ಕೆಟ್ಟ ವಿದೇಶಾಂಗ ನೀತಿಯಿಂದಾಗಿ ರಸಗೊಬ್ಬರದ ಕೊರತೆ ಉಂಟಾಗಿದೆ. ಆ ಲೋಪವನ್ನು ಮುಚ್ಚಿಕೊಳ್ಳಲು ಭೂಮಿಯ ಫಲವತ್ತತೆ, ಸಾವಯವ ಕೃಷಿ ಕುರಿತು ಬೋಧನೆಯಲ್ಲಿ ನಿರತವಾಗಿದೆ. ರೈತರು ಬೆಳೆದ ಬದನೆ ತಿಂದು ಬೋಧನೆ ಮಾಡುವ ಮೋದಿಯ ‘ಬುದ್ಧಿವಂತಿಕೆ’ ದಿನದಿಂದ ದಿನಕ್ಕೆ ಬಯಲಾಗುತ್ತಲೇ ಸಾಗಿದೆ.
ಇವತ್ತಿಗೂ ನಮ್ಮ ದೇಶದಲ್ಲಿ ಶೇ. 58 ರಷ್ಟು ಜನ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಮಳೆ ಬಿದ್ದ ತಕ್ಷಣ ಓಬಿರಾಯನ ಕಾಲದ ನೇಗಿಲೂಡಿ ನೆಲ ಕೆರೆಯುವವರು ಈಗಲೂ ಇದ್ದಾರೆ. ಇಂತಹ ಸಣ್ಣ, ಅತಿ ಸಣ್ಣ ರೈತರ ಒಡೆತನದಲ್ಲಿರುವ ಭೂಮಿ ಬಹಳ ಕಡಿಮೆ. ನಿಗದಿತ ಆದಾಯವೂ ಇರುವುದಿಲ್ಲ. ಮಳೆ ಬಿದ್ದಾಕ್ಷಣ ಕೃಷಿ ಚಟುವಟಿಕೆ ಚುರುಕುಗೊಳ್ಳುತ್ತದೆ. ಬೀಜ, ಗೊಬ್ಬರಕ್ಕಾಗಿ ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗುತ್ತದೆ.
ಪ್ರತಿ ವರ್ಷ ಮುಂಗಾರು ಆರಂಭವಾಗುವ ಮುನ್ನವೇ ರಸಗೊಬ್ಬರದ ಬೇಡಿಕೆ ಎಷ್ಟು ಎಂಬುದು ರಾಜ್ಯ-ಕೇಂದ್ರ ಸರ್ಕಾರಗಳಿಗೆ ಗೊತ್ತಿರುತ್ತದೆ. ಯಾವ ಜಿಲ್ಲೆಯಲ್ಲಿ ಯಾವ ಬೆಳೆ ಬೆಳೆಯಲಾಗುತ್ತದೆ, ಎಷ್ಟು ಯೂರಿಯಾ, ಡಿಎಪಿ ಅಥವಾ ಎನ್ಪಿಕೆ ಬೇಕಾಗಬಹುದು ಎಂಬ ಅಂದಾಜು ಕೃಷಿ ಇಲಾಖೆಗಳ ಬಳಿ ಇರುತ್ತದೆ. ಆದರೂ ಹಂಗಾಮಿನ ವೇಳೆಗೆ ರಸಗೊಬ್ಬರ ಕೊರತೆ ಎದುರಾಗುತ್ತದೆ. ಸರ್ಕಾರ ಸಮಯಕ್ಕೆ ಸರಿಯಾಗಿ ಬೇಡಿಕೆ ಪೂರೈಸದೆ ಸಬೂಬು ಹೇಳುತ್ತದೆ. ಖಾಸಗಿ ಅಂಗಡಿಗಳ ಮುಂದೆ ಕ್ಯೂ ನಿಲ್ಲುವ, ದುಪ್ಪಟ್ಟು ಕೊಟ್ಟು ಖರೀದಿಸುವ ಪರಿಸ್ಥಿತಿ ಎದುರಾಗುತ್ತದೆ. ಸಾಲ ಅನಿವಾರ್ಯವಾಗುತ್ತದೆ. ಮನೆ ಮಂದಿಯೆಲ್ಲ ಬೆವರು ಸುರಿಸಿ ಮಾಡಿದ ಬೇಸಾಯದಲ್ಲಿ ಅಕಸ್ಮಾತ್ ಉತ್ತಮ ಇಳುವರಿ ಬಂದರೆ, ಅದಕ್ಕೆ ಉತ್ತಮ ಬೆಲೆ ಸಿಕ್ಕರೆ ರೈತ ಬದುಕುತ್ತಾನೆ. ಬದಲಿಗೆ, ನೆರೆ-ಬರ ಬಂದರೆ, ಸರ್ಕಾರ ಸ್ಪಂದಿಸದಿದ್ದರೆ ನೇಣಿಗೆ ಕೊರಳೊಡ್ಡುತ್ತಾನೆ.
ಇಂದಿಗೂ ಭಾರತ ರಸಗೊಬ್ಬರ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬಿಯಾಗಿಲ್ಲ. ಡಿಎಪಿಗೆ ಬೇಕಾದ ಮೂಲ ಕಚ್ಚಾ ವಸ್ತುಗಳು, ಪೊಟ್ಯಾಶ್ ಹಾಗೂ ಇತರ ಪೋಷಕಾಂಶಗಳಿಗಾಗಿ ವಿದೇಶಗಳ ಮೇಲೆ ಅವಲಂಬಿಸುವುದು ನಿಂತಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ, ಯುದ್ಧ, ಸರಬರಾಜು ವ್ಯತ್ಯಯಗಳು ಉಂಟಾದಾಗ ಅದರ ಹೊರೆ ನೇರವಾಗಿ ಭಾರತೀಯ ರೈತನ ಮೇಲೆ ಬೀಳದೆ ಇರುವುದಿಲ್ಲ. ಹಲವು ವರ್ಷಗಳಿಂದ ‘ಆತ್ಮನಿರ್ಭರ ಭಾರತ’ದ ಘೋಷಣೆ ಕೇಳಿಸುತ್ತಿದ್ದರೂ ರಸಗೊಬ್ಬರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲಾಗಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ‘ರಸಗೊಬ್ಬರ ಪ್ರಮಾಣ ಕಡಿಮೆ ಮಾಡಿ, ಭೂಮಿಯ ಫಲವತ್ತತೆ ಕಾಪಾಡಿ’ ಎಂದು ದೇಶದ ಕೃಷಿಕರಿಗೆ ಕರೆ ಕೊಡುತ್ತಾರೆ. ಅವರು ಕರೆ ಕೊಟ್ಟ ನಂತರ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ‘ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರ ಸುಲಭವಾಗಿ ಸಿಗುತ್ತಿಲ್ಲ ಎನ್ನಲು ನನಗೆ ಹಿಂಜರಿಕೆ ಇಲ್ಲ. ರೈತರು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ಫರ್ಮಾನು ಹೊರಡಿಸುತ್ತಾರೆ.
ಇದನ್ನು ಓದಿದ್ದೀರಾ?: ನೆಹರೂ ನಿಂದನೆ ಎಂಬುದು ಸೆರಗಿಗೆ ಕಟ್ಟಿಕೊಂಡ ಕೆಂಡ! ಪರಮವಿಕೃತಿಯ ಈ ಪ್ರಾಜೆಕ್ಟು ಫಲಿಸುವುದಿಲ್ಲ
ಪ್ರಧಾನಿ ಮೋದಿ ಮತ್ತು ಕೃಷಿ ಸಚಿವ ಚೌಹಾಣ್ ಅವರ ಹೇಳಿಕೆಗಳನ್ನು ಗಮನಿಸಿದರೆ, ಇವರಿಗೆ ಕೃಷಿ ಕುರಿತು ಸಾಮಾನ್ಯ ಜ್ಞಾನ ಕೂಡ ಇದ್ದಂತಿಲ್ಲ; ಕೃಷಿಕರ ಬಗ್ಗೆ ಕಾಳಜಿಯೂ ಇಲ್ಲ ಎನ್ನುವುದು ತಿಳಿಯುತ್ತದೆ. ಏಕೆಂದರೆ, ದೇಶದಲ್ಲಿ ಇಂದು ಕೃಷಿಯನ್ನು ಎಷ್ಟು ಜನ ಅವಲಂಬಿಸಿದ್ದಾರೆ, ಏನನ್ನು ಬೆಳೆಯುತ್ತಿದ್ದಾರೆ, ಅದು ದೇಶದ ಆಹಾರ ಭದ್ರತೆಯನ್ನು ಎಷ್ಟರಮಟ್ಟಿಗೆ ಬಲಪಡಿಸಿದೆ, ಯಾವ ರಾಷ್ಟ್ರಗಳಿಗೆ ಯಾವ ಬೆಳೆ ರಫ್ತಾಗುತ್ತಿದೆ, ದೇಶದ ಆರ್ಥಿಕತೆಗೆ ಕೃಷಿ ಕ್ಷೇತ್ರದ ಕೊಡುಗೆ ಏನು ಎಂಬ ಅರಿವಿರುವವರು ಯಾರೂ ಈ ರೀತಿ ಉಡಾಫೆಯಿಂದ ಮಾತನಾಡುವುದಿಲ್ಲ. ಇವರು ಕಳೆದ 12 ವರ್ಷಗಳಿಂದ ಅಧಿಕಾರದಲ್ಲಿದ್ದರೂ, ಕೃಷಿ ಕ್ಷೇತ್ರವನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಲಾಗಲಿಲ್ಲ. ಕೃಷಿಕರ ಬದುಕನ್ನು ಹಸನುಗೊಳಿಸಲಿಲ್ಲ. ಮೂರು ಕೃಷಿ ಕರಾಳ ಕಾಯ್ದೆಗಳ ಮೂಲಕ ಕೃಷಿಕರ ಕತ್ತು ಹಿಸಕಲು ಹಿಂದುಮುಂದು ನೋಡಲಿಲ್ಲ. ಆದರೂ ‘ನಾನು ರೈತ ಪರ, ನಮ್ಮದು ರೈತ ಸರ್ಕಾರ’ ಎಂದು ಹೇಳಿಕೊಳ್ಳುವುದನ್ನೂ ಬಿಡಲಿಲ್ಲ.
ಪರಿಸ್ಥಿತಿ ಹೀಗಿರುವಾಗ, ಮೋದಿ ಭೂಮಿಯ ಫಲವತ್ತತೆ ಬಗ್ಗೆ ಪಂಡಿತರಂತೆ ಮಾತನಾಡುವುದು; ಕೃಷಿ ಸಚಿವ ಸಾವಯವ ಕೃಷಿಯತ್ತ ಹೊರಳಿ ಎಂದು ಫರ್ಮಾನು ಹೊರಡಿಸುವುದು ಹಾಸ್ಯಾಸ್ಪದವಲ್ಲವೇ? ಅಕಸ್ಮಾತ್, ಅವರು ಹೇಳಿದ್ದು ಒಳ್ಳೆಯದಕ್ಕಾಗಿ ಎಂದಿಟ್ಟುಕೊಂಡರೂ, ಅದನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸರ್ಕಾರದ ಕ್ರಮಗಳೇನು? ಅದನ್ನು ಅಳವಡಿಸಿಕೊಂಡ ದೇಶಗಳು ಎಂತಹ ಪರಿಣಾಮಗಳನ್ನು ಎದುರಿಸಿವೆ ಎಂಬುದನ್ನಾದರೂ ಅರಿತಿದ್ದಾರೆಯೇ?
2021ರಲ್ಲಿ ಶ್ರೀಲಂಕಾ ಸರ್ಕಾರ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಔಷಧಿಗಳ ಆಮದನ್ನು ಹಠಾತ್ತನೆ ನಿಷೇಧಿಸಿತು. ದೇಶವನ್ನು ‘ಶೇ. 100 ಸಾವಯವ ಕೃಷಿ ದೇಶ’ವನ್ನಾಗಿ ಮಾಡಲಾಗುವುದೆಂದು ಘೋಷಿಸಿತು.
ಇದರಿಂದ ಆದ ಪರಿಣಾಮವೇನೆಂದರೆ, ಕೆಲವೇ ತಿಂಗಳಲ್ಲಿ ಅಕ್ಕಿ ಉತ್ಪಾದನೆ ಶೇ. 20ರಷ್ಟು ಕುಸಿಯಿತು. ದೇಶದಲ್ಲಿ ಇದ್ದಕ್ಕಿದ್ದಂತೆ ಆಹಾರ ಕೊರತೆ ಉಂಟಾಯಿತು. ಅಕ್ಕಿಯನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಯಿತು. ಆಹಾರ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾದವು. ರೈತರ ಪ್ರತಿಭಟನೆಗಳು ಜೋರಾದವು. ದೇಶದ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ತೀವ್ರವಾಯಿತು. ಕೊನೆಗೆ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕಾಯಿತು. ಮತ್ತೆ ರಾಸಾಯನಿಕ ಗೊಬ್ಬರಗಳ ಬಳಕೆಗೆ ಅವಕಾಶ ನೀಡಿತು.
ಹಾಗೆಯೇ ಭೂತಾನ್ ಹಲವು ವರ್ಷಗಳ ಹಿಂದೆಯೇ ‘ಶೇ. 100 ಸಾವಯವ ಕೃಷಿ’ಯತ್ತ ದೇಶ ಎಂದಿತು. ಆದರೆ ಅದು ಶ್ರೀಲಂಕಾದಂತೆ ಹಠಾತ್ ನಿಷೇಧ ಹೇರಲಿಲ್ಲ. ಬದಲಿಗೆ ನಿಧಾನವಾಗಿ ಸಾವಯವ ಕೃಷಿಯನ್ನು ಉತ್ತೇಜಿಸಲು ಪ್ರಯತ್ನಿಸಿತು. ಪರಿಣಾಮವೇನೆಂದರೆ, ಸಾವಯವ ಕೃಷಿಯಲ್ಲಿ ಸರಾಸರಿ ಇಳುವರಿ ಸಾಂಪ್ರದಾಯಿಕ ಕೃಷಿಗಿಂತ ಶೇ. 24ರಷ್ಟು ಕಡಿಮೆಯಾಯಿತು. ಆಹಾರ ಉತ್ಪಾದನೆ ಕುಸಿಯುವ ಸಾಧ್ಯತೆ ಹೆಚ್ಚಾಯಿತು. ಧಾನ್ಯ ಸ್ವಾವಲಂಬನೆ ದುರ್ಬಲವಾಯಿತು. ಆಹಾರ ಆಮದು ಅವಲಂಬನೆ ಹೆಚ್ಚಾಯಿತು. ದೇಶದ ಒಟ್ಟಾರೆ ಆರ್ಥಿಕತೆಯ ಮೇಲೆ ಒತ್ತಡ ಉಂಟಾಯಿತು. ಇದರಿಂದ ಭೂತಾನ್ ಕೂಡ ಇನ್ನೂ ಸಂಪೂರ್ಣ ಸಾವಯವ ರಾಷ್ಟ್ರವಾಗಲು ಸಾಧ್ಯವಾಗಿಲ್ಲ.
ಇದನ್ನು ಓದಿದ್ದೀರಾ?: ವಂದೇ ಮಾತರಂ – ಕಾಂಗ್ರೆಸ್ ಸಿದ್ಧಾಂತ: ಡಿಕೆ ಆಯ್ಕೆ ಏನು?
ಇದರಿಂದ ನಾವು ಕಲಿಯಬೇಕಾದ ಪಾಠವೇನೆಂದರೆ, ಸಾವಯವ ಕೃಷಿ ವಿಫಲ ಎಂಬುದಲ್ಲ, ಇದ್ದಕ್ಕಿದ್ದಂತೆ ಬದಲಾವಣೆ ತರಲಾಗುವುದಿಲ್ಲ. ಅದಕ್ಕೆ ನಮ್ಮ ಕೃಷಿಕರು ಸಿದ್ಧರಾಗಿಲ್ಲ. ಜೊತೆಗೆ, ರಾಸಾಯನಿಕ ಗೊಬ್ಬರಗಳನ್ನು ಒಂದೇ ದಿನದಲ್ಲಿ ನಿಷೇಧಿಸಿದರೆ ಉತ್ಪಾದನೆ ಕುಸಿಯಬಹುದು. ಮಣ್ಣಿನ ಫಲವತ್ತತೆ ಪುನರ್ನಿರ್ಮಾಣಕ್ಕೆ 2ರಿಂದ 5 ವರ್ಷಗಳ ಕಾಲ ಬೇಕಾಗಬಹುದು. ರೈತರಿಗೆ ತರಬೇತಿ, ಪರಿವರ್ತನಾ ಅವಧಿ ಮತ್ತು ಆರ್ಥಿಕ ಬೆಂಬಲದ ಅಗತ್ಯವಿರಬಹುದು. ಅದಕ್ಕಿಂತ ಮೊದಲು ಸಾವಯವ ಗೊಬ್ಬರಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಬೇಕು. ಅಲ್ಲಿಯವರೆಗೆ ಸಣ್ಣ-ಅತಿಸಣ್ಣ ರೈತರು ಬದುಕುತ್ತಾರೆಯೇ? ದೇಶದ ಆಹಾರ ಭದ್ರತೆ ಕತೆ ಏನಾಗಲಿದೆ?
ರಾಸಾಯನಿಕ ಅಥವಾ ಸಾವಯವ ವಿಧಾನಗಳ ಬದಲು ಸಮಗ್ರ ಪೋಷಕಾಂಶ ನಿರ್ವಹಣೆ ಹೆಚ್ಚು ಪರಿಣಾಮಕಾರಿ ಎಂದ ಕೃಷಿ ವಿಜ್ಞಾನಿಗಳ ಅಭಿಪ್ರಾಯದತ್ತ ಸರ್ಕಾರ ಯೋಚಿಸಬೇಕು. ನಿಧಾನವಾಗಿಯಾದರೂ, ರೈತರ ಮನವೊಲಿಸುವ ಕೆಲಸ ಮಾಡಬೇಕು.
ಇದನ್ನೇನೂ ಮಾಡದ ಸರ್ಕಾರ, ಕೆಟ್ಟ ವಿದೇಶಾಂಗ ನೀತಿಯಿಂದಾಗಿ ರಸಗೊಬ್ಬರದ ಕೊರತೆ ಉಂಟಾಗಿರುವ ಲೋಪವನ್ನು ಮುಚ್ಚಿಕೊಳ್ಳಲು ಭೂಮಿಯ ಫಲವತ್ತತೆ, ಸಾವಯವ ಕೃಷಿ ಕುರಿತು ಬೋಧನೆಯಲ್ಲಿ ನಿರತವಾಗಿದೆ. ರೈತರು ಬೆಳೆದ ಬದನೆ ತಿಂದು ಬೋಧನೆ ಮಾಡುವ ಮೋದಿಯ ‘ಬುದ್ಧಿವಂತಿಕೆ’ ದಿನದಿಂದ ದಿನಕ್ಕೆ ಬಯಲಾಗುತ್ತಲೇ ಸಾಗಿದೆ.





