ಈ ದಿನ ಸಂಪಾದಕೀಯ | ಮಿತ್ರಪಕ್ಷಗಳಿಗೆ ಮಣಿಯುವರೇ ಅಥವಾ ‘ಆಪರೇಷನ್ ಕಮಲ’ಕ್ಕೆ ಶರಣಾಗುವರೇ?

Date:

ದೇಶದ ದೊಡ್ಡ ಪಕ್ಷಗಳಲ್ಲಿ ಒಂದಾದ ಕಾಂಗ್ರೆಸ್ ಪಾರ್ಟಿ ಅವನತಿಯ ಹಾದಿಯಿಂದ ಮೈಕೊಡವಿ ಮೇಲೆದ್ದಿದೆ. ಮತದಾರರೇ ಕೈ ಹಿಡಿದು ಎಬ್ಬಿಸಿದ್ದಾರೆ. ಭವಿಷ್ಯದಲ್ಲಿ ಈ ಪಕ್ಷ ತುಳಿಯಬೇಕಿರುವ ಹಾದಿಯನ್ನೂ ತೋರಿದ್ದಾರೆ.

 

ಜಾಗೃತ ಮತದಾರರೇ ಜನತಂತ್ರ ವ್ಯವಸ್ಥೆಯ ನಿಜವಾದ ಶಕ್ತಿಮೂಲ. ಸದಾ ಕಾಲಕ್ಕೂ ತಮ್ಮನ್ನು ವಂಚಿಸುವುದು ಸಾಧ್ಯವಿಲ್ಲ ಎಂಬ ಸಂದೇಶವನ್ನು ಅವರು ಈ ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೆ ಮುಟ್ಟಿಸಿದ್ದಾರೆ. ಭಾರತದ ಉದ್ದಗಲದಲ್ಲಿ ಹೆಚ್ಚೂ ಕಡಿಮೆ ಸಮತೂಕದ ರಾಜಕಾರಣಕ್ಕೆ ಮಣೆ ಹಾಕಿದ್ದಾರೆ. ಮೋದಿಯವರು ಬೇಡವೇ ಬೇಡ ಎಂಬುದನ್ನು ಖಂಡತುಂಡವಾಗಿ ಹೇಳದೆ ಹೋದರೂ, ಸರ್ವಾಧಿಕಾರೀ ಧೋರಣೆ ಸಲ್ಲದು ಎಂಬ ಸೂಚನೆಯನ್ನಂತೂ ನೀಡಿದ್ದಾರೆ. ಅಧಿಕಾರ ಕೈ ತಪ್ಪೀತು ಎಂಬ ಭಯವನ್ನು ಹುಟ್ಟಿಸಿದ್ದಾರೆ. ನಿರಂಕುಶ ಮೋದಿಯವರನ್ನು ಅಂಕೆಯಲ್ಲಿ ಇರಿಸಲು ಮಿತ್ರಪಕ್ಷಗಳ ಮರ್ಜಿಗೆ ತಳ್ಳಿದ್ದಾರೆ. ಪ್ರತಿಪಕ್ಷಗಳನ್ನು ಬಲಿಷ್ಠಗೊಳಿಸಿದ್ದಾರೆ.

ಬಿಜೆಪಿ ತನ್ನನ್ನು ತಾನು ಸದ್ಗುಣಗಳ ಪಕ್ಷವೆಂದು (A Party with a difference) ಬಣ್ಣಿಸಿಕೊಂಡು ಬಂದಿದೆ. ಈ ಸುಳ್ಳಿನ ಗುಳ್ಳೆ ಕಳೆದ ಐದು ವರ್ಷಗಳಲ್ಲಿ ಒಡೆದು ಚೂರಾಗಿರುವುದನ್ನು ಮತದಾರರು ಕಣ್ಣಾರೆ ಕಂಡಿದ್ದಾರೆ. ಮೋದಿಯವರು ಹಾಲಿ ಚುನಾವಣಾ ಪ್ರಚಾರದಲ್ಲಿ ಬಳಸಿದ ಭಾಷೆ, ಕಟ್ಟಿದ ಸಂವಾದ ಹೊಸ ಪಾತಾಳಕ್ಕೆ ಇಳಿಯಿತು. ಮುಸ್ಲಿಮ್ ದ್ವೇಷದ ಅಡಿಗಲ್ಲಿನ ಮೇಲೆ ಆಕ್ರಮಣಕಾರಿ ಹಿಂದುತ್ವ ಮತ್ತು ಉಗ್ರ ರಾಷ್ಟ್ರವಾದಿ ಅಸ್ಮಿತೆಯ ಲೋಹವನ್ನು ಬಡಿಯುತ್ತ ಬಂದಿದ್ದಾರೆ. ಬಡ ಜನಕೋಟಿಯ ಹೊಟ್ಟೆಬಟ್ಟೆ ಅಥವಾ ಅನ್ನ ನೀರು ನೆರಳುಗಳ ಮೂಲಭೂತ ಅಗತ್ಯಗಳು ಅವರಿಗೆ ನೆಪಮಾತ್ರ.

ದೇಶದ ದೊಡ್ಡ ಪಕ್ಷಗಳಲ್ಲಿ ಒಂದಾದ ಕಾಂಗ್ರೆಸ್ ಪಾರ್ಟಿ ಅವನತಿಯ ಹಾದಿಯಿಂದ ಮೈಕೊಡವಿ ಮೇಲೆದ್ದಿದೆ. ಮತದಾರರೇ ಕೈ ಹಿಡಿದು ಎಬ್ಬಿಸಿದ್ದಾರೆ. ಭವಿಷ್ಯದಲ್ಲಿ ಈ ಪಕ್ಷ ತುಳಿಯಬೇಕಿರುವ ಹಾದಿಯನ್ನೂ ತೋರಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಳೆದ ಹತ್ತು ವರ್ಷಗಳಲ್ಲಿ ಜನತಂತ್ರದ ಜೀವಾಳವನ್ನು ಹೊಸಕಿ ಹಾಕುವ ಕೃತ್ಯಗಳು ಜರುಗಿವೆ. ನಾಗರಿಕ ಹಕ್ಕುಗಳು, ಮಾನವ ಹಕ್ಕುಗಳು ಮಾತ್ರವಲ್ಲ ಮೂಲಭೂತ ಹಕ್ಕುಗಳ ಮೇಲೆ ಕೂಡ ರಾಜ್ಯಶಕ್ತಿಯ ದಾಳಿ ಜರುಗಿದೆ. ತನಿಖಾ ಏಜೆನ್ಸಿಗಳನ್ನು ಛೂ ಬಿಟ್ಟು ಪ್ರತಿಪಕ್ಷಗಳನ್ನು ಬೇಟೆಯಾಡಲಾಗುತ್ತಿದೆ. ಅವುಗಳ ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಪ್ರತಿಪಕ್ಷಗಳನ್ನು ಹೋಳು ಮಾಡಲಾಯಿತು. ಅವುಗಳ ಸ್ಥೈರ್ಯವನ್ನು ಉಡುಗಿಸಲು ಗುಡುಗು ಮಿಂಚು ಸಿಡಿಲುಗಳ ಪ್ರಹಾರ ನಡೆಯಿತು. ಅವುಗಳ ಆರ್ಥಿಕ ಸಂಪನ್ಮೂಲಗಳನ್ನು ಬತ್ತಿಸಿ ಸೊರಗಿಸಲಾಯಿತು. ಮುಖ್ಯಧಾರೆಯ ಮೀಡಿಯಾವನ್ನು ಆಳುವವರು ತಮ್ಮ ಕೈಗೊಂಬೆಯಾಗಿಸಿ ಪ್ರತಿಪಕ್ಷಗಳ ವಿರುದ್ಧ ಕುಣಿಸುತ್ತಿದ್ದರು. ಚುನಾವಣಾ ಆಯೋಗ ಆಳುವ ಪಕ್ಷದ ಪಕ್ಷಪಾತಿಯಾಯಿತು.

ದಶಕದ ಕಾಲ ಹಗಲಿರುಳು ನಿರಂತರ ಉರುಳುತ್ತಲೇ ಇರುವ ದೈತ್ಯ ಚುನಾವಣಾ ಯಂತ್ರವನ್ನು ಅಮಿತ್ ಶಾ ಅವರು ಮೋದಿಯವರಿಗಾಗಿ ನಿರ್ಮಿಸಿ ನಡೆಸಿದ್ದಾರೆ. ಮೋದಿಯವರನ್ನು ದೈವಾಂಶ ಸಂಭೂತ, ಮಹಾವಿಷ್ಣುವಿನ ಅವತಾರ, ಬಡವರ ಬಂಧು ಎಂಬ ಪ್ರಚಂಡ ಪ್ರಚಾರಾಂದೋಲನ ವ್ಯವಸ್ಥಿತವಾಗಿ ನಡೆದಿದೆ. ಒಂದೆಡೆ ರಾಜಕೀಯ ಹಗೆಗಳನ್ನು ಭೇದ ದಂಡೋಪಾಯಗಳಿಂದ ಪ್ರತಿಪಕ್ಷಗಳನ್ನು ಚಿತ್ತು ಮಾಡುವ ಇಲ್ಲವೇ ಬಿಜೆಪಿಯನ್ನು ಅಪ್ಪಿಕೊಳ್ಳುವ ಅನಿವಾರ್ಯವನ್ನು ಸೃಷ್ಟಿಸಲಾಯಿತು.

ಇಂತಹ ಪ್ರಚಂಡ ಪ್ರತಿಕೂಲ ಪರಿಸ್ಥಿತಿಯಲ್ಲಿ ಪ್ರತಿಪಕ್ಷಗಳು ಈ ಚುನಾವಣೆಯಲ್ಲಿ ಮಾಡಿರುವ ಸಾಧನೆ ಅದ್ವಿತೀಯ ಎಂದೇ ಹೇಳಬೇಕು. ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಎಂ.ಕೆ.ಸ್ಟ್ಯಾಲಿನ್, ಮಮತಾ ಬ್ಯಾನರ್ಜಿ, ತೇಜಸ್ವಿ ಯಾದವ್, ಅರವಿಂದ್ ಕೇಜ್ರೀವಾಲ್, ಹೇಮಂತ್ ಸೊರೇನ್ ತೋರಿದ ದಿಟ್ಟತನ, ಹಿಮ್ಮೆಟ್ಟದೆ ಪಾದ ಊರಿ ನಿಂತು ಒಡ್ಡಿದ ಪ್ರತಿರೋಧ ಅಭಿನಂದನೀಯ.

ಮೂವತ್ತನಾಲ್ಕು ವರ್ಷಗಳ ಕಾಲ ಸಮ್ಮಿಶ್ರ ಸರ್ಕಾರಗಳು ದೇಶವನ್ನು ಆಳಿದ್ದವು. 2014ರಲ್ಲಿ ನರೇಂದ್ರ ಮೋದಿಯವರು ಬಿಜೆಪಿಗೆ ಬಹುಮತ ಗಳಿಸಿಕೊಟ್ಟರು. 2019ರಲ್ಲಿ ಪುಲ್ವಾಮಾ ದಾಳಿ-ದುರಂತದ ಬೆನ್ನೇರಿ ಭಾವತಪ್ತ ಮತಗಳ ಅಲೆಯನ್ನೇ ಬಡಿದೆಬ್ಬಿಸಿದರು. ತಮ್ಮ ಪಕ್ಷವನ್ನು ಮುನ್ನೂರು ಸೀಟುಗಳ ಗಡಿ ದಾಟಿಸಿ ವಿಕ್ರಮ ಮೆರೆದರು.

2014ರಲ್ಲಿ ಮೋದಿ-ಶಾ ಜೋಡಿ 282 ಸೀಟುಗಳನ್ನು ಮತ್ತು 2019ರಲ್ಲಿ 303 ಸೀಟುಗಳನ್ನು ಗೆದ್ದಿತ್ತು. 2019ರಲ್ಲಿ ಅಕ್ಟೋಬರ್ ನಲ್ಲಿ ಜರುಗಿದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳ ನಂತರ ಬಿಜೆಪಿ ವಿರುದ್ಧ ಸಿಡಿದೆದ್ದ ಶಿವಸೇನೆ ಮೈತ್ರಿಯಿಂದ ಹೊರನಡೆಯಿತು. ಮಹಾವಿಕಾಸ ಅಘಾಡಿ ಸರ್ಕಾರದ ನೇತೃತ್ವ ವಹಿಸಿತು. ಮೋದಿ ಸರ್ಕಾರಕ್ಕೆ ನೀಡಿದ್ದ 18 ಲೋಕಸಭಾ ಸೀಟುಗಳ ಬೆಂಬಲವನ್ನು ಹಿಂದಕ್ಕೆ ಪಡೆಯಿತು. ಪಂಜಾಬಿನ ಶಿರೋಮಣಿ ಅಕಾಲಿದಳ ಕೂಡ 2020ರ ರೈತ ಚಳವಳಿಯ ಸಂದರ್ಭದಲ್ಲಿ ಬಿಜೆಪಿ ಗೆಳೆತನವನ್ನು ತೊರೆಯಿತು. ಈ ಬೆಳವಣಿಗೆಗಳ ಕಾರಣ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರಕ್ಕೇನೂ ಚ್ಯುತಿ ಬರಲಿಲ್ಲ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಎನ್.ಡಿ.ಎ. ಹೆಸರಿಗೆ ಮಾತ್ರ ಅಸ್ತಿತ್ವದಲ್ಲಿತ್ತು. ಮಿತ್ರಪಕ್ಷಗಳನ್ನು ಕೇಳುವವರು ಗತಿಯಿರಲಿಲ್ಲ.

ಅಂದಿನ ವಿಲಾಸ ಇಂದು ಮೋದಿಯವರಿಗೆ ಇಲ್ಲ. ಮಿತ್ರಪಕ್ಷಗಳ ತಾಳಕ್ಕೆ ಕುಣಿಯಲೇಬೇಕು. ಇಲ್ಲವಾದರೆ ಸರ್ಕಾರ ಅಲ್ಲಾಡುವುದು ನಿಶ್ಚಿತ. ಬಿಜೆಪಿ ಮಿತ್ರಪಕ್ಷಗಳು ಒಂದು ವೇಳೆ ಪಾಳೆಯ ಬದಲಿಸಿದರೆ ತಾನು ಸರ್ಕಾರ ರಚಿಸುವಷ್ಟು ಸಮೀಪದಲ್ಲಿದೆ ‘ಇಂಡಿಯಾ’ ಮೈತ್ರಿಕೂಟ. ಯಾರೇ ಸರ್ಕಾರ ರಚಿಸಿದರೂ ಅದು ಸಮ್ಮಿಶ್ರ ರೂಪ ತಳೆಯದೆ ವಿಧಿಯಿಲ್ಲ.

ಹೀಗಾಗಿ ಬೆಂಬಲಕ್ಕೆ ಬದಲಾಗಿ ಮಿತ್ರಪಕ್ಷಗಳ ಮರ್ಜಿಯನ್ನು ಕಾಯಲೇಬೇಕಿದೆ ಮೋದಿಯವರು. ಮಿತ್ರಪಕ್ಷಗಳ ಅಭಿಪ್ರಾಯಗಳನ್ನು ಆಲಿಸುವ ವಿನಮ್ರತೆ ಬೆಳೆಸಿಕೊಳ್ಳಬೇಕಿದೆ. ಮೋದಿಯವರ ಪರಮಪ್ರಿಯ ಕಾರ್ಯಸೂಚಿಯಲ್ಲಿರುವ ‘ಒಂದು ರಾಷ್ಟ್ರ ಒಂದು ಚುನಾವಣೆ’, ಸಮಾನ ನಾಗರಿಕ ಸಂಹಿತೆ, ಕ್ಷೇತ್ರಗಳ ಮರುವಿಂಗಡಣೆ, ಎನ್.ಆರ್.ಸಿ., ಸಿಎಎ ಜಾರಿ ಕುರಿತು ಮಿತ್ರಪಕ್ಷಗಳ ಅನಿಸಿಕೆಗಳನ್ನು ತಳ್ಳಿ ಹಾಕುವುದು ಸುಲಭ ಅಲ್ಲ.

ಪ್ರತಿಪಕ್ಷದ ಸಾಲುಗಳು ಕೂಡ ಇನ್ನು ದುರ್ಬಲವಲ್ಲ. ಕೋಮು ಧೃವೀಕರಣಕ್ಕಾಗಿಯೇ ಮೋದಿಯವರು ತುಳಿದಿಟ್ಟ ಮುಸ್ಲಿಮ್ ಪ್ರಾತಿನಿಧ್ಯಕ್ಕೆ ಹೊಸ ಬಲ ಸಿಕ್ಕಿದೆ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಬಲಿಷ್ಠವಾಗಿ ಹೊರಹೊಮ್ಮಿದೆ.

ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಬಿಜೆಪಿಯನ್ನು ಹಿಮ್ಮೆಟ್ಟಿಸಿ ಹೆಚ್ಚು ಸೀಟುಗಳ ಗೆದ್ದು ಹೊಸ ಶಕ್ತಿ ಧರಿಸಿದ್ದಾರೆ. ಡಿ.ಎಂ.ಕೆ.ಯ ಸ್ಟ್ಯಾಲಿನ್ ನೇತೃತ್ವದ ಮೈತ್ರಿಯು ತಮಿಳುನಾಡು-ಪುದುಚೆರಿಯ ಎಲ್ಲ 40 ಸೀಟುಗಳ ಗೆದ್ದಿದೆ. ಮಹಾರಾಷ್ಟ್ರದ ಉದ್ಧವ ಬಾಳಾಸಾಹೇಬ ಠಾಕ್ರೆ ಮತ್ತು ಶರದ್ ಪವಾರ್ ಅವರ ದನಿಯನ್ನು ಅದುಮಿ ಇಡಲು ಬರುವುದಿಲ್ಲ. ಭಾರತವೆಂಬುದು ರಾಜ್ಯಗಳ ಒಕ್ಕೂಟವೆಂಬ ಸಾಂವಿಧಾನಿಕ ತತ್ವವು ಹೊಸ ಸಂಸತ್ತಿನಲ್ಲಿ ಹೆಚ್ಚು ನಿಚ್ಚಳವಾಗಿ ಪ್ರಕಟಗೊಳ್ಳಲಿದೆ. ದೈತ್ಯ ಬಹುಮತದ ಬಲದಿಂದ ಪ್ರತಿಪಕ್ಷಗಳ ಮೇಲೆ ಇನ್ನು ಮುಂದೆಯೂ ಬುಲ್ಡೋಜರ್ ಹರಿಸುವುದು ಸಾಧ್ಯವಿಲ್ಲ. ಕಳೆದ ಎರಡು ಲೋಕಸಭೆಗಳಲ್ಲಿ ಬಹುಮತದ ಬಲವಿದ್ದರೂ ಭೂಸ್ವಾಧೀನ ಮತ್ತು ಕೃಷಿ ಕಾನೂನುಗಳ ಶಾಸನಗಳನ್ನು ರದ್ದು ಮಾಡಬೇಕಾಯಿತು. ಇನ್ನು ಸಮ್ಮಿಶ್ರ ಸರ್ಕಾರದಲ್ಲಿ ವಿಧೇಯಕಗಳನ್ನು ನಿಮಿಷಾರ್ಧದಲ್ಲಿ ಬೇಕಾಬಿಟ್ಟಿ ಪಾಸು ಮಾಡಿಕೊಳ್ಳುವ ಆಟವೂ ನಡೆಯುವುದಿಲ್ಲ.

ಆದರೆ ಹತ್ತು ವರ್ಷಗಳ ಕಾಲ ನಿರಂಕುಶ ಅಧಿಕಾರದ ರುಚಿ ಕಂಡಿರುವ ಮೋದಿಯವರು ಮಿತ್ರಪಕ್ಷಗಳಿಗೆ ಮಣಿಯುವರೇ ಅಥವಾ ಆಪರೇಷನ್ ಕಮಲಕ್ಕೆ ಶರಣಾಗುವರೇ ಕಾದು ನೋಡಬೇಕಿದೆ.

ಬಹುಮತದ ಬೆನ್ನು ಹತ್ತಿ ಪ್ರತಿಪಕ್ಷಗಳನ್ನು ಅಪಹರಿಸಿ ಜನತಂತ್ರವನ್ನು ವಿರೂಪಗೊಳಿಸುವ ಪ್ರಯತ್ನಕ್ಕೆ ಬಿಜೆಪಿ ಕೈ ಹಾಕುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳುವ ಪರಿಸ್ಥಿತಿ ಈಗಲೂ ಇಲ್ಲ. ಬಿಜೆಪಿ ಈವರೆಗೆ ನಡೆದು ಬಂದಿರುವ ದಾರಿಯನ್ನು ಒಮ್ಮೆ ಅವಲೋಕಿಸಿದರೆ ಈ ಮಾತು ಮನವರಿಕೆಯಾದೀತು. ತಮ್ಮನ್ನು ಖರೀದಿಗೆ ಇಟ್ಟವರು ಇರುವ ತನಕ ಖರೀದಿಸುವವರಿಗೇನು ಬರ?

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹಣ ಅಕ್ರಮ ವರ್ಗಾವಣೆ ಕರಾಳ ಕಾಯಿದೆ; ಮೇಲ್ಮನವಿಗಳ ವಿಲೇವಾರಿ ಮಾಡಲಿ ಸುಪ್ರೀಮ್ ಕೋರ್ಟ್‌

2004- 2014ರ ಕಾಂಗ್ರೆಸ್ ನೇತೃತ್ವದ ಆಡಳಿತದಲ್ಲಿ ಈ ಕಾಯಿದೆಯಡಿ ರಾಜಕಾರಣಿಗಳ ವಿರುದ್ಧ...

ಈ ದಿನ ಸಂಪಾದಕೀಯ | ಮಳೆ ಮತ್ತು ಡೆಂಘೀ- ಜನ ಎಷ್ಟು ಅಂತ ಸಹಿಸಿಕೊಳ್ಳುತ್ತಾರೆ?

ನಾಡಿನ ಜನ ಬರವನ್ನೂ ಸಹಿಸಿಕೊಂಡಿದ್ದಾರೆ. ಈಗ ಮಳೆ ಮತ್ತು ಡೆಂಘೀಯಿಂದಾದ ಅನಾಹುತವನ್ನೂ...

ಈ ದಿನ ಸಂಪಾದಕೀಯ | ಹಳಿ ತಪ್ಪುತ್ತಿದೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ?

ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಜೊತೆಗೆ ವಾಲ್ಮೀಕಿ ನಿಗಮದ ಅಕ್ರಮ...

ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’

ಪ್ರಧಾನಿ ಮೋದಿಯವರು ಅಧಿಕಾರಕ್ಕೇರಿದ ಜೂನ್ 9ರಿಂದ ಹಿಡಿದು ನಿನ್ನೆ ಮೊನ್ನೆಯವರೆಗೆ, ಪ್ರತಿದಿನ...