ಈ ದಿನ ಸಂಪಾದಕೀಯ | ಮುಸ್ಲಿಮರು, ಮಾಧ್ಯಮಗಳು ಮತ್ತು ಮೂರು ಕೊಲೆಗಳು

Date:

Advertisements
ನೇಹಾ ಹತ್ಯೆಯ ವಿರುದ್ಧ ಕಾಣಿಸಿಕೊಂಡ ಜನಾಕ್ರೋಶದ ಹಿಂದೆ ಸುದ್ದಿ ಮಾಧ್ಯಮಗಳ ಪ್ರಚೋದನೆ ಇತ್ತು. ಬಿಜೆಪಿಯ ದ್ವೇಷ ರಾಜಕಾರಣವಿತ್ತು. ಕೊಲೆ ಮಾಡಿದವನು ಮುಸ್ಲಿಂ ಎನ್ನುವುದು ಮುಖ್ಯವಾಗಿತ್ತು. ಆದರೆ, ಕೊಡಗಿನ ಮೀನಾ ಮತ್ತು ಹುಬ್ಬಳ್ಳಿಯ ಅಂಜಲಿಯ ಹತ್ಯೆ ಮಾಡಿದವರು ಮುಸ್ಲಿಮರಲ್ಲ, ಹಿಂದೂಗಳು. ಆದ್ದರಿಂದ, ಸುದ್ದಿ ಮಾಧ್ಯಮಗಳು ಸುದ್ದಿ ಮಾಡಲಿಲ್ಲ. ಬಿಜೆಪಿಯ ಭಂಡರು ಬಾಯಿ ಬಿಡಲಿಲ್ಲ. ಜನ ಕೂಡ ಪ್ರಶ್ನಿಸುತ್ತಿಲ್ಲ. ನಾಗರಿಕ ಸಮಾಜದ ಮನಸ್ಥಿತಿ ಇಷ್ಟೊಂದು ಕಲುಷಿತಗೊಳ್ಳಲು ಕಾರಣವೇನು?

ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ, ಒಂದು ಬರ್ಬರ ಕೃತ್ಯ. ನಾಗರಿಕ ಸಮಾಜವೇ ತಲೆ ತಗ್ಗಿಸುವಂಥದ್ದು. ಮನುಷ್ಯನಾದವನು ಮಾಡುವಂತಹ ಕೆಲಸವಲ್ಲ. ಮಾಡಿದ ಕೊಲೆಗಡುಕನಿಗೆ ಕ್ಷಮೆಯೂ ಇಲ್ಲ. ಆದರೆ ಆ ಕೊಲೆ ಪಡೆದುಕೊಂಡ ಪ್ರಚಾರ, ತೆಗೆದುಕೊಂಡ ತಿರುವು, ಸಮುದಾಯಗಳ ನಡುವೆ ಸೃಷ್ಟಿಸಿದ ಸಮಸ್ಯೆ ಅಷ್ಟಿಷ್ಟಲ್ಲ.

ಚುನಾವಣೆಯ ಕಾಲವಾದ್ದರಿಂದ ಅದು ಹೆಚ್ಚು ಪ್ರಚಾರ ಪಡೆಯಿತು. ಅದಕ್ಕಿಂತಲೂ ಹೆಚ್ಚಾಗಿ, ಕೊಲೆಯಾದ ಹೆಣ್ಣುಮಗಳು ಹಿಂದೂ, ಕೊಲೆ ಮಾಡಿದವ ಮುಸ್ಲಿಂ ಎನ್ನುವ ಕಾರಣಕ್ಕೆ- ಗಾಳಿಗಿಂತ ವೇಗವಾಗಿ ಹರಡಿ ಮನುಷ್ಯರ ಮನಸ್ಸು ಕೆಡಿಸಿತು. ಅದರಲ್ಲೂ ಜನರನ್ನು ತಕ್ಷಣ ತಲುಪುವ ದೃಶ್ಯ ಮಾಧ್ಯಮಗಳ ಚುರುಕುತನ, ಜನರ ಚಿಂತನಾ ಕ್ರಮವನ್ನೇ ಬದಲಾಯಿತು.

ಹತ್ಯೆ ನಡೆದ ಕಾಲೇಜು ಕ್ಯಾಂಪಸ್‌ನಲ್ಲಿ ಕ್ಯಾಮರಾ ಹಿಡಿದು ನಿಂತು ಪತ್ರಕರ್ತರು, ನೇಹಾಳ ಕಾಲೇಜಿನ ಹುಡುಗ-ಹುಡುಗಿಯರು, ಗೆಳತಿಯರು, ಅಧ್ಯಾಪಕರನ್ನು ಮಾತಾಡಿಸಿ ಅಭಿಪ್ರಾಯ ಸೃಷ್ಟಿಸತೊಡಗಿದರು. ಹಾದಿ-ಬೀದಿಯಲ್ಲಿ ಅಡ್ಡಾಡುವ ಜನರ ಬಾಯಿಗೆ ಮೈಕ್ ಇಟ್ಟು ಮುಸ್ಲಿಮರ ಬಗೆಗಿನ ದ್ವೇಷ ಕಾರಿಕೊಳ್ಳಲು ನೆರವಾದರು. ನೇಹಾ ಮತ್ತು ಫಯಾಜ್ ಪೋಷಕರನ್ನು ಕಣ್ಣೀರಿನಲ್ಲಿ ತೋಯಿಸಿದರು. ಒಂದು ವಾರಕ್ಕಿಂತಲೂ ಹೆಚ್ಚಿನ ಸಮಯ ಈ ಹತ್ಯೆಯ ಸುತ್ತ ಸುದ್ದಿ, ಸಂವಾದ, ಚರ್ಚೆ, ವಿಶೇಷ ವರದಿಗಳ ಮೂಲಕ ರಾಜ್ಯದ ಜ್ವಲಂತ ಸಮಸ್ಯೆಯನ್ನಾಗಿಸಿ ಜೀವಂತವಾಗಿರಿಸಿದರು. ಜೊತೆ ಜೊತೆಗೆ ಹತ್ಯೆಯ ಹಸಿ ಹಸೀ ದೃಶ್ಯಗಳನ್ನು ನಿರಂತರ ಪ್ರಸಾರ ಮಾಡಿ ಕ್ರೌರ್ಯದ ಕಾವು ಆರದಂತೆ ನೋಡಿಕೊಂಡರು. ಕೇವಲ ಕನ್ನಡ ದೃಶ್ಯ ಮಾಧ್ಯಮಗಳಷ್ಟೇ ಅಲ್ಲ, ರಾಷ್ಟ್ರ ಮಟ್ಟದ ಹಿಂದಿ – ಇಂಗ್ಲಿಷ್ ಚಾನೆಲ್‌ಗಳಲ್ಲೂ ನೇಹಾ ಹತ್ಯೆಯ ರಕ್ತ ಹರಿದಾಡಿತು.

Advertisements

ಸುದ್ದಿ ಮಾಧ್ಯಮಗಳ ಸಿಕ್ಕಾಪಟ್ಟೆ ಆಸಕ್ತಿಯಿಂದ ಆನಂದತುಂದಿಲರಾದ ಭಾರತೀಯ ಜನತಾ ಪಕ್ಷದ ದುರುಳರು, ಈ ಕೊಲೆಯನ್ನು ಲವ್ ಜಿಹಾದ್‌ಗೆ ತಿರುಗಿಸಲು, ಹಿಂದೂ-ಮುಸ್ಲಿಮರ ನಡುವೆ ದ್ವೇಷಾಸೂಯೆ ಬಿತ್ತಲು, ಮತ ಬೆಳೆ ತೆಗೆಯಲು ಶಕ್ತಿಮೀರಿ ಶ್ರಮಿಸಿದರು. ದೂರದ ದೆಹಲಿಯಿಂದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷನೇ ಹಾರಿಬಂದು, ನೇಹಾ ಪೋಷಕರ ಕರಪಿಡಿದು, ಕಣ್ಣೀರುಗರೆದು, ಸಿಬಿಐಗೆ ಒಪ್ಪಿಸುವ ನಾಟಕವಾಡಿದರು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕೊಲೆಯಾದ ನೇಹಾ ಲಿಂಗಾಯತರು. ಹುಬ್ಬಳ್ಳಿ-ಧಾರವಾಡದಲ್ಲಿ ಲಿಂಗಾಯತರೇ ಬಹುಸಂಖ್ಯಾತರು. ಧಾರವಾಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಲ್ಹಾದ ಜೋಷಿ, ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಆರೆಸೆಸ್‌ಗೆ ಆಪ್ತರಾದವರು. ಕೇಂದ್ರದಲ್ಲಿ ಸಚಿವರಾಗಿದ್ದು, ಮೋದಿ ಮತ್ತು ಅಮಿತ್ ಶಾಗಳ ನಿಕಟ ಸಂಪರ್ಕದಲ್ಲಿರುವವರು.

ಸುದ್ದಿ ಸಂಸ್ಥೆಗಳ ಆಯಕಟ್ಟಿನ ಸ್ಥಾನದಲ್ಲಿ ಕುಳಿತಿರುವ ಪತ್ರಕರ್ತರು ಕೂಡ ಮೇಲ್ಜಾತಿಯವರು. ಗೋದಿ ಬಿಸ್ಕೆಟ್ ತಿಂದವರು. ಮಾರಿಕೊಂಡವರು. ಕಳೆದ ವರ್ಷ ಪ್ರಲ್ಹಾದ ಜೋಷಿ ಪುತ್ರಿಯ ಮದುವೆಯಲ್ಲಿ ಕಂಠಮಟ್ಟ ‘ಪಾಯಸ’ ಕುಡಿದವರು. ಈಗ ಆ ‘ಪಾಯಸ’ದ ಋಣ ತೀರಿಸುವ ಕೆಲಸ ಮಾಡಿ, ಕಮಲಿಗರ ಕೃಪಾಕಟಾಕ್ಷಕ್ಕೆ ಒಳಗಾದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹಿಂದೂ-ಮುಸ್ಲಿಮ್ ರಾಜಕಾರಣ ಮಾಡುವುದಿಲ್ಲವೇ ನಮ್ಮ ಪ್ರಧಾನಿ!

ಈಗ ಹುಬ್ಬಳ್ಳಿ-ಧಾರವಾಡದಲ್ಲಿ ಚುನಾವಣೆ ಮುಗಿದಿದೆ. ಹಾಗೆಯೇ ಜನರ ಆಕ್ರೋಶ, ಕಣ್ಣೀರು ಕರಗಿಹೋಗಿದೆ. ಬಿಜೆಪಿ ಭಂಡರ ಬೆಂಕಿಯುಗುಳುವ ಭಾಷಣ, ಪ್ರತಿಭಟನೆಗಳೆಲ್ಲ ತಣ್ಣಗಾಗಿವೆ. ಸುದ್ದಿ ಮಾಧ್ಯಮಗಳಲ್ಲಿ ನೇಹಾಳ ಸದ್ದೇ ಇಲ್ಲದಂತಾಗಿದೆ.

ಪರಮಾಶ್ಚರ್ಯದ ಸಂಗತಿ ಎಂದರೆ, ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆ ಘಟನೆ ಮಾಸುವ ಮುನ್ನವೇ, ಮತ್ತೊಂದು ಅಂಥದ್ಧೆ ಘಟನೆ ಕಳೆದವಾರ ಕೊಡಗಿನಲ್ಲಿ ನಡೆದಿದೆ. ಪುಟ್ಟ ಬಾಲಕಿ ಮೀನಾಳ ಹತ್ಯೆಯಾಗಿದೆ. ಇದಾದ ನಂತರ, ಹುಬ್ಬಳ್ಳಿಯ ವೀರಾಪುರ ಓಣಿಯ ಅಂಜಲಿಯ ಹತ್ಯೆಯಾಗಿದೆ. ಮೀನಾ ಮತ್ತು ಅಂಜಲಿ- ಇಬ್ಬರೂ ಹಿಂದೂ ಹೆಣ್ಣುಮಕ್ಕಳೇ. ಈ ಹತ್ಯೆಗಳಿಗೆ ಬಿಜೆಪಿಗರ ಪ್ರತಿಭಟನೆಯೂ ಇಲ್ಲ, ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯೂ ಇಲ್ಲ. ಬದಲಿಗೆ, ಸರ್ಕಾರ ನಿಷ್ಕ್ರಿಯವಾಗಿದೆ, ಕಾನೂನು ಸುವ್ಯವಸ್ಥೆ ಕೆಟ್ಟಿದೆ ಎಂದು ದೂರಲಾಗುತ್ತಿದೆ.

ಇಲ್ಲಿ ಗಮನಿಸಬೇಕಾದ ಮುಖ್ಯವಾದ ವಿಚಾರವೆಂದರೆ, ಕೊಡಗಿನ ಮೀನಾ ಮತ್ತು ಹುಬ್ಬಳ್ಳಿಯ ಅಂಜಲಿಯ ಹತ್ಯೆ ಮಾಡಿದವರು ಮುಸ್ಲಿಮರಲ್ಲ, ಹಿಂದೂಗಳು. ಆದ್ದರಿಂದ, ಸುದ್ದಿ ಮಾಧ್ಯಮಗಳು ಸುದ್ದಿ ಮಾಡಲಿಲ್ಲ. ಬಿಜೆಪಿಯ ಭಂಡರು ಬಾಯಿ ಬಿಡಲಿಲ್ಲ. ಜನ ಕೂಡ ಪ್ರಶ್ನಿಸುತ್ತಿಲ್ಲ.

ನೇಹಾ ಹತ್ಯೆಯ ವಿರುದ್ಧ ಕಾಣಿಸಿಕೊಂಡ ಜನಾಕ್ರೋಶದ ಹಿಂದೆ ಸುದ್ದಿ ಮಾಧ್ಯಮಗಳ ಪ್ರಚೋದನೆ ಇತ್ತು. ಬಿಜೆಪಿಯ ದ್ವೇಷ ರಾಜಕಾರಣವಿತ್ತು. ಮಾಧ್ಯಮಗಳು ಮತ್ತು ಬಿಜೆಪಿಗೆ ಹತ್ಯೆಗಿಂತ, ಹತ್ಯೆ ಮಾಡಿದವನ ಧರ್ಮವೇ ಮುಖ್ಯವಾಗಿತ್ತು.

ಹತ್ಯೆಯನ್ನು ಖಂಡಿಸುವುದಕ್ಕಿಂತ ಮೊದಲು ಹತ್ಯೆ ಮಾಡಿದವನ ಧರ್ಮ ನೋಡುವಂಥ ಹೀನಾಯ ಸ್ಥಿತಿಗೆ ನಾವೇಕೆ ಬಂದು ನಿಂತಿದ್ದೇವೆ? ವಿವೇಚನೆಯಿಂದ ವರ್ತಿಸುವ ಬದಲು ಧರ್ಮ ನೋಡಿ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸುವ ವಾತಾವರಣವೇಕೆ ದೇಶದಲ್ಲಿ ನಿರ್ಮಾಣವಾಗಿದೆ? ನಾಗರಿಕ ಸಮಾಜದ ಮನಸ್ಥಿತಿ ಇಷ್ಟೊಂದು ಕಲುಷಿತಗೊಳ್ಳಲು ಕಾರಣವೇನು ಎಂಬ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ.

ಹಾಗೆಯೇ, ಅಪರಾಧವನ್ನು ಧರ್ಮಾಧಾರಿತವಾಗಿ ವಿಭಜಿಸುವುದರಿಂದ ಅಂತಿಮವಾಗಿ ಅಧಿಕಾರದಾಹಿ ರಾಜಕಾರಣಿಗಳಿಗೆ ಲಾಭವಾಗಬಹುದೇ ಹೊರತು ಅಪರಾಧ ಕೃತ್ಯಗಳನ್ನು ಅಂತ್ಯಗೊಳಿಸುವುದಿಲ್ಲ. ಹೆಣ್ಣುಮಕ್ಕಳ ಮಾನ-ಪ್ರಾಣಕ್ಕೂ ರಕ್ಷಣೆಯೂ ಸಿಗುವುದಿಲ್ಲ. ಬಿಜೆಪಿ ಮತ್ತು ಮೋದಿಯವರ ಹತ್ತು ವರ್ಷಗಳ ಆಡಳಿತ ಅದನ್ನು ಸಾಬೀತುಪಡಿಸಿದೆ. ಅಂದಮೇಲೆ, ಮಾನಗೆಟ್ಟ ಮಾಧ್ಯಮಗಳನ್ನು ಮತ್ತು ಬೂಟಾಟಿಕೆಯ ಬಿಜೆಪಿಯನ್ನು ತಿರಸ್ಕರಿಸಬೇಕಲ್ಲವೇ?

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಬಿಜೆಪಿ ಮತ್ತು ಮೋದಿಯವರ ಹತ್ತು ವರ್ಷಗಳ ಆಡಳಿತ ಕೆಲವೇ ದಿನಗಳಲ್ಲಿ ಕೊನೆಗೊಳ್ಳಲಿದೆ.
    ಹೊಸ ಶಕೆ ಅರಂಭವಾಗಲಿದೆ. ಹೊಸತನ ಕಾಣಲಿದೆ. ಹರುಷವನ್ನು ತರಲಿದೆ.
    ಬಿಸಿ ಗಾಳಿ ಮಾಯವಾಗಿ ತಂಪು ಗಾಳಿ ಬೀಸಲಿದೆ.
    ಮಳೆಯೂ ಬರಲಿದೆ , ಬೆಳೆಯೂ ಬೆಳೆಯಲಿದೆ.
    ಜನರೂ ಸೇರಲಿದೆ , ಜಗವೂ ಬೆಳಗಲಿದೆ.
    ಅಲ್ಲಿ ಇಲ್ಲಿ , ಎಲ್ಲೆಲ್ಲೂ ಸಂಭ್ರಮ ಸಡಗರ ಸಂತೋಷ ಕುಣಿದಾಡಲಿದೆ.

  2. ರಾಜಕಾರಣಿಗಳು ‘ಜನ’ ರ ಪ್ರತಿನಿಧಿಗಳು. ಅಂದರೆ ಜನಮಾನಸವನ್ನು, ನೋವು ನಲಿವುಗಳನ್ನು, ದೈನಂದಿನ ಬದುಕಿನ ಆಗುಹೋಗುಗಳನ್ನು ಪ್ರತಿನಿಧಿಸುವವರು. ಅಂದಾಗ, ಸಾಮಾನ್ಯ ಜನರ ಎಲ್ಲಾ ಪೂರ್ವಾಗ್ರಹಗಳು, ವಾಲುವಿಕೆ, ಜಾತೀಯತೆ, ಮತೀಯತೆ ಇವೇ ಮುಂತಾದವುಗಳನ್ನು ತಮ್ಮ ಮತಗಳಿಗೆ ಕುಂದಾಗದಂತೆ ಪೋಷಿಸುವ ಜಾಣರು. ಇನ್ನು, ಭಾರತೀಯರ ರಕ್ತದಲ್ಲಿ, ಮನದಾಳದಲ್ಲಿ, ಸುಪ್ತ ಮನಸ್ಸಿನಲ್ಲಿ ಕೂಡಾ ಜಾತಿ ಶ್ರೇಷ್ಠತೆ ಹಾಗೂ ಮತೀಯತೆ ಅಂತರ್ಗತವಾಗಿದೆ. ಹೆಣ್ಣುಮಕ್ಕಳ ಭೀಭತ್ಸ ಕೊಲೆಗಳನ್ನು, ಕೊಲೆಗಾರರ ಜಾತಿ-ಮತ ಆಧರಿಸಿ ಪ್ರತಿಭಟಿಸುವ , ಖಂಡಿಸುವ ಶೌರ್ಯತನ ತೋರುವರು. ಎನ್ಕೌಂಟರ್ ಅನ್ನೋದು ಕೂಡಾ ಕೆಳವರ್ಗದ, ಜಾತಿ- ಮತದ ಅಪರಾಧಿಗಳಿಗೆ ಮೀಸಲು. ಇಲ್ಲವಾದಲ್ಲಿ, ಹಾಸನಕಾಂಡ , ಅಂಜಲಿ, ಮೀನಾ ಕೊಲೆಗಳ ಹಿಂದಿರುವ ತಪ್ಪಿತಸ್ಥರನ್ನು ಗುಂಡಿಕ್ಕಿ ಕೊಲ್ಲಿ ಎನ್ನುವ ಆಕ್ರೋಶ ಎಲ್ಲೆಲ್ಲೂ ಕಂಡು ಬರುತ್ತಿತ್ತು. ಅಪರಾಧ-ಶಿಕ್ಷೆ, ಪ್ರತಿಕ್ರಿಯೆ ಎಲ್ಲವೂ ಸಾಮಾಜಿಕ, ಧಾರ್ಮಿಕ ವರ್ಗೀಕರಣಕ್ಕೆ ಒಳಗಾಗಿ ಮನುಸ್ಮೃತಿ ಪ್ರಣೀತ ಕಟ್ಟುಪಾಡುಗಳ ಆಚರಣೆ ಎಗ್ಗಿಲ್ಲದೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಮೊಟ್ಟೆಗೆ ವಿರೋಧ; ಬಡ ಮಕ್ಕಳ ಆಹಾರದ ಸ್ವಾತಂತ್ರ್ಯಕ್ಕೆ ಕೊಕ್ಕೆ

ಮಂಡ್ಯದ ಆಲಕೆರೆ ಗ್ರಾಮದ ಸರ್ಕಾರಿ ಶಾಲೆಯ ವಿಚಾರದಲ್ಲಿ 84 ಮಕ್ಕಳ ಪೋಷಕರು...

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

Download Eedina App Android / iOS

X