ನೇಹಾ ಹತ್ಯೆ ಪ್ರಕರಣವನ್ನು ಜನರು ಮೂರೋ ಆರೋ ತಿಂಗಳ ನಂತರ ಮರೆತ ಬಳಿಕ ಮುಚ್ಚಿ ಹಾಕಲು ಪ್ರಯತ್ನ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಕಾಲೇಜ್ ಕ್ಯಾಂಪಸ್ ನಲ್ಲಿ ಇತ್ತೀಚೆಗೆ ಬರ್ಬರವಾಗಿ ಹತ್ಯೆಗೀಡಾದ ನೇಹಾ ಹಿರೇಮಠ ಅವರ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ, ನಿರಂಜನ ಹಿರೇಮಠ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, “ಸಮರ್ಥ ಸಾಕ್ಷಿ ಬೇಕು. ದಾಖಲೆಗಳನ್ನು ಸರಿಯಾಗಿ ಸಂಗ್ರಹ ಮಾಡಬೇಕಿತ್ತು. ಕಳೆದ ಹತ್ತಾರು ದಿನಗಳಿಂದ ಆತನ ಜೊತೆ ಸಂಪರ್ಕದಲ್ಲಿದ್ದವರ ಫೋನ್ ಕರೆಗಳ ವಿವರ ಯಾಕೆ ಸಂಗ್ರಹಿಸಿಲ್ಲ? ಯಾಕೆ ಇದನ್ನು ಮಾಡಿಲ್ಲ? ಅವನು ಮಾದಕ ದ್ರವ್ಯ ಸೇವನೆ ಮಾಡಿದ್ದನೇ? ಬೇರೆ ಏನಾದರೂ ಲಿಂಕ್ ಇತ್ತೇ? ಕೆಎಫ್‍ಡಿ, ಪಿಎಫ್‍ಐನಂಥ ಸಮಾಜವಿರೋಧಿ ಸಂಘಟನೆ ಜೊತೆ ಸಂಪರ್ಕ ಇತ್ತೇ? ಎಂದು ಮಾಹಿತಿ ಪಡೆಯಬೇಕಿತ್ತು” ಎಂದು ಆಗ್ರಹಿಸಿದರು.
“ಗೃಹ ಸಚಿವರು, ಪೊಲೀಸ್ ಇಲಾಖೆಗೆ ಸಾಮಾನ್ಯ ಜ್ಞಾನ ಇರಬೇಕು. ಇಂಥ ಕೊಲೆ ಆದಾಗ ಡಬಲ್ ಅಲರ್ಟ್ ಇರಬೇಕು. ತನಿಖೆ ಮಾಡುವವರು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಕೇಳಬೇಕಿತ್ತಲ್ಲವೇ? ಸಾಕ್ಷ್ಯಗಳನ್ನು ಸಂಗ್ರಹಿಸಬೇಕಿತ್ತಲ್ಲವೇ? ಕಾನೂನಿನಡಿ ಇರುವ ಕ್ರಮವನ್ನು ಯಾಕೆ ಕೈಗೊಂಡಿಲ್ಲ? ಆರೋಪಿಯನ್ನು ಜೈಲಿಗೆ (ಜುಡಿಷಿಯಲ್ ಕಸ್ಟಡಿ) ಕಳಿಸಿದ ಬಳಿಕ ಯಾರ್ಯಾರು ಭೇಟಿ ಮಾಡಿದ್ದರು? ಬಚಾವ್ ಮಾಡಲು ಸಲಹೆ ಕೊಟ್ಟಿರುವ ಸಾಧ್ಯತೆ ಇರಬಹುದಲ್ಲವೇ?” ಎಂದು ಕೇಳಿದರು.
“ಇದೊಂದು ವಿಶೇಷ ಪ್ರಕರಣವಾಗಿದ್ದರೂ ಲವ್ ಜಿಹಾದ್ ಎಂದರೆ ತಮಗೆ ಕೆಟ್ಟ ಹೆಸರು ಬರಬಹುದೆಂದು, ಅದನ್ನು ತಪ್ಪಿಸಲು ಸರಕಾರವು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಿಲ್ಲ. ಹಾಗೂ ಆರೋಪಿಯನ್ನು ಕಸ್ಟಡಿಗೆ ಪಡೆದಿಲ್ಲ ಎಂದು ಆರೋಪಿಸಿದರು. ಸರಕಾರವು ನೊಂದ ಕುಟುಂಬವು ಸಿಬಿಐಗೆ ಕೊಡಿ ಎಂದರೆ ಕೊಡಬೇಕು. ಸಿಐಡಿಗೆ ಅಥವಾ ಎಸ್‍ಐಟಿಗೆ ಕೊಡಿ ಎಂದರೂ ಕೊಡಬೇಕಿತ್ತು. ಇದು ಸಾಮಾನ್ಯ ಜ್ಞಾನ” ಎಂದು ತಿಳಿಸಿದರು.