ಭ್ರಷ್ಟಾಚಾರದ ಯಾವುದೇ ಪ್ರಕರಣ ಬೆಳಕಿಗೆ ಬಂದಾಗ, ಅದು ಸುಳ್ಳು ಎಂದು ನಿರಾಕರಿಸುವ ಮುನ್ನ ಅಥವಾ ಕಣ್ಮುಚ್ಚಿಕೊಂಡು ಅಧಿಕಾರಿಗಳ ರಕ್ಷಣೆಗೆ ಧಾವಿಸುವ ಮೊದಲು ಪ್ರಾಮಾಣಿಕ ತನಿಖೆಗೆ ಆದೇಶಿಸಬೇಕಾದ್ದು, ಆ ತನಿಖೆಯ ವರದಿ ಬಂದ ನಂತರವೇ ಮುಂದಿನ ಮಾತು ಆಡಬೇಕಾದ್ದು ಸರ್ಕಾರದ ಘನತೆಯ ದೃಷ್ಟಿಯಿಂದ ಒಳ್ಳೆಯದು.
ಮೈಸೂರಿನಲ್ಲಿ ನೆಲೆಸಿರುವ ಖ್ಯಾತ ಸರೋದ್ ವಾದಕ ರಾಜೀವ ತಾರಾನಾಥ್ ಈ ಬಾರಿಯ ದಸರೆಯಲ್ಲಿ ಯಾವುದೇ ಕಾರ್ಯಕ್ರಮ ನೀಡುತ್ತಿಲ್ಲ. ಆದರೆ, ಕೆಲವೇ ದಿನಗಳ ಮೊದಲು ಅವರು ಕಾರ್ಯಕ್ರಮ ನೀಡುತ್ತಿದ್ದಾರೆ ಎಂಬ ಸುದ್ದಿ ಇತ್ತು. ಹಾಗಾದರೆ, ಈ ದಿಢೀರ್ ಬದಲಾವಣೆ ಆದದ್ದೇಕೆ ಎಂದು ಬೆನ್ನತ್ತಿದ ಕೆಲವು ಸುದ್ದಿ ಮಾಧ್ಯಮಗಳಿಂದ, ದಸರಾ ಅಧಿಕಾರಿಗಳು ತಾರಾನಾಥ್ ಅವರಿಂದ ಕಮಿಷನ್ ಕೇಳಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ತಾರಾನಾಥ್ ಅವರ ಸಂಭಾವನೆ ಹೆಚ್ಚಿಸಿ, ಆ ಹೆಚ್ಚುವರಿ ಸಂಭಾವನೆಯನ್ನು ನಂತರದಲ್ಲಿ ತಮಗೆ ವರ್ಗಾಯಿಸಬೇಕೆಂದು ಅಧಿಕಾರಿಗಳು ‘ಒಪ್ಪಂದ’ ಮಾಡಿಕೊಳ್ಳಲು ಮುಂದಾದರು, ಇಂಥದ್ದಕ್ಕೆಲ್ಲ ಪ್ರೋತ್ಸಾಹ ನೀಡಬಾರದು ಎಂಬ ಕಾರಣಕ್ಕೆ ಒಪ್ಪಲಿಲ್ಲ ಎಂದು ಖುದ್ದು ತಾರಾನಾಥ್ ಅವರೇ ಹೇಳಿದರು ಎಂಬುದು ವರದಿಗಳ ಸಾರ.
ಈ ಸುದ್ದಿ ಬೆಳಕಿಗೆ ಬರುತ್ತಲೇ, ದಸರಾ ಉತ್ಸವದಂತೆಯೇ ರಾಜ್ಯದ ಉದ್ದಗಲಕ್ಕೆ ಸರ್ಕಾರವೇ ನಡೆಸುವ ನಾನಾ ಉತ್ಸವಗಳಲ್ಲಿ ಇದೇ ಬಗೆಯ ಕಮಿಷನ್ ದಂಧೆ ಬಹಳ ಕಾಲದಿಂದ ನಡೆಯುತ್ತಿರುವ ಬಗ್ಗೆ ಸಾಂಸ್ಕೃತಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಆದರೆ, ಇಷ್ಟೆಲ್ಲ ಬೆಳವಣಿಗೆಗಳ ನಂತರದ ಸ್ವಲ್ಪ ಹೊತ್ತಿನಲ್ಲೇ, ರಾಜೀವ್ ತಾರಾನಾಥ್ ಅವರಿಂದ ಅಧಿಕಾರಿಗಳು ಕಮಿಷನ್ ಕೇಳಿದ್ದಾರೆ ಎಂಬುದೆಲ್ಲ ಸುಳ್ಳು ಸುದ್ದಿ ಎಂಬ ಸ್ಪಷ್ಟನೆ ರಾಜ್ಯ ಸರ್ಕಾರದಿಂದ ಹೊರಬಿದ್ದಿದೆ. ಜೊತೆಗೆ, ಕಮಿಷನ್ ಕೇಳಿದ್ದು ಸುಳ್ಳು ಎಂದು ಸ್ವತಃ ತಾರಾನಾಥರೇ ಹೇಳಿದ್ದಾಗಿಯೂ ಹೇಳಿಕೆಯಲ್ಲಿ ಸಮರ್ಥನೆ ಮಾಡಿಕೊಳ್ಳಲಾಗಿದೆ. ಅದಕ್ಕೂ ಮೊದಲು, ಸಚಿವ ಎಚ್ ಸಿ ಮಹದೇವಪ್ಪ ಪ್ರಕರಣದ ತನಿಖೆಗೆ ಆದೇಶಿಸಿದ್ದೂ ಆಗಿತ್ತು.
ಭ್ರಷ್ಟಾಚಾರದ ವಿಷಯ ಬಂದಾಗಲೆಲ್ಲ ಅಧಿಕಾರಿಗಳು ಮತ್ತು ಸರ್ಕಾರಗಳು ನಾಟಕ ಆಡುವುದು ಇತ್ತೀಚೆಗೆ ತೀರಾ ಸಾಮಾನ್ಯ. ಮರ್ಯಾದೆಗೇಡಿನಿಂದ ತಕ್ಷಣಕ್ಕೆ ಬಚಾವಾದರೆ ಸಾಕು ಎಂಬ ಚಾಣಾಕ್ಷ ನಡೆಯದು. ಈ ಪ್ರಕರಣದಲ್ಲಿಯೂ ಸರ್ಕಾರ ಅಧಿಕಾರಿಗಳ ಪರ ನಿಂತಿರುವುದು ಮೇಲ್ನೋಟಕ್ಕೆ ಒಡೆದು ಕಾಣಿಸುತ್ತದೆ. ಏಕೆಂದರೆ, ಸ್ವತಃ ರಾಜೀವ್ ತಾರಾನಾಥ್ ಅವರು ಕಮಿಷನ್ ಕುರಿತಾಗಿ ಮಾತನಾಡಿರುವ ಆಡಿಯೊ, ವಿಡಿಯೊ ಪುರಾವೆಗಳು ಸುದ್ದಿ ಮಾಧ್ಯಮಗಳ ಬಳಿ ಇವೆ. ಇದೀಗ ಸರ್ಕಾರದ ಬಳಿ ಉಳಿದಿರುವುದು ಎರಡೇ ದಾರಿ; ಸುದ್ದಿ ಮಾಧ್ಯಮಗಳು ಸುಳ್ಳು ಹೇಳುತ್ತಿವೆ ಎಂಬುದನ್ನು ಸಾಬೀತು ಮಾಡುವುದು ಅಥವಾ ರಾಜೀವ್ ತಾರಾನಾಥ್ ಸುಳ್ಳು ಹೇಳಿದ್ದಾರೆ ಎಂಬುದನ್ನಾದರೂ ಸಾಬೀತು ಮಾಡುವುದು.
ಈ ಎಲ್ಲ ಬೆಳವಣಿಗೆಗಳಿಗೂ ಕಳಶವಿಟ್ಟಂತೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ಕಮಿಷನ್ ದಂಧೆ ಬಗೆಗೆ ಕಲಾವಿದರು, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಕರು ಸಾಮಾಜಿಕ ಜಾಲತಾಣಗಳಲ್ಲಿ ಅಲವತ್ತುಕೊಳ್ಳುತ್ತಿದ್ದಾರೆ. ಇಲಾಖೆಯಿಂದ ಸಹಜವಾಗಿ ಸಿಗಬೇಕಾದ ಅನುದಾನ ಪಡೆಯಲೂ ಅಲೆದಾಡಿಸುವ, ಅನುದಾನ ಸಿಗಲೇಬೇಕೆಂದರೆ ಕಮಿಷನ್ ಕೊಡಬೇಕಾದ ಪ್ರಸಂಗಗಳು ಸರ್ವೇಸಾಮಾನ್ಯ ಎಂಬುದು ಬಹುತೇಕರ ದೂರು. ಇಂತಹ ಆರೋಪಗಳು ಇಂದು-ನಿನ್ನೆಯದಂತೂ ಖಂಡಿತ ಅಲ್ಲ.
ಯಾವುದೇ ಪಕ್ಷದ ಸರ್ಕಾರವಿದ್ದರೂ, ಕಲಾವಿದರಿಗೆ ಸಿಗಬೇಕಾದ ಅನುದಾನ ಮತ್ತು ಮಾಸಾಶನದಂತಹ ವಿಷಯಗಳಲ್ಲಿ ಕಮಿಷನ್ ಹಾವಳಿಯ ಗಂಭೀರ ಆರೋಪ ಕೇಳಿಬರುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕಬೇಕಾದದ್ದು ಕೂಡ ಸರ್ಕಾರದ್ದೇ ಜವಾಬ್ದಾರಿ ಅಲ್ಲವೇ? ಭ್ರಷ್ಟಾಚಾರದ ಯಾವುದೇ ಪ್ರಕರಣ ಬೆಳಕಿಗೆ ಬಂದಾಗ, ಅದು ಸುಳ್ಳು ಎಂದು ನಿರಾಕರಿಸುವ ಮುನ್ನ ಅಥವಾ ಕಣ್ಮುಚ್ಚಿಕೊಂಡು ಅಧಿಕಾರಿಗಳ ರಕ್ಷಣೆಗೆ ಧಾವಿಸುವ ಮೊದಲು ಪ್ರಾಮಾಣಿಕ ತನಿಖೆಗೆ ಆದೇಶಿಸಬೇಕಾದ್ದು, ಆ ತನಿಖೆಯ ವರದಿ ಬಂದ ನಂತರವೇ ಮುಂದಿನ ಮಾತು ಆಡಬೇಕಾದ್ದು ಸರ್ಕಾರದ ಘನತೆಯ ದೃಷ್ಟಿಯಿಂದ ಒಳ್ಳೆಯದು. ಇಲ್ಲದಿದ್ದರೆ, ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಿಗೂ ಸರ್ಕಾರದ ವರ್ತನೆಗಳಿಗೂ ವ್ಯತ್ಯಾಸ ಇಲ್ಲ ಎಂಬ ಸಂದೇಶ ರವಾನೆ ಆಗುತ್ತದೆ. ಈ ಪ್ರಕರಣದಲ್ಲಿ ಆಗುತ್ತಿರುವುದೂ ಅದೇ. ಭ್ರಷ್ಟಾಚಾರರಹಿತ ಕಾರ್ಯಕ್ರಮಗಳನ್ನು ಆಯೋಜಿಸುವ ಮನಸ್ಸು ಸರ್ಕಾರಕ್ಕೆ ನಿಜವಾಗಿಯೂ ಇದ್ದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಕಮಿಷನ್ ಮುಕ್ತಗೊಳಿಸಲಿ.
ಇತ್ತೀಚಿನ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಅಂದು ಆಳುತ್ತಿದ್ದ ಬಿಜೆಪಿ ಸರ್ಕಾರವನ್ನು ’40 ಪರ್ಸೆಂಟ್ ಕಮಿಷನ್ ಸರ್ಕಾರ’ ಎಂದು ಭರಾಟೆಯ ಪ್ರಚಾರ ನಡೆಸಿ, ಚುನಾವಣಾ ಲಾಭ ಪಡೆದುಕೊಂಡ ಅದೇ ಕಾಂಗ್ರೆಸ್ ಪಕ್ಷ, ತಾನು ಸರ್ಕಾರ ರಚಿಸಿದ ನಂತರ ‘ಕಮಿಷನ್’ಗಳ ನಿರ್ಮೂಲನೆ ಕುರಿತು ತಲೆ ಕೆಡಿಸಿಕೊಳ್ಳದಿರುವುದು ಅಪ್ಪಟ ಆಷಾಢಭೂತಿತನ.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ