ಪಾದಯಾತ್ರೆಯ ಮೂಲಕ ಭಾರತದ ಆತ್ಮವನ್ನು ಅರ್ಥ ಮಾಡಿಕೊಂಡಿದ್ದ, ಜನರೊಂದಿಗೆ ಬೆರೆತು ಬೆಂದು ಬಂಗಾರವಾಗಿದ್ದ ರಾಹುಲ್, ಬಿಜೆಪಿ ಮತ್ತು ಮೋದಿ ಹೂಡಿದ ಷಡ್ಯಂತ್ರಗಳಿಗೆ ತಲೆ ಬಾಗದೆ, ಎದೆಗೊಟ್ಟಿ ನಿಂತರು. 62 ದಿನಗಳಲ್ಲಿ 15 ರಾಜ್ಯಗಳ 110 ಜಿಲ್ಲೆಗಳಲ್ಲಿ 335 ಚುನಾವಣಾ ರ್ಯಾಲಿಗಳು, ಸಭೆಗಳು, ಭಾಷಣಗಳ ಮೂಲಕ ಜನರನ್ನು ಮುಟ್ಟತೊಡಗಿದರು. ಪ್ರಬಲ ರಾಜಕೀಯ ನಾಯಕನಾಗಿ ಹೊರಹೊಮ್ಮಿದರು…
ಈ ಬಾರಿಯ ಲೋಕಸಭಾ ಚುನಾವಣೆ ಹಲವರ ಪಾಲಿಗೆ ಅವಿಸ್ಮರಣೀಯವಾಗಿ ಉಳಿಯಲಿದೆ. ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಅದರಲ್ಲೂ ಬಹಳ ದೊಡ್ಡ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದ ಐವತ್ನಾಲ್ಕು ವರ್ಷಗಳ ʼಪುಟ್ಟ ಹುಡುಗʼ ರಾಹುಲ್ ಗಾಂಧಿಗೆ ಈ ಚುನಾವಣೆ ಬಹಳ ದೊಡ್ಡ ಪಾಠವನ್ನು ಕಲಿಸಿದೆ, ಕರುಳಿಗಿಳಿಸಿದೆ. ಪ್ರಬಲ ರಾಜಕೀಯ ನಾಯಕನಾಗಿ ಹೊರಹೊಮ್ಮುವಂತೆ ಮಾಡಿದೆ.
ನೆಹರು-ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದ ಅಮೇಥಿಯಿಂದ 2004ರಲ್ಲಿ ಸಂಸದರಾಗುವ ಮೂಲಕ ರಾಹುಲ್ ರಾಜಕಾರಣಕ್ಕಿಳಿದರೂ, ನಾಲ್ಕು ಬಾರಿ ಸಂಸದನಾಗಿ ಆಯ್ಕೆಯಾಗಿದ್ದರೂ, ತಾಯಿ ಸೋನಿಯಾ ಸೆರಗಿನಿಂದ ಬಿಡಿಸಿಕೊಂಡಿರಲಿಲ್ಲ. ಅಧಿಕಾರದ ಸ್ಥಾನದಲ್ಲಿ ಕೂರುವ ಧೈರ್ಯ ಮಾಡಿರಲಿಲ್ಲ. ಆದರೆ ಈ ಬಾರಿಯ ಚುನಾವಣೆಯಲ್ಲಿ ರಾಹುಲ್, ವ್ಯಕ್ತಿತ್ವ ಮತ್ತು ವರ್ಚಸ್ಸು ಎರಡನ್ನೂ ವೃದ್ಧಿಸಿಕೊಂಡಿದ್ದಾರೆ. ಸೋತು ಸುಣ್ಣವಾಗಿದ್ದ ಕಾಂಗ್ರೆಸ್ ಪಕ್ಷವನ್ನು ಎತ್ತಿ ನಿಲ್ಲಿಸಿದ್ದಾರೆ. ಕಾಂಗ್ರೆಸ್ಸಿಗರು ಎದೆಯುಬ್ಬಿಸಿ ನಡೆಯುವಂತೆ ಮಾಡಿದ್ದಾರೆ.
ಲೋಕಸಭಾ ಚುನಾವಣೆಗೂ ಮುನ್ನ ದೇಶದ ಉದ್ದಗಲಕ್ಕೆ ರಾಹುಲ್ ಕೈಗೊಂಡ ಪಾದಯಾತ್ರೆ ಯಾವ ಯೂನಿವರ್ಸಿಟಿಯೂ, ಮಹಾನ್ ಗ್ರಂಥವೂ ಕಲಿಸದ ಪಾಠ ಕಲಿಸಿದೆ. ಅದು ಗಾಂಧಿ ಮಾರ್ಗವಾಗಿದೆ. ಅವರಲ್ಲಿ ಹಲವು ಬದಲಾವಣೆಗೆ ಕಾರಣವಾಗಿದೆ. ಪಾದಯಾತ್ರೆಯಲ್ಲಿ ಸಿಕ್ಕ ಬಡ ಮುದುಕಿಯನ್ನು ಬಿಗಿದಪ್ಪಿಕೊಂಡು ಕಣ್ಣೀರು ಒರೆಸಿದ್ದು, ಪುಟ್ಟ ಕಂದನನ್ನು ಎತ್ತಿಕೊಂಡು ಮುದ್ದಾಡಿದ್ದು, ಕೂಲಿಕಾರರ ಕಷ್ಟಗಳಿಗೆ ಕಿವಿಯಾದದ್ದು, ಬಡವರ ಬದುಕನ್ನು ಖುದ್ದು ಕಂಡಿದ್ದು, ಜನರನ್ನು ಮುಟ್ಟಿ ಮಾತನಾಡಿಸಿದ್ದು, ಅವರ ದುಃಖ ದುಮ್ಮಾನಗಳಿಗೆ ದನಿಯಾಗಿದ್ದು- ರಾಹುಲ್ ನಮ್ಮವರು ಎನಿಸಿದೆ. ಈ ಚುನಾವಣೆಯಲ್ಲಿ ಅದು ಪಕ್ಷಕ್ಕೆ ಸಾಕಷ್ಟು ಲಾಭ ತಂದುಕೊಟ್ಟಿದೆ.
2014ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತ ಬಳಿಕ ಮತ್ತೆ ಅದು ತಲೆಯೆತ್ತಲು ಸಾಧ್ಯವಿಲ್ಲ ಎಂಬ ರಾಜಕೀಯ ವಿಶ್ಲೇಷಣೆಗಳು ಕೇಳಿಬಂದಿದ್ದವು. 2019ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಪುನರಾಯ್ಕೆ ಆದ ಬಳಿಕ ಬಿಜೆಪಿಯನ್ನು ಇನ್ನು 40 ವರ್ಷಗಳ ಕಾಲ ಯಾರೂ ಎದುರಿಸಲು ಸಾಧ್ಯವಿಲ್ಲ ಎಂಬ ಮಾತುಗಳೂ ಕೇಳಿಬಂದಿದ್ದವು. ಅದಕ್ಕೆ ತಕ್ಕಂತೆ ಬಿಜೆಪಿ ಕೂಡ ‘ಕಾಂಗ್ರೆಸ್ ಮುಕ್ತ ಭಾರತ’ ಮಾಡುತ್ತೇವೆ ಎಂದು ಪ್ರಚಾರ ಮಾಡುತ್ತಿತ್ತು. ಅದಕ್ಕಾಗಿ ಅಧಿಕಾರದತ್ತ ಅಸ್ತ್ರಗಳಾದ ಐಟಿ, ಇಡಿ, ಸಿಬಿಐ ಪ್ರಯೋಗಿಸಿ ಪಕ್ಷವನ್ನು ಪುಡಿಗಟ್ಟುತ್ತಲೇ ಸಾಗಿತ್ತು.
ಸಾಲದೆಂದು ರಾಹುಲ್‌ರನ್ನು ‘ಪಪ್ಪು’ ಎಂದು ಬಿಂಬಿಸಲು ಬಿಜೆಪಿ ಐಟಿ ಸೆಲ್ ತೆರೆದು, ನೂರಾರು ಕೋಟಿ ಖರ್ಚು ಮಾಡಿತ್ತು. ದೇಶದ ಸುದ್ದಿ ಮಾಧ್ಯಮಗಳನ್ನು, ಸೋಷಿಯಲ್ ಮೀಡಿಯಾಗಳನ್ನು ಖರೀದಿಸಿತ್ತು. ಆ ಮೂಲಕ ರಾಹುಲ್ ಎಂದರೆ ಜನ ನಗುವಂತೆ, ಲೇವಡಿ ಮಾಡುವಂತೆ, ಹಾಸ್ಯದ ವಸ್ತುವನ್ನಾಗಿಸಿತ್ತು. ಅದನ್ನೇ ಇಡೀ ಪ್ರಪಂಚಕ್ಕೆ ಹಂಚಿತ್ತು. ಸಣ್ಣ ಹೇಳಿಕೆಯೊಂದನ್ನೇ ದೊಡ್ಡದು ಮಾಡಿ, ನ್ಯಾಯಾಂಗವನ್ನು ದುರ್ಬಳಕೆ ಮಾಡಿಕೊಂಡು ರಾಹುಲ್‌ರನ್ನು ಲೋಕಸಭೆಯಿಂದ ಹೊರದಬ್ಬಲಾಗಿತ್ತು. ಸಂಸದನಿಗೆ ಕೊಟ್ಟ ಮನೆಯನ್ನು ಕಿತ್ತುಕೊಂಡು ಅವಮಾನಿಸಲಾಗಿತ್ತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಿತ್ರಪಕ್ಷಗಳಿಗೆ ಮಣಿಯುವರೇ ಅಥವಾ ‘ಆಪರೇಷನ್ ಕಮಲ’ಕ್ಕೆ ಶರಣಾಗುವರೇ?
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆಯೋಗವನ್ನು ಹದ್ದುಬಸ್ತಿನಲ್ಲಿಟ್ಟುಕೊಂಡ ಆಡಳಿತಾರೂಢ ಬಿಜೆಪಿ, ಚುನಾವಣೆಯನ್ನು ಬೇಕೆಂತಲೇ ಎರಡು ತಿಂಗಳ ಕಾಲ, ಏಳು ಹಂತಗಳಿಗೆ ವಿಸ್ತರಿಸುವಂತೆ ನೋಡಿಕೊಂಡಿತ್ತು. ಆ ದೀರ್ಘಾವಧಿ ಮತದಾನ ಪ್ರಕ್ರಿಯೆ ಸಹಜವಾಗಿಯೇ ಸಂಪನ್ಮೂಲಭರಿತ ಬಿಜೆಪಿ ಹೊರತುಪಡಿಸಿ ಬೇರೆಲ್ಲ ಪಕ್ಷಗಳಿಗೆ ಕಷ್ಟವಾಗಿತ್ತು. ಹಣಕಾಸಿನ ಕೊರತೆಯಿಂದ ನಿಭಾಯಿಸಲಾಗದೆ, ಚುನಾವಣೆಗೆ ಮುಂಚೆಯೇ ಸೋಲೊಪ್ಪಿಕೊಳ್ಳುವಂತಾಗಿತ್ತು. ಅದರಲ್ಲೂ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಕೊಡಿಸಿ, ಸಾವಿರಾರು ಕೋಟಿ ತೆರಿಗೆ ಕಟ್ಟಲು ಸಮಯ ನಿಗದಿಪಡಿಸಲಾಗಿತ್ತು. ಚುನಾವಣಾ ಖರ್ಚಿಗೆ ಬೇಕಾದ ಕನಿಷ್ಠ ಕಾಸು ಸಿಗದೆ ಬಿಕ್ಕಟ್ಟು ಸೃಷ್ಟಿಸಿ ಕೈ ಕಟ್ಟಿಹಾಕಲಾಗಿತ್ತು. ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಿತ್ತು. ವಿರೋಧ ಪಕ್ಷಗಳೇ ಇಲ್ಲದಂತೆ ನೋಡಿಕೊಳ್ಳಲಾಗಿತ್ತು.
ಆದರೆ, ಪಾದಯಾತ್ರೆಯ ಮೂಲಕ ಭಾರತದ ಆತ್ಮವನ್ನು ಅರ್ಥ ಮಾಡಿಕೊಂಡಿದ್ದ, ಜನರೊಂದಿಗೆ ಬೆರೆತು ಬೆಂದು ಬಂಗಾರವಾಗಿದ್ದ ರಾಹುಲ್, ಬಿಜೆಪಿ ಮತ್ತು ಮೋದಿ ಹೂಡಿದ ಷಡ್ಯಂತ್ರಗಳಿಗೆ ತಲೆ ಬಾಗದೆ, ಎದೆಗೊಟ್ಟಿ ನಿಂತರು. 62 ದಿನಗಳಲ್ಲಿ 15 ರಾಜ್ಯಗಳ 110 ಜಿಲ್ಲೆಗಳಲ್ಲಿ 335 ಚುನಾವಣಾ ರ್ಯಾಲಿಗಳು, ಸಭೆಗಳು, ಭಾಷಣಗಳ ಮೂಲಕ ಜನರನ್ನು ಮುಟ್ಟತೊಡಗಿದರು. ಅದರಲ್ಲೂ ದಲಿತರು, ಮುಸ್ಲಿಮರು ಮತ್ತು ಒಬಿಸಿಗಳ ಪರವಿದ್ದು, ಸಂವಿಧಾನದ ಮಹತ್ವ ಕುರಿತು ಮಾತನಾಡತೊಡಗಿದರು. ಮಹಿಳೆಯರ ಮನ ಗೆಲ್ಲಲು ‘ಖಟಾ ಖಟ್ ಖಟಾ ಖಟ್’ ಎಂಬ ಸ್ಲೋಗನ್ ಸೃಷ್ಟಿಸಿದರು. ಪ್ರಿಯಾಂಕ ಸ್ಟಾರ್ ಪ್ರಚಾರಕಿಯಾದರು. ಮಲ್ಲಿಕಾರ್ಜುನ ಖರ್ಗೆ ಬಂಡೆಯಂತೆ ಬೆಂಬಲಕ್ಕೆ ನಿಂತರು. ಪ್ರೀತಿಯ ಅಂಗಡಿ ತೆರೆದು ಪ್ರೀತಿಯನ್ನು ಹಂಚತೊಡಗಿದರು.
ಏತನ್ಮಧ್ಯೆ, ಹಳೆಯ ತಪ್ಪುಗಳನ್ನು ತಿದ್ದಿಕೊಂಡು ಹೊಸ ವಿಚಾರಗಳ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸತೊಡಗಿದರು. ಮೋದಿಯವರ ಮೋಸ, ವಂಚನೆ, ಸುಳ್ಳುಗಳನ್ನು ದಿಟ್ಟವಾಗಿ ಜನರ ಮುಂದೆ ಬಿಚ್ಚಿಡತೊಡಗಿದರು. ಹೋದಲ್ಲಿ ಬಂದಲ್ಲಿ ‘ಮೋದಿ ಹೆದರಿದ್ದಾರೆ, ಭಯ ಬಿದ್ದಿದ್ದಾರೆ’ ಎಂದು ದಿಟ್ಟವಾಗಿ ಹೇಳತೊಡಗಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಏನೇನು ಮಾಡಲಿದೆ ಎಂಬುದನ್ನು ಹೇಳುವ ಪಂಚ್ ನ್ಯಾಯ್ ಪ್ರಣಾಳಿಕೆಯನ್ನು ಜನರ ತಿಳಿವಳಿಕೆಗೆ ತಂದರು. ಪ್ರತಿಪಕ್ಷದ ಟೀಕೆಗಳಿಗೆ ವಿನೂತನ ಜಾಹೀರಾತುಗಳ, ತಕ್ಷಣದ ಪ್ರತಿಕ್ರಿಯೆಗಳ ಮೂಲಕ ಉತ್ತರ ಕೊಡತೊಡಗಿದರು. ರಾಹುಲ್ ಯೂ ಟ್ಯೂಬ್ ಚಾನಲ್ ಆರಂಭಿಸಿ, 28 ದಿನದಲ್ಲಿ, 35 ಕೋಟಿ ಜನರನ್ನು ತಲುಪಿದರು. ಆರಂಭದಿಂದ ಕೊನೆಯ ದಿನದವರೆಗೆ, ಒಂದೇ ಬಗೆಯ ರಣೋತ್ಸಾಹವನ್ನು ಕಾಯ್ದುಕೊಂಡರು. ಸೋತು ಕಳಾಹೀನವಾಗಿ ಕೂತಿದ್ದ ಪಕ್ಷವನ್ನು ನೂರರ ಗಡಿ ಮುಟ್ಟಿಸಿದರು. ಇಂಡಿಯಾ ಒಕ್ಕೂಟ ಇನ್ನೂರರ ಗಡಿ ದಾಟುವಂತೆ ಮಾಡಿದರು. ಏರುತ್ತಲೇ ಸಾಗಿದ್ದ ಬಿಜೆಪಿಗೆ ಸೋಲಿನ ರುಚಿ ಉಣಿಸಿದರು. ʼಮತ್ತೊಮ್ಮೆ ಮೋದಿʼ ಎಂದು ಹೂಂಕರಿಸುತ್ತಿದ್ದ ಐವತ್ತಾರಿಂಚಿನ ಮೋದಿ, ಸರ್ಕಾರ ರಚಿಸಲು ಇತರ ಪಕ್ಷಗಳ ನಾಯಕರ ಮುಂದೆ ಮಂಡಿಯೂರುವಂತೆ ಮಾಡಿದರು.
ಇದು ರಾಹುಲ್ ಗೆಲುವು, ಇದಕ್ಕಿಂತ ಇನ್ನು ಯಾವ ಅಧಿಕಾರ ಬೇಕು ಹೇಳಿ?
