ದೇಶ ಧರ್ಮಾಂಧತೆಯ ವಿಚಿತ್ರ ವ್ಯಾಕುಲಕ್ಕೆ ಒಳಗಾದ ಈ ಸಂದರ್ಭದಲ್ಲಿ ತೇಜಸ್ವಿಯವರು ಪ್ರಬಲವಾಗಿ ಪ್ರತಿಪಾದಿಸುವ ಮನುಷ್ಯಪ್ರೀತಿಯನ್ನು ಸಾರುವ, ವಿಸ್ತರಿಸುವ ಕೆಲಸವನ್ನು `ಡೇರ್ ಡೆವಿಲ್ ಮುಸ್ತಾಫಾ’ ಸಿನೆಮಾ ಮಾಡಿದೆ. ಕೋಮುದ್ವೇಷ ದೇಶವನ್ನು ಸುಡುತ್ತಿರುವ ಈ ಸಂದರ್ಭದಲ್ಲಿ ಇಂತಹ ಚಿತ್ರಗಳ ಅಗತ್ಯವಿದೆ.
ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರು 1972ರಲ್ಲಿ ಬರೆದ `ಡೇರ್ ಡೆವಿಲ್ ಮುಸ್ತಾಫಾ’ ಕತೆ ಅದೇ ಹೆಸರಿನಲ್ಲಿ 2023ರಲ್ಲಿ ಸಿನೆಮಾ ಆಗಿದೆ. ಓದುಗರ ಎದೆಯಲ್ಲಿ ಬೀಜದಂತೆ ಉಳಿದುಹೋದ ಕತೆಯೊಂದು ಸರಿಸುಮಾರು 50 ವರ್ಷಗಳ ನಂತರ ಮತ್ತೊಂದು ಭೂಮಿಕೆಯಲ್ಲಿ ಬಿತ್ತುವ, ಬೆಳೆಯುವ, ಬೆಳಕು ಚೆಲ್ಲುವ ಪರಿಯೇ ಅದ್ಭುತ.
ಕನ್ನಡದ ಕತೆಯೊಂದು ಪುಸ್ತಕದ ಪುಟಗಳಲ್ಲಿ ಪವಡಿಸದೆ ಚಲನಚಿತ್ರವಾಗಿ ಬೆಳ್ಳಿಪರದೆಯಲ್ಲಿ ಬೆಳಗುವುದು, ಬೆರಗುಗೊಳಿಸುವುದು ಕಾಲದಿಂದ ನಡೆದುಕೊಂಡೇ ಬಂದಿದೆ. ಕನ್ನಡ ಚಿತ್ರರಂಗವೂ ಕನ್ನಡದ ಸತ್ವಯುತ ಕತೆಗಳನ್ನು ಬಳಸಿಕೊಂಡು ಬೆಳೆದಿದೆ. ಹಾಗೆಯೇ ಪ್ರೇಕ್ಷಕರಲ್ಲಿ ಅಭಿರುಚಿ-ಆಲೋಚನೆಯನ್ನೂ ಬೆಳೆಸಿದೆ.
ಆದರೆ, 2014ರ ನಂತರ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಮೇಲೆ, ಜನರನ್ನು ಪ್ರಭಾವಿಸುವ ಸಿನೆಮಾ ಕ್ಷೇತ್ರವನ್ನೂ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬಲಪಂಥೀಯ ಬುರ್ನಾಸನ್ನು ಸಾರುವ `ಕಶ್ಮೀರ್ ಫೈಲ್ಸ್’, `ಕೇರಳ ಸ್ಟೋರಿ’ಗಳಂತಹ ಚಿತ್ರಗಳ ಮೂಲಕ ದೇಶದ ಜನತೆಯಲ್ಲಿ ದ್ವೇಷಾಸೂಯೆಗಳನ್ನು ಬಿತ್ತಲಾಗುತ್ತಿದೆ. ಸಹಬಾಳ್ವೆ, ಸೌಹಾರ್ದತೆಗೆ ಹಾಗೂ ಬಹುತ್ವಕ್ಕೆ ಭಂಗ ತರಲಾಗುತ್ತಿದೆ.
ದೇಶ ಧರ್ಮಾಂಧತೆಯ ವಿಚಿತ್ರ ವ್ಯಾಕುಲಕ್ಕೆ ಒಳಗಾದ ಈ ಸಂದರ್ಭದಲ್ಲಿ ತೇಜಸ್ವಿಯವರು ಪ್ರಬಲವಾಗಿ ಪ್ರತಿಪಾದಿಸುವ ಮನುಷ್ಯಪ್ರೀತಿ- ಸಮಕಾಲೀನ ಸಮಾಜದ ತುರ್ತಿಗೆ ದಕ್ಕುವುದು; ಸೀಮಿತ ವಲಯವನ್ನು ದಾಟಿ ವಿಸ್ತರಿಸುವುದು; ಸಂಶಯಪಿಶಾಚಿ ಹೊಕ್ಕ ಸಮಾಜಕ್ಕೆ ಮದ್ದರೆಯುವುದು- ಬಹಳ ಮುಖ್ಯವಾದ ಕೆಲಸ. ಅದನ್ನು `ಡೇರ್ ಡೆವಿಲ್ ಮುಸ್ತಾಫಾ’ ಸಿನೆಮಾ ಮಾಡಿದೆ. ಪರದೆಯ ಮೇಲೆ ಫ್ರೇಮುಗಳು ಚಲಿಸಿದಂತೆ ತೇಜಸ್ವಿಯವರ ಆಶಯ ನೋಡುಗರ ಎದೆಗಿಳಿಯುತ್ತದೆ.
70ರ ದಶಕದಲ್ಲಿಯೇ ತರಾಸು ಅವರ ಕತೆಗಳನ್ನು ಆಧರಿಸಿ, ಪುಟ್ಟಣ್ಣ ಕಣಗಾಲ್ ಅವರು `ನಾಗರಹಾವು’ ಚಿತ್ರ ನಿರ್ದೇಶಿಸಿದ್ದರು. ಆ ಚಿತ್ರದಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳಿಗೆ ಸೇರಿದಂತೆ ಕೆಲವು ದೃಶ್ಯಗಳಿವೆ. ಹಿಂದೂ ಯುವಕ ರಾಮಾಚಾರಿ ನಾಯಕನಾಗಿ, ಮುಸ್ಲಿಂ ಯುವಕ ಜಲೀಲ್ ಖಳನಾಯಕನಾಗಿ ಚಿತ್ರಿತವಾಗಿದ್ದ ಸನ್ನಿವೇಶವಿದೆ. ಮುಸ್ಲಿಂ ಯುವಕ ಸೈಕಲ್ ಮೇಲೆ ಸಿಗರೇಟ್ ಸೇದುತ್ತ ಕಾಲೇಜಿಗೆ ಹೋಗುವ ಐಯ್ಯಂಗಾರಿ ಹುಡುಗಿಯನ್ನು ಚುಡಾಯಿಸುವ; ಹಿಂದೂ ಯುವಕ ಬಂದು ಮುಸ್ಲಿಂ ಯುವಕನಿಗೆ ತದುಕಿ ತಂಟೆಗೆ ಬರದಂತೆ ತಡೆಯುವ ದೃಶ್ಯಗಳಿವೆ. ಅದೇ 70ರ ದಶಕದಲ್ಲಿ ತೇಜಸ್ವಿಯವರು ಬರೆದ `ಡೇರ್ ಡೆವಿಲ್ ಮುಸ್ತಾಫಾ’ ಕತೆಯಲ್ಲಿ ಐಯ್ಯಂಗಾರಿ ಮತ್ತು ಮುಸ್ಲಿಂ ಯುವಕರಿಬ್ಬರ ನಡುವಿನ ಕಾಲೇಜು ಕಿತ್ತಾಟವನ್ನು, ಎರಡು ಸಮುದಾಯಗಳ ನಡುವಿನ ಕದನದಂತೆ ಕಾಣಿಸಿದರೂ, ನವಿರುಹಾಸ್ಯದ ಮೂಲಕ ನಮ್ಮೊಳಗಿನ ಮನುಷ್ಯಪ್ರೀತಿಯನ್ನು ಬಡಿದೆಬ್ಬಿಸುವುದು- ವಿಶೇಷ ಮತ್ತು ವಿಸ್ತರಣಾಯೋಗ್ಯ.
ಇದನ್ನು ಓದಿದ್ದೀರಾ:? ಈ ದಿನ ಸಂಪಾದಕೀಯ | ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾನೂನಿನ ಅಗತ್ಯವಿದೆ
ಕನ್ನಡ ಚಿತ್ರರಂಗದ ಇತಿಹಾಸವನ್ನೊಮ್ಮೆ ಕೆದಕಿದರೆ ಮುಸ್ಲಿಂ ಸಂವೇದನೆಯನ್ನು ಮುಖ್ಯ ಭೂಮಿಕೆಯಲ್ಲಿಟ್ಟು ಚಿತ್ರ ಮಾಡಿದ್ದು; ಮುಸ್ಲಿಮರನ್ನು ಎಲ್ಲರೂ ಮೆಚ್ಚುವ ನಾಯಕನನ್ನಾಗಿ ತೋರಿಸಿದ್ದು ಇಲ್ಲವೇ ಇಲ್ಲ. ಬದಲಿಗೆ, ಪೋಷಕ ಪಾತ್ರಗಳಲ್ಲಿ, ಹಾಸ್ಯ ಪ್ರಸಂಗಗಳಲ್ಲಿ, ಖಳನಾಯಕನ ಗೆಟಪ್ಪಿನಲ್ಲಿ, ಭಯೋತ್ಪಾದಕರ ಬಿಲ್ಡಪ್‌ನಲ್ಲಿ ಚಿತ್ರಿಸಿದ್ದೇ ಹೆಚ್ಚು. ಅಪವಾದವೆಂಬಂತೆ ಸ್ವಸ್ತಿಕ್, ತಮಸ್, ಗುಲಾಬಿ ಟಾಕೀಸ್, ಹಸೀನಾ; ಶರೀಫ, ಕಬೀರರ ಮೇಲಿನ ಚಿತ್ರಗಳು ಮುಸ್ಲಿಮರ ಕಥಾವಸ್ತುವನ್ನು ಹೊಂದಿದ ಚಿತ್ರಗಳೆಂದು ಹೆಸರಿಸಬಹುದಾದರೂ, ಮುಸ್ಲಿಂ ಸಂವೇದನೆಯನ್ನು ಸಂಪೂರ್ಣವಾಗಿ ಬಳಸಿಕೊಂಡದ್ದು ಇಲ್ಲ. ಯಶಸ್ಸಿನ ಹಿಂದೆ ಓಡುವ, ಲಾಭ ಸಂಪಾದನೆ ಮುಖ್ಯವಾಗುವ ಚಿತ್ರ ನಿರ್ಮಾಪಕರಿಗೆ ಇದು ಅರ್ಥವಾಗದಿರಬಹುದು. ಜೊತೆಗೆ ಚಿತ್ರಜಗತ್ತಿನ ಜನರಲ್ಲಿ ಅಲ್ಪಸಂಖ್ಯಾತರ ಕತೆ ಬಹುಸಂಖ್ಯಾತರು ನೋಡುವುದಿಲ್ಲ ಎಂಬ ಚಿತ್ರವಿಚಿತ್ರ ನಂಬಿಕೆಗಳೂ ಇರಬಹುದು.
ಆದರೆ `ಡೇರ್ ಡೆವಿಲ್ ಮುಸ್ತಾಫಾ’ ಸಿನೆಮಾ ಚಿತ್ರಜಗತ್ತಿನ ಜನರ ನಂಬಿಕೆಗಳನ್ನು, ಲೆಕ್ಕಾಚಾರಗಳನ್ನು ಹೊಡೆದುಹಾಕಿದೆ. ಹಿಂದೂ-ಮುಸ್ಲಿಂ ಮತಗಳನ್ನು ಮೀರಿ ಮನುಷ್ಯಪ್ರೀತಿಗೆ ಮಣೆ ಹಾಕಿದೆ. ಮೆಚ್ಚುಗೆಯನ್ನೂ ಗಳಿಸಿದೆ. ಚಿತ್ರ ಬಿಡುಗಡೆಯ ದಿನ ಥಿಯೇಟರ್‍ಗಳ ಮುಂದೆ ಚಿತ್ರದ ನಾಯಕನ ಕಟೌಟ್ ಬದಲಿಗೆ ಲೇಖಕ ತೇಜಸ್ವಿಯವರ ಭಾರೀ ಎತ್ತರದ ಕಟೌಟ್ ರಾರಾಜಿಸುವ ಮೂಲಕ ಹೊಸ ಭಾಷ್ಯ ಬರೆದಿದೆ.`ನನ್ನ ಕಟೌಟ್‌ಗಿಂತ ತೇಜಸ್ವಿ ಕಟೌಟ್ ಮುಂದೆ ಕುಣಿದಾಗ ಅಪಾರ ಖುಷಿ ಸಿಕ್ಕಿತು. ಯಾರೋ ಏನೋ ಒಳ್ಳೆಯದು ಮಾಡುತ್ತಿದ್ದಾರೆ ಎಂದಾಗ ನಾವು ಅದರ ಭಾಗವಾಗುವುದು ಮುಖ್ಯ’ ಎಂದ ನಟ ಡಾಲಿ ಧನಂಜಯ; ‘ವಾಟ್ಸಪ್ ಯೂನಿವರ್ಸಿಟಿ- ಇಲ್ಲಿ ಸತ್ಯಗಳು ಸತ್ಯವೇ ಅಲ್ಲ’ ಎಂಬ ಬರಹವಿರುವ ಟಿ-ಶರ್ಟ್ ಧರಿಸಿ ಬಹುಭಾಷಾ ಕಲಾವಿದ ಪ್ರಕಾಶ್ ರೈ ಚಿತ್ರವನ್ನು ನೋಡಿ ಬಾಯ್ತುಂಬ ಹೊಗಳಿರುವುದು- ಬಹುತ್ವ ಭಾರತದ ಆಶಯವನ್ನು ವಿಸ್ತರಿಸಿದೆ.
ಇದೆಲ್ಲಕ್ಕಿಂತಲೂ ಮುಖ್ಯವಾಗಿ, ಸಾಮರಸ್ಯ ಮತ್ತು ಸಹಬಾಳ್ವೆಯ ಸಂದೇಶ ಸಾರುವ ಸಿನೆಮಾವನ್ನು ಎಲ್ಲರೂ ನೋಡಬೇಕೆಂಬ ಘನಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದು- ಮನುಷ್ಯಪ್ರೀತಿಯನ್ನು ನಾಡಿನಾದ್ಯಂತ ಬಿತ್ತುವಂತಹ ಕೆಲಸಕ್ಕೆ ನೀರೆರೆದಿದೆ.
ಚಿತ್ರಜಗತ್ತಿಗೆ ಹೊಸಬರಾದ ಶಶಾಂಕ್ ಸೋಗಾಲ್, ಮೊದಲ ನಿರ್ದೇಶನದಲ್ಲಿಯೇ ಈ ಕಾಲ ಕೇಳುವ ಚಿತ್ರ ಮಾಡಿರುವುದು; ಐಯ್ಯಂಗಾರಿಯಾಗಿ ಆದಿತ್ಯ, ಮುಸ್ತಾಫಾನಾಗಿ ಶಿಶಿರಾ ಅವರ ಅಭಿನಯ, ಅಬಚೂರಿನ ಪಟ್ಟಣ ಪರಿಸರ, ರೆಟ್ರೋ ಶೈಲಿ ಅದಕ್ಕೆ ನೆರವಾಗಿರುವುದು ಚಿತ್ರ ಕಳೆಗಟ್ಟುವಂತೆ ಮಾಡಿದೆ. ನಮ್ಮದೇ ಜಗತ್ತನ್ನು ಸರಳವಾಗಿ ನಮ್ಮ ಮುಂದಿಟ್ಟು, ಜನರನ್ನು ಬೆಸೆಯುವ, ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕೆಲಸ ಮಾಡಿರುವುದು ಮೆಚ್ಚುವಂತಹ ಕೆಲಸ.
ಮೇಲು-ಕೀಳು, ಜಾತಿ ತಾರತಮ್ಯ, ಕೋಮುದ್ವೇಷ ದೇಶವನ್ನು ಸುಡುತ್ತಿರುವ ಈ ಸಂದರ್ಭದಲ್ಲಿ ಇಂತಹ ಚಿತ್ರಗಳ ಅಗತ್ಯವಿದೆ. `ಡೇರ್ ಡೆವಿಲ್ ಮುಸ್ತಾಫಾ’ ಚಿತ್ರವನ್ನು ನೋಡಿ, ನೋಡಿಸಿ ಮತ್ತು ನಾಡನ್ನು ಉಳಿಸಿ.
