ಈ ದಿನ ಸಂಪಾದಕೀಯ | ನಿಜಕ್ಕೂ ಮೋದಿಯವರು ಕುರ್ಚಿ ಉಳಿಸಿಕೊಳ್ಳಲು ಮಂಡಿಸಿದ ಬಜೆಟ್ ಇದು

Date:

Advertisements
ಬಜೆಟ್ಟಿನಲ್ಲಿ ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳ ಬೇಡಿಕೆಗಳಿಗೆ ಆದ್ಯತೆ ನೀಡಿ ನಾಯ್ಡು- ಕುಮಾರ್ ಅವರನ್ನು ಖುಶಿ ಮಾಡಲಾಗಿದೆ. ಆಂಧ್ರ-ಬಿಹಾರಕ್ಕೆ ಭಾರೀ ಮೊತ್ತದ ನೆರವು ನೀಡಲಿ. ಆದರೆ, ಬಿಜೆಪಿಗೆ ಹೆಚ್ಚು ಸೀಟುಗಳನ್ನು ಗೆಲ್ಲಿಸಿ ಕೊಡದಿರುವ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮಣಿಪುರ ಏನು ತಪ್ಪು ಮಾಡಿದ್ದವು?

 

ನರೆಂದ್ರ ಮೋದಿಯವರ ಮೂರನೆಯ ಅಧಿಕಾರಾವಧಿಯ ಮೊದಲ ಬಜೆಟ್ಟು ದೇಶವನ್ನು ಕಾಡುತ್ತಿರುವ ಮೂಲಭೂತ ಸಮಸ್ಯೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಎದುರಿಸದೆ ಪಲಾಯನ ಮಾಡಿದೆ. ಕಳೆದ ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ಬಂಡವಾಳ ಹೂಡಿಕೆ, ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಗ್ರಾಹಕ ಸರಕು ಸರಂಜಾಮುಗಳ ಬಳಕೆ ನೆಲ ಕಚ್ಚಿದೆ. ಇವುಗಳನ್ನು ಮೇಲೆತ್ತಿ ಅಭಿವೃದ್ಧಿಗೆ, ಜನಸಾಮಾನ್ಯರ ಆದಾಯ ವೃದ್ಧಿಗೆ ಪೂರಕ ಎನಿಸುವ ಕ್ರಮಗಳ ಪ್ರಸ್ತಾಪವೇ ಇಲ್ಲ. ಹಾಲಿ ಬಜೆಟ್ಟಿನಲ್ಲಿ ಮೋದಿಯವರು ತಮ್ಮ ಕುರ್ಚಿ ಉರುಳದಂತೆ ಕಾಪಾಡಿಕೊಳ್ಳಲು ಆದ್ಯತೆ ನೀಡಿದ್ದಾರೆ. ಬೆಲೆ ಏರಿಕೆ, ಹಣದುಬ್ಬರಗಳು ಜನಕೋಟಿಯನ್ನು ಹರಿದು ಕಬಳಿಸುತ್ತಿವೆ.

ಇಂದು ಬಿಜೆಪಿಗೆ ಸ್ವಂತ ಬಹುಮತ ಇಲ್ಲ. ಬದಲಾಗಿರುವ ಈ ಜನಾದೇಶವು ಈಗಾಗಲೇ ನಿರೀಕ್ಷಿಸಿದ್ದಂತೆ ಬಜೆಟ್ ಮೇಲೆಯೂ ಪರಿಣಾಮ ಬೀರಿದೆ. ಮೋದಿ ಸರ್ಕಾರ ಚಂದ್ರಬಾಬು ನಾಯ್ಡು ಅವರ ತೆಲುಗುದೇಶಂ ಮತ್ತು ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳದ ಊರುಗೋಲುಗಳ ಮೇಲೆ ನಿಂತಿದೆ. ಈ ಊರುಗೋಲುಗಳು ಕೈಕೊಟ್ಟ ದಿನ ಅವರ ಪ್ರಧಾನಿ ಹುದ್ದೆಗೆ ಸಂಚಕಾರ ಖಚಿತ. ಬಜೆಟ್ಟಿನಲ್ಲಿ ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳ ಬೇಡಿಕೆಗಳಿಗೆ ಆದ್ಯತೆ ನೀಡಿ ನಾಯ್ಡು- ಕುಮಾರ್ ಅವರನ್ನು ಖುಷಿ ಮಾಡಲಾಗಿದೆ. ಆಂಧ್ರ—ಬಿಹಾರಕ್ಕೆ ಭಾರೀ ಮೊತ್ತದ ನೆರವು ನೀಡಲಿ. ಆದರೆ ಬಿಜೆಪಿಗೆ ಹೆಚ್ಚು ಸೀಟುಗಳನ್ನು ಗೆಲ್ಲಿಸಿ ಕೊಡದಿರುವ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮಣಿಪುರ ಏನು ತಪ್ಪು ಮಾಡಿದ್ದವು. ಬಿಜೆಪಿಯ ಅಭ್ಯರ್ಥಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಗೆಲ್ಲಿಸಿರುವ ಕರ್ನಾಟಕ, ಒಡಿಶಾ ರಾಜ್ಯಗಳ ಕಣ್ಣುಗಳಿಗೇಕೆ ಸುಣ್ಣ ಇಟ್ಟಿದ್ದೀರಿ? ಬಿಜೆಪಿಯ ಅರ್ಧಕ್ಕರ್ಧ ಉಮೇದುವಾರರನ್ನು ಸೋಲಿಸಿರುವ ಉತ್ತರಪ್ರದೇಶ ಈಗಲೂ ಬಿಜೆಪಿ ಆಡಳಿತದಲ್ಲಿದೆ. ಈ ರಾಜ್ಯವೂ ತನಗೆ ಅನ್ಯಾಯವಾಗಿದೆ ಎಂದು ದೂರಿದೆಯಲ್ಲ ಯಾಕೆ?

ವಿತ್ತೀಯ ಕೊರತೆಯ ಅಂತರವನ್ನು ತುಂಬುವ ಕ್ಷೀಣ ಪ್ರಯತ್ನ ಬಜೆಟ್ಟಿನಲ್ಲಿ ಕಂಡಿದೆ. ಶೇ.5.6ರಿಂದ ಶೇ.4.9ಕ್ಕೆ ಇಳಿಸುವ ಪ್ರಸ್ತಾಪವಿದೆ. ಹಿಂದಿನ ಹತ್ತು ವರ್ಷಗಳಲ್ಲಿ ವಿತ್ತೀಯ ಕೊರತೆಯ ಸಮಸ್ಯೆಯನ್ನು ಸಮರ್ಥವಾಗಿ ನಿರ್ವಹಿಸಲಾಗಿಲ್ಲ. ಏರುಮುಖದ ವಿತ್ತೀಯ ಕೊರತೆಯು ದೇಶದ ಬೆನ್ನಿನ ಮೇಲೆ ಸಾಲಗಳ ಬೆಟ್ಟಗಳ ಹೊರೆಯನ್ನೂ ಹೆಚ್ಚಿಸುತ್ತದೆ.

Advertisements

ವರ್ಷಂಪ್ರತಿ ದೇಶದಲ್ಲಿ 78.5 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಅತ್ಯಗತ್ಯ. ಈ ಗುರಿಯನ್ನು ಮುಟ್ಟಬೇಕಿದ್ದರೆ  ಖಾಸಗಿ ಕ್ಷೇತ್ರ ಹೊಸ ಹೂಡಿಕೆಗಳನ್ನು ಮಾಡಬೇಕಿದೆ. ಈ ದಿಸೆಯಲ್ಲಿ ಖಾಸಗಿ ಕ್ಷೇತ್ರ ಮನಸ್ಸು ಮಾಡುತ್ತಿಲ್ಲ ಎಂದು ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯು ಹೇಳಿದೆ. ಬಂಡವಾಳ ಹೂಡಿಕೆ, ಉದ್ಯೋಗಾವಕಾಶಗಳ ಸೃಷ್ಟಿ, ಆದಾಯ ಉತ್ಪನ್ನ ಹಾಗೂ ಗ್ರಾಹಕ ಸರಕುಗಳ ಬಳಕೆಯು ಪರಸ್ಪರ ಅವಲಂಬಿಸಿರುವ ಒಂದು ಆವರ್ತ. ಒಂದು ಕೊಂಡಿ ಕಡಿದರೂ ಮತ್ತೊಂದು ಮುಂದೆ ಸಾಗಲಾರದು. ಹೀಗಾಗಿ ಕಾರ್ಪೊರೇಟುಗಳು ಹೊಸ ಬಂಡವಾಳ ಹೂಡಲು ಹಿಂದೇಟು ಹಾಕುತ್ತಿರುವ ಮೂಲ ಸಮಸ್ಯೆಯನ್ನು ಈ ಬಜೆಟ್ಟಿನಲ್ಲಿ ಮುಖಾಮುಖಿಯಾಗಿ ಎದುರಿಸುವಲ್ಲಿ ಮೋದಿ ಸರ್ಕಾರ ಸೋತಿದೆ. ಕಾರ್ಪೊರೇಟ್ ಕಂಪನಿಗಳ ಪೈಕಿ ತನ್ನ ಅಚ್ಚುಮೆಚ್ಚಿನ ಒಂದೆರಡಕ್ಕೆ ಮಾತ್ರವೇ ಮೋದಿ ಸರ್ಕಾರ ಮಣೆ ಹಾಕಿರುವುದು ನಿಚ್ಚಳ. ಹೂಡಿಕೆ ಹಿಂಜರಿತದ ಹಿಂದೆ ಈ ಭಾರೀ ತಾರತಮ್ಯವು ದುಷ್ಪರಿಣಾಮ ಬೀರಿರುವ ಸಾಧ್ಯತೆ ಇದೆ.

ಹಿಂದೂಸ್ತಾನದ ಸಮಸ್ತ ಗರೀಬ ಆದಿವಾಸಿ ಹಿಂದುಳಿದ ಹಾಗೂ ಪರಿಶಿಷ್ಟ ಯುವಜನರಿಗೆ ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯದ ಕೈಗಾರಿಕೆಗಳಲ್ಲಿ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ಗೆ ಅವಕಾಶ ಕಲ್ಪಿಸಲಾಗುವುದು. ಒಂದು ವರ್ಷಕ್ಕೆ ಒಂದು ಲಕ್ಷ ರುಪಾಯಿ ವೇತನ ನೀಡಲಾಗುವುದು. ಅವರ ಕೆಲಸ ತೃಪ್ತಿಕರ ಎನಿಸಿದರೆ ಅವರಿಗೆ ಅಲ್ಲಿಯೇ ಉದ್ಯೋಗ ದೊರೆಯಲಿದೆ ಎಂಬುದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಭರವಸೆಯಾಗಿತ್ತು. ಈ ಭರವಸೆಯನ್ನು ಬಿಜೆಪಿ ಅಪಹರಿಸಿ ಬಜೆಟ್ಟಿನಲ್ಲಿ ಸೇರಿಸಿದೆ. 500 ಟಾಪ್ ಕಂಪನಿಗಳಲ್ಲಿ ಐದು ವರ್ಷಗಳ ಅವಧಿಯಲ್ಲಿ ಒಂದು ಕೋಟಿ ಯುವಜನರಿಗೆ ತಲಾ 12 ತಿಂಗಳ ಕಾಲದ ಅಪ್ರೆಂಟಿಸ್‌ಶಿಪ್ ನೀಡಲಾಗುವುದು. ಅವರಿಗೆ ತಿಂಗಳಿಗೆ ಐದು ಸಾವಿರ ರುಪಾಯಿ ಪಾವತಿ ಮಾಡಲಾಗುತ್ತದೆ ಎಂದು ಹಣಕಾಸು ಸಚಿವೆ ಬಜೆಟ್ ಭಾಷಣದಲ್ಲಿ ಪ್ರಕಟಿಸಿದರು.

ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಆಕಾಶದೆತ್ತರಕ್ಕೆ ಬೆಳೆದಿದೆ. ಬಡ ಯುವಜನರ ಕೈಗೆ ಉಗ್ರ ಹಿಂದುತ್ವದ ಕೇಸರಿ ಬಾವುಟ ಕೊಟ್ಟು, ಅವರ ತಲೆಗೆ ಕೇಸರಿ ಅರಿವೆ ಸುತ್ತಿ ಹಾದಿಬೀದಿಗಳಲ್ಲಿ ಪುಂಡಾಟಕ್ಕೆ ಹಚ್ಚಿ, ಅಲ್ಪಸಂಖ್ಯಾತರ ಮೇಲೆ ಛೂ ಬಿಡುವ ಕ್ರೌರ್ಯವನ್ನು ಇನ್ನಾದರೂ ನಿಲ್ಲಿಸಬೇಕು.

ಹಾಲಿ ಬಜೆಟ್ಟಿನಲ್ಲಿ ಕೂಡ ನಿರುದ್ಯೋಗ ಸಮಸ್ಯೆ ನಿವಾರಣೆಯ ಮಾತೇ ಇಲ್ಲ. ಹಣಕಾಸು ಸಚಿವೆ ನೀಡಿರುವ ಭರವಸೆಯು ಸಮುದ್ರದಷ್ಟು ದೊಡ್ಡ ಸಮಸ್ಯೆಗೆ ಹನಿಯಷ್ಟು ತೇಪೆ ಹಾಕಿದಂತೆ ಅಷ್ಟೇ. ಕಾಂಗ್ರೆಸ್ಸಿನಿಂದ ಕದ್ದಿದ್ದರೂ ಪರವಾಗಿಲ್ಲ, ಈ ಬಜೆಟ್ ಭರವಸೆಯನ್ನು ಮೋದಿ ಸರ್ಕಾರ ಈಡೇರಿಸಬೇಕು. ಈ ಹಿಂದೆ ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ನೀಡುವುದಾಗಿ ಸಾರಿದ್ದ ಮೋದಿಯವರು ಈ ಮಾತಿಗೆ ತಪ್ಪಿದ್ದರು. ಪಕೋಡ ಕರಿಯುವುದು, ಚಹಾ ಮಾರುವುದು ಕೂಡ ಉದ್ಯೋಗವೇ ಎಂದು ಲಜ್ಜೆಯಿಲ್ಲದೆ ಸಮರ್ಥಿಸಿಕೊಂಡಿದ್ದರು. ವರ್ಷಕ್ಕೆ 20 ಲಕ್ಷ ಯುವಜನರಿಗೆ ನೀಡುವ ಈ ಅಪ್ರೆಂಟಿಸ್‌ಶಿಪ್ ಯಾವುದೇ ಮೋಸ ವಂಚನೆಯಿಲ್ಲದೆ ನ್ಯಾಯಯುತವಾಗಿ ಜಾರಿಯಾಗಲಿ.

ಸರ್ಕಾರ ತನ್ನ ಹಣಕಾಸಿನ ಆರೋಗ್ಯವನ್ನು ಸಂಸತ್ತಿಗೆ ಮತ್ತು ಸಂಸತ್ತಿನ ಮೂಲಕ ಇಡೀ ದೇಶಕ್ಕೆ ಸಾರುವ ಕವಾಯತನ್ನು ಬಜೆಟ್ ಅಥವಾ ಆಯವ್ಯಯ ಮುಂಗಡಪತ್ರ ಎಂದು ಕರೆಯಬಹುದು. ಬಜೆಟ್ಟು ಸಾಮಾನ್ಯವಾಗಿ ಒಂದು ಹಣಕಾಸು ವರ್ಷದ ಅಂತ್ಯ ಮತ್ತು ಮತ್ತೊಂದು ಹಣಕಾಸು ವರ್ಷದ ಆರಂಭದಲ್ಲಿ ಮಂಡನೆಯಾಗುತ್ತದೆ. ಹೀಗಾಗಿ ಕಳೆದ ವರ್ಷ ಸರ್ಕಾರ ಎಷ್ಟು ಹಣವನ್ನು ರೂಢಿಸಿತು ಮತ್ತು ಅದನ್ನು ಹೇಗೆಲ್ಲ ಖರ್ಚು ಮಾಡಿತು, ಆದಾಯ ಮತ್ತು ವೆಚ್ಚದ ನಡುವಣ ಅಂತರವನ್ನು ತುಂಬಲು ಎಷ್ಟು ಸಾಲ ಮಾಡಿತು, ಮುಂಬರುವ ಹಣಕಾಸು ವರ್ಷದಲ್ಲಿ ಎಷ್ಟು ಸಂಪಾದಿಸಲಿದೆ (ಪ್ರಸಕ್ತ ಬಜೆಟ್ಟಿನಲ್ಲಿ ಹಾಲಿ ಹಣಕಾಸು ವರ್ಷ), ಈ ಸಂಪಾದನೆಯಲ್ಲಿ ಎಷ್ಟನ್ನು ಯಾವ್ಯಾವ ಬಾಬ್ತುಗಳ ಮೇಲೆ ವಿನಿಯೋಗಿಸಲಿದೆ, ಅಂತರವನ್ನು ತುಂಬಲು ಎಷ್ಟು ಸಾಲ ಮಾಡಲಿದೆ ಎಂಬುದನ್ನು ವಿವರಿಸುತ್ತದೆ.

ಚುನಾವಣೆಯ ಈ ವರ್ಷದ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ನಂತರ ಇದೀಗ ಪೂರ್ಣಪ್ರಮಾಣದ ಬಜೆಟ್ ಮಂಡಿಸಲಾಗಿದೆ. ಮುಂದಿನ ಆರು ತಿಂಗಳಲ್ಲಿ ಮತ್ತೊಂದು ಪೂರ್ಣಪ್ರಮಾಣದ ಹೊಸ ಬಜೆಟ್ ಮಂಡನೆಯಾಗಬೇಕಿದೆ. ಈ ಅವಧಿಯಲ್ಲಿ ಮೋದಿ ಸರ್ಕಾರ ತನ್ನ ತಪ್ಪು ನಡೆಗಳನ್ನು ಅರಿತುಕೊಂಡು, ಕೊರತೆಗಳನ್ನು ತುಂಬಿಕೊಂಡು ಜನಪರ ಆಗಬೇಕು. ಜನತೆಯ ಆಶೋತ್ತರಗಳನ್ನು ದೀರ್ಘಕಾಲ ಹತ್ತಿಕ್ಕುವುದು, ಅವರನ್ನು ತಪ್ಪುದಾರಿಗೆ ಎಳೆದು ಅವರ ಕಣ್ಣಿಗೆ ಮಣ್ಣೆರಚುವ ತಂತ್ರಗಳು ಹೆಚ್ಚು ದಿನ ನಡೆಯುವುದಿಲ್ಲ. 2024ರ ಲೋಕಸಭಾ ಚುನಾವಣೆ ಫಲಿತಾಂಶಗಳೇ ಈ ಮಾತಿಗೆ ಸಾಕ್ಷಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X