ಈ ದಿನ ಸಂಪಾದಕೀಯ | ಕನಕಪುರದ ಕಲಿಗೆ ‘ಅಹಿಂದ’ ನೆಲೆ ಉಳಿಸಿಕೊಳ್ಳುವ ಅಗ್ನಿಪರೀಕ್ಷೆ!

Date:

ಡಿ.ಕೆ. ಶಿವಕುಮಾರ್ ಅವರಿಗೆ ಸದ್ಯ ಅಧಿಕಾರವೆಂಬ 'ಕನಕ'ಲೇಪಿತ ಮುಳ್ಳಿನ ಕಿರೀಟ ಸಿಕ್ಕಿದೆ. ಅದನ್ನ ನಾಜೂಕಾಗಿ ತೊಡಬೇಕಾದ ಕುಶಲತೆಯೂ ಅವರಿಗಿದೆ. ತಮಗೆ ಸಿಕ್ಕಿರುವ ಈ ಸುವರ್ಣಾವಕಾಶವನ್ನು ಬಳಸಿಕೊಂಡು ತಳಸಮುದಾಯಗಳ ವಿಶ್ವಾಸ ಗಳಿಸಿ, ಅಹಿಂದ ನೆಲೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾರೋ ಅಥವಾ ಸ್ವ-ಸಮುದಾಯದ ಹಿತರಕ್ಷಣೆಗೆ ಸೀಮಿತವಾಗುತ್ತಾರೋ ಎಂಬುದನ್ನು ಅವರ ಆಡಳಿತದ ಹೆಜ್ಜೆಗಳೇ ನಿರ್ಣಯಿಸಲಿವೆ. 

ಕರ್ನಾಟಕ ಕಾಂಗ್ರೆಸ್ ರಾಜಕಾರಣದ ದೀರ್ಘಕಾಲದ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಕಷ್ಟದ ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷಕ್ಕೆ ಜೀವ ತುಂಬಿ, ಅಧಿಕಾರದ ಹೊಸ್ತಿಲಿಗೆ ತಂದು ನಿಲ್ಲಿಸಿದ ಡಿ.ಕೆ. ಶಿವಕುಮಾರ್ ಅವರು ಇಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಗದ್ದುಗೆ ಏರಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ತೀವ್ರ ಕಸರತ್ತು ಮುಗಿಸಿ, ಆಂತರಿಕ ಪೈಪೋಟಿಗಳ ಅಡತಡೆಗಳ ದಾಟಿ, ನಿರ್ಗಮಿತ ಸಿಎಂ ಅವರ ಅಭಿಮಾನಿಗಳ ವಿರೋಧದ ನಡುವೆಯೂ ಗಿಟ್ಟಿಸಿಕೊಂಡಿರುವ ಈ ಮುಖ್ಯಮಂತ್ರಿ ಕುರ್ಚಿ ಶಿವಕುಮಾರ್ ಅವರಿಗೆ ಹೂವಿನ ಹಾಸಿಗೆಯಂತೂ ಖಂಡಿತ ಅಲ್ಲ. ರಾಜಕೀಯ ತಂತ್ರಗಾರಿಕೆ ಹಾಗೂ ಪಕ್ಷ ಸಂಘಟನೆಯಲ್ಲಿ ‘ಬಂಡೆ’ಯಂತೆ ನಿಂತು ಯಶಸ್ವಿಯಾದ ಶಿವಕುಮಾರ್ ಮುಂದೆ, ಈಗ ಇಡೀ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವುದು ಮತ್ತು ಮುಖ್ಯವಾಗಿ, ಸಿದ್ದರಾಮಯ್ಯ ಅವರು ದಶಕಗಳಿಂದ ನೀರೆರೆದು ಕಟ್ಟಿ ಬೆಳೆಸಿದ ‘ಅಹಿಂದ’ ಎಂಬ ಕೋಟೆ ಕರಗದಂತೆ ಹದ್ದಿನ ಕಣ್ಣಿಟ್ಟು ಕಾಯ್ದುಕೊಳ್ಳುವ ಅಗ್ನಿಪರೀಕ್ಷೆ ಇದೆ!

- Advertisement -

ಶಿವಕುಮಾರ್ ಅವರ ಕ್ಯಾಬಿನೆಟ್‌ನಲ್ಲಿ ಅಧಿಕಾರ ಹಂಚಿಕೆಯ ಅಸಮಾಧಾನದ ಹೊಗೆ ಈಗಾಗಲೇ ಕಾಣಿಸಿಕೊಳ್ಳಲಾರಂಭಿಸಿದೆ. ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ಅಹಿಂದ ಸಮುದಾಯದ ನಾಲ್ವರಿಗೆ ಡಿಸಿಎಂ ಹುದ್ದೆ ನೀಡಬೇಕು ಎಂದು ಆಯಾ ವರ್ಗದ ಪ್ರಮುಖ ನಾಯಕರು ಆಗ್ರಹಿಸಿದ್ದರು. ಆದರೆ, ಹಿರಿಯ ನಾಯಕ ಜಿ. ಪರಮೇಶ್ವರ್ ಅವರಿಗೆ ಮಾತ್ರ ಡಿಸಿಎಂ ಹುದ್ದೆ ನೀಡುವುದು ಖಚಿತವಾಗಿದೆ. ಅಹಿಂದದ ಇತರ ಮೂರು ಪ್ರಮುಖ ಆಕಾಂಕ್ಷಿಗಳನ್ನು ಕೈಬಿಟ್ಟು ಪರಮೇಶ್ವರ್ ಒಬ್ಬರನ್ನೇ ಡಿಸಿಎಂ ಸ್ಥಾನದಲ್ಲಿ ಕೂರಿಸಿರುವ ಈ ಸೂಕ್ಷ್ಮ ಪರಿಸ್ಥಿತಿಯನ್ನು ಶಿವಕುಮಾರ್ ಅತ್ಯಂತ ನಾಜೂಕಾಗಿ ನಿಭಾಯಿಸಬೇಕಿದೆ. ಸಚಿವ ಸ್ಥಾನ ವಂಚಿತರಾದ ನಾಯಕರಲ್ಲಿ ಮೂಡಿರುವ ಅಸಮಾಧಾನದ ಹೊಗೆ ಆಡಳಿತದ ಕನ್ನಡಿ ಮಸುಕಾಗದಂತೆ ನೋಡಿಕೊಳ್ಳಬೇಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಉತ್ತರ ಕನ್ನಡ: ಹಾಲಕ್ಕಿಗಳ ಹಾಡು-ಪಾಡು ಮತ್ತು ಮರೀಚಿಕೆಯಾದ ಮೀಸಲಾತಿ

ಹಾಲಕ್ಕಿಗಳಿಗೆ ಪರಿಶಿಷ್ಟ ಪಂಗಡ ಮೀಸಲಾತಿ ಮರೀಚಿಕೆ ಆಗುತ್ತಿದೆ. ಮೀಲಾತಿ ಕೊಡಿಸುವ ಬಣ್ಣ-ಬಣ್ಣದ ಮಾತುಗಳಿಂದ ಹಾಲಕ್ಕಿಗಳ ಮತ ದೋಚಿ ಗೆದ್ದವರು ಕೃತಘ್ನರಾಗಿದ್ದಾರೆ. ಎಸ್ಟಿ ಮೀಸಲಾತಿ ಸೌಲಭ್ಯ ಅಷ್ಟು ಸುಲಭಕ್ಕೆ ಹಾಕ್ಕಿಗಳಿಗೆ ದಕ್ಕಲು ಪ್ರಬಲ ಮೇಲ್ವರ್ಗದ...

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ‘ಅಹಿಂದ’ ವರ್ಗಗಳ ಬೆಂಬಲ ಎಷ್ಟು ಅನಿವಾರ್ಯವಾಗಿತ್ತು ಎಂಬುದು ಜಗಜ್ಜಾಹೀರು. ಕಾಂಗ್ರೆಸ್‌ಗೆ ಭದ್ರ ಬುನಾದಿ ಹಾಗೂ ನಿರಂತರ ಶಕ್ತಿ ತುಂಬಿದ್ದೇ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು. ಸಿದ್ದರಾಮಯ್ಯ ಎನ್ನುವ ಹೆಸರೇ ಈ ವರ್ಗಗಳ ಪಾಲಿಗೆ ಸಾಮಾಜಿಕ ನ್ಯಾಯದ ದನಿಯಾಗಿತ್ತು. ಅವರ ಆ ಜನಪ್ರಿಯತೆ, ವರ್ಚಸ್ಸು ಮತ್ತು ಅಹಿಂದ ಸಮುದಾಯಗಳ ಒಳಗೆ ಅವರು ಗಳಿಸಿರುವ ಅಚಲವಾದ ಭಾವನಾತ್ಮಕ ನಂಬಿಕೆಯನ್ನು ಸರಿಗಟ್ಟುವುದು ಶಿವಕುಮಾರ್‍‌ಗೆ ಮಾತ್ರವಲ್ಲ, ಯಾರಿಗೂ ಅಷ್ಟು ಸುಲಭ ಸಾಧ್ಯ ಅಲ್ಲ. ಶಿವಕುಮಾರ್ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿ ಗುರುತಿಸಿಕೊಂಡವರು. ಒಕ್ಕಲಿಗರು ಕಾಂಗ್ರೆಸ್ ಕೈಹಿಡಿಯುವಂತೆ ಮಾಡುವಲ್ಲಿ ಅವರ ಶ್ರಮ ದೊಡ್ಡದಿದ್ದರೂ, ಈಗ ಮುಖ್ಯಮಂತ್ರಿಯಾಗಿ ಇಡೀ ರಾಜ್ಯವನ್ನು ಮುನ್ನಡೆಸುವಾಗ ಅವರು ತಮ್ಮ ಮೇಲಿರುವ ‘ಒಂದು ಸಮುದಾಯದ ನಾಯಕ’ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಅಹಿಂದ ವರ್ಗಗಳಲ್ಲಿ ತಮಗೆ ಅನ್ಯಾಯವಾಗಬಹುದು ಅಥವಾ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ ಸಣ್ಣ ಅಸುರಕ್ಷತೆಯ ಭಾವನೆ ಮೂಡಿದರೂ, ಅದು ಕಾಂಗ್ರೆಸ್‌ನ ತಳಪಾಯವನ್ನೇ ಅಲ್ಲಾಡಿಸಿಬಿಡುತ್ತದೆ.

ನಿರ್ಗಮಿತ ಮುಖ್ಯಮಂತ್ರಿ ಮತ್ತು ಎತ್ತರದ ಜನನಾಯಕ ಸಿದ್ದರಾಮಯ್ಯ ಅವರನ್ನು ಶಿವಕುಮಾರ್ ಅವರು ನಾಜೂಕಾಗಿ ನಿಭಾಯಿಸಬೇಕಿದೆ. ಏಕೆಂದರೆ,  ಹೈಕಮಾಂಡ್ ಸೂಚನೆಗೆ ಗೌರವ ನೀಡಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರಾದರೂ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿರುವುದಾಗಿ ಘೋಷಿಸಿದ್ದಾರೆ. ರಾಜಕೀಯದಲ್ಲಿ ಅವರು ಸಕ್ರಿಯರಾಗಿದ್ದಾರೆ ಎಂದರೆ, ರಾಜ್ಯದ ಬಲಿಷ್ಠ ಮತಬ್ಯಾಂಕ್‌ ‘ಅಹಿಂದ’ದ ಮೇಲಿನ ಅವರ ಹಿಡಿತ ಮುಂದುವರೆಯಲಿದೆ. ಸಚಿವ ಸಂಪುಟದಲ್ಲೂ ಸಿದ್ದರಾಮಯ್ಯ ಬೆಂಬಲಿಗರನ್ನು ಕಡೆಗಣಿಸದಂತೆ ಎಚ್ಚರ ವಹಿಸಬೇಕಿದೆ. ಆಂತರಿಕ ಭಿನ್ನಮತ ತಲೆಯೆತ್ತದಂತೆ ನಿರ್ವಹಿಸಬೇಕಿದೆ.

ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡ ಮರುಕ್ಷಣವೇ ಶಿವಕುಮಾರ್ ಅವರ ರಾಜಕೀಯ ಚಾಣಾಕ್ಷತನ ಪರೀಕ್ಷೆಗೆ ಗುರಿಯಾಗಲಿದೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ತಳಸಮುದಾಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾರಿಗೆ ತಂದ ಭರಪೂರ ‘ಗ್ಯಾರಂಟಿ’ ಯೋಜನೆಗಳನ್ನು ಆರ್ಥಿಕ ಶಿಸ್ತಿನೊಂದಿಗೆ ಮುಂದುವರಿಸಿಕೊಂಡು ಹೋಗಬೇಕಾದ ಹೊಣೆಗಾರಿಕೆ ಅವರ ಹೆಗಲ ಮೇಲಿದೆ. ಒಂದು ವೇಳೆ ಗ್ಯಾರಂಟಿ ಯೋಜನೆಗಳು ಕುಂಠಿತಗೊಂಡರೆ, ಅನುದಾನ ಕೊರತೆ ಕಾರಣ ನೀಡಿ ಅವುಗಳನ್ನ ಸ್ಥಗಿತಗೊಳಿಸಿದರೆ, ಅದರ ಮೊದಲ ಹೊಡೆತ ಬೀಳುವುದು ಅಹಿಂದ ಮತಬ್ಯಾಂಕಿಗೆ. ಇದು ನೇರವಾಗಿ ಶಿವಕುಮಾರ್ ಆಡಳಿತದ ವೈಫಲ್ಯ ಎಂದು ಬಿಂಬಿತವಾಗಿಬಿಡುತ್ತದೆ. ವಿಶೇಷವಾಗಿ, ರಾಜ್ಯ ರಾಜಕಾರಣದ ಅತ್ಯಂತ ಸೂಕ್ಷ್ಮ ವಿಷಯವಾಗಿರುವ ‘ಜಾತಿ ಗಣತಿ’ ವರದಿಯ ಅನುಷ್ಠಾನದ ಪ್ರಶ್ನೆ ಬಂದಾಗ ಶಿವಕುಮಾರ್ ಸೂಜಿ ಮೇಲೆ ಕುಳಿತು ತಪಸ್ಸು ಮಾಡಬೇಕಾದ ಇಕ್ಕಟ್ಟಿಗೆ ಸಿಲುಕಲಿದ್ದಾರೆ. ತಮ್ಮದೇ ಒಕ್ಕಲಿಗ ಸಮುದಾಯ ತೀವ್ರವಾಗಿ ವಿರೋಧಿಸುತ್ತಿರುವ ಈ ವರದಿಯನ್ನು, ಅಹಿಂದ ವರ್ಗಗಳ ಬೇಡಿಕೆಗೆ ತಕ್ಕಂತೆ ಒಪ್ಪಿಕೊಳ್ಳುವ ಧೈರ್ಯವನ್ನು ಅವರು ತೋರಬೇಕಿದೆ. ಆಡಳಿತದಲ್ಲಿ ದಲಿತ, ಹಿಂದುಳಿದ ಮತ್ತು ಮುಸ್ಲಿಂ ಸಮುದಾಯದ ಹಿರಿಯ ನಾಯಕರಿಗೆ ಯಥೋಚಿತ ಗೌರವ ನೀಡದೇ ಹೋದರೆ, ಸಿದ್ದರಾಮಯ್ಯ ಕಷ್ಟಪಟ್ಟು ಇಟ್ಟಿದ್ದ ಕಾಂಗ್ರೆಸ್‌ನ ಅಹಿಂದ ತಳಪಾಯದ ಇಟ್ಟಿಗೆಗಳು ಒಂದೊಂದಾಗಿ ಸಡಿಲಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಜಾತಿಗಣತಿ ವರದಿಯನ್ನು ಜಾರಿಗೊಳಿಸಲು ಮುಂದಾದರೆ ಸ್ವಂತ ಸಮುದಾಯ ಮತ್ತು ಮಠಾಧೀಶರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಜಾರಿಗೊಳಿಸದಿದ್ದರೆ, ‘ಅಹಿಂದ’ದ ಅಸಮಾಧಾನ ಎದುರಿಸಬೇಕಾಗುತ್ತದೆ.

ಕೇವಲ ಒಂದು ಸಮುದಾಯದ ಬೆಂಬಲದಿಂದ ಕರ್ನಾಟಕದಲ್ಲಿ ದೀರ್ಘಕಾಲ ಆಡಳಿತ ನಡೆಸಲು ಸಾಧ್ಯವಿಲ್ಲ ಎಂಬ ದಿಟ ಅವರಿಗೆ ಗೊತ್ತಿಲ್ಲದ್ದೇನಲ್ಲ. ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಬಲ ಲಿಂಗಾಯತ ಸಮುದಾಯದ ಬೆಂಬಲವನ್ನು ಸಂಪೂರ್ಣವಾಗಿ ಬಳಸಿಕೊಂಡರು. ಲಿಂಗಾಯತರು ಬಿಜೆಪಿಯ ಭದ್ರ ಕೋಟೆಯಾದರು. ಆದರೆ, ಕೇವಲ ಲಿಂಗಾಯತ ಸಮುದಾಯದ ಬೆಂಬಲದಿಂದ ಬಿಜೆಪಿಗೆ ರಾಜ್ಯದಲ್ಲಿ ಎಂದಿಗೂ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. 2008ರಲ್ಲಾಗಲಿ, 2018ರಲ್ಲಾಗಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತೇ ವಿನಃ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲಾಗಲಿಲ್ಲ. ನಂತರ ಇತರ ಸಮುದಾಯಗಳ ಬೆಂಬಲ ಅಥವಾ ‘ಆಪರೇಷನ್ ಕಮಲ’ದ ಮೂಲಕವೇ ಸರ್ಕಾರ ರಚಿಸಬೇಕಾಯಿತು. ಅಂದರೆ, ಒಂದು ಸಮುದಾಯದ ಬೆಂಬಲ ಅಧಿಕಾರದ ಹತ್ತಿರ ತರಬಲ್ಲದೇ ವಿನಾ ಸರಳ ಬಹುಮತವನ್ನು ಕೂಡ ಗಳಿಸಿಕೊಡಲಾರದು.

ಹಿರಿಯ ನಾಯಕ ಹೆಚ್.ಡಿ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಹಳೇ ಮೈಸೂರು ಭಾಗದ ಪ್ರಬಲ ‘ಒಕ್ಕಲಿಗ’ ಸಮುದಾಯದ ನಾಯಕರಾಗಿ ಗುರುತಿಸಿಕೊಂಡವರು. ಒಕ್ಕಲಿಗ ಸಮುದಾಯ ಜೆಡಿಎಸ್ ಬೆನ್ನಿಗೆ ನಿಂತಿದ್ದೂ ಉಂಟು. ಆದರೆ, ಕೇವಲ ಹಳೇ ಮೈಸೂರು ಭಾಗ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೀಮಿತವಾದ ರಾಜಕಾರಣದಿಂದಾಗಿ ಜೆಡಿಎಸ್ ರಾಜ್ಯದಲ್ಲಿ ಎಂದಿಗೂ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಸಾಧ್ಯವಾಗಲೇ ಇಲ್ಲ. ಅನಿವಾರ್ಯವಾಗಿ ಅವರು ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡೇ ಮುಖ್ಯಮಂತ್ರಿಯಾಗಬೇಕಾಯಿತು. ಉತ್ತರ ಕರ್ನಾಟಕದ ಲಿಂಗಾಯತರು ಮತ್ತು ರಾಜ್ಯದಾದ್ಯಂತ ಇರುವ ಅಹಿಂದ ವರ್ಗಗಳನ್ನು ಒಳಗೊಳ್ಳದ ಕಾರಣ ಜೆಡಿಎಸ್ ಪ್ರಾದೇಶಿಕವಾಗಿ ಒಂದು ಭಾಗಕ್ಕೆ ಮಾತ್ರ ಸೀಮಿತವಾಗಬೇಕಾಯಿತು. ಇಂದಿಗೂ.

ಇದಕ್ಕೆ ತದ್ವಿರುದ್ಧವಾದ, ಉದಾಹರಣೆ ಎಂದರೆ ಮಾಜಿ ಸಿಎಂ ಡಿ. ದೇವರಾಜ ಅರಸು ಅವರು. 1970ರ ದಶಕದವರೆಗೆ ಕರ್ನಾಟಕ ರಾಜಕಾರಣವನ್ನು ಕೇವಲ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳೇ ನಿಯಂತ್ರಿಸುತ್ತಿದ್ದವು. ದೇವರಾಜ ಅರಸು ಅವರು ಈ ಪ್ರಬಲ ಸಮುದಾಯಗಳ ಆಚೆಗೆ ಹೋಗಿ, ರಾಜ್ಯದಲ್ಲಿದ್ದ ಸಣ್ಣ ಸಣ್ಣ ಹಿಂದುಳಿದ ಜಾತಿಗಳು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಒಂದು ರಾಜಕೀಯ ಅಧಿಕಾರದ ವೇದಿಕೆಗೆ ತಂದರು (ಇದೇ ಇಂದಿನ ಅಹಿಂದದ ಮೂಲ ರೂಪ). ಕೇವಲ ಮೇಲ್ವರ್ಗ ಅಥವಾ ಒಂದು ಸಮುದಾಯವನ್ನು ನಂಬಿ ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದ ಅರಸು, ಸರ್ವರನ್ನೂ ಒಳಗೊಳ್ಳುವ ಸಾಮಾಜಿಕ ನ್ಯಾಯದ ರಾಜಕಾರಣ ಆರಂಭಿಸಿದರು. ಅದರ ಫಲವಾಗಿಯೇ ಅವರು ರಾಜ್ಯದಲ್ಲಿ ಸುಭದ್ರ ಸರ್ಕಾರ ನಡೆಸಲು ಸಾಧ್ಯವಾಯಿತು. ಮುಂದೆ ಇದೇ ಸೂತ್ರವನ್ನು ಸಿದ್ದರಾಮಯ್ಯ ಅವರು ಯಶಸ್ವಿಯಾಗಿ ಬಳಸಿಕೊಂಡರು.

ಈ ಇತಿಹಾಸ ಡಿ.ಕೆ. ಶಿವಕುಮಾರ್ ಅವರಿಗೆ ಚೆನ್ನಾಗಿಯೇ ಗೊತ್ತಿದೆ. ಒಕ್ಕಲಿಗ ಸಮುದಾಯ ತಮಗೆ ಎಷ್ಟು ಮುಖ್ಯವೋ, ರಾಜ್ಯಾದ್ಯಂತ ಹರಡಿರುವ ದಲಿತರು, ಹಿಂದುಳಿದವರು ಮತ್ತು ಮುಸ್ಲಿಂ ಸಮುದಾಯಗಳ ವಿಶ್ವಾಸ ಗಳಿಸುವುದು ಅಷ್ಟೇ ಮುಖ್ಯ. ಕೇವಲ ಒಂದು ಜಾತಿಗೆ ಸೀಮಿತವಾದರೆ ರಾಜಕೀಯ ಭವಿಷ್ಯ ಭದ್ರವಲ್ಲ ಎಂಬುದಕ್ಕೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರ ಮಿತಿಗಳೇ ಶಿವಕುಮಾರ್ ಮುಂದಿರುವ ಜೀವಂತ ಉದಾಹರಣೆಗಳು.

ಇದನ್ನೂ ಓದಿ: ಈ ದಿನ ಸಂಪಾದಕೀಯ | ರಸಗೊಬ್ಬರ ಕೊರತೆ ಮತ್ತು ಮೋದಿ ಬೋಧನೆ

ಇದರ ಜೊತೆಗೆ 2028ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರಬೇಕಾದ ಕಠಿಣ ಸವಾಲು ಕೂಡ ಶಿವಕುಮಾರ್ ಹೆಗಲ ಮೇಲಿದೆ. ಬಿಡದಿ ಟೌನ್‌ಶಿಪ್‌ ಯೋಜನೆಯನ್ನು ವಿರೋಧಿಸುವ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆಗಳನ್ನು ನಡೆಸಿ, ಪಕ್ಷವನ್ನು ಮುನ್ನಡೆಸಬೇಕಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನೂ ಎದುರಿಸಬೇಕಿದೆ. ಮುಖ್ಯಮಂತ್ರಿ ಹುದ್ದೆ ಒಕ್ಕಲಿಗರ ಬಲಿಷ್ಠ ತಲೆಯಾಳು ಮಾತ್ರವಲ್ಲದೆ, ಬಿಜೆಪಿ ವ್ಯೂಹಗಳಿಗೆ ಪ್ರತಿವ್ಯೂಹ ಹಣೆದು, ಬಿಜೆಪಿ ಅನುಸರಿಸುವ ತಂತ್ರ ಕುತಂತ್ರಗಳಿಗೆ ತಕ್ಕ ಉಪಾಯಗಳನ್ನು ರೂಪಿಸುವ ಸಾಮರ್ಥ್ಯ ಶಿವಕುಮಾರ್ ಅವರಿಗಿದೆ. ಮೋಶಾ ಯುಗದ ಬಿಜೆಪಿ ಕಂಡು ಹಿಡಿದು ಪ್ರಯೋಗಿಸಿರುವ ಚುನಾವಣಾ ಭಾಷೆಯಲ್ಲೇ ಬಿಜೆಪಿಗೆ ಉತ್ತರ ಕೊಡಬಲ್ಲವರು. ಈ ಎಲ್ಲ ಸಂಗತಿಗಳು ಬಿಜೆಪಿ ನಾಯಕತ್ವಕ್ಕೆ ವೇದ್ಯವಾಗಿವೆ. ಇಂತಹ ಪ್ರಚಂಡ ಎದುರಾಳಿಯನ್ನು ಹಣಿಯುವ ಎಲ್ಲ ಹತಾರುಗಳನ್ನು ಪ್ರಯೋಗಿಸದೆ ಬಿಡುವುದಿಲ್ಲ. ಮತ್ತು ಬಿಜೆಪಿಯ ಈ ದಾಳಿ ಶಿವಕುಮಾರ್ ಅವರಿಗೆ ಹೊಸದೂ ಅಲ್ಲ. ಈ ಹಿಂದಿನ ದಾಳಿಗಳಿಗೆ ಅವರು ಸೊಪ್ಪು ಹಾಕಿಲ್ಲ. ಈಗ ಮೋದಿ ಶಾ ನಿರ್ದೇಶಿತ ಕೇಂದ್ರ ತನಿಖಾ ಸಂಸ್ಥೆಗಳ ಹೊಸ ದಾಳಿಗೂ ಅವರು ಸಜ್ಜಾಗಬೇಕಿದೆ.

ಶಿವಕುಮಾರ್ ಕಾಂಗ್ರೆಸ್‌ನ ಆಂತರಿಕ ಬಿಕ್ಕಟ್ಟುಗಳನ್ನು ಬಗೆಹರಿಸುವ ‘ಟ್ರಬಲ್ ಶೂಟರ್’ ಆಗಿ ಉಳಿಯದೆ, ಸರ್ವರನ್ನೂ ಒಳಗೊಳ್ಳುವ ವಿಶಾಲ ಹೃದಯದ ಜನನಾಯಕ ಎಂದು ಸಾಬೀತುಪಡಿಸಬೇಕಾದ ಕ್ಷಣ ಇದು.

ಅಧಿಕಾರವೆಂಬುದು ಸದಾ ಮುಳ್ಳಿನ ಕಿರೀಟ. ತಮಗೆ ಸಿಕ್ಕಿರುವ ಈ ಸುವರ್ಣಾವಕಾಶವನ್ನು ಬಳಸಿಕೊಂಡು ಡಿ.ಕೆ. ಶಿವಕುಮಾರ್ ಅವರು ತಳಸಮುದಾಯಗಳ ವಿಶ್ವಾಸ ಗಳಿಸಿ, ಅಹಿಂದ ನೆಲೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾರೋ ಅಥವಾ ಸ್ವ-ಸಮುದಾಯದ ಹಿತರಕ್ಷಣೆಗೆ ಸೀಮಿತವಾಗುತ್ತಾರೋ ಎಂಬುದನ್ನು ಸದ್ಯ ಭವಿಷ್ಯದಲ್ಲಿ ಅವರು ಇಡಲಿರುವ ಆಡಳಿತದ ಹೆಜ್ಜೆಗಳೇ ನಿರ್ಣಯಿಸಲಿವೆ. ವ್ಯಕ್ತಿಗತ ಮತ್ತು ಪಕ್ಷ ರಾಜಕಾರಣದ ಆಚೆಗೂ, ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ಆಡಳಿತ ಯಾವುದೇ ಕುಂದಿಲ್ಲದೆ ಮುಂದುವರೆಯಲಿ. ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ಶುಭಕಾಮನೆಗಳು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ: ಹಾಲಕ್ಕಿಗಳ ಹಾಡು-ಪಾಡು ಮತ್ತು ಮರೀಚಿಕೆಯಾದ ಮೀಸಲಾತಿ

ಹಾಲಕ್ಕಿಗಳಿಗೆ ಪರಿಶಿಷ್ಟ ಪಂಗಡ ಮೀಸಲಾತಿ ಮರೀಚಿಕೆ ಆಗುತ್ತಿದೆ. ಮೀಲಾತಿ ಕೊಡಿಸುವ ಬಣ್ಣ-ಬಣ್ಣದ...

ರಸ್ತೆ ತಡೆದು ಪೂಜಾ ಪೆಂಡಾಲ್ ಹಾಕುವಂತಿಲ್ಲ: ಒಡಿಶಾ ಹೈಕೋರ್ಟ್ ಆದೇಶ

ಸಾರ್ವಜನಿಕ ರಸ್ತೆಗಳಲ್ಲಿ ಹಬ್ಬದ ಪೂಜಾ ಪೆಂಡಾಲ್‌ಗಳ ನಿರ್ಮಾಣ ಮತ್ತು ರಸ್ತೆ ಬಂದ್...

ತಮಿಳುನಾಡು | 150 ದಿನ ಉದ್ಯೋಗ ಖಾತರಿ; ಬಡ ಕುಟುಂಬಗಳಿಗೆ ಹೆಚ್ಚುವರಿ ಉದ್ಯೋಗ ಭಾಗ್ಯ

ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಉದ್ಯೋಗ ಖಾತರಿ ಅವಧಿಯನ್ನು 150 ದಿನಗಳಿಗೆ...

ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇನ್ನೂ 5 ದಿನ ಭಾರೀ ಮಳೆ: ಹವಾಮಾನ ಇಲಾಖೆ

ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ.  ಇನ್ನೂ...