣದ ನಲವತ್ತು ಮಂದಿ ಆಪಾದಿತರ ಪಟ್ಟಿಯಲ್ಲಿ ಬಿಜೆಪಿಯ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಮೇಯರ್ ಹೆಸರುಗಳೂ ಸೇರಿದ್ದವು.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿರುದ್ಧ ಅಕ್ರಮ ಭೂ ಹಸ್ತಾಂತರ ಹಗರಣದ ಆರೋಪಗಳು ಪ್ರತಿಪಕ್ಷಗಳಿಂದ ಕೇಳಿ ಬಂದಿದ್ದವು. ಈ ಆರೋಪಗಳನ್ನು ಟ್ರಸ್ಟ್ ಅಲ್ಲಗಳೆದಿತ್ತು. ಸ್ಥಳೀಯ ಶಾಸಕರು ಮತ್ತು ಅಯೋಧ್ಯೆಯ ಉನ್ನತ ಸರ್ಕಾರಿ ಅಧಿಕಾರಿಗಳ ಹತ್ತಿರದ ಸಂಬಂಧಿಕರು ಇಲ್ಲಿನ ಬಡ ದಲಿತರ ಜಮೀನು ಖರೀದಿ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ನಡುವೆ ಈ ಪ್ರಕರಣಗಳು ತಾರ್ಕಿಕ ಅಂತ್ಯ ಕಂಡಿದ್ದರೆ ಅವುಗಳ ವಿವರಗಳು ಮೀಡಿಯಾದಲ್ಲಿ ವರದಿಯಾಗಿಲ್ಲ.
ರಾಮಮಂದಿರ ನಿವೇಶನದಿಂದ ಕೆಲವೇ ಕಿಲೋಮೀಟರುಗಳ ಫಾಸಲೆಯ ಗ್ರಾಮಗಳ ದಲಿತರಿಂದ 21 ಬಿಘಾಗಳಷ್ಟು (52,000 ಚದರ ಗಜಗಳು) ಜಮೀನನ್ನು 1990ರ ದಶಕಗಳಲ್ಲಿ ಮಹೇಶ್ ಯೋಗಿ ವಿದ್ಯಾಪೀಠ ಟ್ರಸ್ಟ್ ಖರೀದಿಸಿತ್ತು. 2016ರಲ್ಲಿ ಸಂಬಂಧಪಟ್ಟ ಕಾಯಿದೆ ತಿದ್ದುಪಡಿಗೆ ಮುನ್ನ ದಲಿತರು ತಮ್ಮ ಜಮೀನನ್ನು ದಲಿತೇತರರಿಗೆ ಮುಕ್ತವಾಗಿ ಪರಭಾರೆ ಮಾಡುವಂತಿರಲಿಲ್ಲ. ಆದರೆ ಮಹೇಶ್ ಯೋಗಿ ಟ್ರಸ್ಟ್ ಹತ್ತು ಹನ್ನೆರಡು ಮಂದಿ ದಲಿತರಿಂದ ಜಮೀನು ಖರೀದಿಸಿತ್ತು. ತನ್ನ ದಲಿತ ಉದ್ಯೋಗಿ ರೊಂಘೈ ಹೆಸರಿನಲ್ಲಿ ನೋಂದಣಿ ಮಾಡಿಕೊಂಡಿತ್ತು. ಈ ಜಮೀನನ್ನು ರೊಂಘೈನಿಂದ 1996ರಲ್ಲಿ ದಾನವಾಗಿ ಬರೆಯಿಸಿಕೊಂಡಿತ್ತು. ಕೇವಲ 6.38 ಲಕ್ಷ ರುಪಾಯಿಗೆ ದಲಿತರಿಂದ ದಕ್ಕಿಸಿಕೊಂಡಿದ್ದ ಈ ಜಮೀನಿನ ಇಂದಿನ ಮಾರುಕಟ್ಟೆ ಬೆಲೆ ಕೋಟ್ಯಂತರ ರುಪಾಯಿಗಳು. ಮಹಾದೇವನೆಂಬ ದಲಿತನಿಂದ ಬರೆಯಿಸಿಕೊಂಡಿದ್ದ ಮೂರು ಬಿಘಾಗಳಷ್ಟು ಜಮೀನಿಗೆ ಟ್ರಸ್ಟ್ ಅಂದು ನೀಡಿದ್ದ ಮೊತ್ತ 1.02 ಲಕ್ಷ ರುಪಾಯಿ. ಉತ್ತರಪ್ರದೇಶದಲ್ಲಿ ಒಂದು ಎಕರೆ ಜಮೀನು ಅಂದಾಜು ಒಂದೂವರೆ ಎಕರೆ ಬಿಘಾಕ್ಕೆ ಸಮ. ಹೀಗೆ ದಲಿತರಿಂದ ಪಡೆದ ಜಮೀನನ್ನು ಮಹೇಶ್ ಯೋಗಿ ಟ್ರಸ್ಟ್ ತನಗೆ ಬೇಕಾದವರಿಗೆ ಮಾರಾಟ ಮಾಡಲಾರಂಭಿಸಿತು. ಅನೇಕ ಹಿರಿಯ ಅಧಿಕಾರಿಗಳು ಮತ್ತು ಸಂಬಂಧಿಕರು ಈ ಜಮೀನನ್ನು ಖರೀದಿಸಿರುವುದು ವರದಿಯಾಗಿದೆ.
ಅಯೋಧ್ಯೆಯ ಭೂ ಮಾಫಿಯಾ ಕುರಿತು ವಿಶೇಷ ಕಾರ್ಯದಳದಿಂದ ತನಿಖೆ ಮಾಡಿಸುವಂತೆ ಫೈಜಾಬಾದ್ ಬಿಜೆಪಿ ಸಂಸದ ಲಲ್ಲೂ ಸಿಂಗ್ ಆಗ್ರಹಪಡಿಸಿದ್ದರು. ಸರ್ಕಾರಿ ಜಮೀನು ಮತ್ತು ನದೀದಂಡೆಯ ಮೇಲೆ ಕೂಡ ಅಕ್ರಮ ನಿವೇಶನಗಳನ್ನು ಮಾಡಿ ಮಾರಾಟ ಮಾಡುವಷ್ಟು ಶಕ್ತಿಶಾಲಿಯಾಗಿದೆ ಈ ಮಾಫಿಯಾ ಎಂಬುದು ಅವರ ಆಪಾದನೆಯಾಗಿತ್ತು.
ಈ ಆಪಾದನೆಗಳ ಮೈಲಿಗೆಯನ್ನು ಆದಷ್ಟು ಬೇಗ ತೊಳೆದುಕೊಳ್ಳಬೇಕಿದೆ. ಅಪ್ಪಟ ವ್ಯಾಪಾರಕ್ಕೆ ರಾಜಕಾರಣಕ್ಕೆ ಧರ್ಮದ ದುರ್ಬಳಕೆಯನ್ನು ತಪ್ಪಿಸಬೇಕಿದೆ.
