ಈ ದಿನ ಸಂಪಾದಕೀಯ | ಚುನಾವಣೆ – ಐಪಿಎಲ್‌ ಕ್ರಿಕೆಟ್‌ನಲ್ಲಿ ಅಪ್ಪ-ಮಗನ ಆಟ

Date:

Advertisements
ಕ್ರಿಕೆಟ್ ಹುಚ್ಚಾಟದಲ್ಲಿ ದೇಶದ ಯುವಜನತೆಯನ್ನು ಮೋಜು-ಜೂಜುಗಳಲ್ಲಿ ಮಗ ಜಯ್ ಶಾ ಮುಳುಗಿಸುತ್ತಾರೆ. ಚುನಾವಣೆ ಎಂಬ ಯುದ್ಧದಲ್ಲಿ ದೇಶದ ಜನತೆಯನ್ನು ದೇವರು-ಧರ್ಮದ ಮಡುವಿನಲ್ಲಿ ಅಪ್ಪ ಅಮಿತ್ ಶಾ ಅಮುಕುತ್ತಾರೆ. ಇಡೀ ದೇಶವೇ ಕ್ರಿಕೆಟ್ ಜ್ವರದಲ್ಲಿ, ಚುನಾವಣೆಯ ಕಾವಿನಲ್ಲಿ ಬೇಯುತ್ತಿದ್ದರೆ, ಅಪ್ಪ-ಮಗ ಹಣ ಮತ್ತು ಅಧಿಕಾರದ ಬೆಳೆ ತೆಗೆದು ತಣ್ಣಗಿರುತ್ತಾರೆ.

ಚುನಾವಣೆ ಮತ್ತು ಐಪಿಎಲ್- ಸದ್ಯಕ್ಕೆ ದೇಶದ ಜನತೆಯನ್ನು ಗಾಢವಾಗಿ ಆವರಿಸಿರುವ ಎರಡು ಸಂಗತಿಗಳು. ಚುನಾವಣೆಯ ಕಾವಿನ ಜೊತೆ ಜೊತೆಗೇ ಕ್ರಿಕೆಟ್ ಜ್ವರವೂ ಏರತೊಡಗಿದೆ. ಇಡೀ ದೇಶವೇ ಜ್ವರ-ಕಾವುಗಳ ಬೆಂಕಿಯಲ್ಲಿ ಬೇಯುತ್ತಿದೆ.

ಲೋಕಸಭಾ ಚುನಾವಣೆ ದೇಶದ ದಿಕ್ಕು ದೆಸೆ ಬದಲಿಸಿದರೆ; ಐಪಿಎಲ್ ಕ್ರಿಕೆಟ್ ಯುವಜನತೆಯನ್ನು ಮೋಜು-ಜೂಜಿಗೆ ಪ್ರೇರೇಪಿಸುತ್ತದೆ. ಇವೆರಡೂ, ಅಲ್ಪ ಕಾಲದಲ್ಲಿ ಅಪಾರ ಹಣ ಹರಿಯುವ ವಹಿವಾಟುಗಳು. ಸೋಜಿಗದ ಸಂಗತಿ ಎಂದರೆ, ಎರಡೂ ಗುಜರಾತಿನ ಅಪ್ಪ-ಮಗನ ಹಿಡಿತದಲ್ಲಿವೆ. ಒಂದು ಅಮಿತ್ ಶಾ ಮತ್ತೊಂದು ಜಯ್ ಶಾ.

ಭ್ರಷ್ಟಾಚಾರದ ವಿರುದ್ಧ ಅರಚಾಡಿ ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಕ್ಷ, ಹತ್ತು ವರ್ಷಗಳ ಆಡಳಿತದಲ್ಲಿ ಹಿಂದಿನ ಸರ್ಕಾರಗಳ ಭ್ರಷ್ಟಾಚಾರವನ್ನು ಮೀರಿಸಿದೆ. ಚುನಾವಣಾ ಬಾಂಡ್‌ಗಳಿಂದಲೇ ಬಿಜೆಪಿ 8,718.85 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ, ಅದೇ ಹಣವನ್ನು ಚುನಾವಣೆಯಲ್ಲಿ ನೀರಿನಂತೆ ಹರಿಸುತ್ತಿದೆ. ಇದರ ಉಸ್ತುವಾರಿ ಹೊತ್ತವರು ಗೃಹ ಸಚಿವ ಅಮಿತ್ ಶಾ. ಇವರನ್ನು ಗೋದಿ ಬಿಸ್ಕೆಟ್ ತಿಂದ ಪತ್ರಕರ್ತರು ‘ಚುನಾವಣಾ ಚಾಣಕ್ಯ’ ಎಂದು ಕರೆಯುತ್ತಾರೆ.

Advertisements

ಅಮಿತ್ ಶಾರ ಮಗ, ಮೂವತ್ತಾರು ವರ್ಷಗಳ ಜಯ್ ಶಾ, ಪ್ರತಿಷ್ಠಿತ ಕ್ರಿಕೆಟ್ ಸಂಸ್ಥೆಯಾದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿ. ಈತ ಕ್ರಿಕೆಟ್ ಆಟಗಾರನಲ್ಲ, ಕ್ರಿಕೆಟ್ ಆಡಿದ್ದನ್ನು ಯಾರೂ ನೋಡಿಲ್ಲ. ಅಪ್ಪನ ಆಶೀರ್ವಾದದಿಂದ ಪ್ರತಿಷ್ಠಿತ ಸಂಸ್ಥೆಯ ಉನ್ನತ ಹುದ್ದೆ ಅಲಂಕರಿಸಿದ್ದರೂ, ಈತನನ್ನು ‘ಜಯ್ ಶಾ ಜಿಂದಾಬಾದ್’ ಎನ್ನುತ್ತಾರೆ.

ಬಿಸಿಸಿಐ ಉಸ್ತುವಾರಿಯಲ್ಲಿ ನಡೆಯುವ ಐಪಿಎಲ್, ಅಂತಾರಾಷ್ಟ್ರೀಯ ಹಾಗೂ ವಿಶ್ವಕಪ್‌ ಪಂದ್ಯಗಳಿಗೂ ಮೀರಿದ ಖ್ಯಾತಿ, ಕೌತುಕ ಮತ್ತು ಹಣ ಹರಿವ ಆಟವಾಗಿ ಮಾರ್ಪಟ್ಟಿದೆ. ಕೇವಲ ಒಂದು ಪಂದ್ಯಕ್ಕೆ 4 ಸಾವಿರ ಕೋಟಿ ರೂಪಾಯಿಗಳ ವಹಿವಾಟು ಇರುವ ಐಪಿಎಲ್ ಕ್ರಿಕೆಟ್‌ನ 70-80 ಪಂದ್ಯಗಳಿಂದ ಕ್ರಿಕೆಟ್ ಆಟಗಾರರಿಗೆ, ಸಿನಿಮಾ ನಟ-ನಟಿಯರಿಗೆ, ಪ್ರಾಯೋಜಕರಿಗೆ, ಜಾಹೀರಾತುದಾರರಿಗೆ, ಸುದ್ದಿ ಮಾಧ್ಯಮಗಳಿಗೆ, ಉದ್ಯಮಿಗಳಿಗೆ, ಸ್ಟೇಡಿಯಂಗಳಿಗೆ ಹಣದ ಹೊಳೆಯೇ ಹರಿದುಹೋಗುತ್ತದೆ.

ಜಂಟಲ್‌ಮನ್ಸ್ ಪ್ಲೇ ಎನಿಸಿಕೊಂಡಿದ್ದ ಕ್ರಿಕೆಟ್, ಲಲಿತ್ ಮೋದಿ ಎನ್ನುವ ವ್ಯವಹಾರಸ್ಥನ ಕೈಗೆ ಸಿಕ್ಕು ಉದ್ಯಮವಾಯಿತು. ಲಲಿತ್ ಮೋದಿ ಹುಟ್ಟುಹಾಕಿದ ಟ್ವೆಂಟಿ-20 ಕ್ರಿಕೆಟ್ ಮುಂದೆ ಐದು ದಿನದ ಟೆಸ್ಟ್ ಕ್ರಿಕೆಟ್ ಇರಲಿ, ಏಕದಿನ ಪಂದ್ಯಗಳೇ ಕಳೆಗುಂದತೊಡಗಿದವು. ತಾಳ್ಮೆ-ಸಹನೆಯ ಆಟಕ್ಕೆ ವೇಗೋತ್ಕರ್ಷ ಬಂದು, ರನ್ ಹೊಳೆ ಹರಿಸಲು ಆಟಗಾರರು ಮಾದಕವಸ್ತು ವ್ಯಸನಿಗಳಾದರು. ಆಟಗಾರರಿಗೆ ಬೆಲೆ ಬಂದು, ಪ್ರತಿಯೊಂದು ಮನೆಯ ಮಗನಲ್ಲೂ ಪೋಷಕರು ದೋನಿ-ಪಾಂಡ್ಯ-ಕೊಹ್ಲಿ ಕಾಣತೊಡಗಿದರು. ಕ್ರಿಕೆಟ್ ಸಂಬಂಧಿ ವಸ್ತುಗಳ ಉತ್ಪಾದನೆ, ಜಾಹೀರಾತು, ಮಾರುಕಟ್ಟೆ ವೃದ್ಧಿಸತೊಡಗಿತು. ವರ್ಷದಿಂದ ವರ್ಷಕ್ಕೆ ಬೆಳೆಯುತ್ತ ಹೋದ ಐಪಿಎಲ್ ಬೃಹತ್ ವ್ಯಾಪಾರ-ವಹಿವಾಟುಳ್ಳ ಉದ್ಯಮವಾಗಿ ಇಡೀ ವಿಶ್ವವನ್ನೇ ವ್ಯಾಪಿಸಿತು.

ಕ್ರಿಕೆಟ್ ಪ್ರೇಮಿಗಳಿಗೆ ಐಪಿಎಲ್​​ ಭರಪೂರ ಮನರಂಜನೆ ನೀಡುವ ಆಟ; ಅದೇ ಕ್ರಿಕೆಟ್‌ನ ಪ್ರತಿ ಬಾಲ್ – ರನ್‌ ಮೇಲೆ ಹಣ ಕಟ್ಟುವವರಿಗೆ ಕೂತಲ್ಲೆ ಕಾಸು ಎಣಿಸುವ ಜೂಜಾಟ. ಸಣ್ಣದಾಗಿ ಶುರುವಾದ ಜೂಜಾಟ ಈಗ ಕೋಟ್ಯಂತರ ರೂಪಾಯಿಗಳ ಕೈ ಬದಲಾಗುವ ಬೃಹತ್ ದಂಧೆಯಾಗಿದೆ. ಗಲ್ಲಿಯ ರೌಡಿಗಳಿಂದ ಹಿಡಿದು ಮಾಫಿಯಾ ಡಾನ್‌ಗಳವರೆಗೆ; ಪೇದೆಯಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೆ; ದಿನಗೂಲಿ ಕಾರ್ಮಿಕನಿಂದ ಹಿಡಿದು ಐಎಎಸ್ ಅಧಿಕಾರಿಗಳವರೆಗೆ; ಪುಡಿ ಪುಢಾರಿಯಿಂದ ರಾಜಕೀಯ ನಾಯಕರವರೆಗೆ ವಿಸ್ತರಣೆಯಾಗಿದೆ. ಏಕೆಂದರೆ ಇದರಲ್ಲಿ ಅಪಾರ ಹಣದ ಹರಿವಿದೆ. ಆ ಹಣ ಎಲ್ಲರನ್ನು ಬೆಸೆದುಕೊಂಡಿದೆ.

ಇದಲ್ಲದೆ, ಬುಕ್ಕಿಗಳು ನಡೆಸುವ ಮ್ಯಾಚ್ ಫಿಕ್ಸಿಂಗ್, ಪ್ರತಿ ಪಂದ್ಯಕ್ಕೆ, ಪ್ರತಿ ಬಾಲ್‌ಗೆ ವಿಶ್ವದಾದ್ಯಂತ ನಡೆಯುವ ಬೆಟ್ಟಿಂಗ್ ದಂಧೆಯ ಅಂದಾಜು ಹಣ ನಮ್ಮ ಊಹೆಗೆ ನಿಲುಕದ್ದು. ದುರದೃಷ್ಟಕರ ಸಂಗತಿ ಎಂದರೆ, ಈ ಕೋಟ್ಯಂತರ ರೂಪಾಯಿಗಳ ಜೂಜಾಟದ ಜಾಲದಲ್ಲಿ ಯುವಕರು, ಕಾಲೇಜು ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಆರ್ಥಿಕವಾಗಿ ಹಿಂದುಳಿದವರು, ದಿನಗೂಲಿ ಕಾರ್ಮಿಕರು, ನಗರಗಳಲ್ಲಿ ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿರುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಜೂಜಾಟ ಮೊದಲು ನಗರ, ಪಟ್ಟಣಗಳಲ್ಲಿತ್ತು. ಈಗ ಪ್ರತಿಯೊಬ್ಬನ ಕೈಯಲ್ಲೂ ಮೊಬೈಲ್ ಇದ್ದು, ಹಳ್ಳಿಗಳಿಗೂ ಹಬ್ಬಿದೆ. ಪ್ರತಿ ಬಾರಿಯ ಐಪಿಎಲ್‌ನಲ್ಲೂ ಕೋಟಿಗಟ್ಟಲೆ ಬೆಟ್ಟಿಂಗ್ ವ್ಯವಹಾರ ನಡೆಯುತ್ತದೆ. ಹಾಗೆಯೇ ಸಾವಿರಾರು ಕುಟುಂಬಗಳು ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುತ್ತವೆ.

ಇಂತಹ ಕ್ರಿಕೆಟ್ ಉಸ್ತುವಾರಿ ಮಗನದ್ದು; ದೇಶದ ದಿಕ್ಕು ಬದಲಿಸುವ ಚುನಾವಣಾ ಜವಾಬ್ದಾರಿ ಅಪ್ಪನದ್ದು. ಅದರಲ್ಲೂ ಹಣ, ಇದರಲ್ಲೂ ಹಣ. ಕ್ರಿಕೆಟ್ ಹುಚ್ಚಾಟದಲ್ಲಿ ದೇಶದ ಯುವಜನತೆಯನ್ನು ಮೋಜು-ಜೂಜುಗಳಲ್ಲಿ ಮಗ ಜಯ್ ಶಾ ಮುಳುಗಿಸುತ್ತಾರೆ. ಚುನಾವಣೆ ಎಂಬ ಯುದ್ಧದಲ್ಲಿ ದೇಶದ ಜನತೆಯನ್ನು ದೇವರು-ಧರ್ಮದ ಮಡುವಿನಲ್ಲಿ ಅಪ್ಪ ಅಮಿತ್ ಶಾ ಅಮುಕುತ್ತಾರೆ. ಆ ಕಡೆ ಅಪ್ಪ, ಈ ಕಡೆ ಮಗ- ಇಬ್ಬರೂ ಒಂದೇ ಸಮಯದಲ್ಲಿ ದೇಶದ ಜನರ ಕಣ್ಣಿಗೆ ಮಣ್ಣೆರಚುತ್ತಾರೆ.

ಇಡೀ ದೇಶವೇ ಕ್ರಿಕೆಟ್ ಜ್ವರದಲ್ಲಿ, ಚುನಾವಣೆಯ ಕಾವಿನಲ್ಲಿ ಬೇಯುತ್ತಿದ್ದರೆ, ಅಪ್ಪ-ಮಗ ಹಣ ಮತ್ತು ಅಧಿಕಾರದ ಬೆಳೆ ತೆಗೆಯುತ್ತಾರೆ. ದೇಶದ ಜನ ಮೋಜು-ಜೂಜುಗಳಲ್ಲಿ ಹಾಗೂ ದೇವರು-ಧರ್ಮಗಳ ಮತಾಂಧತೆಗಳಲ್ಲಿ ಸಿಲುಕಿ ಮೋಸ ಹೋಗುತ್ತಲೇ ಇರುತ್ತಾರೆ. ಇದು ಭಾರತ!

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ನಮಸ್ತೆ ಸರ್ ನಿಮ್ಮ ಚುನಾವಣಾ ಸಮೀಕ್ಷೆ ನಿಖರವಾಗಿರುತ್ತದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಾಗಿ ಕಾಯುತ್ತಿದ್ದೇವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X