ಈ ದಿನ ಸಂಪಾದಕೀಯ | ಒಳಜಗಳದಲ್ಲಿ ಬಸವಳಿದ ಬಿಜೆಪಿ; ಕರ್ನಾಟಕಕ್ಕೆ ಬೇಕು ಸಮರ್ಥ ವಿರೋಧ ಪಕ್ಷ

Date:

Advertisements

ಕರ್ನಾಟಕದಲ್ಲಿ ಪಕ್ಷಕ್ಕೆ ರಾಜ್ಯಾಧ್ಯಕ್ಷನನ್ನು ನೇಮಿಸಲು ಮತ್ತು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿ ಸುಮಾರು ಆರು ತಿಂಗಳು ತೆಗೆದುಕೊಂಡಿತ್ತು. ಹೈಕಮಾಂಡ್ ಅಳೆದುಸುರಿದು ರಾಜ್ಯಾಧ್ಯಕ್ಷರನ್ನಾಗಿ ಬಿ ವೈ ವಿಜಯೇಂದ್ರ ಮತ್ತು ವಿಪಕ್ಷ ನಾಯಕರನ್ನಾಗಿ ಆರ್ ಅಶೋಕ್ ಅವರನ್ನು ಆಯ್ಕೆ ಮಾಡಿತ್ತು. ಅಲ್ಲಿಗೆ ಪಕ್ಷದೊಳಗಿನ ಸಮಸ್ಯೆಗಳು ಬಗೆಹರಿದವು ಎಂದು ಹೈಕಮಾಂಡ್ ಅಂದುಕೊಂಡಿತ್ತೇನೋ. ವಾಸ್ತವವಾಗಿ, ಅಲ್ಲಿಂದ ಪಕ್ಷದೊಳಗಿನ ಅರಾಜಕತೆ, ಒಳಜಗಳಗಳು ಮತ್ತಷ್ಟು ಹೆಚ್ಚಾಗಿದ್ದು, ಬಿಜೆಪಿ ದಿನದಿಂದ ದಿನಕ್ಕೆ ರಗಳೆಗಳ ಕೇಂದ್ರಸ್ಥಾನವಾಗಿ ಪರಿಣಮಿಸಿದೆ.

ಸಾಮಾನ್ಯವಾಗಿ ವಿಧಾನ ಮಂಡಲ ಅಧಿವೇಶನ ನಡೆಯುವಾಗ ಆಡಳಿತ ಪಕ್ಷಕ್ಕೆ ವಿರೋಧ ಪಕ್ಷದ ಬಗ್ಗೆ ಕೊಂಚ ಆತಂಕ ಇರುತ್ತದೆ. ಸರ್ಕಾರದ ಹುಳುಕುಗಳು ಎಲ್ಲಿ ಬಯಲಾಗುತ್ತವೇ ಎನ್ನುವ ಭಯವಿರುತ್ತದೆ. ಆದರೆ, ಬೆಳಗಾವಿಯ ಅಧಿವೇಶನದಲ್ಲಿ ಕಾಂಗ್ರೆಸ್‌ಗಿಂತ ವಿರೋಧ ಪಕ್ಷ ಬಿಜೆಪಿಯ ಹುಳುಕುಗಳೇ ಹೆಚ್ಚಾಗಿ ಬಯಲಿಗೆ ಬಂದಿವೆ.

ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಗದ್ದಲ ಮಾಡಿ ಆರ್ ಅಶೋಕ್ ಸಭಾತ್ಯಾಗ ಮಾಡಿ ಕೆಲವು ಬಿಜೆಪಿ ಶಾಸಕರೊಂದಿಗೆ ಹೊರಬಂದರು. ಆಗ ಆರ್ ಅಶೋಕ್ ವಿರುದ್ಧ ಕೆಂಡವಾದ ಅವರದ್ದೇ ಪಕ್ಷದ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್, ‘ಇಂತಹ …. ಮಕ್ಕಳನ್ನು ನಾಯಕರಾಗಿ ಮಾಡಿದರೆ ಪಕ್ಷ ಮುಳುಗದೇ ಇನ್ನೇನಾಗುತ್ತೆ? ಬಕೆಟ್ ಹಿಡಿದುಕೊಂಡು ರಾಜಕಾರಣ ಮಾಡುವವರು ಇನ್ನೇನು ಮಾಡುತ್ತಾರೆ’ ಎಂದು ಹರಿಹಾಯ್ದರು. ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬಂದವರಿಂದ ಇನ್ನೇನು ತಾನೆ ನಿರೀಕ್ಷೆ ಮಾಡಲು ಸಾಧ್ಯ ಎಂದು ಎಲ್ಲರೆದುರೇ ಆರ್ ಅಶೋಕ್ ಅವರನ್ನು ನಿಂದಿಸಿದರು.

Advertisements

ಸದ್ಯ ಬಿಜೆಪಿಯಲ್ಲಿ ಹಲವು ಗುಂಪುಗಳಿದ್ದು, ಎಸ್ ಆರ್ ವಿಶ್ವನಾಥ್ ಬಿ ವೈ ವಿಜಯೇಂದ್ರ ಗುಂಪಿಗೆ ಸೇರಿದವರು. ಅವರು ಎಂದೂ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರೇ ಅಲ್ಲ. ಅಂಥವರು ಈಗ ವಿಪಕ್ಷ ನಾಯಕ ಎನ್ನುವುದನ್ನೂ ನೋಡದೇ ಅಶೋಕ್ ವಿರುದ್ಧ ಹಾಗೆ ಮಾತನಾಡಲು ಬಿಎಸ್‌ವೈ ಹಾಗೂ ವಿಜಯೇಂದ್ರ ತಮ್ಮ ಬೆನ್ನಿಗಿದ್ದಾರೆ ಎನ್ನುವ ಧೈರ್ಯವೇ ಕಾರಣ. ಅಶೋಕ್ ಮೊದಲಿನಿಂದಲೂ ಯಾರನ್ನೂ ಸರಿಯಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ, ದಿಢೀರ್ ತೀರ್ಮಾನ ಮಾಡುತ್ತಾರೆ ಎಂದು ಆರೋಪಿಸಿರುವ ವಿಶ್ವನಾಥ್, ಅಶೋಕ್ ಹೆಸರಿನ ನಾಮಫಲಕ ಇರುವವರೆಗೂ ತಾನು ವಿಪಕ್ಷ ನಾಯಕನ ಕೊಠಡಿಗೆ ಕಾಲಿಡುವುದಿಲ್ಲ ಎನ್ನುವ ಶಪಥವನ್ನೂ ಮಾಡಿದ್ದಾರೆ. ಕೇವಲ ಮಾತಿಗಷ್ಟೇ ಸೀಮಿತವಾಗದೇ, ಬೆಂಗಳೂರಿನ ಶಾಸಕರ ಸಭೆಯನ್ನೂ ವಿಶ್ವನಾಥ್ ಕರೆದಿದ್ದಾರೆ. ಬಿಜೆಪಿಯೊಳಗಿನ ಈ ಗೊಂದಲಕ್ಕೆ ಪಕ್ಷದಲ್ಲಿನ್ನೂ ಚೀಫ್ ವಿಪ್ ಹಾಗೂ ಉಪನಾಯಕರಿಲ್ಲದೇ ಇರುವುದೇ ಕಾರಣ ಎನ್ನಲಾಗುತ್ತಿದೆ.

ವಿಪಕ್ಷ ನಾಯಕರಾದ ಆರ್ ಅಶೋಕ್ ವಿರುದ್ಧ ಪರೋಕ್ಷವಾಗಿ ಬಿಎಸ್‌ವೈ ಮತ್ತು ಬಿ ವೈ ವಿಜಯೇಂದ್ರ ಪರೋಕ್ಷವಾಗಿ ಕತ್ತಿ ಮಸೆಯುತ್ತಿದ್ದಾರೆ. ಇನ್ನೊಂದೆಡೆ, ಇದೇ ಬಿಎಸ್‌ವೈ ಮತ್ತು ಬಿ ವೈ ವಿಜಯೇಂದ್ರ ವಿರುದ್ಧ ಯತ್ನಾಳ್ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ಬಿಎಸ್‌ವೈ ಮುಖ್ಯಮಂತ್ರಿ ಆಗಿದ್ದ ಕಾಲದಿಂದಲೂ ಯತ್ನಾಳ್ ಅವರ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಲೇ ಇದ್ದಾರೆ. ಹೈಕಮಾಂಡ್ ಹಲವು ಬಾರಿ ನೋಟಿಸ್ ಕೊಟ್ಟರೂ, ಅವರ ಬಾಯಿ ಮುಚ್ಚಿಸಲು ಅವರಿಗೆ ಸಾಧ್ಯವಾಗಿಲ್ಲ. ಬಿಎಸ್‌ವೈ ಆಡಳಿತದ ಅವಧಿಯಲ್ಲಿ ಬಿ ವೈ ವಿಜಯೇಂದ್ರ ಹಣ ವಸೂಲು ಮಾಡುತ್ತಿದ್ದಾರೆ ಎಂದು ಯತ್ನಾಳ್ ನೇರವಾಗಿಯೇ ಆರೋಪಿಸಿದ್ದರು. ಬಿ ವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ, ಯತ್ನಾಳ್ ಮನೆಗೆ ಹೋಗಿ ಅವರನ್ನು ಒಲಿಸಿಕೊಳ್ಳುವ ಮಾತು ಆಡಿದ್ದರು. ಆದರೆ, ಅದಕ್ಕೆ ಆಸ್ಪದ ನೀಡದ ಯತ್ನಾಳ್, ತನ್ನ ಮನೆಗೆ ಯಾರೂ ಬರುವ ಅಗತ್ಯವಿಲ್ಲ ಎಂದಿದ್ದರು. ಆ ಮೂಲಕ ತಮ್ಮ ವಾಗ್ದಾಳಿ ಮುಂದುವರೆಸುವ ಸೂಚನೆಯನ್ನು ಯತ್ನಾಳ್ ನೀಡಿದ್ದರು.

ಬಿಜೆಪಿಯಲ್ಲಿ ತಾನು ಒಂಟಿ ಸಲಗ ಎಂದು ಎಲ್ಲರ ಮೇಲೂ ಕೆಂಡ ಕಾರುತ್ತಿದ್ದ ಯತ್ನಾಳ್ ಟೀಕಾತೀತರಾಗಿಯೇನೂ ಉಳಿದಿಲ್ಲ. ಅವರ ವಿರುದ್ಧ ಅವರದೇ ಪಕ್ಷದ ಮುರುಗೇಶ್ ನಿರಾಣಿ ತಮ್ಮ ಮಾತಿನ ಸಮರವನ್ನು ಮುಂದುವರೆಸುತ್ತಿದ್ದಾರೆ. ಇಬ್ಬರೂ ಪಂಚಮಸಾಲಿಗಳೇ ಆಗಿದ್ದರೂ ಇಬ್ಬರ ನಡುವೆ ಸಮನ್ವಯವೇ ಇಲ್ಲವಾಗಿ ಪರಸ್ಪರ ಕೆಸರೆರಚಾಟ ಮುಂದುವರೆದಿದೆ.

ಇನ್ನು ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ ಸಿ ಟಿ ರವಿ, ಬಿ ವೈ ವಿಜಯೇಂದ್ರ ಅಧ್ಯಕ್ಷರಾಗಿ, ಆರ್ ಅಶೋಕ್ ವಿಪಕ್ಷ ನಾಯಕರಾಗುತ್ತಿದ್ದಂತೆ ಬಹುತೇಕ ಮೌನಕ್ಕೆ ಜಾರಿದ್ದಾರೆ. ಇದೇ ರೀತಿ ಸೋತವರ ಪೈಕಿ ಸೋಮಣ್ಣನ ಪರಿಸ್ಥಿತಿ ಚಿಂತಾಜನಕವಾಗಿದೆ. ರೇಣುಕಾಚಾರ್ಯ ಹೈಕಮಾಂಡ್ ಅನ್ನೇ ಆಗಾಗ ಜಾಡಿಸುತ್ತಿದ್ದಾರೆ, ಸುಧಾಕರ್, ಅರವಿಂದ ಬೆಲ್ಲದ್, ಅರವಿಂದ ಲಿಂಬಾವಳಿ ತಮ್ಮನ್ನು ಮಾತನಾಡಿಸುವವರೇ ಇಲ್ಲ ಎಂದು ತಮ್ಮಲ್ಲೇ ಗೊಣಗಾಡಿಕೊಂಡು ಸುಮ್ಮನಾಗುತ್ತಿದ್ದಾರೆ. ಹೀಗೆ ದಿನದಿಂದ ದಿನಕ್ಕೆ ಬಿಜೆಪಿ ಕುಸಿಯುತ್ತಿದೆ. ಪಕ್ಷದೊಳಗೆ ಅರಾಜಕತೆ ಹೆಚ್ಚಾಗುತ್ತಿದೆ.

ಸದ್ಯಕ್ಕೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಲೇ ಇದೆ. ಈರುಳ್ಳಿ ಬೆಳ್ಳುಳ್ಳಿ ಬೆಲೆಗಳು ಗಗನ ಮುಟ್ಟಿವೆ. ಇದರ ಕಾರಣಗಳೇನು ಎನ್ನುವುದನ್ನು ಪತ್ತೆ ಹಚ್ಚಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಾದದ್ದು ವಿರೋಧ ಪಕ್ಷದ ಜವಾಬ್ದಾರಿ. ಜೊತೆಗೆ ಬರಗಾಲದ ಪರಿಹಾರ ಕಾರ್ಯಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸಬೇಕು. ಆದರೆ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹೋದರೆ ತಾವೇ ಬಿಕ್ಕಟ್ಟಿಗೆ ಸಿಲುಕುತ್ತೇವೆ ಎನ್ನುವುದು ಬಿಜೆಪಿ ಮುಖಂಡರಿಗೆ ಚೆನ್ನಾಗಿ ಗೊತ್ತಿದೆ. ಬರಗಾಲದ ಪರಿಹಾರಕ್ಕೆ, ಬೆಳೆ ನಾಶ ಪರಿಹಾರಕ್ಕೆ ಕೇಂದ್ರದಿಂದ ಇನ್ನೂ ನಯಾ ಪೈಸೆ ಬಂದಿಲ್ಲ. ಆ ಬಗ್ಗೆ ಕಾಂಗ್ರೆಸ್‌ನವರು ತಮ್ಮ ಮೇಲೆ ಮುಗಿಬೀಳುತ್ತಾರೆ. ಹಾಗಾಗಿ ಬಿಜೆಪಿ ಮುಖಂಡರು ನಿಜವಾದ ವಿಷಯಗಳ ತಂಟೆಗೆ ಹೋಗದೇ ಅಧಿವೇಶನ ಮುಗಿಯುವವರೆಗೆ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ, ಮುಸ್ಲಿಂ ದ್ವೇಷ, ಜಮೀರ್ ಹೇಳಿಕೆ ಇಂಥ ಹುಸಿವಿಚಾರಗಳಲ್ಲೇ ಕಾಲ ಕಳೆಯಲು ನಿರ್ಧರಿಸಿದಂತಿದೆ. ಪ್ರಜಾಪ್ರಭುತ್ವದಲ್ಲಿ ಆಡಳಿತಾರೂಢ ಸರ್ಕಾರ ಹೆಜ್ಜೆ ತಪ್ಪಿದಾಗ ವಿರೋಧ ಪಕ್ಷ ಎಚ್ಚರಿಸಬೇಕು. ಆದರೆ, ವಿರೋಧ ಪಕ್ಷವೇ ಹಾದಿ ತಪ್ಪಿದರೆ ಏನು ಮಾಡಬೇಕು?

ಒಂದು ಸಮರ್ಥ ವಿರೋಧ ಪಕ್ಷ ಇಲ್ಲದೇ ಇರುವುದು ಕರ್ನಾಟಕದ ಮಟ್ಟಿಗೆ ಒಂದು ಕೊರತೆಯೇ ಸರಿ. ಸದ್ಯಕ್ಕಂತೂ ಬೆರಳೆಣಿಕೆಯ ಜನಪರ ಮಾಧ್ಯಮಗಳು ಮತ್ತು ಪ್ರಗತಿಪರ ಸಂಘಟನೆಗಳು ಒತ್ತಡ ಗುಂಪುಗಳಾಗಿ ಕೆಲಸ ಮಾಡಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X