ಈ ದಿನ ಸಂಪಾದಕೀಯ | ಆಪರೇಷನ್‌ ಹಸ್ತದ ಚರ್ಚೆ: ನಿರ್ಲಜ್ಜ ರಾಜಕೀಯ ನಡೆಗಳು

Date:

ʼಆಪರೇಷನ್‌ ಹಸ್ತʼದ ಬಗ್ಗೆ ಕಾಂಗ್ರೆಸ್ಸಿನ ನಾಯಕರು ಏನೇ ಸಬೂಬುಗಳನ್ನು ಹೇಳಿದರೂ ಈ ವಿದ್ಯಮಾನ ಅತ್ಯಂತ ಖಂಡನೀಯವಾದುದು. ತಾವು ಅಧಿಕಾರದಲ್ಲಿದ್ದಾಗ ನಡೆಸುವ ಇಂತಹ ಆಪರೇಷನ್‌ ಗಳು ಮುಂದೆ ಬಿಜೆಪಿ ನಡೆಸುವ ಕಾರ್ಯಾಚರಣೆಗಳಿಗೆ ಸಮರ್ಥನೆ ಒದಗಿಸುತ್ತದೆ.

ಈ ದೇಶದಲ್ಲಿ ʼಆಪರೇಷನ್‌ ಕಮಲʼದ ಅತಿ ದೊಡ್ಡ ಬಲಿಪಶುವಾದ ಕಾಂಗ್ರೆಸ್‌ ಪಕ್ಷದ ಕೆಲವು ನಾಯಕರು ʼಆಪರೇಷನ್‌ ಹಸ್ತʼದ ಕುರಿತು ಮಾತನಾಡುತ್ತಿದ್ದಾರೆ. ಈ ರಾಜಕೀಯ ನಿರ್ಲಜ್ಜತೆಯು ಖಂಡನೀಯವಾದುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದರ ಕುರಿತು ಮಾತನಾಡಿಲ್ಲ. ಕೆಪಿಸಿಸಿ ಅಧ್ಯಕ್ಷರೂ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನಿರಾಕರಣೆಯ ಮಾತನಾಡಿದ್ದರೂ ʼರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದುʼ ಎಂದಿದ್ದಾರೆ. ಸಚಿವರಾದ ಚಲುವರಾಯಸ್ವಾಮಿ ಮತ್ತು ಬೋಸರಾಜು ಅವರು ಇಂತಹ ಸಾಧ್ಯತೆಯ ಸುಳಿವು ನೀಡಿದ್ದಾರೆ.

135 ಸೀಟುಗಳ ದೊಡ್ಡ ಬಹುಮತ ಪಡೆದುಕೊಂಡ ಪಕ್ಷವೊಂದು ಅದರ ಬಲದಿಂದ ಹಳಿತಪ್ಪಿದ್ದ ಆಡಳಿತವನ್ನು ಸರಿದಾರಿಗೆ ತರುವ ಕೆಲಸದ ಮೇಲೆ ತನ್ನ ಗಮನ ಕೇಂದ್ರೀಕರಿಸಬೇಕಿತ್ತು. ಸಾಂಸ್ಥೀಕರಣಗೊಳ್ಳುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿರ್ದಿಷ್ಟ ಕ್ರಮಗಳಿಗೆ ಮುಂದಾಗಬೇಕಿತ್ತು. ಸುಳ್ಳು ಸುದ್ದಿ, ದ್ವೇಷ ಭಾಷಣ, ಕೋಮು ದ್ವೇಷ ಹರಡುವ ಪ್ರಯತ್ನಗಳಿಗೆ ಕಡಿವಾಣ ಹಾಕಲು ಬೇಕಾದ ಸಮಗ್ರ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಮೂರ್ನಾಲ್ಕು ಸಚಿವರು ಮಾತ್ರ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಅಂತಹದ್ದನ್ನು ಮಾಡುತ್ತಿರುವ ಲಕ್ಷಣಗಳು ಕಾಣುತ್ತಿವೆ. ಉಳಿದವರೆಲ್ಲರೂ ಮಾಮೂಲಾಗಿ ನಡೆಯುವ ವಿದ್ಯಮಾನಗಳನ್ನೇ ಮುಂದುವರೆಸಿಕೊಂಡು ಹೋಗುತ್ತಿರುವಂತಿದೆ.

ಅದಕ್ಕೆ ಕಲಶವಿಟ್ಟಂತೆ ಈಗ ಆಪರೇಷನ್‌ ಹಸ್ತದ ಮಾತು. ಎಲ್ಲಾ ಪಕ್ಷಾಂತರಗಳು ಎಲ್ಲಾ ಕಾಲದಲ್ಲೂ ತಪ್ಪು ಎಂದಲ್ಲ. ಆದರೆ, ಒಂದು ಪಕ್ಷದಿಂದ ಗೆದ್ದ ಯಾವುದೇ ಶಾಸಕ, ಹೊಸ ಸರ್ಕಾರ ರಚನೆಯಾದ ಕೂಡಲೇ ʼತನ್ನ ಪಕ್ಷವು ಸರಿಯಿಲ್ಲ, ಆಡಳಿತ ಪಕ್ಷಕ್ಕೆ ಹೋಗುವುದೇ ಸರಿʼ ಎಂಬ ಅಭಿಪ್ರಾಯಕ್ಕೆ ಬರುವುದೇ ಹಾಸ್ಯಾಸ್ಪದ. ಆಮಿಷ, ಅಧಿಕಾರದ ದಾಹ ಅಥವಾ ಬೆದರಿಕೆ ಅಲ್ಲದೇ ಇನ್ನೇನು ಕಾರಣ ಇರಲು ಸಾಧ್ಯ? ಒಂದು ವೇಳೆ ಏನೇ ಕಾರಣಗಳಿದ್ದರೂ, ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಇರದ ಸಮಸ್ಯೆ ಈಗ ಇದ್ದಕ್ಕಿದ್ದಂತೆ ಉದ್ಭವಿಸಿತೇ? ಇಡೀ ದೇಶದಲ್ಲಿ ಬಿಜೆಪಿ ನಡೆಸಿದ ಇಂತಹ ಅಸಹ್ಯದ ಕ್ರಮಗಳಿಂದ ಹಲವಾರು ರಾಜ್ಯಗಳಲ್ಲಿ ಅಧಿಕಾರವನ್ನು ಕಳೆದುಕೊಂಡ ಕಾಂಗ್ರೆಸ್‌ ನಾಯಕತ್ವ ಇದಕ್ಕೆ ಮೌನ ಸಮ್ಮತಿ ನೀಡಿದೆಯೇ?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಲ್ಕಿಸ್‌ ಕಾನೂನು ಸಮರ – ನ್ಯಾಯವ್ಯವಸ್ಥೆಯ ಅಣಕ

ಈ ವಿಚಾರದಲ್ಲಿ ಕಾಂಗ್ರೆಸ್ಸಿನ ನಾಯಕರು ಏನೇ ಸಬೂಬುಗಳನ್ನು ಹೇಳಿದರೂ ಈ ವಿದ್ಯಮಾನ ಅತ್ಯಂತ ಖಂಡನೀಯವಾದುದು. ತಾವು ಅಧಿಕಾರದಲ್ಲಿದ್ದಾಗ ನಡೆಸುವ ಇಂತಹ ಆಪರೇಷನ್‌ ಗಳು ಮುಂದೆ ಬಿಜೆಪಿ ನಡೆಸುವ ಕಾರ್ಯಾಚರಣೆಗಳಿಗೆ ಸಮರ್ಥನೆ ಒದಗಿಸುತ್ತದೆ. ಅಷ್ಟೇ ಅಲ್ಲ, ಬಿಜೆಪಿಗೂ ಕಾಂಗ್ರೆಸ್ಸಿಗೂ ರಾಜಕೀಯ ಮೌಲ್ಯಗಳ ದೃಷ್ಟಿಯಿಂದ ಯಾವ ವ್ಯತ್ಯಾಸವೂ ಇಲ್ಲವೆಂಬುದನ್ನೇ ಸಾರುತ್ತದೆ. ಪಕ್ಷಾಂತರದ ದೃಷ್ಟಿಯಲ್ಲಿ ಅಲ್ಪ ಸ್ವಲ್ಪ ಮರ್ಯಾದೆ ಇಟ್ಟುಕೊಂಡಿರುವುದು ಎಡಪಕ್ಷಗಳು ಮಾತ್ರವೇ ಆಗಿವೆ. ಉಳಿದ ಎಲ್ಲಾ ಪಕ್ಷಗಳಲ್ಲೂ ಆಯಾರಾಂ ಗಯಾರಾಂ ಇದ್ದದ್ದೇ.

ಆದರೆ ಬಿಜೆಪಿಯು ಅದನ್ನು ಇನ್ನೊಂದು ಮಟ್ಟಕ್ಕೆ ಕೆಳಕ್ಕಿಳಿಸಿತು. ಪಕ್ಷಾಂತರ ನಿಷೇಧ ಕಾಯ್ದೆಯಿಂದ ತಪ್ಪಿಸಿಕೊಳ್ಳಲು ಗೆದ್ದವರಿಂದ ರಾಜೀನಾಮೆ ಕೊಡಿಸಿ ಮತ್ತೆ ಅವರನ್ನೇ ಕಣಕ್ಕಿಳಿಸುವ ದಾರಿಯದು. ಅದನ್ನೇ ʼಆಪರೇಷನ್‌ ಕಮಲʼ ಎಂದು ಕರೆಯಲಾಯಿತು ಮತ್ತು ಅದನ್ನು ಯಥೇಚ್ಛವಾಗಿ ಬಳಸಿದ್ದು ಕರ್ನಾಟಕದಲ್ಲೇ. ಅಕ್ರಮ ಗಣಿಗಾರಿಕೆಯ ಹಣದಿಂದ ರೆಡ್ಡಿ-ರಾಮುಲುಗಳು ನಡೆಸಿದ ಅಕ್ರಮ ರಾಜಕೀಯ ಕಾರ್ಯಾಚರಣೆಯದಾಗಿತ್ತು. ಮೋದಿ ಅಮಿತ್‌ ಶಾ ಹಾಗೂ ಆರೆಸೆಸ್ಸಿನ ಅಖಂಡ ಬೆಂಬಲದೊಂದಿಗೆ ಬಿಜೆಪಿಯು ಅದನ್ನು ರಾಜ್ಯದಲ್ಲೂ 2019ರಲ್ಲಿ ಪುನರಾವರ್ತನೆ ಮಾಡಿತು ಮತ್ತು ಇಡೀ ದೇಶದಲ್ಲೂ ನಡೆಸಿತು.

ದೇಶದ ಬಹುತೇಕ ಪ್ರಜ್ಞಾವಂತರು ಬಿಜೆಪಿಯ ಈ ಕ್ರಮಗಳನ್ನು ಖಂಡಿಸಿದರು; ಅಸಹ್ಯ ಪಟ್ಟುಕೊಂಡರು ಮತ್ತು ಪ್ರಜಾಪ್ರಭುತ್ವದ ಮೇಲೆಯೇ ವಿಶ್ವಾಸ ಹೋಗುವ ಕ್ರಮಗಳೆಂದು ಟೀಕಿಸಿದರು. ಹೀಗಿರುವಾಗ ಕಾಂಗ್ರೆಸ್ಸಿನ ಯಾವುದೇ ನಾಯಕರು ಇಂತಹ ಕೆಲಸ ಮಾಡುವುದಿರಲಿ, ಆಪರೇಷನ್ನಿನ ಮಾತುಗಳನ್ನಾಡುವುದೇ ಲಜ್ಜೆಗೇಡಿನ ಕೆಲಸವಾಗಿದೆ.

ಪದೇ ಪದೇ ನಡೆಯುವ ಇಂತಹ ಸಾರ್ವಜನಿಕ ಚರ್ಚೆಗಳು ತಪ್ಪು ನಡೆಗಳಿಗೆ ಮಾನ್ಯತೆ ತಂದುಕೊಡುತ್ತಾ ಹೋಗುತ್ತವೆ. ʼಸಾರ್ವಜನಿಕವಾಗಿ ಇಂತಹ ಮಾತುಗಳನ್ನು ಆಡಲೂಬಾರದು, ಗುಟ್ಟಾಗಿ ಒಪ್ಪಂದಗಳೂ ಆಗಬಾರದುʼ ಎಂಬ ತಿಳಿವಳಿಕೆಯನ್ನು ಕಾಂಗ್ರೆಸ್‌ ನಾಯಕರು ತಮ್ಮವರಿಗೆ ನೀಡದೇ ಇದ್ದಲ್ಲಿ, ಈ ಚುನಾವಣೆಯಲ್ಲಿ ಅವರಿಗೆ ಸಿಕ್ಕ ಬಹುಮತವನ್ನೇ ಅವಮಾನಿಸಿದಂತೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಮೂರು ಪ್ರಕರಣಗಳು ಮತ್ತು ‘ಮಾನವಂತ’ ಮಾಧ್ಯಮಗಳು

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ, ನಟ...

ಈ ದಿನ ಸಂಪಾದಕೀಯ | ಕೊಡುವ ಸ್ಥಾನದಲ್ಲಿರುವವರು ಒಳ್ಳೆಯದನ್ನೇ ಕೊಡಬೇಕು ಎಂದು ರಾಜ್ ಹೇಳಿದ್ದು ಯಾರಿಗೆ?

ಇಲ್ಲಿ ಯಾರು ಏನು ಬೇಕಾದರೂ ಮಾಡಬಹುದು, ಮಾತಾಡಬಹುದು. ಇಂತಹ ಪರಿಸ್ಥಿತಿ ನಿರ್ಮಾಣವಾಗಲು...