ಈ ದಿನ ಸಂಪಾದಕೀಯ | ದೇವೇಗೌಡರ ಧೃತರಾಷ್ಟ್ರ ಸಿಂಡ್ರೋಮ್ ಮತ್ತು ಮೋದಿ ವಾಷಿಂಗ್ ಮಷೀನ್

Date:

Advertisements
ಪ್ರಜ್ವಲ್ ರೇವಣ್ಣರ ಕೊಳಕು ಕೃತ್ಯ ಇಡೀ ಕುಟುಂಬಕ್ಕೇ ಗೊತ್ತಿತ್ತು. ಬಿಜೆಪಿ ರಾಷ್ಟ್ರೀಯ ನಾಯಕರಿಗೂ ಗೊತ್ತಿತ್ತು. ಗೊತ್ತಿದ್ದೂ ಮೈತ್ರಿ ಮಾಡಿಕೊಂಡರು. ಮಣಿಪುರದ ‘ಬೆತ್ತಲೆ’ಗೆ ಬೆಚ್ಚಲಿಲ್ಲ, ಬಾಯ್ಬಿಚ್ಚಲಿಲ್ಲ; ಇನ್ನು ಹಾಸನದ ‘ವಿಕೃತಿ’ಗೆ ವಿಚಲಿತರಾಗುವುದುಂಟೇ ಎಂಬ ತರ್ಕಕ್ಕೆ ಬಿದ್ದ ಧೃತರಾಷ್ಟ್ರ ದೇವೇಗೌಡರು, ಬಿಜೆಪಿ ವಾಷಿಂಗ್ ಮಷೀನ್‌ನಲ್ಲಿ ನಮ್ಮ ಕುಟುಂಬವೂ ಹೀಗೆಯೇ ‘ಕ್ಲೀನ್ ಕುಟುಂಬ’ವಾಗಬಹುದೆಂಬ ದುರಾಸೆಯಲ್ಲಿ  ಮೋದಿಯವರನ್ನು ತಬ್ಬಿಕೊಂಡರು. ಆದರೆ, ಪಾಪದ ಕೊಡ ತುಂಬಿತ್ತು…

ಜಾತ್ಯತೀತ ಜನತಾ ದಳದ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಹೊಳೆನರಸೀಪುರದ ಶಾಸಕ ಎಚ್.ಡಿ. ರೇವಣ್ಣನವರ ವಿರುದ್ಧ, ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ದೂರು ದಾಖಲಾಗಿದೆ. 47 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಎಚ್.ಡಿ. ರೇವಣ್ಣ ಎ1, ಪ್ರಜ್ವಲ್ ರೇವಣ್ಣ ಎ2 ಆರೋಪಿ ಎಂದು ಎಫ್ಐಆರ್‍‌ನಲ್ಲಿ ನಮೂದಿಸಲಾಗಿದೆ. ಈ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ(ಎಸ್ಐಟಿ)ವನ್ನು ರಚಿಸಿ, ಅದಕ್ಕೆ ಒಪ್ಪಿಸಿದೆ.

ಪ್ರಕರಣವನ್ನು ಎಸ್ಐಟಿಗೆ ಒಪ್ಪಿಸುತ್ತಿದ್ದಂತೆ, ಹಾಸನ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು, ‘ಪಾಪದ ಕೊಡ ತುಂಬಿದಾಗ ಎಲ್ಲವೂ ಹೊರಬರಬೇಕು. ಶಿಶುಪಾಲನಿಗೆ ಕೃಷ್ಣ ನೂರು ತಪ್ಪು ಮಾಡಲು ಅವಕಾಶ ಕೊಟ್ಟು, 101ನೇ ತಪ್ಪು ಮಾಡಲು ಅವಕಾಶ ಕೊಡಲಿಲ್ಲ’ ಎಂದಿರುವುದು ‘ರೇವಣ್ಣ ರಿಪಬ್ಲಿಕ್’ ಬಗೆಗಿನ ಅದುಮಿಟ್ಟ ಅಸಹನೆ ಮತ್ತು ಆಕ್ರೋಶವನ್ನು ಪರೋಕ್ಷವಾಗಿ ಹೊರಹಾಕಿದಂತೆ ಕಾಣುತ್ತಿದೆ.

ಒಬ್ಬ ಜಿಲ್ಲಾಧಿಕಾರಿ ಒಂದು ಪ್ರಕರಣ ಕುರಿತು ಸಾರ್ವಜನಿಕವಾಗಿ ಈ ರೀತಿ ಅಭಿಪ್ರಾಯ ಹಂಚಿಕೊಂಡಿದ್ದು ಇದೇ ಮೊದಲು. ಅಂದರೆ, ‘ರೇವಣ್ಣ ರಿಪಬ್ಲಿಕ್’ನ ಮೇರೆ ಮೀರಿದ ಅಟ್ಟಹಾಸ ಮತ್ತು ಅಧಿಕಾರಿಗಳಿಗೆ ಕೊಡುತ್ತಿದ್ದ ಕಾಟ ಅತಿರೇಕಕ್ಕೆ ಹೋದಾಗ ವ್ಯಕ್ತವಾಗುವ ಅಭಿಪ್ರಾಯವೆಂದು, ನಾಡಿನ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಹಾಸನ ಜಿಲ್ಲೆಯಲ್ಲಿ ‘ರೇವಣ್ಣ ರಿಪಬ್ಲಿಕ್’ ಈ ಮಟ್ಟಿಗಿನ ಅಟ್ಟಹಾಸ ಮತ್ತು ಅತಿರೇಕಕ್ಕೆ ಹೋಗಲು ಎಚ್.ಡಿ. ದೇವೇಗೌಡರ ಪುತ್ರ ಪ್ರೇಮ, ಕುಟುಂಬ ಪ್ರೇಮವೇ ಕಾರಣ.

ಹರದನಹಳ್ಳಿಯ ಬಡ ಬೇಸಾಯಗಾರನ ಮಗನಾಗಿದ್ದ ಗೌಡರು, 1962ರಲ್ಲಿ ತಾಲೂಕು ಬೋರ್ಡ್ ಮೆಂಬರ್ ಆಗುವ ಮೂಲಕ ರಾಜಕಾರಣಕ್ಕೆ ಕಾಲಿಟ್ಟವರು. ಜನರಿಂದ ನಾಯಕನಾಗಿ ಹೊರಹೊಮ್ಮಿದವರು, ಹಳ್ಳಿಯಿಂದ ದಿಲ್ಲಿಗೆ ದಾಪುಗಾಲು ಹಾಕಿದವರು, ಬಡ ಬೇಸಾಯಗಾರನ ಮಗನೊಬ್ಬ ಪ್ರಧಾನಿಯಾಗುವ ಮೂಲಕ ಪ್ರಜಾಪ್ರಭುತ್ವದ ಆಶಯವನ್ನು ಸಾಕಾರಗೊಳಿಸಿದವರು.

ಇಂತಹ ದೇವೇಗೌಡರು ಈಗ 91ರ ಇಳಿಸಂಜೆಯಲ್ಲಿದ್ದಾರೆ. ಅಧಿಕಾರ ರಾಜಕಾರಣದ ಎಲ್ಲ ಹಂತಗಳನ್ನು ಕಣ್ಣಾರೆ ಕಂಡಿದ್ದಾರೆ, ಅನುಭವಿಸಿದ್ದಾರೆ. ಘನ ವ್ಯಕ್ತಿತ್ವಕ್ಕೆ ಉದಾಹರಣೆಯಾಗಿದ್ದಾರೆ.

ಹೀಗಿದ್ದ ದೊಡ್ಡಗೌಡರು, ಲೋಕಸಭಾ ಚುನಾವಣೆಗೂ ಮುಂಚೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರು. ಆಗ, ರಾಜಕಾರಣದಲ್ಲಿ ಮೈತ್ರಿ ಸಾಮಾನ್ಯ ಎಂದೇ ಎಲ್ಲರೂ ವ್ಯಾಖ್ಯಾನಿಸಿದರು. ತತ್ವ-ಸಿದ್ಧಾಂತ ಬಿಟ್ಟರೂ, ಅದು ಅವರ ಆಯ್ಕೆ ಎಂದು ಸುಮ್ಮನಾದರು. ಆದರೆ, ಮೈತ್ರಿಯ ಹಿಂದೆ ಪುತ್ರ ಪ್ರೇಮ, ಕುಟುಂಬ ಪ್ರೇಮದ ವಾಸನೆ ಹೊಡೆಯತೊಡಗಿದಾಗ, ಧೃತರಾಷ್ಟ್ರ ಸಿಂಡ್ರೋಮ್ ಎಂದರು.

ದ್ರೌಪದಿಯನ್ನು ಸಾರ್ವಜನಿಕವಾಗಿ ವಸ್ತ್ರಾಪಹರಣ ಮಾಡಿದಾಗ ಮೌನವಾಗಿದ್ದ ಕುರುಡು ರಾಜ ಧೃತರಾಷ್ಟ್ರನಂತೆ, ಭಾರತದ ರಾಜಕಾರಣದಲ್ಲಿ ಈ ಧೃತರಾಷ್ಟ್ರ ಸಿಂಡ್ರೋಮ್‌ಗೆ ಬಲಿಯಾಗಿ, ತಮ್ಮ ಸ್ವಂತ ಸಂತತಿಯ ವಿರುದ್ಧ ನೈತಿಕ ನಿಲುವು ತಾಳದೆ ವಿಫಲರಾದವರ ದೊಡ್ಡ ಪಟ್ಟಿಯೇ ಇದೆ. ಸಂಜಯ್ ಗಾಂಧಿಯಿಂದ ಇಂದಿರಾ ಗಾಂಧಿ ನಾಶವಾಗಿದ್ದು, ಅಳಿಯನ ಅಟಾಟೋಪಕ್ಕೆ ಅರಸು ಬಲಿಯಾಗಿದ್ದು, ಪುತ್ರ ವಿಜಯೇಂದ್ರನ ದುರಾಸೆಗೆ ಯಡಿಯೂರಪ್ಪ ಅಧಿಕಾರ ಕಳೆದುಕೊಂಡದ್ದು- ಬೇಕಾದಷ್ಟು ಉದಾಹರಣೆಗಳು ಕೊಡಬಹುದು. ಈಗ ಈ ಪಟ್ಟಿಗೆ ಮೊಮ್ಮಗ ಮತ್ತು ಮಗನ ಮೇಲಿನ ಮೋಹದಿಂದಾಗಿ ಎಚ್.ಡಿ.ದೇವೇಗೌಡ ಕೂಡ ಸೇರಿಹೋದರು.

ಮಹಾಭಾರತದಲ್ಲಿ ಕೌರವರ ತಂದೆ ಧೃತರಾಷ್ಟ್ರ ಕುರುಡ. ಆತನಿಗೆ ತನ್ನ ಮಕ್ಕಳು, ತನ್ನ ಕುಟುಂಬ, ತನ್ನ ಸಿದ್ಧಾಂತ, ತನ್ನ ಮಾತು, ತನ್ನ ಧರ್ಮ- ತನ್ನದು ಎಂದು ಅಂದುಕೊಂಡಿರುವ ಎಲ್ಲವನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ ಹೋಗುವುದೇ ಧೃತರಾಷ್ಟ್ರಪ್ರೇಮ. ಆತ ನಿಜವಾಗಿ ಕುರುಡನೋ, ಆ ಪಾತ್ರದ ವಿಶೇಷ ಹೇಳಲು ಬಳಸಿದ ರೂಪಕವೋ, ಅಂತೂ ಧೃತರಾಷ್ಟ್ರಪ್ರೇಮ ಎಂಬುದು ತಮ್ಮವರ ಮೇಲಿನ ಮೋಹಕ್ಕೆ ಒಂದು ಸಂಕೇತವಾಗಿ ಬಳಸುವುದುಂಟು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ವಾಟ್ಸ್ಯಾಪ್ ಯೂನಿವರ್ಸಿಟಿಯ ಭಕ್ತರೂ ಮತ್ತು ಮಹಾಪ್ರಭು ಮೋದಿಯೂ

ಇಂತಹ ಮೋಹಕ್ಕೆ ಬಲಿಯಾದ ದೊಡ್ಡಗೌಡರು, ತಮ್ಮ ಮಕ್ಕಳು, ಮೊಮ್ಮಕ್ಕಳು ಮಾಡಿದ ಕರಾಳ ಕೃತ್ಯವನ್ನು ಮುಚ್ಚಿಕೊಳ್ಳಲು, ಮೈತ್ರಿಗೆ ಮುಂದಾದರು. ಬಿಜೆಪಿ ಕೊಳಕರನ್ನು ತೊಳೆಯುವ ವಾಷಿಂಗ್ ಮಷೀನ್ ಎಂದು ನಂಬಿದರು. ಗೌಡರ ನಂಬಿಕೆಯನ್ನು ನಿಜ ಮಾಡಲು, ಕಳೆದ ಹತ್ತು ವರ್ಷಗಳಲ್ಲಿ ಐಟಿ, ಸಿಬಿಐ, ಇಡಿ ದಾಳಿಗೊಳಗಾದ ವಿರೋಧ ಪಕ್ಷದ 25 ಭ್ರಷ್ಟ ರಾಜಕೀಯ ನಾಯಕರ ಪೈಕಿ, 23 ಜನ ಬಿಜೆಪಿ ಸೇರಿ ‘ಕ್ಲೀನ್’ ಆಗಿದ್ದು ಕಣ್ಮುಂದೆ ಕಾಣುತ್ತಿತ್ತು. ದಿಲ್ಲಿಯ ಮಹಿಳಾ ಕುಸ್ತಿಪಟುಗಳ ಆಕ್ರಂದನಕ್ಕೆ ಮೋದಿಯ ಕಿವಿ ಕಿವುಡಾಗಿತ್ತು. ಇನ್ನು ಮಣಿಪುರದ ಮಹಿಳೆಯರ ಬೆತ್ತಲೆ ಮೆರವಣಿಗೆ ಎಂಬ ಹೀನ ಕೃತ್ಯವನ್ನು ಇಡೀ ಪ್ರಪಂಚವೇ ನೋಡಿತ್ತು. ಆದರೂ ಪ್ರಧಾನಿ ಮೋದಿಯವರು ಮಣಿಪುರದ ‘ಬೆತ್ತಲೆ’ಗೆ ಬೆಚ್ಚಲಿಲ್ಲ, ಬಾಯ್ಬಿಚ್ಚಲಿಲ್ಲ; ಇನ್ನು ಹಾಸನದ ‘ವಿಕೃತಿ’ಗೆ ವಿಚಲಿತರಾಗುವುದುಂಟೇ ಎಂಬ ತರ್ಕಕ್ಕೆ ಬಿದ್ದ ಗೌಡರು, ನಮ್ಮ ಕುಟುಂಬವೂ ಹೀಗೆಯೇ ‘ಕ್ಲೀನ್ ಕುಟುಂಬ’ವಾಗಬಹುದೆಂಬ ದುರಾಸೆಯಲ್ಲಿ ಮೋದಿಯವರನ್ನು ತಬ್ಬಿಕೊಂಡರು.

ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ, ಹಾಸನದ ಬಿಜೆಪಿ ಕಾರ್ಯಕರ್ತ ಪಿ.ದೇವರಾಜೇಗೌಡ ಕಳೆದ ಡಿಸೆಂಬರ್ 8, 2023ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಪತ್ರ ಬರೆದು, ‘ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಬೇಡಿ, ಮೈತ್ರಿ ಮಾಡಿಕೊಂಡರೂ ಪ್ರಜ್ವಲ್ ಅಭ್ಯರ್ಥಿಯನ್ನಾಗಿ ಮಾಡಬೇಡಿ, ಅವರ ಮೇಲೆ ನೂರಾರು ಮಹಿಳೆಯರನ್ನು ಬಳಸಿಕೊಂಡ ಆರೋಪಗಳಿವೆ, ಅದು ಚುನಾವಣೆಯಲ್ಲಿ ತೊಡಕುಂಟು ಮಾಡಬಹುದು’ ಎಂದು ಎಚ್ಚರಿಸಿದ್ದರು. ಅದನ್ನು ರಾಷ್ಟ್ರೀಯ ನಾಯಕರ ಗಮನಕ್ಕೆ ತರಬೇಕೆಂದು ವಿನಂತಿಸಿಕೊಂಡಿದ್ದರು. ಆದರೆ, ಅದೇ ಡಿಸೆಂಬರ್ 21, 2023ರಂದು ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಪರಿವಾರವನ್ನು ದೆಹಲಿಗೆ ಕರೆದುಕೊಂಡು ಹೋಗಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ, ಕೈ ಕುಲುಕಿ, ಮೈತ್ರಿಯನ್ನು ಪಕ್ಕಾ ಮಾಡಿಕೊಂಡಿದ್ದರು.

ಪ್ರಜ್ವಲ್ ರೇವಣ್ಣರ ಕೊಳಕು ಕೃತ್ಯ ಇಡೀ ಕುಟುಂಬಕ್ಕೇ ಗೊತ್ತಿತ್ತು. ಅಷ್ಟೇ ಅಲ್ಲ, ಬಿಜೆಪಿಯ ರಾಜ್ಯಾಧ್ಯಕ್ಷರಿಗೆ, ಬಿಜೆಪಿ ರಾಷ್ಟ್ರೀಯ ನಾಯಕರಿಗೂ ಗೊತ್ತಿತ್ತು. ಗೊತ್ತಿದ್ದೂ ಮೈತ್ರಿ ಮಾಡಿಕೊಂಡರು. ಅವರ ಪರವಾಗಿ ಇವರು, ಇವರ ಪರವಾಗಿ ಅವರು ಮೆಚ್ಚಿ ಮಾತನಾಡಿದರು. ಗೆದ್ದರೆ ಎಲ್ಲವೂ ಮುಚ್ಚಿಹೋಗುತ್ತದೆ ಎಂದು ಭಾವಿಸಿದರು. ಆದರೆ, ಪಾಪದ ಕೊಡ ತುಂಬಿತ್ತು. ತುಳುಕುವುದಕ್ಕೆ ಕಾಯುತ್ತಿತ್ತು.

ಭಾರತದ ಕುರುಡು ಪ್ರೀತಿಯ ಪಿತಾಮಹರು, ಅಪರಾಧದ ಸಂತಾನವನ್ನು ಕಾನೂನಿನಿಂದ ರಕ್ಷಿಸುವ ಪೋಷಕರು ಇರುವತನಕ, ಸಾಂವಿಧಾನಿಕ ಮೌಲ್ಯಗಳು, ಕಾಯ್ದೆ-ಕಾನೂನುಗಳು ಉಲ್ಲಂಘನೆಯಾಗುತ್ತಲೇ ಇರುತ್ತವೆ.

ಹಾಸನದ ಮಣ್ಣಿನಿಂದ ಎದ್ದು ಬಂದ ದೊಡ್ಡಗೌಡರಿಗೆ ‘ಮಣ್ಣಿನ ಮಗ’ ಎಂಬ ಬಿರುದಿದೆ. ಆ ಬಿರುದಿಗೆ ಬೆಲೆ ಕೊಟ್ಟು, ತಮ್ಮ ಸಂತಾನವನ್ನು ರಕ್ಷಿಸುವ, ಕಾನೂನನ್ನು ಉಲ್ಲಂಘಿಸುವ ಕೃತ್ಯಕ್ಕೆ ಕೈ ಹಾಕದಿರಲಿ. ಬದಲಿಗೆ, ಹೀನ ಕೃತ್ಯಕ್ಕೆ ಬಲಿಯಾದ ನೂರಾರು ಬಡ, ಅಸಹಾಯಕ ಸಂತ್ರಸ್ತೆಯರ ಪರ ನಿಂತು, ನ್ಯಾಯ ಕೊಡಿಸುವ ಕೆಲಸ ಮಾಡಲಿ. ನಿಜ ‘ಮಣ್ಣಿನ ಮಗ’ನಾಗಿ ಜನಮಾನಸದಲ್ಲಿ ಉಳಿಯಲಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ನಿಮ್ಮ ಧೈರ್ಯ ಮೆಚ್ಚುವಂತಹದ್ದು. ಸಂಪಾದಕೀಯ ಇಷ್ಟವಾಯಿತು. ಶುಭಾಶಯಗಳು.

    • ಈದಿನ ವೆಬ್ ತಾಣಕ್ಕೆ ಭೇಟಿ ನೀಡಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಿನೆಮಾ ಟಿಕೆಟ್ ದರಗಳಿಗೆ ಸರ್ಕಾರಿ ಕಡಿವಾಣದ ಸಂಗತಿಯೇನು?

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರಗಳನ್ನು...

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

Download Eedina App Android / iOS

X