ಮಳೆಗಾಲ ಎದುರಾದಾಗ, ರಾಜಕಾಲುವೆಯಲ್ಲಿ ನೀರು ಉಕ್ಕಿ ಹರಿದಾಗ ಸರ್ಕಾರ ಮತ್ತು ಬಿಬಿಎಂಪಿ ನಿದ್ರೆಯಿಂದ ಎದ್ದು ತುರ್ತಿನ ಕೆಲಸ ಎಂಬಂತೆ ಬಿರುಸಾಡುವುದು, ಬಿಡುಗಡೆಯಾದ ಹಣವನ್ನು ಕಣ್ಮುಚ್ಚಿ ಬಿಡುವುದರೊಳಗೆ ಖಾಲಿ ಮಾಡುವುದು, ರಾಜಕಾಲುವೆ ಯಥಾರೀತಿ ಮೈದುಂಬಿ ಹರಿಯುವುದು- ಅಸಂಗತ ನಾಟಕದಂತೆ ನಡೆಯುತ್ತಲೇ ಇದೆ.
ಮಳೆಗಾಲದ ಆರಂಭದ ಕಾಲ. ಮಾನ್ಸೂನ್ ಮಾರುತಗಳು ರಾಜ್ಯಕ್ಕೆ ಅಡಿಯಿಡುವ ಕಾಲ. ಇದು ಒಂದು ರೀತಿಯಲ್ಲಿ ಜೀವ ಉಕ್ಕುವ ಕಾಲ. ಮತ್ತೊಂದು ಬಗೆಯಲ್ಲಿ ಜೀವ ತೆಗೆಯುವ ಕಾಲ; ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ ಕಾಲ.
ಮುಂಗಾರಿಗೂ ಮುನ್ನವೇ ಅಬ್ಬರಿಸಿದ ಮಳೆ, ಈಗಾಗಲೇ ಹಲವು ಜನರನ್ನು ಬಲಿ ತೆಗೆದುಕೊಂಡಿದೆ. ಲೆಕ್ಕಕ್ಕೆ ಸಿಗದಷ್ಟು ಬೆಳೆ ನಾಶಕ್ಕೆ ಕಾರಣವಾಗಿದೆ. ಬೆವರು ಬಸಿದು ದುಡಿದ ರೈತರಲ್ಲಿ ಕಣ್ಣೀರು ತರಿಸುತ್ತಿದೆ. ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ, ಹೆಚ್ಚಿಗೆ ಅಲ್ಲ, ಕೇವಲ ಒಂದು ಗಂಟೆ ಮಳೆ ಸುರಿದರೂ ಸಾಕು, ಯಾವುದಾದರೂ ಒಂದು ಭಾಗದಲ್ಲಿ ಒಂದಲ್ಲ ಒಂದು ಅನಾಹುತ ಘಟಿಸಿರುತ್ತದೆ. ರಸ್ತೆಗಳು ನದಿಯಂತಾಗಿ, ವಾಹನಗಳೇ ಕೊಚ್ಚಿ ಹೋಗುತ್ತವೆ. ಅಂಡರ್ ಪಾಸ್‌ಗಳಲ್ಲಿ ನೀರು ನಿಂತು ಜನರ ಜೀವವನ್ನೇ ಬಲಿ ತೆಗೆದುಕೊಳ್ಳುತ್ತವೆ.
ಮಳೆಗಾಲ ಬಂದಾಗ ಈ ರೀತಿ ಸಾವು-ನೋವಿಗೆ ಕಾರಣವಾಗಿ ಸುದ್ದಿಯಾಗುವುದು ಹೊಸದೇನೂ ಅಲ್ಲ. ಬಿಬಿಎಂಪಿಗೆ ಇದೇನು ಗೊತ್ತಿಲ್ಲದ ವಿಷಯವಲ್ಲ. ಈ ರೀತಿಯ ಅನಾಹುತ ತಡೆಯಲಿಕ್ಕಾಗಿಯೇ ಪ್ರತ್ಯೇಕ ಇಲಾಖೆ, ಅಧಿಕಾರಿಗಳು, ಸವಲತ್ತು ಎಲ್ಲವೂ ಇದೆ. ಪ್ರತಿವರ್ಷ ಕೋಟ್ಯಂತರ ರೂಪಾಯಿಗಳ ಅನುದಾನ ನೀರಿನಂತೆ ಹರಿಯುತ್ತಲೇ ಇದೆ, ಬಡಪಾಯಿಗಳ ಪ್ರಾಣಹರಣವಾಗುತ್ತಲೇ ಇದೆ.
ಇಂತಹ ಸಂದರ್ಭದಲ್ಲಿಯೇ ಬೆಂಗಳೂರು ನಗರಾಭಿವೃದ್ಧಿ ಸಚಿವರು, ಉಸ್ತುವಾರಿ ಸಚಿವರು ಕೂಡ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮುಂಗಾರು ಆರಂಭದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪ್ರದಕ್ಷಿಣೆ ಕಾರ್ಯ ಹಮ್ಮಿಕೊಂಡಿದ್ದರು. ಮಳೆ ಹಾನಿ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಬಿಬಿಎಂಪಿ, ಬಿಡಿಎ, ಬೆಸ್ಕಾಂ ಮತ್ತು ಜಲಮಂಡಳಿ ಅಧಿಕಾರಿಗಳನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗಿದ್ದರು. ನಗರ ಪ್ರದಕ್ಷಿಣೆ ಭಿನ್ನವಾಗಿರಬೇಕು, ಸರಳವಾಗಿರಬೇಕು, ಮಾಧ್ಯಮಗಳಿಂದ ಪ್ರಚಾರ ಪಡೆಯಬೇಕು ಎಂಬ ಆಶಯದಿಂದ ಜನಸಾಮಾನ್ಯರು ಓಡಾಡುವ ಬಿಎಂಟಿಸಿ ಬಸ್ಸನ್ನು ಆಯ್ಕೆ ಮಾಡಿಕೊಂಡಿದ್ದರು. ಮಂತ್ರಿಗಳೇ ಬಸ್ಸೇರಿದ ಮೇಲೆ ಅಧಿಕಾರಿಗಳು ಸುಮ್ಮನಿರುವುದುಂಟೆ, ಅವರೂ ಅವರೊಂದಿಗೆ ಬಸ್‌ನಲ್ಲಿಯೇ ಸಂಚರಿಸಿದರು. ಮಾಧ್ಯಮಗಳು ಮುಗಿಬಿದ್ದು ಪ್ರಚಾರ ನೀಡಿ, ತಮ್ಮ ʻಜನಪರʼ ನಿಲುವು ಪ್ರಕಟಿಸಿದವು.
ಬೆಂಗಳೂರು ಮಹಾ ನಗರದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 842 ಕಿಲೋ ಮೀಟರ್ ಉದ್ದದ ರಾಜಕಾಲುವೆಗಳು ಇವೆ. ಈ ಪೈಕಿ ಬಿಬಿಎಂಪಿ 400 ಕಿಲೋ ಮೀಟರ್ ಉದ್ದದ ರಾಜಕಾಲುವೆಗಳನ್ನು ದುರಸ್ತಿ ಮಾಡಿದೆ. ಆದರೆ, ಅರ್ಧದಷ್ಟು ರಾಜಕಾಲುವೆಗಳ ರಿಪೇರಿ ಕೂಡ ಆಗಿಲ್ಲ. ಹೂಳು ಎತ್ತಿಲ್ಲ. ತಡೆ ಗೋಡೆಗಳ ನಿರ್ಮಾಣ ಆಗಿಲ್ಲ. ಕಳೆದ ವರ್ಷ ಬಂದ ಮಳೆ, ಅದರಿಂದಾದ ಅನಾಹುತವನ್ನು ಸರಿಪಡಿಸಲು, ಅದರಲ್ಲೂ ರಾಜಕಾಲುವೆಗಾಗಿಯೇ ಬಸವರಾಜ ಬೊಮ್ಮಾಯಿಯವರ ಸರ್ಕಾರ 1,600 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಇದು ಕೇವಲ ರಾಜಕಾಲುವೆಗಾಗಿ ಒಂದು ವರ್ಷದ ಮೊತ್ತ. ಇದೇ ರೀತಿ ಪ್ರತಿ ವರ್ಷವೂ ಮಳೆ ಬರುತ್ತದೆ, ರಾಜಕಾಲುವೆ ಎಂಬ ಲೆಕ್ಕದಲ್ಲಿ ಲೆಕ್ಕವಿಲ್ಲದಷ್ಟು ಹಣ ಹರಿದು ಹೋಗುತ್ತಲೇ ಇದೆ.
ಇದೇ ರಾಜಕಾಲುವೆಯ ಮತ್ತೊಂದು ರೋಚಕ ಕತೆ ಎಂದರೆ, ರಾಜಕಾಲುವೆಯ ಒತ್ತುವರಿ. ಬೆಂಗಳೂರು ನಗರದಲ್ಲಿ ಜಾಗಕ್ಕೆ ಅಡಿಗಡಿಗೂ ಅಗಾಧ ಬೆಲೆ ಇದೆ. ಬಲಾಢ್ಯರು, ಪ್ರಭಾವಿಗಳು, ಹಣವಂತರು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಬೆಂಗಳೂರು ನಗರದಲ್ಲಿ 600ಕ್ಕೂ ಹೆಚ್ಚು ಕಡೆ ರಾಜಕಾಲುವೆಗಳನ್ನು ಒತ್ತುವರಿ ಮಾಡಲಾಗಿದೆ ಎಂಬುದು ಬಿಬಿಎಂಪಿ ಕಡತಗಳಲ್ಲಿ ದಾಖಲಾಗಿದೆ. ಮಳೆ ಬಂದಾಗ ಬೆಂಗಳೂರಿನಲ್ಲಿ ಪ್ರವಾಹ ಸೃಷ್ಟಿಯಾಗುವುದಕ್ಕೆ ಇದೇ ಕಾರಣ. ಆದರೆ, ಈ ಒತ್ತುವರಿವೀರರ ವಿರುದ್ಧ ಇಲ್ಲಿಯವರೆಗೆ, ಯಾವುದೇ ಸರ್ಕಾರ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ. ಅಕಸ್ಮಾತ್ ಕ್ರಮ ಕೈಗೊಂಡಿದ್ದರೆ, ಅದು ಬಡವರ ಗುಡಿಸಲುಗಳನ್ನು ಕಿತ್ತೆಸೆದದ್ದು ಮಾತ್ರ.
ಕುತೂಹಲಕರ ಸಂಗತಿ ಎಂದರೆ, ಕಳೆದ ವಾರ ಬೆಂಗಳೂರು ನಗರ ಪ್ರದಕ್ಷಿಣೆ ಕೈಗೊಂಡಿದ್ದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕೂಡ, ರಾಜಕಾಲುವೆ ಒತ್ತುವರಿ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಅದರಲ್ಲೂ ಮುಖ್ಯವಾಗಿ ಯಮಲೂರಿಗೆ ಭೇಟಿ ನೀಡಿ, 12 ಮೀಟರ್ ರಾಜಕಾಲುವೆಯ ಜಾಗದಲ್ಲಿ 7 ಮೀಟರ್ ಒತ್ತುವರಿ ಮಾಡಿಕೊಂಡಿದ್ದ ದಿವ್ಯಶ್ರೀ ಅಪಾರ್ಟ್‌ಮೆಂಟ್ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಒತ್ತುವರಿ ಜಾಗ ತೆರವುಗೊಳಿಸಿ ರಾಜಕಾಲುವೆ ನಿರ್ಮಿಸಿ ಎಂದು ಬಿಬಿಎಂಪಿ ಆಯುಕ್ತರಿಗೆ ಸಾರ್ವಜನಿಕರ ಮುಂದೆಯೇ ತಾಕೀತು ಮಾಡಿದರು.
ಆದರೆ, ರಾಜಕಾಲುವೆಯ ಒತ್ತುವರಿದಾರರು, ಒತ್ತುವರಿ ತೆರವಿಗಾಗಿ ಸದ್ದು ಮಾಡುವ ಜೆಸಿಬಿಗಳು, ಅದಕ್ಕಾಗಿ ಕಾದು ನಿಂತಿರುವ ಗುತ್ತಿಗೆದಾರರು, ಗುತ್ತಿಗೆದಾರರಿಗೆ ಟೆಂಡರ್ ನೀಡುವ ಅಧಿಕಾರಿಗಳು, ಅಧಿಕಾರಿಗಳನ್ನು ಆಯಕಟ್ಟಿನ ಜಾಗದಲ್ಲಿ ಪ್ರತಿಷ್ಠಾಪಿಸುವ ಮಂತ್ರಿಗಳು, ಮಂತ್ರಿಗಳ ಮೂಲಕವೇ ಕೋಟ್ಯಂತರ ರೂಪಾಯಿಗಳನ್ನು ಅನುದಾನದ ರೂಪದಲ್ಲಿ ಬಿಡುಗಡೆ ಮಾಡುವ ಸರ್ಕಾರಗಳು, ಕಣ್ಮುಚ್ಚಿ ಬಿಡುವುದರೊಳಗೆ ಖರ್ಚಾಗುವ ಅನುದಾನ, ಎಂದಿನಂತೆ ರಾಜಕಾಲುವೆಯಲ್ಲಿ ತುಂಬಿ ಹರಿವ ನೀರು – ಎಲ್ಲವೂ ಅಸಂಗತ ನಾಟಕದಂತೆ ನಡೆಯುತ್ತಲೇ ಇರುತ್ತದೆ, ನಾವು ನೋಡುತ್ತಲೇ ಇದ್ದೇವೆ.