ಈ ದಿನ ಸಂಪಾದಕೀಯ | ಪುಟ್ಟ ರಾಷ್ಟ್ರಗಳಿಂದ ಇಸ್ರೇಲ್, ರಷ್ಯಾ, ಅಮೆರಿಕ ಕಲಿಯುವುದು ಬಹಳಷ್ಟಿದೆ!

Date:

Advertisements
ರಷ್ಯಾ, ಇಸ್ರೇಲ್, ಅಮೆರಿಕ, ಚೀನಾ ರೀತಿಯ ರಾಷ್ಟ್ರಗಳು ತಾವೇ ಬಲಿಷ್ಠರು, ಅಪ್ರತಿಮರು, ಎಲ್ಲವೂ ನಮ್ಮದೇ ಎಂದು ಬೀಗುತ್ತಿವೆ. ಈ ಪ್ರಬಲ ರಾಷ್ಟ್ರಗಳು ಯುದ್ಧ, ದಾಳಿ, ಹಲ್ಲೆ, ಮಾರಣಹೋಮಗಳ ಹಾದಿಯಲ್ಲಿ ಕ್ತ ಪಿಪಾಸುಗಳಾಗಿವೆ. ಆದರೆ, ತಜಿಕಿಸ್ತಾನ ಮತ್ತು ಕಿರ್ಗಿಸ್ತಾನ; ನಾಗೋರ್ನೊ-ಕರಾಬಖ್ ಪುಟ್ಟ ರಾಷ್ಟ್ರಗಳಿಂದ ಕಲಿಯಬೇಕಾದ ಪಾಠ ಬಹಳಷ್ಟಿದೆ. ಈ ಪಾಠವು ವಿಶ್ವಗುರು ಭಾರತಕ್ಕೂ ಅಗತ್ಯವಿದೆ.

ಡೊನಾಲ್ಡ್‌ ಟ್ರಂಪ್ ನೇತೃತ್ವದ ಅಮೆರಿಕ ಸೇರಿದಂತೆ ಜಗತ್ತಿನ ಪ್ರಮುಖ ಶಕ್ತಿಗಳು ರಷ್ಯಾ – ಉಕ್ರೇನ್ ಮತ್ತು ಇಸ್ರೇಲ್ – ಹಮಾಸ್ ನಡುವಿನ ಎರಡು ಯುದ್ಧಗಳ ಬಗ್ಗೆ ಮಾತನಾಡುತ್ತಿವೆ. ಚಿಂತಿಸುತ್ತಿವೆ. ಹಮಾಸ್‌ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಇಸ್ರೇಲ್‌ಗೆ ಸೂಚಿಸಿದ್ದ ಟ್ರಂಪ್, ಈಗ ಪ್ಯಾಲೆಸ್ತೀನ್‌ಅನ್ನು ತಮ್ಮ ಪ್ರವಾಸೋದ್ಯಮದ ರಿಯಲ್ ಎಸ್ಟೇಟ್ ಉದ್ಯಮ ಮಾಡಿಕೊಳ್ಳಲು ಹವಣಿಸುತ್ತಿದ್ದಾರೆ. ಉಕ್ರೇನ್‌ಗೆ ತಾನು ಹೇಳಿದಂತೆ ಕೇಳಬೇಕೆಂದು ಬೆದರಿಕೆ ಹಾಕುತ್ತಿದ್ದಾರೆ. ಎರಡು ಸಂತ್ರಸ್ತ ರಾಷ್ಟ್ರಗಳು ಅಮೆರಿಕದಲ್ಲಿ ಟ್ರಂಪ್‌ ಅಧಿಕಾರಕ್ಕೆ ಬಂದ ಬಳಿಕ, ಮತ್ತಷ್ಟು ಬಿಕ್ಕಟ್ಟನ್ನು ಎದುರಿಸುತ್ತಿವೆ.

ಉಕ್ರೇನ್ ಮತ್ತು ಪ್ಯಾಲೆಸ್ತೀನ್‌ನಲ್ಲಿ ನಿಜವಾಗಿಯೂ ಶಾಂತಿ ನೆಲೆಸುವಂತೆ ಮಾಡಲು ಯಾವುದೇ ನಿರ್ದಿಷ್ಟ ಅಥವಾ ಗಂಭೀರ ಕ್ರಮ, ಚಿಂತನೆಗಳು ನಡೆಯುತ್ತಿಲ್ಲ. ಪ್ಯಾಲೆಸ್ತೀನ್ ಮೇಲಿನ ಇಸ್ರೇಲ್ ದಾಳಿ ಮತ್ತು ಉಕ್ರೇನ್ ಮೇಲಿನ ರಷ್ಯಾ ದಾಳಿಯ ಬಗ್ಗೆ ಇಡೀ ಜಗತ್ತು ಈಗ ಮೌನಕ್ಕೆ ಜಾರುತ್ತಿದೆ. ಗಾಜಾದಲ್ಲಿ ಇಸ್ರೇಲ್ ರಕ್ತದೋಕುಳಿ ನಡೆಸುತ್ತಿದೆ. ಈ ನಡುವೆ, ಇರಾನ್ ಮೇಲೂ ಇಸ್ರೇಲ್ ದಾಳಿಗೆ ಸಂಚು ಹೆಣೆಯುತ್ತಿದೆ. ಅದಕ್ಕೆ ಅಮೆರಿಕದ ಕುಮ್ಮಕ್ಕು ಕೂಡ ಇದೆ ಎಂಬ ಆರೋಪಗಳಿವೆ. ಇತ್ತೀಚೆಗೆ ಸೋರಿಕೆಯಾದ ಇರಾನ್ ಮೇಲಿನ ದಾಳಿ ಕುರಿತಾದ ಮಾಹಿತಿಯು ಯುದ್ಧಕ್ಕೆ ಮಾನಸಿಕ ಒಪ್ಪಿಗೆ ಪಡೆಯುವ ತಂತ್ರವೆಂದು ಬಣ್ಣಿಸಲಾಗುತ್ತಿದೆ.

ರಷ್ಯಾ, ಚೀನಾ, ಅಮೆರಿಕ, ಟರ್ಕಿ ಹಾಗೂ ಇಸ್ರೇಲ್ ತಮ್ಮ ಭೌಗೋಳಿಕ ಪ್ರದೇಶವನ್ನು ವಿಸ್ತರಿಸಲು ಹವಣಿಸುತ್ತಿವೆ. ಈ ಪ್ರಮುಖ ಐದು ರಾಷ್ಟ್ರಗಳು ಇತಿಹಾಸದುದ್ದಕ್ಕೂ ನೆರೆಯ ರಾಷ್ಟ್ರಗಳ ಮೇಲೆ ದಾಳಿ ಮಾಡುವುದು, ಅತಿಕ್ರಮಿಸುವುದನ್ನು ಮಾಡುತ್ತಲೇ ಬಂದಿವೆ. ಅದರಲ್ಲಿ, ಅಮೆರಿಕವು ಮಾನಸಿಕವಾಗಿ ಇಡೀ ಜಗತ್ತಿನ ಅರ್ಧ ಭಾಗವು ತನ್ನ ಅಧೀನದಲ್ಲಿರಬೇಕೆಂದು ಬಯಸುತ್ತಿದೆ. ಜನಾಂಗೀಯತೆ, ಧಾರ್ಮಿಕ-ವರ್ಗ-ವರ್ಣದ ಗುರುತು ಹಾಗೂ ಸ್ಥಳೀಯರು-ಪರಕೀಯರು ಎಂಬ ಭಾವನೆಯನ್ನು ಬಿತ್ತುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವಿವಾದಗಳನ್ನು ಪರಿಹರಿಸುವುದು ಸುಲಭವಾಗಿಲ್ಲ. ಆದಾಗ್ಯೂ, ನಾಲ್ಕು ಪುಟ್ಟ ರಾಷ್ಟ್ರಗಳು ಎಲ್ಲವನ್ನೂ ಸಾಧ್ಯವಾಗಿಸುವ ರೀತಿಯಲ್ಲಿ ಮುನ್ನಡೆಯುತ್ತಿವೆ. ಜನತ್ತಿಗೆ ತಮ್ಮದೇ ಮಾದರಿಯನ್ನು ಮುಂದಿಟ್ಟಿವೆ.

Advertisements

ತಜಿಕಿಸ್ತಾನ ಮತ್ತು ಕಿರ್ಗಿಸ್ತಾನ –ಈ ಎರಡು ಪುಟ್ಟ ದೇಶಗಳು ಸೋವಿಯತ್ ಒಕ್ಕೂಟದ ವಿಘಟನೆಯ ನಂತರ 1991ರಲ್ಲಿ ಸ್ವಾತಂತ್ರ್ಯ ಸಾಧಿಸಿದ ಎರಡು ದೇಶಗಳು. ಈ ಎರಡೂ ರಾಷ್ಟ್ರಗಳು 1,068 ಕಿಮೀ ಉದ್ದದ ವಿವಾದಿತ ಗಡಿಯನ್ನು ಹಂಚಿಕೊಂಡಿವೆ. ತಜಿಕಿಸ್ತಾನ ಮತ್ತು ಕಿರ್ಗಿಸ್ತಾನವನ್ನು 19ನೇ ಶತಮಾನದಲ್ಲಿ ರಷ್ಯಾ ಸಾಮ್ರಾಜ್ಯವು ಕೋಕಂಡ್ ಖಾನೇಟ್‌ನಿಂದ ವಶಪಡಿಸಿಕೊಂಡಿತು. ಬಳಿಕ, ಅವುಗಳನ್ನು ಸೋವಿಯತ್ ಒಕ್ಕೂಟದ ಭಾಗ (‘ಕಾನ್‌ಕ್ಲೇವ್‌’) ಮಾಡಿಕೊಂಡಿತು. ಸೋವಿಯತ್‌ನ ಸೈದ್ಧಾಂತಿಕ ನೀತಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಹೇರುವ ಮೂಲಕ ಜನಾಂಗೀಯ ಸಮಸ್ಯೆಗಳನ್ನು ನಿರ್ಲಕ್ಷಿಸಿತು. ಆಡಳಿತಾತ್ಮಕ ಗಡಿಗಳನ್ನು ಮಾತ್ರವೇ ರಚಿಸಿತು.

ಅಂದಿನಿಂದ, ಎರಡೂ ರಾಷ್ಟ್ರಗಳು ರಷ್ಯಾದೊಂದಿಗೆ ನಿಕಟ ಸಂಬಂಧವನ್ನು ಉಳಿಸಿಕೊಂಡಿವೆ. ಶಾಂಘೈ ಸಹಕಾರ ಸಂಸ್ಥೆ (SCO) ಮತ್ತು ರಷ್ಯಾ ನೇತೃತ್ವದ ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆಯ (CSTO) ಭಾಗವಾಗಿವೆ. ಆದರೆ, ಈ ಒಕ್ಕೂಟಗಳು ಈ ರಾಷ್ಟ್ರಗಳ ಗಡಿ ಘರ್ಷಣೆಗಳನ್ನು ಎಂದಿಗೂ ತಡೆಯಲಿಲ್ಲ. 2022ರಲ್ಲಿ ಎಸ್‌ಸಿಒ ಶೃಂಗಸಭೆಯ ಸಮಯದಲ್ಲಿಯೂ ಸಹ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಭುಗಿಲೆದ್ದಿತ್ತು. ಕದನ ವಿರಾಮಗಳ ಕುರಿತಾಗಿ ಪದೇ ಪದೇ ಮಾತುಕತೆಗಳು ನಡೆದವು. ಅಂತಿಮವಾಗಿ, ಶಾಂತಿಯ ಮೂಲಕ ಮಾತ್ರವೇ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬುದನ್ನು ಎರಡೂ ರಾಷ್ಟ್ರಗಳು ಅರಿತುಕೊಂಡವು.

ಉಭಯ ರಾಷ್ಟ್ರಗಳು ಸ್ವಾತಂತ್ರ್ಯಗೊಂಡ 31 ವರ್ಷಗಳ ಬಳಿಕ, 2022ರ ಮಾರ್ಚ್‌ 13ರಂದು ಕಿರ್ಗಿಸ್ತಾನದ ಅಧ್ಯಕ್ಷ ಸದಿರ್ ಜಪರೋವ್ ಮತ್ತು ತಜಿಕಿಸ್ತಾನದ ಅಧ್ಯಕ್ಷ ಎಮೋಮಾಲಿ ರಹಮಾನ್ ಅವರು ಗಡಿ ನಿರ್ಣಯ ಮತ್ತು ಗಡಿ ಗುರುತಿಸುವಿಕೆ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದವು ನೀರು, ಇಂಧನ, ಮೂಲಸೌಕರ್ಯ, ರಸ್ತೆ ಹಾಗೂ ಸಾರಿಗೆಯಂತಹ ಪ್ರಮುಖ ಸಮಸ್ಯೆಗಳನ್ನು ಸಹ ಒಳಗೊಂಡಿತ್ತು. ಈ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಿ, ಜಾರಿಗೊಳಿಸಿತು. ಸಹಯೋಗ ಮತ್ತು ಸಂಪರ್ಕವನ್ನು ಹೆಚ್ಚಿಸಲು ಎರಡು ಚೆಕ್‌ಪೋಸ್ಟ್‌ಗಳನ್ನು ಸಹ ಉದ್ಘಾಟಿಸಿದರು. ಜೊತೆಗೆ, ಭೂ ವಿನಿಮಯವನ್ನು ಸೌಹಾರ್ದ ಮತ್ತು ರಚನಾತ್ಮಕವಾಗಿ ಮಾಡಿಕೊಂಡರು. ಗಡಿ ವಿವಾದದಿಂದ ಮುಕ್ತರಾದರು.

ಅಂತೆಯೇ, ನಾಗೋರ್ನೊ-ಕರಾಬಖ್ ಗಡಿವಿವಾದವೂ ಅಂತ್ಯಗೊಂಡಿದೆ. ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ರಾಷ್ಟ್ರಗಳ ನಡುವೆ ನಾಗೋರ್ನೊ-ಕರಾಬಖ್ ಪ್ರದೇಶಗಳ ವಿಚಾರವಾಗಿ ವಿವಾದ, ಯುದ್ಧ, ದಾಳಿಗಳು ನಡೆದಿವೆ. ಇದು ಅಂತಾರಾಷ್ಟ್ರೀಯ ಪ್ರಾದೇಶಿಕ ಭೌಗೋಳಿಕ ರಾಜಕೀಯ ಪೈಪೋಟಿಗೆ ಕಾರಣವಾಗಿತ್ತು.

ಈ ವರದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಜಾತಿ ವಿನಾಶ: ಆರ್‌ಎಸ್‌ಎಸ್ ಬೂಟಾಟಿಕೆಗೆ ಮಿತಿ ಇಲ್ಲವೇ?

ಉಭಯ ರಾಷ್ಟ್ರಗಳ ನಡುವಿನ ಸಂಘರ್ಷವು 1988ರಲ್ಲಿ ಪ್ರಾರಂಭವಾಗಿ, 1990ರ ದಶಕದಲ್ಲಿ ಯುದ್ಧದ ಹಾದಿಗೆ ಜಾರಿತ್ತು. ಅರ್ಮೇನಿಯಾ ತನ್ನ ಭದ್ರತೆ ಮತ್ತು ಸಾರ್ವಭೌಮತ್ವಕ್ಕಾಗಿ ರಷ್ಯಾ ಮೇಲೆ ಅವಲಂಬಿತವಾಗಿದೆ. ಮಾತ್ರವಲ್ಲದೆ, ಸಿಎಸ್‌ಟಿಒದ ಭಾಗವೂ ಆಗಿದೆ. ಮತ್ತೊಂದೆಡೆ, ಟರ್ಕಿಯ ಬೆಂಬಲ ಮತ್ತು ತನ್ನದೇ ಆದ ತೈಲ ಸಂಪನ್ಮೂಲಗಳಿಂದ ಅಜೆರ್ಬೈಜಾನ್ ಧೈರ್ಯವಾಗಿ ಹೋರಾಡುತ್ತಿತ್ತು. ಆದಾಗ್ಯೂ, 1994ರಲ್ಲಿ ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ನಡೆದ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಯುದ್ಧವು ಕೊನೆಗೊಂಡಿತು.

ಆ ಒಪ್ಪಂದವು ಸುಮಾರು 20-25 ವರ್ಷಗಳ ಕಾಲ ಸ್ಥಿರತೆಗೆ ದಾರಿ ಮಾಡಿಕೊಟ್ಟಿತು. ಆದರೆ, ಉಭಯ ರಾಷ್ಟ್ರಗಳಲ್ಲಿದ್ದ ಬೇಗುದಿಯು 2020ರಲ್ಲಿ ಸ್ಪೋಟಗೊಂಡಿತು. ಎರಡನೇ ನಾಗೋರ್ನೊ-ಕರಾಬಖ್ ಘರ್ಷಣೆ ಆರಂಭವಾಯಿತು. ಪರಿಣಾಮ, ಅಜೆರ್ಬೈಜಾನ್‌ ಗಮನಾರ್ಹ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಿತು. ಇದೇ ಸಮಯದಲ್ಲಿ ಅರ್ಮೇನಿಯನ್ನರ ಪರವಾಗಿ ರಷ್ಯಾ ಮಾಡಿದ ಹಸ್ತಕ್ಷೇಪವೂ ವಿಫಲಗೊಂಡು, ಎರಡೂ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿತು.

ಆದರೂ, ಅಮೆರಿಕ ಸೇರಿದಂತೆ ಪ್ರಮುಖ ಶಕ್ತಿಗಳ ಸಹಾಯದಿಂದ, ಎರಡೂ ರಾಷ್ಟ್ರಗಳು ಶಾಂತಿ ಒಪ್ಪಂದಕ್ಕೆ ಒಪ್ಪಿಕೊಂಡವು. ಅರ್ಮೇನಿಯನ್ ಸಂವಿಧಾನಕ್ಕೆ ತಿದ್ದುಪಡಿಯಂತಹ ಕೆಲವು ಅಂಶಗಳು ಉಳಿದಿದ್ದರೂ, ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ. ನಾಗೋರ್ನೊ-ಕರಾಬಖ್ ಪ್ರದೇಶದಲ್ಲಿ ಸುರಕ್ಷತೆ ಸ್ಥಾಪನೆ ಮತ್ತು ಅಭಿವೃದ್ಧಿಗೆ ಒಟ್ಟಾಗಿ ಕೆಲಸ ಮಾಡಲು ಮುಂದಾಗಿವೆ. ತಮ್ಮ ಪೈಪೋಟಿ ಮತ್ತು ವಿವಾದವನ್ನು ಕೊನೆಗೊಳಿಸಿವೆ.

ರಷ್ಯಾ ನೆರೆಹೊರೆಯಲ್ಲೇ ಇರುವ ನಾಲ್ಕು ಪುಟ್ಟ ರಾಷ್ಟ್ರಗಳ ತಮ್ಮೊಳಗಿನ ವಿವಾದ, ಸ್ಪರ್ಧೆಯನ್ನು ಶಾಂತಿಯುತ ಮಾತುಕತೆಗಳು, ಪರಸ್ಪರ ಕೊಡು-ಕೊಳ್ಳುವಿಕೆ, ವಿನಿಯಮ, ನೆರವುಗಳ ಮಾತುಕತೆಯೊಂದಿಗೆ ಬಗೆಹರಿಸಿಕೊಂಡಿವೆ. ನೆರೆಹೊರೆಯವರ ಸಹಾಯ, ನೆರವಿನಿಂದ ತಮ್ಮ ರಾಷ್ಟ್ರಗಳ ಅಭಿವೃದ್ಧಿ ಮತ್ತು ಶಾಂತಿಯನ್ನು ಸ್ಥಾಪಿಸಿಕೊಂಡಿವೆ. ತಮ್ಮ ಜನರಿಗೆ ನೆಮ್ಮದಿಯ ವಾತಾವರಣವನ್ನು ಸೃಷ್ಟಿಸಿಕೊಟ್ಟಿವೆ. ಆ ಮೂಲಕ ಬೃಹತ್, ಶ್ರೀಮಂತ ಹಾಗೂ ಪ್ರಭಾವಿ ರಾಷ್ಟ್ರಗಳಿಗೆ ಮಾದರಿಯಾಗಿ ನಿಂತಿವೆ. ಆದರೆ, ತಾವೇ ಬಲಿಷ್ಠರು, ಅಪ್ರತಿಮರು, ಎಲ್ಲವೂ ನಮ್ಮದೇ ಎಂದು ಬೀಗುತ್ತಿರುವ ಪ್ರಬಲ ರಾಷ್ಟ್ರಗಳು ಯುದ್ಧ, ದಾಳಿ, ಹಲ್ಲೆ, ಮಾರಣಹೋಮಗಳ ಹಾದಿಯಲ್ಲಿ ರಕ್ತ ಪಿಪಾಸುಗಳಾಗಿವೆ. ರಷ್ಯಾ, ಇಸ್ರೇಲ್, ಅಮೆರಿಕ, ಚೀನಾ ರೀತಿಯ ರಾಷ್ಟ್ರಗಳು ಆ ಪುಟ್ಟ ರಾಷ್ಟ್ರಗಳಿಂದ ಪಾಠ ಕಲಿಯಬೇಕಿದೆ. ಈ ಪಾಠವು ವಿಶ್ವಗುರು ಭಾರತಕ್ಕೂ ಅಗತ್ಯವಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X