ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ವ್ಯಾಖ್ಯಾನ ಬದಲಿಸಿದ ಕಾಂಚಾಣ

Date:

Advertisements
ರಾಜಕಾರಣವೆಂದರೆ ಇವತ್ತು ಹಣ ಮತ್ತು ಅಧಿಕಾರವುಳ್ಳ ಭಂಡರ ಆಟವಾಗಿದೆ. ಹಣದಿಂದ, ಹಣಕ್ಕಾಗಿ, ಹಣಕ್ಕೋಸ್ಕರ ರಾಜಕಾರಣ ಎಂಬಂತಾಗಿ ಪ್ರಜಾಪ್ರಭುತ್ವದ ವ್ಯಾಖ್ಯಾನವೇ ಬದಲಾಗಿದೆ. ಮೌಲ್ಯಾಧಾರಿತ ರಾಜಕಾರಣ ಮರೆಯಾಗಿ ಕಾಂಚಾಣ ರಾಜಕಾರಣ ಕುಣಿಯುತ್ತಿದೆ. ರಾಜಕಾರಣ ಕಳ್ಳರು ಆಡುವ ಆಟದ ಮೈದಾನವಾಗಿದೆ. ಈ ಕಳ್ಳರಿಗೆ ಈ ನೆಲದ ಕಾನೂನು ಕಡಿವಾಣ ಹಾಕದಿರುವುದು- ಮಾನವಂತರು ಮೌನಕ್ಕೆ ಜಾರುವಂತೆ; ಅಸಹಾಯಕರು ಹತಾಶೆಯಿಂದ ನರಳುವಂತೆ ಮಾಡಿದೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ, ಇತ್ತ ಬೆಂಗಳೂರಿನಲ್ಲಿ ಬಹಳ ದಿನಗಳಿಂದ ಬಾಕಿ ಉಳಿದಿದ್ದ, ಸಾವಿರಾರು ಕೋಟಿಯ ಗುತ್ತಿಗೆದಾರರ ಬಿಲ್ ಬಾಕಿ ಬಿಡುಗಡೆಯಾಗುತ್ತದೆ. ಬಿಡುಗಡೆಯಾದ ನಾಲ್ಕೈದು ದಿನಕ್ಕೆ ಬೇರೆ ಬೇರೆ ರಾಜ್ಯಗಳಿಂದ ಆದಾಯ ತೆರಿಗೆ ಅಧಿಕಾರಿಗಳು ಕರ್ನಾಟಕಕ್ಕೆ ಬಂದಿಳಿಯುತ್ತಾರೆ. ಚಿನ್ನದ ಅಂಗಡಿ ಮಾಲೀಕರು, ಮಾಜಿ ಗುತ್ತಿಗೆದಾರರು, ರಿಯಲ್ ಎಸ್ಟೇಟ್ ವ್ಯವಹಾರಸ್ಥರ ಮನೆ, ಕಚೇರಿ, ಫ್ಲ್ಯಾಟ್ ಗಳ ಮೇಲೆ ದಾಳಿ ಮಾಡುತ್ತಾರೆ. ರಟ್ಟಿನ ಪೆಟ್ಟಿಗೆಗಳಲ್ಲಿ ನೋಟಿನ ಕಂತೆಗಳು, ಲೆಕ್ಕವಿಲ್ಲದಷ್ಟು ಲೆಕ್ಕಪತ್ರಗಳು, ಅಧಿಕಾರಿಗಳ ಸರಬರ ಓಡಾಟ, ವಿಚಾರಣೆ, ಪರಿಶೀಲನೆ- ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿ ಜನಸಾಮಾನ್ಯರಲ್ಲಿ ದಿಗ್ಭ್ರಮೆ ಹುಟ್ಟಿಸುತ್ತದೆ.

ಇದರ ಹಿಂದೆಯೇ ಆಡಳಿತ ಪಕ್ಷದ ವಿರುದ್ದ ವಿರೋಧ ಪಕ್ಷ ಕಣಕ್ಕಿಳಿಯುತ್ತದೆ. ಇದು ಎಟಿಎಂ ಸರ್ಕಾರ, ಕಮಿಷನ್ ಸರ್ಕಾರ, ಪರ್ಸಂಟೇಜ್ ಸರ್ಕಾರ, ಲೂಟಿ ಸರ್ಕಾರ ಎಂದು ಕಟುವಾದ ಶಬ್ದ ಬಳಸುವ ವಿರೋಧ ಪಕ್ಷದ ನಾಯಕರು ಟೀಕೆಗಳ ಸುರಿಮಳೆಯನ್ನೇ ಸುರಿಸುತ್ತಾರೆ. ಇದು ಐದು ರಾಜ್ಯಗಳ ಚುನಾವಣಾ ಖರ್ಚಿಗಾಗಿ ರಾಜ್ಯದಿಂದ ರವಾನೆಯಾಗುತ್ತಿದ್ದ ಕನ್ನಡಿಗರ ಹಣ ಎಂದು ಭಾವನಾತ್ಮಕ ಬಾಣವನ್ನೂ ಪ್ರಯೋಗಿಸುತ್ತಾರೆ. ಇವರು ಆಡಳಿತ ಮಾಡಲು ಬಂದಿಲ್ಲ, ರಾಜ್ಯವನ್ನು ಲೂಟಿ ಮಾಡಲು ಬಂದಿದ್ದಾರೆ. ಹೈಕಮಾಂಡನ್ನು ಸಂತೃಪ್ತರನ್ನಾಗಿಸಲು ಬಂದಿದ್ದಾರೆ ಎಂದೂ ದೂರುತ್ತಾರೆ. ಇದು ಕೂಡ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತದೆ.

ಒಂದಂತೂ ಸ್ಪಷ್ಟ; ಕಂತೆ ಕಂತೆ ಹಣ ಸಿಕ್ಕಿದ್ದು ನಿಜ. ಅದು ಭ್ರಷ್ಟ ಮಾರ್ಗದಲ್ಲಿ ಬಂದ ಹಣ ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದೂ ನಿಜ. ಅವರು ಆಡಳಿತದಲ್ಲಿದ್ದಾಗ ಇವರು ಕಳ್ಳರು ಎನ್ನುತ್ತಾರೆ; ಇವರು ಆಡಳಿತದಲ್ಲಿದ್ದಾಗ ಅವರು ಕಳ್ಳರು ಎನ್ನುತ್ತಾರೆ. ಇಬ್ಬರೂ ಕಳ್ಳರೆ. ಇಬ್ಬರು ಮಾಡುತ್ತಿರುವುದೂ ಕಳ್ಳತನವೇ. ಹಾಗಾದರೆ, ಜನರಿಗೆ ಇದು ಗೊತ್ತಿಲ್ಲವೇ, ಗೊತ್ತಿದ್ದೂ ಕಳ್ಳರನ್ನು ಆಯ್ಕೆ ಮಾಡಿಕೊಂಡಿದ್ದಾರೆಯೇ? ಕಳ್ಳತನವನ್ನು ಒಪ್ಪಿಕೊಂಡಿದ್ದಾರೆಯೇ?

Advertisements

1972ರಲ್ಲಿ ಭಾರೀ ಬಹುಮತದಿಂದ ಗೆದ್ದು ಮುಖ್ಯಮಂತ್ರಿಯಾದ ದೇವರಾಜ ಅರಸು ಅವರ ಸರ್ಕಾರ ಭ್ರಷ್ಟಾಚಾರದ ಗಂಗೋತ್ರಿ ಎಂಬ ಹೆಸರು ಪಡೆದಿತ್ತು. ಅಂದಿನ ವಿರೋಧ ಪಕ್ಷದ ನಾಯಕರಾದ ಎಚ್.ಡಿ ದೇವೇಗೌಡರು, ಅರಸು ಸರ್ಕಾರದ ವಿರುದ್ಧ ಸಮರ ಸಾರಿದ್ದರು. ಭ್ರಷ್ಟಾಚಾರವನ್ನು ಬಯಲಿಗೆಳೆದು ಪ್ರತಿದಿನ ಪತ್ರಿಕೆಗಳ ಮುಖಪುಟದ ಸುದ್ದಿಯಾಗುತ್ತಿದ್ದರು. ಅರಸು ವಿರುದ್ಧ ಗ್ರೋವರ್ ಕಮಿಷನ್ ನೇಮಕವಾಯಿತು. ತನಿಖೆ, ವಿಚಾರಣೆಯೂ ನಡೆಯಿತು. 1978ರ ಚುನಾವಣೆಯಲ್ಲಿ ಅರಸು ಮತ್ತೆ ಬಹುಮತ ಗಳಿಸಿದರು, ‘ಜನಾದೇಶ ನನ್ನ ಪರವಾಗಿದೆ’ ಎಂದರು, ಮತ್ತೆ ಮುಖ್ಯಮಂತ್ರಿಯಾದರು. ಹತಾಶರಾದ ದೇವೇಗೌಡರು ವಿಧಾನ ಮಂಡಲ ಅಧಿವೇಶನದಲ್ಲಿಯೇ, ʼಇನ್ನು ಮುಂದೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲʼ ಎಂದು ಶಪಥ ಮಾಡಿದರು. 45 ವರ್ಷಗಳ ಹಿಂದೆಯೇ ಭ್ರಷ್ಟಾಚಾರದ ವಿರುದ್ಧವಿದ್ದ; ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲವೆಂದು ಶಪಥ ಮಾಡಿದ್ದ ದೇವೇಗೌಡರು, ಈಗ ಈ ಇಳಿವಯಸ್ಸಿನಲ್ಲಿ ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದೇಕೆ? ಬಿಜೆಪಿ ಭ್ರಷ್ಟಾಚಾರದಿಂದ ಮುಕ್ತವಾಗಿರುವ ಪಕ್ಷವೇ? ಅಥವಾ ಇವತ್ತಿನ ರಾಜಕಾರಣದಲ್ಲಿ ಭ್ರಷ್ಟಾಚಾರ ಎನ್ನುವುದು ಒಪ್ಪಿತ ವಿದ್ಯಮಾನವೇ?

ದೇವೇಗೌಡರಂತಹ ಹಿರಿಯ ರಾಜಕಾರಣಿಯನ್ನೇ ಮೈತ್ರಿ ನೆಪದಡಿ ಬಗ್ಗಿಸಿಕೊಂಡಿರುವ ಬಿಜೆಪಿಯ ಬಗ್ಗೆ ಇತ್ತೀಚೆಗೆ ಕಾಂಗ್ರೆಸ್ ನಾಯಕ ಪವನ್ ಖೇರಾ, ‘2016-17 ರಿಂದ 2021-22 ರ ನಡುವೆ ಬಿಜೆಪಿ ಚುನಾವಣಾ ಬಾಂಡ್ಗಳ ಮೂಲಕ 5,271.97 ಕೋಟಿ ರೂಪಾಯಿ ಹಣವನ್ನು ಪಡೆದಿದೆ, ಇದು ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸುವ, ಅದರಿಂದ ಚುನಾವಣೆಗಳನ್ನು ಗೆಲ್ಲುವ ಮೋದಿ ಸರ್ಕಾರದ ಹೊಸಗಾಲದ ಯೋಜನೆ’ ಎಂದರು. ಇನ್ನು ಬಿಜೆಪಿಯೊಂದಿಗೆ ಅದಾನಿ-ಅಂಬಾನಿಗಳಿಗಿರುವ ಸಂಬಂಧ, ಅವರಿಗೆ ಬಿಜೆಪಿ ಸರ್ಕಾರದ ಸಹಕಾರ, ಕೆಲವೇ ವರ್ಷಗಳಲ್ಲಿ ಅವರ ಆದಾಯ ಬೆಟ್ಟದಂತೆ ಬೆಳೆದದ್ದು, ಚುನಾವಣೆಗಳಲ್ಲಿ ಅವರ ಪಾತ್ರವೇನು ಎಂಬುದು ಈಗಲೂ ಚರ್ಚಿತ ವಿಷಯವೇ.

ಹಾಗಾದರೆ ಚುನಾವಣೆಗಾಗಿ ಕಾಂಗ್ರೆಸ್ ಹಣ ಎತ್ತುವುದಿಲ್ಲವೇ? ಬಿಜೆಪಿ ಕಣ್ಣಿಗೆ ಕಾಣದ ಜನಿವಾರದ ಜಾಡು ಹಿಡಿದರೆ, ಕಾಂಗ್ರೆಸ್ ಪಕ್ಷ ಶೂದ್ರರು ತಿಂದಂತೆ, ಕೈ ಬಾಯಿ, ಮುಖ ಮೂತಿಯನ್ನೆಲ್ಲ ಮಾಡಿಕೊಳ್ಳುತ್ತದೆ. ‘ಗೋಧಿ’ ಬಿಸ್ಕೆಟ್ ತಿಂದ ಪತ್ರಕರ್ತರು, ಕಣ್ಣಿಗೆ ಕಾಣುವ ಕಾಂಗ್ರೆಸ್ ತಿನ್ನಾಟ ತೋರಿಸಿ, ತಿಂದವರ ಕುರಿತು ಜರೆಯುವ ಜನಿವಾರದಾಟವಾಡುತ್ತದೆ.

ರಾಜಕಾರಣವೆಂದರೆ ಇವತ್ತು ಹಣ ಮತ್ತು ಅಧಿಕಾರವುಳ್ಳ ಭಂಡರ ಆಟವಾಗಿದೆ. ಹಣದಿಂದ, ಹಣಕ್ಕಾಗಿ, ಹಣಕ್ಕೋಸ್ಕರ ರಾಜಕಾರಣ ಎಂಬಂತಾಗಿ ಪ್ರಜಾಪ್ರಭುತ್ವದ ವ್ಯಾಖ್ಯಾನವೇ ಬದಲಾಗಿದೆ. ಮೌಲ್ಯಾಧಾರಿತ ರಾಜಕಾರಣ ಮರೆಯಾಗಿ ಕಾಂಚಾಣ ರಾಜಕಾರಣ ಕುಣಿಯುತ್ತಿದೆ. ರಾಜಕಾರಣ ಕಳ್ಳರು ಆಡುವ ಆಟದ ಮೈದಾನವಾಗಿದೆ. ಈ ಕಳ್ಳರಿಗೆ ಈ ನೆಲದ ಕಾನೂನು ಕಡಿವಾಣ ಹಾಕದಿರುವುದು- ಮಾನವಂತರು ಮೌನಕ್ಕೆ ಜಾರುವಂತೆ; ಅಸಹಾಯಕರು ಹತಾಶೆಯಿಂದ ನರಳುವಂತೆ ಮಾಡಿದೆ.

ಇವುಗಳ ನಡುವೆಯೇ, ನೂರು ರೂಪಾಯಿಗಾಗಿ ದಿನಗಟ್ಟಲೆ ಬಿಸಿಲಲ್ಲಿ ಒಣಗುವ ಕಾರ್ಮಿಕ, ಯಾವತ್ತೋ ಬರುವ ಬೆಳೆಗೆ ನೆಲ ಹದ ಮಾಡುತ್ತಾ ಕೂರುವ ರೈತ, ಇಪ್ಪತ್ತು ರೂಪಾಯಿ ಹೆಚ್ಚಿನ ಆಸೆಗೆ ಅಂಗಲಾಚುವ ಆಟೋ ಡ್ರೈವರ್, ದಿನಸಿ ತರಲು ಹೋಲ್ ಸೇಲ್ ಹುಡುಕಿಕೊಂಡು ಹೋಗುವ ಮಧ್ಯಮ ವರ್ಗದ ಜನ, ಕೆಲಸಕ್ಕಾಗಿ ಅಲೆದು ಹತಾಶರಾಗುವ ನಿರುದ್ಯೋಗಿಗಳು, ಸಣ್ಣಪುಟ್ಟ ಸಮಸ್ಯೆಗೆ ಕೋರ್ಟು ಕಚೇರಿ ಅಲೆಯುವ ಅಸಹಾಯಕರು ಯಾರ ಕಣ್ಣಿಗೂ ಕಾಣದಂತಾಗಿದೆ. ಎಲ್ಲಿಯವರೆಗೆ ರಾಜಕಾರಣ ಎನ್ನುವುದು ನಮ್ಮ ಬದುಕಿನ ಭಾಗ ಎಂದು ಅರಿತು ಅಳವಡಿಸಿಕೊಳ್ಳುವುದಿಲ್ಲವೋ, ಸಮರ್ಥರನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನರಳುವುದು ನಿತ್ಯ ಕಾಯಕವಾಗುತ್ತದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X