ಕರ್ನಾಟಕದ ಮಾದರಿಯ ಹಿಂದೆ ಅನೇಕರ ಕನಸು, ಕಾಣ್ಕೆ, ಶ್ರಮ ಇದೆ. ಬಸವಣ್ಣ, ಕುವೆಂಪು ಅಂಥವರ ದರ್ಶನವಿದೆ; ದೇವರಾಜ ಅರಸು ಅಂಥವರ ದೂರದೃಷ್ಟಿ ಇದೆ. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಆ ಪರಂಪರೆಯನ್ನು ಇನ್ನಷ್ಟು ಸಮರ್ಥವಾಗಿ, ದಕ್ಷವಾಗಿ ಮುಂದುವರೆಸುವ ಮೂಲಕ ಕರ್ನಾಟಕ ಮಾದರಿಯನ್ನು, ತನ್ಮೂಲಕ ಜನರ ಬದುಕನ್ನು ಸಂಪನ್ನಗೊಳಿಸಬೇಕಾಗಿದೆ
ನಿತ್ಯದ ಬದುಕಿಗೆ ತೀರಾ ಅಗತ್ಯವಾಗಿರುವ ಈರುಳ್ಳಿ ಕೆಜಿಗೆ 10 ರೂ. ಇದ್ದದ್ದು ಇದ್ದಕ್ಕಿದ್ದಂತೆ ಕೆಜಿಗೆ 30 ರೂ.ಗೆ ಏರಿಕೆಯಾಗಿದೆ. ಈ ಬೆಲೆ ಏರಿಕೆಯನ್ನು ತಡೆಯಲು ಡಿಸೆಂಬರ್ 31ರತನಕ ಈರುಳ್ಳಿ ರಫ್ತಿನ ಮೇಲೆ ಶೇ. 40 ಸುಂಕ ವಿಧಿಸಿ ಕೇಂದ್ರ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ. ಪ್ರಾದೇಶಿಕ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ತಗ್ಗಿಸುವುದಕ್ಕಾಗಿ, ಬೇಡಿಕೆಗೆ ತಕ್ಕಷ್ಟು ಪೂರೈಕೆ ಪ್ರಮಾಣ ಖಾತರಿಪಡಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದೆ ಕೇಂದ್ರ ಸರ್ಕಾರ.
2019ರಲ್ಲಿ ಇದೇ ರೀತಿ ಈರುಳ್ಳಿ ಬೆಲೆ ಗಗನಮುಖಿಯಾದಾಗ, ಜನರ ಕಣ್ಣಲ್ಲಿ ನೀರು ತರಿಸಿ ಜೇಬಿಗೆ ಕತ್ತರಿ ಬಿದ್ದಾಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ʻನಾನು ಈರುಳ್ಳಿ ಬಳಸಲ್ಲ, ಈರುಳ್ಳಿ ಬಳಸದ ಕುಟುಂಬದಿಂದ ಬಂದಿದ್ದೇನೆʼ ಎಂಬ ಬಾಲಿಶ ಹೇಳಿಕೆ ನೀಡಿ ದೇಶದಾದ್ಯಂತ ಸುದ್ದಿಯಾಗಿದ್ದರು. ಈರುಳ್ಳಿ ಬಳಸುವ ಬಹುಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗಿದ್ದರು; ನಗೆಪಾಟಲಿಗೀಡಾಗಿದ್ದರು. ಆದರೆ ಈ ಬಾರಿ ಅಂತಹ ಉಡಾಫೆ ಹೇಳಿಕೆಯನ್ನು ಕೊಡದ ಹಣಕಾಸು ಸಚಿವರು ತೀರಾ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ. ಕೇಂದ್ರ ಸರ್ಕಾರದ ಈ ನಡೆಯನ್ನು ರಾಜಕೀಯ ವಿಶ್ಲೇಷಕರು 2024ರ ಲೋಕಸಭಾ ಚುನಾವಣೆಗಾಗಿ ಜಾಣ ನಡೆ ಎಂದು ವಿಶ್ಲೇಷಿಸಿದ್ದಾರೆ.
ಇತ್ತೀಚೆಗೆ ಅಗತ್ಯ ವಸ್ತುಗಳ ಬೆಲೆ ಹಲವು ಪಟ್ಟು ಹೆಚ್ಚಾಗಿದೆ. ಬೇಳೆ, ಕಾಳು, ಅಕ್ಕಿ, ಧವಸ ಧಾನ್ಯಗಳು ಜನರ ಕೈ ಸುಡುತ್ತಿವೆ. ಇದಕ್ಕೆ ಪ್ರಮುಖ ಕಾರಣ ಕೇಂದ್ರ ಸರ್ಕಾರದ ಆಮದು-ರಫ್ತು ನೀತಿಗಳು ಮತ್ತು ತೆರಿಗೆ ಪದ್ಧತಿ. ಇವುಗಳ ಬೆಲೆಯನ್ನು ಏರಿಸುವಲ್ಲಿ ಅಥವಾ ಇಳಿಸುವಲ್ಲಿ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಪಾತ್ರವೇನೂ ಇರುವುದಿಲ್ಲ. ಹಾಗಾಗಿ ಜನ ಅನಿವಾರ್ಯವಾಗಿ ಬೆಲೆ ಏರಿಕೆಯ ಪರಿಣಾಮವನ್ನು ಅನುಭವಿಸಲೇಬೇಕಾಗಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಆಪರೇಷನ್ ಹಸ್ತದ ಚರ್ಚೆ: ನಿರ್ಲಜ್ಜ ರಾಜಕೀಯ ನಡೆಗಳು
ಕಳೆದ 9 ವರ್ಷಗಳ ಬಿಜೆಪಿ ಆಡಳಿತದಲ್ಲಿ ದೇಶ ಕಾಣಬಾರದ ಸ್ಥಿತಿ ಕಂಡು ಕಂಗಾಲಾಗಿದೆ. ಕೋವಿಡ್ ನಲ್ಲಿ ಹೆಣಗಳು ತೇಲಿಹೋದವು, ದಿನಗೂಲಿ ಕಾರ್ಮಿಕರು ದಿನಗಟ್ಟಲೆ ನಡೆದರು, ನಿರುದ್ಯೋಗ ಸಮಸ್ಯೆ ಬಿಗಡಾಯಿಸುತ್ತಿದೆ, ಬಡವರ ಸಂಖ್ಯೆಯಂತೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜನರ ಕೊಳ್ಳುವ ಶಕ್ತಿ ಕುಂದುತ್ತಿದೆ. ಆರ್ಥಿಕ ಸ್ಥಿತಿ ಹದಗೆಡುತ್ತಿದೆ.
ಇಂಥ ಸ್ಥಿತಿಯಲ್ಲಿ ಕರ್ನಾಟಕದ ಜನರ ಸ್ಥಿತಿ ಕೊಂಚವಾದರೂ ಸಹನೀಯ ಎನಿಸಿದರೆ, ಅದಕ್ಕೆ ಕಾರಣ ‘ಕರ್ನಾಟಕ ಮಾದರಿ’ ಆಡಳಿತ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿಗಳು ಜನರ ಬವಣೆಯನ್ನು ಕೊಂಚವಾದರೂ ನೀಗಿಸುತ್ತಿವೆ; ಅವರ ಹಸಿವನ್ನು ಹಿಂಗಿಸಿ, ಖರ್ಚಿಗೆ ಒಂದಿಷ್ಟು ಹಣ ಅವರ ಕೈ ಸೇರುವಂತೆ ಮಾಡಿವೆ.
ದೊಡ್ಡ ದೊಡ್ಡ ಉದ್ದಿಮೆದಾರರ ಹಿತ ಕಾಯುತ್ತಾ ಬಡವರಿಗೆ ಕೊಡಲಾಗುತ್ತಿದ್ದ ಪಡಿತರ ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಿದ ಘನಂದಾರಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನ ದಿಕ್ಕೆಟ್ಟುಹೋಗಿದ್ದರು. ತಿನ್ನಲು ಅನ್ನವಿಲ್ಲ, ಮಾಡಲು ಕೆಲಸವಿಲ್ಲ, ಕೈಯಲ್ಲಿ ಹಣವಿಲ್ಲವಾಗಿ ಆರ್ಥಿಕತೆ ಸಂಪೂರ್ಣ ನೆಲಕಚ್ಚಿತ್ತು.
ರಾಜ್ಯದ ಜನರಿಗೆ ಈಗ ಸಂಪೂರ್ಣವಾಗಿ ನೆಮ್ಮದಿ ಸಿಕ್ಕಿದೆ ಎಂದೇನೂ ಹೇಳಲಾಗದು. ಜನರ ಹೆಚ್ಚಿನ ಸಮಸ್ಯೆಗಳು ಹಾಗೇ ಇವೆ. ಆದರೆ, ಬಡವರಿಗೆ ತಿನ್ನಲು ಅನ್ನ, ಒಂದು ಕಡೆಯಿಂದ ಮತ್ತೊಂದು ಕಡೆ ಸಂಚರಿಸಲು ಉಚಿತ ಬಸ್ ಸಂಚಾರದ ವ್ಯವಸ್ಥೆ, ತೀರಾ ಅನಿವಾರ್ಯ ಎನಿಸುವಂಥ ಖರ್ಚು ವೆಚ್ಚಗಳಿಗಾಗಿ ಜೇಬಿನಲ್ಲಿ ಒಂದಿಷ್ಟು ಹಣ ಅವರ ಬಳಿ ಸೇರುತ್ತಿದೆ. ಇಲ್ಲಿಯವರೆಗೆ ಸುಮಾರು 43 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿ ಪ್ರಯೋಜನ ಪಡೆದಿದ್ದಾರೆ. ಇದು ಜನರನ್ನು ಸಂಚಾರ, ವ್ಯಾಪಾರ ವ್ಯವಹಾರ, ಕೆಲಸ ಕಾರ್ಯಗಳನ್ನು ಕೈಗೊಳ್ಳುವಂತೆ ಉತ್ತೇಜಿಸುವುದರ ಮೂಲಕ ಆರ್ಥಿಕತೆಯನ್ನು ಚಲನಶೀಲಗೊಳಿಸುತ್ತದೆ.
ಇದಕ್ಕೆ ಪೂರಕವಾಗಿ ರಾಜಕೀಯ ವಿಶ್ಲೇಷಕರಾದ ಪ್ರೊ. ಯೋಗೇಂದ್ರ ಯಾದವ್, ‘ನಮ್ಮಲ್ಲಿ ಉತ್ತರ ಭಾರತೀಯರು ಈ ದೇಶ ಹೇಗೆ ನಡೆಯಬೇಕೆಂದು ಹೇಳುತ್ತಿದ್ದರು. ಅದು ಕೆಲಸ ಮಾಡಿಲ್ಲ. ಹಾಗಾಗಿ ಅದನ್ನು ಬದಲಿಸಬೇಕು. ಈಗ ದಕ್ಷಿಣದಿಂದ ಶುರು ಮಾಡಬೇಕು. ಕರ್ನಾಟಕ ಮಾದರಿಯು ಸಾಕಾರವಾದರೆ ಅದು ದಕ್ಷಿಣಾಯನ ಸಂದರ್ಭವನ್ನು ರೂಪಿಸುತ್ತದೆ’ ಎಂದಿರುವುದು ಕರ್ನಾಟಕ ಮಾದರಿಗೆ ಮಹತ್ವ ತಂದಿದೆ.
ಕರ್ನಾಟಕದ ಮಾದರಿಯ ಹಿಂದೆ ಅನೇಕರ ಕನಸು, ಕಾಣ್ಕೆ, ಶ್ರಮ ಇದೆ. ಬಸವಣ್ಣ, ಕುವೆಂಪು ಅಂಥವರ ದರ್ಶನವಿದೆ; ದೇವರಾಜ ಅರಸು ಅಂಥವರ ದೂರದೃಷ್ಟಿ ಇದೆ. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಆ ಪರಂಪರೆಯನ್ನು ಇನ್ನಷ್ಟು ಸಮರ್ಥವಾಗಿ, ದಕ್ಷವಾಗಿ ಮುಂದುವರೆಸುವ ಮೂಲಕ ಕರ್ನಾಟಕ ಮಾದರಿಯನ್ನು, ತನ್ಮೂಲಕ ಜನರ ಬದುಕನ್ನು ಸಂಪನ್ನಗೊಳಿಸಬೇಕಾಗಿದೆ. ಕರ್ನಾಟಕ ಮಾದರಿ ದೇಶಕ್ಕೇ ಮಾದರಿಯಾಗಬೇಕಾಗಿದೆ.
