ದೇವೇಗೌಡ ಅವರು ದೈವಭಕ್ತರು. ಹರದನಹಳ್ಳಿಯ ಪುರದಮ್ಮನಿಂದ ಹಿಡಿದು ನಿನ್ನೆ ಮೊನ್ನೆಯ ಅಯೋಧ್ಯೆಯ ಬಾಲರಾಮನವರೆಗೆ, ಗೌಡರು ಹೋಗದ ದೇವಸ್ಥಾನವಿಲ್ಲ, ಕೈ ಮುಗಿಯದ ದೇವರೂ ಇಲ್ಲ. ಗೌಡರ ದೈವಭಕ್ತಿಯ ಬಗ್ಗೆ ಯಾರಿಗೂ ಅನುಮಾನವಿಲ್ಲ. ಇರುವುದು ಆ ಭಕ್ತಿಯ ಹಿಂದಿನ ರಾಜಕೀಯ ನಡೆಯಲ್ಲಿ; ಮೋದಿ ಮತ್ತೊಮ್ಮೆ ಪ್ರಧಾನಿ ಎಂಬ ನುಡಿಯಲ್ಲಿ.
‘ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ’ ಎಂದಿದ್ದಾರೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ.
ದೇಶದ ಬಹುತ್ವ, ಒಕ್ಕೂಟ ವ್ಯವಸ್ಥೆ, ವೈವಿಧ್ಯಮಯ ಸಂಸ್ಕೃತಿ, ಜಾತ್ಯತೀತ ನಿಲುವುಳ್ಳವರು ದೇವೇಗೌಡರ ಈ ಅಭಿಪ್ರಾಯವನ್ನು ಅಲ್ಲಗಳೆಯಬಹುದು. ಗೌಡರ ನಡೆ ಮತ್ತು ನುಡಿಯನ್ನು ಅನುಮಾನದಿಂದ ನೋಡಬಹುದು. ಈ ವಯಸ್ಸಿನಲ್ಲಿ ಈ ರೀತಿ ಮಾತನಾಡುವ ಅನಿವಾರ್ಯತೆ ಅವರಿಗೆ ಇರಲಿಲ್ಲ ಎಂದು ಕಟುವಾಗಿ ಟೀಕಿಸಲೂಬಹುದು.
ಇವರು ದೇವೇಗೌಡರ ವಿರೋಧಿಗಳಲ್ಲ. 1962ರಲ್ಲಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಕ್ಷಣದಿಂದ, ರಾಜ್ಯದ ಮುಖ್ಯಮಂತ್ರಿ, ದೇಶದ ಪ್ರಧಾನಿಮಂತ್ರಿಯಾಗುವವರೆಗೂ ಜೊತೆಗಿದ್ದವರು. ಅವರ ಅರವತ್ತು ವರ್ಷಗಳ ರಾಜಕೀಯ ಬದುಕಿನ ಏಳುಬೀಳುಗಳನ್ನು ಖುದ್ದು ಕಂಡವರು. ಪರ್ಯಾಯ ರಾಜಕಾರಣ, ಜಾತ್ಯತೀತ ನಡೆ, ಒಳಗೊಳ್ಳುವಿಕೆಯನ್ನು ಒಪ್ಪಿ ಬೆಂಬಲಿಸಿದವರು. ಹಾಗೆಯೇ ಅವರ ಕುಟುಂಬಕಲ್ಯಾಣ ಅತಿಯಾದಾಗ ನಯವಾಗಿಯೇ ಅವರಿಂದ ದೂರ ಆದವರು.
ದೇವೇಗೌಡ ಅವರು ದೈವಭಕ್ತರು. ದೇವರು-ದೆವ್ವ-ಮಾಟ-ಮಂತ್ರ-ಗಿಳಿಶಾಸ್ತ್ರ-ಜ್ಯೋತಿಷ್ಯ-ಭವಿಷ್ಯವನ್ನು ಬಲವಾಗಿ ನಂಬುವವರು. ಹರದನಹಳ್ಳಿಯ ಪುರದಮ್ಮನಿಂದ ಹಿಡಿದು ನಿನ್ನೆ ಮೊನ್ನೆಯ ಅಯೋಧ್ಯೆಯ ಬಾಲರಾಮನವರೆಗೆ, ಗೌಡರು ಹೋಗದ ದೇವಸ್ಥಾನವಿಲ್ಲ, ಕೈ ಮುಗಿಯದ ದೇವರೂ ಇಲ್ಲ. ಗೌಡರ ದೈವಭಕ್ತಿಯ ಬಗ್ಗೆ ಯಾರಿಗೂ ಅನುಮಾನವಿಲ್ಲ. ಇರುವುದು ಆ ಭಕ್ತಿಯ ಹಿಂದಿನ ರಾಜಕೀಯ ನಡೆಯಲ್ಲಿ; ಮೋದಿ ಮತ್ತೊಮ್ಮೆ ಪ್ರಧಾನಿ ಎಂಬ ನುಡಿಯಲ್ಲಿ.
ಹರದನಹಳ್ಳಿಯ ಬಡರೈತನ ಮಗ ಶಾಸಕನಾಗಿ, ಸಚಿವನಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿದ್ದು ಪ್ರಜಾಪ್ರಭುತ್ವದಿಂದ. ಬಾಬಾ ಸಾಹೇಬರ ಸಂವಿಧಾನದ ಬಲದಿಂದ. ಅದನ್ನು ಇನ್ನಷ್ಟು ಗಟ್ಟಿಗೊಳಿಸುವ, ಅದರ ಘನತೆ ಮತ್ತು ಗೌರವ ಹೆಚ್ಚಿಸುವ ಕೆಲಸ ಮಾಡಬೇಕಾದ ಗೌಡರು, ಈಗ ಮೋದಿ ಎಂಬ ವ್ಯಕ್ತಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ತಮ್ಮೆಲ್ಲ ಬುದ್ಧಿವಂತಿಕೆಯನ್ನು ಬಳಸುತ್ತಿರುವುದು, ಯಾವ ಕಾರಣಕ್ಕಾಗಿ ಎಂಬ ಪ್ರಶ್ನೆ ಎದುರಾಗುತ್ತದೆ.
ಜೊತೆಗೆ, ವಿಧಾನಸಭಾ ಚುನಾವಣೆಗೂ ಮುಂಚೆ ಬಿಜೆಪಿಯನ್ನು ‘ಪೇಶ್ವೆ ಬ್ರಾಹ್ಮಣರ ಪಕ್ಷʼವೆಂದು ನಾಮಕರಣ ಮಾಡಿ, ಸಂಘಪರಿವಾರದ ಷಡ್ಯಂತ್ರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದ ಕುಮಾರಸ್ವಾಮಿಯವರ ರಾಜಕೀಯ ಕೆಚ್ಚು ಕುತೂಹಲ ಕೆರಳಿಸಿತ್ತು. ಆದರೆ, ಅದೇ ಕುಮಾರಸ್ವಾಮಿ ಅಷ್ಟೇ ಸಲೀಸಾಗಿ ಬಿಜೆಪಿಯನ್ನು ಬಿಗಿದಪ್ಪಿಕೊಳ್ಳಬಹುದು ಎಂಬ ಅನುಮಾನ ಎಲ್ಲಾ ಕಾಲಕ್ಕೂ ಯಾಕೆ ಇತ್ತು ಎನ್ನುವುದನ್ನು ಕುಮಾರಸ್ವಾಮಿಯವರೇ ಹೇಳಬೇಕಾಗಿದೆ.
ದೇವೇಗೌಡರ ಜಾತ್ಯತೀತ ಜನತಾದಳ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೀರಾ ಹೀನಾಯವಾಗಿ ಸೋತಿದೆಯಷ್ಟೇ, ಸತ್ತಿಲ್ಲ. ಗೌಡರಿಗಿರುವ ಅನುಭವ, ಹಿರಿತನ ಮತ್ತು ಬುದ್ಧಿವಂತಿಕೆಯನ್ನು ಬಳಸಿಕೊಂಡಿದ್ದರೆ, ಜೆಡಿಎಸ್ ರಾಜ್ಯದ ಮೂರನೇ ಶಕ್ತಿಯಾಗಿ ನೆಲೆ ನಿಲ್ಲಬಹುದಿತ್ತು. ಎಲ್ಲ ಜಾತಿ-ವರ್ಗಗಳನ್ನು ಒಳಗೊಡಿದ್ದರೆ, ಅವರ ದನಿಯಾಗಿದ್ದರೆ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಬಹುದಿತ್ತು. ಇವತ್ತಲ್ಲ, ನಾಳೆ ಅಧಿಕಾರಕ್ಕೆ ಬರಬಹುದಿತ್ತು.
ಆದರೆ, ಸೋಲಾಯಿತು ಎಂಬ ಸಣ್ಣ ಕಾರಣವನ್ನೇ ಮುಂದಿಟ್ಟುಕೊಂಡು, ಇಲ್ಲಿಯವರೆಗೆ ತಾವು ನಂಬಿದ ತತ್ವ-ಸಿದ್ಧಾಂತವನ್ನು ಬಲಿ ಕೊಟ್ಟು, ಬಿಜೆಪಿಯನ್ನು ಅಪ್ಪಿಕೊಳ್ಳುವ ಅಗತ್ಯವಿರಲಿಲ್ಲ. ತಾವು ಬೆಳೆಯಲು ಕಾರಣವಾದ ಪ್ರಜಾಪ್ರಭುತ್ವವನ್ನೇ ಅಣಕಿಸುವಂತೆ, ಪಕ್ಷದ ಅಧ್ಯಕ್ಷರನ್ನು, ಕಾರ್ಯಕರ್ತರನ್ನು ಕತ್ತಲೆಯಲ್ಲಿಟ್ಟು ಬಿಜೆಪಿಯೊಂದಿಗೆ ಮಾತುಕತೆ ಮುಗಿಸಿದ್ದು ಸರಿಯಲ್ಲ. ಲೋಕಸಭಾ ಚುನಾವಣೆಗಾಗಿ ಮೈತ್ರಿ ಮಾಡಿಕೊಳ್ಳುವ ಮೂಲಕ ಮೂರನೇ ಶಕ್ತಿಯನ್ನು ಮುಗಿಸಿದ್ದು; ಮೋದಿ ಮಂತ್ರಕ್ಕೆ ಮರುಳಾಗಿ ಸಂವಿಧಾನದ ಶಕ್ತಿಯನ್ನು ಕುಂದಿಸಿದ್ದು- ಜನನಾಯಕನ ನಡೆಯಲ್ಲ.
ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ, 70ರ ದಶಕದಲ್ಲಿ ದೇವೇಗೌಡರೆಂದರೆ- ವಿಪಕ್ಷ ನಾಯಕ ಸ್ಥಾನಕ್ಕೆ ಬೆಲೆ ತಂದವರೆಂಬ ಹೆಸರಿತ್ತು. ಭ್ರಷ್ಟಾಚಾರವನ್ನು ಬಯಲಿಗೆಳೆಯುವ, ಆಡಳಿತ ಪಕ್ಷಕ್ಕೆ ಚುರುಕು ಮುಟ್ಟಿಸುವ, ನಾಡಿನ ಜನರ ದನಿಯಾಗುವ, ಜಾಗೃತಿ ಮೂಡಿಸುವ ಭರವಸೆಯ ನಾಯಕ ಎಂಬ ಮಾತು ಕೇಳಿಬಂದಿತ್ತು. ಇಂತಹ ಗೌಡರು ದೇಶದ ಪ್ರಧಾನಮಂತ್ರಿಯಾದಾಗ ಪ್ರಜಾಪ್ರಭುತ್ವಕ್ಕೆ ಬೆಲೆ ಬಂದಿತ್ತು. ಇತಿಹಾಸದ ಪುಟಗಳಲ್ಲಿ ದಾಖಲಾಗಿತ್ತು. ಕನ್ನಡನಾಡು ಹೆಮ್ಮೆಯಿಂದ ಬೀಗಿತ್ತು.
ಇಂತಹ ಜನನಾಯಕ ಇಂದು ರಾಜ್ಯದ ಸ್ಥಿತಿಗತಿಗಳ ಬಗ್ಗೆ ವಿಶ್ಲೇಷಣೆ ಮಾಡುತ್ತಿಲ್ಲ. ಬರದ ಬಗ್ಗೆ ಮಾತನಾಡುತ್ತಿಲ್ಲ. ಬೆಲೆ ಏರಿಕೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ವ್ಯವಸ್ಥೆಯಲ್ಲಿ ಬಡವರು ಹೇಗೆ ಬದುಕುತ್ತಿದ್ದಾರೆ ಎಂದು ಯೋಚಿಸುತ್ತಿಲ್ಲ. ನೆಲ-ಜಲ-ಭಾಷೆ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಿಲ್ಲ. ಮತ್ತೆ ಫೀನಿಕ್ಸ್ ಹಕ್ಕಿಯಂತೆ ಬೂದಿಯಿಂದ ಎದ್ದುಬರುತ್ತೇನೆ ಎಂದು ಹೂಂಕರಿಸುತ್ತಿಲ್ಲ. ಬದಲಿಗೆ, ಬಾಲರಾಮನನ್ನು ನೋಡಲು ಅಯೋಧ್ಯೆ ದೂರ ಎನ್ನುತ್ತಿಲ್ಲ. ಮೋದಿ ಮತ್ತೊಮ್ಮೆ ಪ್ರಧಾನಿ ಎನ್ನುವ ಭಜನೆ ಬಿಟ್ಟಿಲ್ಲ.
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪ, ಗೋಪಾಲಗೌಡ, ವೀರೇಂದ್ರ ಪಾಟೀಲ್, ದೇವರಾಜ ಅರಸು ಅವರಂತಹ ನಾಯಕರು ಎಂದೂ ಹೀಗೆ ವರ್ತಿಸಿದವರಲ್ಲ. ತತ್ವ-ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟವರಲ್ಲ. ಕರ್ನಾಟಕದ ಅಸ್ಮಿತೆಯನ್ನು ಬಿಟ್ಟುಕೊಟ್ಟವರಲ್ಲ. ಕುಟುಂಬಕ್ಕಾಗಿ ಪಕ್ಷವನ್ನೇ ಬಲಿ ಕೊಟ್ಟವರೂ ಅಲ್ಲ.
ಇಂತಹ ರಾಜಕೀಯ ಪರಂಪರೆ ನಮ್ಮ ರಾಜ್ಯಕ್ಕಿರುವಾಗ, ಆ ಪರಂಪರೆಯಲ್ಲಿ ತಮ್ಮದೂ ಒಂದು ಪಾತ್ರವಿದೆ ಎಂದು ನಂಬಿರುವ ದೇವೇಗೌಡರು, ಈ ಇಳಿಗಾಲದಲ್ಲಿ ಅಯೋಧ್ಯೆಗೆ ತೆರಳಿ ಬಾಲರಾಮನ ದರ್ಶನ ಪಡೆಯುವ ನೆಪದಲ್ಲಿ ಮೋದಿ ಭಜನೆಗಿಳಿದಿರುವುದು ಪ್ರಜಾಪ್ರಭುತ್ವದ ಅಣಕ, ನಾಡಿನ ದುರಂತ.
